ಹಣಕಾಸು ಸಚಿವಾಲಯ
azadi ka amrit mahotsav

ಜಿ 20 ಇಂಡಿಯಾ ಅಧ್ಯಕ್ಷತೆ ಅಡಿಯಲ್ಲಿ "ನೀತಿ ದೃಷ್ಟಿಕೋನ: ಕ್ರಿಪ್ಟೋ ಸ್ವತ್ತುಗಳ ಬಗ್ಗೆ ನೀತಿ ಒಮ್ಮತದ ಹಾದಿಯ ಸಮಾಲೋಚನೆ" ಕುರಿತು ಗುಂಪು ಚರ್ಚೆ

Posted On: 25 FEB 2023 12:47PM by PIB Bengaluru

ಭಾರತದ ಜಿ 20 ಅಧ್ಯಕ್ಷತೆಯು "ವಸುದೈವ ಕುಟುಂಬಕಂ" ಅಥವಾ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಧ್ಯೇಯವನ್ನು ಆಧರಿಸಿದೆ, ಇದು ಸಮಾನ ಪ್ರಗತಿ ಮತ್ತು ಸರ್ವರಿಗೂ ಹಂಚಿಕೆಯ ಭವಿಷ್ಯದ ಸಂದೇಶವನ್ನು ಒತ್ತಿಹೇಳುತ್ತದೆ. ಹಣಕಾಸು ವಲಯವನ್ನು ಪರಿವರ್ತಿಸುವ, ಹಣಪೂರಣವನ್ನು ಹೆಚ್ಚಿಸುವ ಮತ್ತು ಹಣಕಾಸು ಮಾರುಕಟ್ಟೆ ದಕ್ಷತೆಯನ್ನು ಸುಧಾರಿಸುವ ಮೂಲಕ ಡಿಜಿಟಲ್ ತಂತ್ರಜ್ಞಾನವು ಈ ಗುರಿ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 2023 ರಲ್ಲಿ ಹಣಕಾಸು ವಲಯದ ನಿಯಂತ್ರಕ ಸುಧಾರಣೆಗಳಿಗೆ ಭಾರತೀಯ ಅಧ್ಯಕ್ಷತೆಯ ಆದ್ಯತೆಯು ಡಿಜಿಟಲ್ ಹಣಕಾಸು ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿ, ಸುರಕ್ಷಿತ ಮತ್ತು ಸ್ಥಿರಗೊಳಿಸುವುದಾಗಿದೆ.

ಕ್ರಿಪ್ಟೋ ಜಗತ್ತಿನ ತ್ವರಿತ ವಿಕಾಸದ ಹೊರತಾಗಿಯೂ, ಕ್ರಿಪ್ಟೋ ಸ್ವತ್ತುಗಳಿಗೆ ಸಮಗ್ರ ಜಾಗತಿಕ ನೀತಿ ಚೌಕಟ್ಟು ಇಲ್ಲ. ಕ್ರಿಪ್ಟೋ ಸ್ವತ್ತುಗಳು ಮತ್ತು ಸಾಂಪ್ರದಾಯಿಕ ಹಣಕಾಸು ವಲಯದ ನಡುವಿನ ಹೆಚ್ಚಿನ ಅಂತರಸಂಪರ್ಕ ಮತ್ತು ಕ್ರಿಪ್ಟೋ ಸ್ವತ್ತುಗಳ ಸುತ್ತಲಿನ ಸಂಕೀರ್ಣತೆ ಮತ್ತು ಚಂಚಲತೆಯ ಬಗ್ಗೆ ಕಳವಳವನ್ನು ಗಮನದಲ್ಲಿಟ್ಟುಕೊಂಡು, ನೀತಿ ನಿರೂಪಕರು ಬಿಗಿಯಾದ ನಿಯಂತ್ರಣಕ್ಕೆ ಕರೆ ನೀಡುತ್ತಿದ್ದಾರೆ. ಹಣಕಾಸು ಕ್ರಮದ ಕಾರ್ಯಪಡೆ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ -ಎಫ್ಎಟಿಎಫ್), ಹಣಕಾಸು ಸ್ಥಿರತೆ ಮಂಡಳಿ (ಎಫ್ಎಸ್.ಬಿ), ಪಾವತಿಗಳು ಮತ್ತು ಮಾರುಕಟ್ಟೆ ಮೂಲಸೌಕರ್ಯಗಳ ಸಮಿತಿ (ಸಿಪಿಎಂಐ), ಭದ್ರತೆಗಳ ಕಮಿಷನ್ಸ್ ಕುರಿತ ಅಂತಾರಾಷ್ಟ್ರೀಯ ಸಂಸ್ಥೆ (ಐಒಎಸ್.ಸಿ.ಒ) ಮತ್ತು ಬ್ಯಾಂಕಿಂಗ್ ಮೇಲ್ವಿಚಾರಣೆಯ ಬಾಸೆಲ್ ಸಮಿತಿ (ಬಿಸಿಬಿಎಸ್) ನಂತಹ ಜಾಗತಿಕ ಮಾನದಂಡ- ರೂಪಿಸುವ ಸಂಸ್ಥೆಗಳು ನಿಯಂತ್ರಕ ಕಾರ್ಯಸೂಚಿಯನ್ನು ಸಮನ್ವಯಗೊಳಿಸುತ್ತಿವೆ.

ಕ್ರಿಪ್ಟೋ ಸ್ವತ್ತುಗಳ ಕುರಿತ ಜಾಗತಿಕ ನೀತಿ ಸಂವಾದ ರಚನೆ

ಆರ್ಥಿಕ ಸಮಗ್ರತೆಯ ಕಾಳಜಿಯಾಚೆ ಕ್ರಿಪ್ಟೋ ಸ್ವತ್ತುಗಳ ಬಗ್ಗೆ ಜಿ 20 ಚರ್ಚೆಯನ್ನು ವಿಸ್ತರಿಸಲು ಮತ್ತು ಸ್ಥೂಲ ಆರ್ಥಿಕ ಪರಿಣಾಮಗಳು ಮತ್ತು ಆರ್ಥಿಕತೆಯಲ್ಲಿ ವ್ಯಾಪಕವಾದ ಕ್ರಿಪ್ಟೋ ಅಳವಡಿಕೆಯನ್ನು ಸೆರೆಹಿಡಿಯಲು ಭಾರತ ಆಶಿಸಿದೆ. ಇದಕ್ಕೆ ಕ್ರಿಪ್ಟೋ ಸ್ವತ್ತುಗಳ ಜಾಗತಿಕ ಸವಾಲುಗಳು ಮತ್ತು ಅವಕಾಶಗಳಿಗೆ ದತ್ತಾಂಶ ಆಧಾರಿತ ಮತ್ತು ಮಾಹಿತಿಯುಕ್ತ ವಿಧಾನದ ಅಗತ್ಯವಿರುತ್ತದೆ, ಇದು ಜಿ 20 ಸದಸ್ಯರಿಗೆ ಸಂಘಟಿತ ಮತ್ತು ಸಮಗ್ರ ನೀತಿ ಸ್ಪಂದನೆಯನ್ನು ರೂಪಿಸಲು ಅನುವು ಮಾಡಿಕೊಡುತ್ತದೆ.

ಕ್ರಿಪ್ಟೋ ಸ್ವತ್ತುಗಳ ವಿಶಾಲ ಸ್ಥೂಲ ಆರ್ಥಿಕ ಮತ್ತು ಹಣಕಾಸು ಸ್ಥಿರತೆಯ ಪರಿಣಾಮಗಳ ಬಗ್ಗೆ ನೀತಿ ನಿರೂಪಕರಿಗೆ ತಿಳಿಸಲು, 2023ರ ಫೆಬ್ರವರಿ 23 ರಂದು ಬೆಂಗಳೂರಿನಲ್ಲಿ ನಡೆದ 2ನೇ ಜಿ 20 ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಪ್ರತಿನಿಧಿಗಳ ಸಭೆಗೆ ಈ ವಿಷಯದ ಬಗ್ಗೆ ಚರ್ಚಾ ಸಾಮಗ್ರಿ ಸಿದ್ಧಪಡಿಸುವಂತೆ ಭಾರತೀಯ ಅಧ್ಯಕ್ಷತೆಯು ಅಂತಾರಾಷ್ಟ್ರೀಯ ವಿತ್ತ ನಿಧಿಗೆ (ಐಎಂಎಫ್) ವಿನಂತಿಸಿದೆ. ಸದರಿ ಸಭೆಯಲ್ಲಿ, ಕ್ರಿಪ್ಟೋ ಸ್ವತ್ತುಗಳ ಸುತ್ತ ಸಂವಾದವನ್ನು ವಿಸ್ತರಿಸುವ ಅಧ್ಯಕ್ಷತೆಯ ಪ್ರಯತ್ನಗಳ ಭಾಗವಾಗಿ "ನೀತಿ ದೃಷ್ಟಿಕೋನಗಳು: ಕ್ರಿಪ್ಟೋ ಸ್ವತ್ತುಗಳ ಮೇಲೆ ನೀತಿ ಒಮ್ಮತದ ಹಾದಿಯನ್ನು ಚರ್ಚಿಸುವುದು" ಎಂಬ ವಿಚಾರ ಸಂಕಿರಣ ನಡೆಯಿತು. ಐಎಂಎಫ್ ಭಾಷಣಕಾರ ಶ್ರೀ ಟೊಮಾಸೊ ಮನ್ಸಿನಿ-ಗ್ರಿಫೋಲಿ ಅವರು ಈ ಸಂದರ್ಭದಲ್ಲಿ ಚರ್ಚಾ ಪ್ರಬಂಧವನ್ನು ಪ್ರಸ್ತುತಪಡಿಸಿದರು, ದೇಶದ ಆರ್ಥಿಕತೆಯ ಆಂತರಿಕ ಮತ್ತು ಬಾಹ್ಯ ಸ್ಥಿರತೆ ಮತ್ತು ಅದರ ಹಣಕಾಸು ವ್ಯವಸ್ಥೆಯ ರಚನೆಯ ಮೇಲೆ ಕ್ರಿಪ್ಟೋ ಅಳವಡಿಕೆಯ ಪರಿಣಾಮಗಳನ್ನು ಅವರು ಎತ್ತಿ ತೋರಿಸಿದರು. ಕ್ರಿಪ್ಟೋ ಸ್ವತ್ತುಗಳ ಉದ್ದೇಶಿತ ಪ್ರಯೋಜನಗಳಲ್ಲಿ ಅಗ್ಗದ ಮತ್ತು ವೇಗದ ಗಡಿಯಾಚೆಗಿನ ಪಾವತಿಗಳು, ಹೆಚ್ಚು ಸಂಯೋಜಿತ ಹಣಕಾಸು ಮಾರುಕಟ್ಟೆಗಳು ಮತ್ತು ಹೆಚ್ಚಿನ ಹಣಪೂರಣವೂ ಸೇರಿವೆ ಎಂದು ಮ್ಯಾನ್ಸಿನಿ-ಗ್ರಿಫೋಲಿ ಒತ್ತಿಹೇಳಿದರು, ಆದರೆ ಇವುಗಳನ್ನು ಇನ್ನೂ ಅರಿತುಕೊಳ್ಳಬೇಕಾಗಿದೆ. ಪರಸ್ಪರ ಕಾರ್ಯಸಾಧ್ಯತೆ, ಸುರಕ್ಷತೆ ಮತ್ತು ದಕ್ಷತೆಯ ಸಮಸ್ಯೆಗಳನ್ನು ಖಾಸಗಿ ವಲಯವು ಖಾತರಿಪಡಿಸಲು ಸಾಧ್ಯವಿಲ್ಲ ಮತ್ತು ಲೆಡ್ಜರ್ ಗಳಿಗಾಗಿ ನಿರ್ಣಾಯಕ ಡಿಜಿಟಲ್ ಮೂಲಸೌಕರ್ಯ / ವೇದಿಕೆಗಳನ್ನು ಸಾರ್ವಜನಿಕ ಒಳಿತಿಗಾಗಿ ನೋಡಬೇಕು ಎಂದು ಅವರು ಹೇಳಿದರು. ಕ್ರಿಪ್ಟೋ ಸ್ವತ್ತು ಬ್ರಹ್ಮಾಂಡಕ್ಕೆ ಸಂಬಂಧಿಸಿದ ಜಾಗತಿಕ ಮಾಹಿತಿ ಅಂತರಗಳು ಮತ್ತು ಜಿ 20 ಆಶ್ರಯದಲ್ಲಿ ಕ್ರಿಪ್ಟೋ ಸ್ವತ್ತುಗಳಿಗೆ ಸಂಬಂಧಿಸಿದ ಪರಸ್ಪರ ಸಂಪರ್ಕಗಳು, ಅವಕಾಶಗಳು ಮತ್ತು ಅಪಾಯಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ನಿರ್ಮಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಈ ವಿಚಾರ ಸಂಕಿರಣದಲ್ಲಿ ಜಿ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಈ ವಿಷಯದ ಬಗ್ಗೆ ಪರಿಣತಿ ಹೊಂದಿದ ತಜ್ಞರು ಭಾಗವಹಿಸಿದ್ದರು. ಚರ್ಚೆಗಳು ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದ್ದವು, ಅವುಗಳೆಂದರೆ:

A.    ಕ್ರಿಪ್ಟೋ ಸ್ವತ್ತಿನ ವಿಶ್ವದ ಸಾಮಾನ್ಯ ವರ್ಗೀಕರಣ ಮತ್ತು ವ್ಯವಸ್ಥಿತ ವರ್ಗೀಕರಣದ ಅಗತ್ಯ,
B.    ಕ್ರಿಪ್ಟೋ ಸ್ವತ್ತುಗಳ ಪ್ರಯೋಜನಗಳು ಮತ್ತು ಅಪಾಯಗಳು
C.    ಮತ್ತಷ್ಟು ಮೌಲ್ಯಮಾಪನ ಮಾಡಬೇಕಾದ ಸ್ಥೂಲ ಆರ್ಥಿಕ ನೀತಿಯ ಪ್ರಶ್ನೆಗಳು, ಮತ್ತು,
D.    ಹಣಕಾಸು ಸ್ಥಿರತೆ ಸಮಸ್ಯೆಗಳು ಮತ್ತು ನಿಯಂತ್ರಕ ಸ್ಪಂದನೆಗಳು.

ಗುಂಪುಚರ್ಚೆಯಲ್ಲಿ ಭಾಗಿಯಾಗಿದ್ದವರಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದ ಶ್ರೀ ಈಶ್ವರ್ ಪ್ರಸಾದ್ ಮತ್ತು ಅಮೇರಿಕ ವಿಶ್ವವಿದ್ಯಾಲಯದ ಶ್ರೀಮತಿ ಹಿಲರಿ ಅಲೆನ್ ಅವರಂತಹ ಶೈಕ್ಷಣಿಕ ವಿದ್ವಾಂಸರು ಸೇರಿದ್ದರು, ಅವರು ವಿಕೇಂದ್ರೀಕೃತ ವೇದಿಕೆ ಎಂದು ಹೇಳಿಕೊಂಡರೂ ಕ್ರಿಪ್ಟೋ ಜಗತ್ತಿನ ಹೆಚ್ಚು ಕೇಂದ್ರೀಕೃತ ಸ್ವಭಾವದ ಬಗ್ಗೆ ವಾದಿಸಿದರು. ಬಿಐಎಸ್ ನ ಶ್ರೀ ಹ್ಯುನ್ ಶಿನ್, ಕ್ರಿಪ್ಟೋ ಸ್ವತ್ತುಗಳು ನೈಜ ಆರ್ಥಿಕತೆಗೆ ಸೃಷ್ಟಿಸುವ ವೆಚ್ಚಗಳು ಮತ್ತು ಪ್ರಯೋಜನಗಳ ಬಗ್ಗೆ ಮತ್ತು ಹೊಸ ಫಿನ್ಟೆಕ್ ನಾವೀನ್ಯತೆಗಳಿಗೆ ಸ್ಪಷ್ಟ ನಿಯಂತ್ರಕ ಪರಿಧಿಗಳನ್ನು ಸ್ಥಾಪಿಸುವ ಅಗತ್ಯದ ಬಗ್ಗೆ ಚರ್ಚಿಸಿದರು. ಕ್ರಿಪ್ಟೋ ಜಗತ್ತಿನಲ್ಲಿ ಆಡಳಿತ ರಚನೆಗಳ ಕೊರತೆ ಮತ್ತು ಜಾಗತಿಕ ಹಣಕಾಸು ಮತ್ತು ಪಾವತಿ ವ್ಯವಸ್ಥೆಗಳಲ್ಲಿ ಅಸ್ತಿತ್ವದಲ್ಲಿರುವ ಸವಾಲುಗಳನ್ನು ಎದುರಿಸಲು ಪರ್ಯಾಯ ಪರಿಹಾರಗಳನ್ನು ನೋಡುವ ಅಗತ್ಯದ ಬಗ್ಗೆ ಜಿ 20 ದೇಶಗಳ ಭಾಷಣಕಾರರು ಮತ್ತು ಭಾಗವಹಿಸಿದ್ದ ಹಲವರು ಕಳಕಳಿ ವ್ಯಕ್ತಪಡಿಸಿದರು.

ಈ ಘಟನೆಯು ಕ್ರಿಪ್ಟೋ ಸ್ವತ್ತುಗಳ ಬಗ್ಗೆ ವ್ಯಾಪಕ ಸಂವಾದವನ್ನು ಪ್ರಾರಂಭಿಸಲು ಸಹಾಯ ಮಾಡಿದೆ, ಆದರೆ ನೀತಿ ನಿರೂಪಕರು ಮತ್ತು ನಿಯಂತ್ರಕರು ನಿಕಟವಾಗಿ ಮೌಲ್ಯಮಾಪನ ಮಾಡಬೇಕಾದ ಹಲವಾರು ಸಂಬಂಧಿತ ನೀತಿ ಪ್ರಶ್ನೆಗಳನ್ನು ಸಹ ಎತ್ತುತ್ತದೆ. ವಿಶಾಲ ಆರ್ಥಿಕತೆಗೆ ಕ್ರಿಪ್ಟೋ ಸ್ವತ್ತುಗಳ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ, ಜಾಗತಿಕ ಹಣಕಾಸು ವ್ಯವಸ್ಥೆಗಳಲ್ಲಿ ಅಸ್ತಿತ್ವದಲ್ಲಿರುವ ಸವಾಲುಗಳಿಗೆ ಕ್ರಿಪ್ಟೋ ಸ್ವತ್ತುಗಳು ನಿಜವಾಗಿಯೂ ಸೂಕ್ತ ಪರಿಹಾರವೇ ಎಂಬ ಅಸ್ತಿತ್ವದ ಪ್ರಶ್ನೆಯೂ ಇದೆ.

ಮುಂದಿನ ಹಾದಿ

ನೀತಿ ಚೌಕಟ್ಟಿನ ಅಗತ್ಯದ ಬಗ್ಗೆ ನಡೆಯುತ್ತಿರುವ ಸಂವಾದಕ್ಕೆ ಪೂರಕವಾಗಿ, ಭಾರತೀಯ ಅಧ್ಯಕ್ಷತೆ ಐಎಂಎಫ್ ಮತ್ತು ಎಫ್ಎಸ್.ಬಿ. ಜಂಟಿ ತಾಂತ್ರಿಕ ಪ್ರಬಂಧವನ್ನು ಪ್ರಸ್ತಾಪಿಸಿದೆ, ಇದು ಕ್ರಿಪ್ಟೋ-ಸ್ವತ್ತುಗಳ ಸ್ಥೂಲ ಆರ್ಥಿಕ ಮತ್ತು ನಿಯಂತ್ರಕ ದೃಷ್ಟಿಕೋನಗಳನ್ನು ಸಂಯೋಜಿಸುತ್ತದೆ. ಇದು ಕ್ರಿಪ್ಟೋ ಸ್ವತ್ತುಗಳಿಗೆ ಸಂಘಟಿತ ಮತ್ತು ಸಮಗ್ರ ನೀತಿ ವಿಧಾನವನ್ನು ರೂಪಿಸಲು ಸಹಾಯ ಮಾಡುತ್ತದೆ.  ಅಕ್ಟೋಬರ್ 2023 ರಲ್ಲಿ ನಡೆಯಲಿರುವ 4 ನೇ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ ಗಳ ಸಭೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಜಂಟಿ ಪ್ರಬಂಧವನ್ನು ಮಂಡಿಸುವ ನಿರೀಕ್ಷೆಯಿದೆ. ಭಾರತೀಯ ಅಧ್ಯಕ್ಷತೆ ಅಡಿಯಲ್ಲಿ ನಡೆಯುವ ಇತರ ಜಿ 20 ಸಭೆಗಳ ಬದಿಗಳಲ್ಲಿ ಇದೇ ರೀತಿಯ ಚರ್ಚಾ ಗೋಷ್ಠಿಗಳು ಈ ಪ್ರಬಂಧಕ್ಕೆ ಪೂರಕವಾಗುವ ನಿರೀಕ್ಷೆಯಿದೆ. ಈ ಚರ್ಚೆಗಳು ಜಿ 20 ಸಭೆಗಳಲ್ಲಿ ಮಾಹಿತಿಯುತ ಚರ್ಚೆಯನ್ನು ನಿರ್ಮಿಸುತ್ತವೆ ಮತ್ತು ಸಂಘಟಿತ ಮತ್ತು ಸಮಗ್ರ ನೀತಿ ವಿಧಾನವನ್ನು ರೂಪಿಸಲು ಕಾರಣವಾಗುತ್ತವೆ ಎಂದು ನಿರೀಕ್ಷಿಸಲಾಗಿದೆ.

ಒಟ್ಟಾರೆಯಾಗಿ, ಐಎಂಎಫ್ ಚರ್ಚಾ ಪತ್ರಿಕೆ, ನೀತಿ ಸೆಮಿನಾರ್ ಮತ್ತು ಜಂಟಿ ಐಎಂಎಫ್-ಎಫ್ಎಸ್.ಬಿ. ಪ್ರಬಂಧ ಕ್ರಿಪ್ಟೋ ಸ್ವತ್ತುಗಳ ಸ್ಥೂಲ-ಹಣಕಾಸು ಮತ್ತು ನಿಯಂತ್ರಕ ದೃಷ್ಟಿಕೋನಗಳಿಗೆ ಸಂಬಂಧಿಸಿದ ನೀತಿ ಪ್ರಶ್ನೆಗಳನ್ನು ಸಂಯೋಜಿಸುತ್ತದೆ ಮತ್ತು ಕ್ರಿಪ್ಟೋ ಸ್ವತ್ತುಗಳಿಗೆ ಉತ್ತಮ ಸಂಘಟಿತ ಮತ್ತು ಸಮಗ್ರ ನೀತಿ ವಿಧಾನದ ಬಗ್ಗೆ ಜಾಗತಿಕ ಒಮ್ಮತವನ್ನು ಸುಗಮಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

****


(Release ID: 1902302) Visitor Counter : 257