ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಪ್ರಯೋಗಾಲಯದಲ್ಲಿ ತಯಾರಾಗುವ ವಜ್ರಗಳಿಗೆ ಯಂತ್ರೋಪಕರಣಗಳು, ಅರಳುಗಳು ಮತ್ತು ಪರಿಕರಗಳ ದೇಶೀಯ ಉತ್ಪಾದನೆ ಉತ್ತೇಜಿಸಲು ಐಐಟಿ-ಮದ್ರಾಸ್ ಗೆ 5 ವರ್ಷಗಳ ಸಂಶೋಧನಾ ಧನಸಹಾಯ


ಐಐಟಿ-ಮದ್ರಾಸ್ ನಲ್ಲಿ ವಜ್ರಗಳ ಯಂತ್ರೋಪಕರಣಗಳ ತಯಾರಿಕೆಯ ಭಾರತೀಯ ಪ್ರಯೋಗಾಲಯ ಕೇಂದ್ರ ಸ್ಥಾಪನೆಗೆ ಮುಂದಿನ 5 ವರ್ಷಗಳಲ್ಲಿ ಅಂದಾಜು 242.96 ಕೋಟಿ ರೂ. ವೆಚ್ಚ

Posted On: 23 FEB 2023 4:04PM by PIB Bengaluru

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ – ಮದ್ರಾಸ್ ಗೆ 5 ವರ್ಷಗಳ ಸಂಶೋಧನಾ ಧನಸಹಾಯ ಘೋಷಿಸಲಾಗಿದೆ. ಪ್ರಯೋಗಾಲಯದಲ್ಲಿ ತಯಾರಾಗುವ ವಜ್ರಗಳಿಗೆ ಯಂತ್ರೋಪಕರಣಗಳು, ಅರಳುಗಳು ಮತ್ತು ಪರಿಕರಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ, ಈ ಅನುದಾನ ಪ್ರಕಟಿಸಿದೆ.

ಕೇಂದ್ರ ಸರ್ಕಾರ, ರಫ್ತು ಉತ್ತೇಜನಾ ಮಂಡಳಿ ಮತ್ತು ಕೈಗಾರಿಕಾ ಪ್ರತಿನಿಧಿಗಳ ಜಂಟಿ ಸಮಿತಿಯು ಐಐಟಿ-ಮದ್ರಾಸ್ ಹೊಂದಿರುವ ಸಾಮರ್ಥ್ಯಗಳ ಬಗ್ಗೆ ನಿರ್ಣಯ ಕೈಗೊಂಡ  ನಂತರ, ಈ ಯೋಜನೆಯನ್ನು ಐಐಟಿ-ಮದ್ರಾಸ್‌ಗೆ ನೀಡಲು ನಿರ್ಧರಿಸಲಾಗಿದೆ. ಐಐಟಿ ಮದ್ರಾಸ್‌ನಲ್ಲಿ ‘ಇಂಡಿಯಾ ಸೆಂಟರ್ ಫಾರ್ ಲ್ಯಾಬ್ ಗ್ರೋನ್ ಡೈಮಂಡ್ (ಇನ್‌ಸೆಂಟ್-ಎಲ್‌ಜಿಡಿ)’ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 242.96 ಕೋಟಿ ರೂ. ಅಂದಾಜು ಅನುದಾನ ಒದಗಿಸಲಿದೆ.

ವಾಣಿಜ್ಯ ಕಾರ್ಯದರ್ಶಿ ಶ್ರೀ ಸುನೀಲ್ ಬರ್ತ್ವಾಲ್ ಅಧ್ಯಕ್ಷತೆಯ ಯೋಜನಾ ಮೌಲ್ಯಮಾಪನ ಸಮಿತಿಯು ಉದ್ದೇಶಿತ ಪ್ರಸ್ತಾವನೆಯನ್ನು  ಶಿಫಾರಸು ಮಾಡಿದೆ. ಇದನ್ನು ವಾಣಿಜ್ಯ ಮತ್ತು ಕೈಗಾರಿಕೆ, ಜವಳಿ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಶ್ರೀ ಪಿಯೂಷ್ ಗೋಯಲ್ ಅನುಮೋದಿಸಿದ್ದಾರೆ. ಮುಂದಿನ 5 ವರ್ಷಗಳ ಅವಧಿಯಲ್ಲಿ ಈ ಯೋಜನೆಗೆ ಬಜೆಟ್ ಬೆಂಬಲ ಒದಗಿಸಲಾಗುವುದು.

ರಾಸಾಯನಿಕ ಆವಿ ಶೇಖರಣೆ (ಸಿವಿಡಿ), ಅಧಿಕ ಒತ್ತಡ ಮತ್ತು ಅಧಿಕ ತಾಪಮಾನ (ಎಚ್ ಪಿ ಎಚ್ ಟಿ) ವ್ಯವಸ್ಥೆಗಳ ಮೂಲಕ ವಜ್ರದ ದೇಶೀಯ ಉತ್ಪಾದನೆ ಉತ್ತೇಜಿಸಲು ದೇಶದ ಕೈಗಾರಿಕೆಗಳು ಮತ್ತು ಉದ್ಯಮಿಗಳಿಗೆ ಕಾರ್ಯಾಚರಣೆ ಮಾದರಿಯಲ್ಲಿ ತಾಂತ್ರಿಕ ಸಹಾಯ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ. ಇದರೊಂದಿಗೆ ಪ್ರಯೋಗಾಲಯದಲ್ಲಿ ತಯಾರಾದ ವಜ್ರ(ಎಲ್‌ಜಿಡಿ) ವ್ಯಾಪಾರ ವಿಸ್ತರಿಸುವ, ಅರಳುಗಳು, ಪರಿಕರಗಳು, ಸಂಶೋಧನಾ ಪ್ರಯತ್ನಗಳು ಕೈಗೆಟುಕುವ ವೆಚ್ಚದಲ್ಲಿ ಸ್ಟಾರ್ಟಪ್‌ಗಳಿಗೆ ತಂತ್ರಜ್ಞಾನ ಲಭ್ಯವಾಗುವಂತೆ ಮಾಡುತ್ತದೆ. ಜತೆಗೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಎಲ್‌ಜಿಡಿ ರಫ್ತುಗಳನ್ನು ಹೆಚ್ಚಿಸುತ್ತದೆ. ಹೀಗೆ ಭಾರತದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಮುತ್ತು ರತ್ನಗಳು ಮತ್ತು ಚಿನ್ನಾಭರಣ ತಯಾರಿಕಾ ವಲಯವು ಭಾರತೀಯ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಅದು ಭಾರತದ ಒಟ್ಟು ಸರಕು ರಫ್ತಿಗೆ ಸುಮಾರು 9% ಕೊಡುಗೆ ನೀಡುತ್ತಾ ಬಂದಿದೆ. ಕಳೆದ ದಶಕದಲ್ಲಿ, ಜಾಗತಿಕವಾಗಿ ಮುತ್ತುರತ್ನ ಮತ್ತು ಚಿನ್ನಾಭರಣ ತಯಾರಿಕಾ ವಲಯದಲ್ಲಿ ಹಲವಾರು ಸಕಾರಾತ್ಮಕ ಬೆಳವಣಿಗೆಗಳು ನಡೆದಿವೆ. ಈ ವಲಯದ ಪ್ರಮುಖ ತಾಂತ್ರಿಕ ಬೆಳವಣಿಗೆಗಳಲ್ಲಿ ಪ್ರಯೋಗಾಲಯದಲ್ಲಿ ತಯಾರಾದ ವಜ್ರಗಳು (ಎಲ್‌ಜಿಡಿ) ಸಹ ಒಂದಾಗಿದೆ.

ಚಿನ್ನಾಭರಣ ಉದ್ಯಮವೇ ಅಲ್ಲದೆ, ಪ್ರಯೋಗಾಲಯಗಳಲ್ಲಿ ತಯಾರಾಗುವ ವಜ್ರಗಳನ್ನು ಕಂಪ್ಯೂಟರ್ ಚಿಪ್‌ಗಳು, ಉಪಗ್ರಹಗಳು, 5ಜಿ ತಂತ್ರಜ್ಞಾನ ಜಾಲಗಳಲ್ಲೂ  ಬಳಸಲಾಗುತ್ತದೆ. ಏಕೆಂದರೆ ಸಿಲಿಕಾನ್ ಆಧಾರಿತ ಚಿಪ್‌ಗಳಿಗಿಂತ ಎಲ್‌ಜಿಡಿ ಕಡಿಮೆ ವಿದ್ಯುತ್ ಬಳಸಿ ಹೆಚ್ಚಿನ ವೇಗದಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಕಾರಣ ಅವುಗಳನ್ನು ಪ್ರತೀಕೂಲ ಹವಾಮಾನದಲ್ಲೂ ಬಳಸಬಹುದು. ರಕ್ಷಣೆ, ದೃಗ್ವಿಜ್ಞಾನ (ಆಪ್ಟಿಕ್ಸ್), ಚಿನ್ನಾಭರಣಗಳು, ಉಷ್ಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಎಲ್‌ಜಿಡಿ ವ್ಯಾಪಕ ಉಪಯೋಗಗಳನ್ನು ಅಥವಾ ಬಳಕೆಯನ್ನು ಹೊಂದಿದೆ.

ಜಾಗತಿಕವಾಗಿ, 2020ರಲ್ಲಿ ಎಲ್‌ಜಿಡಿ ಮಾರುಕಟ್ಟೆ 1 ಶತಕೋಟಿ ಡಾಲರ್ ಇತ್ತು. ಪ್ರಯೋಗಾಲಯದಲ್ಲಿ ತಯಾರಾಗುವ ವಜ್ರಾಭರಣ ಮಾರುಕಟ್ಟೆಯು 2025ರ ವೇಳೆಗೆ 5 ಶತಕೋಟಿ ಡಾಲರ್ ಗೆ ವೇಗವಾಗಿ ಏರಿಕೆ ಕಾಣಲಿದೆ. 2035 ರ ವೇಳೆಗೆ ಅದು 15 ಶತಕೋಟಿ ಡಾಲರ್ ದಾಟುವ ನಿರೀಕ್ಷೆಯಿದೆ.

ಕಳೆದ 5 ವರ್ಷ ಮತ್ತು ಪ್ರಸಕ್ತ ವರ್ಷದಲ್ಲಿ ತುಂಡರಿಸಿದ  ಮತ್ತು ಪಾಲಿಶ್ ಮಾಡಿದ ಪ್ರಯೋಗಾಲಯದಲ್ಲಿ ತಯಾರಾದ ವಜ್ರಗಳ ರಫ್ತು ಈ ಕೆಳಗಿನಂತಿದೆ:

(ಮೌಲ್ಯ ದಶಲಕ್ಷ ಡಾಲರ್ ನಲ್ಲಿ)

ಆಭರಣ

2017-18

2018-19

2019-20

2020-21

2021-22

2022-23 (Apr-Dec 2022)

ತುಂಡರಿಸಿದ ಮತ್ತು ಪಾಲಿಷ್ ಮಾಡಿದ ಪ್ರಯೋಗಾಲಯದಲ್ಲಿ ತಯಾರಾದ ವಜ್ರಾಭರಣಗಳು*

237.89

274.75

473.65

637.97

1,348.24

1,387.33

ಮೂಲe: ಡಿಜಿಸಿಐಎಸ್

ಪ್ರಯೋಗಾಲಯಗಳಲ್ಲಿ ತಯಾರಾಗುವ ವಜ್ರಗಳನ್ನು 2 ತಂತ್ರಜ್ಞಾನಗಳ ಮೂಲಕ ಉತ್ಪಾದಿಸಲಾಗುತ್ತದೆ, ಅವುಗಳೆಂದರೆ ಹೈ-ಪ್ರೆಶರ್ ಹೈ ಟೆಂಪರೇಚರ್ (ಎಟ್ ಪಿ ಎಚ್ ಟಿ) ಮತ್ತು ರಾಸಾಯನಿಕ ಆವಿ ಶೇಖರಣೆ(ಸಿವಿಡಿ) ತಂತ್ರಜ್ಞಾನ. ಸಿವಿಡಿ ತಂತ್ರಜ್ಞಾನ ಬಳಸಿ ಪ್ರಯೋಗಾಲಯದಲ್ಲಿ ತಯಾರಿಸುವ ವಜ್ರಗಳನ್ನು ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಭಾರತವೂ ಒಂದಾಗಿದೆ. ಉದ್ಯಮದ ಅಂದಾಜಿನ ಪ್ರಕಾರ, 2021-22 ಆರ್ಥಿಕ ವರ್ಷದಲ್ಲಿ ನಡೆದ ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲು 25.8% ಆಗಿತ್ತು. ಆದಾಗ್ಯೂ, ಸಂಶ್ಲೇಷಿತ(ಸಿಂಥೆಟಿಕ್) ವಜ್ರಗಳ ಉತ್ಪಾದನೆಗೆ ಕಚ್ಚಾ ವಸ್ತುವಾಗಿರುವ ನಿರ್ಣಾಯಕ ಯಂತ್ರೋಪಕರಣಗಳು ಮತ್ತು ವಜ್ರದ ಅರಳುಗಳ ಪೂರೈಕೆಗಾಗಿ ನಾವು ಇತರ ದೇಶಗಳನ್ನು ಅವಲಂಬಿಸಿದ್ದೇವೆ. 

ಆದ್ದರಿಂದ, ನೈಸರ್ಗಿಕ ವಜ್ರಗಳ ವಿಷಯದಲ್ಲಿ ನಾವು ಹೊಂದಿರುವ ಆಮದು ಅವಲಂಬನೆ ತೆಗೆದುಹಾಕಬೇಕಾದರೆ, ನಿರ್ಣಾಯಕ ಯಂತ್ರೋಪಕರಣಗಳು ಮತ್ತು ಅರಳುಗಳ ಉತ್ಪಾದನೆಗೆ ಭಾರತವು ತನ್ನದೇ ಆದ, ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ. ಗುಣಮಟ್ಟದ ಪ್ರಯೋಗಾಲಯ ತಯಾರಿತ ವಜ್ರಗಳು ಅರ್ಹ ಪ್ರಮಾಣೀಕರಣದೊಂದಿಗೆ, ಅಭಿವೃದ್ಧಿಪಡಿಸಿದ ಯಂತ್ರೋಪಕರಣಗಳು ಮತ್ತು ಪ್ರಕ್ರಿಯೆಯ ನಿಯತಾಂಕಗಳಿಂದ ಉತ್ಪಾದಿಸಿದರೆ ಅನೇಕ ವಿದೇಶಿ ಗ್ರಾಹಕರನ್ನು ಆಕರ್ಷಿಸುತ್ತವೆ. ಇದು ರಫ್ತು ಪ್ರಮಾಣವನ್ನು ಸಹ ಹೆಚ್ಚಿಸುತ್ತದೆ. ಉತ್ಪಾದನೆಯ ಪ್ರಮಾಣವನ್ನೂ ಹೆಚ್ಚಿಸುತ್ತದೆ. ದಾಖಲಿತ ಪ್ರಕ್ರಿಯೆಯ ನಿಯತಾಂಕಗಳು ಮತ್ತು ಅಭಿವೃದ್ಧಿಪಡಿಸಿದ ಪರಿಕರಗಳು ಹೊಸ ಉದ್ಯಮಶೀಲರನ್ನು ಪ್ರಯೋಗಾಲಯ ತಯಾರಿತ ವಜ್ರದ ವ್ಯವಹಾರ ಪ್ರವೇಶಿಸಲು ಪ್ರೋತ್ಸಾಹ ನೀಡುತ್ತದೆ. ಇದರ ಮೂಲಸಕೌರ್ಯ ಸೌಲಭ್ಯ ನಿರ್ಮಿಸಲು ಸುಲಭವಾಗುವ ಜತೆಗೆ, ವೆಚ್ಚ ಪರಿಣಾಮಕಾರಿಯಾಗಲಿದೆ. ಇದು ಭರ್ಜರಿ ವ್ಯಾಪಾರ ಚಟುವಟಿಕೆಗೆ ಪುಷ್ಟಿ ನೀಡಿ,  ಅಪಾರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. 

*****



(Release ID: 1901909) Visitor Counter : 184


Read this release in: English , Urdu , Hindi , Tamil , Telugu