ಪ್ರಧಾನ ಮಂತ್ರಿಯವರ ಕಛೇರಿ
ಉತ್ತರಾಖಂಡದ ರೋಜ್ಗಾರ್ ಮೇಳ ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಪ್ರಧಾನಮಂತ್ರಿ ಭಾಷಣ
"ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಯುವಕರನ್ನು ಹೊಸ ಶತಮಾನಕ್ಕೆ ಅಣಿಗೊಳಿಸುತ್ತದೆ"
"ಪ್ರತಿಯೊಬ್ಬ ಯುವಜನರೂ ತಮ್ಮ ಆಸಕ್ತಿಯ ಆಧಾರದ ಮೇಲೆ ಹೊಸ ಅವಕಾಶಗಳನ್ನು ಪಡೆಯಬೇಕೆಂಬುದು ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರದ ನಿರಂತರ ಪ್ರಯತ್ನವಾಗಿದೆ"
"ದೇಶಾದ್ಯಂತ 38 ಕೋಟಿ ಮುದ್ರಾ ಸಾಲಗಳನ್ನು ನೀಡಲಾಗಿದ್ದು, ಇದುವರೆಗೆ ಸುಮಾರು 8 ಕೋಟಿ ಯುವಕರು ಮೊದಲ ಬಾರಿಗೆ ಉದ್ಯಮಿಗಳಾಗಿದ್ದಾರೆ"
Posted On:
20 FEB 2023 11:41AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಸಂದೇಶದ ಮೂಲಕ ಉತ್ತರಾಖಂಡ ರೋಜ್ಗಾರ್ ಮೇಳವನ್ನುದ್ದೇಶಿಸಿ ಭಾಷಣ ಮಾಡಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ನೇಮಕಾತಿ ಪತ್ರಗಳನ್ನು ಪಡೆದವರಿಗೆ ಹೊಸ ಆರಂಭವಾಗಿದ್ದು, ಇದು ಕೇವಲ ಜೀವನವನ್ನು ಬದಲಾಯಿಸುವ ಅವಕಾಶ ಮಾತ್ರವಲ್ಲ ಜೊತೆಗೆ ಸಮಗ್ರ ಬದಲಾವಣೆಯ ಮಾಧ್ಯಮವಾಗಿದೆ ಎಂದು ಹೇಳಿದರು. ದೇಶದ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಪ್ರಯೋಗಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ನೇಮಕಗೊಂಡವರಲ್ಲಿ ಹೆಚ್ಚಿನವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದರು. "ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಯುವಕರನ್ನು ಹೊಸ ಶತಮಾನಕ್ಕೆ ಸಜ್ಜುಗೊಳಿಸುತ್ತದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ಸಂಕಲ್ಪವನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ಉತ್ತರಾಖಂಡದ ಯುವಕರ ಮೇಲಿದೆ ಎಂದರು.
ಪ್ರತಿಯೊಬ್ಬ ಯುವಜನರೂ ತಮ್ಮ ಆಸಕ್ತಿಯ ಆಧಾರದ ಮೇಲೆ ಹೊಸ ಅವಕಾಶಗಳನ್ನು ಪಡೆದು, ಮುಂದೆ ಸಾಗಲು ಸರಿಯಾದ ಮಾಧ್ಯಮಕ್ಕೆ ಪ್ರವೇಶವನ್ನು ಪಡೆಯುವಂತಾಗಬೇಕು ಎಂಬ ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರದ ನಿರಂತರ ಪ್ರಯತ್ನವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸರ್ಕಾರಿ ಸೇವೆಗಳಲ್ಲಿ ನೇಮಕಾತಿ ಅಭಿಯಾನವೂ ಈ ದಿಕ್ಕಿನಲ್ಲಿ ತೆಗೆದುಕೊಂಡ ಒಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ಲಕ್ಷಾಂತರ ಯುವಕರು ಕೇಂದ್ರ ಸರ್ಕಾರದಿಂದ ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಿದ್ದಾರೆ ಮತ್ತು ಉತ್ತರಾಖಂಡವು ಅದರ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ದೇಶಾದ್ಯಂತ ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂತಹ ನೇಮಕಾತಿ ಅಭಿಯಾನಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು. "ಇಂದು ಉತ್ತರಾಖಂಡವು ಅದರ ಭಾಗವಾಗುತ್ತಿರುವುದು ನನಗೆ ಸಂತೋಷ ತಂದಿದೆ", ಎಂದು ಪ್ರಧಾನಂತ್ರಿ ಹೇಳಿದರು.
ಪರ್ವತಗಳ ನೀರು ಮತ್ತು ಯುವಕರು ಪರ್ವತಗಳಿಗೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂಬ ಹಳೆಯ ಗಾದೆಯಿಂದ ಮುಕ್ತರಾಗುವಂತೆ ಪ್ರಧಾನಮಂತ್ರಿ ಒತ್ತಿ ಹೇಳಿದರು. "ಉತ್ತರಾಖಂಡದ ಯುವಜನರು ತಮ್ಮ ಗ್ರಾಮಗಳಿಗೆ ಮರಳಬೇಕು ಎಂಬುದು ಕೇಂದ್ರ ಸರ್ಕಾರದ ನಿರಂತರ ಪ್ರಯತ್ನವಾಗಿದೆ", ಪರ್ವತ ಪ್ರದೇಶಗಳಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳ ಬಗ್ಗೆ ಪ್ರಧಾನಮಂತ್ರಿ ಒತ್ತಿ ಹೇಳಿದರು. ಉತ್ತರಾಖಂಡದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿನ ಹೂಡಿಕೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಹೊಸ ರಸ್ತೆಗಳು ಮತ್ತು ರೈಲು ಮಾರ್ಗಗಳ ನಿರ್ಮಾಣ ಸಂಪರ್ಕವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು. ಎಲ್ಲೆಡೆ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂದ ಪ್ರಧಾನಮಂತ್ರಿಯವರು, ನಿರ್ಮಾಣ ಕಾರ್ಮಿಕರು, ಎಂಜಿನಿಯರ್ ಗಳು, ಕಚ್ಚಾವಸ್ತು ಕೈಗಾರಿಕೆಗಳು ಮತ್ತು ಅಂಗಡಿಗಳ ಉದಾಹರಣೆಗಳನ್ನು ನೀಡಿದರು. ಸಾರಿಗೆ ವಲಯದಲ್ಲಿ ಬೇಡಿಕೆಯ ಹೆಚ್ಚಳದಿಂದಾಗಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿರುವುದನ್ನು ಅವರು ಉಲ್ಲೇಖಿಸಿದರು. ಈ ಹಿಂದೆ ಉತ್ತರಾಖಂಡದ ಗ್ರಾಮೀಣ ಪ್ರದೇಶಗಳ ಯುವಕರು ಉದ್ಯೋಗಕ್ಕಾಗಿ ದೊಡ್ಡ ನಗರಗಳಿಗೆ ಪ್ರಯಾಣಿಸಬೇಕಾಗಿತ್ತು ಆದರೆ ಇಂದು, ಸಾವಿರಾರು ಯುವಕರು ಹಳ್ಳಿಗಳಲ್ಲಿ ಇಂಟರ್ನೆಟ್ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಗಮನಸೆಳೆದರು.
ರಸ್ತೆ, ರೈಲು ಮತ್ತು ಅಂತರ್ಜಾಲದ ಮೂಲಕ ದೂರದ ಪ್ರದೇಶಗಳು ಸಂಪರ್ಕ ಹೊಂದಿದ ಪರಿಣಾಮವಾಗಿ ಉತ್ತರಾಖಂಡದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ವಿಸ್ತರಿಸುತ್ತಿದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಪ್ರವಾಸೋದ್ಯಮ ನಕ್ಷೆಯಲ್ಲಿ ಹೊಸ ಪ್ರವಾಸಿ ಸ್ಥಳಗಳು ಮೂಡುತ್ತಿವೆ ಎಂದರು. ಈ ಕಾರಣದಿಂದಾಗಿ, ಉತ್ತರಾಖಂಡದ ಯುವಕರು ಈಗ ದೊಡ್ಡ ನಗರಗಳಿಗೆ ಪ್ರಯಾಣಿಸುವ ಬದಲು ತಮ್ಮ ಮನೆಗಳ ಬಳಿ ಅದೇ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರವಾಸೋದ್ಯಮ ವಲಯದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಮುದ್ರಾ ಯೋಜನೆ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅಂಗಡಿಗಳು, ಧಾಬಾಗಳು, ಅತಿಥಿ ಗೃಹಗಳು ಮತ್ತು ಹೋಂಸ್ಟೇಗಳ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಅಂತಹ ವ್ಯವಹಾರಗಳಿಗೆ ಯಾವುದೇ ಖಾತರಿಯಿಲ್ಲದೆ 10 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುತ್ತಿದೆ ಎಂದು ಒತ್ತಿ ಹೇಳಿದರು. ದೇಶಾದ್ಯಂತ ಈವರೆಗೆ 38 ಕೋಟಿ ಮುದ್ರಾ ಸಾಲಗಳನ್ನು ನೀಡಲಾಗಿದ್ದು, ಸುಮಾರು 8 ಕೋಟಿ ಯುವಜನರು ಮೊದಲ ಬಾರಿಗೆ ಉದ್ಯಮಿಗಳಾಗಿದ್ದಾರೆ", ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಎಸ್ಸಿ / ಎಸ್ಟಿ / ಒಬಿಸಿ ವರ್ಗಕ್ಕೆ ಸೇರಿದ ಮಹಿಳೆಯರು ಮತ್ತು ಯುವಕರ ಪಾಲು ಗರಿಷ್ಠವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿಯವರು, ಇದು ಭಾರತದ ಯುವಕರಿಗೆ ಅದ್ಭುತ ಸಾಧ್ಯತೆಗಳ ಅಮೃತ ಕಾಲವಾಗಿದೆ ಎಂದು ಹೇಳಿದರು ಮತ್ತು ತಮ್ಮ ಸೇವೆಗಳ ಮೂಲಕ ಭಾರತದ ಅಭಿವೃದ್ಧಿಯನ್ನು ವೇಗಗೊಳಿಸುವಂತೆ ಯುವಕರಿಗೆ ಆಗ್ರಹಿದರು.
*****
(Release ID: 1901423)
Visitor Counter : 158
Read this release in:
Tamil
,
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Telugu
,
Malayalam