ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ರಾಜ್ಯಸಭೆಯಲ್ಲಿ ಪ್ರಧಾನಿ ಮಂತ್ರಿ ಅವರಿಂದ ಉತ್ತರ

Posted On: 09 FEB 2023 6:34PM by PIB Bengaluru

ಗೌರವಾನ್ವಿತ ಸಭಾಪತಿಗಳೆ,

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯಲ್ಲಿ ಭಾಗವಹಿಸುತ್ತಿರುವಾಗ, ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ನನ್ನ ವಿನಮ್ರ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ನಾನು ಅವರನ್ನು ಅಭಿನಂದಿಸುತ್ತೇನೆ. ಗೌರವಾನ್ವಿತ ಸಭಾಪತಿಗಳೆ, ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವಾಗ, ಅವರು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನೀಲನಕ್ಷೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯಗಳಿಗೆ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದ್ದಾರೆ.

ಗೌರವಾನ್ವಿತ ಸಭಾಪತಿಗಳೆ,
ಈ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರು ನನ್ನ ಕಲ್ಪನೆಯ ಪ್ರಕಾರ ಚರ್ಚೆಯನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ ಮತ್ತು ಆದ್ದರಿಂದ ಸದನ ಮತ್ತು ಚರ್ಚೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳು.

ಗೌರವಾನ್ವಿತ ಸಭಾಪತಿಗಳೆ,

ಈ ಸದನವು ರಾಜ್ಯಗಳ ಸದನವಾಗಿದೆ. ಕಳೆದ ದಶಕಗಳಲ್ಲಿ ಹಲವಾರು ಬುದ್ಧಿಜೀವಿಗಳು ಈ ಸದನದಿಂದ ದೇಶಕ್ಕೆ ನಿರ್ದೇಶನ ನೀಡಿದ್ದಾರೆ; ಅವರು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಈ ಸದನದಲ್ಲಿ ಅನೇಕ ಸ್ನೇಹಿತರು ಇದ್ದಾರೆ, ಅವರು ತಮ್ಮ ವೈಯಕ್ತಿಕ ಜೀವನದಲ್ಲಿಯೂ ಹಲವಾರು ಸಾಧನೆಗಳನ್ನು ಮಾಡಿದ್ದಾರೆ, ತಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ; ಆದ್ದರಿಂದ, ಈ ಸದನದಲ್ಲಿ ಏನೇ ನಡೆದರೂ, ದೇಶವು ಅದರ ಬಗ್ಗೆ ತುಂಬಾ ಕಾಳಜಿ ವಹಿಸುತ್ತದೆ. ರಾಷ್ಟ್ರವು ಅದನ್ನು ಹತ್ತಿರದಿಂದ ಕೇಳುತ್ತದೆ ಮತ್ತು ಅದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ.

ಗೌರವಾನ್ವಿತ ಸದಸ್ಯರಿಗೆ ನಾನು ಇದನ್ನು ಹೇಳುತ್ತೇನೆ, ನನ್ನ ಬಳಿ ಗುಲಾಲ್ (ಬಣ್ಣದ ಪುಡಿ) ಇದ್ದರೆ ಕೆಲವರು ಕೆಸರು ಹೊಂದಿದ್ದರು ಮತ್ತು ಕೆಲವರು ಕೆಸರು ಎರಚಿದರು. ಹೇಗಾದರೂ, ಇದು ಒಳ್ಳೆಯದೆ. ಏಕೆಂದರೆ ನೀವು ಹೆಚ್ಚು ಕೆಸರು ಎರಚಲು ಆರಂಭಿಸಿದರೆ, ಕಮಲವು ಹೆಚ್ಚು ಅರಳುತ್ತದೆ. ಅದಕ್ಕಾಗಿಯೇ ಕಮಲವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅರಳಿಸಲು ನೀವು ನೀಡಿದ ಯಾವುದೇ ಕೊಡುಗೆಗಾಗಿ ನಾನು ಅವರಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.

ಗೌರವಾನ್ವಿತ ಸಭಾಪತಿಗಳೆ, 

ಪ್ರತಿಪಕ್ಷದ ಹಿರಿಯ ಸಹೋದ್ಯೋಗಿ, ಗೌರವಾನ್ವಿತ ಮಲ್ಲಿಕಾರ್ಜುನ ಖರ್ಗೆ ಜಿ, "ನಾವು 60 ವರ್ಷಗಳಲ್ಲಿ ಬಲವಾದ ಅಡಿಪಾಯ ನಿರ್ಮಿಸಿದ್ದೇವೆ" ಎಂದು ಹೇಳಿದ್ದರು. ಅಡಿಪಾಯವನ್ನು ನಿರ್ಮಿಸಿದ್ದು ನಾವು, ಆದರೆ ಮೋದಿ ಅವರು ಅದರ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಅವರ ದೂರು. ಆದರೆ ಮಾನ್ಯ ಸಭಾಪತಿಗಳೆ, 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ, ನಾನು ವಿಷಯಗಳನ್ನು ಹತ್ತಿರದಿಂದ ನೋಡಲು ಮತ್ತು ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದಾಗ, ಕಾಂಗ್ರೆಸ್ ಕುಟುಂಬವು 60 ವರ್ಷಗಳ ಕಾಲ ಭದ್ರ ಬುನಾದಿ ನಿರ್ಮಿಸುವ ಉದ್ದೇಶ ಹೊಂದಿದ್ದರೂ, ಅವರು ಮಾಡಲಿಲ್ಲ. ಅದರ ಬಗ್ಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ, ಆದರೆ 2014ರ ನಂತರ, ನಾನು ಬಂದು ನೋಡಿದಾಗ ಅವರು ಗುಂಡಿಗಳನ್ನು ಮಾತ್ರ ಅಗೆದಿದ್ದಾರೆ. ಅಡಿಪಾಯವನ್ನು ನಿರ್ಮಿಸುವುದು ಅವರ ಉದ್ದೇಶವಾಗಿದ್ದಿರಬಹುದು, ಆದರೆ ಅವರು ಹೊಂಡಗಳನ್ನು ಮಾತ್ರ ಅಗೆದಿದ್ದರು. ಮತ್ತು ಗೌರವಾನ್ವಿತ ಸಭಾಪತಿಗಳೆ, ಹೊಂಡ ಅಗೆಯುವಾಗ, ಅವರು 6 ದಶಕಗಳನ್ನು ವ್ಯರ್ಥ ಮಾಡಿದರು! ಆ ಸಮಯದಲ್ಲಿ ಜಗತ್ತಿನ ಚಿಕ್ಕ ಚಿಕ್ಕ ದೇಶಗಳೂ ಯಶಸ್ಸಿನ ಉತ್ತುಂಗಕ್ಕೆ ಏರಿ ಮುನ್ನಡೆಯುತ್ತಿದ್ದವು.

ಗೌರವಾನ್ವಿತ ಸಭಾಪತಿಗಳೆ, 

ಪಂಚಾಯಿತಿಯಿಂದ ಸಂಸತ್ತಿನವರೆಗೆ ಸರ್ಕಾರಗಳನ್ನು ನಡೆಸುತ್ತಿದ್ದ ಕಾರಣ ಆ ವರ್ಷ ಅವರಿಗೆ ಅಂತಹ ಉತ್ತಮ ವಾತಾವರಣವಿತ್ತು. ಈ ದೇಶವೂ ಅನೇಕ ಭರವಸೆ ಮತ್ತು ನಿರೀಕ್ಷೆಗಳೊಂದಿಗೆ ಅವರನ್ನು ಬೆಂಬಲಿಸುತ್ತಿತ್ತು. ಆದರೆ ಅವರು ಅಂತಹ ಕಾರ್ಯಶೈಲಿ ಮತ್ತು ಕೆಲಸದ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದರು, ಅದಕ್ಕಾಗಿಯೇ ಅವರು ಒಂದೇ ಒಂದು ಸವಾಲಿಗೆ ಶಾಶ್ವತ ಪರಿಹಾರ ನೀಡುವ ಬಗ್ಗೆ ಯೋಚಿಸಲಿಲ್ಲ. ಅವರು ಅದನ್ನು ಎಂದಿಗೂ ಸೂಚಿಸಲಿಲ್ಲ ಅಥವಾ ಅವರು ಎಂದಿಗೂ ಪ್ರಯತ್ನಿಸಲಿಲ್ಲ. ಸಾಕಷ್ಟು ಗಲಾಟೆಗಳು ನಡೆಯುತ್ತಿದ್ದಾಗ ಸಮಗ್ರತೆಯನ್ನು ಆಶ್ರಯಿಸಿದರು ಮತ್ತು ಮುಂದೆ ಹೋಗುತ್ತಿದ್ದರು. ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಅವರ ಮೇಲಿತ್ತು. ದೇಶದ ಜನತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದರು. ಸಮಸ್ಯೆಯ ಪರಿಹಾರವು ದೊಡ್ಡ ಲಾಭವನ್ನು ತರುತ್ತದೆ ಎಂದು ದೇಶದ ಜನರಿಗೆ ತಿಳಿದಿತ್ತು. ಆದರೆ ಅವರ ಆದ್ಯತೆಯೇ ಬೇರೆ, ಅವರ ಉದ್ದೇಶವೇ ಬೇರೆ ಹಾಗಾಗಿ ಯಾವುದಕ್ಕೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿಲ್ಲ.

ಗೌರವಾನ್ವಿತ ಸಭಾಪತಿಗಳೆ, 

ಒಂದರ ಹಿಂದೊಂದರಂತೆ ಕೈಗೊಂಡ ಕ್ರಮಗಳಿಂದಾಗಿ ನಮ್ಮ ಪ್ರಯತ್ನದಿಂದಾಗಿ ನಮ್ಮ ಸರ್ಕಾರ ಎಂಬ ಗುರುತು ನಿರ್ಮಿಸಲಾಗಿದೆ, ಇಂದು ನಾವು ಶಾಶ್ವತ ಪರಿಹಾರದತ್ತ ಸಾಗುತ್ತಿದ್ದೇವೆ. ಪ್ರತಿಯೊಂದು ಸಮಸ್ಯೆಯನ್ನು ಮುಟ್ಟಿ ಓಡಿ ಹೋಗುವವರಲ್ಲ ನಾವು, ದೇಶದ ಮೂಲಭೂತ ಅಗತ್ಯಗಳಿಗೆ ಶಾಶ್ವತ ಪರಿಹಾರಗಳಿಗೆ ಒತ್ತು ನೀಡುತ್ತಾ ಮುನ್ನಡೆಯುತ್ತಿದ್ದೇವೆ.


ಗೌರವಾನ್ವಿತ ಸಭಾಪತಿಗಳೆ, 

ನೀರಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಒಂದು ಕಾಲವಿತ್ತು. ಹಳ್ಳಿಗೆ ಕೈಪಂಪು ಅಳವಡಿಸಿದ ಸಂದರ್ಭದಲ್ಲಿ ಆ ಸಂತೋಷವನ್ನು ಒಂದು ವಾರ ಪೂರ್ತಿ ಆಚರಿಸಲಾಗುತ್ತಿತ್ತು. ಆಚಱಣೆಯ ಸಂಕೇತವಾಗಿ ಆ ಹಳಅಳಿಯಲ್ಲಿ ವಾಹನಗಳನ್ನು ಓಡಿಸುತ್ತಿದ್ದ ಕಾಲವೊಂದಿತ್ತು. ಗುಜರಾತ್ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದ ಮುಖ್ಯಮಂತ್ರಿಯೊಬ್ಬರು ನಗರದಲ್ಲಿ ನೀರಿನ ಟ್ಯಾಂಕ್ ಉದ್ಘಾಟನೆ ಮಾಡಲು ಹೋಗಿದ್ದರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ವಿಶೇಷವೆಂದರೆ, ಅದು ಮುಖಪುಟದಲ್ಲಿ ಮುಖ್ಯ ಸುದ್ದಿಯಾಗಿತ್ತು. ಹಾಗಾಗಿ, 'ಸಮಸ್ಯೆಗಳ ಟೋಕನಿಸಂ' ಎಂದರೇನು ಮತ್ತು ಕೆಲಸ ತಪ್ಪಿಸುವುದು ಹೇಗೆ ಎಂಬ ಸಂಸ್ಕೃತಿಯನ್ನು ದೇಶ ಕಂಡಿದೆ. ನೀರಿನ ಸಮಸ್ಯೆ ನಿವಾರಣೆಗೂ ಮಾರ್ಗೋಪಾಯಗಳನ್ನು ರೂಪಿಸಿದ್ದೇವೆ. ನೀರಿನ ಸಂರಕ್ಷಣೆ ಮತ್ತು ನೀರಾವರಿಯ ಪ್ರತಿಯೊಂದು ಅಂಶಗಳ ಬಗ್ಗೆ ನಾವು ಗಮನ ಹರಿಸಿದ್ದೇವೆ. ‘ಮಳೆ ಹಿಡಿಯಿರಿ’ ಅಭಿಯಾನದಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಂಡಿದ್ದೇವೆ. ಸ್ವಾತಂತ್ರ್ಯ ಪೂರ್ವದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಕೇವಲ 3 ಕೋಟಿ ಮನೆಗಳಿಗೆ ಮಾತ್ರ ನೀರು ಪೂರೈಕೆಯಾಗಿತ್ತು.

ಗೌರವಾನ್ವಿತ ಸಭಾಪತಿಗಳೆ, 

ಆದರೆ ಕಳೆದ 3-4 ವರ್ಷಗಳಲ್ಲಿ ಇಂದು 11 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆಯಾಗುತ್ತಿದೆ. ನೀರಿನ ಕೊರತೆ ಪ್ರತಿ ಕುಟುಂಬದ ಸಮಸ್ಯೆಯಾಗಿದೆ. ಅದು ಇಲ್ಲದೆ ಜೀವನವೇ ಸಾಗುವುದಿಲ್ಲ. ಭವಿಷ್ಯದ ಸಾಧ್ಯತೆಗಳನ್ನು ನೋಡುತ್ತಾ, ಅದನ್ನು ಪರಿಹರಿಸಲು ನಾವು ಮಾರ್ಗಗಳನ್ನು ಆರಿಸಿಕೊಂಡಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ, 

ನಾನು ಇನ್ನೊಂದು ವಿಷಯ ಹೇಳಲು ಬಯಸುತ್ತೇನೆ – ಅದೇನೆಂದರೆ, ಸಾಮಾನ್ಯ ಜನರ ಸಬಲೀಕರಣ. ಬಡವರು ಬ್ಯಾಂಕ್‌ಗಳ ಹಕ್ಕು ಪಡೆಯಬೇಕು ಎಂಬ ನೆಪದಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ಈ ದೇಶದ ಅರ್ಧಕ್ಕಿಂತ ಹೆಚ್ಚು ಜನರು ಬ್ಯಾಂಕ್‌ಗಳ ಬಾಗಿಲು ತಲುಪಲು ಸಾಧ್ಯವಾಗಲಿಲ್ಲ. ನಾವು ಶಾಶ್ವತ ಪರಿಹಾರಗಳನ್ನು ಕಂಡುಕೊಂಡಿದ್ದೇವೆ. 'ಜನ್ ಧನ್ ಖಾತೆಗಳಿಗಾಗಿ' ಅಭಿಯಾನ  ಪ್ರಾರಂಭಿಸಿದ್ದೇವೆ, ಬ್ಯಾಂಕ್‌ಗಳನ್ನು ಪ್ರೇರೇಪಿಸಿ ಅವುಗಳನ್ನು ಆನ್‌ಬೋರ್ಡ್‌ಗೆ ತೆಗೆದುಕೊಂಡಿದ್ದೇವೆ. ಕಳೆದ 9 ವರ್ಷಗಳಲ್ಲಿ 48 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ ಗ್ರಾಮೀಣ ಪ್ರದೇಶ ಮತ್ತು ಪಟ್ಟಣಗಳಲ್ಲಿ 32 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅಂದರೆ ಪ್ರಗತಿಯ ಉದಾಹರಣೆಯನ್ನು ದೇಶದ ಹಳ್ಳಿಗಳಿಗೂ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಖರ್ಗೆಯವರು ನಿನ್ನೆ ಮೋದಿ ಜಿ ನನ್ನ ಕ್ಷೇತ್ರಕ್ಕೆ ಮತ್ತೆ ಮತ್ತೆ ಬರುತ್ತಾರೆ ಎಂದು ದೂರುತ್ತಿದ್ದರು. ಅವರು ಹೇಳುತ್ತಿದ್ದರು - ಮೋದಿ ಜಿ ಕಲ್ಬುರ್ಗಿಗೆ ಪದೇಪದೆ ಬರುತ್ತಾರೆ. ನಾನು ಖರ್ಗೆ ಅವರಿಗೆ ಹೇಳಬಯಸುತ್ತೇನೆ, ನನ್ನ ಭೇಟಿಗಳ ಬಗ್ಗೆ ದೂರು ನೀಡುವ ಮೊದಲು, ಕರ್ನಾಟಕದಲ್ಲಿ 1 ಕೋಟಿ 70 ಲಕ್ಷ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂಬ ಅಂಶವನ್ನು ಮೊದಲು ನೋಡಿ. ಇದಲ್ಲದೆ, ಕಲ್ಬುರ್ಗಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ.

ಈಗ ಹೇಳಿ ಸಭಾಪತಿಗಳೆ,  

ಇಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಬೇಕೇ, ಇಷ್ಟೆಲ್ಲಾ ಸಬಲೀಕರಣ ಮತ್ತು ಜಾಗೃತಿ ಬರಬೇಕಾದರೆ ಇಷ್ಟು ವರ್ಷಗಳು ಬೇಕೇ. ಬಡವರ ನೋವು ನನಗೆ ಅರ್ಥವಾಗುತ್ತಿದೆ. ಈಗ ಅವರ ನೋವು ಪದೇಪದೆ ಗೋಚರಿಸುತ್ತಿದೆ. ಮೋದಿ ದಲಿತನೊಬ್ಬನನ್ನು ಸೋಲಿಸಿದ ಎಂದು ಕೆಲವರು ಹೇಳುವುದು ನನಗೆ ಆಶ್ಚರ್ಯ ತಂದಿದೆ! ಆದರೆ ಮತ್ತೊಬ್ಬ ದಲಿತನನ್ನು ಗೆಲ್ಲಿಸಿದ್ದು ಇದೇ ಪ್ರದೇಶದ ಜನ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂದು ಸಾರ್ವಜನಿಕರು ನಿಮ್ಮನ್ನು ತಿರಸ್ಕರಿಸಿ ಅಧಿಕಾರದಿಂದ ಕೆಳಗಿಳಿಸಿ ನಿಮ್ಮ ಖಾತೆಯನ್ನು ಮುಚ್ಚುತ್ತಿದ್ದಾರೆ, ಆದರೆ ನೀವು ಇಲ್ಲಿ ಕಣ್ಣೀರು ಹಾಕುತ್ತಿದ್ದೀರಿ.

ಗೌರವಾನ್ವಿತ ಸಭಾಪತಿಗಳೆ, 

ಜನ್ ಧನ್, ಆಧಾರ್, ಮೊಬೈಲ್ ತ್ರಿಮೂರ್ತಿಗಳಾಗಿದ್ದು, ಕಳೆದ ಕೆಲವು ವರ್ಷಗಳಲ್ಲಿ ನೇರ ಲಾಭ ವರ್ಗಾವಣೆ ಯೋಜನೆಯಡಿ ಈ ದೇಶದ ನಾಗರಿಕರ ಬ್ಯಾಂಕ್ ಖಾತೆಗಳಿಗೆ 27 ಲಕ್ಷ ಕೋಟಿ ರೂಪಾಯಿ ವರ್ಗಾಯಿಸಲಾಗಿದೆ. ಈ ನೇರ ನಗದು ಬಳಕೆಯಿಂದ ನನಗೆ ಸಂತೋಷವಾಗಿದೆ. ನೇರ ನಗದು ವರ್ಗಾವಣೆ ಟ್ರಾನ್ಸ್‌ಫರ್ ತಂತ್ರಜ್ಞಾನವು ಕಾಳಸಂತೆಗೆ  ಹೋಗುತ್ತಿದ್ದ ಈ ದೇಶದ 2 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಹಣವನ್ನು ಕೆಟ್ಟ ಕೈಗಳಿಂದ ಉಳಿಸಲಾಗಿದೆ. ಡಿಬಿಟಿ ದೇಶಕ್ಕೆ ದೊಡ್ಡ ಸೇವೆ ಮಾಡಿದೆ. ಅಂದರೆ ಮಧ್ಯವರ್ತಿಗಳು ಮತ್ತು ಅವರ ಸಹಚರರು 2 ಲಕ್ಷ ಕೋಟಿ ರೂಪಾಯಿಯ ಲಾಭ ಪಡೆಯುತ್ತಿದ್ದರು ಎಂದು ನನಗೆ ತಿಳಿದಿದೆ.

ಗೌರವಾನ್ವಿತ ಸಭಾಪತಿಗಳೆ,

ನಮ್ಮ ದೇಶದಲ್ಲಿ ಹಿಂದೆ, ಯೋಜನೆಗಳನ್ನು ಸ್ಥಗಿತಗೊಳಿಸುವುದು, ವಿಳಂಬಗೊಳಿಸುವುದು ಮತ್ತು ಬೇರೆಡೆಗೆ ತಿರುಗಿಸುವುದು ಅವರ ಆಡಳಿತ ಸಂಸ್ಕೃತಿಯ ಭಾಗವಾಗಿತ್ತು; ಇದು ಅವರ ಕೆಲಸದ ವಿಧಾನವೂ ಆಗಿತ್ತು. ಪ್ರಾಮಾಣಿಕ ತೆರಿಗೆದಾರರು ಕಷ್ಟಪಟ್ಟು ದುಡಿದ ಹಣ ನಷ್ಟವಾಗುತ್ತಿತ್ತು. ನಾವು 'ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್' ಎಂಬ ತಂತ್ರಜ್ಞಾನ ವೇದಿಕೆಯನ್ನು ಸಿದ್ಧಪಡಿಸಿದ್ದೇವೆ. 1,600 ಹಂತಗಳಲ್ಲಿ ದತ್ತಾಂಶ(ಡೇಟಾ) ಸಹಾಯದಿಂದ ಈ ಮೂಲಸೌಕರ್ಯ ಯೋಜನೆಗಳ ವೇಗವನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಯಾವುದೇ ಯೋಜನೆ ತಯಾರಾಗಲು ಹಲವು ತಿಂಗಳು ತೆಗೆದುಕೊಳ್ಳುತ್ತಿದ್ದ ಯೋಜನೆಗಳನ್ನು ಈಗ ವಾರಗಳಲ್ಲಿ ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ. ಏಕೆಂದರೆ ಆಧುನಿಕ ಭಾರತ ನಿರ್ಮಿಸಲು ಮೂಲಸೌಕರ್ಯಗಳ ಪ್ರಾಮುಖ್ಯತೆ ಮತ್ತು ಅವುಗಳ ಪ್ರಮಾಣದ ಪ್ರಾಮುಖ್ಯತೆಯನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಗೌರವಾನ್ವಿತ ಸಭಾಪತಿಗಳೆ, ನಾವು ಕೆಲಸಗಳ ವೇಗದ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದೇವೆ. ಅವುಗಳಿಗೆ ಶಾಶ್ವತ ಪರಿಹಾರಗಳನ್ನು ತರಲು ಮತ್ತು ತಂತ್ರಜ್ಞಾನದ ಮೂಲಕ ಶಾಶ್ವತ ಆಕಾಂಕ್ಷೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ,

ಯಾರಾದರೂ ಸರ್ಕಾರವನ್ನು ಮುನ್ನಡೆಸುವಾಗ, ಅವರು ದೇಶಕ್ಕಾಗಿ ಏನನ್ನಾದರೂ ಮಾಡುವ ಭರವಸೆಯೊಂದಿಗೆ ಬರುತ್ತಾರೆ. ಅವರು ಸಾರ್ವಜನಿಕರಿಗೆ ಏನಾದರೂ ಒಳ್ಳೆಯದನ್ನು ಮಾಡುವ ಭರವಸೆಯೊಂದಿಗೆ ಬರುತ್ತಾರೆ. ಆದರೆ ಕೇವಲ ಭಾವನೆಗಳನ್ನು ವ್ಯಕ್ತಪಡಿಸುವುದು ಸಾಕಾಗುವುದಿಲ್ಲ. ‘ನಮಗೆ ಇದು ಬೇಕು, ಅದು ಬೇಕು’ ಎಂದು ಹೇಳಬಹುದು, ‘ಗರೀಬಿ ಹಠಾವೋ’ ಘೋಷಣೆಯಂತೆ 4 ದಶಕಗಳು ಕಳೆದರೂ ದೇಶದಲ್ಲಿ ಏನೂ ಆಗಿಲ್ಲ. ಅದಕ್ಕಾಗಿಯೇ ಅಭಿವೃದ್ಧಿಯ ವೇಗ ಏನು? ಅಭಿವೃದ್ಧಿಯ ಉದ್ದೇಶವೇನು? ಅಭಿವೃದ್ಧಿಯ ದಿಕ್ಕು ಯಾವುದು? ಅಭಿವೃದ್ಧಿಯ ಪ್ರಯತ್ನ ಏನು ಮತ್ತು ಅದರ ಫಲಿತಾಂಶವೇನು? ಇವುಗಳು ಬಹಳ ಮುಖ್ಯ. ಆದ್ದರಿಂದ, ನೀವು ಏನನ್ನಾದರೂ ಮಾಡುತ್ತಿದ್ದೀರಿ ಎಂದು ಹೇಳಿಕೊಂಡು ಮುಂದೆ ಸಾಗುವುದು ಸಾಕಾಗುವುದಿಲ್ಲ.

ಗೌರವಾನ್ವಿತ ಸಭಾಪತಿಗಳೆ, 

ನಾವು ಜನರ ಆದ್ಯತೆಗಳ ಆಧಾರದ ಮೇಲೆ ಸಾರ್ವಜನಿಕರ ಅಗತ್ಯಗಳಿಗಾಗಿ ಶ್ರಮಿಸುತ್ತಿರುವಾಗ, ಅಂತಹ ದೊಡ್ಡ ಅಗತ್ಯಗಳನ್ನು ನೋಡಿಕೊಳ್ಳುವುದರಿಂದ ನಮ್ಮ ಮೇಲೆ ಒತ್ತಡವೂ ಹೆಚ್ಚಾಗುತ್ತದೆ. ನಾವು ಹೆಚ್ಚು ಶ್ರಮಿಸಬೇಕು. ಆದರೆ ಮಹಾತ್ಮ ಗಾಂಧೀಜಿ ಹೇಳುತ್ತಿದ್ದರಂತೆ - 'ಶ್ರೇ' ಅಥವಾ ಅರ್ಹತೆ (ಮೆರಿಟ್) ಮತ್ತು 'ಪ್ರಿಯಾ' (ಪ್ರಿಯ)ವಾದದ್ದನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತಾ. ನಾವು 'ಶ್ರೇ' (ಮೆರಿಟ್) ಮಾರ್ಗವನ್ನು ಆರಿಸಿಕೊಂಡಿದ್ದೇವೆ. ನಾವು ವಿಶ್ರಾಂತಿಗೆ ಆದ್ಯತೆ ನೀಡುವ ಮಾರ್ಗವನ್ನು ಆರಿಸಿಕೊಂಡಿಲ್ಲ, ಆದರೆ ನಾವು ಸಾಮಾನ್ಯ ಜನರ ಆಶೋತ್ತರಗಳನ್ನು ಈಡೇರಿಸಲು ಹಗಲಿರುಳು ಶ್ರಮಿಸುವ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ಆಕಾಂಕ್ಷೆಗಳನ್ನು ಸಾಧನೆಗಳಾಗಿ ಪರಿವರ್ತಿಸಲು ಮತ್ತು ದೇಶವು ಅಭಿವೃದ್ಧಿಯ ಪಥವನ್ನು ದಾಟಲು ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಈ ಎಲ್ಲಾ ಕನಸುಗಳನ್ನು ಹೊತ್ತವರು ನಾವು, ನಾವು ಅದನ್ನು ಮಾಡಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ, 

ಈಗ ನೋಡಿ, ದೇಶ ಸ್ವತಂತ್ರವಾದಾಗಿನಿಂದ 2014ರ ವರೆಗೆ ಕೇವಲ 14 ಕೋಟಿ ಎಲ್‌ಪಿಜಿ ಸಂಪರ್ಕಗಳಿದ್ದವು, ಆದರೆಜನರಿಂದ ಅಪಾರ ಬೇಡಿಕೆ ಇತ್ತು. ಎಲ್‌ಪಿಜಿ ಸಂಪರ್ಕ ಪಡೆಯಲು ಜನರು ಸಂಸದರ ಬಳಿ ಹೋಗುತ್ತಿದ್ದರು, ಆ ಸಮಯದಲ್ಲಿ 14 ಕೋಟಿ ಮನೆಗಳಿದ್ದವು, ಬೇಡಿಕೆಯೂ ಕಡಿಮೆ ಇತ್ತು, ಒತ್ತಡವೂ ಕಡಿಮೆಯಾಗಿತ್ತು. ನೀವು ಗ್ಯಾಸ್ ಪಡೆಯಲು ಹಣ ನೀಡಬೇಕಾಗಿಲ್ಲ, ಗ್ಯಾಸ್ ತಲುಪಿಸಲು ವ್ಯವಸ್ಥೆ ಮಾಡಿದ್ದೇವೆ. ವಾಹನ ಓಡುತ್ತಿದ್ದರೂ ಕಾಮಗಾರಿ ನಡೆದಿರಲಿಲ್ಲ, ಆದರೆ ಜನರು ಕಾಯುತ್ತಲೇ ಇದ್ದರು. ಆದರೆ ನಾವು ಪ್ರತಿ ಮನೆಗೆ ಎಲ್‌ಪಿಜಿ ಸಂಪರ್ಕ ನೀಡುವುದನ್ನು ಆದ್ಯತೆಯಾಗಿ ನಿರ್ಧರಿಸಿದ್ದೇವೆ. ನಾವು ಅದನ್ನು ಮಾಡುತ್ತೇವೆ ಎಂಬುದು ನಮಗೆ ತಿಳಿದಿತ್ತು, ನಾವು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ನಾವು ಇದಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ನಮಗೆ ತಿಳಿದಿತ್ತು. ಪ್ರಪಂಚದಾದ್ಯಂತ ಅನಿಲವನ್ನು ತರಬೇಕು ಎಂದು ನಮಗೆ ತಿಳಿದಿತ್ತು. ಏಕಕಾಲದಲ್ಲಿ ಒತ್ತಡದ ಸಾಧ್ಯತೆ ತಿಳಿದಿದ್ದರೂ, ನಮ್ಮ ಆದ್ಯತೆಯು ನನ್ನ ದೇಶದ ನಾಗರಿಕರದ್ದಾಗಿತ್ತು. ನಮ್ಮ ಆದ್ಯತೆ ನಮ್ಮ ದೇಶದ ಸಾಮಾನ್ಯ ಜನರಿಗೆ ಮತ್ತು ಅದಕ್ಕಾಗಿಯೇ ನಾವು 32 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನಿಲ ಸಂಪರ್ಕವನ್ನು ಒದಗಿಸಿದ್ದೇವೆ. ಹೊಸ ಮೂಲಸೌಕರ್ಯಗಳನ್ನು ಸೃಷ್ಟಿಸಲು ಹಣ ಖರ್ಚು ಮಾಡಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ,

ಈ ಒಂದು ಉದಾಹರಣೆಯ ಮೂಲಕ ನಾವು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದು. ಆದರೆ ನಾವು ಸಂತೋಷದಿಂದ, ತೃಪ್ತಿಯಿಂದ, ಹೆಮ್ಮೆಯಿಂದ ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಮತ್ತು ಸಾಮಾನ್ಯ ಜನರು ತೃಪ್ತರಾಗಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಒಂದು ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ತೃಪ್ತಿ ಬೇರೇನಿದೆ?

ಗೌರವಾನ್ವಿತ ಸಭಾಪತಿಗಳೆ, 

ಸ್ವಾತಂತ್ರ್ಯ ಬಂದು ಹಲವಾರು ದಶಕಗಳ ನಂತರವೂ ಈ ದೇಶದಲ್ಲಿ 18,000ಕ್ಕೂ ಹೆಚ್ಚು ಹಳ್ಳಿಗಳಿದ್ದು, ಅಲ್ಲಿಗೆ ವಿದ್ಯುತ್ ತಲುಪಿಲ್ಲ. ಈ ಹಳ್ಳಿಗಳು ಹೆಚ್ಚಾಗಿ ನಮ್ಮ ಬುಡಕಟ್ಟು ವಸಾಹತುಗಳ ಗ್ರಾಮಗಳಾಗಿವೆ. ನಮ್ಮ ಬೆಟ್ಟಗುಡ್ಡ, ಪರ್ವತಗಳಲ್ಲಿ ವಾಸಿಸುವ ಜನರ ಹಳ್ಳಿಗಳು ಇವಾಗಿವೆ. ಆದಿವಾಸಿ ಗ್ರಾಮಗಳಿವೆ. ಈಶಾನ್ಯದಲ್ಲೂ ಇಂತಹ ಹಳ್ಳಿಗಳಿವೆ. ಆದರೆ ಇದು ಅವರ ಚುನಾವಣಾ ಲೆಕ್ಕಾಚಾರಕ್ಕೆ ಸರಿಹೊಂದುವುದಿಲ್ಲ. ಹಾಗಾಗಿಯೇ ಈ ಗ್ರಾಮಗಳಿಗೆ ಆದ್ಯತೆ ನೀಡಿಲ್ಲ. ಅವರು ಈ ಕಷ್ಟದ ಕೆಲಸಗಳನ್ನು ಕೈಬಿಟ್ಟಿದ್ದಾರೆ ಎಂದು ನಮಗೆ ತಿಳಿದಿತ್ತು. ನಾವು ಈ ಸವಾಲುಗಳನ್ನು ಸಹ ಸ್ವೀಕರಿಸುತ್ತೇವೆ ಪ್ರತಿ ಹಳ್ಳಿಗೆ ವಿದ್ಯುತ್ ಒದಗಿಸಲು ಸಂಕಲ್ಪ ಮಾಡಿದ್ದೇವೆ. ಕಾಲಮಿತಿಯೊಳಗೆ 18,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಈ ಸವಾಲಿನ ಕಾರ್ಯದ ಹಿಂದೆ ಹಳ್ಳಿಗಳಲ್ಲಿ ಹೊಸ ಹುರುಪು ಮೂಡಿದೆ. ಅವರು ಕೇವಲ ಅಭಿವೃದ್ಧಿಯ ರುಚಿ ನೋಡಲಿಲ್ಲ ಆದರೆ ಮುಖ್ಯವಾಗಿ ದೇಶದ ವ್ಯವಸ್ಥೆಯಲ್ಲಿ ಅವರ ವಿಶ್ವಾಸ ಹೆಚ್ಚಾಯಿತು ಮತ್ತು ನಂಬಿಕೆ ದೊಡ್ಡ ಶಕ್ತಿಯಾಗಿದೆ. ದೇಶದ ಪ್ರಜೆಗಳಲ್ಲಿ ವಿಶ್ವಾಸ ಮೂಡಿದಾಗ ಅದು ಲಕ್ಷ ಕೋಟಿ ಪಟ್ಟು ಹೆಚ್ಚು ಶಕ್ತಿಶಾಲಿಯಾಗುತ್ತದೆ. ನಾವು ಆ ನಂಬಿಕೆಯನ್ನು ಗೆದ್ದಿದ್ದೇವೆ ಮತ್ತು ನಾವು ಶ್ರಮಿಸುತ್ತಿದ್ದೇವೆ, ನಾವು ಅದನ್ನು ಮಾಡಲೇಬೇಕಾಗಿತ್ತು, ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ, ಆ ದೂರದ ಹಳ್ಳಿಗಳಲ್ಲಿ ಭರವಸೆಯ ಹೊಸ ಆಶಾಕಿರಣ ಕಂಡುಬಂದಿದೆ ಎಂದು ನನಗೆ ಖುಷಿಯಾಗಿದೆ. ಸಂತೃಪ್ತಿಯ ಭಾವವಿದ್ದು, ಇಂದು ಆ ಜನರ ಸಂಪೂರ್ಣ ಆಶೀರ್ವಾದ ಪಡೆಯುತ್ತಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ,

ಹಿಂದಿನ ಸರ್ಕಾರಗಳ ಆಡಳಿತದಲ್ಲಿ ಕೆಲವೇ ಗಂಟೆಗಳು ಮಾತ್ರ ವಿದ್ಯುತ್ ಲಭ್ಯವಾಗುತ್ತಿತ್ತು. ಆ ಜಾಗಕ್ಕೆ ಕರೆಂಟು ಬಂದಂತೆ ತೋರುತ್ತಿತ್ತು, ಆದರೆ ಗ್ರಾಮದ ಮಧ್ಯದಲ್ಲಿ ಕೇವಲ ಒಂದು ಕಂಬ ನಿಲ್ಲಿಸಿ, ಅದರ ವಾರ್ಷಿಕೋತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತಿತ್ತು. ಆ ಆಚರಣೆಗಾಗಿಯೇ ಅಂತಹ ದಿನಾಂಕದಂದು ಕಂಬವನ್ನು ಸ್ಥಾಪಿಸಲಾಗುತ್ತಿತ್ತು. ಆದರೆ, ವಿದ್ಯುತ್ ಇರಲಿಲ್ಲ. ಇಂದು ವಿದ್ಯುತ್ ತಲುಪಿರುವುದು ಮಾತ್ರವಲ್ಲದೆ, ನಮ್ಮ ದೇಶದಲ್ಲಿ ಸರಾಸರಿ 22 ಗಂಟೆಗಳ ಕಾಲ ವಿದ್ಯುತ್ ನೀಡುವ ನಮ್ಮ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಕೆಲಸಕ್ಕಾಗಿ ನಾವು ಹೊಸ ಪ್ರಸರಣ ಮಾರ್ಗಗಳನ್ನು ಸ್ಥಾಪಿಸಿದ್ದೇವೆ. ನಾವು ಹೊಸ ಇಂಧನ ಉತ್ಪಾದನೆಗೆ ಕೆಲಸ ಮಾಡಬೇಕಾಯಿತು. ನಾವು ಸೌರಶಕ್ತಿ ಆಯ್ಕೆ ಮಾಡಿಕೊಳ್ಳಬೇಕಾಯಿತು. ನವೀಕರಿಸಬಹುದಾದ ಇಂಧನದ ಹಲವು ಕ್ಷೇತ್ರಗಳನ್ನು ನಾವು ಕಂಡುಹಿಡಿಯಬೇಕಾಗಿತ್ತು. ನಾವು ಜನರನ್ನು ಅವರ ಅದೃಷ್ಟಕ್ಕೆ ಬಿಡಲಿಲ್ಲ. ನಾವು ರಾಜಕೀಯ ಲಾಭ ಅಥವಾ ನಷ್ಟದ ಬಗ್ಗೆ ಯೋಚಿಸಲಿಲ್ಲ. ದೇಶದ ಭವಿಷ್ಯವನ್ನು ಉಜ್ವಲವಾಗಿಸಲು ಹಲವು ಮಾರ್ಗಗಳನ್ನು ಆರಿಸಿಕೊಂಡಿದ್ದೇವೆ. ನಾವು ನಮ್ಮ ಮೇಲೆ ಒತ್ತಡ ಹೆಚ್ಚಿಸಿಕೊಂಡಿದ್ದೇವೆ. ಜನರ ಬೇಡಿಕೆ ಹೆಚ್ಚಾಗತೊಡಗಿತು, ಒತ್ತಡವೂ ಸಹಜವಾಗಿ ಹೆಚ್ಚತೊಡಗಿತು. ನಾವು ಕಠಿಣ ಪರಿಶ್ರಮದ ಹಾದಿ ಆರಿಸಿಕೊಂಡಿದ್ದೇವೆ. ಇಂದು ದೇಶವು ಅದರ ಫಲಿತಾಂಶವನ್ನು ನೋಡುತ್ತಿದೆ. ಇಂಧನ ಕ್ಷೇತ್ರದಲ್ಲಿ ದೇಶವು ಉನ್ನತ ಮಟ್ಟದ ಪ್ರಗತಿ ಸಾಧಿಸುತ್ತಿದೆ.

ಗೌರವಾನ್ವಿತ ಸಭಾಪತಿಗಳೆ,

‘ಆಜಾದಿ ಕಾ ಅಮೃತ ಕಾಲ’ದಲ್ಲಿ ನಾವು ತುಂಬಾ ಧೈರ್ಯದ ಹೆಜ್ಜೆ ಇಟ್ಟಿದ್ದೇವೆ. ಇದು ಸುಲಭವಲ್ಲ ಎಂದು ನನಗೆ ತಿಳಿದಿದೆ, ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಮತ್ತು ನಾವು ಶುದ್ಧತ್ವದ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ಪ್ರತಿಯೊಂದು ಯೋಜನೆಯ ಫಲಾನುಭವಿಗಳು ಶೇಕಡ 100ರಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಪ್ರಯೋಜನಗಳನ್ನು ತಲುಪುವಂತೆ ನಾವು ಪ್ರಯತ್ನಿಸಿದ್ದೇವೆ. ನಿಜವಾದ ಜಾತ್ಯತೀತತೆ ಇದ್ದರೆ ಅದು ಇಷ್ಟೇ, ಸರ್ಕಾರವು ಈ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಆ ಹಾದಿಯಲ್ಲಿ ನಡೆಯುತ್ತಿದೆ. ನಾವು ಅಮೃತ ಕಾಲದಲ್ಲಿ ಶುದ್ಧತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. 100ರಷ್ಟು ಪ್ರಯೋಜನಗಳನ್ನು ಫಲಾನುಭವಿಗಳಿಗೆ ಕೊಂಡೊಯ್ಯುವ ಬಿಜೆಪಿ-ಎನ್‌ಡಿಎ ಸರ್ಕಾರದ ಮಹಾನಿರ್ಣಯ ಇದಾಗಿದೆ.

ಗೌರವಾನ್ವಿತ ಸಭಾಪತಿಗಳೆ,

ಈ '100%' ಅಥವಾ 'ಸ್ಯಾಚುರೇಶನ್'(ಸಂತೃಪ್ತ) ವಿಷಯವು ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದು ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ, ದೇಶದ ಸಮಸ್ಯೆಗಳಿಗೂ ಪರಿಹಾರವಾಗಿದೆ. ದೇಶದಲ್ಲಿನ ಈ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಕೊನೆಗಾಣಿಸಲು ನಾವು ಅಂತಹ ಹೊಸ ಕೆಲಸದ ಸಂಸ್ಕೃತಿಯೊಂದಿಗೆ ಮುಂದೆ ಬರುತ್ತಿದ್ದೇವೆ.

ಶುದ್ಧತ್ವವನ್ನು ತಲುಪುವುದು ಎಂದರೆ ತಾರತಮ್ಯದ ಎಲ್ಲಾ ವ್ಯಾಪ್ತಿಯನ್ನು ಕೊನೆಗೊಳಿಸುವುದು. ಭೇದವಿದ್ದಾಗ ಭ್ರಷ್ಟಾಚಾರವೂ ಹರಿದಾಡಲು ಅವಕಾಶ ಸಿಗುತ್ತದೆ. "ಬೇಗ ಕೊಡು" ಎಂದು ಯಾರಾದರೂ ಹೇಳಿದರೆ, ಮತ್ತೊಬ್ಬರು ಹೇಳುತ್ತಿದ್ದರು - "ಇಷ್ಟು ಕೊಟ್ಟರೆ ಮಾತ್ರ ಕೊಡುತ್ತೇನೆ" ಎಂದು. ಆದರೆ ಅವನು 100% ಮುಂದೆ ಹೋಗಬೇಕೆಂದು ಬಯಸಿದರೆ, ಅದು ನನಗೆ ಈ ತಿಂಗಳು ತಲುಪದಿದ್ದರೂ, ಅದು 3 ತಿಂಗಳ ನಂತರ ನನ್ನನ್ನು ತಲುಪುತ್ತದೆ, ಆದರೆ ಅದು ಖಂಡಿತವಾಗಿಯೂ ನನ್ನನ್ನು ತಲುಪುತ್ತದೆ ಎಂಬ ವಿಶ್ವಾಸವಿದೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಒಂದು ನಿರ್ದಿಷ್ಟ ಜಾತಿ, ಕುಟುಂಬ, ಗ್ರಾಮ, ಪಂಗಡದ ಸಮುದಾಯದಂತಹ ಸಮಾಧಾನಕರ ಆತಂಕಗಳನ್ನು ಕೊನೆಗೊಳಿಸುತ್ತದೆ ಇದು ಎಲ್ಲಾ ಸಮಾಧಾನಕರ ಆತಂಕಗಳನ್ನು ಕೊನೆಗೊಳಿಸುತ್ತದೆ. ಇದು ಸ್ವಾರ್ಥದ ಆಧಾರದ ಮೇಲೆ ಪ್ರಯೋಜನಗಳನ್ನು ನೀಡುವ ಪ್ರವೃತ್ತಿಯನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೆ. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುತ್ತದೆ. ಮಹಾತ್ಮ ಗಾಂಧಿಯವರು ಯಾವಾಗಲೂ ಸಮಾಜದ ಆ ವರ್ಗದ ಕಲ್ಯಾಣವನ್ನು ಪ್ರತಿಪಾದಿಸುತ್ತಿದ್ದರು. ಸಮಾಜದ ನಿರ್ಲಕ್ಷಿತ ವರ್ಗಗಳ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. 'ಸಬ್ಕಾ ಸಾಥ್-ಸಬ್ಕಾ ವಿಕಾಸ್' ಎಂದರೆ ಅವರ ಹಕ್ಕುಗಳ 100% ವಿತರಣೆಯೇ ಆಗಿದೆ.

ಸರ್ಕಾರಿ ಆಡಳಿತ ಯಂತ್ರವು ಪ್ರತಿಯೊಬ್ಬ ಅರ್ಹ ವ್ಯಕ್ತಿಯನ್ನು ತಲುಪುವ ಗುರಿ ಹೊಂದಿರುವಾಗ, ತಾರತಮ್ಯ ಮತ್ತು ಓಲೈಕೆ ಉಳಿಯಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಈ '100% ಸೇವಾ ಅಭಿಯಾನ' ಸಾಮಾಜಿಕ ನ್ಯಾಯದ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದೆ. ಇದು ಸಾಮಾಜಿಕ ನ್ಯಾಯದ ನಿಜವಾದ ಭರವಸೆಯಾಗಿದೆ. ಇದು ನಿಜವಾದ ಜಾತ್ಯತೀತತೆ ಆಗಿದೆ.

ನಾವು ದೇಶಕ್ಕೆ ಅಭಿವೃದ್ಧಿಯ ಈ ಮಾದರಿಯನ್ನು ನೀಡುತ್ತಿದ್ದೇವೆ, ಇದರಲ್ಲಿ ಎಲ್ಲಾ ಪಾಲುದಾರರು ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ. ದೇಶ ನಮ್ಮೊಂದಿಗಿದೆ, ದೇಶ ಪದೇ ಪದೆ ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಿದೆ, ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಷಡ್ಯಂತ್ರಗಳಿಗೆ ನಾವು ಮಣಿಯುವುದಿಲ್ಲ. ಸಾರ್ವಜನಿಕರು ಇದನ್ನು ನೋಡುತ್ತಿದ್ದಾರೆ, ಪ್ರತಿ ಹಂತದಲ್ಲೂ ಅವರನ್ನು ಶಿಕ್ಷಿಸುತ್ತಿದ್ದಾರೆ.

ಗೌರವಾನ್ವಿತ ಸಭಾಪತಿಗಳೆ,

1857ರಿಂದ ನಮ್ಮ ದೇಶದ ಸ್ವಾತಂತ್ರ್ಯದವರೆಗಿನ ಸ್ವಾತಂತ್ರ್ಯ ಹೋರಾಟದ ಯಾವುದೇ ದಶಕವನ್ನು ಆರಿಸಿ ಮತ್ತು ಭಾರತದ ಯಾವುದೇ ಪ್ರದೇಶವನ್ನು ಆರಿಸಿ, ನನ್ನ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನನ್ನ ದೇಶದ ಆದಿವಾಸಿಗಳ ಕೊಡುಗೆ ಸುವರ್ಣ ಪುಟಗಳಿಂದ ತುಂಬಿದೆ. ನನ್ನ ಬುಡಕಟ್ಟು ಸಹೋದರರು ಸ್ವಾತಂತ್ರ್ಯದ ಹಿರಿಮೆಯನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ ಇಡೀ ದೇಶವು ಹೆಮ್ಮೆಪಡುತ್ತದೆ. ಆದರೆ ದಶಕಗಳಿಂದ ನನ್ನ ಬುಡಕಟ್ಟು ಸಹೋದರರು ಅಭಿವೃದ್ಧಿಯಿಂದ ವಂಚಿತರಾಗಿದ್ದರು, ಅವರ ನಂಬಿಕೆಯ ಸೇತುವೆಯನ್ನು ನಿರ್ಮಿಸಲಾಗಿಲ್ಲ. ಬದಲಿಗೆ ಆತಂಕಗಳಿಂದ ಕೂಡಿದ ವ್ಯವಸ್ಥೆಯನ್ನು ರೂಪಿಸಲಾಯಿತು. ಸರ್ಕಾರಗಳ ಬಗ್ಗೆ ಹಲವಾರು ಪ್ರಶ್ನೆಗಳು ಆ ಯುವಕರ ಮನಸ್ಸಿನಲ್ಲಿ ಮತ್ತೆ ಮತ್ತೆ ಉದ್ಭವಿಸಿದವು. ಆದರೆ ಅವರು ಸರಿಯಾದ ಉದ್ದೇಶದಿಂದ ಕೆಲಸ ಮಾಡಿದ್ದರೆ, ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಿದ್ದರೆ, ಆದಿವಾಸಿಗಳ ಕಲ್ಯಾಣಕ್ಕಾಗಿ ಅವರು ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದರೆ, ಇಂದು 21ನೇ ಶತಮಾನದ 3ನೇ ದಶಕದಲ್ಲಿ ನಾನು ಇಷ್ಟು ಕಷ್ಟಪಡಬೇಕಾಗಿರಲಿಲ್ಲ. ಆದರೆ ಅವರು ಮಾಡಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ರಚನೆಯಾದಾಗ, ಈ ದೇಶದಲ್ಲಿ ಮೊದಲ ಬಾರಿಗೆ, ಆದಿವಾಸಿಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಲಾಯಿತು; ಮೊದಲ ಬಾರಿಗೆ ಆದಿವಾಸಿಗಳ ಕಲ್ಯಾಣ ಮತ್ತು ಅವರ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಏರ್ಪಡಿಸಲಾಯಿತು.


ಗೌರವಾನ್ವಿತ ಸಭಾಪತಿಗಳೆ, 

ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ದೇಶದ 110 ಜಿಲ್ಲೆಗಳನ್ನು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಗುರುತಿಸಿದ್ದೇವೆ. ಭೌಗೋಳಿಕವಾಗಿ ಹಿಂದುಳಿದವರಿಗೆ ನ್ಯಾಯ ಒದಗಿಸುವುದು ಅಷ್ಟೇ ಅಗತ್ಯ. ಅದಕ್ಕಾಗಿಯೇ ನಾವು 110 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆ 110 ಜಿಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯ ಬಹುಪಾಲು ಜಿಲ್ಲೆಗಳು ಬುಡಕಟ್ಟು ಪ್ರದೇಶಗಳಾಗಿವೆ, ಅಲ್ಲಿ ನನ್ನ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ವಾಸಿಸುತ್ತಿದ್ದಾರೆ. 3 ಕೋಟಿಗೂ ಹೆಚ್ಚು ಬುಡಕಟ್ಟು ಸಹೋದರರು ಇದರ ನೇರ ಲಾಭ ಪಡೆದಿದ್ದಾರೆ, ಅವರ ಜೀವನದಲ್ಲಿ ಬದಲಾವಣೆಗಳಾಗಿದೆ. ಈ ಪ್ರದೇಶಗಳಲ್ಲಿ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಸುಧಾರಣೆ ಕಂಡುಬಂದಿದೆ. ಏಕೆಂದರೆ ನಾವು 110 ಜಿಲ್ಲೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದೇವೆ ಮತ್ತು ಅವುಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ.

ಇಲ್ಲಿ ನಮ್ಮ ಕೆಲವು ಗೌರವಾನ್ವಿತ ಸದಸ್ಯರು ಗಿರಿಜನ ಉಪಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಅಂತಹ ಮಿತ್ರರು ಸ್ವಲ್ಪ ಸಮಯವನ್ನು ಮೀಸಲಿಟ್ಟು ಬಜೆಟ್ ಅಧ್ಯಯನ ಮಾಡುವ ಮತ್ತು ಸ್ವಲ್ಪ ಹೆಚ್ಚು ವಿವರಿಸುವ ವಿದ್ಯಾವಂತ ವ್ಯಕ್ತಿಯ ಸಹಾಯ ಪಡೆದುಕೊಳ್ಳಲು ನಾನು ವಿನಂತಿಸುತ್ತೇನೆ. ನೀವು ನೋಡಿದರೆ, ಬಜೆಟ್‌ನಲ್ಲಿನ 'ಪರಿಶಿಷ್ಟ ಬುಡಕಟ್ಟು ಘಟಕ ನಿಧಿಗಳು' 2014ರ ಹಿಂದಿನ ಅವಧಿಗೆ ಹೋಲಿಸಿದರೆ 5 ಪಟ್ಟು ಹೆಚ್ಚಾಗಿದೆ ಎಂದು ನಿಮಗೆ ತಿಳಿಯುತ್ತದೆ.

ಗೌರವಾನ್ವಿತ ಸಭಾಪತಿಗಳೆ, 

2014ಕ್ಕಿಂತ ಮೊದಲು ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 20-25 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಿರುವುದು ತುಂಬಾ ಹಳೆಯ ಘಟನೆಯೇನಲ್ಲ. ಇಂದು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಆದರೆ ನಾವು ಈ ವರ್ಷ. ನಮ್ಮ ಬುಡಕಟ್ಟು ಸಹೋದರ ಸಹೋದರಿಯರ ಉಜ್ವಲ ಭವಿಷ್ಯಕ್ಕಾಗಿ 1 ಲಕ್ಷದ 20 ಸಾವಿರ ಕೋಟಿ ರೂ ಅನುದಾನ ಹಂಚಿಕೆ ಪ್ರಕಟಿಸಿದ್ದೇವೆ. ಆ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಳೆದ 9 ವರ್ಷಗಳಲ್ಲಿ ನಾವು 500 ಹೊಸ ಏಕಲವ್ಯ ಮಾದರಿ ಶಾಲೆಗಳನ್ನು ಮಂಜೂರು ಮಾಡಿದ್ದೇವೆ, ಇದು 4 ಪಟ್ಟು ಹೆಚ್ಚಳವಾಗಿದೆ. ಮೇಲಾಗಿ ಈ ಬಾರಿ ಶಾಲೆಗಳಲ್ಲಿ ಹೊಸದಾಗಿ 38 ಸಾವಿರ ಮಂದಿ, ಶಿಕ್ಷಕರು, ಸಿಬ್ಬಂದಿ ನೇಮಕಕ್ಕೆ ಈ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿದ್ದೇವೆ. ನಮ್ಮ ಸರ್ಕಾರ ಆದಿವಾಸಿಗಳ ಕಲ್ಯಾಣಕ್ಕೆ ಮೀಸಲಾಗಿದೆ. ಅರಣ್ಯ ಹಕ್ಕು ಕಾಯಿದೆ ವಿಷಯದ ಬಗ್ಗೆ ನಾನು ನಿಮ್ಮನ್ನು ಸ್ವಲ್ಪ ಕರೆದೊಯ್ಯಲು ಬಯಸುತ್ತೇನೆ.

ಗೌರವಾನ್ವಿತ ಸಭಾಪತಿಗಳೆ, 

ನಮ್ಮ ಆಡಳಿತದ ಮೊದಲು ಅಂದರೆ ದೇಶವು ಸ್ವತಂತ್ರವಾದಾಗಿನಿಂದ 2014ರ ವರೆಗೆ  ಬುಡಕಟ್ಟು ಕುಟುಂಬಗಳಿಗೆ 14 ಲಕ್ಷ ಭೂ ಗುತ್ತಿಗೆನೀಡಲಾಗಿದೆ. ಕಳೆದ 7-8 ವರ್ಷಗಳಲ್ಲಿ 60 ಲಕ್ಷ ಹೊಸ ಗುತ್ತಿಗೆ ನೀಡಿದ್ದೇವೆ, ಇದು ಅಭೂತಪೂರ್ವ ಕೆಲಸ. ನಮ್ಮ ಆಡಳಿತದ ಮೊದಲು 23 ಸಾವಿರ ಸಮುದಾಯ ಗುತ್ತಿಗೆ ನೀಡಿದ್ದರೆ, ನಾವು ಬಂದ ನಂತರ 80 ಸಾವಿರಕ್ಕೂ ಹೆಚ್ಚು ಸಮುದಾಯ ಪಟ್ಟಾ ಅಥವಾ ಗುತ್ತಿಗೆ ನೀಡಲಾಗಿದೆ. ಆದಿವಾಸಿಗಳ ಭಾವನೆಗಳಿಗೆ ‘ಆಳವಾದ ಅನುಕಂಪ’ ಎಂದು ಹೆಸರಿಟ್ಟು ಆಟವಾಡುವ ಬದಲು ಏನಾದರೂ ಫಲಕಾರಿಯಾದ ಕೆಲಸ ಮಾಡಿದಿದ್ದರೆ ನಾನು ಇಂದು ಇಷ್ಟು ಕಷ್ಟಪಡಬೇಕಾಗಿರಲಿಲ್ಲ, ಈ ಕೆಲಸವನ್ನು ಮೊದಲೇ ಸುಲಭವಾಗಿ ಮಾಡಬಹುದಿತ್ತು. ಆದರೆ ಇದು ಅವರ ಆದ್ಯತೆಯ ಅಡಿ ಬರಲಿಲ್ಲ.

ಗೌರವಾನ್ವಿತ ಸಭಾಪತಿಗಳೆ,

ಕಾಂಗ್ರೆಸ್ ಆಡಳಿತದ ಆರ್ಥಿಕ ನೀತಿಗಳು, ಸಾಮಾಜಿಕ ನೀತಿಗಳು ಮತ್ತು ರಾಜಕೀಯ ವೋಟ್ ಬ್ಯಾಂಕ್ ಆಧಾರದ ಮೇಲೆ ಮುಂದುವರೆಯಿತು. ಆ ಕಾರಣದಿಂದಾಗಿ, ಅವರು ಯಾವಾಗಲೂ ಸಮಾಜದ ಮೂಲಶಕ್ತಿ, ಸ್ವ-ಉದ್ಯೋಗದೊಂದಿಗೆ ದೇಶದ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವ ಸಾಮರ್ಥ್ಯ ನಿರ್ಲಕ್ಷಿಸಿದರು. ಅವರಿಗೆ ಅವು ತುಂಬಾ ಚಿಕ್ಕದಾಗಿ ಮತ್ತು ಚದುರಿದಂತೆ ತೋರುತ್ತಿದ್ದವು, ಸಣ್ಣ ಕೆಲಸಗಳಲ್ಲಿ ತೊಡಗಿಸಿಕೊಂಡವರಿಗೆ ಯಾವುದೇ ಬೆಲೆ ಇಲ್ಲ. ಸ್ವ-ಉದ್ಯೋಗದೊಂದಿಗೆ ಸಮಾಜಕ್ಕೆ ಹೊರೆಯಾಗದೆ ಸಮಾಜದಲ್ಲಿ ಮೌಲ್ಯವರ್ಧನೆ ಮಾಡುತ್ತಾರೆ, ಆದರೆ ಸಣ್ಣಪುಟ್ಟ ಕೆಲಸದಲ್ಲಿ ತೊಡಗಿರುವ ಈ ಕೋಟಿಗಟ್ಟಲೆ ಜನರು ಮರೆತು ಹೋಗಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಮತ್ತು ಫುಟ್‌ಪಾತ್‌ನಲ್ಲಿ ವ್ಯಾಪಾರದಲ್ಲಿ ತೊಡಗಿರುವ ಜನರ ಅನುಕೂಲಕ್ಕಾಗಿ ನಾವು ಕಾಳಜಿ ವಹಿಸಿದ್ದೇವೆ ಎಂದು ನನಗೆ ಹೆಮ್ಮೆ ಇದೆ, ಅವರ ಜೀವನವು ಮೊದಲು ಬಡ್ಡಿ ಪಾವತಿಯಲ್ಲೇ ನಾಶವಾಯಿತು. ಅವರು ಕಷ್ಟಪಟ್ಟು ದುಡಿದ ಹಣವನ್ನು ಲೇವಾದೇವಿದಾರರಿಗೆ ಬಡ್ಡಿಯೊಂದಿಗೆ ಸಾಲ ಹಿಂದಿರುಗಿಸಲು ಖರ್ಚು ಮಾಡಬೇಕಾಗಿತ್ತು. ಆದರೆ ನಾವು ಆ ಬಡವರನ್ನು ನೋಡಿಕೊಂಡೆವು; ನಾವು ಆ ಬೀದಿ ವ್ಯಾಪಾರಿಗಳನ್ನು ನೋಡಿಕೊಂಡಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ,

ಇವರಷ್ಟೇ ಅಲ್ಲ, ಸಮಾಜ ನಿರ್ಮಾಣದಲ್ಲಿ ಪಾತ್ರ ವಹಿಸುವ, ತಮ್ಮ ಕೈಸಾಲದಿಂದ ಏನನ್ನೋ ಸೃಷ್ಟಿಸುತ್ತಾ ಸಮಾಜದ ಅಗತ್ಯಗಳನ್ನು ಪ್ರಮುಖವಾಗಿ ಪೂರೈಸುವ ನಮ್ಮ ವಿಶ್ವಕರ್ಮ ಸಮುದಾಯ. ನಮ್ಮ ಬಂಜಾರ ಸಮುದಾಯದವರಿರಲಿ, ಅಲೆಮಾರಿ ಜನಾಂಗದವರಿರಲಿ ಅವರನ್ನೂ ನಾವು ನೋಡಿಕೊಂಡಿದ್ದೇವೆ. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಾಗಲಿ ಅಥವಾ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಾಗಲಿ, ನಾವು ಸಮಾಜದ ಈ ಜನರ ಬಲಕ್ಕಾಗಿ ಈ ಯೋಜನೆಗಳ ಮೂಲಕ ಕೆಲಸ ಮಾಡಿದ್ದೇವೆ, ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲಸ ಮಾಡಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ,

ನೀವೇ ಒಬ್ಬ ರೈತನ ಮಗ. ಈ ದೇಶದ ರೈತರು ಏನನ್ನು ಅನುಭವಿಸಿದ್ದಾರೆ? ಕೆಲವು ಮೇಲ್ವರ್ಗದವರನ್ನು ನೋಡಿಕೊಂಡು ಹೀಗೆಯೇ ತಮ್ಮ ರಾಜಕೀಯ ನಡೆಸುತ್ತಿದ್ದರು, ಈ ಪ್ರಕ್ರಿಯೆ ಮುಂದುವರೆಯಿತು. ಈ ದೇಶದ ಕೃಷಿ ಕ್ಷೇತ್ರದ ನಿಜವಾದ ಶಕ್ತಿ ಸಣ್ಣ ರೈತರಲ್ಲಿದೆ. ದೇಶದ ಶೇ.80-85ರಷ್ಟು ಜನರು ಕಷ್ಟಪಟ್ಟು 1 ಎಕರೆ ಅಥವಾ 2 ಎಕರೆ ಭೂಮಿಯಲ್ಲಿ ಇಳುವರಿ ಉತ್ಪಾದಿಸುವವರು. ಈ ಸಣ್ಣ ರೈತರನ್ನು ನಿರ್ಲಕ್ಷಿಸಲಾಯಿತು; ಯಾರೂ ಅವರ ಧ್ವನಿಯನ್ನು ಕೇಳಲು ಹೋಗುತ್ತಿರಲಿಲ್ಲ. ನಮ್ಮ ಸರ್ಕಾರ ಸಣ್ಣ ರೈತರ ಮೇಲೆ ಆದ್ಯತೆಯ ಗಮನ ಕೇಂದ್ರೀಕರಿಸಿದೆ. ನಾವು ಸಣ್ಣ ರೈತರನ್ನು ಔಪಚಾರಿಕ ಬ್ಯಾಂಕಿಂಗ್‌ನೊಂದಿಗೆ ಜೋಡಿಸಿದ್ದೇವೆ. ಇಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಹಣವನ್ನು ನೇರವಾಗಿ ಸಣ್ಣ ರೈತರ ಖಾತೆಗಳಿಗೆ ವರ್ಷಕ್ಕೆ 3 ಬಾರಿ ಜಮಾ ಮಾಡಲಾಗುತ್ತಿದೆ. ಇಷ್ಟೇ ಅಲ್ಲ, ನಾವು ಹೈನುಗಾರರನ್ನು ಬ್ಯಾಂಕ್‌ಗಳೊಂದಿಗೆ ಜೋಡಿಸಿದ್ದೇವೆ; ನಾವು ಮೀನುಗಾರರನ್ನು ಬ್ಯಾಂಕುಗಳೊಂದಿಗೆ ಜೋಡಿಸಿದ್ದೇವೆ ಮತ್ತು ಅವರಿಗೆ ಬಡ್ಡಿ ರಿಯಾಯಿತಿ ನೀಡುವ ಮೂಲಕ ಅವರ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿದ್ದೇವೆ, ಇದರಿಂದ ಅವರು ತಮ್ಮ ವ್ಯಾಪಾರ ಅಭಿವೃದ್ಧಿಪಡಿಸಬಹುದು ಮತ್ತು ಬೆಳೆ ಪದ್ಧತಿಯನ್ನು ಬದಲಾಯಿಸಬಹುದು. ಆ ನಿಟ್ಟಿನಲ್ಲಿ ಸರಕಾರದಿಂದ ಸೂಕ್ತ ಬೆಲೆ ಸಿಕ್ಕ ನಂತರ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವಂತೆ ಕೆಲಸ ಮಾಡಿದೆವು.

ಗೌರವಾನ್ವಿತ ಸಭಾಪತಿಗಳೆ,

ನಮ್ಮ ನಾಡಿನಲ್ಲಿ ಮಳೆಯ ನೀರನ್ನೇ ಬಳಸಬೇಕಾದ ಅನೇಕ ರೈತರು ಇದ್ದಾರೆ ಎಂಬುದು ನಮಗೆ ತಿಳಿದಿದೆ. ಹಿಂದಿನ ಸರ್ಕಾರಗಳು ನೀರಾವರಿಗೆ ಯಾವುದೇ ಅನುಕೂಲ ಮಾಡಿರಲಿಲ್ಲ. ಅಷ್ಟೇನೂ ನೀರಿನ ಸೌಲಭ್ಯ ಇಲ್ಲದ ಕಾರಣ ಈ ಸಣ್ಣ ರೈತರು ಮಳೆಯ ನೀರಿನಿಂದ ರಾಗಿ ಬೆಳೆಯುತ್ತಿದ್ದುದನ್ನು ನಾವು ನೋಡಿದ್ದೇವೆ. ರಾಗಿ ಸೇರಿದಂತೆ ಸಿರಿಧಾನ್ಯ ಬೆಳೆಯುವ ರೈತರಿಗೆ ನಾವು ವಿಶೇಷ ಸ್ಥಾನ ನೀಡಿದ್ದೇವೆ. ಸಿರಿಧಾನ್ಯ ವರ್ಷ ಆಚರಿಸಲು ನಾವು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದೇವೆ. ವಿಶ್ವದಲ್ಲಿ ಭಾರತದ ಸಿರಿಧಾನ್ಯಗಳ ಬ್ರ್ಯಾಂಡಿಂಗ್ ಇರಬೇಕು; ಮಾರುಕಟ್ಟೆ ಸೌಲಭ್ಯ ಒದಗಿಸಬೇಕು ಮತ್ತು ಈಗ ಸಿರಿಧಾನ್ಯಕ್ಕೆ 'ಶ್ರೀ ಅನ್ನ' ಎಂಬ ವೈಭವದ ಗುರುತು ನೀಡಬೇಕು. ಶ್ರೀ ಅನ್ನವನ್ನು ‘ಶ್ರೀಫಲ’ದಂತೆಯೇ ಗುರುತಿಸಬೇಕು. ಇದನ್ನು ಉತ್ಪಾದಿಸುವ ಸಣ್ಣ ರೈತರಿಗೆ ಅವರ ಬೆಳೆಗಳಿಗೆ ಸಮಂಜಸವಾದ ಬೆಲೆ ಮತ್ತು ಜಾಗತಿಕ ಮಾರುಕಟ್ಟೆ ಸಿಗಬೇಕು. ದೇಶದಲ್ಲಿ ಬೆಳೆಯ ಮಾದರಿ ಬದಲಾಗಬೇಕು. ಇದಲ್ಲದೆ, ಸಿರಿಧಾನ್ಯ ಉತ್ಕೃಷ್ಟ ಆಹಾರವಾಗಿದೆ, ಪೌಷ್ಟಿಕಾಂಶದ ಉತ್ತಮ ಮೂಲವಾಗಿದೆ. ನಮ್ಮ ದೇಶದ ಹೊಸ ಪೀಳಿಗೆಗೆ ಪೌಷ್ಟಿಕಾಂಶ ಸಮಸ್ಯೆಯನ್ನು ಪರಿಹರಿಸುವಲ್ಲಿ ಇವುಗಳು ಉಪಯುಕ್ತವಾಗುತ್ತಿವೆ, ಇದು ನಮ್ಮ ಸಣ್ಣ ರೈತರನ್ನು ಬಲಪಡಿಸುತ್ತದೆ. ನಾವು ಗೊಬ್ಬರದ ವಿಷಯದಲ್ಲಿ ಹಲವಾರು ಹೊಸ ಆಯ್ಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ, ಅದರಿಂದ ಪ್ರಯೋಜನಗಳನ್ನು ಸಹ ಪಡೆದಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ,

ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತಾಯಂದಿರು ಮತ್ತು ಸಹೋದರಿಯರ ಭಾಗವಹಿಸುವಿಕೆ ಹೆಚ್ಚಾದಾಗ, ಫಲಿತಾಂಶಗಳು ಉತ್ತಮವಾಗಿರುತ್ತವೆ, ತ್ವರಿತವಾಗಿರುತ್ತವೆ ಮತ್ತು ನಿಗದಿಪಡಿಸಿದ ಗುರಿಗಳನ್ನು ಸಾಧಿಸಬಹುದು ಎಂದು ನಾನು ಬಹಳ ದೃಢವಾಗಿ ನಂಬುತ್ತೇನೆ. ನಮ್ಮ ಸರ್ಕಾರವು ತಾಯಂದಿರು ಮತ್ತು ಸಹೋದರಿಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ. ಅವರು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ನಮ್ಮ ಸರ್ಕಾರ ಮಹಿಳಾ ನಾಯಕತ್ವದ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಸದನದಲ್ಲಿ ನಮ್ಮ ಗೌರವಾನ್ವಿತ ಸದಸ್ಯರೊಬ್ಬರು ಮಹಿಳೆಯರಿಗೆ ಶೌಚಾಲಯ ಒದಗಿಸುವುದರಿಂದ ಮಹಿಳೆಯರ ಅಭಿವೃದ್ಧಿ ಏನಾದರೂ ಆಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಬಹುಶಃ ಅವನ ಗಮನ ಶೌಚಾಲಯದ ಮೇಲೆ ಮಾತ್ರ, ಮತ್ತು ಅದು ಅವರ ಸಮಸ್ಯೆಯಾಗಿರಬಹುದು. ಆದರೆ ನಾನು ಸಹ ರಾಜ್ಯದಿಂದಲೇ ಬಂದಿದ್ದೇನೆ, ನಾನು ಹಳ್ಳಿಯಲ್ಲಿ ವಾಸಿಸುತ್ತಿದ್ದೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಲು ಬಯಸುತ್ತೇನೆ. 11 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ನನ್ನ ತಾಯಿ ಮತ್ತು ಸಹೋದರಿಯರಿಗೆ 'ಇಜ್ಜತ್-ಘರ್' ನೀಡಿ ಗೌರವಿಸಿರುವುದಕ್ಕೆ ನನಗೆ ಹೆಮ್ಮೆ ಇದೆ. ನಮ್ಮ ತಾಯಂದಿರು, ಸಹೋದರಿಯರು ಮತ್ತು ನಮ್ಮ ಹೆಣ್ಣುಮಕ್ಕಳ ಜೀವನ ಚಕ್ರ ನೋಡೋಣ, ನಮ್ಮ ಸರ್ಕಾರವು ತಾಯಂದಿರು ಮತ್ತು ಸಹೋದರಿಯರ ಸಬಲೀಕರಣದ ಬಗ್ಗೆ ಎಷ್ಟು ಸಂವೇದನಾಶೀಲವಾಗಿದೆ ಎಂಬುದನ್ನು ನಾನು ಗಮನ ಸೆಳೆಯಲು ಬಯಸುತ್ತೇನೆ. ಯಾರ ಆಲೋಚನೆಗಳು ಶೌಚಾಲಯಗಳಿಗೆ ಸೀಮಿತವಾಗಿವೆಯೋ ಅವರು ಬಹಳ ಸ್ಪಷ್ಟವಾಗಿ ಕೇಳಬೇಕು, ಇದರಿಂದ ಅವರಿಗೆ ನಂತರ ಅನುಕೂಲವಾಗುತ್ತದೆ. ಗರ್ಭಾವಸ್ಥೆಯಲ್ಲಿ ಮಗುವಿಗೆ ಪೌಷ್ಠಿಕ ಆಹಾರ ಸಿಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಮಾತೃ ವಂದನಾ ಯೋಜನೆ ಪ್ರಾರಂಭಿಸಿದ್ದೇವೆ. ಇದ ಧನಸಹಾಯವು ಗರ್ಭಾವಸ್ಥೆಯಲ್ಲಿದ್ದಾಗ ಮಹಿಳೆಯ ಬ್ಯಾಂಕ್ ಖಾತೆಗೆ ನೇರವಾಗಿ ಹೋಗುತ್ತದೆ, ಇದರಿಂದ ಪೌಷ್ಠಿಕಾಂಶವು ಅವರ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ನಮ್ಮ ದೇಶದಲ್ಲಿ ತಾಯಂದಿರ ಮರಣ ಪ್ರಮಾಣ ಮತ್ತು ಶಿಶು ಮರಣ ದರದ ಈ ಗಂಭೀರ ಸಮಸ್ಯೆಯನ್ನು ತೊಡೆದುಹಾಕಲು ಒಂದು ಮಾರ್ಗವೆಂದರೆ ಸಾಂಸ್ಥಿಕ ವಿತರಣೆ. ಬಡ ತಾಯಂದಿರ ಸಾಂಸ್ಥಿಕ ಹೆರಿಗೆಗಾಗಿ ನಾವು ಹಣ ಖರ್ಚು ಮಾಡಲು ನಿರ್ಧರಿಸಿದ್ದೇವೆ. ಆದ್ದರಿಂದ ನಾವು ಬೃಹತ್ ಅಭಿಯಾನ ಪ್ರಾರಂಭಿಸಿದ್ದೇವೆ, ಅದರ ಫಲಿತಾಂಶಗಳು ಸಹ ಗೋಚರಿಸುತ್ತಿವೆ. ಕೆಲವು ಅನಾರೋಗ್ಯದ ಮನಸ್ಥಿತಿಯಿಂದಾಗಿ, ತಾಯಿಯ ಹೊಟ್ಟೆಯಲ್ಲಿಯೇ ಹೆಣ್ಣು ಮಕ್ಕಳನ್ನು ಕೊಲ್ಲುವ ಪ್ರವೃತ್ತಿ ಹೆಚ್ಚಾಯಿತು ಎಂದು ನಮಗೆ ತಿಳಿದಿದೆ. ಇದು ಸಮಾಜಕ್ಕೆ ಕಳಂಕವಾಗಿತ್ತು. ನಾವು ಬೇಟಿ ಬಚಾವೋ ಅಭಿಯಾನ ಪ್ರಾರಂಭಿಸಿದ್ದೇವೆ. ಇಂದು ಜನಿಸುವ ಗಂಡು ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ನನಗೆ ಖುಷಿ ತಂದಿದೆ. ಇದು ನಮಗೆ ಅಪಾರವಾದ ತೃಪ್ತಿಯ ವಿಷಯ. ಹೆಣ್ಣು ಮಕ್ಕಳನ್ನು ರಕ್ಷಿಸುವ ಕೆಲಸ ಮಾಡಿದ್ದೇವೆ. ಮೊದಲು ಮಗಳು ಬೆಳೆದು ಶಾಲೆಗೆ ಹೋಗುತ್ತಿದ್ದಾಗ ಶೌಚಾಲಯ ಕೊರತೆಯಿಂದ 5, 6ನೇ ತರಗತಿಗೆ ಶಾಲೆ ಬಿಡುತ್ತಿದ್ದಳು. ನಾವು ಆ ಸಮಸ್ಯೆಯನ್ನು ಪರಿಹರಿಸಿದ್ದೇವೆ, ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇದರಿಂದ ಹುಡುಗಿಯರು ಶಾಲೆಯಿಂದ ಹೊರಗುಳಿಯಬೇಕಾಗಿಲ್ಲ. ನಾವು ಈ ಅಂಶದ ಬಗ್ಗೆ ಯೋಚಿಸಿದ್ದೇವೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಂದುವರಿಕೆ ಖಚಿತಪಡಿಸಲು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಚ್ಚಿನ ಆಸಕ್ತಿ ನೀಡುವ ಮೂಲಕ ಹೆಣ್ಣುಮಕ್ಕಳ ಸುರಕ್ಷಿತ ಶಿಕ್ಷಣ ವ್ಯವಸ್ಥೆಗೊಳಿಸಿದ್ದೇವೆ. ಇದರಿಂದ ಕುಟುಂಬವು ಅವರನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುತ್ತದೆ. ಮಗಳು ಬೆಳೆದು ಉದ್ಯೋಗ ಮಾರುಕಟ್ಟೆಗೆ ಸಿದ್ಧವಾದಾಗ, ಮುದ್ರಾ ಯೋಜನೆಯಡಿ ಖಾತರಿಯಿಲ್ಲದೆ ಸಾಲದೊಂದಿಗೆ ಸ್ವತಂತ್ರವಾಗಿ ಕೆಲಸ ಮಾಡಬಹುದು. ಮುದ್ರಾ ಯೋಜನೆಯ 70 ಪ್ರತಿಶತದಷ್ಟು ಫಲಾನುಭವಿಗಳು ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳಾಗಿದ್ದಾರೆ ಎಂಬುದು ನನಗೆ ಖುಷಿ ತಂದಿದೆ, ನಾವು ಈ ಕೆಲಸವನ್ನು ಮಾಡಿದ್ದೇವೆ.

ತಾಯಿಯಾದ ನಂತರವೂ ಕೆಲಸದಲ್ಲಿ ಮುಂದುವರಿಯಲು, ನಾವು ಹೆರಿಗೆ ರಜೆ ಹೆಚ್ಚಿಸಿದ್ದೇವೆ, ಇದು ಅಭಿವೃದ್ಧಿ ಹೊಂದಿದ ದೇಶಕ್ಕಿಂತ ನಮ್ಮಲ್ಲಿ ಇದು ಹೆಚ್ಚು, ನಾವು ಈ ಕೆಲಸವನ್ನು ಸಹ ಮಾಡಿದ್ದೇವೆ. ಹೆಣ್ಣು ಮಕ್ಕಳಿಗಾಗಿ ಸೈನಿಕ ಶಾಲೆಗಳನ್ನು ತೆರೆಯಲಾಗಿದೆ.

ಗೌರವಾನ್ವಿತ ಸಭಾಪತಿಗಳೆ,

ನೀವೇ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿದ್ದಿರಿ. ಈ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶವಿರಲಿಲ್ಲ. ಆದರೆ ಇಂದು ನಮ್ಮ ಹೆಣ್ಣು ಮಕ್ಕಳು ಸೈನಿಕ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ. ಇದಲ್ಲದೆ, ನಮ್ಮ ಹೆಣ್ಣು ಮಕ್ಕಳು ದುರ್ಬಲರಲ್ಲ; ಅವರು ಸೈನ್ಯಕ್ಕೆ ಸೇರಲು ಬಯಸುತ್ತಾರೆ; ಅವರು ಅಧಿಕಾರಿಗಳಾಗಲು ಬಯಸುತ್ತಾರೆ. ನಮ್ಮ ಹೆಣ್ಣು ಮಕ್ಕಳಿಗೂ ಸೇನೆಯ ಬಾಗಿಲು ತೆರೆಯಲಾಗಿದೆ. ಇಂದು ನನ್ನ ದೇಶದ ಮಗಳು ಭಾರತ ಮಾತೆಯನ್ನು ರಕ್ಷಿಸಲು ಸಿಯಾಚಿನ್‌ನಲ್ಲಿ ನಿಯೋಜಿಸಲ್ಪಟ್ಟಿದ್ದಾಳೆ ಎಂಬುದರಿಂದ ನಾನು ಹೆಮ್ಮೆಪಡುತ್ತೇನೆ.

ನಮ್ಮ ಹೆಣ್ಣು ಮಕ್ಕಳಿಗೆ ಹಳ್ಳಿಗಳಲ್ಲಿ ಗಳಿಕೆಯ ಅವಕಾಶಗಳು ಸಿಗುವಂತೆ ಮಾಡಲು ಮಹಿಳಾ ಸ್ವಸಹಾಯ ಸಂಘಗಳನ್ನು ಮೌಲ್ಯವರ್ಧನೆ ಮಾಡಿ ಅದಕ್ಕೆ ಹೊಸ ಶಕ್ತಿ ನೀಡಿದ್ದೇವೆ. ಆಕೆಯ ಪ್ರಗತಿಗಾಗಿ ನಾವು ಬ್ಯಾಂಕ್‌ಗಳಿಂದ ಪಡೆಯುವ ಸಾಲ ಮೊತ್ತವನ್ನು ಸಾಕಷ್ಟು ಹೆಚ್ಚಿಸಿದ್ದೇವೆ. ಸೌದೆಯ ಹೊಗೆಯಿಂದ ಸಹೋದರಿಯರಿಗೆ ಜೀವನದಲ್ಲಿ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಉಜ್ವಲಾ ಯೋಜನೆ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸಿದ್ದೇವೆ. ನಲ್ಲಿ ನೀರಿನ ಪೂರೈಕೆಯೊಂದಿಗೆ ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಕುಡಿಯುವ ನೀರಿಗಾಗಿ ಕಷ್ಟಪಡಬೇಕಾಗಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. ಅವರು ನೀರಿಗಾಗಿ 2-4 ಕಿಲೋ ಮೀಟರ್ ನಡೆಯಬೇಕಾಗಿಲ್ಲ. ಅವರು ಕತ್ತಲಲ್ಲಿ ಬದುಕಬಾರದು ಎಂಬ ಉದ್ದೇಶದಿಂದ ಇಂತಹ ಬಡ ಕುಟುಂಬಗಳಿಗೆ ಸೌಭಾಗ್ಯ ಯೋಜನೆ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಮಗಳು, ತಾಯಿ ಅಥವಾ ಸಹೋದರಿಯ ಕಾಯಿಲೆ ಎಷ್ಟೇ ಗಂಭೀರವಾಗಿದ್ದರೂ, ಅವಳು ಎಂದಿಗೂ ಬಹಿರಂಗಪಡಿಸುವುದಿಲ್ಲ. ಮಕ್ಕಳು ಸಾಲದ ಸುಳಿಯಲ್ಲಿ ಸಿಲುಕಿದರೆ ಸಂಸಾರಕ್ಕೆ ಹೊರೆಯಾಗುತ್ತದೆ ಎಂಬ ಆತಂಕದಿಂದ ಅವಳು ಬಳಲಿ ಅನಾರೋಗ್ಯಕ್ಕೆ ತುತ್ತಾದರೂ, ಅದನ್ನು ತನ್ನ ಮಕ್ಕಳಿಗೆ ಹೇಳುವುದಿಲ್ಲ. ಆ ತಾಯಂದಿರು ಮತ್ತು ಸಹೋದರಿಯರಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ಒದಗಿಸುವ ಮೂಲಕ, ಆಸ್ಪತ್ರೆಗಳಲ್ಲಿ ಚಿಕಿತ್ಸೆಯೊಂದಿಗೆ ಯಾವುದೇ ಗಂಭೀರ ಕಾಯಿಲೆಗಳನ್ನು ತೊಡೆದುಹಾಕಲು ನಾವು ಪ್ರಮುಖ ಪರಿಹಾರಗಳನ್ನು ಒದಗಿಸಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ, 

ಮಗಳಿಗೆ ಆಸ್ತಿಯ ಮೇಲೆ ಹಕ್ಕು ಇರಬೇಕು ಎಂಬುದನ್ನು ನಂಬಿದ್ದೇವೆ. ಹಾಗಾಗಿ ಸರ್ಕಾರ ನೀಡಿದ ಮನೆಗಳ ಮೇಲೆ ಮಗಳಿಗೆ ಹಕ್ಕನ್ನು ನಿಗದಿಪಡಿಸಿ, ಆಸ್ತಿಯು ಅವರ ಹೆಸರಿನಲ್ಲಿದೆ ಎಂದು ಖಚಿತಪಡಿಸಿದೆವು. ಉಳಿತಾಯವು ನಮ್ಮ ತಾಯಂದಿರು ಮತ್ತು ಸಹೋದರಿಯರ ಸ್ವಭಾವವಾಗಿದೆ. ಕಷ್ಟಗಳು ಎದುರಾದರೂ ಉಳಿಸುವುದು ತಾಯಂದಿರು ಮತ್ತು ಸಹೋದರಿಯರ ಸ್ವಭಾವ. ಅವರು ಉಳಿಸಿದ ಹಣದಿಂದ ಬದುಕುತ್ತಾರೆ, ಮನೆಯಲ್ಲಿ ತಮ್ಮ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡುತ್ತಾರೆ. ಅವರನ್ನು ಆ ತೊಂದರೆಯಿಂದ ಪಾರು ಮಾಡಲು ನಾವು ಅವರಿಗೆ ಜನ್ ಧನ್ ಖಾತೆಗಳನ್ನು ನೀಡಿದ್ದೇವೆ, ಅವರ ಖಾತೆಗಳಿಗೆ  ಬ್ಯಾಂಕ್‌ಗಳಲ್ಲಿ ಹಣ ಜಮಾ ಮಾಡಿದ್ದೇವೆ.

ಮತ್ತು ಗೌರವಾನ್ವಿತ ಸಭಾಪತಿಗಳೆ,
ಮಹಿಳಾ ರಾಷ್ಟ್ರಪತಿ ಅವರಿಂದಲೇ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮಹಿಳಾ ಹಣಕಾಸು ಸಚಿವರ ಭಾಷಣದೊಂದಿಗೆ ಬಜೆಟ್ ಅಧಿವೇಶನ ಔಪಚಾರಿಕವಾಗಿ ಆರಂಭವಾಗಿರುವುದು ಈ ಬಾರಿಯ ಬಜೆಟ್ ಅಧಿವೇಶನಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇಂದಿನಂತೆ ದೇಶದಲ್ಲಿ ಇಂತಹ ಕಾಕತಾಳೀಯ ಹಿಂದೆಂದೂ ಸಂಭವಿಸಿಲ್ಲ. ಭವಿಷ್ಯದಲ್ಲೂ ಅಂತಹ ಮಂಗಳಕರ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ.

ಗೌರವಾನ್ವಿತ ಸಭಾಪತಿಗಳೆ,
ದೇಶವು ಆಧುನೀಕರಣಗೊಳ್ಳಬೇಕು ಮತ್ತು ಹೊಸ ನಿರ್ಣಯಗಳನ್ನು ಪೂರೈಸಬೇಕು, ಆಗ ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಶಕ್ತಿಯನ್ನು ನಿರಾಕರಿಸಲಾಗುವುದಿಲ್ಲ. ನಮ್ಮ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ದೇಶವನ್ನು ಮುಂದೆ ಕೊಂಡೊಯ್ಯಲು ನಾವು ಪ್ರತಿಯೊಂದು ದಿಕ್ಕಿನಲ್ಲೂ ಕೆಲಸ ಮಾಡುತ್ತಿದ್ದೇವೆ; ನಾವು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದ್ದೇವೆ, ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದ್ದರಿಂದ ಬಾಲ್ಯದಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸಲು, ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಮೂಲಕ, ನಾವು ಶಾಲಾ ಹಂತದಲ್ಲಿ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಲು ಅವಕಾಶಗಳನ್ನು ನೀಡಿದ್ದೇವೆ. ಮಗುವು ಸ್ವಲ್ಪ ಮುಂದೆ ಹೋಗಿ ಇನ್ನೂ ಹೆಚ್ಚಿನದನ್ನು ಮಾಡಲು ಪ್ರಾರಂಭಿಸಲಿ ಎಂದು ನಾವು ಅಟಲ್ ಇನ್ ಕ್ಯುಬೇಷನ್ ಸೆಂಟರ್ ಗಳನ್ನು ಸ್ಥಾಪಿಸಿದ್ದೇವೆ, ಇದು ಪರಿಕಲ್ಪನೆ ಮತ್ತು ಆವಿಷ್ಕಾರಗಳ ಪರಿವರ್ತನೆಯಾಗಲು ಉಪಯುಕ್ತವಾಗಿದೆ. ಇದಕ್ಕಾಗಿ ನಾವು ನೀತಿಗಳನ್ನು ಬದಲಾಯಿಸಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದ ಕನಸನ್ನು ನಾವು ಈಡೇರಿಸಿದ್ದೇವೆ. ದೇಶದ ನಮ್ಮ  ಯುವಕರಿಗೆ ಖಾಸಗಿ ಉಪಗ್ರಹಗಳನ್ನು ಉಡಾಯಿಸುವ ಶಕ್ತಿ ಇದೆ ಎಂದು ನನಗೆ ಖುಷಿಯಾಗಿದೆ, ಇದು ವಿಜ್ಞಾನ ಮತ್ತು ತಂತ್ರಜ್ಞಾನ ಯುಗ. ಇಂದು ಮೂಲತಃ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿರುವ ಸ್ಟಾರ್ಟಪ್‌ಗಳ ಜಗತ್ತಿನಲ್ಲಿ, ಯುನಿಕಾರ್ನ್‌ಗಳ ಸಂಖ್ಯೆಯ ವಿಷಯದಲ್ಲಿ ನಾವು ವಿಶ್ವದಲ್ಲಿ 3ನೇ ಸ್ಥಾನ ತಲುಪಿದ್ದೇವೆ.

ಗೌರವಾನ್ವಿತ ಸಭಾಪತಿಗಳೆ,

ಇಂದು ದೇಶದ ಯುವಕರು ಗರಿಷ್ಠ ಸಂಖ್ಯೆಯ ಪೇಟೆಂಟ್‌ಗಳನ್ನು ನೋಂದಾಯಿಸುವಲ್ಲಿ ಮುಂದೆ ಬರುತ್ತಿದ್ದಾರೆ ಎಂಬ ಅಂಶದ ಬಗ್ಗೆ ಇಂದು ಇಡೀ ದೇಶವು ಹೆಮ್ಮೆಪಡುತ್ತಿದೆ.

ಗೌರವಾನ್ವಿತ ಸಭಾಪತಿ ಅವರೆ,

ಆಧಾರ್‌ ಶಕ್ತಿ ಏನೆಂಬುದನ್ನು ನಮ್ಮ ಸರ್ಕಾರ ತೋರಿಸಿದೆ. ಆಧಾರ್‌ಗೆ ಸಂಬಂಧಿಸಿದ ತಜ್ಞರು 2014ರ ನಂತರ ಆಧಾರ್ ಮತ್ತು ತಂತ್ರಜ್ಞಾನದ ಮಹತ್ವವನ್ನು ಅರ್ಥ ಮಾಡಿಕೊಂಡರು, ಆ ಕಠಿಣ ಪರಿಶ್ರಮ ಇದೀಗ ಫಲ ನೀಡುತ್ತಿದೆ ಎಂದು ಹೇಳಿದ್ದಾರೆ. ಕೋವಿಡ್ ಸಮಯದಲ್ಲಿ ಕೊವಿನ್ ವೇದಿಕೆ ಅಡಿ 200 ಕೋಟಿ ಲಸಿಕೆಗಳನ್ನು ಪಡೆದಿರುವುದನ್ನು ನಾವು ನೋಡಿದ್ದೇವೆ. ಕೊವಿನ್ ಪ್ರಮಾಣಪತ್ರವು ನಿಮ್ಮ ಮೊಬೈಲ್‌ನಲ್ಲಿ ಕೇವಲ ಒಂದೇ  ಸೆಕೆಂಡಿನಲ್ಲಿ ಲಭ್ಯವಾಗುತ್ತಿದೆ. ಆದರೆ ಭಾರತವು ಕೋವಿಡ್ -19 ವಿರುದ್ಧ ತನ್ನದೇ ಆದ ಲಸಿಕೆ ತಯಾರಿಸಿದಾಗ ಇಡೀ ಜಗತ್ತು ಆಶ್ಚರ್ಯಚಕಿತವಾಯಿತು. ವಿಶ್ವಾದ್ಯಂತ ಜನರು ತಮ್ಮ ಲಸಿಕೆಗಳನ್ನು ಇಲ್ಲಿ ಮಾರಾಟ ಮಾಡಲು ವಿವಿಧ ರೀತಿಯಲ್ಲಿ ಒತ್ತಡ ಹೇರುತ್ತಿದ್ದರು, ಲೇಖನಗಳನ್ನು ಬರೆಯಲಾಗುತ್ತಿತ್ತು, ಸೆಮಿನಾರ್‌ಗಳು ನಡೆಯುತ್ತಿದ್ದವು ಮತ್ತು ಟಿವಿ ಸಂದರ್ಶನಗಳು ನಡೆಯುತ್ತಿದ್ದವು. ಇದಲ್ಲದೆ, ನನ್ನ ದೇಶದ ವಿಜ್ಞಾನಿಗಳನ್ನು ದೂಷಿಸಲು, ಅವರನ್ನು ಅವಮಾನಿಸಲು ಹಲವಾರು ಬಲವಾದ ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಇಂದು ವಿಶ್ವದಲ್ಲಿ ಅಂಗೀಕರಿಸಲ್ಪಟ್ಟ ಇಂತಹ ಲಸಿಕೆಯಿಂದ ನನ್ನ ದೇಶದ ವಿಜ್ಞಾನಿಗಳು ನನ್ನ ದೇಶವಾಸಿಗಳ ಅಗತ್ಯಗಳನ್ನು ಮಾತ್ರವಲ್ಲದೆ, ಇತರ ದೇಶಗಳ ಜನರ ಅಗತ್ಯಗಳನ್ನು ಪೂರೈಸಿದ್ದಾರೆ. 

ಗೌರವಾನ್ವಿತ ಸಭಾಪತಿಗಳೆ,

ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ವಿರುದ್ಧವಾಗಿದ್ದಾರೆ, ನಮ್ಮ ವಿಜ್ಞಾನಿಗಳನ್ನು ದೂಷಿಸುವ ಯಾವುದೇ ಅವಕಾಶವನ್ನು ಅವರು ಬಿಡಲಿಲ್ಲ. ಆದರೂ ನಮ್ಮ ದೇಶವು ಫಾರ್ಮಸಿ ಜಗತ್ತಿನಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಜಾಗತಿಕ ಫಾರ್ಮಸಿ ಕೇಂದ್ರವಾಗಿ ಬದಲಾಗುತ್ತಿದೆ. ನಮ್ಮ ಯುವಕರು ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಈ ಜನರು ಅದನ್ನು ದೂಷಿಸಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅವರಿಗೆ ದೇಶದ ಬಗ್ಗೆ ಕಾಳಜಿಯಿಲ್ಲ, ಆದರೆ ಅವರ ರಾಜಕೀಯ ಏರಿಳಿತಗಳು ಈ ದೇಶದ ದುರದೃಷ್ಟಕರವಾಗಿದೆ.

ಗೌರವಾನ್ವಿತ ಸಭಾಪತಿಗಳೆ,

ಹಿಂದೆ ಇದೇ ದಿನ ನಾನು ಬಾಲಿಯಲ್ಲಿದ್ದೆ. ಜಿ-20 ರಾಷ್ಟ್ರಗಳು ಡಿಜಿಟಲ್ ಇಂಡಿಯಾ ಅರ್ಥ ಮಾಡಿಕೊಳ್ಳಲು ಹೋರಾಡುತ್ತಿದ್ದವು. ಇದರ ಯಶಸ್ಸು ಇಡೀ ವಿಶ್ವದ ಮೇಲೆ ಪ್ರಭಾವ ಬೀರಿದೆ. ಇಂದು ಭಾರತವು ಡಿಜಿಟಲ್ ವಹಿವಾಟಿನ ವಿಷಯದಲ್ಲಿ ವಿಶ್ವದ ಮುಂಚೂಣಿಯಲ್ಲಿದೆ.

ಗೌರವಾನ್ವಿತ ಸಭಾವತಿಗಳೆ,

ಇಂದು 100 ಕೋಟಿಗೂ ಹೆಚ್ಚು ಮೊಬೈಲ್ ಫೋನ್‌ಗಳು ನನ್ನ ದೇಶವಾಸಿಗಳ ಕೈಯಲ್ಲಿರುವುದಕ್ಕೆ ನಮಗೆ ಸಂತೋಷವಾಗಿದೆ. ನಾವು ಮೊಬೈಲ್ ಆಮದು ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಇಂದು ನಮ್ಮ ದೇಶವು ಮೊಬೈಲ್‌ಗಳನ್ನು ರಫ್ತು ಮಾಡುತ್ತಿದೆ ಎಂದು ಹೆಮ್ಮೆಪಡುತ್ತೇವೆ. ಅದು 5ಜಿ ಇರಲಿ, ಕೃತಕ ಬುದ್ಧಿಮತ್ತೆಯೇ ಇರಲಿ, ಐಒಟಿಯೇ ಇರಲಿ, ಇಂದು ದೇಶವು ಆ ತಂತ್ರಜ್ಞಾನವನ್ನು ಅತ್ಯಂತ ವೇಗದಲ್ಲಿ ಅಳವಡಿಸಿಕೊಳ್ಳುತ್ತಿದೆ ಮತ್ತು ವಿಸ್ತರಿಸುತ್ತಿದೆ.

ದೈನಂದಿನ ಜೀವನದಲ್ಲಿ ಡ್ರೋನ್‌ಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಲು, ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ, ನಾವು ನೀತಿಗಳನ್ನು ಸುಧಾರಿಸಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಇಂದು ಡ್ರೋನ್‌ಗಳೊಂದಿಗೆ ದೂರದ ಪ್ರದೇಶಗಳಿಗೆ ಔಷಧಿಗಳನ್ನು ತಲುಪಿಸುವ ಕೆಲಸವನ್ನು ನಮ್ಮ ದೇಶದಲ್ಲಿ ಮಾಡಲಾಗುತ್ತಿದೆ. ನಮ್ಮ ರೈತರು ಇಂದು ಕೃಷಿ ಕ್ಷೇತ್ರದಲ್ಲಿ ಡ್ರೋನ್ ತರಬೇತಿ ಕೈಗೊಳ್ಳುತ್ತಿದ್ದಾರೆ. ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಇಂದು ನಮ್ಮ ಹಳ್ಳಿಗಳಲ್ಲಿ ಗೋಚರಿಸುತ್ತಿದೆ. ನಾವು ಜಿಯೋ-ಸ್ಪೇಷಿಯಲ್ ವಲಯದಲ್ಲಿ ಬಾಗಿಲು ತೆರೆದಿದ್ದೇವೆ. ಡ್ರೋನ್ ವಲಯವು ಮತ್ತಷ್ಟು ವಿಕಸನಗೊಳ್ಳಲು ನಾವು ಅವಕಾಶಗಳನ್ನು ತೆರೆದಿದ್ದೇವೆ. ಇಂದು, ವಿಶ್ವಸಂಸ್ಥೆಯಂತಹ ವಿಶ್ವಮಾನ್ಯ ಸಂಸ್ಥೆಗಳು ಇಡೀ ವಿಶ್ವಾದ್ಯಂತ ಜನರು ತಮ್ಮ ಭೂಮಿ ಮತ್ತು ಮನೆಯ ಮಾಲೀಕತ್ವದ ಹಕ್ಕುಗಳನ್ನು ಹೊಂದಿಲ್ಲ ಎಂದು ಚರ್ಚಿಸುತ್ತಿದ್ದಾರೆ. ಡ್ರೋನ್‌ಗಳ ಸಹಾಯದಿಂದ ಭಾರತವು ಸ್ವಾಮಿತ್ವ ಯೋಜನೆ ಮೂಲಕ ಗ್ರಾಮಗಳ ಮನೆಗಳಿಗೆ ನಕ್ಷೆಗಳ ಜತೆಗೆ ಮಾಲೀಕತ್ವದ ಹಕ್ಕುಗಳನ್ನು ನೀಡುವ ಕೆಲಸ ಮಾಡಿದೆ, ಅವರಲ್ಲಿ ಈಗ ಭದ್ರತೆಯ ಭಾವನೆ ಮೂಡಿದೆ. ಅವರು ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ಅಲೆದಾಡಬೇಕಾಗಿಲ್, ತಮ್ಮ ಮನೆಯ ಸ್ವಾಧೀನ ಹಕ್ಕುಗಳನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ. ಜನಸಾಮಾನ್ಯರಿಗೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ.
ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸುಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನಾವು ಅದರ ಶ್ರೇಷ್ಠತೆಯನ್ನು ಅರ್ಥ ಮಾಡಿಕೊಂಡಿದ್ದೇವೆ. ಆದ್ದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ, ನಾವೀನ್ಯತೆಯು ಅಪಾರ ಪ್ರಾಮುಖ್ಯತೆ ಹೊಂದಿದೆ. ಅದಕ್ಕಾಗಿಯೇ ವಿಶ್ವದ ಏಕೈಕ 'ವಿಧಿ ವಿಜ್ಞಾನ ವಿಶ್ವವಿದ್ಯಾಲಯ' ನಮ್ಮ ದೇಶದಲ್ಲಿದೆ. ನಾವು 'ಗತಿ ಶಕ್ತಿ ವಿಶ್ವವಿದ್ಯಾಲಯ' ರಚಿಸುವ ಮೂಲಕ ಮೂಲಸೌಕರ್ಯ ಜಗತ್ತಿನಲ್ಲಿ ಹೊಸ ಉಪಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಂದು ನಾವು 'ಇಂಧನ ವಿಶ್ವವಿದ್ಯಾಲಯ' ಸ್ಥಾಪಿಸುವ ಮೂಲಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಏರಿದ್ದೇವೆ. ನಾವು ಈಗಿನಿಂದಲೇ ನಮ್ಮ ಯುವಕರನ್ನು ತಯಾರು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ದೇಶದಲ್ಲಿ, ಕಾಂಗ್ರೆಸ್ ತನ್ನ ಆಡಳಿತದಲ್ಲಿ ತಂತ್ರಜ್ಞರು, ಎಂಜಿನಿಯರ್‌ಗಳು ಮತ್ತು ವಿಜ್ಞಾನವನ್ನು ದ್ವೇಷಿಸುವುದರಲ್ಲೇ ಕಾಲ ಕಳೆಯಿತು. ಆದರೆ ನಮ್ಮ ಅಧಿಕಾರಾವಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಗೌರವಿಸುವಲ್ಲಿ ನಾವು ಯಾವುದೇ ಕೆಲಸ ಬಿಡಲಿಲ್ಲ, ಇದೇ ನಮ್ಮ ಮಾರ್ಗವಾಗಿದೆ.

ಗೌರವಾನ್ವಿತ ಸಭಾಪತಿಗಳೆ,

ಉದ್ಯೋಗಗಳ ಬಗ್ಗೆಯೂ ಇಲ್ಲಿ ಚರ್ಚಿಸಲಾಯಿತು. ದೀರ್ಘಾವಧಿಯ ಜೀವನ ನಡೆಸಿದೆವು ಎಂದು ಹೇಳಿಕೊಳ್ಳುವವರಿಗೆ ಉದ್ಯೋಗ ಮತ್ತು ಕೆಲಸದ ನಡುವೆ ವ್ಯತ್ಯಾಸವಿದೆ ಎಂಬುದೇ ತಿಳಿದಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ. ಉದ್ಯೋಗ ಮತ್ತು ಕೆಲಸದ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳದವರು ನಮಗೆ ಉಪದೇಶ ಮಾಡುತ್ತಿದ್ದಾರೆ!

ಗೌರವಾನ್ವಿತ ಸಭಾಪತಿಗಳೆ,

ಹೊಸ ನಿರೂಪಣೆಗಳನ್ನು ಸೃಷ್ಟಿಸುವ ಮತ್ತು ಅರ್ಧ ಜ್ಞಾನದಿಂದ ಸುಳ್ಳುಗಳನ್ನು ಹರಡುವ ಪ್ರಯತ್ನಗಳು ನಡೆಯುತ್ತಿವೆ. ಕಳೆದ 9 ವರ್ಷಗಳಲ್ಲಿ ಆರ್ಥಿಕತೆಯ ವಿಸ್ತರಣೆಯೊಂದಿಗೆ, ಹೊಸ ಕ್ಷೇತ್ರಗಳಲ್ಲಿ ಉದ್ಯೋಗಗಳ ಹೊಸ ಸಾಧ್ಯತೆಗಳು ಹೆಚ್ಚಿವೆ. ಇಂದು ಹಸಿರು ಆರ್ಥಿಕತೆಯಲ್ಲಿ ದೇಶವು ಮುನ್ನಡೆಯುತ್ತಿರುವ ರೀತಿಯಲ್ಲಿ, ಹಸಿರು ಉದ್ಯೋಗಗಳ ಬೃಹತ್ ಸಾಧ್ಯತೆಗಳು ನೆಲದ ಮೇಲೆ ಹುಟ್ಟಿಕೊಂಡಿವೆ, ಇನ್ನೂ ಹೆಚ್ಚಿನ ಸಾಧ್ಯತೆಗಳು ಉಳಿದಿವೆ. ಡಿಜಿಟಲ್ ಇಂಡಿಯಾ ವಿಸ್ತರಣೆಯೊಂದಿಗೆ, ಡಿಜಿಟಲ್ ಆರ್ಥಿಕತೆಯ ಹೊಸ ಕ್ಷೇತ್ರವೂ ಹೊರಹೊಮ್ಮಿದೆ. ಇಂದು ಡಿಜಿಟಲ್ ಇಂಡಿಯಾ ಸೇವಾ ವಲಯದಲ್ಲಿ ಹೊಸ ಎತ್ತರದಲ್ಲಿದೆ. 5 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಿವೆ. ಹಳ್ಳಿಯೊಳಗಿನ ಪ್ರತಿ ಸಾಮಾನ್ಯ ಸೇವಾ ಕೇಂದ್ರದಲ್ಲಿ ಮತ್ತು ದೂರದ ಕಾಡುಗಳಲ್ಲಿನ ಸಣ್ಣ ಹಳ್ಳಿಗಳಲ್ಲಿಯೂ ಐದಾರು ಜನರು ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ. ಸಾಮಾನ್ಯ ಸೇವಾ ಕೇಂದ್ರ ಇಂದು ನಮ್ಮ ದೇಶಕ್ಕೆ ಅಗತ್ಯವಾಗಿದೆ. ಒಂದು ಗುಂಡಿ ಕ್ಲಿಕ್ಕಿಸಿ ಗ್ರಾಮಸ್ಥರಿಗೆ ಸೇವೆಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಡಿಜಿಟಲ್ ಆರ್ಥಿಕತೆಯು ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.


ಗೌರವಾನ್ವಿತ ಸಭಾಪತಿಗಳೆ,

90 ಸಾವಿರ ನೋಂದಾಯಿತ ಸ್ಟಾರ್ಟಪ್‌ಗಳು ಉದ್ಯೋಗದ ಹೊಸ ಬಾಗಿಲುಗಳನ್ನು ತೆರೆದಿವೆ. 2022 ಏಪ್ರಿಲ್‌ನಿಂದ ನವೆಂಬರ್‌ವರೆಗೆ 1 ಕೋಟಿಗೂ ಹೆಚ್ಚು ಜನರನ್ನು ಇಪಿಎಫ್ ಒ ವೇತನ ಪಾತ್ರ(ಪೇ ರೋಲ್‌)ಗಳಿಗೆ ಸೇರಿಸಲಾಗಿದೆ.


ಗೌರವಾನ್ವಿತ ಸಭಾಪತಿಗಳೆ,

ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆ ಮೂಲಕ 60 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಿಗಳು ಪ್ರಯೋಜನ ಪಡೆದಿದ್ದಾರೆ. ಆತ್ಮನಿರ್ಭರ್ ಭಾರತ್ ಅಭಿಯಾನದ ಅಡಿ, ನಾವು ನಮ್ಮ ಉದ್ಯಮಿಗಳಿಗೆ ಬಾಹ್ಯಾಕಾಶ, ರಕ್ಷಣೆ, ಡ್ರೋನ್, ಗಣಿಗಾರಿಕೆ, ಕಲ್ಲಿದ್ದಲು ಮುಂತಾದ ಹಲವು ಕ್ಷೇತ್ರಗಳನ್ನು ತೆರೆದಿದ್ದೇವೆ.ಇದರಿಂದಾಗಿ ಉದ್ಯೋಗ ಸಾಧ್ಯತೆಗಳಲ್ಲಿ ಹೊಸ ಆವೇಗವಿದೆ. ನಮ್ಮ ಯುವಕರು ಮುಂದೆ ಬಂದಿದ್ದಾರೆ ಮತ್ತು ಈ ಎಲ್ಲಾ ಉಪಕ್ರಮಗಳಿಂದ ಅವಕಾಶಗಳನ್ನು ಪಡೆದುಕೊಂಡಿದ್ದಾರೆ; ಅವರು ಅದರ ಲಾಭ ಪಡೆದುಕೊಂಡಿದ್ದಾರೆ.

ಗೌರವಾನ್ವಿತ ಸಭಾಪತಿಗಳೆ,

ರಕ್ಷಣಾ ಕ್ಷೇತ್ರದಲ್ಲಿ ಈ ದೇಶ ಸ್ವಾವಲಂಬಿಯಾಗಬೇಕಾದ ಅನಿವಾರ್ಯತೆ ಇದೆ. ನಾವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಧ್ಯೇಯವನ್ನು ಕೈಗೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಇಂದು ರಕ್ಷಣಾ ಕ್ಷೇತ್ರದಲ್ಲಿ 350ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಮುಂದೆ ಬಂದಿದ್ದು, ನನ್ನ ದೇಶ ರಕ್ಷಣಾ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾಧನ ಸಲಕರಣೆಗಳನ್ನು ರಫ್ತು ಮಾಡುತ್ತಿದ್ದು, ಈ ಕ್ಷೇತ್ರದಲ್ಲೂ ಅಭೂತಪೂರ್ವ ಉದ್ಯೋಗ ಸೃಷ್ಟಿಯಾಗಿದೆ.

ಗೌರವಾನ್ವಿತ ಸಭಾಪತಿಗಳೆ,

ಬಿಡಿ ಮಾರಾಟ ವ್ಯಾಪಾರದಿಂದ ಪ್ರವಾಸೋದ್ಯಮದವರೆಗೆ ಪ್ರತಿಯೊಂದು ಕ್ಷೇತ್ರವೂ ವಿಸ್ತರಣೆ ಆಗಿದೆ., ಮಹಾತ್ಮ ಗಾಂಧಿಯವರೊಂದಿಗೆ ಸಂಬಂಧ ಹೊಂದಿದ್ದ ಖಾದಿ ಮತ್ತು ಗ್ರಾಮೋದ್ಯೋಗ ವ್ಯವಸ್ಥೆಯೂ ಮುಳುಗಿತ್ತು. ಸ್ವಾತಂತ್ರ್ಯಾನಂತರ, ಖಾದಿ-ಗ್ರಾಮೋದ್ಯೋಗದಲ್ಲಿ ಗರಿಷ್ಠ ದಾಖಲೆ ಮುರಿಯುವ ಕೆಲಸ ನಮ್ಮ ಅವಧಿಯಲ್ಲಿ ನಡೆದಿದೆ. ರೈಲು, ರಸ್ತೆ, ಬಂದರು ಅಥವಾ ವಿಮಾನ ನಿಲ್ದಾಣ ಅಥವಾ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಾಗಿ ಮೂಲಸೌಕರ್ಯದಲ್ಲಿ ದಾಖಲೆಯ ಹೂಡಿಕೆ ಮಾಡಲಾಗುತ್ತಿದೆ. ಈ ಎಲ್ಲಾ ಮೂಲಸೌಕರ್ಯ ಕೆಲಸಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ನಿರ್ಮಾಣ ಕಾರ್ಯದಲ್ಲಿ, ಕಾರ್ಮಿಕರ ಸ್ಥಾನದಿಂದ ಮೆಕ್ಯಾನಿಕ್‌ವರೆಗೆ, ಇಂಜಿನಿಯರ್‌ಗಳಿಂದ ಕಾರ್ಮಿಕರವರೆಗೆ ಇಂದು ಎಲ್ಲಾ ರೀತಿಯ ಉದ್ಯೋಗದ ಸಾಧ್ಯತೆಗಳು ಹೆಚ್ಚಾಗಿವೆ. ಯುವ ವಿರೋಧಿ ನೀತಿಗಳನ್ನು ಅನುಸರಿಸಿದ ಜನರನ್ನು ಯುವಕರು ತಿರಸ್ಕರಿಸುತ್ತಿದ್ದಾರೆ. ಇಂದು ದೇಶವು ಯುವಜನರ ಕಲ್ಯಾಣಕ್ಕಾಗಿ ನಾವು ರೂಪಿಸಿದ ನೀತಿಗಳನ್ನು ಒಪ್ಪಿಕೊಳ್ಳುತ್ತಿದೆ.

ಗೌರವಾನ್ವಿತ ಸಭಾಪತಿಗಳೆ,

ಸರ್ಕಾರದ ಯೋಜನೆಗಳ ಹೆಸರುಗಳ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿವೆ. ಕೆಲವು ಹೆಸರುಗಳಲ್ಲಿ ಸಂಸ್ಕೃತದ ಸ್ಪರ್ಶದಿಂದ ಕೆಲವರಿಗೆ ತೊಂದರೆಯೂ ಇದೆ. ಈಗ, ಇದು ಕೂಡ ಒಂದು ಸಮಸ್ಯೆಯಾಗಿದೆ.

ಮಾನ್ಯ ಸಭಾಪತಿಗಳೆ,

ಯಾವುದೋ ಪತ್ರಿಕೆಯಲ್ಲಿ ಓದಿದ್ದೆ. ನಾನು ಅದನ್ನು ಪರಿಶೀಲಿಸದಿದ್ದರೂ, ಸುಮಾರು 600 ಸರ್ಕಾರಿ ಯೋಜನೆಗಳಿಗೆ ಗಾಂಧಿ-ನೆಹರೂ ಕುಟುಂಬದ ಹೆಸರಿಡಲಾಗಿದೆ ಎಂದು ವರದಿ ಹೇಳುತ್ತಿದೆ. ಯಾವುದೇ ಕಾರ್ಯಕ್ರಮದಲ್ಲಿ ನೆಹರೂ ಅವರ ಹೆಸರು ಹೇಳದೇ ಹೋದರೆ ಕೆಲವರಿಗೆ ಸಿಟ್ಟು ಬಂದು ರಕ್ತ ಕುದಿಯುತ್ತಿರುತ್ತದೆ. ಆದರೆ ಅವರ ತಲೆಮಾರಿನ ವ್ಯಕ್ತಿಯೊಬ್ಬರು ನೆಹರೂ ಉಪನಾಮ ಬಳಸಲು ಏಕೆ ಹೆದರುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ? ನೆಹರೂ ಉಪನಾಮವನ್ನು ಬಳಸುವುದರಲ್ಲಿ ಏನಾದರೂ ಅವಮಾನವಿದೆಯೇ? ಅಂತಹ ಮಹಾನ್ ವ್ಯಕ್ತಿತ್ವವು ನಿಮಗೆ ಅಥವಾ ಕುಟುಂಬಕ್ಕೆ ಸ್ವೀಕಾರಾರ್ಹವಲ್ಲದಿದ್ದರೆ, ನೀವು ನಮ್ಮನ್ನು ಏಕೆ ಕೇಳುತ್ತೀರಿ?

ಗೌರವಾನ್ವಿತ ಸಭಾಪತಿಗಳೆ,

ಶತಮಾನಗಳಷ್ಟು ಹಳೆಯದಾದ ಈ ದೇಶವು ಶ್ರೀಸಾಮಾನ್ಯನ ಬೆವರು ಮತ್ತು ಶ್ರಮದಿಂದ ನಿರ್ಮಾಣವಾದ ರಾಷ್ಟ್ರವಾಗಿದೆ, ತಲೆಮಾರುಗಳ ಜನರ ಸಂಪ್ರದಾಯದಿಂದ ನಿರ್ಮಿಸಲ್ಪಟ್ಟ ದೇಶವಾಗಿದೆ ಎಂದು ಕೆಲವರು ಅರ್ಥ ಮಾಡಿಕೊಳ್ಳಬೇಕು. ಈ ದೇಶ ಯಾವುದೇ ಕುಟುಂಬದ ಆಸ್ತಿಯಲ್ಲ. ನಾವು ಮೇಜರ್ ಧ್ಯಾನ್ ಚಂದ್ ಅವರ ಹೆಸರಿನ ಖೇಲ್ ರತ್ನ ಪ್ರಶಸ್ತಿಗಳನ್ನು ಸ್ಥಾಪಿಸಿದ್ದೇವೆ. ನಾವು ನೇತಾಜಿ ಸುಭಾಷ್ ಅವರ ಹೆಸರನ್ನು ಅಂಡಮಾನ್‌ನಲ್ಲಿರುವ ದ್ವೀಪಗಳಿಗೆ ಸ್ವರಾಜ್ ಎಂದು ಹೆಸರಿಸಿದ್ದೇವೆ. ಅದರ ಬಗ್ಗೆ ನಮಗೆ ಹೆಮ್ಮೆ ಇದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆಯಿಂದ ದೇಶ ಹೆಮ್ಮೆಪಡುತ್ತದೆ. ಅದರ ಬಗ್ಗೆ ನಮಗೂ ಹೆಮ್ಮೆ ಇದೆ.

ಇಷ್ಟೇ ಅಲ್ಲ, ಈ ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರಿಟ್ಟಿದ್ದೇವೆ. ನಮ್ಮ ದೇಶದ ಸೈನ್ಯವನ್ನು ಅವಮಾನಿಸುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳದ ಜನರಿದ್ದಾರೆ. ಮುಂದಿನ ಶತಮಾನಗಳವರೆಗೆ, ಎವರೆಸ್ಟ್ ಎಂಬ ವ್ಯಕ್ತಿಯ ನಂತರ ಹಿಮಾಲಯ ಶಿಖರವು ಎವರೆಸ್ಟ್ ಆಯಿತು. ನನ್ನ ಪರಮವೀರ ಚಕ್ರ ವಿಜೇತರು, ನನ್ನ ದೇಶದ ಸೈನಿಕರ ಹೆಸರನ್ನು ನನ್ನ ದ್ವೀಪ ಗುಂಪುಗಳಿಗೆ ಹೆಸರಿಸಲಾಯಿತು. ಇದು ನಮ್ಮ ಭಕ್ತಿ ಮತ್ತು ನಾವು ಅದರೊಂದಿಗೆ ಮುನ್ನಡೆಯುತ್ತೇವೆ. ಇದು ನಿಮ್ಮನ್ನು ತೊಂದರೆಗೊಳಿಸುತ್ತಿದೆ, ನಿಮ್ಮಿಂದ ನೋವು ಕೂಡ ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬರ ಕುಂದುಕೊರತೆಗಳನ್ನು ವ್ಯಕ್ತಪಡಿಸುವ ವಿಧಾನವು ವಿಭಿನ್ನವಾಗಿದೆ, ಆದರೆ ನಮ್ಮ ಮಾರ್ಗವು ಸಕಾರಾತ್ಮಕವಾಗಿರುತ್ತದೆ.
ಈಗ ಈ ಸದನವು ಒಂದು ರೀತಿಯಲ್ಲಿ ರಾಜ್ಯಗಳ ಹಿರಿಮೆಯನ್ನು ಹೊಂದಿದೆ. ಕೆಲವೊಮ್ಮೆ ನಾವು ರಾಜ್ಯಗಳಿಗೆ ತೊಂದರೆ ನೀಡುತ್ತೇವೆ ಎಂಬ ಆರೋಪವೂ ಇದೆ.

ಗೌರವಾನ್ವಿತ ಸಭಾಪತಿಗಳೆ,

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ಈ ಸ್ಥಾನಕ್ಕೆ ಬಂದಿದ್ದೇನೆ. ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಅಲ್ಲಿ ವಾಸ ಮಾಡಿ ಇಲ್ಲಿಗೆ ಬಂದಿದ್ದೇನೆ. ಅದಕ್ಕಾಗಿಯೇ ನಾವು ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡಿದ್ದೇವೆ. ‘ಸ್ಪರ್ಧೆ ಮಾಡೋಣ, ಮುಂದೆ ಸಾಗೋಣ, ಸಹಕಾರ ನೀಡೋಣ, ಮುನ್ನಡೆಯೋಣ’ ಎಂಬ ದಿಕ್ಕಿನತ್ತ ಸಾಗಿದೆವು. ನಾವು ನಮ್ಮ ನೀತಿಗಳಲ್ಲಿ ರಾಷ್ಟ್ರೀಯ ಪ್ರಗತಿಯ ಬಗ್ಗೆ ಕಾಳಜಿ ವಹಿಸಿದ್ದೇವೆ, ಪ್ರಾದೇಶಿಕ ಆಕಾಂಕ್ಷೆಗಳನ್ನು ಸಹ ತಿಳಿಸಿದ್ದೇವೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗಿಸಲು ನಾವೆಲ್ಲರೂ ಒಟ್ಟಾಗಿ ಮುನ್ನಡೆಯುತ್ತಿರುವಾಗ 'ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಆಕಾಂಕ್ಷೆ'ಯ ಪರಿಪೂರ್ಣ ಸಂಯೋಜನೆಯು ನಮ್ಮ ನೀತಿಗಳಲ್ಲಿ ಪ್ರತಿಫಲಿಸುತ್ತಿದೆ.

ಆದರೆ ಇಂದು ವಿರೋಧ ಪಕ್ಷದಲ್ಲಿ ಕುಳಿತಿರುವ ಜನರು ರಾಜ್ಯಗಳ ಹಕ್ಕುಗಳನ್ನು ಹರಿದು ಹಾಕಿದ್ದಾರೆ. ಇಂದು ನಾನು ಎಲ್ಲಾ ರಹಸ್ಯಗಳನ್ನು ಬಹಿರಂಗಪಡಿಸುತ್ತೇನೆ. ಇತಿಹಾಸವನ್ನು ಒಮ್ಮೆ ನೋಡಿ, ಯಾವ ಪಕ್ಷ 356ನೇ ವಿಧಿಯನ್ನು ಹೆಚ್ಚು ದುರುಪಯೋಗಪಡಿಸಿದೆ ಎಂಬುದನ್ನು. 90 ಬಾರಿ ಚುನಾಯಿತ ಸರ್ಕಾರಗಳನ್ನು ಉರುಳಿಸಿದವರು ಯಾರು? ಯಾರು ಇದನ್ನು ಮಾಡಿದರು? ಯಾರು ಇದನ್ನು ಮಾಡಿದರು? ಯಾರು ಇದನ್ನು ಮಾಡಿದರು?

ಗೌರವಾನ್ವಿತ ಸಭಾಪತಿಗಳೆ,

ಪ್ರಧಾನಿಯೊಬ್ಬರು ಸಂವಿಧಾನದ ವಿಧಿ 356 ಅನ್ನು 50 ಬಾರಿ ಬಳಸಿ ಅರ್ಧ ಶತಕ ಮಾಡಿದರು! ಅವರೇ ಶ್ರೀಮತಿ ಇಂದಿರಾ ಗಾಂಧಿ. ಸರ್ಕಾರಗಳು 50 ಬಾರಿ ಉರುಳಿದವು. ಇಂದು ಕೇರಳದಿಂದ ಬಂದವರು ನೆನಪಿಸಿಕೊಳ್ಳಲು ಪ್ರಯತ್ನಿಸಿ. ದಯವಿಟ್ಟು ಅಲ್ಲಿ ಮೈಕ್ ಇರಿಸಿ. ಪಂಡಿತ್ ನೆಹರೂ ಅವರಿಗೆ ಇಷ್ಟವಾಗದ ಎಡಪಂಥೀಯ ಸರ್ಕಾರ ಕೇರಳದಲ್ಲಿ ಚುನಾಯಿತವಾಯಿತು. ಮೊದಲ ಚುನಾಯಿತ ಸರ್ಕಾರ ಅಲ್ಪಾವಧಿಯಲ್ಲೇ ಪತನವಾಯಿತು. ಇಂದು ನೀವು ಅಲ್ಲಿ ನಿಂತಿದ್ದೀರಿ. ನಿಮಗೆ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ.

ಗೌರವಾನ್ವಿತ ಸಭಾಪತಿಗಳೆ,

ಡಿಎಂಕೆ ಮಿತ್ರಪಕ್ಷಗಳಿಗೂ ಹೇಳುತ್ತೇನೆ. ತಮಿಳುನಾಡಿನಲ್ಲಿ ಎಂಜಿಆರ್, ಕರುಣಾನಿಧಿ ಅವರಂತಹ ದಿಗ್ಗಜರ ಸರ್ಕಾರಗಳನ್ನು ಅದೇ ಕಾಂಗ್ರೆಸ್ಸಿಗರು ವಜಾ ಮಾಡಿದರು. ಎಂಜಿಆರ್ ಅವರ ಆತ್ಮ ನಿಮ್ಮನ್ನು ಗಮನಿಸುತ್ತಿರಬೇಕು. ನಾನು ಯಾವಾಗಲೂ ಗೌರವಾನ್ವಿತ ನಾಯಕ ಎಂದು ಪರಿಗಣಿಸುವ ಈ ಸದನದ ಹಿರಿಯ ಸದಸ್ಯ ಶ್ರೀ ಶರದ್ ಪವಾರ್ ಹಿಂದೆ ಕುಳಿತಿದ್ದಾರೆ. ಶರದ್ ಪವಾರ್ ಜಿ 1980ರಲ್ಲಿ 35-40 ವರ್ಷ ವಯಸ್ಸಿನವರಾಗಿದ್ದರು. ಯುವ ಮುಖ್ಯಮಂತ್ರಿಯೊಬ್ಬರು ತಮ್ಮ ತಾಯಿಯ ಸೇವೆ ಮಾಡಲು ಹೊರಟಿದ್ದರು, ಆಗ ಅವರ ಸರ್ಕಾರವೂ ಉರುಳಿತು. ಇಂದು ಅವರು ಇಲ್ಲೇ ಇದ್ದಾರೆ.
ಕಾಂಗ್ರೆಸ್ ನಾಯಕರುಪ್ರತಿ ಪ್ರಾದೇಶಿಕ ನಾಯಕರಿಗೂ ಕಿರುಕುಳ ನೀಡಿದ್ದರು ಮತ್ತು ಅವರು ಎನ್ ಟಿಆರ್ ಅವರಿಗೆ ಏನು ಮಾಡಿದರು? ಇಲ್ಲಿ ಕೆಲವರು ಬಟ್ಟೆ ಬದಲಿಸಿರಬೇಕು ಅಥವಾ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೆಸರು ಬದಲಿಸಿರಬೇಕು. ಆದರೆ ಅವರು ಅವರೊಂದಿಗೆ ಇದ್ದರು. ಎನ್ ಟಿಆರ್ ತಮ್ಮ ಆರೋಗ್ಯ ಸಂಬಂಧಿ ಸಮಸ್ಯೆಗಾಗಿ ಅಮೆರಿಕಕ್ಕೆ ಹೋಗಿದ್ದರು. ಆಗ ನೀವು ಎನ್ ಟಿಆರ್ ಸರ್ಕಾರ ಉರುಳಿಸಲು ಪ್ರಯತ್ನಿಸಿದ್ದೀರಿ. ಇದು ಕಾಂಗ್ರೆಸ್ ರಾಜಕಾರಣದ ಗುಣವಾಗಿತ್ತು.

ಗೌರವಾನ್ವಿತ ಸಭಾಪತಿಗಳೆ,

ಪತ್ರಿಕೆಗಳನ್ನು ತೆಗೆದುಕೊಂಡು ಓದಿ. ರಾಜಭವನಗಳನ್ನು ಕಾಂಗ್ರೆಸ್ ಕಚೇರಿಗಳು ಮತ್ತು ಕೇಂದ್ರ ಕಚೇರಿಗಳಾಗಿ ಪರಿವರ್ತಿಸಲಾಗಿದೆ ಎಂದು ಪತ್ರಿಕೆಗಳು ಬರೆಯುತ್ತಿದ್ದವು. 2005 ರಲ್ಲಿ ಜಾರ್ಖಂಡ್‌ನಲ್ಲಿ ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಹೊಂದಿತ್ತು. ಆದರೆ ರಾಜ್ಯಪಾಲರು ಯುಪಿಎಯನ್ನು ಪ್ರಮಾಣ ವಚನಕ್ಕೆ ಆಹ್ವಾನಿಸಿದ್ದರು. 1982ರಲ್ಲಿ ಹರಿಯಾಣದಲ್ಲಿ ಬಿಜೆಪಿ ಮತ್ತು ದೇವಿಲಾಲ್ ಅವರೊಂದಿಗೆ ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡಿದ್ದರು, ಆದರೆ ರಾಜ್ಯಪಾಲರು ಕಾಂಗ್ರೆಸ್ ಅನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಇದು ಕಾಂಗ್ರೆಸ್‌ನ ಹಿಂದಿನ ಮಾತು. ಆದರೆ ಇಂದು ಅವರು ದೇಶದ ದಾರಿ ತಪ್ಪಿಸುತ್ತಿದ್ದಾರೆ.

ಗೌರವಾನ್ವಿತ ಸಭಾಪತಿಗಳೆ, 

ನಾನು ಒಂದು ವಿಷಯ ತಿಳಿದುಕೊಳ್ಳಲು ಬಯಸುತ್ತೇನೆ. ನಾನು ಈಗ ಗಂಭೀರ ಸಮಸ್ಯೆಯತ್ತ ಗಮನ ಸೆಳೆಯಲು ಬಯಸುತ್ತೇನೆ. ನಾನು ಪ್ರಮುಖ ವಿಷಯಗಳನ್ನು ತಿಳಿಸಿದ್ದೇನೆ. ಇಂದು ದೇಶದ ಆರ್ಥಿಕ ನೀತಿಗಳನ್ನು ಅರ್ಥ ಮಾಡಿಕೊಳ್ಳದವರು, ದಿನದ 24 ಗಂಟೆಗಳ ಕಾಲ ರಾಜಕೀಯ ಹೊರತುಪಡಿಸಿ ಬೇರೇನನ್ನೂ ಯೋಚಿಸುವುದಿಲ್ಲ, ಜನಜೀವನದ ಕೆಲಸವನ್ನು ನೋಡದೆ ಅಧಿಕಾರದ ಆಟದಲ್ಲಿ ಅರ್ಥಶಾಸ್ತ್ರವನ್ನು 'ವಿಪತ್ತು-ನೀತಿ'ಯಾಗಿ ಪರಿವರ್ತಿಸಿದ್ದಾರೆ.

ನಾನು ಅವರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಈ ಸದನದ ಗಂಭೀರತೆಯಿಂದ ಆಯಾ ರಾಜ್ಯಗಳಿಗೆ ಹೋಗಿ ಅವರು ತಪ್ಪು ದಾರಿಯಲ್ಲಿ ಸಾಗುವುದನ್ನು ತಡೆಯುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ. ನಮ್ಮ ನೆರೆಯ ದೇಶಗಳ ಸ್ಥಿತಿ ನೋಡಿ. ಅಲ್ಲಿ ಏನಾಗಿದೆ? ಮನಬಂದಂತೆ ಸಾಲ ಪಡೆದು ದೇಶಗಳು ಮುಳುಗಿದ್ದು ಹೇಗೆ? ಇಂದು ನಮ್ಮ ದೇಶದಲ್ಲಿ, ನಾವು ತಕ್ಷಣದ ಕೆಲವು ಪ್ರಯೋಜನಗಳನ್ನು ಒದಗಿಸುತ್ತಿದ್ದರೆ, ಭವಿಷ್ಯದ ಪೀಳಿಗೆಯು ನಂತರ ಅದನ್ನು ಒದಿಗಸಬೇಕಾಗುತ್ತದೆ. ನಾವು ಸಾಲ ತೆಗೆದುಕೊಳ್ಳುತ್ತೇವೆ. ಇದರಿಂದ  ಭವಿಷ್ಯವು ಹಾಳಾಗುತ್ತದೆ. ಇದು ಜಿಪಿಒ ಆಟದಂತಿದೆ - 'ಉತ್ತರಾಧಿಕಾರಿ ನಿಭಾಯಿಸಲಿ' ಎಂಬ ಧೋರಣೆ. ಇದನ್ನು ಕೆಲವು ರಾಜ್ಯಗಳು ಅಳವಡಿಸಿಕೊಂಡಿವೆ. ಅವರು ತಮ್ಮನ್ನು ತಾವು ನಾಶಪಡಿಸಿಕೊಳ್ಳುವುದು ಮಾತ್ರವಲ್ಲದೆ ಇಡೀ ದೇಶವನ್ನೇ ನಾಶಪಡಿಸುತ್ತಾರೆ.

ಈಗ ಈ ದೇಶಗಳು ಸಾಲದ ಹೊರೆಯಲ್ಲಿ ಸಮಾಧಿಯಾಗುತ್ತಿವೆ. ಇಂದು ಜಗತ್ತಿನಲ್ಲಿ ಯಾರೂ ಅವರಿಗೆ ಸಾಲ ನೀಡಲು ಸಿದ್ಧರಿಲ್ಲ; ಅವರು ತೊಂದರೆಗಳ ಹಾದಿಯಲ್ಲಿ ಹೋಗುತ್ತಿದ್ದಾರೆ.

ರಾಜಕೀಯ ಅಥವಾ ಸೈದ್ಧಾಂತಿಕ ಭಿನ್ನತೆಗಳಿರಬಹುದು; ಪಕ್ಷಗಳು ಪರಸ್ಪರರ ವಿರುದ್ಧ ಕೆಲವು ದೂರು ದುಮ್ಮಾನಗಳನ್ನು ಹೊಂದಿರಬಹುದು, ಆದರೆ ದೇಶದ ಆರ್ಥಿಕ ಆರೋಗ್ಯದೊಂದಿಗೆ ಆಟವಾಡಬೇಡಿ. ಇಂದು ನಿಮ್ಮ ಸಂತೋಷಕ್ಕಾಗಿ ನಿಮ್ಮ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಇಂತಹ ಪಾಪ ಮಾಡಬೇಡಿ. ಮಕ್ಕಳ ಭವಿಷ್ಯವನ್ನು ಹಾಳು ಮಾಡಿ ಓಡಿ ಹೋಗಬೇಡಿ. ಇಂದು ನೀವು ರಾಜಕೀಯವಾಗಿ... ಮುಖ್ಯಮಂತ್ರಿಯೊಬ್ಬರು ಹೇಳಿಕೆ ನೀಡಿರುವುದನ್ನು ನಾನು ನೋಡಿದ್ದೇನೆ 'ಈಗ ಪರವಾಗಿಲ್ಲ, ನಾನು ಈಗ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. 2030-32ರ ನಂತರ ತೊಂದರೆ ಕಾಣಿಸಿಕೊಳ್ಳಬಹುದು. ಯಾರು ಬಂದರೂ ನರಳುತ್ತಾರೆ'. ಯಾವುದೇ ದೇಶ ಈ ರೀತಿ ಯೋಚಿಸುತ್ತದೆಯೇ? ಆದರೆ ಈ ತಂತ್ರವನ್ನು ಮುಂದುವರಿಸಲಾಗುತ್ತಿದೆ ಎಂಬುದು ಬಹಳ ಕಳವಳಕಾರಿ ವಿಷಯವಾಗಿದೆ.

ಗೌರವಾನ್ವಿತ ಸಭಾಪತಿಗಳೆ,

ದೇಶದ ಆರ್ಥಿಕ ಆರೋಗ್ಯಕ್ಕಾಗಿ, ರಾಜ್ಯಗಳು ತಮ್ಮ ಆರ್ಥಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಶಿಸ್ತಿನ ಮಾರ್ಗವನ್ನು ಆರಿಸಬೇಕಾಗುತ್ತದೆ. ಆಗ ಮಾತ್ರ ರಾಜ್ಯಗಳು ಈ ಅಭಿವೃದ್ಧಿಯ ಪ್ರಯಾಣದ ಲಾಭ ಪಡೆಯಲು ಸಾಧ್ಯವಾಗುತ್ತದೆ, ನಾವು ಸಹ ರಾಜ್ಯಗಳ ನಾಗರಿಕರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ನಾವು ಅವರಿಗೆ ಪ್ರಯೋಜನಗಳನ್ನು ಒದಗಿಸಲು ಬಯಸುತ್ತೇವೆ.

ಗೌರವಾನ್ವಿತ ಸಭಾಪತಿಗಳೆ,

2047ರಲ್ಲಿ ಈ ದೇಶ ಅಭಿವೃದ್ಧಿ ಹೊಂದಿದ ಭಾರತವಾಗಲಿದೆ. ಇದು ನಮ್ಮೆಲ್ಲರ ಒಕ್ಕೊರಲಿನ ನಿರ್ಣಯ, ಇದು 140 ಕೋಟಿ ದೇಶವಾಸಿಗಳ ನಿರ್ಣಯವಾಗಿದೆ. ಈಗ ದೇಶವು ಹಿಂತಿರುಗಿ ನೋಡಲು ಸಿದ್ಧವಾಗಿಲ್ಲ, ದೇಶವು ದೀರ್ಘ ಜಿಗಿತಕ್ಕೆ ಏರಲು ಸಿದ್ಧವಾಗಿದೆ. ದಿನಕ್ಕೆ ಎರಡು ಮುಷ್ಟಿಯ ಅನ್ನದ ಕನಸು ಕಂಡವರಿಗೆ ನಿಮ್ಮ ಚಿಂತೆಯಲ್ಲ, ಆದರೆ ನಮಗಿದೆ. ಸಾಮಾಜಿಕ ನ್ಯಾಯ ನಿರೀಕ್ಷಿಸಿದವರ ಬಗ್ಗೆ ನೀವು ಚಿಂತಿಸಿಲ್ಲ, ಆದರೆ ನಾವು ಅವರ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಜನರು ಆಗಾಗ್ಗೆ ಹುಡುಕುತ್ತಿದ್ದ ಅವಕಾಶಗಳನ್ನು ಒದಗಿಸಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸ್ವತಂತ್ರ ಭಾರತದ ಕನಸುಗಳನ್ನು ನನಸಾಗಿಸಲು ನಾವು ಸಂಕಲ್ಪದಿಂದ ಮುನ್ನಡೆಯಬೇಕು.

ಮತ್ತು ಗೌರವಾನ್ವಿತ ಸಭಾಪತಿಗಳೆ,

ಒಬ್ಬನೇ ವ್ಯಕ್ತಿ ಹೇಗೆ ಹಲವರ ಮೇಲೆ ಅಧಿಕಾರ ನಡೆಸುತ್ತಿದ್ದಾನೆ ಎಂದು ದೇಶ ನೋಡುತ್ತಿದೆ! ಘೋಷಣೆಗಳನ್ನು ಕೂಗುವುದನ್ನು ಅವರು ದ್ವಿಗುಣಗೊಳಿಸಬೇಕು. ಗೌರವಾನ್ವಿತ ಸಭಾಪತಿಗಳೆ, ನಾನು ದೃಢವಿಶ್ವಾಸದಿಂದ ನಡೆಯುತ್ತೇನೆ, ನಾನು ದೇಶಕ್ಕಾಗಿ ಬದುಕುತ್ತೇನೆ; ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಹೊರಟಿದ್ದೇನೆ. ಮತ್ತು ರಾಜಕೀಯ ಆಟವಾಡುವ ಈ ಜನರಿಗೆ ಆ ಧೈರ್ಯವಿಲ್ಲ. ಅವರು ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದಾರೆ.

ಗೌರವಾನ್ವಿತ ಸಭಾಪತಿಗಳೆ,

ಈ ಸದನದಲ್ಲಿ ರಾಷ್ಟ್ರಪತಿಗಳ ಅತ್ಯುತ್ತಮ, ಮಾರ್ಗದರ್ಶಕ ಮತ್ತು ಸ್ಫೂರ್ತಿದಾಯಕ ಭಾಷಣವನ್ನು ಅಭಿನಂದಿಸುತ್ತಾ, ನಿಮಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸುವ ಮೂಲಕ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ!

ಹಕ್ಕು ನಿರಾಕರಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದವಾಗಿದೆ. ಅವರು ಮೂಲ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

****


(Release ID: 1901115) Visitor Counter : 241