ರಕ್ಷಣಾ ಸಚಿವಾಲಯ

ಏರೋ ಇಂಡಿಯಾ 2023ರಲ್ಲಿ ನವೋದ್ಯಮಗಳ ಹೊಸ ಶಕ್ತಿ, ಬದ್ಧತೆ ಮತ್ತು ಉತ್ಸಾಹವನ್ನು ಶ್ಲಾಘಿಸಿದ ರಕ್ಷಣಾ ಸಚಿವರು


ರಕ್ಷಣಾ ಸಚಿವರಿಂದ “ಸೈಬರ್ ಭದ್ರತೆ” ಕುರಿತಂತೆ 9ನೇ ಆವೃತ್ತಿಯ ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್ (ಡಿಐಎಸ್ ಸಿ-9) ಗೆ ಚಾಲನೆ  

ಐಡೆಕ್ಸ್ ಹೂಡಿಕೆದಾರರ ತಾಣದ ಮೂಲಕ 200 ಕೋಟಿ ರೂ.ಗೂ ಅಧಿಕ ಹೂಡಿಕೆಯ ವಾಗ್ದಾನ ನೀಡಿರುವ ಭಾರತ

Posted On: 15 FEB 2023 1:25PM by PIB Bengaluru

ಏರೋ ಇಂಡಿಯಾ 2023 ರ ಸ್ಟಾರ್ಟ್-ಅಪ್ ಮಂಥನ್‌ನಲ್ಲಿ  ಇಂದು ಮಾತನಾಡಿದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, ನವೋದ್ಯಮ (ಸ್ಟಾರ್ಟ್-ಅಪ್‌)ಗಳನ್ನು ಹೊಸ ಶಕ್ತಿ, ಹೊಸ ಬದ್ಧತೆ ಮತ್ತು ಹೊಸ ಉತ್ಸಾಹಕ್ಕೆ ಸಮನಾಗಿವೆ ಎಂದು ಬಣ್ಣಿಸಿದರು. ಹೊಸ ತಂತ್ರಜ್ಞಾನದ ವಿನ್ಯಾಸಗಳನ್ನು ಅಳವಡಿಸಿಕೊಳ್ಳಲು ಸ್ಟಾರ್ಟ್‌ಅಪ್‌ಗಳು ಹೆಚ್ಚು ಮುಕ್ತವಾಗಿದ್ದು, ಅವು ಭಾರತದ ಪ್ರಗತಿಗೆ ಅವಶ್ಯಕವಾಗಿವೆ ಎಂದು ಅವರು ಹೇಳಿದರು. 100ಕ್ಕೂ ಅಧಿಕ ಯುನಿಕಾರ್ನ್‌ಗಳು ಸೇರಿದಂತೆ ಇಂದು ನವೋದ್ಯಮಗಳ ಸಂಖ್ಯೆ ಸುಮಾರು ಒಂದು ಲಕ್ಷಕ್ಕೂ ಅಧಿಕವಾಗಿದ್ದು, ಪ್ರತಿಯೊಂದು ವಲಯದಲ್ಲೂ ಭಾರತೀಯ ಸ್ಟಾರ್ಟ್‌ಅಪ್‌ಗಳ ಏಳಿಗೆಯನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಇದು ನಮ್ಮ ಯುವಕರ ಉತ್ಸಾಹ ಮತ್ತು ಆವಿಷ್ಕಾರದತ್ತ ಅವರ ಒಲವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಸೈಬರ್ ಭದ್ರತೆ ಕುರಿತಂತೆ 28 ಸಮಸ್ಯೆ ಹೇಳಿಕೆಗಳೊಂದಿಗೆ ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜಸ್ (ಡಿಐಎಸ್ಸಿ 9) ನ ಒಂಬತ್ತನೇ ಆವೃತ್ತಿಗೆ ಮತ್ತು  ಐಡೆಕ್ಸ್- iDEX ಹೂಡಿಕೆದಾರರ ತಾಣ ಆರಂಭಕ್ಕೆ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದರು. ಪ್ರಮುಖ ಭಾರತೀಯ ಹೂಡಿಕೆದಾರರಿಂದ ಐಐಎಚ್ ಅಡಿಯಲ್ಲಿ 200 ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯ ವಾಗ್ದಾನವನ್ನು ಈಗಾಗಲೇ ಮಾಡಲಾಗಿದೆ.

ರಕ್ಷಣಾ ಸಚಿವಾಲಯದಡಿಯಲ್ಲಿ ಬರುವ ರಕ್ಷಣಾ ನಾವೀನ್ಯತಾ ಸಂಸ್ಥೆ (ಡಿಐಒ) ಅಧೀನದಲ್ಲಿ ಆರಂಭಿಸಲಾದ ರಕ್ಷಣಾ ವಲಯದಲ್ಲಿ ಉತ್ಕೃಷ್ಟತೆಗೆ ನಾವೀನ್ಯತೆ (ಐಡೆಕ್ಸ್) ಉಪಕ್ರಮವು ದೇಶಾದ್ಯಂತ ಪ್ರತಿಭೆಗಳು ಮುಂದೆ ಬರಲು ಅನುವು ಮಾಡಿಕೊಟ್ಟಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ನಮ್ಮ ಸೇವೆಗಳು, ಡಿಪಿಎಸ್‌ಯುಗಳು, ಕರಾವಳಿ ಪಡೆ ಮತ್ತು ಗೃಹ ಸಚಿವಾಲಯದ ಅಡಿಯಲ್ಲಿನ ಸಂಸ್ಥೆಗಳು ನಮ್ಮ ಯುವಕರಿಗೆ ಸಮಸ್ಯೆಯ ಹೇಳಿಕೆ ನೀಡುತ್ತಿವೆ, ಅವರು ಪ್ರತಿ ಬಾರಿಯೂ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಿದ್ದಾರೆ ಎಂದು ಅವರು ಹೇಳಿದರು. ಭಾರತವು ತನ್ನ ಯುವಕರನ್ನು ಆವಿಷ್ಕಾರಿಗಳಾಗಲು ಬೆಂಬಲ ನೀಡುತ್ತಿದೆ, ಆ ಮೂಲಕ ಉದ್ಯೋಗ ಸೃಷ್ಟಿಕರ್ತರಾಗಲು ಮತ್ತು ಸ್ಥಳೀಯ ರಕ್ಷಣಾ ಉತ್ಪನ್ನಗಳನ್ನು ತಯಾರಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆ ತಗ್ಗಿಸಿ ಆ ಯುವಕರನ್ನು  ಸಬಲೀಕರಣಗೊಳಿಸುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದರು.

"ಸ್ಟಾರ್ಟ್ ಅಪ್ ಮಂಥನ್" ಗೆ ನವೋದ್ಯಮಗಳು, ಉದ್ಯಮ ಮತ್ತು ಇತರೆ ಭಾಗಿದಾರರ ಉತ್ಸಾಹದಿಂದ ಕೂಡಿದ ಸ್ಪಂದನೆಯನ್ನು ಶ್ಲಾಘಿಸಿದ ಅವರು, ಭಾರತವು ನಾವೀನ್ಯತೆ ಕ್ಷೇತ್ರದಲ್ಲಿ ಜಗತ್ತಿಗೆ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ಭಾರತೀಯ ರಕ್ಷಣಾ ಸ್ಟಾರ್ಟ್-ಅಪ್ ಪೂರಕ ವ್ಯವಸ್ಥೆಯ ಉತ್ಸವವಾಗಿದೆ ಮತ್ತು ಐಡೆಕ್ಸ್ ನ ಯಶಸ್ಸಿನ ಸಂಕೇತವಾಗಿದೆ ಎಂದು ಅವರು ಹೇಳಿದರು. “ಐಡೆಕ್ಸ್ ಹಲವು ದೇಶೀಯವಾಗಿ ಕಂಡುಹಿಡಿದ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಹಾಯ ಮಾಡಿದೆ ಮತ್ತು ನಾವೀನ್ಯತೆಗಳು ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ಪ್ರದರ್ಶಿಸಲು ಪ್ರಮುಖ ವೇದಿಕೆ ಒದಗಿಸಿದೆ. ಐಡೆಕ್ಸ್ ನಿಂದಾಗಿ ಅಭಿವೃದ್ಧಿ ಹೊಂದಿದ ನವೋದ್ಯಮಗಳು ಸಹ ಬೇಡಿಕೆಯನ್ನು ಪಡೆಯುತ್ತಿವೆ, ಇದು ದೇಶದಲ್ಲಿ ನವೋದ್ಯಮ ಪೂರಕ ವ್ಯವಸ್ಥೆಯನ್ನು ಉತ್ತೇಜಿಸಿದೆ. ಐಡೆಕ್ಸ್ ವೃತ್ತಿಪರರಿಗೆ ಕೃತಕ ಬುದ್ಧಿಮತ್ತೆ, ಆಗ್ಯುಮೆಂಟೆಡ್ ರಿಯಾಲಿಟಿ ಮತ್ತು ಬ್ಲಾಕ್-ಚೈನ್‌ನಂತಹ ಭವಿಷ್ಯದ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ನೀಡಿದೆ’’ ಎಂದು ಅವರು ಹೇಳಿದರು.

ಐಡೆಕ್ಸ್ ಹಲವು ನವೋದ್ಯಮಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ, ಇದು ನಮ್ಮ ಕೌಶಲ್ಯ ಮತ್ತು ಅರೆ ಕೌಶಲ್ಯ ಹೊಂದಿದ ಕಾರ್ಮಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಸೃಷ್ಟಿಗೆ ಕಾರಣವಾಗಿದೆ ಎಂದು ರಕ್ಷಣಾ ಸಚಿವರು ಮಾಹಿತಿ ನೀಡಿದರು. ಈ ಪರಿಣಾಮವನ್ನು ಗುರುತಿಸಿ, ವೇದಿಕೆಗೆ ನಾವೀನ್ಯ ವಿಭಾಗದಲ್ಲಿ ಪ್ರಧಾನಮಂತ್ರಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ರಕ್ಷಣಾ ಸಚಿವಾಲಯವು ತಮ್ಮ ಉದ್ಯೋಗ ಸೃಷ್ಟಿ ಸಾಮರ್ಥ್ಯದ ಕಾರಣದಿಂದ ನವೋದ್ಯಮಗಳು ಮತ್ತು ಎಂಎಸ್‌ಎಂಇಗಳಿಂದ ಖರೀದಿಗಾಗಿ ಸರಳೀಕೃತ, ತ್ವರಿತ ವಿಧಾನವನ್ನು ರೂಪಿಸಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ. ರಕ್ಷಣಾ ಪೂರಕ ವ್ಯವಸ್ಥೆಯಲ್ಲಿ ಆತ್ಮನಿರ್ಭರ ಭಾರತಕ್ಕೆ ಐಡೆಕ್ಸ್ ಕೊಡುಗೆ ನೀಡಿದೆ ಮತ್ತು ಹೊಸ ಅವಕಾಶಗಳ ಮೂಲಕ ಉದ್ಯಮಿಗಳನ್ನು ಬೆಂಬಲಿಸಲು ಮತ್ತು ನೀತಿ ಮಧ್ಯಸ್ಥಿಕೆಗಳ ಮೂಲಕ ತಂತ್ರಜ್ಞಾನಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಸರ್ಕಾರದ ಬದ್ಧತೆ ತೋರುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಆ ನಿಟ್ಟಿನಲ್ಲಿ ನಾವೀನ್ಯಕಾರರು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಲು ಸರ್ಕಾರ ಹಲವು ಅನುದಾನಗಳನ್ನು ಪರಿಚಯಿಸಿದೆ ಎಂದರು.

ವಸಾಹತುಶಾಹಿಯಿಂದಾಗಿ ಭಾರತವು ಕೈಗಾರಿಕಾ ಕ್ರಾಂತಿಯ ಲಾಭವನ್ನು ಪಡೆಯಲು ಸಾಧ್ಯವಾಗಿರಲಿಲ್ಲ, ಅದು ಹಲವು ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದರು. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಆಕರ್ಷಿಸಲು ಅನುವು ಮಾಡಿಕೊಡಲು ಸ್ಪರ್ಧೆಯ ಮಾನದಂಡಗಳನ್ನು ಬದಲಾಯಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅಭಿವೃದ್ಧಿಗಾಗಿ ಸ್ಪರ್ಧೆಯನ್ನು ಮರು ವ್ಯಾಖ್ಯಾನಿಸುವ ಅಗತ್ಯತೆ ಇದೆ ಮತ್ತು ಬಳಕೆಯಲ್ಲಿಲ್ಲದ ತಂತ್ರಜ್ಞಾನಗಳು ಮತ್ತು ಉತ್ಪಾದನಾ ವ್ಯವಸ್ಥೆಗಳ ಮೇಲಿನ ಅವಲಂಬನೆಯಿಂದ ದೂರ ಸರಿಯುವ ಕಾಲ ಬಂದಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಹೊಸ ಕ್ಷೇತ್ರಗಳಲ್ಲಿ ಆವಿಷ್ಕಾರ ಮಾಡುವುದರಿಂದ ರಾಷ್ಟ್ರಗಳ ನಡುವಿನ ಅಂತರ ತಗ್ಗಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಯುಪಿಐ ಪಾವತಿ ಉದಾಹರಣೆ ನೀಡಿದ ಅವರು, ಭಾರತೀಯ ಯುವಕರು ಅದನ್ನು ಅಭಿವೃದ್ಧಿಪಡಿಸಿ ಮತ್ತು ಜಗತ್ತಿಗೆ ಪರಿಚಯಿಸಿದ ನವೀನ ತಂತ್ರಜ್ಞಾನವಾಗಿದೆ,  ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಕಲಿಯಲು ಈ ತಂತ್ರಜ್ಞಾನವನ್ನು ಅಧ್ಯಯನ ಮಾಡುತ್ತಿವೆ ಎಂದು ಹೇಳಿದರು. ಮುಂದಿನ ತಲೆಮಾರಿನ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಲು ಅಸ್ತಿತ್ವದಲ್ಲಿರುವ ವಿಧಾನಗಳಲ್ಲಿ ಇದೇ ರೀತಿಯ ಆವಿಷ್ಕಾರಗಳನ್ನು ಪರಿಚಯಿಸಲು ಅಥವಾ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಅವರು ಕರೆ ನೀಡಿದರು. ಸ್ಟಾರ್ಟ್-ಅಪ್ ಮಂಥನ್‌ನಲ್ಲಿ ಭಾಗವಹಿಸುವ ಎಲ್ಲ ಯುವಕರು ಭಾರತದ ಭವಿಷ್ಯದ ವಿನ್ಯಾಸಕರು ಎಂದು ಶ್ಲಾಘಿಸಿದದ ಅವರು, ನಮ್ಮ ರಾಷ್ಟ್ರದ 'ಪೂರ್ವನಿರ್ಧರಿತ ಹಣೆಬರಹ’ ವನ್ನು ಮೀರಿ 'ನಮ್ಮ ಹಣೆಬರಹವನ್ನು ರೂಪಿಸಿಕೊಳ್ಳಿ' ಎಂಬ ಹೊಸ ಮಂತ್ರದತ್ತ ಸಾಗುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕರೆ ನೀಡಿದರು.

ಡಿಐಎಸ್ ಸಿ-9, ಗೃಹ ವ್ಯವಹಾರಗಳ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (i4C) ವಿಭಾಗದೊಂದಿಗೆ ಐಡೆಕ್ಸ್ ನ ಮೊದಲ ಸಹಯೋಗವಾಗಿದೆ. ಈ ಸವಾಲುಗಳನ್ನು ಸೇವೆಗಳು, ಡಿಪಿಎಸ್ ಯು ಗಳು ಮತ್ತು ಗೃಹ ವ್ಯವಹಾರಗಳ ಸಚಿವಾಲಯದಿಂದ ಸಂಗ್ರಹಿಸಲಾಗಿದೆ, ಇದು ನಮ್ಮ ರಕ್ಷಣಾ ಉದ್ಯಮದಲ್ಲಿ ಐಡೆಕ್ಸ್ ಸೃಷ್ಟಿಸಿರುವ ಗಾಢ ಪ್ರಭಾವ ಮತ್ತು ಆಸಕ್ತಿ ಬಹಿರಂಗಪಡಿಸುತ್ತದೆ. ಡಿಐಎಸ್ ಸಿ 6,  ಐಡೆಕ್ಸ್ ಪ್ರೈಮ್‌ನ ಮೊದಲ ಮೂರು ಆವೃತ್ತಿಗಳು ಮತ್ತು ಓಪನ್ ಚಾಲೆಂಜ್ 5 ಮತ್ತು 6 ರ ವಿಜೇತರನ್ನು ಸಹ ಗೌರವಿಸಲಾಯಿತು. ರಕ್ಷಣಾ ಬಾಹ್ಯಾಕಾಶ (ಮಿಷನ್ ಡೆಫ್‌ಸ್ಪೇಸ್) ಮಿಷನ್ ಅಡಿಯಲ್ಲಿ ಸ್ಪರ್ಧೆಯ ಒಂದನೇ ಹಂತದ ವಿಜೇತರನ್ನು ಘೋಷಿಸಲಾಯಿತು ಮತ್ತು ಗೌರವಿಸಲಾಯಿತು. ಐಡೆಕ್ಸ್- ಡಿಐಒ ನಿಂದ ಬೆಂಬಲಿತ ಸ್ಟಾರ್ಟ್-ಅಪ್‌ಗಳ  ಪ್ರದರ್ಶನದಲ್ಲಿ ಸ್ವಾಯತ್ತ ವ್ಯವಸ್ಥೆಗಳು, ಅತ್ಯಾಧುನಿಕ ಸೆನ್ಸಾರ್ ಗಳು,  ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಉದ್ಯಮ 4.0 ವಲಯಗಳಲ್ಲಿ ನಾವೀನ್ಯಕಾರರು ಭವ ಇಷ್ಯದ ತಂತ್ರಜ್ಞಾನದ ಬೆಳವಣಿಗೆಗಳನ್ನು ಪ್ರದರ್ಶಿಸಿದರು.

'ಐಡೆಕ್ಸ್ ಹೂಡಿಕೆದಾರರ ತಾಣ' ರಕ್ಷಣಾ ವಲಯದಲ್ಲಿ ಹೂಡಿಕೆಯನ್ನು ವೇಗಗೊಳಿಸಲು ಮತ್ತು ಹೂಡಿಕೆದಾರರಿಗೆ ಅವಕಾಶಗಳು ಮತ್ತು ನಾವೀನ್ಯತೆಗಳ ಸಮಗ್ರ ಚಿತ್ರಣವನ್ನು ನೀಡುವ ಗುರಿ ಹೊಂದಿದೆ. ರಕ್ಷಣಾ ನಾವೀನ್ಯ ಸಂಸ್ಥೆ (ಡಿಐಒ) ಮಂಥನ್ ದಲ್ಲಿ ಪ್ರಮುಖ ಹೂಡಿಕೆದಾರರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ. ಆಕ್ಸಿಸ್ ಬ್ಯಾಂಕ್‌ನೊಂದಿಗೆ ಮತ್ತೊಂದು  ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಡಿಐಒ ಡಿಫೆನ್ಸ್ ಸ್ಪೇಸ್ ಅನ್ನು ಮತ್ತಷ್ಟು ಬಲಪಡಿಸಲು ಇಸ್ರೋ, ಇನ್-ಸ್ಪೇಸ್‌ ಮತ್ತು ಐಎಸ್ ಪಿಎ ಗಳೊಂದಿಗೆ ಜ್ಞಾಪನಾ ಪತ್ರಗಳಿಗೆ ಸಹಿ ಹಾಕಲಾಗಿದೆ. ಭವಿಷ್ಯದಲ್ಲಿ ಸ್ಟಾರ್ಟ್ ಅಪ್ ಸ್ಪರ್ಧೆಗಳನ್ನು ಸಮರ್ಥವಾಗಿ ಆರಂಭಿಸಲು ಗಡಿ ರಸ್ತೆ ಅಭಿವೃದ್ಧಿ ಸಂಸ್ಥೆ ( ಬಿಆರ್ ಒ) ನೊಂದಿಗೆ ಮತ್ತೊಂದು ಒಡಂಬಡಿಕೆಗೆ ಸಹಿ ಹಾಕಲಾಯಿತು. ಇನೋವೇಟ್ ಫಾರ್ ಡಿಫೆನ್ಸ್ ಇಂಟರ್ನ್‌ಶಿಪ್ (i4D) ನ ನಾಲ್ಕನೇ ಆವೃತ್ತಿಗೂ ಸಹ ಚಾಲನೆ ನೀಡಲಾಯಿತು, ಇದು ದೇಶಾದ್ಯಂತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಸ್ಥಳೀಯ ರಕ್ಷಣಾ ಸಂಶೋಧನೆ, ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನಾ ಪೂರಕ ವ್ಯವಸ್ಥೆಗಾಗಿ ಭಾರತೀಯ ಸೇನೆಯ 110 ಸಮಸ್ಯೆಗಳ ಸಂಕಲನವನ್ನು ರಕ್ಷಣಾ ಸಚಿವರು ಬಿಡುಗಡೆ ಮಾಡಿದರು.ಈ ಸಮಸ್ಯೆಗಳ ಹೇಳಿಕೆಗಳಲ್ಲಿ, ಭಾರತೀಯ ಸೇನೆಯ ತಾಂತ್ರಿಕ ಸವಾಲುಗಳು ಮತ್ತು ಶಸ್ತ್ರಾಸ್ತ್ರ, ಕಣ್ಗಾವಲು ಮತ್ತು ಅಗ್ನಿ ನಿಯಂತ್ರಣ ವ್ಯವಸ್ಥೆಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಮೆಟಾವರ್ಸ್, ರೊಬೊಟಿಕ್ಸ್, ಕ್ವಾಂಟಮ್ ಟೆಕ್ನಾಲಜಿ, ಸೈಬರ್, ಯುದ್ಧಸಾಮಗ್ರಿಗಳ ಸ್ಮಾರ್ಟ್ ಗೊಳಿಸುವುದು, ಮತ್ತಿತರ ನಿರ್ದಿಷ್ಟ ವಲಯಗಳಿಂದ ಹಿಡಿದು ಹಲವು ವಲಯಗಳಲ್ಲಿನ ಅಗತ್ಯತೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಹೊಸ ತಂತ್ರಜ್ಞಾನಗಳ ಸೇರ್ಪಡೆ, ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ನವೀಕರಣ ಮತ್ತು ನಿರ್ಣಾಯಕ ಘಟಕಗಳ ಸ್ವದೇಶೀಕರಣವೂ ಒಳಗೊಂಡಿದೆ. ಈ ಸಂಕಲನದಲ್ಲಿ ಸ್ಥಳೀಯ ಪರಿಹಾರಗಳೊಂದಿಗೆ ಭಾರತೀಯ ಸೇನೆಯನ್ನು ಆಧುನೀಕರಿಸುವ ಕೇಂದ್ರೀಕೃತ ಪ್ರಯತ್ನಗಳನ್ನು ಸಕ್ರಿಯಗೊಳಿಸಲಾಗುತ್ತದೆ, ಆ ಮೂಲಕ ಸದೃಢ ಮತ್ತು ಆತ್ಮನಿರ್ಭರ ಭಾರತವನ್ನು ನಿರ್ಮಿಸುತ್ತದೆ. ಐಡೆಕ್ಸ್, ತಂತ್ರಜ್ಞಾನ ಅಭಿವೃದ್ಧಿ ನಿಧಿ(ಟಿಡಿಎಫ್) ಮತ್ತು ಸೇನಾ ತಂತ್ರಜ್ಞಾನ ಮಂಡಳಿ (ಎಟಿಬಿ) ಸೇರಿದಂತೆ ನಾನಾ ಸಂಶೋಧನೆ ಮತ್ತು ಅಭಿವೃದ್ಧಿ ವಿಧಾನಗಳ ಮೂಲಕ ಉದ್ಯಮ ಮತ್ತು ಶೈಕ್ಷಣಿಕ ವಲಯವನ್ನು ಭಾರತೀಯ ಸೇನೆಯು ಕೈಹಿಡಿದು ಬೆಂಬಲಿಸುತ್ತಿದೆ. 

ಐಡೆಕ್ಸ್- ಡಿಐಒ, ಎಸ್ ಪಿಆರ್ ಐಎನ್ ಟಿ (SPRINT) ಉಪಕ್ರಮದಡಿಯಲ್ಲಿ ಆರಂಭಿಸಲಾದ ಭಾರತೀಯ ನೌಕಾಪಡೆಯ ಪ್ರಧಾನ ಸ್ಪರ್ಧೆಯ ವಿಜೇತರೊಂದಿಗೆ ತನ್ನ 200ನೇ ಒಪ್ಪಂದಕ್ಕೆ ಸಹಿ ಹಾಕಿದೆ.
                                               

ABB/SPS/Savvy

 

****



(Release ID: 1899534) Visitor Counter : 152