ರಕ್ಷಣಾ ಸಚಿವಾಲಯ
ಫೆಬ್ರವರಿ 13 ರಂದು ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2023ನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಐದು ದಿನಗಳ ಈ ಕಾರ್ಯಕ್ರಮದಲ್ಲಿ 809 ಕಂಪನಿಗಳು ದೇಶದ ವೈಮಾನಿಕ ಕ್ಷೇತ್ರ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಪ್ರದರ್ಶಿಸಲಿವೆ; ಹಂಚಿಕೆಯ ಜಾಗತಿಕ ಸಮೃದ್ಧಿಗಾಗಿ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ದೃಷ್ಟಿಕೋನವನ್ನು ಸಾಧಿಸಲು ಹೊರಹೊಮ್ಮಲಿರುವ ಹೊಸ ಪಾಲುದಾರಿಕೆಗಳು
32 ರಕ್ಷಣಾ ಸಚಿವರು ಹಾಗೂ 73 ಜಾಗತಿಕ ಸಿಇಓಗಳು ಮತ್ತು ಭಾರತೀಯ ಒಇಎಂಗಳು ಭಾಗವಹಿಸುವ ಸಾಧ್ಯತೆಯಿದೆ
ರಕ್ಷಣಾ ಸಚಿವರ ಸಮಾವೇಶ; ಸಿಇಓಗಳ ದುಂಡುಮೇಜಿನ ಸಭೆ; ಇಂಡಿಯಾ ಪೆವಿಲಿಯನ್ ನಲ್ಲಿ ಪೂರ್ಣ ಕಾರ್ಯಾಚರಣೆ ಸಾಮರ್ಥ್ಯ ಸಂರಚನೆಯಲ್ಲಿ ಎಲ್.ಸಿಎ-ತೇಜಸ್ ವಿಮಾನ ಮತ್ತು ಉಸಿರು ಬಿಗಿ ಹಿಡಿಸುವ ವೈಮಾನಿಕ ಪ್ರದರ್ಶನಗಳು ಈ 14ನೇ ಆವೃತ್ತಿಯ ಭಾಗವಾಗಲಿವೆ; 75,000 ಕೋಟಿ ರೂ.ಗಳ ಮೌಲ್ಯದ 251 ತಿಳಿವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ
ಏರೋ ಇಂಡಿಯಾ 2023 ನವ ಭಾರತದ ಪ್ರಗತಿ ಮತ್ತು ಉತ್ಪಾದನಾ ಪರಾಕ್ರಮವನ್ನು ಪ್ರದರ್ಶಿಸುತ್ತದೆ; 'ಆತ್ಮನಿರ್ಭರತೆ'ಯ ಗುರಿಯನ್ನು ಸಾಧಿಸಲು ವಿಶ್ವದರ್ಜೆಯ ದೇಶೀಯ ರಕ್ಷಣಾ ಉದ್ಯಮವನ್ನು ರೂಪಿಸುವುದು ನಮ್ಮ ಗುರಿಯಾಗಿದೆ: ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್
Posted On:
12 FEB 2023 6:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ರ ಫೆಬ್ರವರಿ 13 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ - ಏರೋ ಇಂಡಿಯಾ 2023 ರ 14 ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವು 'ಶತಕೋಟಿ ಅವಕಾಶಗಳಿಗೆ ರನ್ ವೇ' ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿದ್ದು, ವೈಮಾನಿಕ ಕ್ಷೇತ್ರ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸುವ ಮೂಲಕ ಸದೃಢ ಮತ್ತು ಸ್ವಾವಲಂಬಿ 'ನವ ಭಾರತ'ದ ಉದಯವನ್ನು ಹೊರಸೂಸುತ್ತದೆ. ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ದೃಷ್ಟಿಕೋನಕ್ಕೆ ಅನುಗುಣವಾಗಿ ದೇಶೀಯ ಉಪಕರಣಗಳು / ತಂತ್ರಜ್ಞಾನಗಳನ್ನು ಪ್ರದರ್ಶಿಸಿ ವಿದೇಶಿ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ರೂಪಿಸುವತ್ತ ಗಮನ ಹರಿಸಲಾಗುತ್ತದೆ.
2023ರ ಫೆಬ್ರವರಿ 12, ರಂದು ಬೆಂಗಳೂರಿನಲ್ಲಿ ಪ್ರದರ್ಶನ ಪೂರ್ವ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಏರೋ ಇಂಡಿಯಾ 2023 ದೇಶದ ಉತ್ಪಾದನಾ ಪರಾಕ್ರಮವನ್ನು ಮತ್ತು ಪ್ರಧಾನಮಂತ್ರಿಯವರ ದೃಷ್ಟಿಕೋನವಾದ 'ಆತ್ಮನಿರ್ಭರ ಭಾರತ'ವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಧಿಸಿದ ಪ್ರಗತಿಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮವು ವೈಮಾನಿಕ ಕ್ಷೇತ್ರ ಮತ್ತು ವಾಯುಯಾನ ಕ್ಷೇತ್ರದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಲಿದೆ ಎಂದು ಅವರು ಹೇಳಿದರು.
ಅತಿ ದೊಡ್ಡ ಏರೋ ಇಂಡಿಯಾ
ಫೆಬ್ರವರಿ 13 ರಿಂದ 15 ರವರೆಗೆ ವಹಿವಾಟಿನ ದಿನಗಳಾಗಿದ್ದು, 16 ಮತ್ತು 17ರಂದು ಪ್ರದರ್ಶನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಲು ಸಾರ್ವಜನಿಕ ದಿನ ಎಂದು ನಿಗದಿಪಡಿಸಲಾಗಿದೆ. ಈ ಕಾರ್ಯಕ್ರಮವು, ರಕ್ಷಣಾ ಮಂತ್ರಿಗಳ ಸಮಾವೇಶ; ಸಿಇಒಗಳ ದುಂಡುಮೇಜಿನ ಸಭೆ; ಮಂಥನ್ ನವೋದ್ಯಮ ಕಾರ್ಯಕ್ರಮ; ಬಂಧನ್ ಸಮಾರಂಭ; ಉಸಿರು ಬಿಗಿಹಿಡಿಸುವ ವೈಮಾನಿಕ ಪ್ರದರ್ಶನಗಳು; ಒಂದು ಬೃಹತ್ ಪ್ರದರ್ಶನ; ಇಂಡಿಯಾ ಪೆವಿಲಿಯನ್ ಮತ್ತು ವೈಮಾನಿಕ ಕ್ಷೇತ್ರದ ಕಂಪನಿಗಳ ವ್ಯಾಪಾರ ಮೇಳ ಒಳಗೊಂಡಿದೆ.
ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಸುಮಾರು 35,000 ಚದರ ಮೀಟರ್ ಪ್ರದೇಶದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ 98 ದೇಶಗಳು ಭಾಗವಹಿಸುವ ಸಾಧ್ಯತೆಯಿದೆ. 32 ದೇಶಗಳ ರಕ್ಷಣಾ ಸಚಿವರು, 29 ದೇಶಗಳ ವಾಯುಪಡೆ ಮುಖ್ಯಸ್ಥರು ಮತ್ತು 73 ಜಾಗತಿಕ ಸಿಇಒಗಳು ಮತ್ತು ಭಾರತೀಯ ಒಇಎಂಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಎಂಎಸ್ಎಂಇಗಳು ಮತ್ತು ನವೋದ್ಯಮಗಳು ಸೇರಿದಂತೆ ಎಂಟುನೂರ ಒಂಬತ್ತು (809) ರಕ್ಷಣಾ ಕಂಪನಿಗಳು ಪ್ರಮುಖ ತಂತ್ರಜ್ಞಾನಗಳ ಪ್ರಗತಿ ಮತ್ತು ವೈಮಾನಿಕ ಕ್ಷೇತ್ರ ಮತ್ತು ರಕ್ಷಣಾ ಕ್ಷೇತ್ರದ ಪ್ರಗತಿಯನ್ನು ಪ್ರದರ್ಶಿಸಲಿವೆ.
ದಾಖಲೆಯ ಅಂತಾರಾಷ್ಟ್ರೀಯ ಪಾಲ್ಗೊಳ್ಳುವಿಕೆಯು ವಿವಿಧ ದೇಶಗಳೊಂದಿಗೆ ಭಾರತದ ಖರೀದಿದಾರ-ಮಾರಾಟಗಾರರ ಸಂಬಂಧಗಳ ಪ್ರತಿಬಿಂಬ ಮಾತ್ರವಲ್ಲ, ಜಾಗತಿಕ ಸಮೃದ್ಧಿಯ ಅವರ ಹಂಚಿಕೆಯ ದೂರದೃಷ್ಟಿಯ ಪ್ರತಿಬಿಂಬವಾಗಿದೆ ಎಂದು ರಕ್ಷಣಾ ಸಚಿವರು ಬಣ್ಣಿಸಿದರು.
ಪ್ರಮುಖ ಪ್ರದರ್ಶಕರು ಮತ್ತು ಸಲಕರಣೆಗಳು
ಏರ್ ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಲಾಕ್ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ, ಬ್ರಹ್ಮೋಸ್ ಏರೋಸ್ಪೇಸ್, ಆರ್ಮಿ ಏವಿಯೇಷನ್, ಎಚ್.ಸಿ. ರೊಬೊಟಿಕ್ಸ್, ಎಸ್ಎಎಬಿ, ಸಫ್ರಾನ್, ರೋಲ್ಸ್ ರಾಯ್ಸ್, ಲಾರ್ಸನ್ ಮತ್ತು ಟೂಬ್ರೊ, ಭಾರತ್ ಫೋರ್ಜ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಮತ್ತು ಬಿಇಎಂಎಲ್ ಲಿಮಿಟೆಡ್ ಪ್ರಮುಖ ಪ್ರದರ್ಶಕರಲ್ಲಿ ಸೇರಿವೆ. ಸುಮಾರು ಐದು ಲಕ್ಷ ಸಂದರ್ಶಕರು ಈ ಕಾರ್ಯಕ್ರಮಕ್ಕೆ ಭೌತಿಕವಾಗಿ ಹಾಜರಾಗುವ ನಿರೀಕ್ಷೆಯಿದೆ ಮತ್ತು ಇನ್ನೂ ಲಕ್ಷಾಂತರ ಜನರು ದೂರದರ್ಶನ ಮತ್ತು ಅಂತರ್ಜಾಲದ ಮೂಲಕ ಸಂಪರ್ಕ ಸಾಧಿಸುತ್ತಾರೆ.
ಏರೋ ಇಂಡಿಯಾ 2023 ವಿನ್ಯಾಸ ನಾಯಕತ್ವ, ಯುಎವಿ ವಲಯದ ಬೆಳವಣಿಗೆ, ರಕ್ಷಣಾ ಬಾಹ್ಯಾಕಾಶ ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ. ಲಘು ಯುದ್ಧ ವಿಮಾನ (ಎಲ್.ಸಿ.ಎ) -ತೇಜಸ್, ಎಚ್.ಐ.ಟಿ -40, ಡಾರ್ನಿಯರ್ ಲಘು ಯುಟಿಲಿಟಿ ಹೆಲಿಕಾಪ್ಟರ್ (ಎಲ್.ಯು.ಎಚ್), ಲಘು ಯುದ್ಧ ಹೆಲಿಕಾಪ್ಟರ್ (ಎಲ್.ಸಿ.ಎಚ್) ಮತ್ತು ಮುಂದುವರಿದ ಲಘು ಹೆಲಿಕಾಪ್ಟರ್ (ಎಎಲ್ಎಚ್) ನಂತಹ ದೇಶೀಯ ವಾಯು ವೇದಿಕೆಗಳ ರಫ್ತನ್ನು ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಇದು ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶೀಯ ಎಂಎಸ್ಎಂಇಗಳು ಮತ್ತು ನವೋದ್ಯಮಗಳನ್ನು ಸಂಯೋಜಿಸುತ್ತದೆ ಮತ್ತು ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ಪಾಲುದಾರಿಕೆ ಸೇರಿದಂತೆ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುತ್ತದೆ.
ಏರೋ ಇಂಡಿಯಾ 2023 ರಕ್ಷಣಾ ಮತ್ತು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ 'ಆತ್ಮನಿರ್ಭರತೆ' ಗುರಿಯನ್ನು ಸಾಧಿಸುವ ಸಲುವಾಗಿ ರೋಮಾಂಚಕ ಮತ್ತು ವಿಶ್ವದರ್ಜೆಯ ದೇಶೀಯ ರಕ್ಷಣಾ ಉದ್ಯಮವನ್ನು ರೂಪಿಸುವ ಸರ್ಕಾರದ ಪ್ರಯತ್ನಗಳಿಗೆ ಹೊಸ ಉತ್ತೇಜನವನ್ನು ನೀಡುತ್ತದೆ ಎಂದು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. "ಸದೃಢ ಮತ್ತು ಸ್ವಾವಲಂಬಿ ರಕ್ಷಣಾ ವಲಯವು ಮುಂಬರುವ ದಿನಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ಷಣಾ ಕ್ಷೇತ್ರದ ಸಾಧನೆಗಳು ಭಾರತೀಯ ಆರ್ಥಿಕತೆಗೆ ವ್ಯಾಪಕವಾದ ಪ್ರಯೋಜನಗಳನ್ನು ನೀಡುತ್ತವೆ. ಈ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು ನಾಗರಿಕ ಉದ್ದೇಶಗಳಿಗೆ ಸಮಾನವಾಗಿ ಉಪಯುಕ್ತವಾಗಿವೆ. ಇದಲ್ಲದೆ, ಸಮಾಜದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆಯ ಬಗ್ಗೆ ಮನೋಧರ್ಮವನ್ನು ಸೃಷ್ಟಿಸಲಾಗುತ್ತದೆ, ಇದು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.
ರಕ್ಷಣಾ ಸಚಿವರ ಸಮಾವೇಶ
ರಕ್ಷಣಾ ಸಚಿವರು ಫೆಬ್ರವರಿ 14 ರಂದು ರಕ್ಷಣಾ ಸಚಿವರುಗಳ ಸಮಾವೇಶವನ್ನು ಆಯೋಜಿಸಲಿದ್ದಾರೆ. 'ರಕ್ಷಣೆಯಲ್ಲಿ ವರ್ಧಿತ ಕಾರ್ಯಕ್ರಮಗಳ ಮೂಲಕ ಹಂಚಿಕೆಯ ಸಮೃದ್ಧಿ (ಎಸ್.ಪಿ.ಇ.ಇ.ಡಿ -ಸ್ಪೀಡ್) ಎಂಬ ವಿಷಯದ ಮೇಲೆ ಆಯೋಜಿಸಲಾಗಿರುವ ಸಭೆಯಲ್ಲಿ ಸ್ನೇಹಪರ ವಿದೇಶಗಳ ರಕ್ಷಣಾ ಸಚಿವರು ಭಾಗವಹಿಸಲಿದ್ದಾರೆ. ಈ ಸಮಾವೇಶವು ಸಾಮರ್ಥ್ಯ ವರ್ಧನೆ (ಹೂಡಿಕೆಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಜಂಟಿ ಸಹಯೋಗ, ಸಹ-ಅಭಿವೃದ್ಧಿ, ಸಹ-ಉತ್ಪಾದನೆ ಮತ್ತು ರಕ್ಷಣಾ ಸಲಕರಣೆಗಳ ಒದಗಿಸುವಿಕೆ), ತರಬೇತಿ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಡಲ ಭದ್ರತೆಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಿದೆ. 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ದೃಷ್ಟಿಕೋನವನ್ನು ಮುಂದುವರಿಸಲು ರಕ್ಷಣಾ ಸಚಿವರಿಗೆ ಪರಸ್ಪರ ತೊಡಗಿಸಿಕೊಳ್ಳಲು ಈ ಸಮಾವೇಶವು ಒಂದು ಅವಕಾಶವಾಗಿದೆ.
ರಕ್ಷಣಾ ಸಚಿವರ ಸಮಾವೇಶ ಒಂದು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಅದು ಮಿತ್ರ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರ ಹೆಚ್ಚಳಕ್ಕೆ ವೇಗ – (ಸ್ಪೀಡ್) ಒದಗಿಸುವ ಮೂಲಕ ಧ್ಯೇಯವಾಕ್ಯವನ್ನು ಸಮರ್ಥಿಸುತ್ತದೆ ಎಂದು ರಾಜನಾಥಸಿಂಗ್ ಬಣ್ಣಿಸಿದರು.
ದ್ವಿಪಕ್ಷೀಯ ಸಭೆಗಳು
ಏರೋ ಇಂಡಿಯಾ 2023 ರ ಹೊರತಾಗಿ, ರಕ್ಷಣಾ ಸಚಿವರು, ರಕ್ಷಣಾ ರಾಜ್ಯ ಸಚಿವರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿ ಮಟ್ಟದಲ್ಲಿ ಹಲವಾರು ದ್ವಿಪಕ್ಷೀಯ ಸಭೆಗಳು ನಡೆಯಲಿವೆ. ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಮೂಲಕ ಸ್ನೇಹಪರ ರಾಷ್ಟ್ರಗಳೊಂದಿಗೆ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದ ಸಂಬಂಧಗಳ ವರ್ಧನೆಗೆ ಗಮನ ಹರಿಸಲಾಗುವುದು.
ಸಿಇಓಗಳ ದುಂಡು ಮೇಜಿನ ಸಭೆ
ಫೆಬ್ರವರಿ13 ರಂದು ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ 'ಸಿಇಓಗಳ ದುಂಡು ಮೇಜಿನ ಸಭೆ' 'ಆಕಾಶ ಮಿತಿಯಲ್ಲ: ಗಡಿಗಳನ್ನು ಮೀರಿದ ಅವಕಾಶಗಳು' ಎಂಬ ವಿಷಯದ ಮೇಲೆ ನಡೆಯಲಿದೆ. ಇದು 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಉತ್ತೇಜಿಸುವ ದೃಷ್ಟಿಯಿಂದ ಕೈಗಾರಿಕಾ ಪಾಲುದಾರರು ಮತ್ತು ಸರ್ಕಾರದ ನಡುವೆ ಹೆಚ್ಚು ದೃಢವಾದ ಸಂವಾದಕ್ಕೆ ಅಡಿಪಾಯ ಹಾಕುವ ನಿರೀಕ್ಷೆಯಿದೆ. ಇದು ಭಾರತದಲ್ಲಿ 'ಸುಗಮ ವ್ಯಾಪಾರ'ವನ್ನು ಹೆಚ್ಚಿಸುತ್ತದೆ ಮತ್ತು ಭಾರತದಲ್ಲಿ ಉತ್ಪಾದನೆಗೆ ಮೂಲ ಸಲಕರಣೆ ತಯಾರಕರಿಗೆ (ಒಇಎಂ) ಅನುಕೂಲಕರ ವೇದಿಕೆಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ದುಂಡುಮೇಜಿನ ಸಭೆಯಲ್ಲಿ ಬೋಯಿಂಗ್, ಲಾಕ್ಹೀಡ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೀಬೆರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್, ಜನರಲ್ ಅಥಾರಿಟಿ ಆಫ್ ಮಿಲಿಟರಿ ಇಂಡಸ್ಟ್ರೀಸ್ (ಗಾಮಿ) ಸೇರಿದಂತೆ ಜಾಗತಿಕ ಹೂಡಿಕೆದಾರರು, 26 ದೇಶಗಳ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಜಾಗತಿಕ ಸಿಇಒಗಳು ಭಾಗವಹಿಸಲಿದ್ದಾರೆ. ದೇಶೀಯ ಪಿಎಸ್.ಯುಗಳಾದ ಎಚ್.ಎಎಲ್, ಬಿಇಎಲ್, ಬಿಡಿಎಲ್, ಬಿಇಎಂಎಲ್ ಲಿಮಿಟೆಡ್ ಮತ್ತು ಮಿಶ್ರಾ ಧಾತು ನಿಗಮ್ ಲಿಮಿಟೆಡ್ ಸಹ ಭಾಗವಹಿಸಲಿವೆ. ಭಾರತದ ಪ್ರಮುಖ ಖಾಸಗಿ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದ ಉತ್ಪಾದನಾ ಕಂಪನಿಗಳಾದ ಲಾರ್ಸನ್ ಮತ್ತು ಟೂಬ್ರೊ, ಭಾರತ್ ಫೋರ್ಜ್, ಡೈನಾಮ್ಯಾಟಿಕ್ ಟೆಕ್ನಾಲಜೀಸ್, ಬ್ರಹ್ಮೋಸ್ ಏರೋಸ್ಪೇಸ್ ಸಹ ಈ ಕಾರ್ಯಕ್ರಮದ ಭಾಗವಾಗುವ ಸಾಧ್ಯತೆಯಿದೆ.
ಸಿಇಓಗಳ ದುಂಡು ಮೇಜಿನ ಸಭೆಯು ವಿಶ್ವದ ಉನ್ನತ ವಾಣಿಜ್ಯ ನಾಯಕರ ಉಪಸ್ಥಿತಿಯಲ್ಲಿ ಭಾರತೀಯ ರಕ್ಷಣಾ ಉದ್ಯಮದ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಅನ್ವೇಷಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬಂಧನ್ ಸಮಾರಂಭ
ತಿಳಿವಳಿಕಾ ಒಡಂಬಡಿಕೆಗಳು/ ಒಪ್ಪಂದಗಳು, ತಂತ್ರಜ್ಞಾನಗಳ ವರ್ಗಾವಣೆ, ಉತ್ಪನ್ನ ಬಿಡುಗಡೆ ಮತ್ತು ಇತರ ಪ್ರಮುಖ ಪ್ರಕಟಣೆಗಳಿಗೆ ಸಹಿ ಹಾಕುವ ಬಂಧನ್ ಸಮಾರಂಭವು ಫೆಬ್ರವರಿ15 ರಂದು ನಡೆಯಲಿದೆ. ರಕ್ಷಣಾ ಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಭಾರತೀಯ/ ವಿದೇಶಿ ರಕ್ಷಣಾ ಕಂಪನಿಗಳು ಮತ್ತು ಸಂಸ್ಥೆಗಳ ನಡುವಿನ ಪಾಲುದಾರಿಕೆಗಾಗಿ 75,000 ಕೋಟಿ ರೂ.ಗಳ ನಿರೀಕ್ಷಿತ ಹೂಡಿಕೆಯೊಂದಿಗೆ 251 (251) ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಈ ಕಾರ್ಯಕ್ರಮವು ದೇಶ ಮತ್ತು ವಿದೇಶದ ಸಂಸ್ಥೆಗಳೊಂದಿಗೆ ಹೊಸ ಪಾಲುದಾರಿಕೆಯನ್ನು ರೂಪಿಸುತ್ತದೆ ಮತ್ತು ಒಟ್ಟಾಗಿ ಮುಂದೆಸಾಗುವ ಮೂಲಕ ಸಾಮೂಹಿಕ ಬೆಳವಣಿಗೆಯನ್ನು ಸಾಧಿಸುವುದನ್ನು ಖಚಿತಪಡಿಸುತ್ತದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಮಂಥನ್
ವಾರ್ಷಿಕ ರಕ್ಷಣಾ ನಾವೀನ್ಯತೆ ಕಾರ್ಯಕ್ರಮ ಮಂಥನ್ ಫೆಬ್ರವರಿ 15 ರಂದು ನಡೆಯಲಿರುವ ಪ್ರಮುಖ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮವಾಗಿದೆ. ರಕ್ಷಣಾ ಉತ್ಕೃಷ್ಟತೆಗಾಗಿ ನಾವೀನ್ಯತೆ (ಐಡೆಕ್ಸ್) ಆಯೋಜಿಸಿರುವ ಮಂಥನ್ ವೇದಿಕೆಯು ಪ್ರಮುಖ ಆವಿಷ್ಕಾರಕರು, ನವೋದ್ಯಮಗಳು, ಎಂಎಸ್ಎಂಇಗಳು, ಇನ್ಕ್ಯುಬೇಟರ್ ಗಳು, ಶಿಕ್ಷಣ ತಜ್ಞರು ಮತ್ತು ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರ ಪರಿಸರ ವ್ಯವಸ್ಥೆಯ ಹೂಡಿಕೆದಾರರನ್ನು ಒಂದೇ ಸೂರಿನಡಿ ತರಲಿದೆ. ರಕ್ಷಣಾ ಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸೈಬರ್ ಭದ್ರತೆಯ ಸವಾಲುಗಳ ಪ್ರಾರಂಭ, ಐಡೆಕ್ಸ್ ಇನ್ವೆಸ್ಟರ್ ಹಬ್ ಸ್ಥಾಪನೆ, ಹೂಡಿಕೆದಾರರೊಂದಿಗೆ ತಿಳಿವಳಿಕಾ ಒಡಂಬಡಿಕೆಗಳು ಸೇರಿದಂತೆ ಮಂಥನ್ ಅನೇಕ ಪ್ರಥಮಗಳನ್ನು ಹೊಂದಿರುತ್ತದೆ. ಮಂಥನ್ 2023 ರಕ್ಷಣಾ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸಲು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಐಡೆಕ್ಸ್ ನ ಭವಿಷ್ಯದ ದೃಷ್ಟಿಕೋನ / ಮುಂದಿನ ಉಪಕ್ರಮಗಳ ಅವಲೋಕನವನ್ನು ಒದಗಿಸುತ್ತದೆ.
ಶ್ರೀ ರಾಜನಾಥ್ ಸಿಂಗ್ ಅವರು 'ಮಂಥನ್' ಭಾರತದ ಉದಯೋನ್ಮುಖ ಉದ್ಯಮಿಗಳಿಗೆ ಒಂದು ವಿಶಿಷ್ಟ ವೇದಿಕೆ ಎಂದು ಬಣ್ಣಿಸಿದರು. "ಭಾರತದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ನವೋದ್ಯಮಗಳು ಮತ್ತು ಯುನಿಕಾರ್ನ್ ಗಳ ಸಂಖ್ಯೆಯು ಭಾರತವು ಇಂದು ನವೋದ್ಯಮಗಳಿಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮಂಥನದ ಮೂಲಕ, ರಕ್ಷಣಾ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಇ-ನಿರ್ವಹಣೆ, ವರ್ಧಿತ ಮತ್ತು ವರ್ಚುವಲ್ ವಾಸ್ತವಿಕತೆ, ಸ್ವಾಯತ್ತ ವ್ಯವಸ್ಥೆಗಳು ಮತ್ತು ಭವಿಷ್ಯದ ಪಡೆಗಳಿಗೆ ಇತರ ಆವಿಷ್ಕಾರಗಳ ಕ್ಷೇತ್ರದಲ್ಲಿ ನಮ್ಮ ಯುವಕರು ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತು ತಮ್ಮನ್ನು ಹಾಗೂ ರಕ್ಷಣಾ ವಲಯವನ್ನು ಸಬಲೀಕರಣಗೊಳಿಸಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಿದರು.
ಇಂಡಿಯಾ ಪೆವಿಲಿಯನ್
'ಫಿಕ್ಸೆಡ್ ವಿಂಗ್ ಪ್ಲಾಟ್ ಫಾರ್ಮ್' ವಿಷಯ ಆಧರಿಸಿದ 'ಇಂಡಿಯಾ ಪೆವಿಲಿಯನ್' ಭವಿಷ್ಯದ ನಿರೀಕ್ಷೆಗಳು ಸೇರಿದಂತೆ ಈ ಪ್ರದೇಶದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸುತ್ತದೆ. ಒಟ್ಟು 115 ಕಂಪನಿಗಳು 227 ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್.ಸಿ.ಎ-ತೇಜಸ್ ವಿಮಾನಗಳ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್ ಗಳು, ವ್ಯವಸ್ಥೆಗಳು (ಎಲ್.ಆರ್.ಯು.ಗಳು) ಇತ್ಯಾದಿಗಳನ್ನು ಪ್ರದರ್ಶಿಸುವುದನ್ನು ಒಳಗೊಂಡಿರುವ ಫಿಕ್ಸೆಡ್ ವಿಂಗ್ ವೇದೆಕೆ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಪ್ರಗತಿಯನ್ನು ಇದು ಮತ್ತಷ್ಟು ಪ್ರದರ್ಶಿಸುತ್ತದೆ. ರಕ್ಷಣಾ ಕ್ಷೇತ್ರ, ನ್ಯೂ ಟೆಕ್ನಾಲಜೀಸ್ ಮತ್ತು ಯುಎವಿ ವಿಭಾಗವೂ ಇರಲಿದ್ದು, ಇದು ಪ್ರತಿ ಕ್ಷೇತ್ರದಲ್ಲೂ ಭಾರತದ ಪ್ರಗತಿಯ ಬಗ್ಗೆ ಒಳನೋಟವನ್ನು ನೀಡುತ್ತದೆ.
ಪೂರ್ಣ ಕಾರ್ಯಾಚರಣೆ ಸಾಮರ್ಥ್ಯ (ಎಫ್ಒಸಿ) ಸಂರಚನೆಯಲ್ಲಿ ಪೂರ್ಣ ಪ್ರಮಾಣದ ಎಲ್.ಸಿ.ಎ-ತೇಜಸ್ ವಿಮಾನವು ಇಂಡಿಯಾ ಪೆವಿಲಿಯನ್ ನ ಕೇಂದ್ರವಾಗಿರುತ್ತದೆ. ಎಲ್.ಸಿ.ಎ ತೇಜಸ್ ಏಕ ಎಂಜಿನ್, ಕಡಿಮೆ ತೂಕ, ಹೆಚ್ಚು ಚುರುಕಾದ, ಬಹು ಪಾತ್ರದ ಸೂಪರ್ ಸಾನಿಕ್ ಯುದ್ಧವಿಮಾನವಾಗಿದೆ. ಇದು ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (ಎಫ್.ಸಿ.ಎಸ್) ಅನ್ನು ಸಂಬಂಧಿತ ಸುಧಾರಿತ ವಿಮಾನ ನಿಯಂತ್ರಣ ಕಾನೂನುಗಳೊಂದಿಗೆ ಹೊಂದಿದೆ. ಡೆಲ್ಟಾ ರೆಕ್ಕೆಯನ್ನು ಹೊಂದಿರುವ ವಿಮಾನವನ್ನು 'ವಾಯು ಯುದ್ಧ' ಮತ್ತು 'ಆಕ್ರಮಣಕಾರಿ ವಾಯು ಬೆಂಬಲ'ಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, 'ಕಣ್ಗಾವಲು' ಮತ್ತು 'ಹಡಗು ನಿಗ್ರಹ' ಅದರ ಎರಡನೇ ಪಾತ್ರಗಳಾಗಿವೆ. ವಾಯು ಚೌಕಟ್ಟಿನಲ್ಲಿ ಸುಧಾರಿತ ಸಂಯುಕ್ತಗಳ ವ್ಯಾಪಕ ಬಳಕೆಯು ತೂಕದ ಅನುಪಾತಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ, ದೀರ್ಘ ಬಳಲಿಕೆಯ ಜೀವಿತಾವಧಿ ಮತ್ತು ಕಡಿಮೆ ರೇಡಾರ್ ಸಿಗ್ನೇಚರ್ ಗಳನ್ನು ನೀಡುತ್ತದೆ.
ಪೆವಿಲಿಯನ್ 'ನವ ಭಾರತದ' ಸಾಮರ್ಥ್ಯ, ಅವಕಾಶಗಳು ಮತ್ತು ಸಾಧ್ಯತೆಗಳನ್ನು ಜಗತ್ತಿಗೆ ಪರಿಚಯಿಸಲಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದ್ದಾರೆ. ದೇಶೀಯ ರಕ್ಷಣಾ ಉತ್ಪನ್ನಗಳ ಪ್ರದರ್ಶನ ನಡೆಯಲಿದ್ದು, ಇದರಲ್ಲಿ ಸ್ಥಾಪಿತ ವಾಣಿಜ್ಯ ಸಂಸ್ಥೆಗಳು ಮತ್ತು ನವೋದ್ಯಮಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಭಾರತದ ಉದಯೋನ್ಮುಖ ಸಾಮರ್ಥ್ಯಗಳನ್ನು ಜಗತ್ತಿನ ಮುಂದೆ ತರಲು ಪೆವಿಲಿಯನ್ ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ವಿಚಾರಗೋಷ್ಠಿಗಳು
ಐದು ದಿನಗಳ ಈ ಕಾರ್ಯಕ್ರಮದಲ್ಲಿ ಹಲವಾರು ವಿಚಾರಗೋಷ್ಠಿಗಳು ನಡೆಯಲಿವೆ. ಇದರಲ್ಲಿ 'ಭಾರತೀಯ ರಕ್ಷಣಾ ಉದ್ಯಮಕ್ಕಾಗಿ ಮಾಜಿ ಸೈನಿಕರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು; ಭಾರತದ ರಕ್ಷಣಾ ಬಾಹ್ಯಾಕಾಶ ಉಪಕ್ರಮ: ಭಾರತೀಯ ಖಾಸಗಿ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ರೂಪಿಸುವ ಅವಕಾಶಗಳು; ಏರೋ ಎಂಜಿನ್ ಗಳು ಸೇರಿದಂತೆ ಭವಿಷ್ಯದ ಬಾಹ್ಯಾಕಾಶ ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿ; ಗಮ್ಯಸ್ಥಾನ ಕರ್ನಾಟಕ: ಯುಎಸ್-ಇಂಡಿಯಾ ರಕ್ಷಣಾ ಸಹಕಾರ ನಾವೀನ್ಯತೆ ಮತ್ತು ಮೇಕ್ ಇನ್ ಇಂಡಿಯಾ; ಕಡಲ ಕಣ್ಗಾವಲು ಉಪಕರಣಗಳು ಮತ್ತು ಸ್ವತ್ತುಗಳಲ್ಲಿ ಪ್ರಗತಿ; ಎಂ.ಆರ್.ಓ.ಯಲ್ಲಿ ಪೋಷಣೆ ಮತ್ತು ರಕ್ಷಣಾ ದರ್ಜೆಯ ಡ್ರೋನ್ ಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದು ಮತ್ತು ವಾಯು ಶಸ್ತ್ರಾಸ್ತ್ರ ಪೋಷಣೆಯಲ್ಲಿ ಆತ್ಮನಿರ್ಭರತೆ ಮೊದಲಾದವು ಸೇರಿವೆ.
ಕರ್ನಾಟಕ ಪೆವಿಲಿಯನ್: ಅವಕಾಶಗಳು ಮತ್ತು ಸಾಧ್ಯತೆಗಳು
ಏರೋ ಇಂಡಿಯಾ 2023 ರಲ್ಲಿ ಪ್ರತ್ಯೇಕ ಕರ್ನಾಟಕ ಪೆವಿಲಿಯನ್ ಇರಲಿದ್ದು, ಇದರಲ್ಲಿ ಭಾಗವಹಿಸುವವರಿಗೆ ರಾಜ್ಯದಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಪ್ರದರ್ಶಿಸಲಾಗುವುದು. ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿರುವ ಕರ್ನಾಟಕವನ್ನು ಮುಂಚೂಣಿಯಲ್ಲಿರುವ ರಾಜ್ಯ ಎಂದು ರಕ್ಷಣಾ ಸಚಿವರು ಬಣ್ಣಿಸಿದರು. "ಈ ರಾಜ್ಯವು ನುರಿತ ಮಾನವ ಸಂಪನ್ಮೂಲ ಮತ್ತು ದೃಢವಾದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇದು ದೇಶೀಯ ಮತ್ತು ಬಹುರಾಷ್ಟ್ರೀಯ ರಕ್ಷಣಾ ಮತ್ತು ವಾಯುಯಾನ ಕಂಪನಿಗಳಿಗೆ ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆಯ ಕೇಂದ್ರವಾಗಿದೆ. ಬಿಇಎಂಎಲ್, ಡಿಆರ್.ಡಿಒ, ಇಸ್ರೋ, ಐಐಎಸ್ಸಿ, ಮಹೀಂದ್ರಾ ಏರೋಸ್ಪೇಸ್, ಏರ್ಬಸ್, ಬೋಯಿಂಗ್ ಮುಂತಾದ ರಕ್ಷಣಾ ಸಂಬಂಧಿತ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಉಪಸ್ಥಿತಿಯು ಕರ್ನಾಟಕವನ್ನು ಭಾರತದ ಏರೋಸ್ಪೇಸ್ ಉದ್ಯಮದ ಪ್ರಮುಖ ರಾಜ್ಯವನ್ನಾಗಿ ಮಾಡುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯವು ಇಡೀ ಜಗತ್ತಿಗೆ ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನೆಯ ಕೇಂದ್ರವಾಗಲಿದೆ" ಎಂದು ಅವರು ಆಶಿಸಿದರು.
ಏರೋ ಇಂಡಿಯಾದ ಪ್ರಯೋಜನಗಳನ್ನು ಕರ್ನಾಟಕದ ಯುವಕರಿಗೆ ಒತ್ತಿಹೇಳಿದ ರಕ್ಷಣಾ ಸಚಿವರು, ಅವರ ಪೆವಿಲಿಯನ್ ರಾಜ್ಯದ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಪ್ರದರ್ಶಿಸುತ್ತದೆ ಮತ್ತು ಹೂಡಿಕೆಗಳು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದರು. ಯುವಜನರ ಭವಿಷ್ಯದ ಬಗ್ಗೆ ಸರ್ಕಾರ ಗಮನ ಹರಿಸಿದೆ ಎಂದು ಅವರು ಪುನರುಚ್ಚರಿಸಿದರು.
ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯ ಅವರ ಹೇಳಿಕೆ ಉಲ್ಲೇಖಿಸಿ, 'ರಾಷ್ಟ್ರವನ್ನು ನಿರ್ಮಿಸುವ ಮಾರ್ಗವೆಂದರೆ ಉತ್ತಮ ನಾಗರಿಕನನ್ನು ನಿರ್ಮಿಸುವುದು. ಬಹುಸಂಖ್ಯಾತ ನಾಗರಿಕರು ದಕ್ಷರಾಗಿರಬೇಕು, ಉತ್ತಮ ಚಾರಿತ್ರ್ಯ ಹೊಂದಿರಬೇಕು ಮತ್ತು ಸಮಂಜಸವಾದ ಉನ್ನತ ಕರ್ತವ್ಯ ಪ್ರಜ್ಞೆಯನ್ನು ಹೊಂದಿರಬೇಕು' ಎಂದು ರಕ್ಷಣಾ ಸಚಿವರು ಹೇಳಿದರು, ಅಂತಹ ದಾರ್ಶನಿಕರಿಂದ ಸ್ಫೂರ್ತಿ ಪಡೆದು, ಯುವಕರಲ್ಲಿ ಜ್ಞಾನ, ಕೌಶಲ್ಯ ಮತ್ತು ಚಾರಿತ್ರ್ಯದ ಸಮನ್ವಯವನ್ನು ಸ್ಥಾಪಿಸಲು ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆತಂದಿತು ಮತ್ತು ಅದೇ ವೇಳೆ ದೃಢವಾದ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸಿತು. ಏರೋ ಇಂಡಿಯಾ ಸರ್. ಎಂ.ವಿಶ್ವೇಶ್ವರಯ್ಯ ಅವರಂತಹ ದಾರ್ಶನಿಕರಿಗೆ ವಿನಮ್ರ ಗೌರವವಾಗಿದೆ ಎಂದರು.
ಶ್ರೀ ರಾಜನಾಥ್ ಸಿಂಗ್ ಅವರು ಈ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡುವಂತೆ ಮತ್ತು 'ನವ ಭಾರತ'ದ ಉದಯವನ್ನು ಜಗತ್ತಿಗೆ ಪ್ರಸ್ತುತಪಡಿಸುವಂತೆ ಮಾಧ್ಯಮಗಳನ್ನು ಆಗ್ರಹಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಮಾಧ್ಯಮಗಳು ರಕ್ಷಣಾ ಕ್ಷೇತ್ರದ ಅಸಾಧಾರಣ ಪ್ರಗತಿಯೊಂದಿಗೆ ಜನರನ್ನು ಸಂಪರ್ಕಿಸುವಲ್ಲಿ ಮಾಧ್ಯಮದ ಪಾತ್ರವನ್ನು ವಹಿಸಬಹುದು ಎಂದು ಅವರು ಹೇಳಿದರು.
ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ, ರಕ್ಷಣಾ ಕಾರ್ಯದರ್ಶಿ ಶ್ರೀ ಗಿರಿಧರ್ ಅರಮನೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಹಾಗೂ ರಾಜ್ಯ ಸರ್ಕಾರ ಮತ್ತು ರಕ್ಷಣಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ABB/Savvy
*****
(Release ID: 1898576)
Visitor Counter : 295