ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಒಡಿಶಾದಲ್ಲಿ ಭಾರತದ ರಾಷ್ಟ್ರಪತಿ; ಭುವನೇಶ್ವರದಲ್ಲಿ ಜ್ಞಾನಪ್ರಭಾ ಮಿಷನ್ ನ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದರು

Posted On: 10 FEB 2023 3:00PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಫೆಬ್ರವರಿ 10, 2023) ಭುವನೇಶ್ವರದಲ್ಲಿ ಜರುಗಿದ ಜ್ಞಾನಪ್ರಭಾ ಮಿಷನ್ ನ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಿದರು.

“ತಾಯಿಯ ಶಕ್ತಿ ಮತ್ತು ಸಾಮರ್ಥ್ಯವನ್ನು ಜಾಗೃತಗೊಳಿಸುವ ಮತ್ತು ಆರೋಗ್ಯಕರ ಮಾನವ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಸ್ಥಾಪಿಸಲಾದ ಜ್ಞಾನಪ್ರಭ ಮಿಷನ್ ನ ಸಂಸ್ಥಾಪನಾ ದಿನಾಚರಣೆಯ ಭಾಗವಾಗಲು ನನಗೆ ಅತೀವ ಸಂತೋಷವಾಗುತ್ತಿದೆ. ಪರಮಹಂಸ ಯೋಗಾನಂದ ಜೀ ಅವರಿಗೆ ಪ್ರೇರಣೆಯಾದ ಅವರ ತಾಯಿಯ ಹೆಸರನ್ನು ಈ ಮಿಷನ್ ಗೆ ಇಡಲಾಗಿದೆ ಎಂಬುದು ಬಹಳ ಹೆಮ್ಮೆಯ ಸಂಗತಿ” ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

“ತಾಯಿ, ತಂದೆ, ಗುರು, ಅತಿಥಿಯನ್ನು ದೇವರಂತೆ ಕಾಣುವುದನ್ನು ನಮಗೆ ನಮ್ಮ ಋಷಿಮುನಿಗಳು ಕಲಿಸಿಕೊಟ್ಟರು. ಆದರೆ ನಾವು ಈ ಬೋಧನೆಯನ್ನು ನಮ್ಮ ಜೀವನದಲ್ಲಿ ಯಥಾರ್ಥವಾಗಿ ಅಳವಡಿಸಿಕೊಳ್ಳುತ್ತೇವೆಯೇ? ಇದೊಂದು ದೊಡ್ಡ ಪ್ರಶ್ನೆಯಾಗಿದೆ. ಮಕ್ಕಳು ತಮ್ಮ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆಯೇ? ಯೋಚಿಸ ಬೇಕಾದ ವಿಷಯವಾಗಿದೆ. ಆಗಾಗ್ಗೆ, ವಯಸ್ಸಾದ ಪೋಷಕರ ದುಃಖದ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಕೇವಲ ಪೋಷಕರನ್ನು ದೇವರೆಂದು ಸಂಬೋಧಿಸುವುದು ಮತ್ತು ಅವರ ಚಿತ್ರಗಳನ್ನು ಪೂಜಿಸುವುದು ಆಧ್ಯಾತ್ಮಿಕತೆ ಅಲ್ಲ. ಪೋಷಕರ ಬಗ್ಗೆ ಕಾಳಜಿ ವಹಿಸುವುದು ಮತ್ತು ಅವರನ್ನು ಗೌರವಿಸುವುದು ಮುಖ್ಯ. ಹಿರಿಯ ನಾಗರಿಕರು, ವೃದ್ದರು ಮತ್ತು ರೋಗಿಗಳ ಸೇವೆ ಮಾಡುವುದನ್ನು ಎಲ್ಲರೂ ತಮ್ಮ ಜೀವನದ ಪ್ರತಿಜ್ಞೆಯಾಗಿ ಅಳವಡಿಸಿಕೊಳ್ಳಬೇಕು. ಇದುವೇ ನಿಜವಾದ ಮಾನವ ಧರ್ಮ” ಎಂದು ಅವರು ಹೇಳಿದರು.

“‘ಕ್ರಿಯಾ ಯೋಗ’ವನ್ನು ಜನಪ್ರಿಯಗೊಳಿಸುವಲ್ಲಿ ಜ್ಞಾನಪ್ರಭಾ ಮಿಷನ್ ಸಕ್ರಿಯವಾಗಿದೆ.  ಯಾವುದೇ ರೂಪವಿರಲಿ - ಯೋಗವು ಭಾರತದ ಪ್ರಾಚೀನ ವಿಜ್ಞಾನ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ, ಇದರ ಉದ್ದೇಶವು ಆರೋಗ್ಯಕರ ಮಾನವ ಸಮಾಜವನ್ನು ರಚಿಸುವುದಾಗಿದೆ. ಆರೋಗ್ಯಕರ ಜೀವನಕ್ಕೆ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ. ನಾವು 'ಯೋಗ-ಯುಕ್ತ'(ಯೋಗದೊಂದಿಗೆ ಸಂಬಂಧ)ವಾಗಿದ್ದರೆ, ನಾವು 'ರೋಗ-ಮುಕ್ತ'(ರೋಗಗಳಿಂದ ಮುಕ್ತ)ವಾಗಿ ಉಳಿಯಬಹುದು. ಯೋಗದ ಮೂಲಕ, ನಾವು ಆರೋಗ್ಯಕರ ದೇಹ ಮತ್ತು ಶಾಂತಿಯುತ ಮನಸ್ಸನ್ನು ಪಡೆಯಬಹುದು. ಇಂದಿನ ಅಧುನಿಕ ಜಗತ್ತಿನಲ್ಲಿ ಭೌತಿಕವಾದ ಸಂತೋಷವು ಅವರ ವ್ಯಾಪ್ತಿಯನ್ನು ಮೀರುವುದಿಲ್ಲ, ಆದರೆ ಮನಸ್ಸಿನ ಶಾಂತಿಯು ಅನೇಕರ ವ್ಯಾಪ್ತಿಯನ್ನು ಮೀರಿರಬಹುದು. ಮನಸ್ಸಿನ ಶಾಂತಿಯನ್ನು ಗಳಿಸುವುದು ಅಷ್ಟು ಸುಲಭಸಾಧ್ಯವಲ್ಲ. ಅವರಿಗೆ ಯೋಗವೊಂದೇ ಮನಸ್ಸಿಗೆ ನೆಮ್ಮದಿ ಸಿಗುವ ದಾರಿ” ಎಂದು ರಾಷ್ಟ್ರಪತಿಯವರು ಹೇಳಿದರು.

“ನಮ್ಮ ಭೌತಿಕ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳು ಹೆಚ್ಚುತ್ತಿವೆ, ಆದರೆ ನಾವು ನಮ್ಮ ಜೀವನದ ಆಧ್ಯಾತ್ಮಿಕ ಕಡೆಯಿಂದ ಕ್ರಮೇಣ ವಿಮುಖರಾಗುತ್ತಿದ್ದೇವೆ.  ಭೂಮಿಯ ಸಂಪನ್ಮೂಲಗಳು ಸೀಮಿತವಾಗಿವೆ, ಆದರೆ ಮಾನವರ ಆಸೆಗಳಿಗೆ ಮಿತಿಯಿಲ್ಲ. ಹವಾಮಾನ ಬದಲಾವಣೆ ಮತ್ತು ಭೂಮಿಯ ಉಷ್ಣತೆಯ ಹೆಚ್ಚಳದಲ್ಲಿ, ಹಾಗೂ ಮಾನವನ ಪ್ರಕೃತಿ ವಿರುದ್ದ ವರ್ತನೆಯಲ್ಲಿ ಪ್ರತಿಫಲಿಸುವ ಪ್ರಕೃತಿಯ ಅಸಾಮಾನ್ಯ ವರ್ತನೆಗೆ ಪ್ರಸ್ತುತ ಜಗತ್ತು ಸಾಕ್ಷಿಯಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಭವಿಷ್ಯವನ್ನು ನೀಡಲು, ಪ್ರಕೃತಿ ಸ್ನೇಹಿ ಜೀವನಶೈಲಿ ಅತ್ಯಗತ್ಯ. ಭಾರತೀಯ ಸಂಪ್ರದಾಯದಲ್ಲಿ, ಇಡೀ ಬ್ರಹ್ಮಾಂಡವೇ ಒಂದು ಮತ್ತು ಅವಿಭಾಜ್ಯವಾಗಿದೆ. ಮಾನವ ಈ ಬ್ರಹ್ಮಾಂಡದ ಒಂದು ಸಣ್ಣ ಭಾಗ ಮಾತ್ರ. ನಾವು ವಿಜ್ಞಾನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದ್ದರೂ, ನಾವು ಪ್ರಕೃತಿಯ ಯಜಮಾನರಲ್ಲ, ಅದರ ಮಕ್ಕಳು. ನಾವು ಪ್ರಕೃತಿಗೆ ಕೃತಜ್ಞರಾಗಿರಬೇಕು. ನಾವು ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು” ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು. 

*****
 



(Release ID: 1898144) Visitor Counter : 165