ಇಂಧನ ಸಚಿವಾಲಯ

ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕಾಗಿ ಜಿ-20 ದೇಶಗಳಿಗೆ ಕೇಂದ್ರ ಸಚಿವ ಶ್ರೀ ಆರ್.ಕೆ.ಸಿಂಗ್ ಕರೆ ನೀಡಿದ್ದಾರೆ


ಮೊದಲ ಜಿ-20 ಇಂಧನ ಪರಿವರ್ತನೆ ಕಾರ್ಯಕಾರಿ ಗುಂಪಿನ ಸಭೆಯು ಬೆಂಗಳೂರಿನಲ್ಲಿ ಆರಂಭವಾಗಿದೆ

ಇಂಗಾಲ ಹಿಡಿದಿಟ್ಟುಕೊಳ್ಳುವಿಕೆ, ಬಳಕೆ ಮತ್ತು ಶೇಖರಣೆ (ಸಿಸಿಯುಎಸ್) ಕುರಿತು ಅಂತರರಾಷ್ಟ್ರೀಯ ಸೆಮಿನಾರ್ ಅನ್ನು ಈ ಸಂದರ್ಭದಲ್ಲಿ ನಡೆಸಲಾಯಿತು

Posted On: 05 FEB 2023 4:47PM by PIB Bengaluru

ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಜಿ-20 ಸದಸ್ಯ ರಾಷ್ಟ್ರಗಳು ಒಟ್ಟಾಗಬೇಕೆಂದು ಕೇಂದ್ರ ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ಕರೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ನಡೆದ ಮೊದಲ ಇಂಧನ ಪರಿವರ್ತನೆ ಕಾರ್ಯಕಾರಿ ಗುಂಪಿನ ಎನರ್ಜಿ (ಇಟಿಡಬ್ಲ್ಯೂಜಿ) ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಸಚಿವರು, 2030 ರ ವೇಳೆಗೆ 2005 ರ ಮಟ್ಟದಿಂದ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡಾ 45 ರಷ್ಟು ಕಡಿಮೆ ಮಾಡಲು ಭಾರತವು ಈಗ ಬದ್ಧವಾಗಿದೆ ಎಂದು ಹೇಳಿದರು. 2030 ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಸಂಪನ್ಮೂಲಗಳಿಂದ 50 ಪ್ರತಿಶತದಷ್ಟು ಒಟ್ಟು ಸ್ಥಾಪಿತ ಇಂಧನ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ದೇಶ ಹೊಂದಿದೆ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತವು ಮೊದಲ ಐದು ದೇಶಗಳಲ್ಲಿ ಸ್ಥಾನ ಪಡೆದಿದೆ. ದೇಶದ ತಲಾವಾರು ಹಸಿರುಮನೆ ಅನಿಲ ಹೊರಸೂಸುವಿಕೆಯು 2020 ರಲ್ಲಿ ವಿಶ್ವದ ಸರಾಸರಿ 6.3 ಟನ್ ಇಂಗಾಲ (tCO2e) ಕ್ಕಿಂತ ತುಂಬಾ ಕಡಿಮೆಯಾಗಿದೆ ಎಂದು ಶ್ರೀ ಆರ್.ಕೆ. ಸಿಂಗ್ ಮಾಹಿತಿ ನೀಡಿದರು. ಸರ್ಕಾರದ ವಿವಿಧ ಇಂಧನ ಉಳಿತಾಯ ಯೋಜನೆಗಳು ವರ್ಷಕ್ಕೆ 267.9 ಮಿಲಿಯನ್ ಟನ್ ಇಂಗಾಲ ಕಡಿತಕ್ಕೆ ಕಾರಣವಾಗಿವೆ, ಇದರ ಪರಿಣಾಮವಾಗಿ ಅಂದಾಜು 18.5 ಬಿಲಿಯನ್ ಡಾಲರ್ ಉಳಿತಾಯವಾಗಿದೆ ಎಂದು ಅವರು ಹೇಳಿದರು.

ನಂತರ, ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತವು ಪ್ರಸ್ತುತ ಇಂಧನ ಮೂಲಗಳ ಲಭ್ಯತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಇಂಧನ ಭದ್ರತೆಯನ್ನು ಸಾಧಿಸಲು ಎಲ್ಲಾ ಕಾರ್ಯಸಾಧ್ಯವಾದ ಮೂಲಗಳನ್ನು ಅನ್ವೇಷಿಸುತ್ತದೆ ಎಂದು ಹೇಳಿದರು. ಇಟಿಡಬ್ಲ್ಯೂಜಿ ಸಭೆಯು ಇದಕ್ಕಾಗಿ ಕರಡು ಮಾರ್ಗಸೂಚಿಯನ್ನು ಸಿದ್ಧಪಡಿಸುವ ಪೂರ್ವಸಿದ್ಧತಾ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರು ತಮ್ಮ ವಿಶೇಷ ಭಾಷಣದಲ್ಲಿ, ಶುದ್ಧ ಇಂಧನದ ಸಾರ್ವತ್ರಿಕ ಲಭ್ಯತೆಯನ್ನು ಸಾಧಿಸಲು ಅಂತರರಾಷ್ಟ್ರೀಯ ಸಹಯೋಗದ ಅಗತ್ಯವನ್ನು ಒತ್ತಿ ಹೇಳಿದರು. "ಭಾರತೀಯರು ಪರಿಸರದ  ಶೋಷಣೆಗಿಂತ ಪ್ರಕೃತಿ ಸ್ನೇಹಿ ಜೀವನಶೈಲಿ ಮತ್ತು ಅಭ್ಯಾಸಗಳನ್ನು ಅನುಸರಿಸುತ್ತಾರೆ. ಕಡಿಮೆಗೊಳಿಸುವುದು, ಮರುಬಳಕೆ ಮಾಡುವುದು ಮತ್ತು ಪುನರ್ಬಳಕೆ ಮಾಡುವುದು ನಮ್ಮ ಜೀವನದ ಪರಿಕಲ್ಪನೆಗಳಾಗಿವೆ ಮತ್ತು ಮರುಬಳಕೆ (ಸರ್ಕ್ಯುಲರ್) ಆರ್ಥಿಕತೆಯು ನಮ್ಮ ಸಂಸ್ಕೃತಿ ಮತ್ತು ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ" ಎಂದು ಸಚಿವರು ಹೇಳಿದರು.

ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು "ವಿವೇಚನೆರಹಿತ ಮತ್ತು ವಿನಾಶಕಾರಿ ಬಳಕೆಗೆ ಬದಲಾಗಿ ವಿವೇಕಯುತ ಮತ್ತು ಉದ್ದೇಶಪೂರ್ವಕ ಬಳಕೆಗಾಗಿ" ಒಂದು ಜನಾಂದೋಲನವಾಗಿ ಮಿಷನ್ ಲೈಫ್ - ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್- ಕುರಿತು ಗ್ಲಾಸ್ಗೋದಲ್ಲಿ ನಡೆದ ಸಿಒಪಿ26 ರಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾಡಿದ ಘೋಷಣೆಯನ್ನು ಶ್ರೀ ಪ್ರಹ್ಲಾದ ಜೋಶಿ ಸ್ಮರಿಸಿಕೊಂಡರು.

ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ ನಡೆಯುತ್ತಿರುವ ಮೊದಲ ಇಟಿಡಬ್ಲ್ಯೂಜಿ ಸಭೆಯು ಆರು ಪ್ರಮುಖ ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ, ತಂತ್ರಜ್ಞಾನದ ಅಂತರವನ್ನು ಪರಿಹರಿಸುವ ಮೂಲಕ ಇಂಧನ ಪರಿವರ್ತನೆ; ಇಂಧನ ಪರಿವರ್ತನೆಗಾಗಿ ಕಡಿಮೆ ವೆಚ್ಚದ ಹಣಕಾಸು; ಇಂಧನ ಭದ್ರತೆ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳು; ಇಂಧನ ದಕ್ಷತೆ, ಕಡಿಮೆ ಇಂಗಾಲದ ಕೈಗಾರಿಕಾ ಪರಿವರ್ತನೆಗಳು ಮತ್ತು ಜವಾಬ್ದಾರಿಯುತ ಬಳಕೆ; ಭವಿಷ್ಯದ ಇಂಧನಗಳು (3F) ಮತ್ತು ಶುದ್ಧ ಇಂಧನಕ್ಕೆ ಸಾರ್ವತ್ರಿಕ ಪ್ರವೇಶ ಮತ್ತು ನ್ಯಾಯುತ, ಕೈಗೆಟುಕುವ ಮತ್ತು ಅಂತರ್ಗತ ಇಂಧನ ಪರಿವರ್ತನೆಯ ಮಾರ್ಗಗಳು ಇಟಿಡಬ್ಲ್ಯುಜಿ ಸಭೆಯ ಆದ್ಯತೆಯ ಕ್ಷೇತ್ರಗಳಾಗಿವೆ. "ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ" ಈ ಕಾರ್ಯಕ್ರಮದ ಧ್ಯೇಯವಾಗಿದೆ. 

ಬ್ರೆಜಿಲ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನವೀಕರಿಸಬಹುದಾದ ಇಂಧನ ವಿಭಾಗದ ಮುಖ್ಯಸ್ಥ ಶ್ರೀ ರೆನಾಟೊ ಡೊಮಿತ್ ಗೊಡಿನ್ಹೋ, ಕಾರ್ಯದರ್ಶಿ (ವಿದ್ಯುತ್) ಶ್ರೀ ಅಲೋಕ್ ಕುಮಾರ್, ಭಾರತದ ಜಿ-20 ಶೆರ್ಪಾ ಶ್ರೀಅಭಯ್ ಠಾಕೂರ್ ಮತ್ತು ನೀತಿ ಆಯೋಗದ ಸದಸ್ಯ ಶ್ರೀ ವಿ.ಕೆ. ಸಾರಸ್ವತ್ ಮಾತನಾಡಿದರು.
ವಿಶ್ವ ಬ್ಯಾಂಕ್, ಏಷ್ಯಾ ಅಭಿವೃದ್ಧಿ ಬ್ಯಾಂಕ್, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ) ಮತ್ತು ಇತರ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಜಿ-20 ರಾಷ್ಟ್ರಗಳು ಮತ್ತು ಒಂಬತ್ತು ವಿಶೇಷ ಆಹ್ವಾನಿತ ಅತಿಥಿ ದೇಶಗಳು ಸೇರಿದಂತೆ 150 ಕ್ಕೂ ಹೆಚ್ಚು ಮಂದಿ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ, 'ಇಂಗಾಲದ ಹಿಡಿದಿಡುವಿಕೆ, ಬಳಕೆ ಮತ್ತು ಶೇಖರಣೆ ಕಾರ್ಬನ್ (ಸಿಸಿಯುಎಸ್)' ಕುರಿತು ಉನ್ನತ ಮಟ್ಟದ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು. ನಿವ್ವಳ-ಶೂನ್ಯ ಗುರಿಗಳನ್ನು ಸಾಧಿಸಲು ಪ್ರಮುಖವೆಂದು ಪರಿಗಣಿಸಲಾದ ಇಂಗಾಲದ ಹಿಡಿದಿಡುವಿಕೆ, ಬಳಕೆ ಮತ್ತು ಶೇಖರಣೆಯ ಪ್ರಾಮುಖ್ಯತೆಯ ಬಗ್ಗೆ ಸೆಮಿನಾರ್ ಗಮನ ಕೇಂದ್ರೀಕರಿಸಿತು.

*****



(Release ID: 1896448) Visitor Counter : 217