ಚುನಾವಣಾ ಆಯೋಗ

ಮುಂಬರುವ ಚುನಾವಣೆಗಳಿಗೆ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗದ ಹಾಡು 'ಮೈ ಭಾರತ್ ಹೂ', ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ


ಹಾಡಿನ ಹಿಂದಿ ಮತ್ತು ಬಹುಭಾಷಾ ಸ್ವರೂಪವು ಬಿಡುಗಡೆಯಾದ ಒಂದು ವಾರದೊಳಗೆ 3.5 ಲಕ್ಷ ವೀಕ್ಷಣೆಗಳನ್ನು ಮತ್ತು 5.6 ಲಕ್ಷ ಅಭಿಪ್ರಾಯಗಳನ್ನು ಪಡೆದುಕೊಂಡಿದೆ

ತಮ್ಮ ರಾಷ್ಟ್ರೀಯ ಕರ್ತವ್ಯವನ್ನು ಅರಿತು ಮತ ಚಲಾಯಿಸುವ ಪ್ರತಿಯೊಬ್ಬ ಮತದಾರರಿಗೆ ಈ ಹಾಡನ್ನು ಸಮರ್ಪಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ

Posted On: 03 FEB 2023 5:26PM by PIB Bengaluru

ವಿನೂತನ ಸಂವಹನ ತಂತ್ರಗಳ ಮೂಲಕ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಗುರಿಯೊಂದಿಗೆ ಈ ವರ್ಷ ಒಂಬತ್ತು ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷದ ಆರಂಭದಲ್ಲಿ ಲೋಕಸಭೆಗೆ ನಡೆಯುವ  ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಸಜ್ಜಾಗಿದೆ. ಇಂತಹ ಉಪಕ್ರಮಗಳಲ್ಲಿ ಒಂದಾಗಿ, ಚುನಾವಣಾ ಆಯೋಗವು ಸುಭಾಷ್ ಘಾಯ್ ಫೌಂಡೇಶನ್ ಸಹಯೋಗದೊಂದಿಗೆ 'ಮೈ ಭಾರತ್ ಹೂ, ಹಮ್ ಭಾರತ್ ಕೆ ಮತದಾತಾ ಹೇ' ಹಾಡನ್ನು ನಿರ್ಮಿಸಿದೆ. ಇದು ಸಮಾಜದ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿದ್ದು, ಮತದಾರರಿಗೆ ಮತ ಚಲಾಯಿಸಲು ಮತ್ತು ಅವರ ಸಾಂವಿಧಾನಿಕ ಕರ್ತವ್ಯವನ್ನು ಪೂರೈಸಲು ಮನವಿ ಮಾಡಲಾಗಿದೆ. 13 ನೇ ರಾಷ್ಟ್ರೀಯ ಮತದಾರರ ದಿನ (ಎನ್‌ ವಿ ಡಿ) ವಾದ 25 ಜನವರಿ 2023 ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿಯವರ ಸಮ್ಮುಖದಲ್ಲಿ ಪ್ರದರ್ಶಿಸಲಾದ ಈ ಹಾಡು ಈಗಾಗಲೇ ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಬಿಡುಗಡೆಯಾದ ಒಂದು ವಾರದೊಳಗೆ, ಹಿಂದಿ ಮತ್ತು ಬಹುಭಾಷಾ ಸ್ವರೂಪದ ಹಾಡು ನಾಲ್ಕು ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ Facebook, Instagram, Twitter ಮತ್ತು YouTube ನಲ್ಲಿ ಈಗಾಗಲೇ 3.5 ಲಕ್ಷ ವೀಕ್ಷಣೆಗಳು ಮತ್ತು 5.6 ಲಕ್ಷ ಅಭಿಪ್ರಾಯಗಳನ್ನು ಪಡೆದುಕೊಂಡಿದೆ.

ಈ ಹಾಡು ಇಸಿಐನ 'ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಮತದಾನದಲ್ಲಿ ಭಾಗವಹಿಸುವಿಕೆʼ (SVEEP) ಕಾರ್ಯಕ್ರಮದ ಉಪಕ್ರಮಗಳಲ್ಲಿ ಒಂದಾಗಿದೆ, ಇದು ಪ್ರಮುಖ ಮತದಾರರ ಶಿಕ್ಷಣ ಕಾರ್ಯಕ್ರಮವಾಗಿದ್ದು, ಇಸಿಐನ ಧ್ಯೇಯವಾದ 'ಯಾವ ಮತದಾರರನ್ನೂ ಬಿಡುವುದಿಲ್ಲ' ಎಂಬ ಎಲ್ಲ ವರ್ಗದ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸೇರ್ಪಡೆ ತಂತ್ರಗಳು ಮತ್ತು ಕ್ರಿಯಾ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಈ ಹಾಡು ಮತದಾರರಿಗೆ ಅವರ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿಯ ಬಗ್ಗೆ ಶಿಕ್ಷಣ ನೀಡುವುದು ಮಾತ್ರವಲ್ಲದೆ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ನೇತೃತ್ವದಲ್ಲಿ ಚುನಾಣಾ ಆಯುಕ್ತರಾದ  ಶ್ರೀ ಅನುಪ್ ಚಂದ್ರ ಪಾಂಡೆ ಮತ್ತು ಶ್ರೀ ಅರುಣ್ ಗೋಯೆಲ್ ಅವರೊಂದಿಗೆ  ಶ್ರೀ ಸುಭಾಷ್ ಘಾಯ್ ನೇತೃತ್ವದ ತಂಡವು ನಡೆಸಿದ ಹಲವಾರು ಸಂವಾದಗಳ ನಂತರ ಈ ಹಾಡನ್ನು ಅಂತಿಮಗೊಳಿಸಲಾಗಿದೆ. ಹಾಡು ಕುರಿತು ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತರು, ತಮ್ಮ ರಾಷ್ಟ್ರೀಯ ಕರ್ತವ್ಯವನ್ನು ಅರಿತುಕೊಂಡು ಮತ ಚಲಾಯಿಸುವ ಪ್ರತಿಯೊಬ್ಬ ಮತದಾರರಿಗೆ ಈ ಹಾಡನ್ನು ಸಮರ್ಪಿಸಲಾಗಿದೆ ಎಂದರು. ಈ ಹಾಡು ಹೊಸ ಮತದಾರರನ್ನು ಪ್ರೇರೇಪಿಸುತ್ತದೆ, ಭವಿಷ್ಯದ ಮತದಾರರು ಮತ್ತು ಯುವ ಮತದಾರರನ್ನು ಹುರಿದುಂಬಿಸುತ್ತದೆ, ಶತಾಯುಷಿ ಮತದಾರರು, ಸೇವಾ ಮತದಾರರು, ವಿಕಲಾಂಗಚೇತನ ಮತದಾರರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ, 2019 ರ ಚುನಾವಣೆಯಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಪುರುಷ ಮತದಾರರನ್ನು ಮೀರಿಸಿದ ಮಹಿಳಾ ಮತದಾರರನ್ನು ಪ್ರಶಂಸಿಸುತ್ತದೆ ಮತ್ತು ಇಸಿಐ ಮತ್ತು ತಮಗಾಗಿ ಹೊಸ ಗುರಿಯನ್ನು ಹೊಂದಿದೆ. ಭಾರತದ ವೈವಿಧ್ಯತೆ ಮತ್ತು ಜನಸಂಖ್ಯಾಶಾಸ್ತ್ರವನ್ನು ಕೊಂಡಾಡುತ್ತಾ, ಹಾಡು 2023 ರ ರಾಷ್ಟ್ರೀಯ ಮತದಾರರ ದಿನದ 'ಮತದಾನಕ್ಕೆ ಸಾಟಿಯಿಲ್ಲ, ನಾನು ಖಂಡಿತವಾಗಿಯೂ ಮತ ಹಾಕುತ್ತೇನೆʼ ಎಂಬ ಧ್ಯೇಯಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

ಹಾಡುಗಳ ಕೆಲವು ಗಮನಾರ್ಹ ವೈಶಿಷ್ಟ್ಯಗಳು:

1.        ಹಾಡಿನ ಸ್ಫೂರ್ತಿದಾಯಕ ಮತ್ತು ಪ್ರೇರಕ ಸಾಹಿತ್ಯವನ್ನು ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಅವರು ಬರೆದು ಮುಂಬೈನ ವಿಸ್ಲಿಂಗ್ ವುಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಮ್ಯೂಸಿಕ್ ಸಹಯೋಗದೊಂದಿಗೆ ಸಂಯೋಜಿಸಿದ್ದಾರೆ.

2.        ಹಾಡನ್ನು ಹಿಂದಿ ಮತ್ತು 12 ಪ್ರಾದೇಶಿಕ ಭಾಷೆಗಳಲ್ಲಿ ಅಂದರೆ,. ಬೆಂಗಾಲಿ, ಮರಾಠಿ, ಗುಜರಾತಿ, ಪಂಜಾಬಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಅಸ್ಸಾಮಿ, ಒಡಿಯಾ, ಕಾಶ್ಮೀರಿ, ಸಂತಾಲಿ ಹಾಡಲಾಗಿದೆ.

3.        'ಮೈ ಭಾರತ್ ಹೂ' ಹಾಡಿನ ಕೋರಸ್ ಎಲ್ಲ ಆವೃತ್ತಿಗಳಲ್ಲಿ ಏಕರೂಪವಾಗಿದೆ.

4.        ಹಿಂದಿ ಆವೃತ್ತಿಯಲ್ಲಿ ಪ್ರಸಿದ್ಧ ಗಾಯಕರಾದ ಸುಖವಿಂದರ್ ಸಿಂಗ್, ಕವಿತಾ ಕೃಷ್ಣ ಮೂರ್ತಿ, ಸೋನು ನಿಗಮ್, ಹರಿಹರನ್, ಅಲ್ಕಾ ಯಾಗ್ನಿಕ್, ಜಾವೇದ್ ಅಲಿ, ಕೆಎಸ್ ಚಿತ್ರಾ, ಕೌಶಿಕಿ ಚಕ್ರವರ್ತಿ, ಉಸ್ತಾದ್ ರಶೀದ್ ಖಾನ್ ಹಾಡಿದ್ದಾರೆ.

5.        ಕೌಶಿಕಿ ಚಕ್ರವರ್ತಿ, ವೈಶಾಲಿ ಸಮಂತ್, ಭೂಮಿ ತ್ರಿವೇದಿ, ಮಿಕಾ ಸಿಂಗ್, ಕೆ.ಎಸ್. ಚಿತ್ರಾ, ಮನೋ, ವಿಜಯ್ ಪ್ರಕಾಶ್, ವಿಜಯ್ ಯೇಸುದಾಸ್, ಪಾಪೋನ್, ದೀಪ್ತಿ ರೇಖಾ ಪಾಧಿ, ಮೆಹಮೀತ್ ಸೈಯದ್, ಪಂಕಜ್ ಜಲ್ ಅವರು ಪ್ರಾದೇಶಿಕ ಆವೃತ್ತಿಯ ಪ್ರಸಿದ್ಧ ಗಾಯಕರಾಗಿದ್ದಾರೆ.

6.        ಹಾಡು ವಿವಿಧ ಆವೃತ್ತಿಗಳಲ್ಲಿ ಬಿಡುಗಡೆಯಾಗಿದೆ. ಹಿಂದಿ ಆವೃತ್ತಿ, ಬಹುಭಾಷಾ ಆವೃತ್ತಿ, ವಾದ್ಯ ಆವೃತ್ತಿ, ಪಿಯಾನೋ ಆವೃತ್ತಿ, ಅಂತಾರಾಷ್ಟ್ರೀಯ ಸೌಂಡ್‌ ಟ್ರ್ಯಾಕ್‌ ಮತ್ತು ರಿಂಗ್‌ಟೋನ್ ಆವೃತ್ತಿಗಳಲ್ಲಿ ಇದೆ.

7.        ಈ ಹಾಡು ಮಹಿಳಾ ಮತದಾರರು, ಯುವ ಮತದಾರರು, ಶತಾಯುಷಿ ಮತದಾರರು, ವಿಕಲಾಂಗಚೇತನ ಮತದಾರರು ಇರುವ ವೈವಿಧ್ಯಮಯ ಮತದಾರರ ಗುಂಪಿನ ಒಳಗೊಳ್ಳುವಿಕೆ ಮತ್ತು ಪ್ರವೇಶಿಸಬಹುದಾದ ಚುನಾವಣೆಗಳ ಬಗ್ಗೆ ವಿವರಿಸುತ್ತದೆ.

8.        ದೇಶದ ಪ್ರಾದೇಶಿಕ ವೈವಿಧ್ಯ, ಸಾಂಸ್ಕೃತಿಕ, ಸಾಮಾಜಿಕ-ಆರ್ಥಿಕ ಮತ್ತು ಭೌಗೋಳಿಕ ಆಯಾಮಗಳನ್ನು ಕೇಂದ್ರವಾಗಿರಿಸಿಕೊಂಡು ಮತದಾರರ ಶಕ್ತಿಯನ್ನು ಪ್ರತಿನಿಧಿಸುವ ಹಾಡನ್ನು ರಚಿಸಲಾಗಿದೆ.

9.        ಅನಿಲ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ಆರ್. ಮಾಧವನ್, ಸುಬೋಧ್ ಭಾವೆ, ಪ್ರೊಸೆನ್‌ಜಿತ್ ಚಟರ್ಜಿ, ಮೋಹನ್‌ಲಾಲ್, ಕಪಿಲ್ ಬೋರಾ, ಸೂರ್ಯ, ಗಿಪ್ಪಿ ಗ್ರೆವಾಲ್, ಶುಭ್‌ಮನ್ ಗಿಲ್, ಹರ್ಷಲ್ ಪಟೇಲ್, ಇಶಾನ್ ಕಿಶನ್, ಹಾರ್ದಿಕ್‌ ಪಾಂಡ್ಯ, ಯಜುವೇಂದ್ರ ಚಾಹಲ್‌, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮುಂತಾದ ಹೆಸರಾಂತ ವ್ಯಕ್ತಿಗಳು ಇಸಿಐ ಐಕಾನ್‌ ಪಂಕಜ್ ತ್ರಿಪಾಠಿ ಅವರೊಂದಿಗೆ ಹಾಡಿನ ವೀಡಿಯೊದಲ್ಲಿ 'ಒಂದು ಮತದ ಮೌಲ್ಯ'ವನ್ನು ಒತ್ತಿಹೇಳಿದ್ದಾರೆ.

10.      ಹಿರಿಯ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ ಸುಭಾಷ್ ಘಾಯ್, ಗಾಯಕರಾದ ಸೋನು ನಿಗಮ್, ಉಸ್ತಾದ್ ರಶೀದ್ ಖಾನ್, ಕೆಎಸ್ ಚಿತ್ರಾ, ದೀಪ್ತಿ ರೇಖಾ ಪಾಧಿ, ವೈಶಾಲಿ ಸಮಂತ್, ಮೆಹಮೀತ್ ಸೈಯದ್, ಪಾಪೋನ್, ಅಭಿಷೇಕ್ ಬೋಂತು ಮತ್ತು ಇಸಿಐ ಐಕಾನ್ ಪಂಕಜ್ ತ್ರಿಪಾಠಿ ಅವರು ನವದೆಹಲಿಯಲ್ಲಿ 13 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಭಾಗವಹಿಸಿದರು.

11.      ಪ್ರತಿಯೊಬ್ಬ ಭಾರತೀಯನು ಭಾರತವನ್ನು ಪ್ರೀತಿಸುತ್ತಾನೆ ಎಂಬ ನಂಬಿಕೆಯಿಂದ ಹಾಡಿನ ಸಾಹಿತ್ಯವು ಸ್ಫೂರ್ತಿ ಪಡೆದಿದೆ. ಪುರಾತನ ಇತಿಹಾಸ ಹಾಗು ಪ್ರಗತಿಶೀಲ ಮತ್ತು ಆಧುನಿಕ ಭವಿಷ್ಯದೊಂದಿಗೆ ವಿಶ್ವದ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರದ ಬಗ್ಗೆ ಜನರ ಆತ್ಮ, ಹೃದಯ, ಮನಸ್ಸು ಮತ್ತು ದೇಹ ಭಾರತದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತವೆ. ಪ್ರತಿಯೊಬ್ಬ ಭಾರತೀಯನೂ 'ನಾನು ಭಾರತ' (ಮೇನ್ ಭಾರತ್ ಹೂನ್) ಎಂದು ಹೇಳಲು ಹೆಮ್ಮೆಪಡುತ್ತಾನೆ. ಏಕೆಂದರೆ ನಮ್ಮ ದೇಶವನ್ನು ಆಳಲು ಮತ್ತು ನಿರ್ಮಿಸಲು ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವ ಮತದ ಶಕ್ತಿಯನ್ನು ಅವರು ತಿಳಿದಿದ್ದಾರೆ. ಪ್ರತಿಯೊಬ್ಬ ಮತದಾರರು ಆಧುನಿಕ ಭಾರತದ ಅತ್ಯುತ್ತಮ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಬೇಕೆಂದು ಈ ಹಾಡನ್ನು ವಿನ್ಯಾಸಗೊಳಿಸಲಾಗಿದೆ, ಅವರು ತಮ್ಮ ಸ್ಥಾನಮಾನ, ವರ್ಗ, ಧರ್ಮ, ಜಾತಿ, ಸ್ಥಳ, ಭಾಷೆ, ಲಿಂಗವನ್ನು ಲೆಕ್ಕಿಸದೇ ತಮ್ಮ ಕರ್ತವ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ತಮ್ಮ ರಾಷ್ಟ್ರಕ್ಕಾಗಿ ಮತದಾನ ಮಾಡುವ ಹಕ್ಕನ್ನು ಅರ್ಥಮಾಡಿಕೊಳ್ಳುತ್ತಾರೆ. ಆದುದರಿಂದಲೇ -- "ಮೈ ಭಾರತ್ ಹೂಂ - ಭಾರತ್ ಹೈ ಮುಜ್ಮೇ - ಹಮ್ ಭಾರತ್ ಕೆ ಮತದಾತ ಹೈ – ಮತದಾನ್‌ ದೇನೇ ಜಾಯೇಂಗೆ ಭಾರತ್ ಕೇ ಲಿಯೇ..." ಎಂದು ಹಾಡಿನಲ್ಲಿರುವಂತೆ ಒಟ್ಟಿಗೆ ಹಾಡಲು ಹೆಮ್ಮೆಪಡುತ್ತಾರ.

 

*****



(Release ID: 1896323) Visitor Counter : 1665