ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಭಾರತದ ಜಿ-20 ಶೆರ್ಪಾರವರಿಗೆ ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್ ನ ಡೆಮೊವನ್ನು ನೀಡಲಾಯಿತು


ಫೆಬ್ರವರಿ 13 ಮತ್ತು- 15, 2023ರ ನಡುವೆ ಲಕ್ನೋದಲ್ಲಿ ನಡೆಯಲಿರುವ ಜಿ-20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ನ ಮೊದಲನೇ ಸಭೆಗೆ ವ್ಯಾನ್ ಅನ್ನು ಕಳುಹಿಸಲಾಗಿದೆ

Posted On: 03 FEB 2023 1:08PM by PIB Bengaluru

ಭಾರತದ ಜಿ-20 ಶೆರ್ಪಾ ಶ್ರೀ ಅಮಿತಾಭ್ ಕಾಂತ್ ಅವರಿಗೆ ನಿನ್ನೆ ಸುಷ್ಮಾ ಸ್ವರಾಜ್ ಭವನದಲ್ಲಿ ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್ ನ ಡೆಮೋ ನೀಡಲಾಯಿತು. ಅದರ ನಂತರ, ಫೆಬ್ರವರಿ 13 ಮತ್ತು- 15, 2023ರ ನಡುವೆ ಲಕ್ನೋದಲ್ಲಿ ನಡೆಯಲು ಆಯೋಜಿಸಲಾದ ಜಿ-20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ನ ಮೊದಲನೇ ಸಭೆಗೆ ವ್ಯಾನ್ ಅನ್ನು ಕಳುಹಿಸಲಾಯಿತು. ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್ ದೇಶದ ವಿವಿಧ ನಗರಗಳಿಗೆ ಭೇಟಿ ನೀಡಲಿದ್ದು, ಜಿ-20 ಡಿಇಡಬ್ಲ್ಯೂಜಿ ಮತ್ತು ಡಿಜಿಟಲ್ ಇಂಡಿಯಾದ ಪ್ರಮುಖ ಉಪಕ್ರಮಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲಿದೆ.

ಜಿ-20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಗೆ ರವಾನೆಯಾದ ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್

ಡಿಜಿಟಲ್ ಇಂಡಿಯಾದ ಗಮನಾರ್ಹ ಪ್ರಯಾಣದ ಬಗ್ಗೆ ತನ್ನ ನಾಗರಿಕರಿಗೆ ಮಾಹಿತಿ ನೀಡಿ, ಸಬಲೀಕರಣ ಮತ್ತು ನವೀಕೃತದ ಅರಿವು ಮೂಡಿಸಲು ಭಾರತ ಸರ್ಕಾರದ ಅಚಲ ಬದ್ಧತೆಗೆ ಈ ನವೀನ ರಚನೆ ಸಾಕ್ಷಿಯಾಗಿದೆ. ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್ ಅತ್ಯಾಧುನಿಕ ತಂತ್ರಜ್ಞಾನದ ಖಜಾನೆಯಾಗಿದ್ದು, ಡಿಜಿಟಲ್ ಇಂಡಿಯಾದ ನಿರ್ಣಾಯಕ ಉಪಕ್ರಮಗಳು ಮತ್ತು ಪಿಎಂಜೆಡಿವೈ, ಡಿಜಿಲಾಕರ್, ಆಧಾರ್, ಉಮಂಗ್, ಇ-ವೇ ಬಿಲ್, ಇ-ಔಷಧಿ, ಆರೋಗ್ಯ ಸೇತು, ಕೋ-ವಿನ್, ಇ-ರುಪಿ ಮತ್ತು ಇಂಡಿಯಾ ಸ್ಟ್ಯಾಕ್ ಗ್ಲೋಬಲ್ ಸೇರಿದಂತೆ ಅದರ ಕೆಲವು ಪ್ರಮುಖ ಉಪಕ್ರಮಗಳ ಬಗ್ಗೆ ಜ್ಞಾನ ಮತ್ತು ಒಳನೋಟಕ್ಕೆ ಇದು ಸಾಕ್ಷಿಯಾಗಿದೆ.

ಭಾರತದ ಜಿ-20 ಶೆರ್ಪಾ ಶ್ರೀ ಅಮಿತಾಭ್ ಕಾಂತ್ ಅವರು ಡೆಮೊನ ನಂತರ ತಮ್ಮ ಅವಲೋಕನಗಳ ಬಗ್ಗೆ ಮಾತನಾಡಿದರು. "ಈ ಮೊಬೈಲ್ ಸೌಲಭ್ಯವು ಭಾರತ ರಚಿಸಿದ ಎಲ್ಲಾ ಡಿಜಿಟಲ್ ಸಾರ್ವಜನಿಕ ಸರಕುಗಳು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಅರಿವು ಮೂಡಿಸುತ್ತದೆ. ಯುಪಿಐನಿಂದ ಹಿಡಿದು ಡಿಜಿಲಾಕರ್, ಕೋ-ವಿನ್, ಫಾಸ್ಟ್ ಟ್ಯಾಗ್, ದೀಕ್ಷಾ, ಸ್ವಯಂ ಇವೆಲ್ಲವೂ ಇಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರತಿಯೊಬ್ಬರೂ ಈ ಗಮನಾರ್ಹ ಉತ್ಪನ್ನಗಳನ್ನು ನೋಡಲು ಸಾಧ್ಯವಾಗುತ್ತದೆ. ಈ ಡಿಜಿಟಲ್ ಸಾರ್ವಜನಿಕ ಸರಕುಗಳನ್ನು ಹೇಗೆ ಬಳಸಬೇಕೆಂದು ಜನರು ಕಲಿಯುತ್ತಾರೆ. ಜನಸಾಮಾನ್ಯರನ್ನು ತಲುಪಲು ಮತ್ತು ಜನ ಆಂದೋಲನವನ್ನು ರಚಿಸಲು, ಜಿ-20 ಜನ್ ಭಾಗೀದಾರಿ ಬಗ್ಗೆ, ಹಾಗೂ ಇದೆಲ್ಲದರಲ್ಲಿ ಎಲ್ಲಾ ಭಾರತ ನಾಗರಿಕರನ್ನು ತೊಡಗಿಸಿಗೊಳ್ಳುವ ಅತ್ಯುತ್ತಮ ಮಾರ್ಗವಾಗಿದೆ" ಎಂದು ಹೇಳಿದರು.

ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್ ಗೆ ಚಾಲನೆ ನೀಡಿದ ಭಾರತದ ಜಿ20 ಷರ್ಪಾ ಶ್ರೀ ಅಮಿತಾಭ್ ಕಾಂತ್

ಎಂ.ಇ.ಐ.ಟಿ.ವೈ. ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ ಅವರು ಮಾತನಾಡಿ, "ನಮ್ಮ ಪ್ರಧಾನ ಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಡಿಜಿಟಲ್ ಸಾರ್ವಜನಿಕ ಸರಕುಗಳು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಗಣನೀಯ ಕೆಲಸ ಮಾಡಿದೆ. ಇದನ್ನು ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್ ಮೂಲಕ ಅತ್ಯಂತ ಸರಳ ಮತ್ತು ಸುಲಭ ರೀತಿಯಲ್ಲಿ ವಿವರಿಸುವುದು ನಮ್ಮ ಪ್ರಯತ್ನವಾಗಿದೆ. ಈ ವ್ಯಾನ್ ಶಾಲೆಗಳು ಮತ್ತು ಕಾಲೇಜುಗಳಿಗೆ ಹೋಗುತ್ತದೆ, ಅಲ್ಲಿ ಮಕ್ಕಳು ಮತ್ತು ನಾಗರಿಕರು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಯಾವರೀತಿಯ ದಾಪುಗಾಲು ಹಾಕಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಮತ್ತು ಭಾರತದಲ್ಲಿ ತಾಂತ್ರಿಕ ಪ್ರಗತಿ ಹೇಗೆ ನಡೆದಿದೆ ಎಂಬುದರ ಬಗ್ಗೆ ಕಲಿಯುತ್ತಾರೆ" ಎಂದು ತಿಳಿಸಿದರು.

ದೇಶದಲ್ಲಿ ಡಿಜಿಟಲ್ ಸೇವೆಗಳ ಬಳಕೆಗೆ ಉತ್ತೇಜನ ನೀಡಲು ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ವಿವಿಧ ಉಪಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು, ಮೊಬೈಲ್ ವ್ಯಾನ್ ನಾಗರಿಕರಿಗೆ ತಂತ್ರಜ್ಞಾನದ ಶಕ್ತಿಯನ್ನು ನೇರವಾಗಿ ಅನುಭವಿಸಲು ಅನನ್ಯ ಅವಕಾಶವನ್ನು ನೀಡುತ್ತದೆ. ಡಿಜಿಟಲ್ ಇಂಡಿಯಾದ ಅಪ್ರತಿಮ ಪ್ರಯಾಣದ ಭವ್ಯ ಪ್ರದರ್ಶನವು 2014ರಿಂದ ಡಿಜಿಟಲ್ ಇಂಡಿಯಾದ ಪ್ರಮುಖ ಮೈಲಿಗಲ್ಲುಗಳ ಮೂಲಕ ಅವರಿಗೆ ವಿವರ ನೀಡುತ್ತದೆ, ಡಿಜಿಟಲ್ ಕ್ಷೇತ್ರದಲ್ಲಿ ಮಾಡಿದ ಪ್ರಗತಿಗಳಿಗೆ ಅದು ಜೀವ ತುಂಬುತ್ತದೆ. 

ಎಂ.ಇ.ಐ.ಟಿ.ವೈ. ರಾಷ್ಟ್ರೀಯ ಇ-ಆಡಳಿತ ವಿಭಾಗದ ಅಧ್ಯಕ್ಷ ಮತ್ತು ಸಿಇಒ ಶ್ರೀ ಅಭಿಷೇಕ್ ಸಿಂಗ್ ಅವರು ಸಭಿಕರಿಗೆ, "ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್ ಜಿ-20 ಡಿಇಡಬ್ಲ್ಯೂಜಿ ಮತ್ತು ಡಿಜಿಟಲ್ ಇಂಡಿಯಾದ ಬಗ್ಗೆ ಜನಸಾಮಾನ್ಯರಿಗೆ ಸಂವಹನ ನಡೆಸಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಸೇವೆಯ ಬಗ್ಗೆ ಓದುವ ಬದಲು, ಜನರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಸಂಖ್ಯಾತ ಡಿಜಿಟಲ್ ಇಂಡಿಯಾ ಸೇವೆಗಳ ಅನುಭವವನ್ನು ಪಡೆಯಬಹುದು ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳಬಹುದು" ಎಂದು ಮಾಹಿತಿ ನೀಡಿದರು.

ವರ್ಚುವಲ್ ರಿಯಾಲಿಟಿ ಸೆಟಪ್ ಸಂದರ್ಶಕರಿಗೆ ಕಾರ್ ಸಿಮ್ಯುಲೇಟರ್ ಮೂಲಕ ಗ್ರಾಮದಲ್ಲಿ ಪ್ರಯಾಣಿಸಲು ಮತ್ತು ಅವರ ಪ್ರಯಾಣದ ಸಮಯದಲ್ಲಿ ವಿವಿಧ ಎಐ ಅಪ್ಲಿಕೇಶನ್ ಗಳನ್ನು ಅನುಭವಿಸಲು ಅದ್ಭುತ ಅವಕಾಶವನ್ನು ನೀಡುತ್ತದೆ. ಡಿಜಿಟಲ್ ಇಂಡಿಯಾ ಗ್ರಾಮೀಣ ಪ್ರದೇಶಗಳಲ್ಲಿನ ವ್ಯಕ್ತಿಗಳ ಜೀವನವನ್ನು ಹೇಗೆ ಪರಿವರ್ತಿಸಿದೆ ಎಂಬುದನ್ನು ಸಂದರ್ಶಕರು ನೇರವಾಗಿ ಅನುಭವಿಸಲು ಸಾಧ್ಯವಾಗುತ್ತದೆ.  ಒಂದು ಕಾಲದಲ್ಲಿ ಸಾಧಿಸಲು ಅಸಾಧ್ಯವೆಂದು ಪರಿಗಣಿಸಲಾದ ಈ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಅವರಿಗೆ ಪ್ರವೇಶವನ್ನು ಒದಗಿಸುತ್ತದೆ. 

ವರ್ಚುವಲ್ ರಿಯಾಲಿಟಿ ಸೆಟಪ್ ಗೆ ಸಾಕ್ಷಿಯಾದ ಭಾರತದ ಜಿ-20 ಷರ್ಪಾ ಶ್ರೀ ಅಮಿತಾಭ್ ಕಾಂತ್

ವ್ಯಾನ್ ನ ಹೊರಾಂಗಣದಲ್ಲಿ ಇರಿಸಲಾದ ಎರಡು ಪರದೆಗಳಲ್ಲಿ ಸಂವಾದಾತ್ಮಕ ರಸಪ್ರಶ್ನೆ ಕಾರ್ಯಕ್ರಮವು ನಾಗರಿಕರನ್ನು ರಂಜಿಸಿ ಶಿಕ್ಷಣ ನೀಡುತ್ತದೆ. ಇದು ಡಿಜಿಟಲ್ ಇಂಡಿಯಾ ಮತ್ತು ಜಿ-20 ಡಿಇಡಬ್ಲ್ಯೂಜಿಯ ಜ್ಞಾನವನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. 

ಡಿಜಿಟಲ್ ಇಂಡಿಯಾ ಮೊಬೈಲ್ ವ್ಯಾನ್ ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರತಿನಿಧಿಸುತ್ತದೆ, ನಾಗರಿಕರಿಗೆ ಅನನ್ಯ ಮತ್ತು ಆಕರ್ಷಕ ಅನುಭವವನ್ನು ಒದಗಿಸುತ್ತದೆ. ಇದು ರಾಷ್ಟ್ರದ ಡಿಜಿಟಲ್ ರೂಪಾಂತರ ಪ್ರಯಾಣವನ್ನು ಪ್ರದರ್ಶಿಸುತ್ತದೆ. ಡಿಜಿಟಲ್ ಇಂಡಿಯಾ ಪ್ರಯಾಣವನ್ನು ಪುನರುಜ್ಜೀವನಗೊಳಿಸಲು ಎಂಇಐಟಿವೈ ಭಾರತದ ನಾಗರಿಕರಿಗೆ ಈ ಒಂದು ಅವಕಾಶವನ್ನು ನೀಡುತ್ತಿದೆ.

ಈ ವ್ಯಾನ್ ಅನ್ನು ನವದೆಹಲಿಯಿಂದ ಲಕ್ನೋಗೆ ಕಳುಹಿಸಲಾಯಿತು. ಇದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ. ಈ ವ್ಯಾನ್ ಫೆಬ್ರವರಿ 03ರಿಂದ 16, 2023 ರವರೆಗೆ ಲಕ್ನೋ ನಗರದಲ್ಲಿ ತನ್ನ ಮೊದಲ ಪ್ರವಾಸವನ್ನು ಕೈಗೊಳ್ಳಲಿದೆ.

***

 



(Release ID: 1896071) Visitor Counter : 184