ಸಹಕಾರ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರ ಉಪಸ್ಥಿತಿಯಲ್ಲಿ, ಸಹಕಾರ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ನಬಾರ್ಡ್ ಮತ್ತು ಸಿಎಸ್ ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ನಡುವೆ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು.


ಈ ತಿಳಿವಳಿಕಾ ಒಡಂಬಡಿಕೆಯು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ (ಪಿಎಸಿಎಸ್) ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ ಸಿ) ನೀಡುವ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಸಹಕಾರದಿಂದ ಸಮೃದ್ಧಿಯ" ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಈ ತಿಳಿವಳಿಕಾ ಒಡಂಬಡಿಕೆಯು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಸಹಕಾರ ಸಚಿವರು ಬಣ್ಣಿಸಿದರು.

ಇಂದು ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಪಿಎಸಿಎಸ್ ಈಗ ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.  ಇದರೊಂದಿಗೆ, ಪಿಎಸಿಎಸ್ ನ 13 ಕೋಟಿ ರೈತ ಸದಸ್ಯರು ಸೇರಿದಂತೆ 300 ಕ್ಕೂ ಹೆಚ್ಚು ಸೇವೆಗಳು ಗ್ರಾಮೀಣ ಜನರಿಗೆ ಲಭ್ಯವಾಗಲಿವೆ.

ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಒಂದಲ್ಲ ಒಂದು ರೀತಿಯಲ್ಲಿ ಸಹಕಾರಿ ಸಂಘಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, ಈ ಕಾರಣದಿಂದಾಗಿ ಪಿಎಸಿಎಸ್ ಸಾಮಾನ್ಯ ಸೇವಾ ಕೇಂದ್ರಗಳಾಗಿ (ಸಿಎಸ್ ಸಿ) ಕಾರ್ಯನಿರ್ವಹಿಸುವುದರಿಂದ, ಅದರ ಸೇವೆಗಳನ್ನು ದೇಶದ ಸಣ್ಣ ಹಳ್ಳಿಗಳಿಗೂ ತಲುಪಿಸಲು ಅನುಕೂಲವಾಗುತ್ತದೆ.

ಪಿಎಸಿಎಸ್ ಗಳು ಸಹಕಾರಿ ಸಂಘಗಳ ಆತ್ಮವಾಗಿದ್ದು, ಸುಮಾರು 20 ಸೇವೆಗಳನ್ನು ಸಂಪರ್ಕಿಸುವ ಮೂಲಕ ಅವುಗಳನ್ನು ವಿವಿಧೋದ್ದೇಶಗಳನ್ನಾಗಿ ಮಾಡುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ.

ಈ ನಿರ್ಧಾರವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಸಹಕಾರದಿಂದ ಸಮೃದ್ಧಿಯ' ಕನಸನ್ನು ಈಡೇರಿಸಲು ಮತ್ತು ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣಾಭಿವೃದ್ಧಿಯ ಬೆನ್ನೆಲುಬನ್ನಾಗಿ ಮಾಡಲು ಸಹಾಯ ಮಾಡುತ್ತದೆ, ಇದರೊಂದಿಗೆ ಸಹಕಾರಿ ಆಂದೋಲನವನ್ನು ಬಲಪಡಿಸಲಾಗುವುದು ಮತ್ತು ಇದರಿಂದ ರೈತರು ಸಹ ಸಶಕ್ತರಾಗುತ್ತಾರೆ.

ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಪಿಎಸಿಎಸ್ ಗಳ ರಚನೆ, ಪ್ರತಿ ಪಂಚಾಯಿತಿಯಲ್ಲಿ ವಿವಿಧೋದ್ದೇಶ ಪಿಎಸಿಎಸ್ ರಚನೆ ಮತ್ತು ಈ ವರ್ಷದ ಬಜೆಟ್ ನಲ್ಲಿ ವಿಶ್ವದ ಅತಿದೊಡ್ಡ ಶೇಖರಣಾ ಯೋಜನೆಗೆ ಪ್ರಧಾನಿ ಅವಕಾಶ ಕಲ್ಪಿಸಿದ್ದಾರೆ.

Posted On: 02 FEB 2023 7:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಸಹಕಾರದಿಂದ ಸಮೃದ್ಧಿಯ' ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡು, ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮತ್ತು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ರವರ ಉಪಸ್ಥಿತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (ಪಿಎಸಿಎಸ್) ಸಾಮಾನ್ಯ ಸೇವಾ ಕೇಂದ್ರಗಳು ಒದಗಿಸುವ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುವ ತಿಳಿವಳಿಕಾ ಒಡಂಬಡಿಕೆಗೆ ಇಂದು ಅಂಕಿತ ಹಾಕಲಾಯಿತು. ಸಹಕಾರ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ನಬಾರ್ಡ್ ಮತ್ತು ಸಿಎಸ್ ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ನಡುವೆ ನವದೆಹಲಿಯಲ್ಲಿ ಈ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು. ಸಹಕಾರ ಖಾತೆ ರಾಜ್ಯ ಸಚಿವ ಶ್ರೀ ಬಿ.ಎಲ್.ವರ್ಮಾ, ಕಾರ್ಯದರ್ಶಿ, ಸಹಕಾರ ಸಚಿವಾಲಯ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಸಹಕಾರ ಸಚಿವಾಲಯ, ನಬಾರ್ಡ್ ಮತ್ತು ಎನ್ ಸಿಡಿಸಿಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ತಮ್ಮ ಭಾಷಣದಲ್ಲಿ, ಪಿಎಸಿಎಸ್ ಗಳು ಸಹಕಾರಿ ಸಂಸ್ಥೆಗಳ ಆತ್ಮವಾಗಿವೆ. ಸುಮಾರು 20 ಸೇವೆಗಳನ್ನು ಒದಗಿಸುವ ಪಿಎಸಿಎಸ್ ಗಳನ್ನು ವಿವಿಧೋದ್ದೇಶಗಳನ್ನಾಗಿ ಮಾಡುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ ಎಂದು ಹೇಳಿದರು. ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಪಿಎಸಿಎಸ್ ಗಳ ಪಾತ್ರ ಮತ್ತು ಕೊಡುಗೆ ಬಹಳ ಮುಖ್ಯ ಎಂದು ಅವರು ಹೇಳಿದರು. ಈ ಒಪ್ಪಂದವನ್ನು ಎಲ್ಲರಿಗೂ ಸಮಾನ ಗೆಲುವಿನ ಪರಿಸ್ಥಿತಿ ಎಂದು ಬಣ್ಣಿಸಿದ ಅವರು, ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ಸಹಕಾರದಿಂದ ಸಮೃದ್ಧಿಯ' ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ, ಇದು ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣಾಭಿವೃದ್ಧಿಯ ಬೆನ್ನೆಲುಬಾಗಿ ಮಾಡುವುದಲ್ಲದೆ, ಸಹಕಾರಿ ಸಂಸ್ಥೆಗಳು ಮತ್ತು ರೈತರು ಇಬ್ಬರನ್ನೂ ಬಲಪಡಿಸುತ್ತದೆ ಎಂದು ತಿಳಿಸಿದರು. ಇದು ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ ಸಿ) ಪರಿಕಲ್ಪನೆಯನ್ನು ದೇಶದ ಅತ್ಯಂತ ಸಣ್ಣ ಘಟಕಗಳಿಗೆ ಸುಲಭವಾಗಿ ಅಳವಡಿಸಲು ಸಹಾಯ ಮಾಡುತ್ತದೆ ಎಂದು ಶ್ರೀ ಶಾ ಹೇಳಿದರು.

ದೇಶದ ಜನಸಂಖ್ಯೆಯ ಸುಮಾರು 50 ಪ್ರತಿಶತದಷ್ಟು ಜನರು ಒಂದಲ್ಲ ಒಂದು ರೀತಿಯಲ್ಲಿ ಸಹಕಾರಿ ಸಂಘಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅಂತಹ ದೊಡ್ಡ ವಲಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪಿಎಸಿಎಸ್ ಅನ್ನು ಕಾರ್ಯಸಾಧ್ಯವಾಗಿಸುವುದು ಸಹಕಾರಿ ಕ್ಷೇತ್ರದ ಮುಂದಿರುವ ಅತಿದೊಡ್ಡ ಸಮಸ್ಯೆಯಾಗಿದ್ದು, ಇಂದು ಪಿಎಸಿಎಸ್ ಕಾರ್ಯನಿರ್ವಹಣೆಗೆ ಅನೇಕ ಹೊಸ ಆಯಾಮಗಳನ್ನು ತೆರೆಯುವ ಮೂಲಕ ಹೊಸ ಆರಂಭವನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಪಿಎಸಿಎಸ್ ಈಗ ನೀರಿನ ವಿತರಣೆ, ಸಂಗ್ರಹಣೆ, ಬ್ಯಾಂಕ್ ಮಿತ್ರ ಸೇರಿದಂತೆ 20 ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಸಾಮಾನ್ಯ ಸೇವಾ ಕೇಂದ್ರಗಳು ಒದಗಿಸುವ ಸೇವೆಗಳನ್ನು ಪಿಎಸಿಎಸ್ ಗಳ ಮೂಲಕ ಗ್ರಾಮೀಣ ಜನರಿಗೆ ಲಭ್ಯವಾಗುವಂತೆ ಮಾಡುವುದು ಮೊದಲ ಮತ್ತು ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ವರ್ಷದ ಬಜೆಟ್ ನಲ್ಲಿ ಸಹಕಾರಿ ಕ್ಷೇತ್ರಕ್ಕೆ ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಪಿಎಸಿಎಸ್ ಗಳನ್ನು ಸೃಷ್ಟಿಸಲು ಮತ್ತು ಪ್ರತಿ ಪಂಚಾಯಿತಿಯಲ್ಲಿ ವಿವಿಧೋದ್ದೇಶ ಪಿಎಸಿಎಸ್ ಗಳನ್ನು ರಚಿಸಲು ಈ ವರ್ಷದ ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ಈ ಬಜೆಟ್ ನಲ್ಲಿ ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಶೇಖರಣಾ ಯೋಜನೆಯ ಅಡಿಪಾಯವನ್ನು ಹಾಕಲಾಗಿದೆ. ಸಹಕಾರಿ ಕ್ಷೇತ್ರದ ರಾಷ್ಟ್ರೀಯ ಡೇಟಾಬೇಸ್ ರಚನೆಯು ಶೇ.70ರಷ್ಟು ಪೂರ್ಣಗೊಂಡಿದೆ ಎಂದು ಶ್ರೀ ಶಾ ಹೇಳಿದರು. ಇದಲ್ಲದೆ, ಎಲ್ಲಾ ಪಾಲುದಾರರೊಂದಿಗೆ ಚರ್ಚಿಸಿದ ನಂತರ ಮಾದರಿ ಉಪವಿಧಿಗಳನ್ನು ಸಿದ್ಧಪಡಿಸಿ ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗಿದೆ.

ಇಂದು ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಪಿಎಸಿಎಸ್ ಗಳು ಈಗ ಸಾಮಾನ್ಯ ಸೇವಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಪಿಎಸಿಎಸ್ ನ 13 ಕೋಟಿ ರೈತ ಸದಸ್ಯರು ಸೇರಿದಂತೆ 300 ಕ್ಕೂ ಹೆಚ್ಚು ಸೇವೆಗಳು ಗ್ರಾಮೀಣ ಜನರಿಗೆ ಲಭ್ಯವಾಗಲಿವೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರು ಹೇಳಿದರು. ಇದು ಪಿಎಸಿಎಸ್ ನ ವ್ಯವಹಾರ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಅವುಗಳನ್ನು ಸ್ವಾವಲಂಬಿ ಆರ್ಥಿಕ ಘಟಕಗಳಾಗಲು ಸಹಾಯ ಮಾಡುತ್ತದೆ. ಈ ಉಪಕ್ರಮದೊಂದಿಗೆ ಬ್ಯಾಂಕಿಂಗ್, ವಿಮೆ, ಆಧಾರ್ ನೋಂದಣಿ / ನವೀಕರಣ, ಕಾನೂನು ಸೇವೆಗಳು, ಕೃಷಿ ಉಪಕರಣಗಳು, ಪಾನ್ ಕಾರ್ಡ್, ಐಆರ್ ಸಿಟಿಸಿ ರೈಲು, ಬಸ್ ಮತ್ತು ವಿಮಾನ ಟಿಕೆಟ್ ಸಂಬಂಧಿತ ಸೇವೆಗಳು ಸೇರಿದಂತೆ ಸಿಎಸ್ ಸಿ ಯೋಜನೆಯ ಡಿಜಿಟಲ್ ಸೇವಾ ಪೋರ್ಟಲ್ ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಸೇವೆಗಳನ್ನು ನಾಗರಿಕರಿಗೆ ಒದಗಿಸಲು ಪಿಎಸಿಎಸ್ ಗೆ ಸಾಧ್ಯವಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಪಿಎಸಿಎಸ್ ಗಣಕೀಕರಣದ ಕೇಂದ್ರ ಪ್ರಾಯೋಜಿತ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿರುವ ರಾಷ್ಟ್ರೀಯ ಸಾಫ್ಟ್ವೇರ್ ಅನ್ನು ಪಿಎಸಿಎಸ್ ಗಳು ಸಿಎಸ್ ಸಿಗಳಾಗಿ ಕಾರ್ಯನಿರ್ವಹಿಸಲು ಬಳಸಲಾಗುವುದು.  ಇದು ದೊಡ್ಡ ಸಾಧನೆಯಾಗಲಿದೆ ಎಂದು ಅವರು ತಿಳಿಸಿದರು.

*****



(Release ID: 1895877) Visitor Counter : 201