ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​ಶಾಂಘೈ ಸಹಕಾರ ಸಂಘ-SCO ಚಲನಚಿತ್ರೋತ್ಸವದಲ್ಲಿ ನಡೆದ ತಜ್ಞರ ಸಂವಾದದಲ್ಲಿ ಭಾರತೀಯ ಆನಿಮೇಷನ್‌ನ ಇತಿಹಾಸ ಮತ್ತು ಭವಿಷ್ಯದ ಬಗ್ಗೆ ಪ್ರಸ್ತುತಪಡಿಸುವಿಕೆ


ಭಾರತೀಯ ಆನಿಮೇಷನ್ ಉದ್ಯಮವು ಸೃಜನಶೀಲ ನಾಯಕತ್ವವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ: ಕಿರೀತ್ ಖುರಾನಾ

Posted On: 30 JAN 2023 3:48PM by PIB Bengaluru

ಬೈನಲ್ಲಿ ನಡೆದ ಶಾಂಘೈ ಸಹಕಾರ ಸಂಘ-SCO ಚಲನಚಿತ್ರೋತ್ಸವದ 4 ನೇ ದಿನದಂದು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕಿರೀತ್ ಖುರಾನಾ ಅವರು ''ಭಾರತೀಯ ಆನಿಮೇಷನ್: ಇತಿಹಾಸ ಮತ್ತು ಭವಿಷ್ಯ'' ಕುರಿತು ಮುಖ್ಯ ಸಂವಾದವನ್ನು ನಡೆಸಿಕೊಟ್ಟರು. ಕಿರೀತ್ ಖುರಾನಾ ಅವರು ಭಾರತದಲ್ಲಿ ಆನಿಮೇಷನ್ ಚಲನಚಿತ್ರ ತಯಾರಿಕೆಯ ಬೆಳವಣಿಗೆಯನ್ನು ವಿವರಿಸುತ್ತಾ, ಪ್ರೇಕ್ಷಕರಿಗೆ ಮನಮುಟ್ಟುವಂತೆ ಮಾತನಾಡಿದರು. ಭಾರತದಲ್ಲಿ ಆನಿಮೇಷನ್ ಉದ್ಯಮದ ಪ್ರಾರಂಭದಲ್ಲಿ ಕ್ಲೇರ್ ವೀಕ್ಸ್ ವಹಿಸಿದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದರು. ಅವರ ಆಶ್ರಿತರಾದ ರಾಮ್ ಮೋಹನ್ ಅವರು ಭಾರತೀಯ ಆನಿಮೇಷನ್ ಉದ್ಯಮದ ಪಿತಾಮಹರಾಗಿ ಹೇಗೆ ಬೆಳೆದರು ಎಂಬುದನ್ನು ಕೂಡ ವಿವರಿಸಿದರು. 

1955 ರಲ್ಲಿ ಮುಂಬೈನ ಫಿಲ್ಮ್ ಡಿವಿಷನ್ ಕಾಂಪ್ಲೆಕ್ಸ್‌ನಲ್ಲಿ ಸರ್ಕಾರವು ಕಾರ್ಟೂನ್ ಫಿಲ್ಮ್ ಘಟಕವನ್ನು ಸ್ಥಾಪಿಸುವುದರೊಂದಿಗೆ ಭಾರತದಲ್ಲಿ ಆನಿಮೇಷನ್‌ನ ಪ್ರಯಣವು ಪ್ರಾರಂಭವಾಯಿತು. ನಂತರದ ದಶಕಗಳಲ್ಲಿ ರಾಮ್ ಮೋಹನ್ ಅವರು ಮೊದಲ ಆನಿಮೇಷನ್ ಟೆಲಿ ಫಿಲ್ಮ್, ಬನ್ಯನ್ ಡೀರ್ ಸೇರಿದಂತೆ ವಿವಿಧ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ನಿರ್ಮಿಸಿದರು. ಭೀಮ್ ಸೇನ್ ಮತ್ತು ವಿಜಿ ಸಮಂತ್ ಆ ಕಾಲದ ಇತರ ಪ್ರಮುಖ ಚಲನಚಿತ್ರ ನಿರ್ಮಾಪಕರಾಗಿದ್ದರು. 

ಭಾರತೀಯ ಆನಿಮೇಷನ್ ಉದ್ಯಮವು 1992ರಲ್ಲಿ ಕಾರ್ಟೂನ್ ಪಾತ್ರ 'ಮೀನಾ' ಮತ್ತು ಅವಳ ಗಿಳಿ 'ಮಿಥೂ' ರಚನೆಯೊಂದಿಗೆ ದೊಡ್ಡ ಯಶಸ್ಸು ತೆಗೆದುಕೊಂಡಿತು. ಹೆಣ್ಣು ಶಿಶುಹತ್ಯೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಯುನೆಸ್ಕೋದ ಆಶ್ರಯದಲ್ಲಿ ಇದನ್ನು ಮಾಡಲಾಯಿತು. ನಂತರ, ಮೀನಾ ಪಾತ್ರವು ಆಫ್ರಿಕನ್ ಸನ್ನಿವೇಶದಲ್ಲಿ ಸನಾ ಎಂಬ ಇನ್ನೊಂದು ಪಾತ್ರದ ಸೃಷ್ಟಿಗೆ ಸ್ಫೂರ್ತಿ ನೀಡಿತು. ಆ ಅವಧಿಯ ಮತ್ತೊಂದು ಹೆಗ್ಗುರುತಾಗಿರುವ ಆನಿಮೇಷನ್ ಚಲನಚಿತ್ರ 'ರಾಮಾಯಣ' ಜಪಾನಿನ ಸಹಾಯದಿಂದ ಸಹ-ನಿರ್ಮಾಣವಾಯಿತು. ಎರಡೂ ಸಿನಿಮಾಗಳಲ್ಲಿ ರಾಮ್ ಮೋಹನ್ ಅವರ ಕೊಡುಗೆ ಅಪಾರ. ನಂತರದ ದಶಕಗಳಲ್ಲಿ ಆನಿಮೇಷನ್ ಉದ್ಯಮವು ವಿಕಸನಗೊಳ್ಳುತ್ತಾ ಹೋಯಿತು. ಅರ್ಜುನ, ಗೂಪಿ ಗವಯ್ಯ ಮತ್ತು ಬಾಗ ಬಜಯ್ಯ ಮುಂತಾದ ಚಲನಚಿತ್ರಗಳು ಅಸ್ತಿತ್ವ ಕಂಡವು. 

ಆಧುನಿಕ ಕಾಲದಲ್ಲಿ VFX ಹೇಗೆ ಆನಿಮೇಷನ್ ಉದ್ಯಮದ ಹೊಸ ಅವತಾರವಾಗಿ ಹೊರಹೊಮ್ಮಿದೆ ಎಂಬುದನ್ನು ಕಿರೀತ್ ಖುರಾನಾ ವಿವರಿಸಿದರು. ಉಪಮನ್ಯು ಭಟ್ಟಾಚಾರ್ಯರಂತಹ ಭಾರತೀಯ ಚಲನಚಿತ್ರ ನಿರ್ಮಾಪಕರ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಅವರು ಇದೇ ಹಾದಿಯಲ್ಲಿ 'ವಡ' ದಂತಹ ಚಲನಚಿತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಆನಿಮೇಷನ್ ಉದ್ಯಮವು ಗೇಮಿಂಗ್ ಮತ್ತು ಕಾಮಿಕ್ಸ್ ಉದ್ಯಮಗಳಲ್ಲಿ ಹೆಚ್ಚಿನ ಸೆಳೆತವನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು. 

ಆನಿಮೇಷನ್ ಚಿತ್ರ ತಯಾರಿ, ಉದ್ಯಮದ ಸವಾಲುಗಳ ಕುರಿತು ಮಾತನಾಡಿದ ಖುರಾನಾ, ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಪ್ರದರ್ಶಿಸಲು ಸರಿಯಾದ ವೇದಿಕೆಗಳು ಸಿಗುವುದಿಲ್ಲ ಎಂದು ಹೇಳಿದರು. ಲೈವ್ ಆಕ್ಷನ್ ಚಲನಚಿತ್ರಗಳಿಗೆ ಹೋಲಿಸಿದರೆ ಅವರ ಕೊಡುಗೆಯನ್ನು ಗುರುತಿಸುತ್ತಿಲ್ಲ. ಭಾರತದಲ್ಲಿ, ಆನಿಮೇಷನ್ ಉದ್ಯಮವು ಬ್ಯಾಕೆಂಡ್ ಜಾಬ್(ಉದ್ಯೋಗಗಳಾಗಿ) ಗಳಾಗಿ ಮಾತ್ರ ಗುರುತಿಸಿವೆ ಎಂದರು. ಆನಿಮೇಷನ್ ಉದ್ಯಮದ ಬೆಳವಣಿಗೆಗೆ ಅನುಕೂಲವಾಗುವಂತೆ ಫ್ರಾನ್ಸ್‌ನಲ್ಲಿ ಅನ್ನೆಸಿಯಂತಹ ಅನಿಮೇಷನ್ ಉತ್ಸವವನ್ನು ಆಯೋಜಿಸಲು ಭಾರತಕ್ಕೆ ಸಲಹೆ ನೀಡಿದರು. ವಿಶ್ವಪ್ರಸಿದ್ಧವಾಗಿರುವ ಜಪಾನ್‌ನ ಅನಿಮೆ ಉದ್ಯಮದ ಹಾದಿಯನ್ನು ಭಾರತವು ಅನುಸರಿಸಬೇಕು ಎಂದು ಅವರು ಹೇಳಿದರು. 2030ರ ವೇಳೆಗೆ ಉದ್ಯಮವು ಈಗಿರುವ 1.3 ಬಿಲಿಯನ್ ಡಾಲರ್ ನಿಂದ 40 ಬಿಲಿಯನ್ ಡಾಲರ್ ಗೆ ಬೆಳೆಯುವ ಸಾಮರ್ಥ್ಯವನ್ನು ಹೊಂದಿದ್ದು ಸುಮಾರು 20 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಖುರಾನಾ ಆಶಾವಾದ ವ್ಯಕ್ತಪಡಿಸಿದರು.

*****



(Release ID: 1894823) Visitor Counter : 91