ಪ್ರಧಾನ ಮಂತ್ರಿಯವರ ಕಛೇರಿ
ರಾಜಸ್ತಾನದ ಭಿಲ್ವಾರದಲ್ಲಿ ಭಗವಾನ್ ಶ್ರೀ ದೇವನಾರಾಯಣ್ ಅವರ 1111ನೇ 'ಅವತರಣ ಮಹೋತ್ಸವ'ದ ಅಂಗವಾಗಿ ನಡೆದ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ
ಮಂದಿರ ದರ್ಶನ, ಪರಿಕ್ರಮ ಮತ್ತು ವಿಷ್ಣು ಮಹಾಯಜ್ಞದಲ್ಲಿ ಪೂರ್ಣಾಹುತಿ ಸಮರ್ಪಣೆ
ರಾಷ್ಟ್ರದ ನಿರಂತರ ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕಾಗಿ ಭಗವಾನ್ ಶ್ರೀ ದೇವನಾರಾಯಣ್ ಅವರ ಆಶೀರ್ವಾದ ಕೋರಿದೆ
ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಸೈದ್ಧಾಂತಿಕವಾಗಿ ಭಾರತವನ್ನು ಒಡೆಯುವ ಅನೇಕ ಪ್ರಯತ್ನಗಳ ಹೊರತಾಗಿಯೂ, ಯಾವುದೇ ಶಕ್ತಿಗೂ ಭಾರತವನ್ನು ನಾಶಪಡಿಸಲು ಸಾಧ್ಯವಾಗಲಿಲ್ಲ
ಇದು ರಾಷ್ಟ್ರದ ಅಮರತ್ವವನ್ನು ಕಾಪಾಡುವ ಭಾರತೀಯ ಸಮಾಜದ ಶಕ್ತಿ ಮತ್ತು ಸ್ಫೂರ್ತಿಯಾಗಿದೆ"
ಭಗವಾನ್ ದೇವನಾರಾಯಣ್ ಅವರು 'ಸಬ್ಕಾ ಸಾಥ್' ಮೂಲಕ 'ಸಬ್ಕಾ ವಿಕಾಸ್' ಮಾರ್ಗವನ್ನು ತೋರಿಸಿದ್ದಾರೆ ಮತ್ತು ಇಂದು ದೇಶವು ಅದೇ ಮಾರ್ಗವನ್ನು ಅನುಸರಿಸುತ್ತಿದೆ"
ವಂಚಿತ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸಲು ದೇಶವು ಪ್ರಯತ್ನಿಸುತ್ತಿದೆ"
ಅದು ರಾಷ್ಟ್ರೀಯ ರಕ್ಷಣೆಯಾಗಿರಲಿ ಅಥವಾ ಸಂಸ್ಕೃತಿಯ ಸಂರಕ್ಷಣೆಯಾಗಿರಲಿ, ಗುರ್ಜರ್ ಸಮುದಾಯವು ಎಲ್ಲ ಕಾಲಘಟ್ಟದಲ್ಲೂ ರಕ್ಷಕನ ಪಾತ್ರವನ್ನು ವಹಿಸಿದೆ"
ನವ ಭಾರತವು ಕಳೆದ ದಶಕಗಳ ತಪ್ಪುಗಳನ್ನು ಸರಿಪಡಿಸುತ್ತಿದೆ ಮತ್ತು ತನ್ನ ಆಜ್ಞಾತ ಸಾಧಕ ನಾಯಕರನ್ನು ಗೌರವಿಸುತ್ತಿದೆ"
Posted On:
28 JAN 2023 2:11PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಜಸ್ಥಾನದ ಭಿಲ್ವಾರಾದಲ್ಲಿ ಭಗವಾನ್ ಶ್ರೀ ದೇವನಾರಾಯಣ ಅವರ 1111ನೇ 'ಅವತರಣ ಮಹೋತ್ಸವ'ದ ಅಂಗವಾಗಿ ನಡೆದ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಮಂತ್ರಿಯವರು ಮಂದಿರ ದರ್ಶನ ಮಾಡಿ, ಪರಿಕ್ರಮದ ಬಳಿಕ ಬೇವಿನ ಸಸಿಯನ್ನು ನೆಟ್ಟರು. ಯಜ್ಞ ಶಾಲೆಯಲ್ಲಿ ನಡೆಯುತ್ತಿದ್ದ ವಿಷ್ಣು ಮಹಾಯಜ್ಞದಲ್ಲಿ ಅವರು ಪೂರ್ಣಾಹುತಿಯನ್ನು ಅರ್ಪಿಸಿದರು. ಭಗವಾನ್ ಶ್ರೀ ದೇವನಾರಾಯಣ್ ಅವರನ್ನು ರಾಜಸ್ಥಾನದ ಜನರು ಪೂಜಿಸುತ್ತಾರೆ ಮತ್ತು ಅವರ ಅನುಯಾಯಿಗಳು ದೇಶದ ಉದ್ದಗಲಕ್ಕೂ ಇದ್ದಾರೆ. ಅವರು ವಿಶೇಷವಾಗಿ ಮಾಡಿದ ಸಾರ್ವಜನಿಕ ಸೇವೆ ಕಾರ್ಯಕ್ಕಾಗಿ ಗೌರವ ಪಡೆದಿದ್ದಾರೆ.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಶುಭ ಸಂದರ್ಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಭಗವಾನ್ ಶ್ರೀ ದೇವನಾರಾಯಣ್ ಅವರ ಆಶೀರ್ವಾದ ಪಡೆಯ ಬಯಸುವ ಯಾತ್ರಿಕನಾಗಿ ತಾವು ಇಲ್ಲಿಗೆ ಬಂದಿದ್ದಾಗಿ ಪ್ರಧಾನಮಂತ್ರಿ ಒತ್ತಿ ಹೇಳಿದರು. ಯಾಗ ಶಾಲೆಯಲ್ಲಿ ನಡೆಯುತ್ತಿದ್ದ ವಿಷ್ಣು ಮಹಾಯಜ್ಞದಲ್ಲಿ ಪೂರ್ಣಾಹುತಿ ಅರ್ಪಿಸಲು ಸಾಧ್ಯವಾಗಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದರು. "ದೇವನಾರಾಯಣ್ ಮತ್ತು ಜನತಾ ಜನಾರ್ದನ ಇಬ್ಬರ 'ದರ್ಶನ' ಪಡೆಯುವ ಮೂಲಕ ನಾನು ಆಶೀರ್ವಾದ ಪಡೆದಿದ್ದೇನೆ" ಎಂದು ಪ್ರಧಾನಮಂತ್ರಿ ಹೇಳಿದರು. "ಇಲ್ಲಿರುವ ಇತರ ಯಾತ್ರಾರ್ಥಿಗಳಂತೆಯೇ, ರಾಷ್ಟ್ರದ ನಿರಂತರ ಅಭಿವೃದ್ಧಿ ಮತ್ತು ಬಡವರ ಕಲ್ಯಾಣಕ್ಕಾಗಿ ನಾನು ಭಗವಾನ್ ಶ್ರೀ ದೇವನಾರಾಯಣ್ ಅವರಿಂದ ಆಶೀರ್ವಾದ ಕೋರುತ್ತೇನೆ" ಎಂದು ಪ್ರಧಾನಮಂತ್ರಿ ಹೇಳಿದರು.
ಭಗವಾನ್ ಶ್ರೀ ದೇವನಾರಾಯಣ್ ಅವರ 1111ನೇ ಅವತರಣ ದಿವಸದ ಭವ್ಯ ಸಂದರ್ಭದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕಳೆದ ಒಂದು ವಾರದಿಂದ ಇಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗುರ್ಜರ್ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗ್ಗೆ ಉಲ್ಲೇಖಿಸಿದರು. ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿದರು.
ಭಾರತೀಯ ಪ್ರಜ್ಞೆಯ ಮುಂದುವರಿದ ಪ್ರಾಚೀನ ಹರಿವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಾರತವು ಕೇವಲ ಭೂಭಾಗವಷ್ಟೇ ಅಲ್ಲ, ಅದು ನಮ್ಮ ನಾಗರಿಕತೆ, ಸಂಸ್ಕೃತಿ, ಸೌಹಾರ್ದ ಮತ್ತು ಸಾಧ್ಯತೆಗಳ ಅಭಿವ್ಯಕ್ತಿಯಾಗಿದೆ ಎಂದರು. ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಇತರ ಅನೇಕ ನಾಗರಿಕತೆಗಳು ನಾಶವಾಗಿದ್ದರೂ, ಭಾರತೀಯ ನಾಗರಿಕತೆ ಚೇತರಿಸಿಕೊಂಡ ಬಗ್ಗೆ ಮಾತನಾಡಿದರು. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಸೈದ್ಧಾಂತಿಕವಾಗಿ ಭಾರತವನ್ನು ಒಡೆಯಲು ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ, ಯಾವುದೇ ಶಕ್ತಿಯಿಂದಲೂ ಭಾರತವನ್ನು ನಾಶಗೊಳಿಸಲು ಸಾಧ್ಯವಿಲ್ಲ ಎಂದು ಶ್ರೀ ಮೋದಿ ಹೇಳಿದರು.
"ಇಂದಿನ ಭಾರತವು ಭವ್ಯ ಭವಿತವ್ಯಕ್ಕೆ ಅಡಿಪಾಯ ಹಾಕುತ್ತಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಅಮರತ್ವವನ್ನು ಕಾಪಾಡುವ ಭಾರತೀಯ ಸಮಾಜದ ಶಕ್ತಿ ಮತ್ತು ಸ್ಫೂರ್ತಿಯನ್ನು ಶ್ಲಾಘಿಸಿದರು. ಭಾರತದ ಸಾವಿರ ವರ್ಷಗಳ ಪಯಣದಲ್ಲಿ ಸಮಾಜದ ಶಕ್ತಿಯ ಕೊಡುಗೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇತಿಹಾಸದ ಪ್ರತಿಯೊಂದು ಅವಧಿಯಲ್ಲೂ ಸಮಾಜದೊಳಗೇ ಹುಟ್ಟುವ ಶಕ್ತಿ ಎಲ್ಲರಿಗೂ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಭಗವಾನ್ ಶ್ರೀ ದೇವನಾರಾಯಣ ಅವರು ಸದಾ ಸೇವೆ ಮತ್ತು ಜನರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಜನರ ಕಲ್ಯಾಣಕ್ಕಾಗಿ ಶ್ರೀ ದೇವನಾರಾಯಣ್ ಅವರ ಭಕ್ತಿ ಮತ್ತು ಮಾನವೀಯತೆಯ ಸೇವೆಯ ಆಯ್ಕೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. "ಭಗವಾನ್ ದೇವನಾರಾಯಣ್ ಅವರು 'ಸಬ್ಕಾ ಸಾಥ್' ಮೂಲಕ 'ಸಬ್ಕಾ ವಿಕಾಸ್' ಮಾರ್ಗವನ್ನು ತೋರಿಸಿದ್ದು, ಇಂದು ದೇಶವು ಅದೇ ಮಾರ್ಗವನ್ನು ಅನುಸರಿಸುತ್ತಿದೆ" ಎಂದು ಅವರು ಹೇಳಿದರು. ಕಳೆದ 8-9 ವರ್ಷಗಳಿಂದ ದೇಶವು ವಂಚಿತ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಾವು 'ವಂಚಿತರಿಗೆ ಆದ್ಯತೆ' ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು.
ಬಡವರಿಗೆ ಪಡಿತರದ ಲಭ್ಯತೆ ಮತ್ತು ಗುಣಮಟ್ಟದ ಬಗ್ಗೆ ಭಾರಿ ಅನಿಶ್ಚಿತತೆ ಇದ್ದ ಕಾಲವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇಂದು, ಪ್ರತಿಯೊಬ್ಬ ಫಲಾನುಭವಿಯೂ ಪೂರ್ಣ ಪಡಿತರವನ್ನು ಪಡೆಯುತ್ತಿದ್ದಾರೆ ಮತ್ತು ಅದನ್ನು ಉಚಿತವಾಗಿ ಪಡೆಯುತ್ತಿದ್ದಾರೆ ಎಂದು ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆಯು ವೈದ್ಯಕೀಯ ಚಿಕಿತ್ಸೆಯ ಚಿಂತೆಯನ್ನು ಪರಿಹರಿಸಿದೆ. "ನಾವು ವಸತಿ, ಶೌಚಾಲಯ, ಅನಿಲ ಸಂಪರ್ಕ ಮತ್ತು ವಿದ್ಯುತ್ ಕುರಿತಂತೆ ಬಡ ವರ್ಗದ ಕಾಳಜಿಗೆ ಸ್ಪಂದಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಆಗಿರುವ ಹಣಪೂರಣದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಬ್ಯಾಂಕುಗಳ ಬಾಗಿಲು ಎಲ್ಲರಿಗೂ ತೆರೆದಿದೆ ಎಂದರು.
ನೀರಿನ ಮೌಲ್ಯ ರಾಜಸ್ಥಾನಕ್ಕೆ ತಿಳಿದಿರುವಷ್ಟು ಬೇರೆ ಯಾರಿಗೂ ತಿಳಿದಿಲ್ಲ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ಕೇವಲ 3 ಕೋಟಿ ಕುಟುಂಬಗಳು ಮಾತ್ರ ತಮ್ಮ ಮನೆಗಳಲ್ಲಿ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದರು, 16 ಕೋಟಿಗೂ ಹೆಚ್ಚು ಕುಟುಂಬಗಳು ನೀರಿಗಾಗಿ ಪ್ರತಿದಿನವೂ ಹೆಣಗಾಡಬೇಕಾಗಿತ್ತು ಎಂದು ಅವರು ವಿಷಾದಿಸಿದರು. ಕಳೆದ ಮೂರೂವರೆ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಪ್ರಯತ್ನದಿಂದ ಈವರೆಗೆ ಹನ್ನೊಂದು ಕೋಟಿಗೂ ಹೆಚ್ಚು ಕುಟುಂಬಗಳು ಕೊಳವೆ ನೀರಿನ ಸಂಪರ್ಕಗಳನ್ನು ಪಡೆದುಕೊಂಡಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಕೃಷಿ ಭೂಮಿಗೆ ನೀರು ಪೂರೈಸಲು ದೇಶದಲ್ಲಿ ಕೈಗೊಳ್ಳಲಾಗುತ್ತಿರುವ ಸಮಗ್ರ ಕಾರ್ಯಗಳನ್ನು ಅವರು ಉಲ್ಲೇಖಿಸಿದರು. "ಸಾಂಪ್ರದಾಯಿಕ ಮಾರ್ಗಗಳ ವಿಸ್ತರಣೆಯಾಗಿರಲಿ ಅಥವಾ ನೀರಾವರಿಗಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದೇ ಆಗಿರಲಿ, ಪ್ರತಿ ಹಂತದಲ್ಲೂ ರೈತರನ್ನು ಬೆಂಬಲಿಸಲಾಗುತ್ತದೆ" ಎಂದ ಪ್ರಧಾನಮಂತ್ರಿಯವರು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಇದರ ಮೂಲಕ ರಾಜಸ್ಥಾನದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 15,000 ಕೋಟಿ ರೂ. ವರ್ಗಾವಣೆಯಾಗಿದೆ ಎಂದರು.
'ಗೋ ಸೇವೆ'ಯನ್ನು ಸಮಾಜ ಸೇವೆ ಮತ್ತು ಸಾಮಾಜಿಕ ಸಬಲೀಕರಣದ ಮಾಧ್ಯಮವನ್ನಾಗಿ ಮಾಡಲು ಭಗವಾನ್ ದೇವನಾರಾಯಣ್ ಅವರ ಅಭಿಯಾನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದೇಶದಲ್ಲಿ ಗೋ ಸೇವೆಯ ಮನೋಭಾವ ಹೆಚ್ಚುತ್ತಿರುವುದರ ಬಗ್ಗೆ ಗಮನಸೆಳೆದರು. ಕಾಲು ಬಾಯಿ ರೋಗಕ್ಕೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ, ರಾಷ್ಟ್ರೀಯ ಕಾಮಧೇನು ಆಯೋಗ ಮತ್ತು ರಾಷ್ಟ್ರೀಯ ಗೋಕುಲ್ ಅಭಿಯಾನ ಸ್ಥಾಪನೆಯನ್ನು ಅವರು ಉಲ್ಲೇಖಿಸಿದರು. ಪಶು ಧನ್ (ಜಾನುವಾರುಗಳು) ನಮ್ಮ ನಂಬಿಕೆ ಮತ್ತು ಸಂಪ್ರದಾಯದ ಅವಿಭಾಜ್ಯ ಅಂಗವಾಗಿರುವುದಲ್ಲದೆ ನಮ್ಮ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗಗಳಾಗಿವೆ, ಅದಕ್ಕಾಗಿಯೇ ಮೊದಲ ಬಾರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಶುಸಂಗೋಪನಾ ವಿಭಾಗ ಮತ್ತು ಪಶುಪಾಲಕರಿಗೆ ವಿಸ್ತರಿಸಲಾಗಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಅಂತೆಯೇ, ಗೋಬರ್ಧನ್ ಯೋಜನೆಯು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುತ್ತಿದೆ ಎಂದರು.
ನಮ್ಮ ಸ್ವಂತ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು, ಗುಲಾಮಗಿರಿ ಮನಸ್ಥಿತಿಯನ್ನು ನಿವಾರಿಸುವುದು, ರಾಷ್ಟ್ರದ ಬಗ್ಗೆ ನಮ್ಮ ಜವಾಬ್ದಾರಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸುವುದು ಮತ್ತು ನಮ್ಮ ಪೂರ್ವಜರು ತೋರಿಸಿದ ಮಾರ್ಗದಲ್ಲಿ ನಡೆಯುವ ಕುರಿತಂತೆ ಪುನರುಚ್ಚರಿಸಿದ ಪ್ರಧಾನಮಂತ್ರಿ, ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ ಪಂಚ ಪ್ರಾಣ ತತ್ವವನ್ನು ಸ್ಮರಿಸಿದರು. ರಾಜಸ್ಥಾನವು ಪರಾಂಪರಿಕ ಭೂಮಿಯಾಗಿದ್ದು, ಅಲ್ಲಿ ಸೃಷ್ಟಿ ಮತ್ತು ಆಚರಣೆಯ ಉತ್ಸಾಹವನ್ನು ಕಾಣಬಹುದು, ಅಲ್ಲಿ ಒಬ್ಬರು ಶ್ರಮದಾನ ಮಾಡುವುದನ್ನು ಕಾಣಬಹುದು, ಅಲ್ಲಿ ಶೌರ್ಯವು ಮನೆಯ ಆಚಾರವಾಗಿದೆ ಮತ್ತು ಭೂಮಿ ಬಣ್ಣಗಳು ಮತ್ತು ರಾಗಗಳಿಗೆ ಸಮಾನಾರ್ಥಕವಾಗಿದೆ ಎಂದು ಅವರು ಒತ್ತಿಹೇಳಿದರು.
ಪಾಬುಜಿಯಿಂದ ತೇಜಾಜಿವರೆಗೆ, ಗೋಗಾಜಿಯಿಂದ ರಾಮ್ ದೇವ್ ವರೆಗೆ, ಬಪ್ಪಾ ರಾವಲ್ ರಿಂದ ಹಿಡಿದು ಮಹಾರಾಣಾ ಪ್ರತಾಪ್ ವರೆಗೆ ಮೇರು ವ್ಯಕ್ತಿಗಳ ಅದ್ಭುತ ಕೊಡುಗೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಈ ನೆಲದ ಮಹಾನ್ ವ್ಯಕ್ತಿಗಳು, ನಾಯಕರು ಮತ್ತು ಸ್ಥಳೀಯ ದೇವರುಗಳು ಸದಾ ದೇಶಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದರು. ಶೌರ್ಯ ಮತ್ತು ದೇಶಭಕ್ತಿಗೆ ಸಮಾನಾರ್ಥಕವಾಗಿರುವ ಗುರ್ಜರ್ ಸಮುದಾಯದ ಕೊಡುಗೆಯನ್ನು ಪ್ರಧಾನಮಂತ್ರಿಯವರು ವಿಶೇಷವಾಗಿ ಉಲ್ಲೇಖಿಸಿದರು. "ಅದು ರಾಷ್ಟ್ರದ ರಕ್ಷಣೆಯಾಗಿರಲಿ ಅಥವಾ ಸಂಸ್ಕೃತಿಯ ಸಂರಕ್ಷಣೆಯಾಗಿರಲಿ, ಗುರ್ಜರ್ ಸಮುದಾಯವು ಪ್ರತಿ ಕಾಲಘಟ್ಟದಲ್ಲೂ ರಕ್ಷಕನ ಪಾತ್ರವನ್ನು ವಹಿಸಿದೆ" ಎಂದು ಅವರು ಹೇಳಿದರು ಮತ್ತು ಸ್ಫೂರ್ತಿದಾಯಕ ಬಿಜೋಲಿಯಾ ರೈತ ಚಳವಳಿಯ ನೇತೃತ್ವ ವಹಿಸಿದ್ದ ವಿಜಯ್ ಸಿಂಗ್ ಪಾಥಿಕ್ ಎಂದೂ ಕರೆಯಲಾಗುವ ಕ್ರಾಂತಿವೀರ್ ಭೂಪ್ ಸಿಂಗ್ ಗುರ್ಜರ್ ಅವರ ಉದಾಹರಣೆಗಳನ್ನು ನೀಡಿದರು. ಶ್ರೀ ಮೋದಿ ಅವರು ಕೊತ್ವಾಲ್ ಧನ್ ಸಿಂಗ್ ಮತ್ತು ಜೋಗ್ ರಾಜ್ ಸಿಂಗ್ ಅವರ ಕೊಡುಗೆಯನ್ನು ಸ್ಮರಿಸಿದರು. ಗುರ್ಜರ್ ಮಹಿಳೆಯರ ಶೌರ್ಯ ಮತ್ತು ಕೊಡುಗೆಯನ್ನು ಅವರು ಒತ್ತಿ ಹೇಳಿದರು ಮತ್ತು ರಾಮ್ ಪ್ಯಾರಿ ಗುರ್ಜರ್ ಮತ್ತು ಪನ್ನಾ ಧಾಯ್ ಅವರಿಗೆ ಗೌರವ ನಮನ ಸಲ್ಲಿಸಿದರು. "ಈ ಸಂಪ್ರದಾಯವು ಇಂದಿಗೂ ಪ್ರವರ್ಧಮಾನಕ್ಕೆ ಬರುತ್ತಿದೆ. ಇಂತಹ ಅಸಂಖ್ಯಾತ ಹೋರಾಟಗಾರರು ನಮ್ಮ ಇತಿಹಾಸದಲ್ಲಿ ಅರ್ಹವಾದ ಸ್ಥಾನವನ್ನು ಪಡೆಯಲು ಸಾಧ್ಯವಾಗದಿರುವುದು ದೇಶದ ದುರಾದೃಷ್ಟ. ಆದರೆ ನವ ಭಾರತವು ಕಳೆದ ದಶಕಗಳ ಈ ತಪ್ಪುಗಳನ್ನು ಸರಿಪಡಿಸುತ್ತಿದೆ" ಎಂದು ಅವರು ಹೇಳಿದರು.
ಭಗವಾನ್ ದೇವನಾರಾಯಣ ಅವರ ಸಂದೇಶ ಮತ್ತು ಅವರ ಬೋಧನೆಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಗುಜ್ಜರ್ ಸಮುದಾಯದ ಹೊಸ ಪೀಳಿಗೆಯ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಗುಜ್ಜರ್ ಸಮುದಾಯವನ್ನು ಸಶಕ್ತಗೊಳಿಸುತ್ತದೆ ಮತ್ತು ಇದು ದೇಶವು ಮುಂದೆ ಸಾಗಲು ಸಹಾಯ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದರು. ರಾಜಸ್ಥಾನದ ಅಭಿವೃದ್ಧಿಗೆ 21ನೇ ಶತಮಾನದ ಅವಧಿ ಮಹತ್ವದ್ದಾಗಿದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿ, ಒಗ್ಗೂಡಿ ದೇಶದ ಅಭಿವೃದ್ಧಿಗೆ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. "ಇಂದು ಇಡೀ ಜಗತ್ತು ಭಾರತದತ್ತ ತುಂಬು ಭರವಸೆಯಿಂದ ನೋಡುತ್ತಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ಇಡೀ ಜಗತ್ತಿನಲ್ಲಿ ಭಾರತದ ಶಕ್ತಿ ಪ್ರದರ್ಶನದೊಂದಿಗೆ ಯೋಧರ ಈ ಭೂಮಿಯ ಹೆಮ್ಮೆಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು. "ಇಂದು, ಭಾರತವು ವಿಶ್ವದ ಪ್ರತಿಯೊಂದು ಪ್ರಮುಖ ವೇದಿಕೆಯಲ್ಲಿ ಮುಕ್ತ ವಿಶ್ವಾಸದಿಂದ ಮಾತನಾಡುತ್ತದೆ ಮತ್ತು ಇತರ ದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿದೆ. ನಮ್ಮ ಸಂಕಲ್ಪಗಳನ್ನು ಸಾಬೀತುಪಡಿಸುವ ಮೂಲಕ ನಾವು ವಿಶ್ವದ ನಿರೀಕ್ಷೆಗಳಿಗೆ ತಕ್ಕಂತೆ ಬದುಕಬೇಕು", ಭಗವಾನ್ ದೇವನಾರಾಯಣ ಮತ್ತು ಸಬ್ ಕಾ ಪ್ರಯಾಸ್ (ಎಲ್ಲರ ಪ್ರಯತ್ನ) ಅವರ ಆಶೀರ್ವಾದದೊಂದಿಗೆ ಯಶಸ್ವಿಯಾಗುವ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.
ಅಂತಿಮವಾಗಿ, ಕಮಲದ ಮೇಲೆ ಕಾಣಿಸಿಕೊಂಡ ಭಗವಾನ್ ದೇವನಾರಾಯಣ್ ಅವರ 1111 ನೇ ವರ್ಷದಲ್ಲಿ, ಭಾರತವು ಜಿ -20 ರ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಅದರ ಲಾಂಛನವೂ ಭೂಮಿಯನ್ನು ಹೊತ್ತ ಕಮಲವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಂದರ್ಭದಲ್ಲಿ ಸಾಮಾಜಿಕ ಶಕ್ತಿ ಮತ್ತು ಭಕ್ತಿಯ ವಾತಾವರಣಕ್ಕೆ ಗೌರವ ಸಲ್ಲಿಸುವ ಮೂಲಕ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.
ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್, ಮಲಸೇರಿ ದುಗ್ರಿಯ ಪ್ರಧಾನ ಅರ್ಚಕ ಶ್ರೀ ಹೇಮರಾಜ್ ಜಿ ಗುರ್ಜರ್ ಮತ್ತು ಸಂಸತ್ ಸದಸ್ಯ ಶ್ರೀ ಸುಭಾಸ್ ಚಂದ್ರ ಬಹೇರಿಯಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 1894377)
Visitor Counter : 171
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam