ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 19ರಂದು ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಕರ್ನಾಟಕದಲ್ಲಿ 10,800 ಕೋಟಿ ರೂ.ಗೂ ಹೆಚ್ಚು ಮತ್ತು ಮಹಾರಾಷ್ಟ್ರದಲ್ಲಿ 38,800 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಕರ್ನಾಟಕದಲ್ಲಿ ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಸುಮಾರು ಐವತ್ತು ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಿರುವ ಪ್ರಧಾನಮಂತ್ರಿ

ಜಲ ಜೀವನ ಅಭಿಯಾನದ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ನಾರಾಯಣಪುರ ಎಡದಂಡೆ ಕಾಲುವೆ – ವಿಸ್ತರಣಾ ನವೀಕರಣ ಮತ್ತು ಆಧುನೀಕರಣ ಯೋಜನೆ (ಎನ್ ಎಲ್.ಬಿ.ಸಿ – ಇಆರ್.ಎಂ) ಉದ್ಘಾಟಿಸಲಿರುವ ಪ್ರಧಾನಮಂತ್ರಿ; ಈ ಯೋಜನೆಯಿಂದ ವಲಯದ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ

ಕರ್ನಾಟಕದಲ್ಲಿ ಎರಡು ಹಸಿರು ವಲಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ; ಈ ಎರಡೂ ಯೋಜನೆಗಳು ಸೂರತ್ - ಚೆನ್ನೈ ಎಕ್ಸ್ ಪ್ರೆಸ್ ಮಾರ್ಗದ ಭಾಗವಾಗಿವೆ

 ಮುಂಬೈ ಮೆಟ್ರೋ ರೈಲು ಮಾರ್ಗದ 2ಎ ಮತ್ತು 7ನ್ನು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

ಮುಂಬೈನಲ್ಲಿ ಏಳು ಕೊಳಚೆ ನೀರು ಸಂಸ್ಕರಣಾ ಘಟಕಗಳು, ಕಾಂಕ್ರೀಟ್ ರಸ್ತೆ ಯೋಜನೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನ ಮರು ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

Posted On: 17 JAN 2023 7:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜನವರಿ 19ರಂದು ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ.

ಕರ್ನಾಟಕದಲ್ಲಿ ಪ್ರಧಾನಮಂತ್ರಿಯವರು ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ಸುಮಾರು 12 ಗಂಟೆಗೆ ಯಾದಗಿರಿ ಜಿಲ್ಲೆಯ ಕೊಡೇಕಲ್ ನಲ್ಲಿ ನೀರಾವರಿ, ಕುಡಿಯುವ ನೀರು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 2:15 ಕ್ಕೆ ಕಲಬುರಗಿ ಜಿಲ್ಲೆಯ ಮಳಖೇಡ್ ಗೆ ಆಗಮಿಸಲಿರುವ ಪ್ರಧಾನಮಂತ್ರಿಯವರು, ಅಲ್ಲಿ ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವರು ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು.

ಸಂಜೆ 5 ಗಂಟೆಗೆ ಪ್ರಧಾನಮಂತ್ರಿಯವರು ಮುಂಬೈನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 6:30 ರ ಸುಮಾರಿಗೆ ಅವರು ಮುಂಬೈ ಮೆಟ್ರೋದ ಎರಡು ಮಾರ್ಗಗಳನ್ನು ಉದ್ಘಾಟಿಸುವರು.

ಕರ್ನಾಟಕದಲ್ಲಿ ಪ್ರಧಾನ ಮಂತ್ರಿ

ಎಲ್ಲಾ ಮನೆಗಳಿಗೆ ವೈಯಕ್ತಿಕವಾಗಿ ಕೊಳಾಯಿ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮತ್ತೊಂದು ಹೆಜ್ಜೆಯಾಗಿ, ಜಲ ಜೀವನ ಅಭಿಯಾನದ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಯಾದಗಿರಿ ಜಿಲ್ಲೆಯ ಕೊಡೇಕಲ್ ನಲ್ಲಿ ಶಂಕುಸ್ಥಾಪನೆ ನೆರವೇರಲಿದೆ. ಈ ಯೋಜನೆಯಡಿ 117 ಎಂಎಲ್.ಡಿ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗುವುದು.  2050 ಕೋಟಿ ರೂ.ಗೂ ಹೆಚ್ಚು ವೆಚ್ಚದ ಈ ಯೋಜನೆಯು ಯಾದಗಿರಿ ಜಿಲ್ಲೆಯ 700ಕ್ಕೂ ಹೆಚ್ಚು ಗ್ರಾಮೀಣ ಜನವಸತಿಗಳು ಮತ್ತು ಯಾದಗಿರಿಯ ಮೂರು ಪಟ್ಟಣಗಳ ಸುಮಾರು 2.3 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸುತ್ತದೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ನಾರಾಯಣಪುರ ಎಡದಂಡೆ ಕಾಲುವೆ – ವಿಸ್ತರಣಾ ನವೀಕರಣ ಮತ್ತು ಆಧುನೀಕರಣ ಯೋಜನೆ (ಎನ್.ಎಲ್ ಬಿಸಿ – ಇಆರ್.ಎಂ) ಉದ್ಘಾಟಿಸಲಿದ್ದಾರೆ. ಕಾಲುವೆ ಮೂವರ 10,000 ಕ್ಯೂಸೆಕ್ ನೀರು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಯೋಜನೆಯು 4.5 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶಕ್ಕೆ ನೀರಾವರಿ ಕಲ್ಪಿಸುತ್ತದೆ. ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ 560 ಗ್ರಾಮಗಳ 3 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಅನುಕೂಲವಾಗಲಿದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 47೦೦ ಕೋಟಿ ರೂ. ಆಗಿದೆ. 

ರಾಷ್ಟ್ರೀಯ ಹೆದ್ದಾರಿ 150ಸಿ 65.5 ಕಿ.ಮೀ ವಿಭಾಗಕ್ಕೂ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಷಟ್ಪಥದ ಹಸಿಲು ವಲಯ ರಸ್ತೆ ಯೋಜನೆಯು ಸೂರತ್ - ಚೆನ್ನೈ ಎಕ್ಸ್ ಪ್ರೆಸ್ ಮಾರ್ಗದ ಭಾಗವಾಗಿದೆ.  ಇದನ್ನು ಸುಮಾರು 200೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಸರ್ಕಾರದ ಯೋಜನೆಗಳು ಶೇ.100ರಷ್ಟು ಗರಿಷ್ಠತೆ ಸಾಧಿಸಬೇಕೆಂಬ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಮತ್ತು ವಿಜಯಪುರ ಐದು ಜಿಲ್ಲೆಗಳಲ್ಲಿ ಸುಮಾರು 1475 ದಾಖಲೆ ರಹಿತ ಜನವಸತಿಗಳನ್ನು ಹೊಸ ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ್ ಗ್ರಾಮದಲ್ಲಿ ಪ್ರಧಾನಮಂತ್ರಿಯವರು ಹೊಸದಾಗಿ ಘೋಷಿಸಲಾದ ಈ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವರು. ಎಸ್ಸಿ, ಎಸ್ಟಿ ಮತ್ತು ಒಬಿಸಿಯ ವಂಚಿತ ಮತ್ತು ದುರ್ಬಲ ಸಮುದಾಯಗಳಿಗೆ ಸೇರಿದ ಐವತ್ತು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ, ಅವರ ಭೂಮಿಗೆ ಸರ್ಕಾರದಿಂದ ಔಪಚಾರಿಕ ಮಾನ್ಯತೆಯನ್ನು ಒದಗಿಸುವ ಒಂದು ಹೆಜ್ಜೆ ಇದಾಗಿದ್ದು, ಕುಡಿಯುವ ನೀರು, ವಿದ್ಯುತ್, ರಸ್ತೆಗಳು ಮುಂತಾದ ಸರ್ಕಾರಿ ಸೇವೆಗಳನ್ನು ಪಡೆಯಲು ಅವರನ್ನು ಅರ್ಹರನ್ನಾಗಿ ಮಾಡುತ್ತದೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ 150ಸಿ 71 ಕಿ.ಮೀ. ವಿಭಾಗಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಷಟ್ಪಥದ ಹಸಿರು ವಲಯ ರಸ್ತೆ ಯೋಜನೆಯು ಸೂರತ್ - ಚೆನ್ನೈ ಎಕ್ಸ್ ಪ್ರೆಸ್ ಮಾರ್ಗದ ಭಾಗವಾಗಿದೆ.  ಇದನ್ನು 21೦೦ ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಸೂರತ್-ಚೆನ್ನೈ ಎಕ್ಸ್ ಪ್ರೆಸ್ ಮಾರ್ಗ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ಆರು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಇದು ಅಸ್ತಿತ್ವದಲ್ಲಿರುವ ಮಾರ್ಗವನ್ನು 16೦೦ ಕಿ.ಮೀ.ಗಳಿಂದ 1270 ಕಿ.ಮೀ.ಗೆ ಇಳಿಸಲಿದೆ.

ಮುಂಬೈನಲ್ಲಿ ಪ್ರಧಾನ ಮಂತ್ರಿ

ಪ್ರಧಾನಮಂತ್ರಿಯವರು ಸುಮಾರು 38,800 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತಡೆರಹಿತ ನಗರ ಚಲನಶೀಲತೆಯನ್ನು ಒದಗಿಸುವುದು ಪ್ರಧಾನಮಂತ್ರಿಯವರ ಪ್ರಮುಖ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿದೆ. ಇದಕ್ಕೆ ಅನುಗುಣವಾಗಿ, ಅವರು ಸುಮಾರು 12,600 ಕೋಟಿ ರೂ.ಗಳ ಮುಂಬೈ ಮೆಟ್ರೋ ರೈಲು ಮಾರ್ಗಗಳಾದ 2 ಎ ಮತ್ತು 7 ನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ದಹಿಸರ್ ಇ ಮತ್ತು ಡಿಎನ್ ನಗರ (ಹಳದಿ ಮಾರ್ಗ) ವನ್ನು ಸಂಪರ್ಕಿಸುವ ಮೆಟ್ರೋ ಮಾರ್ಗ 2 ಎ ಸುಮಾರು 18.6 ಕಿ.ಮೀ ಉದ್ದವಿದ್ದರೆ, ಅಂಧೇರಿ ಇ - ದಹಿಸರ್ ಇ (ಕೆಂಪು ಮಾರ್ಗ)   ಸಂಪರ್ಕಿಸುವ ಮೆಟ್ರೋ ಮಾರ್ಗ 7 ಸುಮಾರು 16.5 ಕಿ.ಮೀ ಉದ್ದವಿದೆ. ಈ ಮಾರ್ಗಗಳಿಗೆ ಪ್ರಧಾನಮಂತ್ರಿಯವರು 2015ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಧಾನಮಂತ್ರಿಯವರು ಮುಂಬೈ 1 ಮೊಬೈಲ್ ಆಪ್ ಮತ್ತು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಮುಂಬೈ 1) ಅನ್ನು ಉದ್ಘಾಟಿಸಲಿದ್ದಾರೆ. ಈ ಆಪ್ ಪ್ರಯಾಣವನ್ನು ಸುಗಮಗೊಳಿಸುತ್ತದೆ, ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳಲ್ಲಿ ತೋರಿಸಿ, ಯುಪಿಐ ಮೂಲಕ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಿ ಡಿಜಿಟಲ್ ಪಾವತಿಯನ್ನು ಬೆಂಬಲಿಸುತ್ತದೆ. ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಮುಂಬೈ 1) ನ್ನು ಆರಂಭದಲ್ಲಿ ಮೆಟ್ರೋ ಕಾರಿಡಾರ್ ಗಳಲ್ಲಿ ಬಳಸಬಹುದಾಗಿದ್ದು, ಸ್ಥಳೀಯ ರೈಲುಗಳು ಮತ್ತು ಬಸ್ಸುಗಳು ಸೇರಿದಂತೆ ಸಾಮೂಹಿಕ ಸಾರ್ವಜನಿಕ ಸಾರಿಗೆಯ ಇತರ ವಿಧಾನಗಳಿಗೂ ವಿಸ್ತರಿಸಬಹುದಾಗಿರುತ್ತದೆ. ಪ್ರಯಾಣಿಕರು ಅನೇಕ ಕಾರ್ಡ್ ಗಳು ಅಥವಾ ಹಣವನ್ನು ಒಯ್ಯುವ ಅಗತ್ಯವಿರುವುದಿಲ್ಲ; ಎನ್.ಸಿ.ಎಂಸಿ ಕಾರ್ಡ್ ತ್ವರಿತ, ಸಂಪರ್ಕರಹಿತ, ಡಿಜಿಟಲ್ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ, ಆ ಮೂಲಕ ತಡೆರಹಿತ ಅನುಭವದೊಂದಿಗೆ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ.

ಸುಮಾರು 17,200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಏಳು ಕೊಳಚೆ ನೀರು ಸಂಸ್ಕರಣಾ ಘಟಕಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಲಾಡ್, ಭಾಂಡೂಪ್, ವರ್ಸೋವಾ, ಘಾಟ್ಕೋಪರ್, ಬಾಂದ್ರಾ, ಧಾರಾವಿ ಮತ್ತು ವರ್ಲಿಯಲ್ಲಿ ಈ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು. ಇವುಗಳ ಒಟ್ಟು ಸಾಮರ್ಥ್ಯ ಸುಮಾರು 2,460 ಎಂಎಲ್ ಡಿ. ಆಗಿದೆ.

ಮುಂಬೈನಲ್ಲಿ ಆರೋಗ್ಯ ಆರೈಕೆ ಮೂಲಸೌಕರ್ಯಗಳನ್ನು ಬಲಪಡಿಸುವ ಪ್ರಯತ್ನದಲ್ಲಿ ಪ್ರಧಾನಮಂತ್ರಿಯವರು 20 ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಆಪ್ಲಾ ದವಾಖಾನಾವನ್ನು ಉದ್ಘಾಟಿಸಲಿದ್ದಾರೆ. ಈ ಹೊಸ ಉಪಕ್ರಮವು ಆರೋಗ್ಯ ತಪಾಸಣೆ, ಔಷಧಿಗಳು, ರೋಗಪತ್ತೆ ಮತ್ತು ರೋಗನಿರ್ಣಯದಂತಹ ಅಗತ್ಯ ವೈದ್ಯಕೀಯ ಸೇವೆಗಳನ್ನು ಜನರಿಗೆ ಸಂಪೂರ್ಣವಾಗಿ ಉಚಿತವಾಗಿ ಒದಗಿಸುತ್ತದೆ. ಪ್ರಧಾನಮಂತ್ರಿಯವರು ಮುಂಬೈನಲ್ಲಿ 360 ಹಾಸಿಗೆಗಳ ಭಾಂಡೂಪ್ ಮಲ್ಟಿಸ್ಪೆಷಾಲಿಟಿ ಮುನ್ಸಿಪಲ್ ಆಸ್ಪತ್ರೆ, ಗೋರೆಗಾಂವ್ (ಪಶ್ಚಿಮ) ನಲ್ಲಿ 306 ಹಾಸಿಗೆಗಳ ಸಿದ್ಧಾರ್ಥ್ ನಗರ ಆಸ್ಪತ್ರೆ ಮತ್ತು 152 ಹಾಸಿಗೆಗಳ ಓಶಿವಾರಾ ಹೆರಿಗೆ ಆಸ್ಪತ್ರೆ ಮರು ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ನಗರದ ಲಕ್ಷಾಂತರ ನಿವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರಿಗೆ ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುತ್ತದೆ.

ಪ್ರಧಾನಮಂತ್ರಿಯವರು ಮುಂಬೈನ ಸುಮಾರು 400 ಕಿ.ಮೀ ಕಾಂಕ್ರೀಟ್ ರಸ್ತೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯನ್ನು ಸುಮಾರು 6,100 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಮುಂಬೈನಲ್ಲಿ ಸುಮಾರು 2050 ಕಿ.ಮೀ.ವರೆಗೆ ವಿಸ್ತರಿಸಿರುವ ಒಟ್ಟು ರಸ್ತೆಗಳಲ್ಲಿ, 1200 ಕಿ.ಮೀ.ಗಿಂತ ಹೆಚ್ಚು ಕಾಂಕ್ರೀಟ್ ರಸ್ತೆಗಳಾಗಿವೆ ಅಥವಾ ಕಾಂಕ್ರೀಟ್ ಮಾಡುವ ಪ್ರಕ್ರಿಯೆಯಲ್ಲಿವೆ. ಆದಾಗ್ಯೂ, ಸುಮಾರು 850 ಕಿ.ಮೀ ಉದ್ದದ ಉಳಿದ ರಸ್ತೆಗಳು ಗುಂಡಿಗಳ ಸವಾಲುಗಳನ್ನು ಎದುರಿಸುತ್ತಿವೆ, ಇದು ಸಾರಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕಾಂಕ್ರೀಟ್ ರಸ್ತೆ ಯೋಜನೆಯು ಈ ಸವಾಲನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಈ ಕಾಂಕ್ರೀಟ್ ರಸ್ತೆಗಳು ವರ್ಧಿತ ಭದ್ರತೆಯೊಂದಿಗೆ ವೇಗದ ಪ್ರಯಾಣವನ್ನು ಖಚಿತಪಡಿಸುತ್ತವೆ, ಆದರೆ ಉತ್ತಮ ಒಳಚರಂಡಿ ಸೌಲಭ್ಯಗಳು ಮತ್ತು  ಯುಟಿಲಿಟಿ ಡಕ್ಟ್ ಗಳನ್ನು ಒದಗಿಸುವುದರಿಂದ ರಸ್ತೆಗಳನ್ನು ಪದೇ ಪದೇ ಅಗೆಯುವುದನ್ನು ತಪ್ಪಿಸಬಹುದು.

ಅವರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನ ಮರು ಅಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಟರ್ಮಿನಸ್ ನ ದಕ್ಷಿಣ ಪಾರಂಪರಿಕ ಭಾಗದಲ್ಲಿ ಜನದಟ್ಟಣೆ ನಿವಾರಿಸಲು, ಸೌಲಭ್ಯಗಳನ್ನು ಹೆಚ್ಚಿಸಲು, ಉತ್ತಮ ಬಹು-ಮಾದರಿ ಏಕೀಕರಣ ಮತ್ತು ವಿಶ್ವಪ್ರಸಿದ್ಧ ಅಪ್ರತಿಮ ರಚನೆಯನ್ನು ಅದರ ಹಿಂದಿನ ವೈಭವದಂತೆಯೇ ಸಂರಕ್ಷಿಸಲು ಮತ್ತು ಮರುಸ್ಥಾಪಿಸುವುದರೊಂದಿಗೆ ಪುನರಾಭಿವೃದ್ಧಿಯನ್ನು ಯೋಜಿಸಲಾಗಿದೆ. ಈ ಯೋಜನೆಯನ್ನು 1,800 ಕೋಟಿ ರೂ.ಗಳ ವೆಚ್ಚದಲ್ಲಿ ಮಾಡಲಾಗುವುದು. ಇದಲ್ಲದೆ, ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಅನುಮೋದಿತ ಸಾಲಗಳ ವರ್ಗಾವಣೆಯನ್ನು ಸಹ ಪ್ರಾರಂಭಿಸಲಾಗುವುದು.

*****
*



(Release ID: 1891883) Visitor Counter : 230