ಪ್ರಧಾನ ಮಂತ್ರಿಯವರ ಕಛೇರಿ
ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಂಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
"ವಂದೇ ಭಾರತ್ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪರಂಪರೆಯನ್ನು ಬೆಸೆಯುತ್ತದೆ"
" ಭಾರತವು ಎಲ್ಲದರಲ್ಲೂ ಉತ್ತಮವಾದುದನ್ನು ಬಯಸುವುದರ ಪ್ರತೀಕ ವಂದೇ ಭಾರತ್ ಎಕ್ಸ್‌ಪ್ರೆಸ್ "
"ವಂದೇ ಭಾರತ್ ನವ ಭಾರತದ ಸಾಮರ್ಥ್ಯ ಮತ್ತು ಸಂಕಲ್ಪದ ಸಂಕೇತವಾಗಿದೆ"
"ಸಂಪರ್ಕಕ್ಕೆ ಸಂಬಂಧಿಸಿದ ಮೂಲಸೌಕರ್ಯವು ಎರಡು ಸ್ಥಳಗಳನ್ನು ಸಂಪರ್ಕಿಸುವುದು ಮಾತ್ರವಲ್ಲದೆ ಕನಸುಗಳನ್ನು ವಾಸ್ತವದೊಂದಿಗೆ ಜೋಡಿಸುತ್ತದೆ ಮತ್ತು ಸಬ್ಕಾ ವಿಕಾಸವನ್ನು ಖಚಿತಪಡಿಸುತ್ತದೆ"
“ಎಲ್ಲಿ ಗತಿ (ವೇಗ) ಇರುತ್ತದೆಯೋ ಅಲ್ಲಿ ಪ್ರಗತಿ (ಪ್ರಗತಿ) ಇರುತ್ತದೆ. ಪ್ರಗತಿಯಿಂದ ಸಮೃದ್ಧಿ ಖಚಿತವಾಗುತ್ತದೆ”
"ಕಳೆದ 7-8 ವರ್ಷಗಳಲ್ಲಿ ಮಾಡಿದ ಕೆಲಸಗಳು ಮುಂಬರುವ 7-8 ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ ಪರಿವರ್ತನೆ ತರುತ್ತವೆ"
Posted On:
15 JAN 2023 12:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಿಕಂದರಾಬಾದ್-ವಿಶಾಖಪಟ್ಟಣ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಈ ರೈಲು ಭಾರತೀಯ ರೈಲ್ವೇಯಿಂದ ಪರಿಚಯಿಸಲಾದ ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ ಮತ್ತು ತೆಲುಗು ಭಾಷಿಕ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದೊಡನೆ ಸಂಪರ್ಕ ಕಲ್ಪಿಸುವ ಮೊದಲನೆಯ ರೈಲಾಗಿದೆ, ಇದು ಸುಮಾರು 700 ಕಿ.ಮೀ. ದೂರ ಕ್ರಮಿಸುತ್ತದೆ. ರೈಲು ಆಂಧ್ರಪ್ರದೇಶದ ವಿಶಾಖಪಟ್ಟಣ, ರಾಜಮಂಡ್ರಿ ಮತ್ತು ವಿಜಯವಾಡ ನಿಲ್ದಾಣಗಳಲ್ಲಿ ಮತ್ತು ತೆಲಂಗಾಣದ ಖಮ್ಮಂ, ವಾರಂಗಲ್ ಮತ್ತು ಸಿಕಂದರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹಬ್ಬದ ಈ ಶುಭ ಸಂದರ್ಭದಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಹಂಚಿಕೆಯ ಪರಂಪರೆಯನ್ನು ಜೋಡಿಸುವ ಭವ್ಯವಾದ ಉಡುಗೊರೆಯನ್ನು ಪಡೆಯುತ್ತಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಉಭಯ ರಾಜ್ಯಗಳ ಜನತೆಗೆ ಅಭಿನಂದನೆ ಸಲ್ಲಿಸಿದರು. ಸೇನಾ ದಿನದಂದು ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಿದ ಅವರು, ಭಾರತೀಯ ಸೇನೆಯು ತನ್ನ ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.
ದೇಶದ ಎಲ್ಲ ಭಾಗಗಳನ್ನು ಬೆಸೆಯುವ ಹಬ್ಬಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಏಕ್ ಭಾರತ್ ಶ್ರೇಷ್ಠ ಭಾರತ್ ಮನೋಭಾವದಲ್ಲಿ ಭಾರತೀಯ ರೈಲ್ವೇಯು ದೇಶದ ಉದ್ದಗಲವನ್ನೂ ಕ್ರಮಿಸುವ ಮೂಲಕ ದೇಶದ ವಿವಿಧ ಭಾಗಗಳನ್ನು ಅರ್ಥಮಾಡಿಕೊಳ್ಳಲು, ತಿಳಿದುಕೊಳ್ಳಲು ಮತ್ತು ಸಂಪರ್ಕಿಸಲು ಅವಕಾಶವನ್ನು ಒದಗಿಸುತ್ತದೆ ಎಂದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದ ಪ್ರಧಾನಿ, ಸಿಕಂದರಾಬಾದ್ ಮತ್ತು ವಿಶಾಖಪಟ್ಟಣ ನಡುವಿನ ಪ್ರಯಾಣದ ಸಮಯವನ್ನು ಮತ್ತಷ್ಟು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ವಂದೇ ಭಾರತ್ ನವಭಾರತದ ಸಾಮರ್ಥ್ಯ ಮತ್ತು ಸಂಕಲ್ಪದ ಪ್ರತೀಕವಾಗಿದೆ, ಇದು ಕ್ಷಿಪ್ರ ಅಭಿವೃದ್ಧಿಯ ಮಾರ್ಗವನ್ನು ಆಯ್ಕೆ ಮಾಡಿದ ಭಾರತದ ಸಂಕೇತವಾಗಿದೆ ಎಂದು ಅವರು ಹೇಳಿದರು. ಈ ರೈಲು ತನ್ನ ಕನಸುಗಳು ಮತ್ತು ಆಕಾಂಕ್ಷೆಗಳ ಈಡೇರಿಕೆಗೆ ಉತ್ಸುಕವಾಗಿರುವ ಭಾರತ, ತನ್ನ ಗುರಿಯನ್ನು ಸಾಧಿಸಲು ಬಯಸುವ ಭಾರತ, ಶ್ರೇಷ್ಠತೆಗಾಗಿ ಶ್ರಮಿಸುವ ಭಾರತ, ತನ್ನ ನಾಗರಿಕರಿಗೆ ಉತ್ತಮವಾದದ್ದನ್ನು ತಲುಪಿಸಲು ಬಯಸುವ ಭಾರತ ಮತ್ತು ಗುಲಾಮಗಿರಿ ಮನಸ್ಥಿತಿಯ ಸಂಕೋಲೆಗಳನ್ನು ಮುರಿದು ಆತ್ಮನಿರ್ಭರತೆಯತ್ತ ಸಾಗುತ್ತಿರುವ ಭಾರತವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು.
ವಂದೇ ಭಾರತ್ ರೈಲುಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕೆಲಸದ ವೇಗವನ್ನು ಪ್ರಧಾನಿ ಒತ್ತಿ ಹೇಳಿದರು. ಈ ವರ್ಷ 15 ದಿನಗಳಲ್ಲಿ ಎರಡನೇ ವಂದೇ ಭಾರತ್ ರೈಲು ಸಂಚಾರ ಅರಂಭಿಸಿದೆ ಮತ್ತು ಇದು ಬದಲಾವಣೆಯ ವೇಗವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ವಂದೇ ಭಾರತ್ ರೈಲುಗಳ ದೇಶೀಯ ಗುಣಲಕ್ಷಣಗಳನ್ನು ಮತ್ತು ಅವುಗಳು ಜನರ ಮನಸ್ಸಿನಲ್ಲಿ ಮೂಡಿಸಿರುವ ಪ್ರಭಾವ ಮತ್ತು ಹೆಮ್ಮೆಯನ್ನು ಪ್ರಧಾನಿ ಎತ್ತಿ ತೋರಿಸಿದರು. 7 ವಂದೇ ಭಾರತ್ ರೈಲುಗಳು ಕ್ರಮಿಸಿದ 23 ಲಕ್ಷ ಕಿಲೋಮೀಟರ್‌ಗಳ ಒಟ್ಟು ದೂರವು ಭೂಮಿಗೆ 58 ಸುತ್ತುಗಳಿಗೆ ಸಮನಾಗಿದೆ ಎಂದು ಅವರು ಹೇಳಿದರು. ವಂದೇ ಭಾರತ್ ರೈಲುಗಳಲ್ಲಿ ಇದುವರೆಗೆ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ಸಂಪರ್ಕ ಮತ್ತು ವೇಗ ಹಾಗು ‘ಸಬ್ಕಾ ವಿಕಾಸ್’ನೊಂದಿಗೆ ಅವುಗಳ ನೇರ ಸಂಪರ್ಕದ ಬಗ್ಗೆ ಪ್ರಧಾನಿ ವಿವರಿಸಿದರು. ಸಂಪರ್ಕಕ್ಕೆ ಸಂಬಂಧಿಸಿದ ಮೂಲಸೌಕರ್ಯವು ಎರಡು ಸ್ಥಳಗಳನ್ನು ಸಂಪರ್ಕಿಸುವುದು ಮಾತ್ರವಲ್ಲದೆ ಕನಸುಗಳನ್ನು ವಾಸ್ತವದೊಂದಿಗೆ, ಉತ್ಪಾದನೆಯನ್ನು ಮಾರುಕಟ್ಟೆಗೆ, ಪ್ರತಿಭೆಯನ್ನು ಸೂಕ್ತ ವೇದಿಕೆಗೆ ಸಂಪರ್ಕಿಸುತ್ತದೆ. ಸಂಪರ್ಕವು ಅಭಿವೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸುತ್ತದೆ ಎಂದು ಅವರು ಹೇಳಿದರು. ಎಲ್ಲಿ ಗತಿ (ವೇಗ) ಇರುತ್ತದೆಯೋ ಅಲ್ಲಿ ಪ್ರಗತಿ (ಪ್ರಗತಿ) ಇರುತ್ತದೆ. ಪ್ರಗತಿಯಿಂದ ಸಮೃದ್ಧಿಯು ಖಚಿತವಾಗುತ್ತದೆ ಎಂದು ಅವರು ಹೇಳಿದರು.
ಹಿಂದೆ ಆಧುನಿಕ ಸಂಪರ್ಕದ ಪ್ರಯೋಜನಗಳು ಆಯ್ದ ಕೆಲವರಿಗೆ ಮಾತ್ರ ಸೀಮಿತವಾಗಿದ್ದವು ಮತ್ತು ದುಬಾರಿ ಸಾರಿಗೆಯಿಂದ ಬಹುತೇಕ ಜನರ ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು ಎಂದು ಪ್ರಧಾನಿ ನೆನಪಿಸಿಕೊಂಡರು. ವಂದೇ ಭಾರತ್ ರೈಲು ಆ ಚಿಂತನೆಗೆ ವಿರುದ್ಧವಾಗಿ ಎಲ್ಲರನ್ನು ವೇಗ ಮತ್ತು ಪ್ರಗತಿಯೊಂದಿಗೆ ಸಂಪರ್ಕಿಸುವ ದೃಷ್ಟಿಯ ಪರಿವರ್ತನೆಗೆ ಉದಾಹರಣೆಯಾಗಿದೆ ಎಂದರು. ಒಳ್ಳೆಯ ಮತ್ತು ಪ್ರಾಮಾಣಿಕ ಉದ್ದೇಶಗಳೊಂದಿಗೆ ಸಮಸ್ಯೆಗಳನ್ನು ಪರಿಹರಿಸಿದಾಗ, ರೈಲ್ವೆಯ ಕಳಪೆ ಮತ್ತು ಕೆಟ್ಟ ಪರಿಸ್ಥಿತಿಯು ಬದಲಾಯಿತು ಮತ್ತು ಕಳೆದ ಎಂಟು ವರ್ಷಗಳಲ್ಲಿ ಇದು ಭಾರತೀಯ ರೈಲ್ವೇಯನ್ನು ಪರಿವರ್ತಿಸಿದ ಮಂತ್ರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಇಂದು ಭಾರತೀಯ ರೈಲ್ವೇ ಪ್ರಯಾಣವು ಆಹ್ಲಾದಕರ ಅನುಭವ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅನೇಕ ರೈಲು ನಿಲ್ದಾಣಗಳು ಆಧುನಿಕ ಭಾರತದ ಚಿತ್ರಣವನ್ನು ಪ್ರತಿಬಿಂಬಿಸುತ್ತವೆ. ಕಳೆದ 7-8 ವರ್ಷಗಳಲ್ಲಿ ಮಾಡಿದ ಕೆಲಸಗಳು ಮುಂಬರುವ 7-8 ವರ್ಷಗಳಲ್ಲಿ ಭಾರತೀಯ ರೈಲ್ವೆಯನ್ನು ಪರಿವರ್ತಿಸುತ್ತವೆ ಎಂದು ಅವರು ಹೇಳಿದರು. ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಸ್ಟಾಡೋಮ್ ಬೋಗಿಗಳು ಮತ್ತು ಹೆರಿಟೇಜ್ ರೈಲುಗಳು, ಕೃಷಿ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗಳಿಗೆ ಸಾಗಿಸಲು ಕಿಸಾನ್ ರೈಲು, 2 ಡಜನ್‌ಗಿಂತಲೂ ಹೆಚ್ಚು ನಗರಗಳಲ್ಲಿ ಮೆಟ್ರೋ ರೈಲು ಜಾಲವಿದೆ ಮತ್ತು ಭವಿಷ್ಯದ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆಯು ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಅವರು ವಿವರಿಸಿದರು.
ಕಳೆದ 8 ವರ್ಷಗಳಲ್ಲಿ ತೆಲಂಗಾಣದಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ನಡೆದಿರುವ ಅಸಾಧಾರಣ ಕಾರ್ಯಗಳನ್ನು ಪ್ರಧಾನಿ ವಿವರಿಸಿದರು. 2014ಕ್ಕಿಂತ 8 ವರ್ಷಗಳ ಹಿಂದೆ ತೆಲಂಗಾಣದಲ್ಲಿ ರೈಲ್ವೆಗೆ 250 ಕೋಟಿ ರೂ.ಗಿಂತ ಕಡಿಮೆ ಬಜೆಟ್ ಇತ್ತು. ಆದರೆ ಇಂದು ಅದು 3000 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಮೇಡಕ್‌ನಂತಹ ತೆಲಂಗಾಣದ ಹಲವು ಪ್ರದೇಶಗಳು ಈಗ ಮೊದಲ ಬಾರಿಗೆ ರೈಲು ಸೇವೆಯಿಂದ ಸಂಪರ್ಕ ಹೊಂದಿವೆ ಎಂದು ಅವರು ಹೇಳಿದರು. 2014 ರ ಹಿಂದಿನ 8 ವರ್ಷಗಳಲ್ಲಿ ತೆಲಂಗಾಣದಲ್ಲಿ 125 ಕಿಲೋಮೀಟರ್‌ಗಿಂತಲೂ ಕಡಿಮೆ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿತ್ತು, ಆದರೆ ಕಳೆದ 8 ವರ್ಷಗಳಲ್ಲಿ ತೆಲಂಗಾಣದಲ್ಲಿ ಸುಮಾರು 325 ಕಿಲೋಮೀಟರ್ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ತೆಲಂಗಾಣದಲ್ಲಿ 250 ಕಿಲೋಮೀಟರ್‌ಗಿಂತಲೂ ಹೆಚ್ಚು ‘ಟ್ರ್ಯಾಕ್ ಮಲ್ಟಿ-ಟ್ರ್ಯಾಕಿಂಗ್’ ಕಾರ್ಯವನ್ನು ಸಹ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು ಮತ್ತು ಈ ಅವಧಿಯಲ್ಲಿ ರಾಜ್ಯದಲ್ಲಿ ರೈಲು ಹಳಿಗಳ ವಿದ್ಯುದೀಕರಣವು 3 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಶೀಘ್ರದಲ್ಲೇ ನಾವು ತೆಲಂಗಾಣದ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳಲ್ಲಿ ವಿದ್ಯುದ್ದೀಕರಣ ಕಾರ್ಯವನ್ನು ಪೂರ್ಣಗೊಳಿಸಲಿದ್ದೇವೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ವಂದೇ ಭಾರತ್ ರೈಲು ಆಂಧ್ರಪ್ರದೇಶದ ಒಂದು ತುದಿಯಿಂದ ಮತ್ತೊಂದು ತುದಿಗೆ ಸಂಪರ್ಕ ಕಲ್ಪಿಸುತ್ತದೆ ಎಂದ ಪ್ರಧಾನಿ, ಆಂಧ್ರಪ್ರದೇಶದಲ್ಲಿ ರೈಲು ಜಾಲವನ್ನು ಬಲಪಡಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಸುಗಮ ಜೀವನ ಮತ್ತು ಸುಗಮ ವ್ಯವಹಾರವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದ ಪ್ರಧಾನಿ, ಕಳೆದ ಹಲವಾರು ವರ್ಷಗಳಲ್ಲಿ ಆಂಧ್ರಪ್ರದೇಶದಲ್ಲಿ 350 ಕಿಲೋಮೀಟರ್ ಹೊಸ ರೈಲು ಮಾರ್ಗಗಳು ಮತ್ತು ಸುಮಾರು 800 ಕಿಲೋಮೀಟರ್ ಮಲ್ಟಿ ಟ್ರ್ಯಾಕಿಂಗ್ ನಿರ್ಮಾಣ ಪೂರ್ಣಗೊಂಡಿದೆ ಎಂದು ಹೇಳಿದರು. 2014 ಕ್ಕೂ ಹಿಂದಿನ ಸರ್ಕಾರದ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ವಾರ್ಷಿಕವಾಗಿ ಕೇವಲ 60 ಕಿಲೋಮೀಟರ್ ರೈಲು ಹಳಿಗಳನ್ನು ವಿದ್ಯುದೀಕರಣಗೊಳಿಸಲಾಗಿತ್ತು. ಈ ವೇಗವು ಈಗ ವಾರ್ಷಿಕವಾಗಿ 220 ಕಿಲೋಮೀಟರ್‌ಗಿಂತ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಈ ವೇಗ ಮತ್ತು ಪ್ರಗತಿಯ ಪ್ರಕ್ರಿಯೆಯು ಹೀಗೆಯೇ ಮುಂದುವರಿಯುತ್ತದೆ ಎಂದ ಪ್ರಧಾನಿಯವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರತಿಯೊಬ್ಬರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲರಾದ ಶ್ರೀಮತಿ ತಮಿಳ್ ಸಾಯಿ ಸೌಂದರರಾಜನ್, ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಶ್ರೀ ಜಿ ಕಿಶನ್ ರೆಡ್ಡಿ, ರಾಜ್ಯ ಸಚಿವರು ಮತ್ತು ಸಂಸದರು ಉಪಸ್ಥಿತರಿದ್ದರು.
ಹಿನ್ನೆಲೆ
ಇದು ಭಾರತೀಯ ರೈಲ್ವೆ ಪರಿಚಯಿಸಿದ ಎಂಟನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ ಮತ್ತು ಇದು ಎರಡು ತೆಲುಗು ಭಾಷಿಕ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ಸಂಪರ್ಕಿಸುವ ಮೊದಲನೆಯದಾಗಿದೆ, ರೈಲು ಸುಮಾರು 700 ಕಿ.ಮೀ ದೂರ ಕ್ರಮಿಸುತ್ತದೆ. ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಂಗೆ ಪ್ರಯಾಣದ ಅವಧಿಯು ಹನ್ನೆರಡೂವರೆ ಗಂಟೆಯಿಂದ ಎಂಟೂವರೆ ಗಂಟೆಗೆ ಇಳಿಕೆಯಾಗಲಿದೆ. ಇದು ಆಂಧ್ರಪ್ರದೇಶದ ವಿಶಾಖಪಟ್ಟಣಂ, ರಾಜಮಂಡ್ರಿ ಮತ್ತು ವಿಜಯವಾಡ ನಿಲ್ದಾಣಗಳಲ್ಲಿ ಮತ್ತು ತೆಲಂಗಾಣದ ಖಮ್ಮಂ, ವಾರಂಗಲ್ ಮತ್ತು ಸಿಕಂದರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿರುತ್ತದೆ.
ದೇಶೀಯವಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ. ಇದು ರೈಲು ಪ್ರಯಾಣಿಕರಿಗೆ ವೇಗವಾದ, ಹೆಚ್ಚು ಆರಾಮದಾಯಕವಾದ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ಒದಗಿಸುತ್ತದೆ.
ಈ ರೈಲಿನ ಆರಂಭದಿಂದ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ವಿಸ್ತರಣೆಗೂ ಸಹಾಯವಾಗುತ್ತದೆ ಮತ್ತು ಆರಾಮದಾಯಕ ಮತ್ತು ವೇಗದ ಪ್ರಯಾಣದ ವಿಧಾನವನ್ನು ಒದಗಿಸುತ್ತದೆ. ಇದು ದೇಶದಲ್ಲಿ ಪರಿಚಯಿಸಲಾದ ಎಂಟನೇ ವಂದೇ ಭಾರತ್ ರೈಲು ಆಗಿದೆ ಮತ್ತು ಹಿಂದಿನದಕ್ಕೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾಗಿದೆ, ಇದು ಹೆಚ್ಚು ಹಗುರವಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ವಂದೇ ಭಾರತ್ 2.0 ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್‌ಗಳ ವೇಗವನ್ನು ಮತ್ತು ಗಂಟೆಗೆ 180 ಕಿಲೋಮೀಟರ್‌ಗಳವರೆಗೆ ಗರಿಷ್ಠ ವೇಗವನ್ನು ತಲುಪುವಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಸುಧಾರಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದಿನ ಆವೃತ್ತಿಯ 430 ಟನ್‌ಗಳಿಗೆ ಹೋಲಿಸಿದರೆ 392 ಟನ್ ತೂಕವಿದೆ. ಇದು ವೈ-ಫೈ ಕಂಟೆಂಟ್ ಆನ್ ಡಿಮ್ಯಾಂಡ್ ಸೌಲಭ್ಯವನ್ನೂ ಹೊಂದಿದೆ. ಹಿಂದಿನ ಆವೃತ್ತಿಯಲ್ಲಿದ್ದ 24 ಇಂಚಿನ ಪರದೆಗಳಿಗೆ ಹೋಲಿಸಿದರೆ ಪ್ರತಿ ಕೋಚ್ ಈಗ 32 ಇಂಚಿನ ಪರದೆಗಳ ಮೂಲಕ ಪ್ರಯಾಣಿಕರಿಗೆ ಮಾಹಿತಿ ಮತ್ತು ಮನರಂಜನೆಯನ್ನು ಒದಗಿಸುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಪರಿಸರ ಸ್ನೇಹಿಯಾಗಿದೆ. ಏಕೆಂದರೆ ಎಸಿಗಳು ಶೇಕಡಾ 15 ರಷ್ಟು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತವೆ. ಟ್ರ್ಯಾಕ್ಷನ್ ಮೋಟರ್‌ನ ಧೂಳು-ಮುಕ್ತ ಶುದ್ಧ ಗಾಳಿಯ ತಂಪಾಗಿಸುವಿಕೆಯೊಂದಿಗೆ, ಪ್ರಯಾಣವು ಹೆಚ್ಚು ಆರಾಮದಾಯಕವಾಗುತ್ತದೆ. ಈ ಹಿಂದೆ ಎಕ್ಸಿಕ್ಯುಟಿವ್ ವರ್ಗದ ಪ್ರಯಾಣಿಕರಿಗೆ ಮಾತ್ರ ಒದಗಿಸಲಾಗಿದ್ದ ಸೈಡ್ ರಿಕ್ಲೈನರ್ ಆಸನ ಸೌಲಭ್ಯವನ್ನು ಈಗ ಎಲ್ಲಾ ವರ್ಗಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಎಕ್ಸಿಕ್ಯುಟಿವ್ ಬೋಗಿಗಳು 180-ಡಿಗ್ರಿ ತಿರುಗುವ ಆಸನಗಳ ಹೆಚ್ಚುವರಿ ವೈಶಿಷ್ಟ್ಯವನ್ನು ಹೊಂದಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸದಲ್ಲಿ, ಗಾಳಿಯ ಶುದ್ಧೀಕರಣಕ್ಕಾಗಿ ರೂಫ್-ಮೌಂಟೆಡ್ ಪ್ಯಾಕೇಜ್ ಘಟಕದಲ್ಲಿ (ಆರ್ ಎಂ ಪಿ ಯು) ಫೋಟೋ-ಕ್ಯಾಟಲಿಟಿಕ್ ನೇರಳಾತೀತ ಗಾಳಿ ಶುದ್ಧೀಕರಣ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಚಂಡೀಗಢದ ಸೆಂಟ್ರಲ್ ಸೈಂಟಿಫಿಕ್ ಇನ್‌ಸ್ಟ್ರುಮೆಂಟ್ಸ್ ಆರ್ಗನೈಸೇಶನ್ (ಸಿ ಎಸ್ ಐ ಒ) ಶಿಫಾರಸು ಮಾಡಲ್ಪಟ್ಟಂತೆ, ತಾಜಾ ಗಾಳಿ ಮತ್ತು ಹಿಂತಿರುಗುವ ಗಾಳಿಯ ಮೂಲಕ ಬರುವ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು, ವೈರಸ್‌ಗಳು ಇತ್ಯಾದಿಗಳಿಂದ ಮುಕ್ತವಾದ ಗಾಳಿಯನ್ನು ಫಿಲ್ಟರ್ ಮಾಡಲು ಮತ್ತು ಸ್ವಚ್ಛಗೊಳಿಸಲು ಆರ್ ಎಂ ಪಿ ಯುನ ಎರಡೂ ತುದಿಗಳಲ್ಲಿ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ 2.0 ವಿವಿಧ ಉನ್ನತ ಮತ್ತು ವಿಮಾನದಂತಹ ಪ್ರಯಾಣದ ಅನುಭವಗಳನ್ನು ನೀಡುತ್ತದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ - ಕವಚ್ ಸೇರಿದಂತೆ ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
*****
(Release ID: 1891444)
Visitor Counter : 304
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam