ಪರಿಸರ ಮತ್ತು ಅರಣ್ಯ ಸಚಿವಾಲಯ

ಇತರ ಎಲ್ಲಾ ಪ್ರವಾಸೋದ್ಯಮ ಮತ್ತು ಪರಿಸರ-ಪ್ರವಾಸೋದ್ಯಮ ಚಟುವಟಿಕೆಗಳು ಸೇರಿದಂತೆ ಸಮ್ಮೇಡ್ ಶಿಖರ್ಜೀ ಪರ್ವತ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯ ಕಲಂ 3ರ ನಿಬಂಧನೆಗಳ ಅನುಷ್ಠಾನವನ್ನು ತಡೆಹಿಡಿಯಲಾಗಿದೆ


ಇದನ್ನು ಜಾರಿಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ 

Posted On: 05 JAN 2023 5:12PM by PIB Bengaluru

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (ಎಂ.ಒ.ಇ.ಎಫ್.ಸಿ.ಸಿ.) ಕಳೆದ ಕೆಲವು ದಿನಗಳಿಂದ ಜೈನ ಸಮಾಜವನ್ನು ಪ್ರತಿನಿಧಿಸುವ ವಿವಿಧ ಸಂಸ್ಥೆಗಳಿಂದ ಪಾರ್ಶ್ವನಾಥ ವನ್ಯಜೀವಿ ಅಭಯಾರಣ್ಯದಲ್ಲಿ ನಡೆಯುತ್ತಿರುವ ಕೆಲವು ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹಲವಾರು ಮನವಿಗಳನ್ನು ಸ್ವೀಕರಿಸಿದೆ, ಇದು ಜೈನ ಧರ್ಮದ ಅನುಯಾಯಿಗಳ ಭಾವನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಸ್ವೀಕರಿಸಿದ ಕುಂದುಕೊರತೆ ಮನವಿಗಳು ಜಾರ್ಖಂಡ್ ಸರ್ಕಾರವು ಪಾರ್ಶ್ವನಾಥ ವನ್ಯಜೀವಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ಅಧಿಸೂಚನಾ ನಿಬಂಧನೆಗಳ ದೋಷಪೂರಿತ ಅನುಷ್ಠಾನದ ಬಗ್ಗೆ ಉಲ್ಲೇಖಿಸುತ್ತವೆ. ಅದರಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳ ಇಂತಹ ನಿರ್ಲಕ್ಷ್ಯವು ತಮ್ಮ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಉಲ್ಲೇಖಿಸಲಾಗಿದೆ.

ಈ ನಿಟ್ಟಿನಲ್ಲಿ, ಕೇಂದ್ರ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಜೈನ ಸಮುದಾಯದ ವಿವಿಧ ಪ್ರತಿನಿಧಿಗಳೊಂದಿಗಿನ ಸಭೆಯನ್ನು ಇಡೀ ಸಮಸ್ಯೆ ಮತ್ತು ಅದರ ಸಂಭಾವ್ಯ ಪರಿಹಾರದ ಬಗ್ಗೆ ಚರ್ಚಿಸಲು ಆಯೋಜಿಸಿದ್ದರು. ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಮ್ಮೇದ್ ಶಿಖರ್ಜಿಯಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮತ್ತು ಆ ಸ್ಥಳದ ಧರ್ಮನಿಷ್ಠೆಯನ್ನು ಕಾಪಾಡಿಕೊಳ್ಳುವ ಸಮುದಾಯದ ಬೇಡಿಕೆಗಳ ಬಗ್ಗೆಯೂ ಮಾತನಾಡಿದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ನಿಬಂಧನೆಗಳ ಅಡಿಯಲ್ಲಿ 1984ರಲ್ಲಿ ಹಿಂದಿನ ಬಿಹಾರ ರಾಜ್ಯವು ಪಾರ್ಶ್ವನಾಥ ವನ್ಯಜೀವಿ ಅಭಯಾರಣ್ಯವನ್ನು ಸ್ಥಾಪಿಸಿದ್ದರೆ, ಪರಿಸರ ಸೂಕ್ಷ್ಮ ವಲಯವನ್ನು (ಇ.ಎಸ್.ಝಡ್) ಭಾರತ ಸರ್ಕಾರವು 2019ರಲ್ಲಿ ಜಾರ್ಖಂಡ್ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಪರಿಸರ (ಸಂರಕ್ಷಣೆ) ಕಾಯ್ದೆ 1986ರ ನಿಬಂಧನೆಗಳ ಅಡಿಯಲ್ಲಿ ಅಧಿಸೂಚನೆ ಹೊರಡಿಸಿದೆ ಎಂದು ಪ್ರತಿನಿಧಿಗಳಿಗೆ ತಿಳಿಸಲಾಯಿತು.

ಪರಿಸರ ಸೂಕ್ಷ್ಮ ವಲಯಗಳು ಸಂರಕ್ಷಿತ ಪ್ರದೇಶಗಳ ಸುತ್ತಲೂ ಚಟುವಟಿಕೆಗಳನ್ನು ನಿಷೇಧಿಸುವ, ನಿಯಂತ್ರಿಸುವ ಕಾರ್ಯಗಳನ್ನು ಉತ್ತೇಜಿಸುವ ಮೂಲಕ ಸಂರಕ್ಷಿತ ಪ್ರದೇಶಗಳಿಗೆ ಒಂದು ರೀತಿಯ "ಶಾಕ್ ಅಬ್ಸಾರ್ಬರ್"ಗಳಾಗಿ ಕಾರ್ಯನಿರ್ವಹಿಸುತ್ತವೆ. ಇ.ಎಸ್.ಝಡ್. ಅಧಿಸೂಚನೆಯು ಅನಿಯಂತ್ರಿತ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿಲ್ಲ. ಅದು ಖಂಡಿತವಾಗಿಯೂ ಅಭಯಾರಣ್ಯದ ಗಡಿಯೊಳಗೆ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವುದಿಲ್ಲ. ಇ.ಎಸ್.ಝಡ್.ನ ಘೋಷಣೆಯು ವಾಸ್ತವವಾಗಿ ಅಭಯಾರಣ್ಯದ ಸುತ್ತಲಿನ ಚಟುವಟಿಕೆಗಳನ್ನು ನಿರ್ಬಂಧಿಸುವುದು ಅಥವಾ ನಿಯಂತ್ರಿಸುವುದು ಮತ್ತು ಅಂತಹ ಚಟುವಟಿಕೆಗಳನ್ನು ಅದರ ಗಡಿಯ ಹೊರಗಿಡುವುದಾಗಿದೆ. 

ಪಾರ್ಶ್ವನಾಥ ವನ್ಯಜೀವಿ ಅಭಯಾರಣ್ಯದ ನಿರ್ವಹಣಾ ಯೋಜನೆಯಲ್ಲಿ ಜೈನ ಸಮುದಾಯದ ಭಾವನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಲಾದ ಚಟುವಟಿಕೆಗಳನ್ನು ನಿಷೇಧಿಸುವ ಸಾಕಷ್ಟು ನಿಬಂಧನೆಗಳಿವೆ, ಆದರೆ ಭಾರತ ಸರ್ಕಾರವು ಯಾವುದೇ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಲು ಮೇಲ್ವಿಚಾರಣಾ ಸಮಿತಿಗೆ ಮಾರ್ಗಸೂಚಿಗಳನ್ನು ಸಹ ಹೊರಡಿಸಬಹುದು ಎಂದು ಉಲ್ಲೇಖಿಸಲಾಗಿದೆ.

ಸಮ್ಮೇದ್ ಶಿಖರ್ಜೀ ಪರ್ವತ ಕ್ಷೇತ್ರವು ಜೈನ ಸಮುದಾಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಒಂದು ಪವಿತ್ರ ಜೈನ ಧಾರ್ಮಿಕ ಸ್ಥಳವಾಗಿದೆ ಎಂಬ ಸತ್ಯವನ್ನು ತಮ್ಮ ಸಚಿವಾಲಯವು ಗುರುತಿಸಿದೆ ಮತ್ತು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಸಚಿವಾಲಯ ಬದ್ಧವಾಗಿದೆ ಎಂದು ಶ್ರೀ ಯಾದವ್ ನಿರ್ದಿಷ್ಟವಾಗಿ ಉಲ್ಲೇಖಿಸಿದರು.

ಈ ಸಭೆಯ ಪರಿಣಾಮವಾಗಿ, ನಿಷೇಧಿತ ಪಾರ್ಶ್ವನಾಥ ವನ್ಯಜೀವಿ ಅಭಯಾರಣ್ಯಕ್ಕೆ ಸಂಬಂಧಿತ ನಿಬಂಧನೆಗಳ ನಿರ್ವಹಣಾ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಾರ್ಖಂಡ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ನಿರ್ಧರಿಸಲಾಗಿದೆ. ಇದು ನಿರ್ದಿಷ್ಟವಾಗಿ ಸಸ್ಯ ಅಥವಾ ಪ್ರಾಣಿಗಳಿಗೆ ಹಾನಿಯುಂಟು ಮಾಡುವ ಕೆಲಸ; ಸಾಕು ಪ್ರಾಣಿಗಳೊಂದಿಗೆ ಈ ಕ್ಷೇತ್ರಕ್ಕೆ ಬರುವುದು; ಜೋರಾದ ಸಂಗೀತವನ್ನು ನುಡಿಸುವುದು ಅಥವಾ ಧ್ವನಿವರ್ಧಕಗಳನ್ನು ಬಳಸುವುದು; ಪವಿತ್ರ ಸ್ಮಾರಕಗಳು, ಸರೋವರಗಳು, ಬಂಡೆಗಳು, ಗುಹೆಗಳು ಮತ್ತು ದೇವಾಲಯಗಳಂತಹ ಸ್ಥಳಗಳು ಅಥವಾ ಧಾರ್ಮಿಕ ಮತ್ತು ಸಾಂಸ್ಕೃತಿಕ ವಸ್ತುಗಳ ಮಹತ್ವವನ್ನು ಅಪವಿತ್ರಗೊಳಿಸುವುದು; ಮತ್ತು ಮದ್ಯ, ನಶೆ ಪದಾರ್ಥಗಳು ಮತ್ತು ಇತರ ಮಾದಕ ವಸ್ತು ಇತ್ಯಾದಿಗಳ ಮಾರಾಟ; ಪಾರ್ಶ್ವನಾಥ ಬೆಟ್ಟದಲ್ಲಿ ಅನಧಿಕೃತ ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್ ಇತ್ಯಾದಿಗಳನ್ನು ನಿಷೇಧಿಸುತ್ತದೆ. ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾರ್ಖಂಡ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಸದರಿ ಓ.ಎಮ್.ನಲ್ಲಿ ಒದಗಿಸಿರುವಂತೆ ಪಾರ್ಶ್ವನಾಥ ಬೆಟ್ಟದಲ್ಲಿ ಮದ್ಯ ಮತ್ತು ಮಾಂಸಾಹಾರಿ ಆಹಾರ ಪದಾರ್ಥಗಳ ಮಾರಾಟ ಮತ್ತು ಸೇವನೆಯ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ.

ಇದಲ್ಲದೆ, ಪವಿತ್ರ ಪಾರ್ಶ್ವನಾಥ ಬೆಟ್ಟದ ಆಚೆಗಿನ ಬಫರ್ ವಲಯವನ್ನು ರಕ್ಷಿಸಲು 2019ರ ಆಗಸ್ಟ್ 2ರಂದು ಹೊರಡಿಸಲಾದ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ಎಸ್.ಒ.2795 (ಇ) ಗೆ ಸಂಬಂಧಿಸಿದಂತೆ; ಸದರಿ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯ ಕಲಂ 3ರ ನಿಬಂಧನೆಗಳ ಅನುಷ್ಠಾನವನ್ನು ತಕ್ಷಣವೇ ತಡೆಹಿಡಿಯಲಾಗಿದೆ, ಇದರಲ್ಲಿ ಇತರ ಎಲ್ಲಾ ಪ್ರವಾಸೋದ್ಯಮ ಮತ್ತು ಪರಿಸರ-ಪ್ರವಾಸೋದ್ಯಮ ಚಟುವಟಿಕೆಗಳು ಸೇರಿವೆ. ಇದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ.

ಇದಲ್ಲದೆ, ಪರಿಸರ (ಸಂರಕ್ಷಣೆ) ಕಾಯ್ದೆ, 1986ರ ಸೆಕ್ಷನ್ 3ರ ಉಪ-ಪ್ರಕರಣ (3)ರ ಅಡಿಯಲ್ಲಿ ಮೇಲಿನ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯ ನಿಬಂಧನೆಗಳ ಪರಿಣಾಮಕಾರಿ ಮೇಲ್ವಿಚಾರಣೆಗಾಗಿ, ಕೇಂದ್ರ ಸರ್ಕಾರವು ಸದರಿ ಅಧಿಸೂಚನೆಯ ಖಂಡ 5ರ ಅಡಿಯಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದೆ. ಈ ಮೇಲ್ವಿಚಾರಣಾ ಸಮಿತಿಗೆ ಜೈನ ಸಮುದಾಯದ ಇಬ್ಬರು ಸದಸ್ಯರು ಮತ್ತು ಸ್ಥಳೀಯ ಬುಡಕಟ್ಟು ಸಮುದಾಯದ ಒಬ್ಬ ಸದಸ್ಯರನ್ನು ಖಾಯಂ ಆಹ್ವಾನಿತರಾಗಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದ್ದು, ಇದು ಪ್ರಮುಖ ಮಧ್ಯಸ್ಥಗಾರರಿಂದ ಸೂಕ್ತ ಪಾಲ್ಗೊಳ್ಳುವಿಕೆ ಮತ್ತು ಮೇಲ್ವಿಚಾರಣೆಗೆ ಅನುವು ಮಾಡಿಕೊಡುತ್ತದೆ.

ಇಂಗ್ಲಿಷ್ ನಲ್ಲಿ ಪಾರ್ಶ್ವನಾಥ ಓ.ಎಂ.ಅನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಹಿಂದಿಯಲ್ಲಿ ಪಾರ್ಶ್ವನಾಥ ಓ.ಎಂ.ಅನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

******

 



(Release ID: 1889003) Visitor Counter : 161