ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಜಸ್ಥಾನದಲ್ಲಿ ಭಾರತದ ರಾಷ್ಟ್ರಪತಿಗಳು; ಜೈಪುರದ ರಾಜಭವನದಲ್ಲಿ ಸಂವಿಧಾನ ಉದ್ಯಾನ ಉದ್ಘಾಟನೆ; ರಾಜಸ್ಥಾನದಲ್ಲಿ ಸೌರ ಶಕ್ತಿ ವಲಯಗಳಿಗೆ ಪ್ರಸರಣ ವ್ಯವಸ್ಥೆಗಳ ವರ್ಚುವಲ್ ಉದ್ಘಾಟನೆ ಮತ್ತು 1,000 ಮೆಗಾವ್ಯಾಟ್ ಬಿಕನೇರ್ ಸೌರ ವಿದ್ಯುತ್ ಯೋಜನೆಗೆ ಅಡಿಪಾಯ 

Posted On: 03 JAN 2023 2:54PM by PIB Bengaluru

 

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 3, 2023) ರಾಜಸ್ಥಾನ ರಾಜಧಾನಿ ಜೈಪುರದ ರಾಜಭವನದಲ್ಲಿ ಸಂವಿಧಾನ ಉದ್ಯಾನ, ಮಯೂರ್ ಸ್ತಂಭ, ರಾಷ್ಟ್ರೀಯ ಧ್ವಜ ಕಂಬ, ಮಹಾತ್ಮ ಗಾಂಧಿ ಮತ್ತು ಮಹಾರಾಣಾ ಪ್ರತಾಪ್ ಅವರ ಪ್ರತಿಮೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಅವರು ರಾಜಸ್ಥಾನದಲ್ಲಿ ಸೌರ ಶಕ್ತಿ ವಲಯಗಳಿಗೆ ಪ್ರಸರಣ ವ್ಯವಸ್ಥೆಯನ್ನು ವರ್ಚುವಲ್ ಆಗಿ ಉದ್ಘಾಟಿಸಿ SJVN ಲಿಮಿಟೆಡ್‌ನ 1,000 ಮೆಗಾವ್ಯಾಟ್ ಬಿಕನೇರ್ ಸೌರ ವಿದ್ಯುತ್ ಯೋಜನೆಗೆ ಅಡಿಪಾಯ ಹಾಕಿದರು.

ಬಳಿಕ ಮಾತನಾಡಿದ ರಾಷ್ಟ್ರಪತಿಗಳು, ನಮ್ಮ ಪ್ರಜಾಪ್ರಭುತ್ವವು ವಿಭಿನ್ನವಾಗಿದ್ದು ರೋಮಾಂಚಕವಾಗಿದೆ. ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ನಮ್ಮದು. ನಮ್ಮ ಸಂವಿಧಾನವೇ ಈ ಮಹಾನ್ ಪ್ರಜಾಪ್ರಭುತ್ವದ ಅಡಿಪಾಯ. ಈ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಸಂವಿಧಾನ ರಚನಾಕಾರರಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದರು. ಈ ಮಹಾನ್ ರಾಷ್ಟ್ರದ ಪರವಾಗಿ ಅವರು ಭಾರತದ ಸಂವಿಧಾನದ ಶಿಲ್ಪಿಗಳಿಗೆ ಗೌರವ ಸಲ್ಲಿಸಿದರು.

ಸಂವಿಧಾನ ರಚನೆಯ ಮೂರು ವರ್ಷಗಳ ಐತಿಹಾಸಿಕ ಪಯಣವನ್ನು ಉದ್ಯಾನದಲ್ಲಿ ಕಲಾತ್ಮಕವಾಗಿ ಪ್ರದರ್ಶಿಸಿದ ಕಲಾವಿದರನ್ನು ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳು ಶ್ಲಾಘಿಸಿದರು. ನಮ್ಮ ಆಧುನಿಕ ಇತಿಹಾಸದ ಪ್ರಮುಖ ಅಧ್ಯಾಯವನ್ನು ಸಂವಿಧಾನ ಉದ್ಯಾನದಲ್ಲಿ ಸೊಗಸಾದ ವರ್ಣಚಿತ್ರಗಳು, ಶಿಲ್ಪಗಳು ಮತ್ತು ಇತರ ಕಲಾ ಪ್ರಕಾರಗಳ ಮೂಲಕ ಪ್ರಸ್ತುತಪಡಿಸಲಾಗಿದೆ ಎಂದು ಹೇಳಿದರು.

ನಮ್ಮ ಸಂವಿಧಾನ ರಚನಕಾರರು ಸಮಾಜದ ಪ್ರತಿಯೊಂದು ವರ್ಗದ ಬಗ್ಗೆ ಸಂವೇದನೆ ಮತ್ತು ಪ್ರಜಾಪ್ರಭುತ್ವದ ಪ್ರತಿಯೊಂದು ಹಂತ ಮತ್ತು ಆಡಳಿತದ ಪ್ರತಿಯೊಂದು ಅಂಶಗಳ ಬಗ್ಗೆ ಜಾಗೃತಿಯಿಂದಾಗಿ ಸಮಗ್ರ ಸಂವಿಧಾನವನ್ನು ರಚಿಸಿದ್ದಾರೆ ಎಂದು ರಾಷ್ಟ್ರಪತಿಗಳು ಹೇಳಿದರು. ನಮ್ಮ  ಸಂವಿಧಾನ ರಚನಕಾರರ ದೂರದೃಷ್ಟಿ ಎಷ್ಟಿತ್ತೆಂದರೆ, ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವ್ಯವಸ್ಥೆಯನ್ನು ರಚಿಸಲು ಭವಿಷ್ಯದ ಪೀಳಿಗೆಯವರ ಹಕ್ಕುಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿದ್ದರು. ಅದಕ್ಕಾಗಿಯೇ ಸಂವಿಧಾನದ ತಿದ್ದುಪಡಿಯ ನಿಬಂಧನೆಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 105 ತಿದ್ದುಪಡಿಗಳನ್ನು ಮಾಡಲಾಗಿದೆ. ಹೀಗಾಗಿ, ನಮ್ಮ ಸಂವಿಧಾನವು ಜೀವಂತ ದಾಖಲೆಗಳಾಗಿದ್ದು, ಕಾಲಾನಂತರದಲ್ಲಿ ಬದಲಾಗುತ್ತಿರುವ ಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಅಳವಡಿಸಿಕೊಳ್ಳಲು ಸಂಪೂರ್ಣವಾಗಿ ಸಮರ್ಥವಾಗಿದೆ.

  ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

*****


(Release ID: 1888354) Visitor Counter : 187