ರಾಷ್ಟ್ರಪತಿಗಳ ಕಾರ್ಯಾಲಯ
ಚಳಿಗಾಲದ ಪ್ರವಾಸಕ್ಕಾಗಿ ಸಿಕಂದರಾಬಾದ್‌ನ ರಾಷ್ಟ್ರಪತಿ ನಿಲಯಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
Posted On:
25 DEC 2022 7:19PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನಾಳೆಯಿಂದ ಡಿಸೆಂಬರ್ 30ರವರೆಗೆ ಚಳಿಗಾಲದ ಪ್ರವಾಸಕ್ಕಾಗಿ ತೆಲಂಗಾಣದ ಸಿಕಂದರಾಬಾದ್ ನಲ್ಲಿರುವ ರಾಷ್ಟ್ರಪತಿ ನಿಲಯಕ್ಕೆ ಭೇಟಿ ನೀಡಲಿದ್ದಾರೆ.
ನಾಳೆ, ಡಿಸೆಂಬರ್ 26ರಂದು, ರಾಷ್ಟ್ರಪತಿಗಳು ಆಂಧ್ರಪ್ರದೇಶದ ಶ್ರೀಶೈಲಂ ದೇವಾಲಯಕ್ಕೆ ಭೇಟಿ ನೀಡಲಿದ್ದು ಅಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ 'ಪ್ರಸಾದ್ ಯೋಜನೆ'ಯಡಿಯಲ್ಲಿ ಶ್ರೀಶೈಲಂ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲಿಂದ ರಾಷ್ಟ್ರಪತಿ ನಿಲಯಕ್ಕೆ ತಲುಪುವ ಮೊದಲು ಶ್ರೀಶೈಲಂನಲ್ಲಿರುವ ಶಿವಾಜಿ ಸ್ಪೂರ್ತಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಡಿಸೆಂಬರ್ 27ರಂದು, ರಾಷ್ಟ್ರಪತಿಗಳು ಹೈದರಾಬಾದ್‌ನಲ್ಲಿರುವ ಕೇಶವ್ ಸ್ಮಾರಕ ಶೈಕ್ಷಣಿಕ ಸೊಸೈಟಿಯ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿ ತರಬೇತಿದಾರರನ್ನು ಉದ್ದೇಶಿಸಿ (74 ನೇ ಆರ್‌ಆರ್ ತಂಡ) ಮಾತನಾಡಲಿದ್ದಾರೆ. ಹೈದರಾಬಾದ್ ನಲ್ಲಿ ಅವರು ಮಿಶ್ರ ಧಾತು ನಿಗಮ ನಿಯಮಿತ (MIDHAN) ವೈಡ್ ಪ್ಲೇಟ್ ಮಿಲ್ ನ್ನು ಉದ್ಘಾಟಿಸಲಿದ್ದಾರೆ.
ಡಿಸೆಂಬರ್ 28ರಂದು ರಾಷ್ಟ್ರಪತಿಗಳು, ಭದ್ರಾಚಲಂನ ಶ್ರೀ ಸೀತಾರಾಮ ಚಂದ್ರ ಸ್ವಾಮಿವಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ್ ಯೋಜನೆಯಡಿಯಲ್ಲಿ ಭದ್ರಾಚಲಂ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ವನವಾಸಿ ಕಲ್ಯಾಣ ಪರಿಷತ್ -ತೆಲಂಗಾಣ ಆಯೋಜಿಸಿದ ಸಮ್ಮಕ್ಕ ಸರಳಮ್ಮ ಜಂಜಾಟಿ ಪೂಜಾರಿ ಸಮ್ಮೇಳನವನ್ನು ಉದ್ಘಾಟಿಸುವರು.ತೆಲಂಗಾಣದ ಕೋಮರಂ ಭೀಮ್ ಆಸಿಫಾಬಾದ್ ಮತ್ತು ಮಹಬೂಬಾಬಾದ್ ಜಿಲ್ಲೆಗಳಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಅದೇ ದಿನ ರಾಷ್ಟ್ರಪತಿಯವರು ವಾರಂಗಲ್ ಜಿಲ್ಲೆಯ ರಾಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಅಲ್ಲಿ ರಾಮಪ್ಪ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಾಮೇಶ್ವರಾಲಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಡಿಸೆಂಬರ್ 29ರಂದು, ರಾಷ್ಟ್ರಪತಿಗಳು ಜಿ. ನಾರಾಯಣಮ್ಮ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ(ಮಹಿಳೆಯರಿಗಾಗಿ) ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಹಾಗೂ ಹೈದರಾಬಾದ್‌ನಲ್ಲಿರುವ ಬಿಎಂ ಮಲಾನಿ ನರ್ಸಿಂಗ್ ಕಾಲೇಜು ಮತ್ತು ಮಹಿಳಾ ದಕ್ಷತಾ ಸಮಿತಿಯ ಸುಮನ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಶಂಶಾಬಾದ್‌ನ ಶ್ರೀರಾಮನಗರದಲ್ಲಿರುವ ಸಮಾನತೆಯ ಪ್ರತಿಮೆಗೆ ಭೇಟಿ ನೀಡಲಿದ್ದಾರೆ.
ಡಿಸೆಂಬರ್ 30ರಂದು, ರಾಷ್ಟ್ರಪತಿಗಳು ದೆಹಲಿಗೆ ಹಿಂದಿರುಗುವ ಮೊದಲು ರಾಷ್ಟ್ರಪತಿ ನಿಲಯಂನಲ್ಲಿ ವೀರ ನಾರಿಯರು(ಹುತಾತ್ಮ ಯೋಧರ ಪತ್ನಿಯರು)ಮತ್ತು ಇತರ ಗಣ್ಯರಿಗೆ ಮಧ್ಯಾಹ್ನ ಭೋಜನದ ಆತಿಥ್ಯ ನೀಡಲಿದ್ದಾರೆ.
*****
(Release ID: 1886573)