ಗೃಹ ವ್ಯವಹಾರಗಳ ಸಚಿವಾಲಯ

ಲೋಕಸಭೆಯಲ್ಲಿಂದು ನಿಯಮ 193ರ ಅಡಿಯಲ್ಲಿ ದೇಶದಲ್ಲಿನ ಮಾದಕವಸ್ತುಗಳ ಸಮಸ್ಯೆ ಮತ್ತು ಅದನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ನಡೆದ ಸಂಕ್ಷಿಪ್ತ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ.



ಮೋದಿ ಸರ್ಕಾರ, ಮಾದಕವಸ್ತು ವ್ಯಾಪಾರ ಮತ್ತು ಅದರ ಲಾಭದಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಮತ್ತು ಅದನ್ನು ಶೂನ್ಯಕ್ಕೆ ಇಳಿಸಲು ಸರ್ಕಾರ ಕಟ್ಟುನಿಟ್ಟಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೃಹ ಸಚಿವಾಲಯಕ್ಕೆ ಮಾದಕವಸ್ತು ಮುಕ್ತ ಭಾರತದ ಗುರಿಯನ್ನು ನಿಗದಿಪಡಿಸಿದ್ದಾರೆ ಮತ್ತು ಈ ಗುರಿಯನ್ನು ಸಾಧಿಸಲು ಗೃಹ ಸಚಿವಾಲಯದ ವತಿಯಿಂದ ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ.

ಮಾದಕವಸ್ತು ವಿರುದ್ಧದ ಈ ಹೋರಾಟವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಂಟಿಯಾಗಿ ಮಾಡಬೇಕಾಗಿದೆ.

ಗಡಿ ಭದ್ರತಾ ಪಡೆ, ಎಸ್ಎಸ್.ಬಿ. ಮತ್ತು ಅಸ್ಸಾಂ ರೈಫಲ್ಸ್, ಈ ಮೂವರಿಗೂ ಎನ್.ಡಿ.ಪಿಎಸ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲು ಅಧಿಕಾರ ನೀಡಲಾಗಿದೆ, ಭಾರತೀಯ ಕರಾವಳಿ ಭದ್ರತಾ  ಪಡೆ, ರಾಜ್ಯ ಕರಾವಳಿ ಪೊಲೀಸ್ ಠಾಣೆಗಳು ಮತ್ತು ರೈಲ್ವೆ ಸುರಕ್ಷತಾ ಪಡೆಗಳಿಗೂ ಅಧಿಕಾರ ನೀಡಲಾಗಿದೆ.

ಭದ್ರತಾ ಪಡೆಗಳಿಗೆ ಅಧಿಕಾರ ನೀಡಲಾಗಿದೆ, ಆದರೆ ಕೆಲವು ರಾಜ್ಯಗಳು ತಮ್ಮ ಅಧಿಕಾರಗಳನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿವೆ... ನಾವು ನಮ್ಮ ಸಂಸ್ಥೆಗಳಿಗೆ ಅಧಿಕಾರವನ್ನು ನೀಡದಿದ್ದರೆ, ಅವರು ಹೇಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ? ನಮ್ಮ ಭದ್ರತಾ ಪಡೆಗಳ ಮೇಲೆ ನಮಗೆ ನಂಬಿಕೆ ಇರಬೇಕು, ಈ ವಿಷಯವನ್ನು ರಾಜಕೀಯಗೊಳಿಸುವವರು ಮ

Posted On: 21 DEC 2022 8:21PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಂದು ಲೋಕಸಭೆಯಲ್ಲಿ ನಿಯಮ 193 ರ ಅಡಿಯಲ್ಲಿ ದೇಶದಲ್ಲಿನ ಮಾದಕವಸ್ತುಗಳ ಸಮಸ್ಯೆ ಮತ್ತು ಅದರ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಡೆದ ಸಂಕ್ಷಿಪ್ತ ಚರ್ಚೆಗೆ ಉತ್ತರಿಸಿದರು.

ಸದನದ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಶ್ರೀ ಅಮಿತ್ ಶಾ ಅವರು, ಈ ವಿಷಯಕ್ಕೆ ರಾಜಕೀಯ ಬಣ್ಣ ನೀಡುವ ಬದಲು, ಸದನವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಇದು ಬಹಳ ಗಂಭೀರ ಸಮಸ್ಯೆ ಎಂದು ಎಲ್ಲಾ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಮಾದಕವಸ್ತುಗಳ ಸಮಸ್ಯೆಯು ನಮ್ಮ ಮುಂದಿನ ಪೀಳಿಗೆಯನ್ನು ನಾಶಪಡಿಸುತ್ತಿದೆ ಮತ್ತು ಈ ವ್ಯವಹಾರದಿಂದ ಬರುವ ಲಾಭವನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸಲು ಸಹ ಬಳಸಲಾಗುತ್ತದೆ ಎಂದು ಅವರು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾದಕವಸ್ತು ಮುಕ್ತ ಭಾರತ ಮಾಡುವ ಸಂಕಲ್ಪ ಮಾಡುವಂತೆ ಮನವಿ ಮಾಡಿದ್ದಾರೆ ಮತ್ತು 2014 ರಿಂದ ಈ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರವು ಮಾದಕ ದ್ರವ್ಯ ವ್ಯಾಪಾರ ಮತ್ತು ಅದರ ಲಾಭದಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಮತ್ತು ಅದನ್ನು ಶೂನ್ಯಕ್ಕೆ ಇಳಿಸಲು ಸರ್ಕಾರ ಕಟ್ಟುನಿಟ್ಟಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸದನಕ್ಕೆ ಭರವಸೆ ನೀಡಿದರು. ಮಾದಕದ್ರವ್ಯಗಳ ವ್ಯಾಪಕತೆ ನಮ್ಮ ಮುಂದಿನ ಪೀಳಿಗೆಯನ್ನು ಟೊಳ್ಳು ಮಾಡುವುದಲ್ಲದೆ, ಲಕ್ಷಾಂತರ ಕುಟುಂಬಗಳನ್ನು ನಾಶಪಡಿಸುತ್ತದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಅನೇಕ ರೀತಿಯ ಸಾಮಾಜಿಕ ಪಿಡುಗುಗಳನ್ನು ಸೃಷ್ಟಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಬಯಸುವ ದೇಶಗಳು ಅದನ್ನು ಬಳಸುತ್ತವೆ ಮತ್ತು ದೇಶದಲ್ಲಿ ಈ ಕೊಳಕು ಹಣದ ಹರಿವು ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಮಾದಕ ದ್ರವ್ಯ ಮುಕ್ತ ಭಾರತದ ಗುರಿಯನ್ನು ನಿಗದಿಪಡಿಸಿದ್ದಾರೆ ಮತ್ತು ಈ ಗುರಿಯನ್ನು ಈಡೇರಿಸಲು ನಾವು ಯಾವುದೇ ಅವಕಾಶವನ್ನು ಕೈಚೆಲ್ಲುವುದಿಲ್ಲ ಎಂದು ಅವರು ಹೇಳಿದರು.

ಮಾದಕವಸ್ತುಗಳ ವಿರುದ್ಧದ ಈ ಹೋರಾಟವನ್ನು ಕೇಂದ್ರ, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಂಟಿಯಾಗಿ ಮಾಡಬೇಕಾಗುತ್ತದೆ, ಏಕೆಂದರೆ ಗುರಿಯನ್ನು ಸಾಧಿಸಲು ಬಹುಮುಖ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಮೂಲಕ ಮಾದಕವಸ್ತುಗಳ ಪ್ರವೇಶವನ್ನು ಗಡಿಯಲ್ಲೇ ತಡೆಯಬೇಕಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಮಾದಕವಸ್ತುಗಳ ಹಾವಳಿಯ ವಿರುದ್ಧ ಮಾದಕ  ದ್ರವ್ಯ ನಿಯಂತ್ರಣ ಶಾಖೆ -ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ) ಮತ್ತು ರಾಜ್ಯಗಳ ಮಾದಕದ್ರವ್ಯ ನಿಗ್ರಹ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಇದಲ್ಲದೆ, ಪುನರ್ವಸತಿ ಮತ್ತು ವ್ಯಸನ ನಿವಾರಣೆಗಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಶ್ರೀ. ಶಾ ಹೇಳಿದರು. ಈ ಹೋರಾಟದ ಎಲ್ಲಾ ಆಯಾಮಗಳನ್ನು ನಾವು ಗಮನಿಸಿದಾಗ ಮಾತ್ರ ಮಾದಕದ್ರವ್ಯ ಮುಕ್ತ ಭಾರತದ ನಮ್ಮ ಕನಸು ನನಸಾಗಲು ಸಾಧ್ಯ ಎಂದು ಅವರು ಹೇಳಿದರು. ಮಾದಕವಸ್ತು ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ, ಎಲ್ಲಾ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಈ ಹೋರಾಟವನ್ನು ಗಂಭೀರವಾಗಿ ನಡೆಸಿವೆ ಎಂದು ಅವರು ಹೇಳಿದರು. ಪಕ್ಷ ರಾಜಕೀಯ ಮತ್ತು ಅಧಿಕಾರದಲ್ಲಿರುವ ಪಕ್ಷ ಮೀರಿ ರಾಜ್ಯಗಳು ಯಾವುದೇ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅವರೊಂದಿಗೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಡ್ರೋನ್ ಗಳು, ಕಳ್ಳಸಾಗಣೆ, ಸುರಂಗಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಗಡಿಯಾಚೆಗಿನ ಮಾದಕವಸ್ತುಗಳು ನಮ್ಮ ದೇಶವನ್ನು ಪ್ರವೇಶಿಸುತ್ತಿದ್ದು, ವ್ಯಾಪಾರವನ್ನು ನಿಲ್ಲಿಸುವುದಷ್ಟೇ ಈ ಸಮಸ್ಯೆಗೆ ಪರಿಹಾರವಲ್ಲ ಎಂದು ಶ್ರೀ ಶಾ ಹೇಳಿದರು. ನಾವು ಹೊಸ ವಿಧಾನಗಳನ್ನು ಬಳಸಿ ಇದನ್ನು ಕೊನೆಗಾಣಿಸಬೇಕಾಗಿದೆ ಎಂದು ಅವರು ಹೇಳಿದರು.

ಮಾದಕವಸ್ತು ಸೇವಿಸುವವರ ಬಗ್ಗೆ ಸಹಾನುಭೂತಿಯ ಮನೋಭಾವ ಇರಬೇಕು ಮತ್ತು ಅಂತಹ ಪೀಡಿತ ವ್ಯಕ್ತಿಗಳ ಪುನರ್ವಸತಿಗಾಗಿ ಸಿದ್ಧತೆ ಮತ್ತು ಕಾನೂನು ನಿಬಂಧನೆಗಳು ಇರಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆದರೆ ಮಾದಕವಸ್ತುಗಳನ್ನು ವ್ಯಾಪಾರ ಮಾಡುವ ಮತ್ತು ಕಳ್ಳಸಾಗಣೆ ಮಾಡುವವರನ್ನು ಶಿಕ್ಷೆಗೆ ಒಳಪಡಿಸಬೇಕು. ಈ ಪಿಡುಗಿನಲ್ಲಿ ಸಿಲುಕಿರುವ ಯುವಕರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಸಮಾಜವು ಅವನನ್ನು ಮತ್ತೆ ಸ್ವೀಕರಿಸಲು ಅಂತಹ ಸಾಮಾಜಿಕ ವಾತಾವರಣವನ್ನು ಸೃಷ್ಟಿಸುವುದು ಎಲ್ಲಾ ಸದಸ್ಯರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ನಾವು ಯಾವುದೇ ಮಾದಕವಸ್ತು ತನಿಖೆ ಮತ್ತು ಅದನ್ನು ವಶಪಡಿಸಿಕೊಳ್ಳುವುದನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಾದಕವಸ್ತುಗಳು ಎಲ್ಲಿಂದ ಬಂದವು ಮತ್ತು ಅವು ಎಲ್ಲಿಗೆ ಹೋಗುತ್ತವೆ ಎಂಬ ಸಂಪೂರ್ಣ ಜಾಲವನ್ನು ನಾವು ನಾಶಪಡಿಸಬೇಕಾಗಿದೆ ಎಂದು ಅವರು ಹೇಳಿದರು. ನಾವು ಸಂಪೂರ್ಣ ಜಾಲವನ್ನು ಪರಿಶೀಲಿಸಿದರೆ ಮಾತ್ರ, ಈ ಸಮಸ್ಯೆಯನ್ನು ಪರಿಹರಿಸಬಹುದು. ಎನ್.ಸಿ.ಬಿ ದೇಶಾದ್ಯಂತ ತನಿಖೆ ನಡೆಸಬಹುದು ಮತ್ತು ಎನ್ಐಎ ವಿದೇಶದಲ್ಲೂ ತನಿಖೆ ನಡೆಸಬಹುದು ಎಂದು ಅವರು ಹೇಳಿದರು. ತಮ್ಮ ರಾಜ್ಯದಲ್ಲಿ ಮೇಲಿನಿಂದ ಕೆಳಗಿನವರೆಗೆ ಮತ್ತು ಕೆಳಗಿನಿಂದ ಮೇಲಿನವರೆಗೆ ರಾಜ್ಯದ ಗಡಿ ದಾಟಿ ತನಿಖೆ ನಡೆಸುವ ಯಾವುದೇ ಪ್ರಕರಣವಿದ್ದರೆ, ರಾಜ್ಯಗಳು ಯಾವುದೇ ಹಿಂಜರಿಕೆಯಿಲ್ಲದೆ ಎನ್ ಸಿ ಬಿಯ ಸಹಾಯವನ್ನು ಪಡೆಯಬಹುದು, ಏಕೆಂದರೆ ಅಂತಹ ಪ್ರಕರಣಗಳಲ್ಲಿ ಸಹಾಯ ಮಾಡಲು ಎನ್.ಸಿ.ಬಿ ಸಿದ್ಧವಾಗಿದೆ ಮತ್ತು ಬದ್ಧವಾಗಿದೆ ಎಂದು ಗೃಹ ಸಚಿವರು ಸದನಕ್ಕೆ ತಿಳಿಸಿದರು. ಯಾವುದೇ ತನಿಖೆಯು ದೇಶದ ಗಡಿಯಿಂದ ಹೊರಗೆ ಹೋದರೆ, ತನಿಖೆಗಾಗಿ ಎನ್.ಐಎ ಸಹಾಯವನ್ನು ಸಹ ತೆಗೆದುಕೊಳ್ಳಬಹುದು ಎಂದು ಶ್ರೀ ಶಾ ಹೇಳಿದರು. ರಾಜ್ಯಗಳು ಸುಮಾರು 42 ಪ್ರಕರಣಗಳನ್ನು ಎನ್.ಸಿ.ಬಿ ಅಥವಾ ಎನ್ಐಎಗೆ ಶಿಫಾರಸು ಮಾಡಿವೆ ಮತ್ತು ಇಂದು ರಾಜ್ಯ ಏಜೆನ್ಸಿಗಳು, ಎನ್.ಸಿ.ಬಿ ಮತ್ತು ಎನ್ಐಎ ಇಡೀ ಜಾಲವನ್ನು ಯಶಸ್ವಿಯಾಗಿ ನಾಶಪಡಿಸಲು ಮುಂದಾಗಿವೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು. ನಾವು ಉತ್ತಮ ಫಲಿತಾಂಶಗಳನ್ನು ನೋಡುತ್ತಿದ್ದೇವೆ ಎಂದು ಅವರು ಹೇಳಿದರು ಮತ್ತು ರಾಜ್ಯಗಳ ಸಹಕಾರದೊಂದಿಗೆ, ಮಾದಕವಸ್ತುಗಳ ವಿರುದ್ಧದ ಹೋರಾಟದ ವೇಗವೂ ಹೆಚ್ಚಾಗಿದೆ ಮತ್ತು ಉತ್ಸಾಹವೂ ದುಪ್ಪಟ್ಟಾಗಿದೆ ಎಂದರು.

ಗೋಲ್ಡನ್ ಟ್ರಯಾಂಗಲ್ ಆಗ್ನೇಯ ಏಷ್ಯಾದ ದೇಶಗಳನ್ನು ಒಳಗೊಂಡಿದೆ ಮತ್ತು ಗೋಲ್ಡನ್ ಕ್ರೆಸೆಂಟ್ ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವನ್ನು ಒಳಗೊಂಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಡ್ರಗ್ ಡೀಲರ್ ಗಳಿಗೆ ಗೋಲ್ಡನ್ ಟ್ರಯಾಂಗಲ್ ಮತ್ತು ಗೋಲ್ಡನ್ ಕ್ರೆಸೆಂಟ್ ಇರಬಹುದು ಆದರೆ ನಮಗೆ ಮತ್ತು ನಮ್ಮ ಯುವಕರಿಗೆ ಅವು ಸಾವಿನ ತ್ರಿಕೋಣ ಮತ್ತು ಸಾವಿನ ಚಂದ್ರಾಕೃತಿ ಆಗಿದೆ ಎಂದು ಅವರು ಹೇಳಿದರು. ಮಾದಕದ್ರವ್ಯಗಳ ಪಿಡುಗಿನ ವಿರುದ್ಧದ ಈ ಯುದ್ಧವನ್ನು ಗೆಲ್ಲಲು ಜಗತ್ತು ತನ್ನ ವಿಧಾನವನ್ನು ಬದಲಾಯಿಸಬೇಕಾಗಿದೆ. ಮಾದಕವಸ್ತುಗಳ ವಿರುದ್ಧದ ಭಾರತ ಸರ್ಕಾರದ ಹೋರಾಟಕ್ಕೆ ಮೂರು ಭಾಗಗಳಿದ್ದು - ಸಾಂಸ್ಥಿಕ ರಚನೆಯನ್ನು ಬಲಪಡಿಸುವುದು, ಎಲ್ಲಾ ಮಾದಕ ವಸ್ತು ಸಂಸ್ಥೆಗಳ ಸಬಲೀಕರಣ ಮತ್ತು ಸಮನ್ವಯ ಮತ್ತು ವ್ಯಾಪಕ ವ್ಯಾಪ್ತಿಯ ಜಾಗೃತಿ ಅಭಿಯಾನಗಳು ಇವಾಗಿವೆ ಅವರು ಹೇಳಿದರು. ಇದು ಗಡಿಯಿಲ್ಲದ ಅಪರಾಧವಾಗಿದೆ ಮತ್ತು ಸಹಕಾರ, ಸಮನ್ವಯ ಮತ್ತು ಸಹಯೋಗ ಇಲ್ಲದಿದ್ದರೆ, ನಾವು ಈ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಹೇಳಿದರು

ಸರ್ಕಾರ ಕೈಗೊಂಡಿರುವ ಪ್ರಮುಖ ಉಪಕ್ರಮಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಶ್ರೀ ಅಮಿತ್ ಶಾ, 2019 ರಲ್ಲಿ 4 ಹಂತದ ಎನ್.ಸಿ.ಓ.ಆರ್.ಡಿ.ಯನ್ನು ಸ್ಥಾಪಿಸಲಾಯಿತು ಮತ್ತು ಅದರ ಅನೇಕ ಉಪಕ್ರಮಗಳನ್ನು ರಾಜ್ಯಗಳಿಗೆ ತೆಗೆದುಕೊಂಡು ಹೋಗಲಾಗಿದೆ ಮತ್ತು ಜಿಲ್ಲೆಗಳಿಗೆ ತಲುಪಲಾಗಿದೆ ಎಂದು ಹೇಳಿದರು. ಎನ್.ಸಿ.ಓ.ಆರ್.ಡಿ.ಯ ಜಿಲ್ಲಾ ಮಟ್ಟದ ಸಭೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಡಿಸಿಪಿಗಳು, ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲರೂ ಒಟ್ಟಿಗೆ ಕುಳಿತು ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳನ್ನು ಚರ್ಚಿಸಿದಾಗ ಮಾತ್ರ ನಮ್ಮ ಹೋರಾಟವು ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ ದೇಶದ ಶೇ.32ರಷ್ಟು ಜಿಲ್ಲೆಗಳಲ್ಲಿ ಮಾತ್ರ ಎನ್.ಸಿ.ಒ.ಆರ್.ಡಿ ಸಮಿತಿಗಳನ್ನು ರಚಿಸಲಾಗಿದೆ ಎಂದರು. ಶ್ರೀ ಶಾ ಅವರು ಸದನದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ,  ವೈಯಕ್ತಿಕವಾಗಿ ಆಸಕ್ತಿ ವಹಿಸಿ, ತಮ್ಮ ತಮ್ಮ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದ ಎನ್.ಸಿ.ಓ.ಆರ್.ಡಿ. ಸಮಿತಿಯನ್ನು ರಚಿಸಲು ಸಹಾಯ ಮಾಡಬೇಕು ಎಂದು ವಿನಂತಿಸಿದರು, ಜಿಲ್ಲೆಯಾದ್ಯಂತ ಎನ್.ಸಿ.ಓ.ಆರ್.ಡಿ. ಸಮಿತಿಗಳನ್ನು ರಚಿಸುವುದರಿಂದ ಮಾದಕದ್ರವ್ಯ ಪಿಡುಗಿನ ವಿರುದ್ಧದ ಹೋರಾಟವನ್ನು ಬಲಪಡಿಸಬಹುದಾಗಿದೆ. ಈ ಸಮಿತಿಯಲ್ಲಿ ಎನ್.ಸಿ.ಬಿಯನ್ನು ನೋಡಲ್ ಸಂಸ್ಥೆಯಾಗಿರುತ್ತದೆ ಮತ್ತು ಅದರ ಅಡಿಯಲ್ಲಿ ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ಪಡೆ, ಮಾದಕ ದ್ರವ್ಯ ನಿಯಂತ್ರಣಾಧಿಕಾರಿ, ಕಂದಾಯ ಇಲಾಖೆ, ರಾಷ್ಟ್ರೀಯ ಕಡಲ ಭದ್ರತೆ, ಎನ್.ಟಿ.ಆರ್.ಓ, ಬಂದರು ಟ್ರಸ್ಟ್, ವಿಮಾನ ನಿಲ್ದಾಣ ಪ್ರಾಧಿಕಾರ, ಕರಾವಳಿ ಪೊಲೀಸ್ ಮತ್ತು ರಾಜ್ಯಗಳ ಮಾದಕ ದ್ರವ್ಯ ನಿಗ್ರಹ ಸಂಸ್ಥೆ ಇತ್ಯಾದಿಗಳು ಸರಿಯಾದ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಅವರು ಮಾಹಿತಿ ನೀಡಿದರು. ಸೂಕ್ತ ದತ್ತಾಂಶ ಏಕೀಕರಣಕ್ಕಾಗಿ, ಎನ್.ಸಿ.ಓ.ಆರ್.ಡಿ. ಪೋರ್ಟಲ್ ಅನ್ನು ಸಹ ರಚಿಸಲಾಗಿದೆ, ಅದನ್ನು ಎನ್.ಸಿ.ಬಿ ನಿರ್ವಹಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಪೋರ್ಟಲ್ ನಲ್ಲಿ, ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಒಂದೇ ಸ್ಥಳದಲ್ಲಿ ಲಭ್ಯವಿದೆ ಎಂದರು.

ಇಂಟರ್ಪೋಲ್ ನ ಮಹಾ ಸಭೆ ಇತ್ತೀಚೆಗೆ ಭಾರತದಲ್ಲಿ ನಡೆಯಿತು, ಅಲ್ಲಿ ತಾವು ಮಾದಕವಸ್ತುಗಳು ಮತ್ತು ಭಯೋತ್ಪಾದಕ ಸಂಪರ್ಕಗಳ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ಹಾಗೂ ಭಯೋತ್ಪಾದನೆಯನ್ನು ಮಾದಕವಸ್ತುಗಳು, ಭಯೋತ್ಪಾದನೆ ಮತ್ತು ನಶೆಯ ವ್ಯಾಪಾರದೊಂದಿಗೆ ಒಟ್ಟಾಗಿ ನೋಡಬೇಕೆಂದು ಭಾರತದಿಂದ ವಿನಂತಿ ಮಾಡಿದ್ದಾಗಿ ಕೇಂದ್ರ ಗೃಹ ಸಚಿವರು ತಿಳಿಸಿದರು. ಈ ಮೂರು ವಿಷಯಗಳ ಬಗ್ಗೆ ಸಕಾಲಿಕ ಮಾಹಿತಿ ಹಂಚಿಕೆಗಾಗಿ ಇಂಟರ್ ಪೋಲ್ ಎಲ್ಲಾ ದೇಶಗಳಿಗೆ ಒಂದು ವೇದಿಕೆಯನ್ನು ರಚಿಸಬೇಕು ಎಂದು  ಸಲಹೆ ನೀಡಲಾಯಿತು, ಇದು ಉತ್ತಮ ರೂಢಿಗಳ ವಿನಿಮಯಕ್ಕೂ ಕಾರಣವಾಗುತ್ತದೆ. ಇತ್ತೀಚೆಗೆ 'ನೋ ಮನಿ ಫಾರ್ ಟೆರರ್' (ಭಯೋತ್ಪಾದನೆಗೆ ಹಣ ಸಲ್ಲ) ಸಮಾವೇಶವನ್ನು ಸಹ ಆಯೋಜಿಸಲಾಗಿದ್ದು, ಅಲ್ಲಿ ಮಾದಕವಸ್ತುಗಳ ವಿರುದ್ಧದ ಹೋರಾಟಕ್ಕೆ ಅಂತಾರಾಷ್ಟ್ರೀಯ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ಸರ್ಕಾರವು ಜಂಟಿ ಸಮನ್ವಯ ಸಮಿತಿಯನ್ನು ಸಹ ರಚಿಸಿದೆ ಮತ್ತು ಕೇಂದ್ರ ಮಟ್ಟದಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಇದಲ್ಲದೆ, ಎನ್.ಸಿ.ಬಿಯ ಕೇಡರ್ ಅನ್ನು ಮರುಸಂಘಟಿಸುವ ಮೂಲಕ 619 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಮಾದಕ ದ್ರವ್ಯ ಅಪರಾಧಿಗಳ ರಾಷ್ಟ್ರೀಯ ಸಮಗ್ರ ಡೇಟಾಬೇಸ್, ಎನ್.ಐ.ಡಿ.ಎ.ಎನ್. ಅನ್ನು ಸಹ ಸಿದ್ಧಪಡಿಸಲಾಗಿದೆ ಮತ್ತು ಪ್ರತಿ ಪ್ರಕರಣದ ಚಲನ್ ಗಳು ಮತ್ತು ತೀರ್ಪುಗಳನ್ನು ಅದರಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು. ಇದರೊಂದಿಗೆ, ಸರ್ಕಾರವು ಅಂತರ ಕಾರ್ಯಾಚರಣೆಯ ಅಪರಾಧ ನ್ಯಾಯ ವ್ಯವಸ್ಥೆ (ಇಂಟರ್-ಆಪರೇಷನಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ (ಐಸಿಜೆಎಸ್) ಗಾಗಿ ವಶಪಡಿಸಿಕೊಳ್ಳುವ ಮಾಹಿತಿ ನಿರ್ವಹಣಾ ವ್ಯವಸ್ಥೆ ಮತ್ತು ಕಾರಾಗೃಹ ದತ್ತಾಂಶವನ್ನು ಸಹ ಹಂಚಿಕೊಳ್ಳುತ್ತಿದೆ. 472 ಜಿಲ್ಲೆಗಳಲ್ಲಿ ಮಾದಕ ವಸ್ತು ಜಾಲ ಮತ್ತು ಮಾದಕವಸ್ತುಗಳು ರಾಜ್ಯಗಳಿಗೆ ಪ್ರವೇಶಿಸುವ ಮಾರ್ಗಗಳ ನಕ್ಷೆ ಮಾಡಲಾಗಿದೆ ಮತ್ತು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಶ್ರೀ ಶಾ ಹೇಳಿದರು. ಸಮೀಕ್ಷೆಗಳು, ಮಾಹಿತಿಗಳು, ವಶಪಡಿಸಿಕೊಳ್ಳುವಿಕೆಯ ನಂತರ ಮಾಡಿದ ಪ್ರಕರಣಗಳು ಮತ್ತು ತನಿಖಾ ವರದಿಗಳನ್ನು ಸಂಗ್ರಹಿಸಿದ ನಂತರ ಈ ನಕ್ಷೆ ಮಾಡಲಾಗಿದೆ ಎಂದು ಅವರು ಹೇಳಿದರು.

ಗಡಿ ಭದ್ರತಾ ಪಡೆ, ಎಸ್ಎಸ್.ಬಿ. ಮತ್ತು ಅಸ್ಸಾಂ ರೈಫಲ್ಸ್ ಸೇರಿದಂತೆ ಮೂರು ಪಡೆಗಳಿಗೆ ಎನ್.ಡಿ.ಪಿಎಸ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲು ಅಧಿಕಾರ ನೀಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅದೇ ರೀತಿ ಭಾರತೀಯ ಕರಾವಳಿ ಪಡೆ ಮತ್ತು ರಾಜ್ಯಗಳ ಕರಾವಳಿ ಪೊಲೀಸ್ ಠಾಣೆಗಳನ್ನು ಸಹ ಸಶಕ್ತಗೊಳಿಸಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ, ರೈಲ್ವೆ ಸುರಕ್ಷತಾ ಪಡೆಗೆ ಸಹ ಅಧಿಕಾರ ನೀಡಲಾಗಿದೆ. ಈ ಅಧಿಕಾರಗಳನ್ನು ಭದ್ರತಾ ಪಡೆಗಳಿಗೆ ನೀಡಿದಾಗ, ಕೆಲವು ರಾಜ್ಯಗಳು ತಮ್ಮ ಅಧಿಕಾರಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ವಾದಿಸಿದವು, ಆದರೆ ನಾವು ನಮ್ಮ ಸಂಸ್ಥೆಗಳಿಗೆ ಅಧಿಕಾರ ನೀಡದಿದ್ದರೆ, ಅವು ಹೇಗೆ ಕಾರ್ಯನಿರ್ವಹಿಸುತ್ತವೆ? ನಮ್ಮ ಭದ್ರತಾ ಪಡೆಗಳ ಬಗ್ಗೆ ನಮಗೆ ನಂಬಿಕೆ ಇರಬೇಕು, ಮತ್ತು ಈ ವಿಷಯವನ್ನು ರಾಜಕೀಯಗೊಳಿಸುವವರು ಮಾದಕವಸ್ತು ಕಳ್ಳಸಾಗಣೆಯನ್ನು ಬೆಂಬಲಿಸುತ್ತಿದ್ದಾರೆ. ಒಂದು ರಾಜ್ಯದಲ್ಲಿ ಅಪಾರ ಪ್ರಮಾಣದ ಮಾದಕ ದ್ರವ್ಯಗಳು ಸಿಕ್ಕಿದ್ದರೆ, ರಾಜ್ಯವು ಮಾದಕದ್ರವ್ಯ ಪಿಡುಗಿನ ವಿರುದ್ಧ ಉತ್ತಮ ಕೆಲಸ ಮಾಡುತ್ತಿದೆ ಎಂದರ್ಥ ಎಂದು ಅವರು ಹೇಳಿದರು. ಇನ್ನೊಂದು ಬದಿಯನ್ನು ನೋಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಚಂಡಮಾರುತವನ್ನು ಎದುರಿಸಲೇ ಬೇಕಾಗುತ್ತದೆ. ಉಷ್ಟ್ರಪಕ್ಷಿಯಂತೆ ವರ್ತಿಸುವ ಮೂಲಕ ಮತ್ತು ಸಮಸ್ಯೆಗಳಿಂದ ದೂರ ಓಡಿಹೋಗುವ ಮೂಲಕ ನಾವು ದೇಶವನ್ನು ಉಳಿಸಲು ಸಾಧ್ಯವಿಲ್ಲ. ವಿಶ್ವದಾದ್ಯಂತ ಯಾವುದೇ ಪ್ರಕರಣದ ತನಿಖೆ ನಡೆಸುವ ಅಧಿಕಾರವನ್ನು ಎನ್ಐಎಗೆ ನೀಡಲಾಗಿದೆ ಎಂದು ಅವರು ಹೇಳಿದರು. ಹಣಕಾಸು ತನಿಖೆಗಾಗಿ ಅನೇಕ ತಜ್ಞರನ್ನು ಸಹ ನೇಮಿಸಿಕೊಳ್ಳಲಾಗಿದೆ; ಹಣಕಾಸು ದಾಖಲೆಗಳ ವಿಶ್ಲೇಷಣೆಗಾಗಿ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಅನೇಕ ತಜ್ಞರನ್ನು ನೇಮಿಸಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ವಾಹಿನಿಗಳು, ಹವಾಲಾ ವಹಿವಾಟುಗಳು ಮತ್ತು ಡಾರ್ಕ್ ನೆಟ್ ವಿಷಯಗಳ ಬಗ್ಗೆ ಹ್ಯಾಕಥಾನ್ ಗಳನ್ನು ನಡೆಸುವ ಮೂಲಕ, ಪ್ರತಿಭಾನ್ವಿತ ಯುವಕರನ್ನು ನಿಖರವಾದ ಕಾರ್ಯತಂತ್ರವನ್ನು ರೂಪಿಸಲು ನಿಯೋಜಿಸಲಾಗಿದೆ, ಈ ಕಾರಣದಿಂದಾಗಿ ಅನೇಕ ಅಪರಾಧಿಗಳನ್ನು ಸಹ ಸೆರೆಹಿಡಿಯಲಾಗಿದೆ ಎಂದು ಶ್ರೀ ಶಾ ಹೇಳಿದರು. ದೇಶೀಯ ಶ್ವಾನ ತಳಿಗಳನ್ನು ಹೊಂದಿರುವ ಅನೇಕ ಶ್ವಾನ ದಳಗಳನ್ನು ರಚಿಸಲಾಗಿದೆ ಮತ್ತು ರಾಜ್ಯಗಳಿಗೆ ಒದಗಿಸಲಾಗಿದೆ ಎಂದು ಅವರು ಹೇಳಿದರು. ಒಂದು ಸಮರ್ಪಿತ ಮಾದಕವಸ್ತು ವಿರೋಧಿ ಕಾರ್ಯಪಡೆಯನ್ನು ಸಹ ರಚಿಸಲಾಗಿದೆ ಮತ್ತು ರಾಜ್ಯಗಳಿಗೆ ಸಹಾಯ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಾದ ಮಾದಕವಸ್ತು ನಿಗ್ರಹ ಕಾರ್ಯಪಡೆಯೂ ಲಭ್ಯವಿದೆ ಎಂದು ಅವರು ಹೇಳಿದರು.

ಭಾರತ ಸರ್ಕಾರದ ಔಷಧ ಇಲಾಖೆ, ನಿಷೇಧ ಮಾಡಬಹುದಾದ ಔಷಧಗಳ ಸಂಖ್ಯೆಯ ಮೇಲ್ವಿಚಾರಣೆಗಾಗಿ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅನೇಕ ಔಷಧಿಗಳನ್ನು ನಿರ್ಬಂಧಿತ ವರ್ಗದಲ್ಲಿ ತರಲಾಗುವುದು ಮತ್ತು ಅವುಗಳ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಸಮುದ್ರ ಮಾರ್ಗದ ಮೂಲಕ ಕಳ್ಳಸಾಗಣೆಯನ್ನು ತಡೆಗಟ್ಟಲು ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ ಮತ್ತು ಮಾಹಿತಿ ವಿನಿಮಯಕ್ಕಾಗಿ ಪ್ರತಿ ವಾರ ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ಪಡೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಎನ್.ಸಿ.ಬಿ ಜಂಟಿ ಸಭೆಯನ್ನು ನಡೆಸಲಾಗುತ್ತದೆ ಎಂದು ಶ್ರೀ ಶಾ ಮಾಹಿತಿ ನೀಡಿದರು. ಮಣಿಪುರದಲ್ಲಿ ಸುಮಾರು 1,000 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಮಾದಕ ವಸ್ತು ಕೃಷಿ ನಾಶಮಾಡಲಾಗಿದೆ ಮತ್ತು ತೋಟಗಾರಿಕೆ ನೆಡುತೋಪುಗಳ ಮೂಲಕ ಪುನರ್ವಸತಿ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಅದೇ ವೇಳೆ, ಎಲ್ಲಾ ಸಂಸ್ಥೆಗಳ ಸಮನ್ವಯದ ಕೇಂದ್ರವಾಗಿರುವ ಮ್ಯಾಕ್ ಅಡಿಯಲ್ಲಿ, ಮಾದಕ ವಸ್ತು ಕಳ್ಳಸಾಗಣೆ ವೇದಿಕೆಯ ಮೇಲ್ವಿಚಾರಣೆ ಮಾಡಲು, ಮಾದಕವಸ್ತು ಜಾಲಗಳನ್ನು ತಡೆಹಿಡಿಯಲು, ಪ್ರವೃತ್ತಿಗಳನ್ನು ನಿರಂತರವಾಗಿ ವಿಶ್ಲೇಷಿಸಲು, ನವೀಕರಣಗಳನ್ನು ವಿಶ್ಲೇಷಿಸಲು ಡೇಟಾಬೇಸ್, ಮತ್ತು ಹೊಸ ಕಾರ್ಯತಂತ್ರದ ಸೃಷ್ಟಿಗಾಗಿ ಮಾದಕ ವಸ್ತು ಕುರಿತಂತೆ ಒಂದು ಉಪ ಮ್ಯಾಕ್ ರೂಪದಲ್ಲಿ ಪ್ರತ್ಯೇಕ ಮ್ಯಾಕ್ ನ್ನು ಸ್ಥಾಪಿಸಲಾಗಿದೆ. ಮಾದಕವಸ್ತುಗಳ ಕುರಿತಂತೆ ಐದು ವಿಭಿನ್ನ ತರಬೇತಿ ಮಾದರಿಗಳನ್ನು ರಚಿಸಲಾಗಿದೆ ಮತ್ತು ಈ ಐದು ಮಾದರಿಗಳಲ್ಲಿ ಜಿಲ್ಲಾ ಮಟ್ಟದವರೆಗೆ ತರಬೇತಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಡಿಸೆಂಬರ್ 3 ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಲ್ಲಾ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಶೇ.40ರಷ್ಟು ಜಿಲ್ಲೆಗಳಲ್ಲೂ ಕಾಮಗಾರಿ ಪೂರ್ಣಗೊಂಡಿದೆ ಎಂದು ಶ್ರೀ ಶಾ ಹೇಳಿದರು.

ಮಾದಕವಸ್ತುಗಳ ವಿಧಿವಿಜ್ಞಾನ ತನಿಖೆಗಾಗಿ ಎನ್.ಸಿ.ಬಿ ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಮತ್ತು ಭಾರತ ಸರ್ಕಾರವು ದೇಶಾದ್ಯಂತ ಆರು ಪ್ರಾದೇಶಿಕ ಮಾದಕವಸ್ತು ಪ್ರಯೋಗಾಲಯಗಳನ್ನು ಸ್ಥಾಪಿಸುತ್ತಿದೆ, ಇದರಿಂದಾಗಿ ಮಾದರಿ ಪರೀಕ್ಷೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಹೆಚ್ಚಿನ ಪ್ರಮಾಣದ ಪ್ರಕರಣಗಳ ಅಪರಾಧಿಗಳಿಗೆ ಜಾಮೀನು ಸಿಗದಂತೆ ದಿನಾಂಕಕ್ಕೆ ಅನುಗುಣವಾಗಿ ಆದ್ಯತೆಯನ್ನು ನೀಡಲಾಗುವುದಿಲ್ಲ ಆದರೆ ಪ್ರಮಾಣಕ್ಕೆ ಅನುಗುಣವಾಗಿ ಆದ್ಯತೆ ನೀಡಲಾಗುವುದು ಎಂದು ಖಚಿತಪಡಿಸಿಕೊಳ್ಳಲು ಇಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆಗಸ್ಟ್ 15, 2020 ರಂದು ಮಾದಕ ದ್ರವ್ಯ ಮುಕ್ತ ಭಾರತ ಅಭಿಯಾನವನ್ನು ಪ್ರಾರಂಭಿಸಿತು ಮತ್ತು ನಕ್ಷೆ ಮಾಡಲಾದ 372 ಜಿಲ್ಲೆಗಳ ತಾಲ್ಲೂಕುಗಳನ್ನು ತಲುಪಲು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಇದರ ಅಡಿಯಲ್ಲಿ, 2.7 ಲಕ್ಷಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ 14 ಕೋಟಿಗೂ ಹೆಚ್ಚು ಮಕ್ಕಳು ಮಾದಕವಸ್ತು ಮುಕ್ತ ಮಾಡುವ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಲ್ಲದೆ, 8,000 ಕ್ಕೂ ಹೆಚ್ಚು ನುರಿತ ಸ್ವಯಂಸೇವಕರನ್ನು ಗುರುತಿಸಲಾಗಿದೆ, ಅವರು ಕನಿಷ್ಠ ಗೌರವಧನವನ್ನು ತೆಗೆದುಕೊಳ್ಳುವ ಮೂಲಕ ಈ ಕಾರ್ಯವನ್ನು ಮುಂದುವರಿಸುತ್ತಾರೆ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಗರಿಷ್ಠ ಜನರನ್ನು ತಲುಪುವಂತೆ ಮಾಡುತ್ತಾರೆ. ಮಾದಕ ವ್ಯಸನ ಮುಕ್ತ ರಾಷ್ಟ್ರೀಯ ಆನ್ ಲೈನ್ ವ್ಯವಸ್ಥೆಯ ಮೂಲಕ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಮತ್ತು ಯುವಕರನ್ನು ಸಂಪರ್ಕಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಭಾರತ ಸರ್ಕಾರವು ಸುಮಾರು 341 ಸಮಗ್ರ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದೆ ಮತ್ತು ಇನ್ನೂ 300 ಕೇಂದ್ರಗಳ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು. ಇದಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ 41 ವ್ಯಸನ ಚಿಕಿತ್ಸಾ ಸೌಲಭ್ಯಗಳನ್ನು ಸಹ ಸ್ಥಾಪಿಸಲಾಗಿದೆ, ಅಂತಹ ಇನ್ನೂ 75 ಸೌಲಭ್ಯಗಳನ್ನು ಸೃಷ್ಟಿಸುವ ಯೋಜನೆಗಳಿವೆ. ಹೆಚ್ಚುವರಿಯಾಗಿ, 72 ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಅಂತಹ ಪ್ರಕರಣಗಳಲ್ಲಿ ಸುಮಾರು ಎರಡು ಲಕ್ಷ ಸಲಹೆಗಾರರನ್ನು ಸಲಹೆ ನೀಡಲು ನಿಯೋಜಿಸಲಾಗಿದೆ.

ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ, 60 ದಿನಗಳಲ್ಲಿ 75,000 ಕೆಜಿ ಮಾದಕವಸ್ತುಗಳನ್ನು ನಾಶಪಡಿಸುವ ಗುರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೊಂದಿತ್ತು, ಆದರೆ 60 ದಿನಗಳಲ್ಲಿ 1,60,000 ಕೆಜಿ ಮಾದಕವಸ್ತುಗಳನ್ನು ಸುಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ದೇಶದ ಯುವಕರು ಮಾದಕ ದ್ರವ್ಯಗಳಿಂದ ನಾಶವಾಗಲು ಅವಕಾಶ ನೀಡಬಾರದು ಎಂಬ ನಮ್ಮ ಸಂಕಲ್ಪದಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ ಎಂದು ಅವರು ಹೇಳಿದರು. ಅವರು 2006 ರಿಂದ 2013 ರವರೆಗೆ ಮತ್ತು 2014 ರಿಂದ 2022 ರವರೆಗೆ ಕೆಲವು ಅಂಕಿಅಂಶಗಳನ್ನು ನೀಡಿದರು-

ವಿವರಣೆ

2006-2013

2014-2022

ಬದಲಾವಣೆ (%)

ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳು (ಕೆ.ಜಿ.ಯಲ್ಲಿ)

22 ಲಕ್ಷ 45 ಸಾವಿರ ಕೆ.ಜಿ.

62 ಲಕ್ಷ 60 ಸಾವಿರ ಕೆ.ಜಿ.

ಶೇ.180ಕ್ಕೂ ಹೆಚ್ಚು

ವಶಪಡಿಸಿಕೊಂಡ ಮಾದಕವಸ್ತು

(ಯೂನಿಟ್ ಗಳಲ್ಲಿ)

10 ಕೋಟಿ ಯೂನಿಟ್ ಗಳು

24 ಕೋಟಿ ಯೂನಿಟ್ ಗಳು

ಶೇ.134ಕ್ಕೂ ಹೆಚ್ಚು

ಮೌಲ್ಯ ಐ.ಎನ.ಆರ್. ನಲ್ಲಿ

33 ಸಾವಿರ ಕೋಟಿ ರೂ.

97 ಸಾವಿರ ಕೋಟಿ

3-ಪಟ್ಟು

ಒಟ್ಟು ಪ್ರಕರಣಗಳು

1,45,062

4,14,697

185%

ಒಟ್ಟು ಬಂಧನ

1,62,908

5,23,234

220%

ಮಾದಕವಸ್ತು ಕಳ್ಳಸಾಗಣೆಯ ಪ್ರಕರಣವನ್ನು ಈಗ ಗಂಭೀರ ಸ್ವರೂಪದ ಪ್ರಕರಣದ ಅಡಿಯಲ್ಲಿ ಪರಿಗಣಿಸಲಾಗಿದೆ ಮತ್ತು ಮಾದಕವಸ್ತು ಕಳ್ಳಸಾಗಣೆ ಮಾಡುವವರ ವಿರುದ್ಧ 13,000 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಫಲಿತಾಂಶಗಳು ಸಾಬೀತುಪಡಿಸುತ್ತವೆ ಎಂದು ಶ್ರೀ ಶಾ ಹೇಳಿದರು. ಕಳೆದ ಐದು ವರ್ಷಗಳಲ್ಲಿ, 61 ಹೊಸ ಸೈಟೋಟ್ರೋಪಿಕ್ ಪದಾರ್ಥಗಳನ್ನು ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಭಾರತೀಯ ಸಂಸ್ಥೆಗಳು ಸುಮಾರು 14,000 ಕೆಜಿ ಟ್ರಾಮಾಡೋಲ್ ಅನ್ನು ವಶಪಡಿಸಿಕೊಂಡಿವೆ.

ಮಾದಕವಸ್ತು ವಿರುದ್ಧದ ಈ ಅಭಿಯಾನವನ್ನು ಕೇವಲ ಒಂದು ಸರ್ಕಾರ, ಯಾವುದೇ ಒಂದು ಪಕ್ಷ ಮತ್ತು ಯಾವುದೇ ಒಂದು ಸಂಸ್ಥೆಯದು ಎಂದು ಭಾವಿಸಬಾರದು ಎಂದು ಶ್ರೀ ಅಮಿತ್ ಶಾ ಹೇಳಿದರು. ಕೇಂದ್ರ ಮತ್ತು ರಾಜ್ಯಗಳ ಎಲ್ಲಾ ಏಜೆನ್ಸಿಗಳು ಒಂದೇ ವೇದಿಕೆಯಲ್ಲಿ ಬಂದು ಈ ಅಭಿಯಾನವನ್ನು ಸಮಾನ ತೀವ್ರತೆ ಮತ್ತು ಗಂಭೀರತೆಯಿಂದ ನಡೆಸಬೇಕಾಗುತ್ತದೆ ಎಂದ ಅವರು, ಆಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇಂದು ಈ ಹೋರಾಟವು ಎಂತಹ ನಿರ್ಣಾಯಕ ಘಟ್ಟದಲ್ಲಿದೆಯೆಂದರೆ, ನಾವು ಗೆದ್ದರೆ, ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಈ ವಿಷಯದಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ಶ್ರೀ ಶಾ ಸದನವನ್ನು ವಿನಂತಿಸಿದರು. ಎಲ್ಲಾ ರಾಜ್ಯ ಸರ್ಕಾರಗಳು ಒಗ್ಗೂಡಿ, ಜಿಲ್ಲಾ ಮಟ್ಟದ ಎನ್.ಸಿ.ಓ.ಆರ್.ಡಿ.ಯನ್ನು ರಚಿಸಬೇಕು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಪ್ರಾರಂಭಿಸಿರುವ ಅಭಿಯಾನವನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.

*****



(Release ID: 1885712) Visitor Counter : 175