ಗೃಹ ವ್ಯವಹಾರಗಳ ಸಚಿವಾಲಯ

ನಿರ್ಭಯಾ ನಿಧಿ

Posted On: 13 DEC 2022 3:32PM by PIB Bengaluru

ಗೃಹ ವ್ಯವಹಾರಗಳ ಸಚಿವಾಲಯವು (ಎಂಎಚ್ಎ) 2019-20 ಮತ್ತು 2020-21 ರ ಹಣಕಾಸು ವರ್ಷಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ "ನಿರ್ಭಯಾ ನಿಧಿಯ" ಅಡಿಯಲ್ಲಿ ಅಸ್ತಿತ್ವದಲ್ಲಿರುವ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು (ಎಹೆಚ್ ಯುಟಿಗಳು) ಬಲಪಡಿಸಲು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ ಹೊಸ ಎಹೆಚ್ ಯುಟಿಗಳನ್ನು ಸ್ಥಾಪಿಸಲು 98.86 ಕೋಟಿ ರೂ.ಗಳ ಆರ್ಥಿಕ ನೆರವನ್ನು ಒದಗಿಸಿದೆ.
 
'ಪೊಲೀಸ್' ಮತ್ತು 'ಸಾರ್ವಜನಿಕ ಸುವ್ಯವಸ್ಥೆ' ಎಂಬುದು ಭಾರತದ ಸಂವಿಧಾನದ ಏಳನೇ ಅನುಸೂಚಿಯ ಅಡಿಯಲ್ಲಿ 'ರಾಜ್ಯ-ಪಟ್ಟಿಯ' ವಿಷಯಗಳಾಗಿವೆ.  ಆದ್ದರಿಂದ, ಗುಪ್ತಚರ ಸಂಗ್ರಹಣೆ, ತನಿಖೆ ಮತ್ತು ನಿರ್ವಹಣೆ ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದ್ದು, ಅವರು ಕಾನೂನಿನ ಪ್ರಸ್ತುತ ನಿಬಂಧನೆಗಳ ಅಡಿಯಲ್ಲಿ ಅಂತಹ ವಿಷಯಗಳನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ.
 
ಗೃಹ ವ್ಯವಹಾರಗಳ ಸಚಿವಾಲಯವು (ಎಂಎಚ್ಎ) ಕಾಲಕಾಲಕ್ಕೆ ನ್ಯಾಯಾಂಗ ಮಾತುಕತೆಗಳು ಮತ್ತು ರಾಜ್ಯ ಮಟ್ಟದ ಸಮ್ಮೇಳನಗಳನ್ನು ನಡೆಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಆರ್ಥಿಕ ಸಹಾಯವನ್ನು ಒದಗಿಸುತ್ತದೆ, ಇದು ಮಾನವ ಕಳ್ಳಸಾಗಣೆಯನ್ನು ತಡೆಗಟ್ಟುವ ಮತ್ತು ಎದುರಿಸುವ ವಿಷಯಕ್ಕೆ ಸಂಬಂಧಿಸಿದ ಕಾನೂನು ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮಾನವ ಕಳ್ಳಸಾಗಣೆಯಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಗ್ಯಾಂಗ್ ಗಳನ್ನು ಗುರುತಿಸಲು ಮತ್ತು ಅವರ ಸಂಬಂಧಗಳು, ಕಾರ್ಯವಿಧಾನ ಇತ್ಯಾದಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು 'ಗುಪ್ತಚರ' ಮತ್ತು 'ಕಣ್ಗಾವಲು' ಕಾರ್ಯವಿಧಾನಗಳನ್ನು ಸ್ಥಾಪಿಸಬಹುದು ಎಂದು ಗೃಹ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿತ್ತು. ಪೊಲೀಸ್ ಅಧಿಕಾರಿಗಳಿಗೆ, ವಿಶೇಷವಾಗಿ ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ನಿರ್ವಹಿಸುವವರಿಗೆ ನಿಯಮಿತ ಮಧ್ಯಂತರಗಳಲ್ಲಿ ಸಂವೇದನಾಶೀಲತಾ ತರಬೇತಿ ನೀಡಬೇಕು ಮತ್ತು ಅವರಿಗೆ ಕಾರ್ಯವಿಧಾನದ ಕಾನೂನುಗಳು, ನ್ಯಾಯಾಲಯದ ತೀರ್ಪುಗಳು, ಆಡಳಿತಾತ್ಮಕ ಕಾರ್ಯವಿಧಾನಗಳು, ಮಕ್ಕಳ ಸ್ನೇಹಿ ತನಿಖೆಯಲ್ಲಿ ಕೌಶಲ್ಯಗಳು, ಸಂದರ್ಶನ, ವಿಚಾರಣೆ, ವೈಜ್ಞಾನಿಕ ದತ್ತಾಂಶ ಸಂಗ್ರಹಣೆ, ಸಂತ್ರಸ್ತರು ಮತ್ತು ಸಾಕ್ಷಿ ಸಂರಕ್ಷಣಾ ಕಾರ್ಯಕ್ರಮಗಳನ್ನು ಸುಗಮಗೊಳಿಸುವುದು ಇತ್ಯಾದಿಗಳ ಬಗ್ಗೆ ಜ್ಞಾನವನ್ನು ನೀಡಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. 
 
ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಅಜಯ್ ಕುಮಾರ್ ಮಿಶ್ರಾ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು.

*****



(Release ID: 1883249) Visitor Counter : 125