ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳವನ್ನು ದೇಶದ 197 ಜಿಲ್ಲೆಗಳಲ್ಲಿ ನಡೆಸಲಾಗುವುದು
Posted On:
10 DEC 2022 10:04AM by PIB Bengaluru
• ಮೇಳವು 197 ಜಿಲ್ಲೆಗಳನ್ನು ಒಳಗೊಂಡ 25 ರಾಜ್ಯಗಳಲ್ಲಿ ಪ್ರಾರಂಭವಾಗಲಿದೆ
• ಮೇಳದ ಭಾಗವಾಗಲು ಮತ್ತು ಯುವಕರಿಗೆ ಅಪ್ರೆಂಟಿಸ್ ಶಿಪ್ ಅವಕಾಶಗಳನ್ನು ಒದಗಿಸಲು ಹಲವಾರು ಸ್ಥಳೀಯ ಉದ್ಯಮಗಳನ್ನು ಆಹ್ವಾನಿಸಲಾಗಿದೆ
ಕೌಶಲ್ಯ ಭಾರತ ಮಿಷನ್ ನ ಅಡಿಯಲ್ಲಿ ಭಾರತದ ಯುವಕರಿಗೆ ಉದ್ಯೋಗಾವಕಾಶಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ಭಾಗವಾಗಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು (ಎಂ.ಎಸ್.ಡಿ.ಈ.) ಡಿಸೆಂಬರ್ 12, 2022 ರಂದು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ 197 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳವನ್ನು (ಪಿಎಂಎನ್ಎಎಂ) ಆಯೋಜಿಸಿದೆ.
ಅಪ್ರೆಂಟಿಸ್ ಶಿಪ್ ತರಬೇತಿಯ ಮೂಲಕ ಸ್ಥಳೀಯ ಯುವಕರಿಗೆ ತಮ್ಮ ವೃತ್ತಿಜೀವನವನ್ನು ರೂಪಿಸುವ ಅವಕಾಶವನ್ನು ಒದಗಿಸಲು ಮೇಳದ ಭಾಗವಾಗಿ ಹಲವಾರು ಸ್ಥಳೀಯ ಉದ್ಯಮಗಳನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮವು ವಿವಿಧ ವಲಯಗಳ ವಿವಿಧ ಕಂಪನಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಈ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ಒಂದೇ ವೇದಿಕೆಯಲ್ಲಿ ಸಂಭಾವ್ಯ ಅಪ್ರೆಂಟಿಸ್ ಗಳನ್ನು ಭೇಟಿ ಮಾಡುವ ಅವಕಾಶವನ್ನು ಹೊಂದಿದ್ದು, ಸ್ಥಳದಲ್ಲೇ ಅರ್ಜಿದಾರರನ್ನು ಆಯ್ಕೆ ಮಾಡುತ್ತವೆ ಹಾಗೂ ಅಪ್ರೆಂಟಿಸ್ ಗಳಿಗೆ ಆ ಸಂಸ್ಥೆಯ ಭಾಗವಾಗಲು ಅವಕಾಶವನ್ನು ಒದಗಿಸುತ್ತವೆ.
ತಮ್ಮ ಸಮೀಪದ ಮೇಳದ ಸ್ಥಳವನ್ನು ತಿಳಿಯಲು ಅಭ್ಯರ್ಥಿಗಳು https://www.apprenticeshipindia.gov.in/ ಗೆ ಭೇಟಿ ನೀಡುವ ಮೂಲಕ ಮೇಳಕ್ಕೆ ನೋಂದಾಯಿಸಿಕೊಳ್ಳಬಹುದು. 5 ನೇ ತರಗತಿಯಿಂದ 12 ನೇ ತರಗತಿ ಉತ್ತೀರ್ಣರಾದವರು, ಕೌಶಲ್ಯ ತರಬೇತಿ ಪ್ರಮಾಣಪತ್ರಗಳನ್ನು ಹೊಂದಿರುವವರು ಅಥವಾ ಐಟಿಐ ಡಿಪ್ಲೊಮಾ ಹೊಂದಿರುವವರು ಅಥವಾ ಪದವೀಧರ ಅಭ್ಯರ್ಥಿಗಳು ಈ ಅಪ್ರೆಂಟಿಸ್ ಶಿಪ್ ಮೇಳದಲ್ಲಿ ನೊಂದಾಯಿಸಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಸ್ವವಿವರದ ಮೂರು ಪ್ರತಿಗಳು, ಎಲ್ಲಾ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳ ಮೂರು ಪ್ರತಿಗಳು, ಫೋಟೋ ಐಡಿ (ಆಧಾರ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ) ಮತ್ತು ಮೂರು ಪಾಸ್ ಪೋರ್ಟ್ ಗಾತ್ರದ ಛಾಯಾಚಿತ್ರಗಳನ್ನು ಆಯಾ ಸ್ಥಳಗಳಿಗೆ ಕೊಂಡೊಯ್ಯಬೇಕು.
ಈಗಾಗಲೇ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳನ್ನು ತಮಗೆ ಸಂಬಂಧಿಸಿದ, ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳೊಂದಿಗೆ ಸ್ಥಳವನ್ನು ತಲುಪಲು ವಿನಂತಿಸಲಾಗಿದೆ. ಈ ಮೇಳದ ಮೂಲಕ, ಇದರಲ್ಲಿ ಭಾಗವಹಿಸುವ ಅಭ್ಯರ್ಥಿಗಳು ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (ಎನ್.ಸಿ.ವಿ.ಇ.ಟಿ.)ಯಿಂದ ಮಾನ್ಯತೆ ಪಡೆದ ಪ್ರಮಾಣಪತ್ರಗಳನ್ನು ಸಹ ಪಡೆಯುತ್ತಾರೆ. ಇದು ಅವರಿಗೆ ತರಬೇತಾವಧಿಯ ನಂತರ ತಮ್ಮ ಉದ್ಯೋಗಾರ್ಹತೆಯನ್ನು ಸುಧಾರಿಸಿಕೊಳ್ಳಲು ಸಹಕರಿಸುತ್ತದೆ.
ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಶ್ರೀ ಅತುಲ್ ಕುಮಾರ್ ತಿವಾರಿಯವರು, "ಇಂದಿನ ಯುವಕರಿಗೆ ಅಪ್ರೆಂಟಿಸ್ ಶಿಪ್ ಅವಕಾಶಗಳನ್ನು ನೀಡುವ ವಿಷಯದಲ್ಲಿ ಭಾರತವನ್ನು ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಲಾಗಿದೆ. ಈ ಅಂತರವನ್ನು ಕಡಿಮೆ ಮಾಡಲು, ಪ್ರಶಿಕ್ಷಣಾರ್ಥಿಗಳು ಮತ್ತು ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ಶಿಪ್ ಅವಕಾಶಗಳನ್ನು ತಲುಪಿಸಲು ನಾವು ನಮ್ಮಿಂದಾದಷ್ಟು ಪ್ರಯತ್ನಿಸುತ್ತಿದ್ದೇವೆ. ಕಠಿಣ ಪರಿಶ್ರಮದ ಮೂಲಕ ನಮ್ಮ ಆರ್ಥಿಕತೆಗೆ ಕೊಡುಗೆ ನೀಡಿ ನಮ್ಮ ದೇಶದ ಭವಿಷ್ಯ ರೂಪಣೆಯಲ್ಲಿ ಸಹಾಯ ಮಾಡಲು ಉತ್ಸುಕರಾಗಿರುವ ಯುವಕರಿಂದ ಕಳೆದ ತಿಂಗಳು ನಡೆದ ಅಪ್ರೆಂಟಿಸ್ ಶಿಪ್ ಮೇಳದಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ಹೆಚ್ಚಿನ ಅಪ್ರೆಂಟಿಸ್ ಗಳನ್ನು ನೇಮಿಸಿಕೊಳ್ಳಲು ಕಂಪನಿಗಳನ್ನು ಉತ್ತೇಜಿಸುವುದರ ಜೊತೆಗೆ ಸರಿಯಾದ ಪ್ರತಿಭೆಯನ್ನು ಕಂಡುಹಿಡಿಯಲು ಉದ್ಯೋಗದಾತರಿಗೆ ಸಹಾಯ ಮಾಡುವುದು ಮತ್ತು ತರಬೇತಿ ಮತ್ತು ಪ್ರಾಯೋಗಿಕ ಅನುಭವದ ಮೂಲಕ ಅಪ್ರೆಂಟಿಸ್ ಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು. ಅಪ್ರೆಂಟಿಸ್ ಶಿಪ್ ನಿಂದ ಉನ್ನತ ಶಿಕ್ಷಣದವರೆಗೆ ವಿಶ್ವಾಸಾರ್ಹ ಮಾರ್ಗಗಳನ್ನು ನಿರ್ಮಿಸುವುದರ ಜೊತೆಗೆ ಶೈಕ್ಷಣಿಕ ಪರಿಸರ ವ್ಯವಸ್ಥೆಯಲ್ಲಿ ಅಪ್ರೆಂಟಿಸ್ ಶಿಪ್ ಅನ್ನು ಬೇರೂರಿಸುವುದು ಸಹ ಪ್ರಮುಖವಾಗಿದೆ. ನಮ್ಮ ನಿರಂತರ ಪ್ರಯತ್ನಗಳೊಂದಿಗೆ, 2022 ರ ಅಂತ್ಯದ ವೇಳೆಗೆ ಭಾರತದಲ್ಲಿ ಅಪ್ರೆಂಟಿಸ್ ಶಿಪ್ ಅವಕಾಶಗಳನ್ನು 10 ಲಕ್ಷಕ್ಕೂ ಮತ್ತು 2026 ರ ವೇಳೆಗೆ 60 ಲಕ್ಷಕ್ಕೂ ಹೆಚ್ಚಿಸುವುದು ನಮ್ಮ ಗುರಿಯಾಗಿದೆ" ಎಂದು ತಿಳಿಸಿದರು.
ದೇಶದಲ್ಲಿ ಪ್ರತಿ ತಿಂಗಳು ಅಪ್ರೆಂಟಿಸ್ ಶಿಪ್ ಮೇಳಗಳನ್ನು ಆಯೋಜಿಸಲಾಗುವುದು. ಇದರಲ್ಲಿ ಆಯ್ದ ಅಭ್ಯರ್ಥಿಗಳು ಹೊಸ ಕೌಶಲ್ಯಗಳನ್ನು ಪಡೆಯಲು ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಮಾಸಿಕ ವೇತನ ಪಡೆಯುತ್ತಾರೆ. ಅಪ್ರೆಂಟಿಸ್ ಶಿಪ್ ಅನ್ನು ಕೌಶಲ್ಯಾಭಿವೃದ್ಧಿಯ ಅತ್ಯಂತ ಸುಸ್ಥಿರ ಮಾದರಿ ಎಂದು ಪರಿಗಣಿಸಲಾಗುತ್ತಿದ್ದು, ಇದು ಕೌಶಲ್ಯ ಭಾರತ ಮಿಷನ್ ನ ಅಡಿಯಲ್ಲಿ ದೊಡ್ಡ ಉತ್ತೇಜನವನ್ನು ಪಡೆಯುತ್ತಿದೆ.
ಅಪ್ರೆಂಟಿಸ್ ಶಿಪ್ ತರಬೇತಿಯ ಮೂಲಕ ವರ್ಷಕ್ಕೆ 1 ಮಿಲಿಯನ್ ಯುವಕರಿಗೆ ತರಬೇತಿ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಧ್ಯೇಯವನ್ನು ಸಾಧಿಸಲು, ಸಂಸ್ಥೆಗಳು ಮತ್ತು ವಿಧ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪಿಎಂಎನ್ಎಎಂ ಅನ್ನು ವೇದಿಕೆಯಾಗಿ ಬಳಸಲಾಗುತ್ತಿದೆ. ಈ ಮೇಳದಲ್ಲಿ ಭಾಗವಹಿಸುವ ಕಂಪನಿಗಳಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಉದ್ಯೋಗಾವಕಾಶಗಳ ಬಗ್ಗೆ ಈ ವೇದಿಕೆಯು ಯುವಕರಿಗೆ ಜಾಗೃತಿ ಮೂಡಿಸುತ್ತಿದೆ.
*****
(Release ID: 1882354)
Visitor Counter : 194