ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಆಯೋಜಿಸಿದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಭಾರತದ ರಾಷ್ಟ್ರಪತಿಯವರು ಭಾಗವಹಿಸಿದರು


ಸಂವೇದನಾಶೀಲತೆ ಮತ್ತು ಸಹಾನುಭೂತಿ ಬೆಳೆಸಿಕೊಳ್ಳುವುದು ಮಾನವ ಹಕ್ಕುಗಳನ್ನು ಉತ್ತೇಜಿಸುವ ಕೀಲಿಯಾಗಿದೆ: ರಾಷ್ಟ್ರಪತಿ ಶ್ರೀಮತಿ ಮುರ್ಮು

Posted On: 10 DEC 2022 4:45PM by PIB Bengaluru

ಘನತೆವೆತ್ತ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಇಂದು (ಡಿಸೆಂಬರ್ 10, 2022) ನವದೆಹಲಿಯಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಿದರು.

“ಇಂದಿನ ಸಮಾರಂಭವು ಇಡೀ ಮನುಕುಲಕ್ಕೆ ಮಹತ್ವದ ಸಂದರ್ಭವಾಗಿದೆ, 1948 ರಲ್ಲಿ ಇದೇ ದಿನ ವಿಶ್ವಸಂಸ್ಥೆಯ ಮಹಾಅಧಿವೇಶನದ ಸಾಮಾನ್ಯ ಸಭೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು (ಎಚ್‌.ಡಿ.ಎಚ್‌.ಆರ್.) ಅಂಗೀಕರಿಸಿತು. ಯು.ಡಿ.ಹೆಚ್.ಆರ್.‌ ಪಠ್ಯವನ್ನು 500 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ. ಇದು ಇತಿಹಾಸದಲ್ಲಿ ಹೆಚ್ಚು ಅನುವಾದಿತಗೊಂಡು ದಾಖಲೆ ಸೃಷ್ಟಿಸಿದೆ. ಮಾನವ ಹಕ್ಕುಗಳು ಪ್ರಪಂಚದಾದ್ಯಂತ ಪ್ರಗತಿಯಲ್ಲಿದೆ ಎಂಬುದು ಸತ್ಯ. ಆದರೂ, ಈಗಲೂ ಪ್ರಪಂಚದ ಅನೇಕ ಭಾಗಗಳಲ್ಲಿ ನಡೆಯುತ್ತಿರುವ ದುಃಖದ ಬೆಳವಣಿಗೆಗಳನ್ನು ನಾವು ಪರಿಗಣಿಸಿದಾಗ, ಆ ಕೆಲವು ಭಾಷೆಗಳಲ್ಲಿ ಘೋಷಣೆಯನ್ನು ಬರೆದು, ಅಲ್ಲಿನ ಸಮಾಜದಲ್ಲಿ ಓದಲಾಗಿದೆಯೇ ಎಂದು ನಾವು ಆಶ್ಚರ್ಯ ಪಡಬೇಕಾಗುತ್ತದೆ” ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

“ಭಾರತದಲ್ಲಿ, ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾದಷ್ಟು ಪ್ರಯತ್ನಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಾಡುತ್ತಿದೆ ಎಂಬ ಅಂಶದಿಂದ ನಾವು ಸಮಾಧಾನ ಪಡೆಯಬಹುದು. ತನ್ನ 30 ವರ್ಷಗಳ ಸುದೀರ್ಘ ಇತಿಹಾಸದಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್.ಹೆಚ್.ಆರ್.ಸಿ.) ಸಂಸ್ಥೆಯು ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಶ್ಲಾಘನೀಯ ಕೆಲಸವನ್ನು ಮಾಡಿದೆ. ಮಾನವ ಹಕ್ಕುಗಳಿಗಾಗಿ ವಿವಿಧ ಜಾಗತಿಕ ವೇದಿಕೆಗಳಲ್ಲಿ ಸಂಸ್ಥೆ ಭಾಗವಹಿಸುತ್ತಿದೆ. ಸಂಸ್ಥೆಯ ಕಾರ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿರುವುದು ಭಾರತಕ್ಕೆ ನಿಜವಾಗಿಯೂ ಹೆಮ್ಮೆ ತಂದಿದೆ.”

“ಸೂಕ್ಷ್ಮತೆ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು ಮಾನವ ಹಕ್ಕುಗಳನ್ನು ಉತ್ತೇಜಿಸುವ ಕೀಲಿಯಾಗಿದೆ. ಮನುಷ್ಯರಿಗಿಂತ ಕೆಳಗಿನವರು ಎಂದು ಪರಿಗಣಿಸಲ್ಪಟ್ಟವರ ಸ್ಥಾನದಲ್ಲಿ ನಾವು ನಮ್ಮನ್ನು ಕಲ್ಪಿಸಿಕೊಂಡರೆ, ಅದು ನಮ್ಮ ಕಣ್ಣುಗಳನ್ನು ತೆರೆಯುತ್ತದೆ ಮತ್ತು ಅಗತ್ಯ ಕಾರ್ಯಗಳನ್ನು ಮಾಡಲು ನಮ್ಮನ್ನು ಒತ್ತಾಯಿಸುತ್ತದೆ. "ಇತರರನ್ನು ನೀವು ಹೇಗೆ ನಡೆಸಿಕೊಳ್ಳಬೇಕೆಂದು ನೀವು ಬಯಸುತ್ತೀರೋ ಹಾಗೆ ನೋಡಿಕೊಳ್ಳಿ" ಎಂದು ನಮಗೆ ಹೇಳುವುದನ್ನು  "ಸುವರ್ಣ ನಿಯಮ" ಎಂದು ನಾವು ಕರೆಯುತ್ತೇವೆ. ಅದು ಮಾನವ ಹಕ್ಕುಗಳ ವಿಷಯವನ್ನು ಸೊಗಸಾಗಿ ಸಾರಿ ಹೇಳುತ್ತದೆ” ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

“ಯು.ಡಿ.ಎಚ್‌.ಆರ್‌.ನ 75 ವರ್ಷ ನಿಮಿತ್ತ ವಿಶ್ವಾದ್ಯಂತ, ವರ್ಷಪೂರ್ತಿ ಆಚರಣೆಗಳ ಪ್ರಾರಂಭ ಇಂದು ನಡೆದಿದೆ. ವಿಶ್ವಸಂಸ್ಥೆಯು 2022 ರ ಸಂಕಲ್ಪ ವಿಷಯವಾಗಿ ‘ಎಲ್ಲರಿಗೂ ಘನತೆ, ಸ್ವಾತಂತ್ರ್ಯ ಮತ್ತು ನ್ಯಾಯ’ವನ್ನು ಆಯ್ಕೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ, ಅಸಾಮಾನ್ಯ ಹವಾಮಾನ ವೈಪರೀತ್ಯಗಳಿಂದ ಉಂಟಾದ ಹೆಚ್ಚಿನ ಸಂಖ್ಯೆಯ ನೈಸರ್ಗಿಕ ವಿಕೋಪಗಳಿಂದ ಜಗತ್ತು ಇನ್ನೂ ಬಳಲುತ್ತಿದೆ. ಹವಾಮಾನ ಬದಲಾವಣೆ ಎಲ್ಲರ ಮನೆ ಬಾಗಿಲು ತಟ್ಟುತ್ತಿದೆ. ನಮ್ಮ ಪರಿಸರದ ಅವನತಿಗೆ ಬಡ ರಾಷ್ಟ್ರಗಳ ಜನರು ಭಾರಿ ಬೆಲೆ ನೀಡುತ್ತಿದ್ದಾರೆ. ನ್ಯಾಯಯುತ ಪರಿಸರ ಆಯಾಮಗಳನ್ನು ನಾವು ಈಗ ಪರಿಗಣಿಸಬೇಕು. 

“ಹವಾಮಾನ ಬದಲಾವಣೆಯ ಸವಾಲು ಎಷ್ಟು ದೊಡ್ಡದಾಗಿದೆ ಎಂದರೆ ಅದು 'ಹಕ್ಕು'ಗಳನ್ನು ಮರು ವ್ಯಾಖ್ಯಾನಿಸಲು ಒತ್ತಾಯಿಸುತ್ತದೆ. ಐದು ವರ್ಷಗಳ ಹಿಂದೆ, ಉತ್ತರಾಖಂಡದ ಹೈಕೋರ್ಟ್ ಗಂಗಾ ಮತ್ತು ಯಮುನಾ ನದಿಗಳಿಗೆ ಕೂಡಾ ಮಾನವರಿಗೆ ಸಮಾನವಾದ ಕಾನೂನು ಹಕ್ಕುಗಳಿವೆ ಎಂದು ಹೇಳಿತ್ತು. ಭಾರತವು ಅಸಂಖ್ಯಾತ ಪವಿತ್ರ ಸರೋವರಗಳು, ನದಿಗಳು ಮತ್ತು ಪರ್ವತಗಳನ್ನು ಹೊಂದಿರುವ ಪವಿತ್ರ ಭೌಗೋಳಿಕ ಭೂಪ್ರದೇಶವಾಗಿದೆ. ಈ ಭೂದೃಶ್ಯಗಳಿಗೆ, ಸಸ್ಯ ಮತ್ತು ಪ್ರಾಣಿಗಳು ಕೂಡಾ ಶ್ರೀಮಂತ ಜೀವವೈವಿಧ್ಯವನ್ನು ಸೇರಿಸುತ್ತವೆ. ಹಳೆಯ ಕಾಲದಲ್ಲಿ, ನಮ್ಮ ಋಷಿಗಳು ಮತ್ತು ದಾರ್ಶನಿಕರು ನಮ್ಮೊಂದಿಗೆ ಅವಲ್ಲವನ್ನೂ ಸಾರ್ವತ್ರಿಕ ಸಮಗ್ರತೆಯ ಭಾಗವಾಗಿ ನೋಡಿದ್ದರು. ಆದ್ದರಿಂದ, ಮಾನವ ಹಕ್ಕುಗಳ ಪರಿಕಲ್ಪನೆಯು ಪ್ರತಿಯೊಬ್ಬ ಮನುಷ್ಯನನ್ನು ನಮ್ಮಿಂದ ಭಿನ್ನವಾಗಿಲ್ಲ ಎಂದು ಪರಿಗಣಿಸುವಂತೆ ನಮ್ಮನ್ನು ಉತ್ತೇಜಿಸುತ್ತದೆ, ನಾವು ಇಡೀ ಜೀವಂತ ಜಗತ್ತನ್ನು ಮತ್ತು ಅದರ ಆವಾಸಸ್ಥಾನವನ್ನು ಗೌರವದಿಂದ ಪರಿಗಣಿಸಬೇಕು.

“ನಮ್ಮ ಸುತ್ತಲಿನ ಪ್ರಾಣಿಗಳು ಮತ್ತು ಮರಗಳು ಮಾತನಾಡಲು ಸಾಧ್ಯವಾದರೆ ನಮಗೆ ಏನು ಹೇಳಬಹುದು, ನಮ್ಮ ನದಿಗಳು ಮಾನವ ಇತಿಹಾಸದ ಬಗ್ಗೆ  ಏನು ಹೇಳುತ್ತವೆ ಮತ್ತು ಮಾನವ ಹಕ್ಕುಗಳ ವಿಷಯದ ಬಗ್ಗೆ ನಮ್ಮ ಜಾನುವಾರುಗಳು ಏನು ಹೇಳುತ್ತವೆ. ನಾವು ಬಹಳಷ್ಟು ಆಶ್ಚರ್ಯ ಪಡಬಹುದು. ನಾವು ಅವರ ಹಕ್ಕುಗಳನ್ನು ದೀರ್ಘಕಾಲ ತುಳಿದಿದ್ದೇವೆ ಮತ್ತು ಈಗ ಫಲಿತಾಂಶಗಳು ನಮ್ಮ ಮುಂದಿವೆ. ಪ್ರಕೃತಿಯನ್ನು ಘನತೆಯಿಂದ ನಡೆಸಿಕೊಳ್ಳುವುದನ್ನು ನಾವು ಕಲಿಯಬೇಕು - ಹಾಗೂ ಆ ಕುರಿತು ಪುನಃ ಕಲಿಯಬೇಕು. ಇದು ನೈತಿಕ ಕರ್ತವ್ಯ ಮಾತ್ರವಲ್ಲ; ನಮ್ಮ ಸ್ವಂತ ಉಳಿವಿಗೂ ಇದು ಅವಶ್ಯಕ” ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

ಭಾರತದ ರಾಷ್ಟ್ರಪತಿಯವರ ಭಾಷಣವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

****



(Release ID: 1882349) Visitor Counter : 145