ಕಲ್ಲಿದ್ದಲು ಸಚಿವಾಲಯ

​​​​​​​ಕಲ್ಲಿದ್ದಲು ಸಚಿವಾಲಯದಿಂದ ಮುಂಬೈನಲ್ಲಿ ಹೂಡಿಕೆದಾರರ ಸಮಾವೇಶ


ವಾಣಿಜ್ಯ ಗಣಿಗಳ ಹರಾಜುಗಳ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಗೆ ಬಿಡ್ ದಾರರನ್ನು ಆಕರ್ಷಿಸುವ ಪ್ರಯತ್ನ

Posted On: 29 NOV 2022 11:44AM by PIB Bengaluru

ಆರಂಭಿಕ ಐದು ಸುತ್ತಿನಲ್ಲಿ ಯಶಸ್ವಿಯಾಗಿ 64 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿರುವ ಕಲ್ಲಿದ್ದಲು ಸಚಿವಾಲಯವು ಆರನೇ ಸುತ್ತಿನಲ್ಲಿ ಹೊಸ 71 ಕಲ್ಲಿದ್ದಲು ಗಣಿ ಜತೆಗೆ ನವೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆ ಸುತ್ತುಗಳಲ್ಲಿ ಬಾಕಿ ಉಳಿದಿರುವ 62 ಕಲ್ಲಿದ್ದಲು ಗಣಿ ಒಳಗೊಂಡಂತೆ ಒಟ್ಟು 133 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದೆ. ಹೆಚ್ಚುವರಿಯಾಗಿ, 5ನೇ ಸುತ್ತಿನಲ್ಲಿ ಏಕ ಬಿಡ್‌ದಾರರಷ್ಟೇ ಪಾಲ್ಗೊಂಡಿದ್ದ ಎಂಟು ಕಲ್ಲಿದ್ದಲು ಗಣಿಗಳಿಗೆ ಸಂಬಂಧಪಟ್ಟಂತೆ 2ನೇ ಸುತ್ತಿನ ಹರಾಜು ಪ್ರಕ್ರಿಯೆಯೂ ಶುರುವಾಗಿದೆ.

ವಾಣಿಜ್ಯ ಹರಾಜಿಗೆ ಸಂಬಂಧಪಟ್ಟಂತೆ ತಾಂತ್ರಿಕ ಅಥವಾ ಆರ್ಥಿಕ ಅರ್ಹತಾ ಮಾನದಂಡಗಳಿಲ್ಲ. ಹಾಗಾಗಿ ಈ ಹಿಂದೆ ಕಲ್ಲಿದ್ದಲು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರದ ಹಲವು ಬಿಡ್‌ದಾರರು ಇದೀಗ ಯಶಸ್ವಿಯಾಗಿ ವಾಣಿಜ್ಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಗುತ್ತಿಗೆ ಪಡೆಯುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಕರ್ಷಿಸುವ ನಿಟ್ಟಿನಲ್ಲಿ ಕಲ್ಲಿದ್ದಲು ಸಚಿವಾಲಯವು ಡಿಸೆಂಬರ್‌ 1ರಂದು ಮುಂಬೈನಲ್ಲಿ ಹೂಡಿಕೆದಾರರ ಸಮಾವೇಶ ಹಮ್ಮಿಕೊಂಡಿದೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಷಿ ಅವರು ಹೂಡಿಕೆದಾರರ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ ಶಿಂಧೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಮುಖ್ಯ ಅತಿಥಿಗಳಾಗಿರಲಿದ್ದು, ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ರಾವ್‌ಸಾಹೇಬ್‌ ಪಾಟೀಲ್‌ ಧಾನ್ವೆ ಹಾಗೂ ಮಹಾರಾಷ್ಟ್ರದ ಗಣಿ ಸಚಿವ ಶ್ರೀ ದಾಬಾಜಿ ಭೂಸೆ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಅಮ್ರಿತ್‌ ಲಾಲ್‌ ಮೀನಾ ಹಾಗೂ ಗಣಿ ಸಚಿವಾಲಯದ ಕಾರ್ಯದರ್ಶಿ ವಿವೇಕ್‌ ಭಾರದ್ವಾಜ್‌ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಸಾಕಷ್ಟು ವಿಸ್ತೃತ ಚರ್ಚೆ ನಂತರ ಗಣಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಮುಖ್ಯವಾಗಿ ರಕ್ಷಿತ ಪ್ರದೇಶ, ವನ್ಯಜೀವಿ ಧಾಮಗಳು, ಸೂಕ್ಷ್ಮ ಜೀವಿ ಪರಿಸರ, ಶೇ.40ಕ್ಕಿಂತ ಹೆಚ್ಚು ಅರಣ್ಯ ವ್ಯಾಪ್ತಿಯಲ್ಲಿರುವ ಪ್ರದೇಶ, ಸಾಕಷ್ಟು ಅಭಿವೃದ್ಧಿಯಾಗಿ ಕಟ್ಟಡಗಳು ನಿರ್ಮಾಣವಾಗಿರುವ ಜನವಸತಿ ಪ್ರದೇಶಗಳಲ್ಲಿನ ಗಣಿಗಳಿಗೆ ವಿನಾಯ್ತಿ ನೀಡಲಾಗಿದೆ. ಜನವಸತಿ ಪ್ರದೇಶ, ಹಸಿರು ವಲಯ ಇಲ್ಲವೇ ಮಹತ್ವದ ಮೂಲ ಸೌಕರ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಗಡಿಯಿರುವ ಕೆಲ ಕಲ್ಲಿದ್ದಲು ಗಣಿ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಬಿಡ್‌ದಾರರು, ಹೂಡಿಕೆದಾರರ ಸೇರಿದಂತೆ ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಮಾರ್ಪಡಿಸಲು ಅವಕಾಶ ಕಲ್ಪಿಸಿದೆ.
 
ವಾಣಿಜ್ಯ ಹರಾಜು ಪ್ರಕ್ರಿಯೆಯಲ್ಲಿ ಮುಂಗಡ ಮೊತ್ತ, ಬಿಡ್‌ನ ಭದ್ರತಾ ಠೇವಣಿ ಮೊತ್ತ ಕಡಿತದಂತಹ ಪ್ರಮುಖ ಅಂಶಗಳ ಜತೆಗೆ ಕಲ್ಲಿದ್ದಲು ಗಣಿಗಳನ್ನು ಭಾಗಶಃ ಪರಿಶೋಧಿಸಿದ ಸಂದಭದಲ್ಲಿ ಕಲ್ಲಿದ್ದಲು ಗಣಿ ಪ್ರದೇಶದ ಭಾಗವನ್ನು ಬಿಟ್ಟುಕೊಡಲು ಅನುಮತಿ ನೀಡಿಕೆ ಅಂಶವಿದೆ. ಹಾಗೆಯೇ ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಾಂಕ ಹಾಗೂ ರಾಷ್ಟ್ರೀಯ ಲಿಗ್ನೇಟ್‌ ಸೂಚ್ಯಾಂಕ, ಪ್ರವೇಶ ನಿರ್ಬಂಧಗಳ ಸಡಿಲಿಕೆ, ಕಲ್ಲಿದ್ದಲನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಅವಕಾಶ, ಸೂಕ್ತ ಪಾವತಿ ವ್ಯವಸ್ಥೆ ಸೇರಿದಂತೆ ತ್ವರಿತ ಉತ್ಪಾದನೆ ಹಾಗೂ ಪರಿಸರಸ್ನೇಹಿ ಕಲ್ಲಿದ್ದಲು ತಂತ್ರಜ್ಞಾನ ಬಳಕೆ, ದಕ್ಷ ಕಾರ್ಯ ನಿರ್ವಹಣೆಗೆ ಉತ್ತೇಜಕಗಳನ್ನು ನೀಡುವುದು ಸೇರಿದೆ.

ಕಳೆದ ನ. 3ರಂದು "ಸೇಲ್‌ ಆಫ್‌ ಟೆಂಡರ್‌ ಡಾಕ್ಯುಮೆಂಟ್‌" ಪ್ರಕ್ರಿಯೆ ಶುರುವಾಗಿದ್ದು, ಗಣಿಗಳ ವಿವರ, ಹರಾಜು ಷರತ್ತುಗಳು, ಕಾಲಮಿತಿ ಇತರೆ ಮಾಹಿತಿಯನ್ನು ಎಂಎಸ್‌ಟಿಸಿ ಹರಾಜು ವೇದಿಕೆಯಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಗಣಿಗಾರಿಕೆಯಿಂದ ಬರುವ ಆದಾಯದಲ್ಲಿ ಶೇಕಡಾವಾರು ಪಾಲು ಹಂಚಿಕೆ ಆಧಾರದ ಮೇಲೆ ಪಾರದರ್ಶಕ ಎರಡು ಹಂತದ ಆನ್‌ಲೈನ್‌ ಹರಾಜು ಪ್ರಕ್ರಿಯೆ ನಡೆಯಲಿದೆ. 

ಕಲ್ಲಿದ್ದಲು ಗಣಿ ಸಚಿವಾಲಯದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ವ್ಯವಹಾರ ಸಂಬಂಧ ಸಲಹಾ ಸಂಸ್ಥೆಯಾದ ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್ಸ್‌ ಲಿಮಿಟೆಡ್‌ ಕಲ್ಲಿದ್ದಲು ಸಚಿವಾಲಯವು ಹರಾಜು ಪ್ರಕ್ರಿಯೆ ನಡೆಸಲು ನೆರವಾಗಲಿದೆ.

*****



(Release ID: 1879733) Visitor Counter : 147