ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav
iffi banner

ಚಿತ್ರಗಳ ಚಿತ್ರೀಕರಣ ಮತ್ತು ಚಿತ್ರ ತಯಾರಿಕೆಯ ನಂತರದ ಪ್ರಕ್ರಿಯೆಗಳಿಗಾಗಿ ಭಾರತವನ್ನು ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡಲಾಗುವುದು: ಅನುರಾಗ್ ಠಾಕೂರ್


"ವಾಸುದೇವ ಕುಟುಂಬಕಂ" ಎಂಬ ವಿಷಯದಲ್ಲಿ ಐ.ಎಫ್. ಎಫ್.ಐ. ಯ ಆಶಯ ಮತ್ತು ಮೌಲ್ಯಗಳು ಬೇರೂರಿದೆ

​​​​​​​ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯನ್ನು ನಟ ಚಿರಂಜೀವಿ  ಅವರಿಗೆ ಪ್ರದಾನಿಸಲಾಯಿತು

ನಮ್ಮ ಜನರ ಪ್ರತಿಭೆ ಮತ್ತು ಉದ್ಯಮದ ದಿಗ್ಗಜರ ನಾವಿನ್ಯತೆಯ ಆವಿಷ್ಕಾರದ ಬೆಂಬಲದೊಂದಿಗೆ ಚಲನಚಿತ್ರ ಚಿತ್ರೀಕರಣ ಮತ್ತು ಚಿತ್ರತಯಾರಿಕೆಯ ನಂತರದ ಪ್ರಕ್ರಿಯೆಗಳಿಗಾಗಿ ಭಾರತವನ್ನು ಹೆಚ್ಚು ಬೇಡಿಕೆಯಿರುವ ತಾಣವನ್ನಾಗಿ ಮಾಡುವುದು ಕೇಂದ್ರ ಸರ್ಕಾರದ ದೂರದೃಷ್ಟಿಯ ಚಿಂತನೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್‌ ಠಾಕೂರ್‌ ಅವರು ಹೇಳಿದರು. ಅವರು ಗೋವಾದ ಪಣಜಿಯಲ್ಲಿ ಜರುಗಿದ 53 ನೇ ಆವೃತ್ತಿಯ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.  

ಸಚಿವರ ಈ ದೃಷ್ಟಿಕೋನವು ಈ ವರ್ಷದ ಐ.ಎಫ್‌.ಎಫ್‌.ಐ.ಗೆ ಮಾತ್ರ ಸೀಮಿತವಾಗಿರದೆ, ಅಮೃತ ಮಹೋತ್ಸವದಿಂದ ಅಮೃತ ಕಾಲಕ್ಕೆ ಪರಿವರ್ತನೆಗೊಂಡು ಭಾರತವು ತನ್ನ 100 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುವಾಗ, ನಾವು ಆಚರಿಸುವ 100ನೇ ವರ್ಷದ  ಐ.ಎಫ್‌.ಎಫ್‌.ಐ. ಹೇಗಿರಬೇಕು ಎಂಬ ನಿಟ್ಟಿನಲ್ಲಿ ಸಚಿವರು ವಿವರಿಸಿದರು. “ನಾವು ಭಾರತವನ್ನು ವಿಷಯ ರಚನೆಯ (ಕಂಟೆಂಟ್‌ ಕ್ರಿಯೇಷನ್‌) ಜಾಗತಿಕ ಶಕ್ತಿ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ, ವಿಶೇಷವಾಗಿ ಪ್ರಾದೇಶಿಕ ಚಲನಚಿತ್ರ ಉತ್ಸವಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಪ್ರಾದೇಶಿಕ ಚಲನಚಿತ್ರಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ನಮ್ಮ ನುರಿತ ಯುವಜನತೆಯಲ್ಲಿರುವ ಅಗಾಧವಾದ ತಾಂತ್ರಿಕ ಕೌಶಲ್ಯತೆ ಮತ್ತು ಪ್ರತಿಭೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತವು ವಿಶ್ವದ ಚಲನಚಿತ್ರ ನಿರ್ಮಾಣಾನಂತರದ ಕೇಂದ್ರ ಬಿಂದುವಾಗಿ ಮಾರ್ಪಾಡಾಗಲಿದೆ” ಎಂದು ಸಚಿವರು ಹೇಳಿದರು.  

ಏಷ್ಯಾದ ಅತ್ಯಂತ ಪುರಾತನ ಚಲನಚಿತ್ರೋತ್ಸವವನ್ನು ನೆನಪಿಸಿಕೊಂಡ ಕೇಂದ್ರ ಸಿಚಿವ ಶ್ರೀ ಅನುರಾಗ್ ಠಾಕೂರ್ ಅವರು, ಐ.ಎಫ್‌.ಎಫ್‌.ಐ. ಪರಿಕಲ್ಪನೆಯ ಮೂಲ ಸಂಕಲ್ಪವು  'ವಾಸುದೇವ ಕುಟುಂಬಕಂ' ನಲ್ಲಿ ಬೇರೂರಿದೆ, ಇದು ಜಗತ್ತು ಒಂದೇ ಕುಟುಂಬವಾಗಿರುವ ಶಾಂತಿಯುತ ಸಹಬಾಳ್ವೆಯ ಸಾರವನ್ನು ಒಳಗೊಂಡಿದೆ ಎಂದು ಸಚಿವರು ಹೇಳಿದರು. "ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಈ ಸಂಕಲ್ಪವು, ಈಗ ಹೆಚ್ಚಾಗುತ್ತಿರುವ ಭಾರತದ ಜಾಗತಿಕ ಪಾತ್ರ  ಮತ್ತು ಜಿ-20 ಅಧ್ಯಕ್ಷ ಸ್ಥಾನದಲ್ಲಿ ಅವಲಂಬಿಸಿದೆ" ಎಂದು ಸಚಿವರು ಹೇಳಿದರು.  

"ಮೊದಲ ಬಾರಿಗೆ ಭಾರತೀಯ, ಜಾಗತಿಕ ಸಿನಿಮಾ ಮತ್ತು ಒ.ಟಿ.ಟಿ.ಗಳ ಅದ್ದೂರಿಯ ಪ್ರದರ್ಶನಗಳು ಐ.ಎಫ್‌.ಎಫ್‌.ಐ. ನಲ್ಲಿ ನಡೆಯಲಿವೆ, ಇದರಲ್ಲಿ ಜಾಗತಿಕವಾಗಿ ಮೆಚ್ಚುಗೆ ಪಡೆದ ದಾರವಾಹಿ ಚಿತ್ರ “ಫೌಡಾ”ದ ನಾಲ್ಕನೇ ಸೀಸನ್‌ ನ ಪ್ರಥಮ ಪ್ರದರ್ಶನವೂ ಸೇರಿದೆ, ಇದು ಇಂದು ವಿಶ್ವದ ಕೆಲವು ಜನಪ್ರಿಯ ಇಸ್ರೇಲಿ ನಟರನ್ನು ಒಳಗೊಂಡಿದೆ. ಈ ಪ್ರದರ್ಶನದ ಮುಂದಿನ ಸೀಸನ್ ಅನ್ನು ಐ.ಎಫ್‌.ಎಫ್‌.ಐ.ನಲ್ಲಿ ಪ್ರಾರಂಭಿಸಲಾಗುವುದು” ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಈ ವರ್ಷದ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಗೆದ್ದಿರುವ ಸ್ಪ್ಯಾನಿಷ್ ಚಲನಚಿತ್ರ ನಿರ್ಮಾಪಕ ಶ್ರೀ ಕಾರ್ಲೋಸ್ ಸೌರಾ ಅವರನ್ನು ಸಚಿವರು ಅಭಿನಂದಿಸಿದರು. ದಕ್ಷಿಣ ಭಾರತದ ಖ್ಯಾತ ನಟ ಶ್ರೀ ಚಿರಂಜೀವಿ ಅವರಿಗೆ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಸಚಿವರು ಈ ಸಂದರ್ಭದಲ್ಲಿ ಘೋಷಿಸಿದರು. “ವಿಶೇಷವಾಗಿ ಕ್ಯುರೇಟೆಡ್ ಪ್ಯಾಕೇಜ್‌ನಲ್ಲಿ ಗಮನಾರ್ಹವಾದ ಫೀಚರ್‌ ಮತ್ತು ನಾನ್-ಫೀಚರ್‌ ಮಣಿಪುರಿ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಮಣಿಪುರಿ ಸಿನೆಮಾದ 50 ವರ್ಷಗಳ ಐತಿಹಾಸಿಕ ಹಾದಿಯನ್ನು ಐ.ಎಫ್‌.ಎಫ್‌.ಐ.ನ ಈ ಆವೃತ್ತಿಯು ಸ್ಮರಿಸುತ್ತದೆ” ಎಂದು ಕೇಂದ್ರ ಸಚಿವ ಶ್ರೀ ಅನುರಾಗ್‌ ಠಾಕೂರ್ ಅವರು ಹೇಳಿದರು.

ಐ.ಎಫ್‌.ಎಫ್‌.ಐ. ಜೊತೆಗೆ ಪಕ್ಕದಲ್ಲೇ ಏರ್ಪಡಿಸಲಾಗುತ್ತಿರುವ ಫಿಲ್ಮ್ ಬಜಾರ್‌ ನ ಪ್ರಾಮುಖ್ಯತೆಯನ್ನು ಸಹ ಶ್ರೀ ಅನುರಾಗ್ ಠಾಕೂರ್ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. “ಮೊದಲ ಬಾರಿಗೆ, ದೇಶೀಯ ಪ್ರದರ್ಶನ ಕೇಂದ್ರವನ್ನು ಏರ್ಪಡಿಸುವ ಮೂಲಕ ಫಿಲ್ಮ್ ಬಜಾರ್‌ ನ ವ್ಯಾಪ್ತಿಯನ್ನು ಐ.ಎಫ್‌.ಎಫ್‌.ಐ. ಹೆಚ್ಚಿಸಿದೆ. ಫಿಲ್ಮ್ ಬಜಾರ್‌ ನ 15 ನೇ ಆವೃತ್ತಿಯಲ್ಲಿ ಪ್ರದರ್ಶಿಸಲಾಗುವ 40 ಕ್ಕೂ ಹೆಚ್ಚು ಪ್ರದರ್ಶನ ಕೇಂದ್ರಗಳನ್ನು ವೀಕ್ಷಿಸಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ಮತ್ತು ಸಿನಿಮಾ ಜಗತ್ತಿನ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಲು ಟೆಕ್ನಾಲಜಿ ಹಬ್ ಅನ್ನು ಕೂಡಾ ಮೊದಲ ಬಾರಿಗೆ ಐ.ಎಫ್‌.ಎಫ್‌.ಐ.  ಹೊಂದಿದೆ ”ಎಂದು ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹೇಳಿದರು.

ಹೆಚ್ಚು ಅವಕಾಶ ಒಳಗೊಳ್ಳುವ ಮತ್ತು ಎಲ್ಲರಿಗೂ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲು ಐ.ಎಫ್‌.ಎಫ್‌.ಐ. ಮಾಡಿದ ಪ್ರಯತ್ನಗಳನ್ನು ಅದರಲ್ಲೂ ಮುಖ್ಯವಾಗಿ ದಿವ್ಯಾಂಗಜನರಿಗಾಗಿ (ವಿಶೇಷ ಚೇತನ) ಮಾಡಿರುವ ವಿಶೇಷ ಉಪಕ್ರಮಗಳನ್ನು ಸಚಿವರು ವಿವರಿಸಿದರು. "ಅವರ ಆವಶ್ಯಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ವಿಭಾಗದಲ್ಲಿನ ಚಲನಚಿತ್ರಗಳು ಎಂಬೆಡೆಡ್ ಶ್ರವ್ಯ ವಿವರಣೆಗಳು ಮತ್ತು ಉಪಶೀರ್ಷಿಕೆಗಳೊಂದಿಗೆ ಶ್ರವ್ಯ-ದೃಶ್ಯ-ಸಜ್ಜಿತವಾಗಿರುವಂತಹ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಸಾಮರ್ಥ್ಯವುಳ್ಳವರಿಗಾಗಿ 'ಸ್ಮಾರ್ಟ್‌ಫೋನ್ ಫಿಲ್ಮ್ ಮೇಕಿಂಗ್' (ಸ್ಲೀನತೆಯ ವ್ಯಕ್ತಿಗಳಿಗಾಗಿ ತಜ್ಞರ ಮೂಲಕ ಅಗತ್ಯ ಸಹಾಯ ನೀಡುವ ) ಮತ್ತು 'ಸ್ಕ್ರೀನ್ ಆಕ್ಟಿಂಗ್' (ಗಾಲಿಕುರ್ಚಿ ಬಳಕೆದಾರರಿಗಾಗಿ ತಜ್ಞರ ಮೂಲಕ ಅಗತ್ಯ ಸಹಾಯ ನೀಡುವ) ಎಂಬ ಎರಡು ವಿಶೇಷ ಪಠ್ಯಕ್ರಮಗಳನ್ನು ಫಿಲ್ಮ್ & ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌.ಟಿ.ಐ.ಐ.) ಸಂಸ್ಥೆ ಪ್ರಾರಂಭಿಸಲಿದೆ ”ಎಂದು ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹೇಳಿದರು.   

****

 

 

iffi reel

(Release ID: 1877603) Visitor Counter : 185