ವಾರ್ತಾ ಮತ್ತು ಪ್ರಸಾರ ಸಚಿವಾಲಯ
IFFI (ಐಎಫ್‌ಎಫ್‌ಐ) ವ್ಯಕ್ತಿತ್ವ ಪ್ರಶಸ್ತಿಗೆ ಭಾಜನರಾದ ಮೆಗಾಸ್ಟಾರ್ ಚಿರಂಜೀವಿ
ಈ ಬಾರಿಯ IFFI ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯು ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಸಂದಿದೆ.
ಹೌದು, 2022 ರ ಐಎಫ್‌ಎಫ್‌ಐ ಇಂಡಿಯನ್ ಫಿಲ್ಮ್ ಪರ್ಸನಾಲಿಟಿ ಆಫ್ ದಿ ಇಯರ್ ಪ್ರಶಸ್ತಿಯು ಮೆಗಾಸ್ಟಾರ್ ಮತ್ತು ನಟ-ನಿರ್ಮಾಪಕ ಚಿರಂಜೀವಿ ಕೊನಿಡೇಲ ಅವರಿಗೆ ಸಂದಿದೆ. ಗೋವಾದಲ್ಲಿ ಇಂದು ನಡೆದ ಐಎಫ್‌ಎಫ್‌ಐನ 53ನೇ ಆವೃತ್ತಿಯ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಈ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಲನಚಿತ್ರರಂಗದಲ್ಲಿರುವ ಚಿರಂಜೀವಿ ಇದೂವರೆಗೂ ತೆಲುಗಿನಲ್ಲಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಕೆಲವು ಚಲನಚಿತ್ರಗಳಲ್ಲಿ ಕೂಡ ಚಿರಂಜೀವಿ ಅಭಿನಯಿಸಿದ್ದಾರೆ. ಚಿರಂಜೀವಿ ಅವರು ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಅವರು 1982 ರಲ್ಲಿ "ಇನಿತ್ಲೋ ರಾಮಯ್ಯ ವೀಡಿಲೋ ಕೃಷ್ಣಯ್ಯ" ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿ ತಮ್ಮ ಅಭಿನಯದ ಮೂಲಕ ಜನಮಾನಸವನ್ನು ತಮ್ಮತ್ತ ಸೆಳೆದುಕೊಂಡರು. ಅವರ ಉತ್ಸಾಹಭರಿತ ನೃತ್ಯ ಪ್ರದರ್ಶನಗಳು ಮತ್ತು ಶಕ್ತಿಯುತ ಹೋರಾಟದ ದೃಶ್ಯಗಳಿಂದಾಗಿ ಜನರ ಇನ್ನಷ್ಟು ಮೆಚ್ಚುಗೆ ಪಡೆದಿದ್ದಾರೆ. ಇವರ ಈ ಆಕರ್ಷಕ ನಟನೆ ಹಾವಭಾವ ಶೈಲಿಯ ಪ್ರಭಾವವೇ ಅವರಿಗೆ "ಮೆಗಾಸ್ಟಾರ್" ಎಂಬ ಬಿರುದನ್ನು ತಂದುಕೊಟ್ಟಿದೆ.
2006 ರಲ್ಲಿ, ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
ಐಎಫ್‌ಎಫ್‌ಐ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಕಾರ್ಯಕ್ರಮದ ವೇದಿಕೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಈ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಈ ಪ್ರಶಸ್ತಿಯು ಸಿನಿಮಾ, ಜನಪ್ರಿಯ ಸಂಸ್ಕೃತಿ ಮತ್ತು ಸಾಮಾಜಿಕವಾಗಿ ಮಹತ್ವದ ಕಲಾತ್ಮಕ ಕೆಲಸಕ್ಕಾಗಿ ಅವರು ನೀಡಿರುವ ಕೊಡುಗೆಗಳಿಂದಾಗಿ ಜನರಿಂದ (ಪ್ರೇಕ್ಷಕರಿಂದ) ಹೆಚ್ಚು ಆರಾಧಿಸಲ್ಪಟ್ಟ ಮೆಗಾಸ್ಟಾರ್‌ಗೆ ಈ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಪ್ರಶಸ್ತಿಯು ಚಿರಂಜೀವಿ ಅವರಿಗೆ ರಾಷ್ಟ್ರವು ನೀಡುವ ಮನ್ನಣೆಯಾಗಿದೆ.
ಈ ಸಂದರ್ಭದಲ್ಲಿ ಈ ಹಿರಿಯ ನಟನನ್ನು ಅಭಿನಂದಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಚಿರಂಜೀವಿ ಅವರು ಸುಮಾರು ನಾಲ್ಕು ದಶಕಗಳ ಕಾಲ ಸುದೀರ್ಘವಾಗಿ ಚಲನಚಿತ್ರ ರಂಗದಲ್ಲಿ ತೊಡಗಿಸಿಕೊಳ್ಳುವ ವೃತ್ತಿಜೀವನವನ್ನು ಹೊಂದಿದ್ದಾರೆ, ನಟ, ನೃತ್ಯಗಾರ ಹಾಗೂ ನಿರ್ಮಾಪಕರಾಗಿ 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ ಎಂದರು.
ಚಿರಂಜೀವಿ ಅವರು ತೆಲುಗು ಚಿತ್ರರಂಗದಲ್ಲಿ ಅಗಾಧವಾದ ಜನಪ್ರಿಯನ್ನು ಹೊಂದುವ ಮೂಲಕ ತಮ್ಮ ಅಭಿನಯದಿಂದಾಗಿ ಪ್ರೇಕ್ಷಕರ (ಜನರ) ಮನೆ,ಮನ, ಹೃದಯಗಳನ್ನು ಸ್ಪರ್ಶಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಇನ್ನು ಚಿತ್ರರಂಗದ ದಿಗ್ಗಜರಾದ ಹಿರಿಯ ನಟರಾದ ವಹೀದಾ ರೆಹಮಾನ್, ರಜನಿಕಾಂತ್, ಇಳಯರಾಜ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಅಮಿತಾಬ್ ಬಚ್ಚನ್, ಸಲೀಂ ಖಾನ್, ಬಿಸ್ವಜಿತ್ ಚಟರ್ಜಿ, ಹೇಮಾ ಮಾಲಿನಿ ಮತ್ತು ಪ್ರಸೂನ್ ಜೋಷಿ ಅವರು ಈ ಹಿಂದೆ IFFI (ಐಎಫ್‌ಎಫ್‌ಐ) ವ್ಯಕ್ತಿತ್ವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
*****
(Release ID: 1877595)
Visitor Counter : 218