ರಾಷ್ಟ್ರಪತಿಗಳ ಕಾರ್ಯಾಲಯ

ಮಕ್ಕಳ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಹಲವು ಶಾಲೆಗಳ ವಿದ್ಯಾರ್ಥಿಗಳು


ದೊಡ್ಡ ದೊಡ್ಡ ಕನಸು ಕಾಣಿ; ಇಂದಿನ ಕನಸು ನಾಳೆ ನಿಜವಾಗುತ್ತವೆ ಎಂದು ಮಕ್ಕಳನ್ನು ಹುರಿದುಂಬಿಸಿದ ರಾಷ್ಟ್ರಪತಿಗಳು  

Posted On: 14 NOV 2022 2:05PM by PIB Bengaluru

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇಂದು ನವೆಂಬರ್ 14, ಮಕ್ಕಳ ದಿನಾಚರಣೆ ಪ್ರಯುಕ್ತ ಬೆಳಗ್ಗೆ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ (RBCC) ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.

ಮಕ್ಕಳನ್ನು ಆತ್ಮೀಯವಾಗಿ ಭೇಟಿ ಮಾಡಿ ಮಾತನಾಡಿಸಿದ ರಾಷ್ಟ್ರಪತಿಗಳು, ಬಾಲ್ಯ ಜೀವನವು ಮನುಷ್ಯನ ಜೀವನದ ಅತ್ಯಂತ ಸುಂದರ ಘಟ್ಟ. ಮಕ್ಕಳನ್ನು ಅವರು ಇರುವಂತೆಯೇ ಸ್ವೀಕರಿಸಿದರೆ ಅದುವೇ ಅವರನ್ನು ಜೀವಂತವಾಗಿರಿಸುತ್ತದೆ. ಇಂದು ನಾವು ಮಕ್ಕಳ ಮುಗ್ಧತೆ ಮತ್ತು ಪರಿಶುದ್ಧತೆಯನ್ನು ಆಚರಿಸುತ್ತಿದ್ದೇವೆ.

ಪ್ರತಿ ಹೊಸ ಪೀಳಿಗೆಯು ಹೊಸ ಸಾಧ್ಯತೆಗಳು ಮತ್ತು ಹೊಸ ಕನಸುಗಳನ್ನು ತರುತ್ತದೆ. ಇದು ತಂತ್ರಜ್ಞಾನ ಮತ್ತು ಮಾಹಿತಿ ಕ್ರಾಂತಿಯ ಹೊಸ ಯುಗವಾಗಿದೆ. ಇಂದಿನ ಮಕ್ಕಳು ವಿವಿಧ ದೇಶೀಯ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ತಿಳಿದಿರುತ್ತಾರೆ. ಇಂದು ತಂತ್ರಜ್ಞಾನದ ಆಗಮನ ಮತ್ತು ಬೆಳವಣಿಗೆಯೊಂದಿಗೆ, ಜ್ಞಾನ ಮತ್ತು ಮಾಹಿತಿಯು ಈಗ ಅವರ ಬೆರಳ ತುದಿಯಲ್ಲಿ ಸಿಗುತ್ತದೆ. ಆದ್ದರಿಂದ ಇಂದಿನ ಮಕ್ಕಳಿಗೆ ಸರಿಯಾದ ಮೌಲ್ಯಗಳನ್ನು ಕಲಿಸಲು ಮತ್ತು ವಿವಿಧ ಚಟುವಟಿಕೆಗಳು ಮತ್ತು ಚರ್ಚೆ-ಸಂವಾದಗಳಲ್ಲಿ ಅವರು ಒಳಗೊಳ್ಳುವಂತೆ ಮಾಡಲು ಹೆಚ್ಚಿನ ಪ್ರಯತ್ನಗಳನ್ನು ಮಾಡುವುದು ಮುಖ್ಯವಾಗಿದೆ. ಮಕ್ಕಳಿಂದಲೂ ನಾವು ದೊಡ್ಡವರು ಕಲಿಯುವುದು ಸಾಕಷ್ಟಿರುತ್ತದೆ.

ಹೊಸ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಇಂದಿನ ಮಕ್ಕಳು ದೊಡ್ಡ ಕನಸು ಕಾಣಬೇಕು. ಇಂದಿನ ಕನಸುಗಳು ನಾಳೆ ನನಸಾಗಬಹುದು ಎಂದು ಹೇಳಿದರು. ಮಕ್ಕಳು ಬೆಳೆದ ನಂತರ ಅವರು ಯಾವ ರೀತಿಯ ಭಾರತದಲ್ಲಿ ಬದುಕಲು ಬಯಸುತ್ತಾರೆ ಎಂದು ಯೋಚಿಸಬೇಕೆಂದು ಸಲಹೆ ನೀಡಿದರು. ಫಲಿತಾಂಶದ ಬಗ್ಗೆ ಚಿಂತಿಸದೆ ಕರ್ತವ್ಯದ ಮಾರ್ಗವನ್ನು ಅನುಸರಿಸಿ, ಇದರಿಂದ ನಾವು ದೊಡ್ಡ ಮಟ್ಟದಲ್ಲಿ ಯಶಸ್ಸಿನತ್ತ ಮುನ್ನಡೆಯಬಹುದು ಎಂದು ಅವರು ಒತ್ತಾಯಿಸಿದರು. ಮಕ್ಕಳು ಇಂದು ಆಯ್ದುಕೊಳ್ಳುವ ಮಾರ್ಗವು ಮುಂದಿನ ದಿನಗಳಲ್ಲಿ ಭಾರತದ ಪ್ರಯಾಣವನ್ನು ನಿರ್ಧರಿಸುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. ಮಕ್ಕಳು ಬೆಳೆದ ನಂತರವೂ ತಮ್ಮೊಳಗಿರುವ ಮಗುವನ್ನು ಜೀವಂತವಾಗಿಡಲು ಸಲಹೆ ನೀಡಿದರು. ಭಾರತದ ಸಂಸ್ಕೃತಿಯೊಂದಿಗೆ ಯಾವಾಗಲೂ ಮಕ್ಕಳು ನಿಕಟವರ್ತಿಯಾಗಿರಬೇಕು, ಯಾವಾಗಲೂ ಹೆತ್ತವರನ್ನು ಗೌರವಿಸಿ, ಮಾತೃಭೂಮಿಯನ್ನು ಪ್ರೀತಿಸುವಂತೆ ಒತ್ತಾಯಿಸಿದರು.

*****



(Release ID: 1875796) Visitor Counter : 124