ವಾರ್ತಾ ಮತ್ತು ಪ್ರಸಾರ ಸಚಿವಾಲಯ

 ಐಎಫ್ಎಫ್ಐ 53 ಚಲನಚಿತ್ರೋತ್ಸವದಲ್ಲಿ ಭಯಾನಕ(ಹಾರರ್) ಚಲನಚಿತ್ರಗಳ ವಿಶೇಷ ಪ್ಯಾಕೇಜ್ ‘ಮ್ಯಾಕಾಬ್ರೆ ಡ್ರೀಮ್ಸ್’ ಪ್ರಸ್ತುತಪಡಿಸಲಾಗುತ್ತಿದೆ; ಚಿತ್ರಮಂದಿರದಿಂದ ಹೊರಬಂದ ನಂತರವೂ ನಿಮ್ಮನ್ನು ಕಾಡಲಿವೆ ಹಾರರ್ ಚಲನಚಿತ್ರಗಳು

Posted On: 08 NOV 2022 10:12AM by PIB Bengaluru

ಭಯಾನಕ (ಹಾರರ್) ಎಂಬ ಪದವೇ ಸಾರ್ವತ್ರಿಕ ಭಾಷೆಯಾಗಿದೆ; ನಾವೆಲ್ಲರೂ ಭಯಪಡುತ್ತೇವೆ. ನಾವು ಭಯದಿಂದಲೇ ಹುಟ್ಟಿದ್ದೇವೆ, ನಾವೆಲ್ಲರೂ ಇಂತಹ  ವಿಷಯಗಳಿಗೆ ಹೆದರುತ್ತೇವೆ: ಸಾವು, ವಿಕಾರತೆ, ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು, ನಾವು  ಭಯಪಡುವ ಎಲ್ಲವೂ ಈ ಚಲನಚಿತ್ರಗಳಲ್ಲಿ ಇರುತ್ತವೆ. ಪ್ರತಿಯಾಗಿ ನೀವು ಸಹ ಭಯಪಡುತ್ತೀರಿ. 'ಮಾಸ್ಟರ್ ಆಫ್ ಹಾರರ್ ಫಿಲ್ಮ್ಸ್' ಎಂದೇ ಜನಪ್ರಿಯರಾಗಿರುವ ಅಮೆರಿಕದ ಚಲನಚಿತ್ರ ನಿರ್ಮಾಪಕ ಜಾನ್ ಕಾರ್ಪೆಂಟರ್ ಅವರು ತನ್ನ ನೆಚ್ಚಿನ ಚಲನಚಿತ್ರ ಪ್ರಕಾರವನ್ನು ಉತ್ತೇಜಿಸುವ ಭಾವನೆಗಳ ಬಗ್ಗೆ ಮಾತನಾಡುವಾಗ ಸ್ವಲ್ಪವೂ ಉತ್ಪ್ರೇಕ್ಷೆ ಮಾಡುವುದಿಲ್ಲ. ಏನಂತೀರಾ? ಡ್ರಾಕುಲಾದಿಂದ ಮಾಂತ್ರಿಕನವರೆಗೆ ಅಥವಾ ವಶ ಪಾರಂಪರ್ಯದಿಂದ ಮೋಡಿಗಾರನ ತನಕ, ಬೆನ್ನುಮೂಳೆ ಸೇರಿದಂತೆ ಇಡೀ ದೇಹವನ್ನೇ ತಣ್ಣಗಾಗಿಸುವ ಭಯಾನಕ ಚಲನಚಿತ್ರಗಳು ಯಾವಾಗಲೂ ವಿಶ್ವಾದ್ಯಂತ ಚಿತ್ರ ಪ್ರೇಮಿಗಳ ಗಮನ ಸೆಳೆಯುತ್ತಿವೆ. ಪ್ರತಿಯೊಂದು ದೇಶ ಮತ್ತು ಪ್ರತಿಯೊಂದು ಭಾಷೆಯು ತಮ್ಮ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಮತ್ತು ಅಸ್ಥಿರಗೊಳಿಸುವ ಕನಿಷ್ಠ ಒಂದು ಡಜನ್ ಭಯಾನಕ ಚಲನಚಿತ್ರಗಳ ಬಗ್ಗೆ ಹೆಮ್ಮೆಪಡಬಹುದು. ನಮ್ಮ ಸಹಜವಾದ ಭಯದ ಭಾವನೆಯನ್ನು ಕುಶಲತೆಯಿಂದ ನಿರ್ವಹಿಸುವ ಮೂಲಕ, ಈ ಪ್ರಕಾರದ ಚಲನಚಿತ್ರಗಳು ವಿಶ್ವ ಸಿನಿಮಾದ ಈ ಬೃಹತ್ ಪ್ರೇಕ್ಷಕ ವರ್ಗದಲ್ಲಿ ತನ್ನದೇ ಆದ ಒಂದು ಗೂಡು ಕೆತ್ತಿಕೊಂಡಿವೆ.
    ಹಾರರ್ ಪ್ರಕಾರದ ಈ ಸಾಮೂಹಿಕ ಆಕರ್ಷಣೆ ಮತ್ತು ಜನಪ್ರಿಯತೆಯನ್ನು ಗುರುತಿಸಿ, 53ನೇ ಆವೃತ್ತಿಯ ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವ(ಐಎಫ್ಎಫ್ಐ)ದಲ್ಲಿ ಹೊಸದಾಗಿ ಬಿಡುಗಡೆಯಾದ 4 ಭಯಾನಕ ಚಲನಚಿತ್ರಗಳ 'ಮ್ಯಾಕಾಬ್ರೆ ಡ್ರೀಮ್ಸ್' ಅನ್ನು ಪ್ರಸ್ತುತಪಡಿಸುತ್ತಿದೆ. ಇದು ಚಲನಚಿತ್ರ ಪರದೆ ಅಥವಾ ಚಿತ್ರಮಂದಿರದಿಂದ ಹೊರಬಂದ ನಂತರವೂ ಚಲನಚಿತ್ರ ಪ್ರೇಮಿಗಳನ್ನು ಕಾಡಲಿದೆ. ಈ ಅಲೌಕಿಕ ಚಲನಚಿತ್ರಗಳ ವಿಶೇಷ ಪ್ಯಾಕೇಜ್‌ ಇಂತಿವೆ:
 
ನೈಟ್ ಸೈರನ್ (ಸ್ಲೊವಾಕಿಯಾ / 2022)

ತೆರೇಜಾ ನ್ವೋಟೋವಾ ನಿರ್ದೇಶನದ ನೈಟ್ ಸೈರನ್ ಚಲನಚಿತ್ರವು, ತನ್ನ ಸ್ಥಳೀಯ ಗುಡ್ಡಗಾಡು ಹಳ್ಳಿಗೆ ಹಿಂದಿರುಗುವ ಯುವತಿಯೊಬ್ಬಳ ಕಥೆ ಹೇಳುತ್ತದೆ, ತೊಂದರೆಗೊಳಗಾದ ತನ್ನ ಬಾಲ್ಯದ ಬಗ್ಗೆ ಉತ್ತರಗಳನ್ನು ಹುಡುಕುತ್ತದೆ. ಆದರೆ ಅವಳು ಸತ್ಯವನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿರುವಾಗ, ಪ್ರಾಚೀನ ದಂತಕಥೆಗಳು ಆಧುನಿಕ ವಾಸ್ತವವನ್ನು ಆಕ್ರಮಿಸಲು ಪ್ರಾರಂಭಿಸುತ್ತವೆ, ಗ್ರಾಮಸ್ಥರು ಅವಳನ್ನು ವಾಮಾಚಾರ ಮತ್ತು ಕೊಲೆಯ ಆರೋಪಕ್ಕೆ ತಳ್ಳುತ್ತಾರೆ.
 
7 ಅಧ್ಯಾಯಗಳಲ್ಲಿ ತೆರೆದುಕೊಳ್ಳುವ ಭಾವೋದ್ರಿಕ್ತ ಮತ್ತು ನಿಗೂಢ ಭಯಾನಕ ಚಲನಚಿತ್ರವು ಆಧುನಿಕ ದಿನದಲ್ಲಿರುವ ಸ್ಲೋವಾಕಿಯಾದ ಪ್ರಾಚೀನ ನಂಬಿಕೆಗಳ ಪುನರುತ್ಥಾನವನ್ನು ತಿಳಿಸುತ್ತದೆ. ಸ್ತ್ರೀ ದ್ವೇಷ, ಅನ್ಯ ದ್ವೇಷ ಮತ್ತು ಸಾಮೂಹಿಕ ಉನ್ಮಾದದಂತಹ ಸಮಸ್ಯೆಗಳು ನಮ್ಮ ಆಧುನಿಕ ಜಗತ್ತಿನಲ್ಲಿ ಇನ್ನೂ ಹೇಗೆ ಚಾಲ್ತಿಯಲ್ಲಿವೆ.
ನಾವು ಸೋತ ಹಾದಿಯಿಂದ ಹೊರಗುಳಿಯಲು ಬಯಸಿದಾಗ ಮುಕ್ತವಾಗಿರಲು ಏನು ಮಾಡಬೇಕು ಎಂಬುದನ್ನು ಚಿತ್ರಕಥೆ ಹೇಳುತ್ತದೆ.
 
ಹುಸೆರಾ (ಪೆರು / 2022)

 ಹುಸೇರಾ ಹಾರರ್ ಚಲನಚಿತ್ರವು ಮೆಕ್ಸಿಕೊದ ಚಲನಚಿತ್ರ ನಿರ್ಮಾಪಕ ಮಿಚೆಲ್ ಗಾರ್ಜಾ ಸೆರ್ವೆರಾ ಅವರ ನಿರ್ದೇಶನ ಮತ್ತು ಚಿತ್ರಕಥೆ ಬರೆದಿದ್ದು, ಅಲೌಕಿಕ ಕಥಾನಕದ ಭಯಾನಕ ಚಲನಚಿತ್ರವಾಗಿದೆ. ಇದರಲ್ಲಿ ನಟಾಲಿಯಾ ಸೋಲಿಯನ್ ಅವರು ವಲೇರಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಗರ್ಭಿಣಿಯಾದ ಆಕೆ ನಿಗೂಢ ಶಕ್ತಿಗಳಿಂದ ಬೆದರಿಕೆಗೆ ಒಳಗಾಗುತ್ತಾಳೆ. ತಾಯ್ತನದಲ್ಲಿ ವಲೇರಿಯಾ, ತಮ್ಮ ಮೇಲೆ ಬರುವ ಅನುಮಾನ ಮತ್ತು ವ್ಯಾಪಕ ಭಯ, ಆತಂಕಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ.  ಎರಡನೆಯದು ಜೇಡಗಳ ರೂಪದಲ್ಲಿ ಅಲೌಕಿಕ ಬೆದರಿಕೆಗಳು ಎದುರಾಗುತ್ತವೆ. ಈ ರೀತಿಯ ರಾಕ್ಷಸ(ದೆವ್ವ)ರನ್ನು ಎದುರಿಸಲು ಆಶಿಸುತ್ತಾ, ತನ್ನ ಮೊದಲ ಪ್ರೇಮಿ ಆಕ್ಟೇವಿಯಾನೊಂದಿಗೆ ಪ್ರೀತಿಯನ್ನು ಪುನರುಜ್ಜೀವನಗೊಳಿಸುವುದು ಸೇರಿದಂತೆ, ಅವಳು ಒಮ್ಮೆ ಹೊಂದಿದ್ದ ಹಳೆಯ ಮತ್ತು ಹೆಚ್ಚು ನಿರಾತಂಕದ ಜೀವನಕ್ಕೆ ಮರುಸಂಪರ್ಕಿಸುತ್ತಾಳೆ. ಇದೇ ಚಿತ್ರದ ಕಥಾಹಂದರವಾಗಿದೆ.
ಮೆಕ್ಸಿಕೊ ಮತ್ತು ಪೆರು ರಾಷ್ಟ್ರಗಳ ನಿರ್ಮಾಪಕರು ಜತೆಗೂಡಿ ನಿರ್ಮಿಸಿರುವ ಹುಸೆರಾ ಚಲನಚಿತ್ರವು 2022 ಜೂನ್ 9ರಂದು ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಚೊಚ್ಚಲ ಜಾಗತಿಕ ಪ್ರದರ್ಶನ ಕಂಡಿತ್ತು. ಅತ್ಯುತ್ತಮ ಹೊಸ ನಿರೂಪಣಾ ನಿರ್ದೇಶಕ ಪ್ರಶಸ್ತಿ ಮತ್ತು ನೋರಾ ಎಫ್ರಾನ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
 
ವೀನಸ್ (ಸ್ಪೇನ್ / 2022)

ವೀನಸ್ ಸ್ಪ್ಯಾನಿಷ್ ಭಾಷೆಯ ಅಲೌಕಿಕ ಭಯಾನಕ ಚಲನಚಿತ್ರ.  ನಗರ ಪರಿಸರದಲ್ಲಿ ಆಧುನಿಕ ಮಾಟಗಾತಿಯ ಅಂಶಗಳನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಜಂಟಿಯಾಗಿ ನಿರ್ಮಿಸುತ್ತಿರುವ 6 ಭಾಗಗಳ 'ದಿ ಫಿಯರ್ ಕಲೆಕ್ಷನ್'ನಲ್ಲಿ ಜೌಮ್ ಬಾಲಾಗುರೋ ನಿರ್ದೇಶಿಸಿದ ಚಲನಚಿತ್ರವು 2ನೇ ಪ್ರವೇಶ ಇದಾಗಿದೆ. ಎಲೆಕ್ಸ್ ಡೆ ಲಾ ಇಗ್ಲೇಷಿಯಾ ಅವರ ನಿರ್ದೇಶನದ ವೆನೆಸಿಯಾ ಫ್ರೇನಿಯಾ (2021) ಮೊದಲ ಚಲನಚಿತ್ರವಾಗಿದೆ.

ಅಮೆರಿಕದ ಚಿತ್ರಕಥೆ ಬರಹಗಾರ ಎಚ್.ಪಿ. ಲವ್‌ಕ್ರಾಫ್ಟ್‌ನ ಭಯಾನಕ ಸಣ್ಣ ಕಥೆ 'ದಿ ಡ್ರೀಮ್ಸ್ ಇನ್ ದಿ ವಿಚ್ ಹೌಸ್'ನಿಂದ ಕಥಾವಸ್ತುವು ಸ್ಫೂರ್ತಿ ಪಡೆದಿದೆ. ಬ್ಯಾಲೆ ನರ್ತಕಿಯೊಬ್ಬಳು ತಾನು ಕೆಲಸ ಮಾಡುವ ನೈಟ್‌ಕ್ಲಬ್‌ನಿಂದ ಮಾತ್ರೆಗಳು ತುಂಬಿದ ಚೀಲವನ್ನು ಕದಿಯುವುದರಿಂದ ಕಥೆ ಪ್ರಾರಂಭವಾಗುತ್ತದೆ. ಈ ಯೋಜನೆ ವಿಫಲವಾದಾಗ, ಕೊಲೆಗಡುಕರ ಗುಂಪು ಆಕೆಯನ್ನು ಹಿಂಬಾಲಿಸುತ್ತದೆ. ಅವಳು ತನ್ನ ಸಹೋದರಿಯ ಫ್ಲಾಟ್‌ನಲ್ಲಿ ಆಶ್ರಯ ಪಡೆಯಲು ನಿರ್ಧರಿಸುತ್ತಾಳೆ. ಆದರೆ, ಆ ಆಶ್ರಯವು ಅವಳನ್ನು ಹುಡುಕಿ ಬರುವ ಕೊಲೆಗಡುಕರ ಗುಂಪಿಗಿಂತ ಹೆಚ್ಚಿನ ಬೆದರಿಕೆ ಒಡ್ಡುತ್ತದೆ. ಕಥಾವಸ್ತುವಿನಿಂದ ಹಿಡಿದು ಹೆಚ್ಚು ಸಾಂಪ್ರದಾಯಿಕ ಭಯಾನಕ ಶಬ್ದಗಳು ಮತ್ತು ವಿದ್ಯುನ್ಮಾನ ಸಂಗೀತವನ್ನು ಬೆರೆಸುವ ಸೌಂಡ್ ಎಫೆಕ್ಟ್ ವರೆಗೆ, ಬಾಲಗುರೊ ಲವ್‌ಕ್ರಾಫ್ಟ್‌ನ ಚಿತ್ರೀಕರಣವು ಚಿತ್ರಪ್ರೇಮಿಗಳನ್ನು ಆಕರ್ಷಿಸುತ್ತದೆ.
 
ಹ್ಯಾಚಿಂಗ್ (ಫಿನ್ ಲ್ಯಾಂಡ್, ಸ್ವೀಡನ್ / 2022)

 

ಹಾನ್ನಾ ಬರ್ಗ್ಹೋಮ್ ನಿರ್ದೇಶಿಸಿದ ಫಿನ್ನಿಷ್ ಭಾಷೆಯ ಹ್ಯಾಚಿಂಗ್ ಚಿತ್ರವು  ಮನೋವೈಜ್ಞಾನಿಕ ಕಥಾವಸ್ತು ಹೊಂದಿರುವ ಭಯಾನಕ ಚಲನಚಿತ್ರ. 2022 ಜನವರಿ 23ರಂದು ಸನ್‌ಡಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಇದು ಪ್ರಥಮ ಪ್ರದರ್ಶನ ಕಂಡಿತು. ಇದು ಗೆರಾರ್ಡ್‌ಮರ್ ಇಂಟರ್‌ನ್ಯಾಶನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಪ್ರಿಕ್ಸ್ ಡು ಜೂರಿ ಜ್ಯೂನ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ತನ್ನ ಜನಪ್ರಿಯ ಬ್ಲಾಗ್‌ ಮೂಲಕ ಜಗತ್ತಿಗೆ ಪರಿಪೂರ್ಣ ಕುಟುಂಬದ ಚಿತ್ರವನ್ನು ಪ್ರಸ್ತುತಪಡಿಸುವ ಯುವ ಜಿಮ್ನಾಸ್ಟ್ ಟಿಂಜಾ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ಆಕೆ ತನ್ನ ತಾಯಿಯನ್ನು ಮೆಚ್ಚಿಸಲು ಹತಾಶಳಾಗುತ್ತಾಳೆ. ಒಂದು ದಿನ ಟಿಂಜಾಗೆ ಒಂದು ನಿಗೂಢ ಮೊಟ್ಟೆ ಸಿಗುತ್ತದೆ. ಅದನ್ನು ಅವಳು ಮನೆಗೆ ತರುತ್ತಾಳೆ. ಆ ಮೊಟ್ಟೆಯೊಡೆದಾಗ, ಹೊರಬರುವ ಜೀವಿಗೆ "ಅಲ್ಲಿ" ಎಂದು ಹೆಸರಿಡುತ್ತಾಳೆ. ಅದು ಟಿಂಜಾದ ಸುಪ್ತ ಮನಸ್ಸಿನ ಭಾವನೆಗಳ ಮೇಲೆ ಕಾರ್ಯ ನಿರ್ವಹಿಸುವ ಜೀವಿಯಾಗಿ ಅದು ಬೆಳೆಯುವಂತೆ ನೋಡಿಕೊಳ್ಳುತ್ತಾಳೆ. ಅವಳ ಮನದ ಭಾವನೆಗಳು ಹೊರಹಾಕುವ ಮಾಧ್ಯಮ ರೂಪದಲ್ಲಿ ಆ ಜೀವಿಯನ್ನು ಬೆಳೆಸುತ್ತಾಳೆ. ಇದು ಈ ಚಿತ್ರದ ಕಥಾವಸ್ತುವಾಗಿದೆ.
 
ಹಾಗಾದರೆ ನೀವು ಇನ್ನೂ ಏಕೆ ತಡೆ ಮಾಡುತ್ತಿದ್ದೀರಿ, ಬನ್ನಿ, ಗೋವಾದ ಪಣಜಿಯಲ್ಲಿ 2022 ನವೆಂಬರ್ 20ರಿಂದ 28ರ ವರೆಗೆ ಜರುಗಲಿರುವ ಐಎಫ್ಎಫ್ಐ 53ನೇ ಆವೃತ್ತಿಯ ಚಲನಚಿತ್ರೋತ್ಸವದಲ್ಲಿ ಒಟ್ಟಿಗೆ ಭೇಟಿಯಾಗೋಣ. ಪ್ರತಿನಿಧಿ ಮತ್ತು ಮಾಧ್ಯಮ ನೋಂದಣಿಗಾಗಿ ಸಂಪರ್ಕಿಸಿ: https://my.iffigoa.org/

*****(Release ID: 1874506) Visitor Counter : 166