ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ʻವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆʼಗೆ (ಸಿಒಪಿ 27) ಭಾರತೀಯ ನಿಯೋಗದ ನೇತೃತ್ವ ವಹಿಸಲಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ 


ಹವಾಮಾನ ಬದಲಾವಣೆಯಲ್ಲಿ ದೇಶೀಯ ಕ್ರಮ ಮತ್ತು ಬಹುಪಕ್ಷೀಯ ಸಹಕಾರಕ್ಕೆ ಭಾರತ ಬದ್ಧವಾಗಿದೆ

ಹವಾಮಾನ ಹಣಕಾಸು ಮತ್ತು ಅದರ ವ್ಯಾಖ್ಯಾನದ ಬಗ್ಗೆ ಸ್ಪಷ್ಟತೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಗಣನೀಯ ಪ್ರಗತಿಯನ್ನು ಭಾರತ ಎದುರು ನೋಡುತ್ತಿದೆ

ಹವಾಮಾನ ಹಣಕಾಸು ವಿತರಣಾ ಗುರಿಗಳನ್ನು ಪೂರೈಸಲು ʻಯುಎನ್‌ಎಫ್‌ಸಿಸಿಸಿʼನ ಹಣಕಾಸು ಕಾರ್ಯವಿಧಾನಗಳನ್ನು ಬಲಪಡಿಸುವುದು ಅನಿವಾರ್ಯವಾಗಿದೆ

ಹೊಂದಾಣಿಕೆ ಮತ್ತು ʻನಷ್ಟ ಮತ್ತು ಹಾನಿʼಯ ಪ್ರಗತಿ ಪರಸ್ಪರ ಪೂರಕವಾಗಿರುತ್ತದೆ

ಹೊಂದಾಣಿಕೆ ಕುರಿತಾದ ಜಾಗತಿಕ ಗುರಿಗೆ ಸಂಬಂಧಿಸಿದಂತೆ ಕ್ರಿಯೆಗಳು, ಸೂಚ್ಯಂಕಗಳು ಮತ್ತು ಮಾನದಂಡಗಳಲ್ಲಿ ಪ್ರಗತಿ  ಅಗತ್ಯವಾಗಿದೆ

ಜನರ ಪರ ಮತ್ತು ಭೂಗ್ರಹದ ಪರ ಅಭಿಯಾನವಾದ - ʻಪರಿಸರಕ್ಕಾಗಿ ಜೀವನಶೈಲಿʼ(LiFE) ಆಂದೋಲನಕ್ಕೆ ಸೇರುವಂತೆ ಎಲ್ಲಾ ದೇಶಗಳನ್ನು ಭಾರತ ಆಹ್ವಾನಿಸಲಿದೆ

ʻಸಿಒಪಿ 27ʼ ಅನ್ನು "ಅನುಷ್ಠಾನ"ದ ಹವಾಮಾನ ಶೃಂಗಸಭೆ ಎಂದು ಹೆಸರಿಸಿರುವುದು ಸೂಕ್ತವಾಗಿದೆ

Posted On: 04 NOV 2022 1:49PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು 2022ರ ನವೆಂಬರ್ 6ರಿಂದ 18ರವರೆಗೆ ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ ನಡೆಯಲಿರುವ ʻಯುಎನ್‌ಎಫ್‌ಸಿಸಿಸಿʼ ಸದಸ್ಯ ರಾಷ್ಟ್ರಗಳ ಸಮ್ಮೇಳನದ 27ನೇ ಅಧಿವೇಶನದಲ್ಲಿ (ಸಿಒಪಿ 27)  ಭಾಗವಹಿಸುವ ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ.

ಭಾರತವು ಈ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಮತ್ತು ʻಸಿಒಪಿ 27ʼ ರಲ್ಲಿ ಗಮನಾರ್ಹ ಫಲಿತಾಂಶಗಳಿಗಾಗಿ ಈಜಿಪ್ಟ್ ಸರಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತದೆ.

ʻಯುಎನ್‌ಎಫ್‌ಸಿಸಿಸಿʼ, ಹವಾಮಾನ ಬದಲಾವಣೆಯ ವಿಷಯಕ್ಕೆ ಸಂಬಂಧಿಸಿದಂತೆ ಸಾಮೂಹಿಕ ಮತ್ತು ಬಹುಪಕ್ಷೀಯ ಪ್ರತಿಕ್ರಿಯೆಯ ಕೇಂದ್ರವಾಗಿದೆ ಎಂಬುದನ್ನು 2022ರ ಜೂನ್‌ನಲ್ಲಿ ಬಾನ್‌ನಲ್ಲಿ ನಡೆದ ʻಅಂಗಸಂಸ್ಥೆಗಳ 56ನೇ ಅಧಿವೇಶನʼದಲ್ಲಿ ಅಭಿವೃದ್ಧಿಶೀಲ ದೇಶಗಳು ಸ್ಪಷ್ಟಪಡಿಸಿವೆ. ಒಡಂಬಡಿಕೆ ಹಾಗೂ ʻಪ್ಯಾರಿಸ್ ಒಪ್ಪಂದʼದ ಗುರಿಗಳು ಮತ್ತು ತತ್ವಗಳಿಗೆ ಅನುಸಾರವಾಗಿ ಪ್ರಮಾಣಿಕ, ಸಮತೋಲಿತ ಮತ್ತು ಸಮಗ್ರ ಅನುಷ್ಠಾನ ಆಗಬೇಕಿದೆ.

ಹವಾಮಾನ ಹಣಕಾಸು ಮತ್ತು ಅದರ ವ್ಯಾಖ್ಯಾನದ ಸ್ಪಷ್ಟತೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಗಣನೀಯ ಪ್ರಗತಿಯನ್ನು ಭಾರತ ಎದುರು ನೋಡುತ್ತಿದೆ. "ಯಾವುದನ್ನು ಮಾಪನ ಮಾಡಲಾಗುವುದೋ ಆ ಕೆಲಸವನ್ನು ಮಾಡಲಾಗುತ್ತದೆ,ʼʼ ಎಂಬ ನಾಣ್ಣುಡಿಯಂತೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಸಂಬಂಧಿತ ಉಪಕ್ರಮಗಳಿಗಾಗಿ ಹಣಕಾಸಿನ ಹರಿವಿನ ಪ್ರಮಾಣವನ್ನು ನಿಖರವಾಗಿ ನಿರ್ಣಯಿಸಲು ಅನುವಾಗಲು ಹವಾಮಾನ ಹಣಕಾಸು ವ್ಯಾಖ್ಯಾನದ ಬಗ್ಗೆ ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ. ʻಹಣಕಾಸು ಸ್ಥಾಯಿ ಸಮಿತಿʼಯು ವಿವಿಧ ವ್ಯಾಖ್ಯಾನಗಳ ಬಗ್ಗೆ ವರದಿಯನ್ನು ಸಲ್ಲಿಸುತ್ತದೆಯಾದರೂ, ಈ ಬಗ್ಗೆ ಸಾಮಾನ್ಯ ತಿಳಿವಳಿಕೆ ಪಡೆಯಲು ಈ ನಿಟ್ಟಿನಲ್ಲಿ ಉತ್ತಮ ಚರ್ಚೆಗಳನ್ನು ನಡೆಸಬೇಕೆಂದು ನಾವು ಆಶಿಸುತ್ತೇವೆ. ಈ ಪದದ ವ್ಯಾಖ್ಯಾನವು ಒಡಂಬಡಿಕೆ ಹಾಗೂ ಅದರ ಪ್ಯಾರಿಸ್ ಒಪ್ಪಂದದಲ್ಲಿ ಹವಾಮಾನ ಹಣಕಾಸು ಕುರಿತು ದೇಶಗಳು ಮಾಡಿದ ಬದ್ಧತೆಗಳಿಗೆ ಅನುಗುಣವಾಗಿರಬೇಕು.

2020ರ ವೇಳೆಗೆ ಮತ್ತು ಅದರ ನಂತರ 2025ರವರೆಗೆ ಪ್ರತಿ ವರ್ಷ 100 ಶತಕೋಟಿ ಅಮೆರಿಕನ್‌ ಡಾಲರ್‌ಗಳ ಹವಾಮಾನ ಹಣಕಾಸು ಗುರಿಯನ್ನು ಇನ್ನೂ ಸಾಧಿಸಬೇಕಿದೆ. ಸಾಮಾನ್ಯ ತಿಳುವಳಿಕೆಯ ಕೊರತೆಯಿಂದಾಗಿ, ಹವಾಮಾನ ಹಣಕಾಸಿನ ರೂಪದಲ್ಲಿ ಏನು ಹರಿದಿದೆ ಎಂಬುದರ ಬಗ್ಗೆ ಹಲವಾರು ಅಂದಾಜುಗಳು ಲಭ್ಯವಿವೆ. ಭರವಸೆ ನೀಡಿದ ಮೊತ್ತವನ್ನು ಸಾಧ್ಯವಾದಷ್ಟು ಬೇಗ ತಲುಪಬೇಕಿದೆ. ಆದರೆ, 2024ರ ನಂತರದ ಹೊಸ ಪರಿಮಾಣಾತ್ಮಕ ಗುರಿಯ ಅಡಿಯಲ್ಲಿ ಸಾಕಷ್ಟು ಸಂಪನ್ಮೂಲದ ಹರಿವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕುರಿತ ಮಹತ್ವಾಕಾಂಕ್ಷೆಯನ್ನು ಗಣನೀಯವಾಗಿ ಹೆಚ್ಚಿಸುವ ಅಗತ್ಯವಿದೆ.

ತಾತ್ಕಾಲಿಕ ಕಾರ್ಯಪಡೆಯು ನಡೆಸುವ ಸಾಮೂಹಿಕ ಪರಿಮಾಣಾತ್ಮಕ ಗುರಿಯ ಮೇಲಿನ ಚರ್ಚೆಗಳಲ್ಲಿ ಸಂಪನ್ಮೂಲ ಹರಿವಿನ ಪ್ರಮಾಣ, ಗುಣಮಟ್ಟ ಮತ್ತು ವ್ಯಾಪ್ತಿಯ ಮೇಲೆ ಗಮನ ಹರಿಸಬೇಕು. ಹಣಕಾಸು ಕಾರ್ಯವಿಧಾನಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಗಾಗಿ ಪ್ರವೇಶಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಸಲಹೆಗಳು ಸಹ ಮುಖ್ಯವಾಗಿವೆ. ಇದಲ್ಲದೆ, ಹರಿವಿನ ಪ್ರಮಾಣ ಮತ್ತು ದಿಕ್ಕಿನ ಸೂಕ್ತ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಪಾರದರ್ಶಕತೆಲ್ಲೂ ಸುಧಾರಣೆ ತರುವುದು ಅತ್ಯಗತ್ಯವಾಗಿದೆ. ತಾತ್ಕಾಲಿಕ ಕಾರ್ಯಪಡೆಯು ಮೇಲಿನ ಎಲ್ಲಾ ಅಂಶಗಳನ್ನು ಒಳಗೊಂಡ ಸಲಹೆ/ಶಿಫಾರಸುಗಳನ್ನು ಒದಗಿಸಬೇಕು.

ಹವಾಮಾನ ಹಣಕಾಸು ವಿತರಣಾ ಗುರಿಗಳನ್ನು ಪೂರೈಸಲು ʻಯುಎನ್‌ಸಿಸಿಸಿʼ ಮತ್ತು ಅದರ ಕಾರ್ಯಾಚರಣಾ ಘಟಕಗಳ ಹಣಕಾಸು ಕಾರ್ಯವಿಧಾನಗಳನ್ನು ಬಲಪಡಿಸುವುದು ಅನಿವಾರ್ಯವಾಗಿದೆ. ಅವುಗಳಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿದೆ. ನ್ಯೂನತೆಗಳನ್ನು ನಿರ್ಣಯಿಸುವಲ್ಲಿ ʻಎಸ್‌ಸಿಎಫ್‌ʼ ಪ್ರಮುಖ ಪಾತ್ರ ವಹಿಸಬಹುದು ಮತ್ತು ಅವುಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನೂ ಸೂಚಿಸಬಹುದು.

ʻಸಮಾನ ಮನಸ್ಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳʼ ಸದಸ್ಯ ರಾಷ್ಟ್ರವಾದ ಈಜಿಪ್ಟ್ ʻಸಿಒಪಿ 27ʼರ ಅಧ್ಯಕ್ಷತೆ ವಹಿಸಿದ್ದು, ಈ ಬಾರಿಯ ʻಸಿಒಪಿ 27’ಗೆ "ಅನುಷ್ಠಾನದ" ಶೃಂಗಸಭೆ ಎಂದು ಹೆಸರಿಸಿರುವುದು ಸೂಕ್ತವಾಗಿದೆ. ಗ್ಲಾಸ್ಗೋದಲ್ಲಿ ನಡೆದ 26ನೇ ಹವಾಮಾನ ಶೃಂಗಸಭೆಯಲ್ಲಿ (ʻಸಿಒಪಿ 26ʼ) ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನೀಡಿದ ಹೇಳಿಕೆಗಳು ಮತ್ತು ಅವುಗಳು ಕೈಗೊಂಡ ಕ್ರಮಗಳ ನಡುವಿನ ಅಂತರದ ವಾಸ್ತವತೆಯನ್ನು ಕಳೆದ ಹನ್ನೆರಡು ತಿಂಗಳುಗಳಲ್ಲಿ ಜಗತ್ತು ಕಂಡಿರುವುದರಿಂದ ಭಾರತವು ಈ ಕ್ರಮವನ್ನು ಸ್ವಾಗತಿಸುತ್ತದೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯಗಳಿಗೆ ಸ್ಪಂದಿಸುವ ಕ್ರಿಯಾಯೋಜನೆಗಾಗಿ ಭಾರತವು ಶೃಂಗಸಭೆಗೆ ಈಜಿಪ್ಟ್ ಅಧ್ಯಕ್ಷತೆಯನ್ನು ಬೆಂಬಲಿಸುತ್ತದೆ. ಹೊಂದಾಣಿಕೆ ಹಾಗೂ ನಷ್ಟ ಮತ್ತು ಹಾನಿ – ಇವು ಗಮನ ಕೇಂದ್ರೀಕರಿಸಲಾದ ವಿಷಯಗಳಾಗಿದ್ದು, ಈ ಎರಡು ವಿಷಯಗಳ ಪ್ರಗತಿಯು ಪರಸ್ಪರ ಪೂರಕವಾಗಿರುತ್ತದೆ.

ನಷ್ಟ ಮತ್ತು ಹಾನಿಯು ʻಸಿಒಪಿ 27ʼರ ಕಾರ್ಯಸೂಚಿಯಲ್ಲಿರಬೇಕು ಮತ್ತು ʻನಷ್ಟ ಮತ್ತು ಹಾನಿʼ ಹಣಕಾಸು ವಿಷಯದಲ್ಲಿ ನಿರ್ದಿಷ್ಟ ಪ್ರಗತಿ ಆಗಬೇಕು. ಹವಾಮಾನ ಬದಲಾವಣೆಯಿಂದಾಗಿ ಉಂಟಾಗುವ ನಷ್ಟ ಮತ್ತು ಹಾನಿಗಾಗಿ ಹಣವನ್ನು ಕ್ರೋಢೀಕರಿಸಲು ಅಥವಾ ತಲುಪಿಸಲು ಒಡಂಬಡಿಕೆಯ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಹಣಕಾಸು ಕಾರ್ಯವಿಧಾನಗಳಾದ ʻಜಿಇಎಫ್ʼ, ʻಜಿಸಿಎಫ್ʼ ಮತ್ತು ʻಅಡಾಪ್ಟೇಶನ್ ಫಂಡ್ʼಗಳಿಂದ ಸಾಧ್ಯವಾಗಿಲ್ಲ. ಈ ಕಾರ್ಯವಿಧಾನಗಳು ಕಡಿಮೆ-ನಿಧಿಯನ್ನು ಹೊಂದಿವೆ; ಧನಸಹಾಯವನ್ನ ಪಡೆಯುವುದು ತೊಡಕಾಗಿದೆ ಮತ್ತು ವಿಳಂಬವಾಗುತ್ತಿದೆ. ಹೆಚ್ಚಿನ ಧನಸಹಾಯವು ಪರಿಣಾಮ ಕಡಿಮೆ ಮಾಡುವ ಉದ್ದೇಶದ್ದಾಗಿದೆ. ಹೊಂದಾಣಿಕೆ ಧನಸಹಾಯವು ಅತ್ಯಂತ ಅಸಮರ್ಪಕವಾಗಿದೆ ಮತ್ತು ʻನಷ್ಟ ಮತ್ತು ಹಾನಿʼ ಧನಸಹಾಯವು ಬಹುಶಃ ಇಲ್ಲವೇ ಇಲ್ಲ.

ಜಿ77’ ಮತ್ತು ಚೀನಾ, ಹಣಕಾಸು ನಷ್ಟ ಮತ್ತು ಹಾನಿಗೆ ಸಂಬಂಧಿಸಿದ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದ್ದು ಇವೇ ಸಂದರ್ಭಗಳ ಆಧಾರದ ಮೇಲೇಯೇ. ಈ ವಿಷಯದ ಬಗ್ಗೆ ಹವಾಮಾನ ಕಾರ್ಯಸೂಚಿಯಲ್ಲಿ ಸೂಕ್ತ ಮತ್ತು ಅರ್ಹ ಪ್ರಾಮುಖ್ಯತೆಯನ್ನು ನೀಡುವ ಸಮಯ ಇದಾಗಿದೆ.

ʻಹೊಂದಾಣಿಕೆ ಕುರಿತಾದ ಜಾಗತಿಕ ಗುರಿʼಯ ಬಗ್ಗೆ ಕೈಗೊಂಡ ಕ್ರಮಗಳು, ಸೂಚಕಗಳು ಮತ್ತು ಮಾಪನಗಳಲ್ಲಿ ಗಮನಾರ್ಹ ಪ್ರಗತಿಯ ಅಗತ್ಯವಿದೆ. ಸಹ-ಪ್ರಯೋಜನಗಳ ಹೆಸರಿನಲ್ಲಿ, ವಿಶೇಷವಾಗಿ ಪ್ರಕೃತಿ ಆಧಾರಿತ ಪರಿಹಾರಗಳ ರೂಪದಲ್ಲಿ ಮಿತಗೊಳಿಸುವಿಕೆಯ ಯಾವುದೇ ಗುಪ್ತ ಕಾರ್ಯಸೂಚಿ ಇರಬಾರದು.

ʻಮಿತಗೊಳಿಸುವಿಕೆ ಮತ್ತು ಅನುಷ್ಠಾನದಲ್ಲಿ ವರ್ಧಿತ ಮಹತ್ವಾಕಾಂಕ್ಷೆಯ ಕಾರ್ಯ ಯೋಜನೆʼಯು ಪ್ಯಾರಿಸ್ ಒಪ್ಪಂದವು ನಿಗದಿಪಡಿಸಿದ ಗುರಿಗಳನ್ನು ಬದಲಾಯಿಸಲು ಅನುಮತಿಸಲಾಗದು. ʻಜಿಎಸ್‌ಟಿʼ ಪ್ರಕ್ರಿಯೆ ಹಾಗೂ ವರ್ಧಿತ ʻಎನ್‌ಡಿಸಿʼಗಳು ಮತ್ತು ದೀರ್ಘಕಾಲೀನ ಕಡಿಮೆ ಹೊರಸೂಸುವಿಕೆ ಅಭಿವೃದ್ಧಿ ಕಾರ್ಯತಂತ್ರಗಳ ಸಲ್ಲಿಕೆ ಸೇರಿದಂತೆ ʻಪ್ಯಾರಿಸ್ ಒಪ್ಪಂದʼದ ಇತರ ಕಾರ್ಯವಿಧಾನಗಳು ಸಮರ್ಪಕವಾಗಿವೆ. ʻಮಿತಗೊಳಿಸುವ ಕಾರ್ಯ ಯೋಜನೆʼಯಲ್ಲಿ ಉತ್ತಮ ಕಾರ್ಯವಿಧಾನಗಳು, ಹೊಸ ತಂತ್ರಜ್ಞಾನಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಹಾಗೂ ಸಾಮರ್ಥ್ಯ ವರ್ಧನೆಗಾಗಿ ಸಹಯೋಗದ ಹೊಸ ವಿಧಾನಗಳನ್ನು ಫಲಪ್ರದ ರೀತಿಯಲ್ಲಿ ಚರ್ಚಿಸಬಹುದಾಗಿದೆ. 

ಹಣಕಾಸು ವಿಷಯದ ಬಗ್ಗೆ, ಅನುಚ್ಛೇದ 2ರ ಉಪ-ಖಂಡವಾದ ಅನುಚ್ಛೇದ 2.1(ಸಿ) ಮೇಲಿನ ಚರ್ಚೆಯನ್ನು ಈ ಹಂತದಲ್ಲಿ ಒಂದು ಸ್ವತಂತ್ರ ʻಸಿಒಪಿ 27ʼ ಕಾರ್ಯಸೂಚಿಯ ವಿಷಯವಾಗಿ ತೆರೆಯಲಾಗುವುದಿಲ್ಲ. ಅನುಚ್ಛೇದ 2(1) (ಸಿ) ಅನ್ನು ಸಂಪೂರ್ಣ ಅನುಚ್ಛೇದ 2 ಮತ್ತು ಹವಾಮಾನ ಹಣಕಾಸು ಕುರಿತ ಅನುಚ್ಛೇದ 9ರ ಜೊತೆಯಲ್ಲಿ ಓದಬೇಕು. ವರ್ಷಕ್ಕೆ 100 ಶತಕೋಟಿ ಅಮೆರಿಕನ್ ಡಾಲರ್ ತಲುಪುವ ಗುರಿಗೆ ಮೊದಲ ಆದ್ಯತೆ ನೀಡಬೇಕು, ಮತ್ತು ಇದಕ್ಕಾಗಿ ಮಾರ್ಗಸೂಚಿ ಪ್ರದರ್ಶಿಸುವಂತೆ ಅಭಿವೃದ್ಧಿ ಹೊಂದಿದ ದೇಶಗಳನ್ನು ಕೇಳಬೇಕು.

ʻಪರಿಸರಕ್ಕಾಗಿ ಜೀವನಶೈಲಿʼ (LiFE) ಎಂಬ ಆಂದೋಲನಕ್ಕೆ ಕೈ ಜೋಡಿಸುವಂತೆ ಎಲ್ಲಾ ದೇಶಗಳಿಗೆ ನೀಡಿದ ಆಹ್ವಾನದ ಬಗ್ಗೆ ಭಾರತವು ಪುನರುಚ್ಛರಿಸಲಿದೆ. ಜಗತ್ತನ್ನು ನೈಸರ್ಗಿಕ ಸಂಪನ್ಮೂಲಗಳ ಅಮಿತ ಮತ್ತು ವ್ಯರ್ಥ ಬಳಕೆಯಿಂದ ಪ್ರಜ್ಞಾಪೂರ್ವಕ ಮತ್ತು ಉದ್ದೇಶಪೂರ್ವಕ ಬಳಕೆಗೆ ಬದಲಾಯಿಸಲು ಯತ್ನಿಸುವ ಜನಪರ ಹಾಗೂ ಭೂಗ್ರಹ-ಪರ ಪ್ರಯತ್ನವೇ ಈ ʻಲೈಫ್‌ʼ ಅಭಿಯಾನ.

ಹವಾಮಾನ ಬದಲಾವಣೆಯಲ್ಲಿ ದೇಶೀಯ ಕ್ರಮ ಮತ್ತು ಬಹುಪಕ್ಷೀಯ ಸಹಕಾರ ಎರಡಕ್ಕೂ ಭಾರತ ಬದ್ಧವಾಗಿದೆ. ಜೊತೆಗೆ ಮನುಕುಲದ ಮನೆಯಾಗದ ಭೂಗ್ರಹವನ್ನು ರಕ್ಷಿಸುವ ಕರೆಯ ಭಾಗವಾಗಿ ಎಲ್ಲಾ ಜಾಗತಿಕ ಪರಿಸರ ಸವಾಲುಗಳ ವಿರುದ್ಧ ಹೋರಾಟವನ್ನು ಮುಂದುವರಿಸುತ್ತದೆ. ಆದರೆ ಈ ವಿಚಾರದಲ್ಲಿ ಸಮಾನತೆ ಇರಬೇಕು ಮತ್ತು ಯಾರೂ ಹಿಂದೆ ಉಳಿಯದೆ ಎಲ್ಲರನ್ನೂ ಒಳಗೊಂಡ ಅಂತರರಾಷ್ಟ್ರೀಯ ಸಹಕಾರ ಅತ್ಯಗತ್ಯ ಎಂಬುದನ್ನು ಜಾಗತಿಕ ತಾಪಮಾನ ಏರಿಕೆಯು ಎಚ್ಚರಿಸುತ್ತದೆ. ಈ ಹಾದಿಯಲ್ಲಿ ಅತ್ಯಂತ ಅನುಕೂಲಸ್ಥ ದೇಶಗಳು ನೇತೃತ್ವ ವಹಿಸಬೇಕು.

*****


(Release ID: 1874176) Visitor Counter : 251