ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಷ್ಟ್ರ ರೋಜ್‌ಗಾರ್ ಮೇಳ ಉದ್ದೇಶಿಸಿ ಮಾತನಾಡಿದ ಪ್ರಧಾನಿ


"ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ದೃಢ ಸಂಕಲ್ಪದೊಂದಿಗೆ ಸಾಗುತ್ತಿರುವ ಮಹಾರಾಷ್ಟ್ರ ಸರ್ಕಾರ”
"ಉದ್ಯೋಗಗಳ ಸ್ವರೂಪವು ಕ್ಷಿಪ್ರವಾಗಿ ಬದಲಾಗುತ್ತಿದೆ ಮತ್ತು ಸರ್ಕಾರದಿಂದಲೂ ಸಹ ನಾನಾ ಬಗೆಯ ಉದ್ಯೋಗಗಳಿಗೆ ನಿರಂತರ ಅವಕಾಶಗಳ ಸೃಷ್ಟಿ"

"ದಲಿತ-ಹಿಂದುಳಿದ, ಬುಡಕಟ್ಟು, ಸಾಮಾನ್ಯ ವರ್ಗ ಮತ್ತು ಮಹಿಳೆಯರು ಸೇರಿ ಎಲ್ಲರಿಗೂ ಸಮಾನ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶ ಲಭ್ಯ"

ಮಹಾರಾಷ್ಟ್ರಕ್ಕೆ 2 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸುಮಾರು 225 ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ"

Posted On: 03 NOV 2022 12:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಮಹಾರಾಷ್ಟ್ರ ಸರ್ಕಾರದ ರೋಜ್‌ಗಾರ್  ಮೇಳವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿ ಅವರು ರೋಜ್‌ಗಾರ್ ಮೇಳದ ಪರಿಕಲ್ಪನೆಗೆ ಕೇಂದ್ರ ಮಟ್ಟದಲ್ಲಿ ಧನ್ತೇರಸ್ ದಿನದಂದು ಚಾಲನೆ ನೀಡಿದ್ದರು. ಇದು ಕೇಂದ್ರ ಸರ್ಕಾರದ ಮಟ್ಟದಲ್ಲಿ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಅಭಿಯಾನದ ಆರಂಭವಾಗಿದೆ. ಅಂದಿನಿಂದ  ಪ್ರಧಾನಿ ಅವರು ಗುಜರಾತ್ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರಗಳ ರೋಜ್ ಗಾರ್ ಮೇಳಗಳನ್ನು ಉದ್ದೇಶಿಸಿ ಮಾತನಾಡಿದ್ದರು. “ಅತ್ಯಲ್ಪ ಸಮಯದಲ್ಲಿ ರೋಜ್‌ಗಾರ್ ಮೇಳದ ಸಂಘಟಿಸಿರುವುದು,  ಯುವಕರಿಗೆ ಉದ್ಯೋಗವನ್ನು ಒದಗಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ದೃಢವಾದ ಸಂಕಲ್ಪದೊಂದಿಗೆ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಉದ್ಯೋಗ ಮೇಳಗಳನ್ನು ಮಹಾರಾಷ್ಟ್ರದಲ್ಲಿ ಇನ್ನಷ್ಟು ವಿಸ್ತರಿಸಲಾಗುವುದು ಎಂದು ನನಗೆ ಸಂತೋಷವಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮಹಾರಾಷ್ಟ್ರದ ಗೃಹ ಇಲಾಖೆ ಹಾಗೂ ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಾವಿರಾರು ನೇಮಕಾತಿ ನಡೆಯಲಿವೆ.ಈ ಅಮೃತ ಕಾಲದಲ್ಲಿ ದೇಶವು ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧನೆಗೆ ಕಾರ್ಯನಿರ್ವಹಿಸುತ್ತಿದೆ, ಅದರಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಪ್ರಧಾನಿ ಪುನರುಚ್ಚರಿಸಿದರು. "ಬದಲಾದ ಕಾಲಘಟ್ಟದಲ್ಲಿ ಉದ್ಯೋಗಗಳ ಸ್ವರೂಪವು ವೇಗವಾಗಿ ಬದಲಾಗುತ್ತಿದೆ, ಸರ್ಕಾರವು ವಿವಿಧ ರೀತಿಯ ಉದ್ಯೋಗಗಳಿಗೆ ನಿರಂತರವಾಗಿ ಅವಕಾಶಗಳನ್ನು ಸೃಷ್ಟಿಸುತ್ತಿದೆ" ಎಂದು ಅವರು ಹೇಳಿದರು. ಮುದ್ರಾ ಯೋಜನೆಯಲ್ಲಿ ಯುವಕರಿಗೆ ಖಾತ್ರಿರಹಿತ ಸಾಲ ನೀಡಲಾಗುತ್ತಿದ್ದು, ಈಗಾಗಲೇ 20 ಸಾವಿರ ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು. ಅದೇ ರೀತಿ, ನವೋದ್ಯಮಗಳು ಮತ್ತು ಎಂಎಸ್‌ಎಂಇ ವಲಯವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಲಾಗುತ್ತಿದೆ. ಮಹಾರಾಷ್ಟ್ರದ ಯುವಕರು ಇದರ ಲಾಭ ಪಡೆದಿದ್ದಾರೆ ಎಂದು ಅವರು ಹೇಳಿದರು.

"ದಲಿತ-ಹಿಂದುಳಿದ, ಬುಡಕಟ್ಟು, ಸಾಮಾನ್ಯ ವರ್ಗ ಮತ್ತು ಮಹಿಳೆಯರು ಸೇರಿ ಎಲ್ಲರಿಗೂ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಸಮಾನ ಅವಕಾಶಗಳನ್ನು ದೊರಕಿಸಲು ಸರ್ಕಾರದ ಪ್ರಯತ್ನಗಳ ಪರಿಣಾಮ ಎಲ್ಲರಿಗೂ ಅವಕಾಶಗಳು ಲಭ್ಯವಾಗುತ್ತಿರುವುದು ಪ್ರಮುಖ ಸಂಗತಿಯಾಗಿದೆ" ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ 8 ಕೋಟಿ ಮಹಿಳೆಯರಿಗೆ 5 ಲಕ್ಷ ಕೋಟಿ ರೂಪಾಯಿ ನೆರವು ನೀಡಿರುವನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು.

"ಇಂದು ದೇಶಾದ್ಯಂತ ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಸರ್ಕಾರ ಮಾಡುತ್ತಿರುವ ದಾಖಲೆ ಹೂಡಿಕೆಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮಹಾರಾಷ್ಟ್ರವನ್ನು ಉಲ್ಲೇಖಿಸಿ, ರಾಜ್ಯಕ್ಕೆ 2 ಲಕ್ಷ ಕೋಟಿಗೂ ಅಧಿಕ ಮೌಲ್ಯದ 225 ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಪ್ರಧಾನಿ ತಿಳಿಸಿದರು. 75 ಸಾವಿರ ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳು ಮತ್ತು 50 ಕೋಟಿ ರೂ. ಮೌಲ್ಯದ ಆಧುನಿಕ ರಸ್ತೆಗಳ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. "ಈ ಯೋಜನೆಗಳ ಕಾಮಗಾರಿ ನಡೆಯುತ್ತಿವೆ ಅಥವಾ ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿವೆ" ಎಂದು ಅವರು ಹೇಳಿದರು. "ಮೂಲಸೌಕರ್ಯಕ್ಕಾಗಿ ಸರ್ಕಾರವು ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸುತ್ತಿರುವುದರಿಂದ ಅದರ ಪರಿಣಾಮವಾಗಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ" ಎಂದು ಪ್ರಧಾನಿ ಮಾತು ಮುಗಿಸಿದರು.

*****



(Release ID: 1873436) Visitor Counter : 150