ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಹಿಮಾಚಲ ಪ್ರದೇಶದ ಉನಾದಿಂದ ನವದೆಹಲಿಗೆ `ವಂದೇಭಾರತ್ ಎಕ್ಸ್‌ಪ್ರೆಸ್‌ʼ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ

Posted On: 13 OCT 2022 10:47AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದುಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಅಂಬ್ ಅಂದೌರಾದಿಂದ ನವದೆಹಲಿಗೆ ಹೊಸ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು.

ಪ್ರಧಾನಮಂತ್ರಿಯವರು ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಬೋಗಿಗಳನ್ನು ಪರಿಶೀಲಿಸಿದರು ಮತ್ತು ರೈಲಿನಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಶ್ರೀ ಮೋದಿ ಅವರು ʻವಂದೇ ಭಾರತ್ ಎಕ್ಸ್‌ಪ್ರೆಸ್ʼನ ಲೋಕೋಮೋಟಿವ್ ಎಂಜಿನ್‌ನ ನಿಯಂತ್ರಣ ಕೇಂದ್ರವನ್ನು ಪರಿಶೀಲಿಸಿದರು. ಉನಾ ರೈಲ್ವೆ ನಿಲ್ದಾಣವನ್ನು ಸಹ ಅವರು ಪರಿಶೀಲಿಸಿದರು.

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಅಂಬ್ ಅಂದೌರಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈರಾಮ್ ಠಾಕೂರ್, ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಸಾಥ್‌ ನೀಡಿದರು.

 ಈ ರೈಲು ಸೇವೆಯ ಅರಂಭವು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಹಾಗೂ ಆರಾಮದಾಯಕ ಮತ್ತು ವೇಗದ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ. ಇದರಿಂದ ಉನಾದಿಂದ ನವದೆಹಲಿಗೆ ಪ್ರಯಾಣದ ಸಮಯವು ಎರಡು ಗಂಟೆಗಳಷ್ಟು ಕಡಿಮೆಯಾಗಲಿದೆ. ಅಂಬ್ ಅಂದೌರಾದಿಂದ ನವದೆಹಲಿಗೆ ಚಲಿಸುವ ಇದು ದೇಶದಲ್ಲಿ ಪರಿಚಯಿಸಲಾದ ನಾಲ್ಕನೇ ʻವಂದೇ ಭಾರತ್ʼ ರೈಲಾಗಿದೆ. ಹಿಂದಿನದಕ್ಕೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾಗಿದ್ದು, ಹೆಚ್ಚು ಹಗುರವಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ʻವಂದೇ ಭಾರತ್ 2.0ʼ ಕೇವಲ 52 ಸೆಕೆಂಡುಗಳಲ್ಲಿ 0 ರಿಂದ 100 ಕಿಲೋಮೀಟರ್ ವೇಗವನ್ನು ತಲುಪಬಲ್ಲದು ಮತ್ತು ಗಂಟೆಗೆ ಗರಿಷ್ಠ 180 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು. ಸುಧಾರಿತ ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ಹಿಂದಿನ ಆವೃತ್ತಿಯ 430 ಟನ್‌ಗಳಿಗೆ ಹೋಲಿಸಿದರೆ 392 ಟನ್ ತೂಕವನ್ನು ಹೊಂದಿರುತ್ತದೆ. ಇದು ವೈ-ಫೈ ಕಂಟೆಂಟ್ ಆನ್-ಡಿಮ್ಯಾಂಡ್ ಸೌಲಭ್ಯವನ್ನು ಸಹ ಹೊಂದಿರುತ್ತದೆ. ಪ್ರತಿ ಬೋಗಿಯು ಪ್ರಯಾಣಿಕರ ಮಾಹಿತಿ ಒದಗಿಸುವ 32" ಪರದೆಗಳನ್ನು ಹೊಂದಿದೆ. ಹಿಂದಿನ ಆವೃತ್ತಿಯಲ್ಲಿ ಇಂತಹ ಪರದೆಗಳ ಗಾತ್ರ 24" ಮಾತ್ರವಿತ್ತು. ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼ ಕೂಡ ಪರಿಸರ ಸ್ನೇಹಿಯಾಗಿರಲಿದ್ದು, ಎಸಿಗಳು ಶೇಕಡಾ 15ರಷ್ಟು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತವೆ. ಇದರ ಟ್ರ್ಯಾಕ್ಷನ್‌ ಮೋಟರ್‌  ಧೂಳು ಮುಕ್ತ ಸ್ವಚ್ಛವಾದ ಗಾಳಿಯಿಂದ ತಂಪಾಗುವುದರಿಂದ, ಪ್ರಯಾಣವು ಹೆಚ್ಚು ಆರಾಮದಾಯಕವಾಗಿರುತ್ತದೆ. ಈ ಹಿಂದೆ ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರಿಗೆ ಮಾತ್ರ ಒದಗಿಸಲಾದ ಸೈಡ್ ರೆಕ್ಲೈನರ್ ಸೀಟ್ ಸೌಲಭ್ಯವನ್ನು ಈಗ ಎಲ್ಲಾ ದರ್ಜೆಗಳಿಗೂ ಲಭ್ಯವಾಗುವಂತೆ ಮಾಡಲಾಗುವುದು. ಎಕ್ಸೆಕ್ಯೂಟಿವ್‌ ಬೋಗಿಗಳು 180-ಡಿಗ್ರಿ ತಿರುಗುವ ಆಸನಗಳ ಹೆಚ್ಚುವರಿ ವೈಶಿಷ್ಟ್ಯವನ್ನು ಹೊಂದಿವೆ.

ʻವಂದೇ ಭಾರತ್ ಎಕ್ಸ್‌ಪ್ರೆಸ್‌ʼನ ಹೊಸ ವಿನ್ಯಾಸದಲ್ಲಿ, ವಾಯು ಶುದ್ಧೀಕರಣಕ್ಕಾಗಿ ಅದರ ರೂಫ್-ಮೌಂಟೆಡ್ ಪ್ಯಾಕೇಜ್ ಯೂನಿಟ್ʼನಲ್ಲಿ(ಆರ್‌ಎಂಪಿಯು) ʻಫೋಟೊ-ಕೆಟಲಿಸ್ಟಿಕ್‌ ಅಲ್ಟ್ರಾವೈಲಟ್‌ʼ ವಾಯು ಶುದ್ಧೀಕರಣ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.  ಚಂಡೀಗಢದ ʻಸೆಂಟ್ರಲ್ ಸೈಂಟಿಫಿಕ್ ಇನ್ಸ್‌ಟ್ರುಮೆಂಟ್ಸ್‌ ಆರ್ಗನೈಸೇಷನ್ʼ (ಸಿಎಸ್ಐಒ) ಶಿಫಾರಸು ಮಾಡಿದಂತೆ, ಈ ವ್ಯವಸ್ಥೆಯನ್ನು ʻಆರ್‌ಎಂಪಿಯುʼನ ಎರಡೂ ತುದಿಗಳಲ್ಲಿ ವಿನ್ಯಾಸಗೊಳಿಸ್ಥಾಪಿಸಲಾಗಿದೆ. ಇದುಒಳಗೆ ಪ್ರವೇಶಿಸಿಸುವ ತಾಜಾ ಗಾಳಿ ಮತ್ತು ಒಳಗಿನಿಂದ ಮರಳುವ ಗಾಳಿಯನ್ನು ಶುದ್ಧೀಕರಿಸಿ ಕೀಟಾಣುಗಳು, ಬ್ಯಾಕ್ಟೀರಿಯಾ, ವೈರಸ್‌ ಇತ್ಯಾದಿಗಳಿಂದ ಮುಕ್ತವಾಗಿಸುತ್ತದೆ.

ʻವಂದೇ ಭಾರತ್ ಎಕ್ಸ್‌ಪ್ರೆಸ್‌- 2.0ʼಹತ್ತಾರು ಉತ್ಕೃಷ್ಟ ಮತ್ತು ವಿಮಾನದಂತಹ ಪ್ರಯಾಣದ ಅನುಭವಗಳನ್ನು ನೀಡುತ್ತದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ʻಟ್ರೈನ್ ಕೊಲಿಷನ್ ಅವಾಯ್ಡನ್ಸ್ ಸಿಸ್ಟಮ್ʼ- ʻಕವಚ್ʼ ಸೇರಿದಂತೆ ಹಲವು ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

*****

 



(Release ID: 1867385) Visitor Counter : 197