ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ತುನಾ-ಟೆಕ್ರಾದಲ್ಲಿ ಕಂಟೈನರ್ ಟರ್ಮಿನಲ್ ಅಭಿವೃದ್ಧಿ, ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಬಿಒಟಿ) ಆಧಾರದಲ್ಲಿ ದೀನದಯಾಳ್ ಬಂದರು ಅಭಿವೃದ್ಧಿಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ

Posted On: 12 OCT 2022 4:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ತುನಾ-ಟೆಕ್ರಾದಲ್ಲಿ ಕಂಟೈನರ್ ಟರ್ಮಿನಲ್ ಅಭಿವೃದ್ಧಿ, ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿ(ಪಿಪಿಪಿ) ಯಲ್ಲಿ ಯೋಜನೆಯ ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಬಿಒಟಿ) ಆಧಾರದ ಮೇಲೆ ದೀನದಯಾಳ್ ಬಂದರು ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ.

ಯೋಜನೆಯ ಅಂದಾಜು ವೆಚ್ಚ 4,243.64 ಕೋಟಿ ರೂ. ಸರ್ಕಾರದ ಅಧಿಕೃತ ನಿರ್ಮಾಣ ಗುತ್ತಿಗೆದಾರರ(ರಿಯಾಯಿತಿದಾರ) ಭಾಗವಾಗಲಿದ್ದು, ಮತ್ತು ಸಾಮಾನ್ಯ ಬಳಕೆ ಸೌಲಭ್ಯಗಳ ಅಭಿವೃದ್ಧಿಗಾಗಿ ಅಂದಾಜು ವೆಚ್ಚ 296.20 ಕೋಟಿ ರೂ. ಗುತ್ತಿಗೆ ನೀಡುವ ರಿಯಾಯಿತಿ ಪ್ರಾಧಿಕಾರಕ್ಕೆ ಹಂಚಿಕೆ ಆಗಲಿದೆ.

ಪರಿಣಾಮ: 

ಯೋಜನೆಯ ಕಾರ್ಯಾರಂಭವಾದ ನಂತರ, ಇದು ಹಡಗುಗಳ ಕಂಟೈನರ್(ಸರಕು ಸಾಗಣೆಯ ಬೃಹತ್ ಲೋಹದ ಪೆಟ್ಟಿಗೆ) ಸರಕು ಸಂಚಾರದ ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಈ ಯೋಜನೆ ಕಾರ್ಯಗತಗೊಳಿಸಿದರೆ, 2025ರಿಂದ 1.88 ದಶಲಕ್ಷ ಟಿಇಯು(twenty-foot equivalent unit- 20 ಅಡಿ ಸಮಾನ ಘಟಕ) ಸರಕು ಸಾಗಣೆಯ ನಿವ್ವಳ ಕೊರತೆಯನ್ನು ನೀಗಿಸಲಿದೆ.  ತುನಾ-ಟೆಕ್ರಾದಲ್ಲಿ ಅತ್ಯಾಧುನಿಕ ಕಂಟೇನರ್ ಟರ್ಮಿನಲ್ ಅಭಿವೃದ್ಧಿಯು ಮುಚ್ಚಿದ(ಕ್ಲೋಸ್ಡ್) ಕಂಟೇನರ್ ಟರ್ಮಿನಲ್ ಆಗಿರುವುದರಿಂದ ಅದು, ಹಲವು ಕಾರ್ಯತಂತ್ರ ಪ್ರಯೋಜನಗಳನ್ನು ನೀಡುತ್ತದೆ. ಭಾರತದ ಉತ್ತರ ಭಾಗದ (ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ) ವಿಶಾಲ ಒಳನಾಡಿನಲ್ಲಿ ಇದು ಸೇವೆ ಸಲ್ಲಿಸಲಿದೆ.  ಕಾಂಡ್ಲಾದ ವ್ಯಾಪಾರ ವಹಿವಾಟು ಸಾಮರ್ಥ್ಯವನ್ನು ಹೆಚ್ಚಿಸುವ ಜತೆಗೆ, ಯೋಜನೆಯು ದೇಶದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಸುತ್ತದೆ.

ಯೋಜನೆಯ ವಿವರ:

i.    ಪ್ರಸ್ತಾವಿತ ಯೋಜನೆಯನ್ನು ಖಾಸಗಿ ಡೆವಲಪರ್ ಅಥವಾ ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ(ಬಿಒಟಿ) ಆಪರೇಟರ್‌ ಗಳಿಂದ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಗುತ್ತಿಗೆ(ರಿಯಾಯಿತಿ) ಒಪ್ಪಂದದ ಅಡಿ, ಯೋಜನೆಯ ವಿನ್ಯಾಸ, ಇಂಜಿನಿಯರಿಂಗ್, ಹಣಕಾಸು, ಖರೀದಿ, ಅನುಷ್ಠಾನ, ಕಾರ್ಯಾಚರಣೆ, ನಿರ್ವಹಣೆ ಮತ್ತು ನಿಗಾ ವಹಿಸಲು ಗುತ್ತಿದಾರ ಜವಾಬ್ದಾರನಾಗಿರುತ್ತಾನೆ. ಬಿಒಟಿ ಆಪರೇಟರ್ ಮತ್ತು ರಿಯಾಯಿತಿ ಪ್ರಾಧಿಕಾರವು ದೀನದಯಾಳ್ ಪೋರ್ಟ್ ಗೊತ್ತುಪಡಿಸಿದ ಸರಕುಗಳನ್ನು ನಿರ್ವಹಿಸಲು 30 ವರ್ಷಗಳ ಅವಧಿಗೆ ಅಧಿಕಾರ ಹೊಂದಿರುತ್ತವೆ. ರಿಯಾಯತಿ ಪ್ರಾಧಿಕಾರವು ಸಾಮಾನ್ಯ ಪೋಷಕ ಮೂಲಸೌಕರ್ಯಗಳಾದ ಸಾಮಾನ್ಯ ಪ್ರವೇಶ ಮಾರ್ಗಗಳು ಮತ್ತು ಸಾಮಾನ್ಯ ರಸ್ತೆಗಳ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುತ್ತದೆ.

ii.    ಈ ಯೋಜನೆಯು 4,243.64 ಕೋಟಿ ರೂ. ವೆಚ್ಚದಲ್ಲಿ 3 ಹಡಗುಗಳನ್ನು ಏಕಕಾಲದಲ್ಲಿ ನಿರ್ವಹಿಸಲು ಅಗತ್ಯವಾದ ಸಾಗರೋತ್ತರ ಹಡುಗುಗಳ ತಂಗುದಾಣಗಳ ನಿರ್ಮಾಣ ಮತ್ತು ವಾರ್ಷಿಕ 2.19 ದಶಲಕ್ಷ ಟಿಇಯು ನಿರ್ವಹಣಾ ಸಾಮರ್ಥ್ಯವನ್ನು ಒಳಗೊಂಡಿದೆ.

iii.    ಆರಂಭದಲ್ಲಿ ಯೋಜನೆಯು 6000 ಟಿಇಯುಗಳ 14 ಮೀಟರ್ ಡ್ರಾಫ್ಟ್(ಭಾರ ಎಳೆಯುವ) ಹಡಗುಗಳನ್ನು ಪೂರೈಸುತ್ತದೆ. 14 ಮೀಟರ್  ಡ್ರಾಫ್ಟ್ ಕಂಟೇನರ್ ಹಡಗುಗಳನ್ನು ನ್ಯಾವಿಗೇಟ್ ಮಾಡಲು ರಿಯಾಯಿತಿ ಪ್ರಾಧಿಕಾರವು 15.50 ಮೀಟರ್ ಅಂತರದಲ್ಲಿ ಸಾಮಾನ್ಯ ಪ್ರವೇಶ ಸ್ಥಳ(common Access Channel )ವನ್ನು ನಿರ್ಮಾಣ ಮಾಡುತ್ತದೆ ಮತ್ತು ನಿರ್ವಹಿಸುತ್ತದೆ. ಗುತ್ತಿಗೆ ಅವಧಿಯಲ್ಲಿ, ಯೋಜನೆಯ ಗುತ್ತಿಗೆದಾರ ತಂಗುದಾಣವನ್ನು ವಿಸ್ತರಿಸುವ ಮೂಲಕ 18 ಮೀಟರ್ ವರೆಗಿನ ಡ್ರಾಫ್ಟ್‌ ಹಡಗುಗಳನ್ನು ನಿರ್ವಹಿಸುವ ಸ್ವಾತಂತ್ರ್ಯ ಹೊಂದಿರುತ್ತಾನೆ. ಡ್ರಾಫ್ಟ್‌ ಹಡಗುಗಳನ್ನು ಹೆಚ್ಚಿಸುವ ಪ್ರಸ್ತಾಪದ ಸಮಯದಲ್ಲಿ ವೆಚ್ಚ ಹಂಚಿಕೆಯ ಕುರಿತು ರಿಯಾಯಿತಿ ಪ್ರಾಧಿಕಾರ ಮತ್ತು ಗುತ್ತಿಗೆದಾರನ ನಡುವಿನ ಪರಸ್ಪರ ತಿಳಿವಳಿಕೆ ಮತ್ತು ಒಪ್ಪಂದದ ಆಧಾರದ ಮೇಲೆ ಸಾಮಾನ್ಯ ಪ್ರವೇಶ ಸ್ಥಳದ ವಿಸ್ತೀರ್ಣವನ್ನು ಹೆಚ್ಚಿಸಬಹುದು.

ಹಿನ್ನೆಲೆ:

ದೀನದಯಾಳ್ ಬಂದರು ಭಾರತದ 12 ಪ್ರಮುಖ ಬಂದರುಗಳಲ್ಲಿ ಒಂದಾಗಿದೆ.  ಇದು ಭಾರತದ ಪಶ್ಚಿಮ ಕರಾವಳಿಯಲ್ಲಿ ಗುಜರಾತ್ ರಾಜ್ಯದ ಕಚ್ ಕೊಲ್ಲಿಯಲ್ಲಿದೆ. ದೀನದಯಾಳ್ ಬಂದರು ಪ್ರಾಥಮಿಕವಾಗಿ ಉತ್ತರ ಭಾರತಕ್ಕೆ ಸೇವೆ ಸಲ್ಲಿಸುತ್ತದೆ. ಇದರಲ್ಲಿ ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಭೂ ಪ್ರದೇಶಗಳು ಸೇರಿವೆ.

******(Release ID: 1867293) Visitor Counter : 133