ಚುನಾವಣಾ ಆಯೋಗ
azadi ka amrit mahotsav

ಭಾರತ ಚುನಾವಣಾ ಆಯೋಗವು ಆಕಾಶವಾಣಿ ಸಹಯೋಗದೊಂದಿಗೆ ಮತದಾರರ ಜಾಗೃತಿಗಾಗಿ  ‘ಮತದಾತ  ಜಂಕ್ಷನ್ʼರೇಡಿಯೋ ಸರಣಿಯನ್ನು ಪ್ರಾರಂಭಿಸಿದೆ


ವಿವಿಧ ಭಾರತಿ ಕೇಂದ್ರಗಳು, ಎಫ್‌ಎಂ ರೇನ್‌ಬೋ, ಎಫ್‌ಎಂ ಗೋಲ್ಡ್ ಮತ್ತು ಆಕಾಶವಾಣಿಯ ಪ್ರಾಥಮಿಕ ಚಾನೆಲ್‌ಗಳಲ್ಲಿ ತಲಾ 15 ನಿಮಿಷಗಳ 52 ಸಂಚಿಕೆಗಳು ಪ್ರತಿ ಶುಕ್ರವಾರ ಪ್ರಸಾರವಾಗಲಿವೆ

230 ಆಕಾಶವಾಣಿ ಚಾನಲ್‌ಗಳಲ್ಲಿ 23 ಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತದೆ 

ಮತದಾತ ಜಂಕ್ಷನ್‌ನ ಬಿಡುಗಡೆಯಲ್ಲಿ ನಟ ಮತ್ತು ರಾಜ್ಯ ಐಕಾನ್ ಶ್ರೀ ಪಂಕಜ್ ತ್ರಿಪಾಠಿ – ಅವರನ್ನು ಇಸಿಐನ ರಾಷ್ಟ್ರೀಯ ಐಕಾನ್ ಎಂದು ಘೋಷಿಸಲಾಗಿದೆ

ಮತದಾತ ಜಂಕ್ಷನ್‌ನ ಮೊದಲ ಸಂಚಿಕೆಯು ಅಕ್ಟೋಬರ್ 7, 2022 ರಂದು ಪ್ರಸಾರವಾಗಲಿದೆ

Posted On: 03 OCT 2022 5:03PM by PIB Bengaluru

ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಶ್ರೀ ಅನುಪ್ ಚಂದ್ರ ಪಾಂಡೆ ಅವರು ಇಂದು ನವದೆಹಲಿಯ ಆಕಾಶವಾಣಿ ರಂಗ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವರ್ಷದಾದ್ಯಂತದ ಮತದಾರರ ಜಾಗೃತಿ ಕಾರ್ಯಕ್ರಮ ‘ಮತದಾತ ಜಂಕ್ಷನ್’ಗೆ ಚಾಲನೆ ನೀಡಿದರು. 'ಮತದಾತ ಜಂಕ್ಷನ್' ಭಾರತದ ಚುನಾವಣಾ ಆಯೋಗವು ಆಕಾಶವಾಣಿ ಸಹಯೋಗದೊಂದಿಗೆ ನಿರ್ಮಿಸಿರುವ 52 ಸಂಚಿಕೆಗಳ ರೇಡಿಯೊ ಸರಣಿಯಾಗಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು, ಪ್ರಸಾರ ಭಾರತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಆಕಾಶವಾಣಿ ಸುದ್ದಿವಿಭಾಗದ ಮಹಾನಿರ್ದೇಶಕರು ಮತ್ತು ಭಾರತ ಚುನಾವಣಾ ಆಯೋಗದ ಐಕಾನ್ ಮತ್ತು ನಟ ಶ್ರೀ ಪಂಕಜ್ ತ್ರಿಪಾಠಿ ಅವರು ಉಪಸ್ಥಿತರಿದ್ದರು.
 

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು, ಆಕಾಶವಾಣಿಯ ಸಹಯೋಗದಲ್ಲಿ ನಿರ್ಮಿಸಲಾದ ಮತದಾತ ಜಂಕ್ಷನ್ ಕಾರ್ಯಕ್ರಮವು ದೇಶಾದ್ಯಂತ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಪ್ರಬಲ ವೇದಿಕೆಯಾಗಲಿದೆ. ಮಾಹಿತಿ ಮತ್ತು ಮನರಂಜನೆಯೊಂದಿಗೆ ಕಾರ್ಯಕ್ರಮವು ನಿರ್ದಿಷ್ಟವಾಗಿ ಮತದಾನದ ಬಗ್ಗೆ ನಗರಗಳ ಜನರ ನಿರಾಸಕ್ತಿಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ಸಂವಾದಾತ್ಮಕ ಸಂವಹನ ಸ್ವರೂಪದಲ್ಲಿ ಮುಕ್ತ, ನ್ಯಾಯಯುತ, ಪಾರದರ್ಶಕ, ಪ್ರಲೋಭನೆ ಮುಕ್ತ, ಪ್ರವೇಶಿಸಬಹುದಾದ ಮತ್ತು ಎಲ್ಲರನ್ನೊಳಗೊಂಡ ಚುನಾವಣೆಗಳನ್ನು ನಡೆಸುವಲ್ಲಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸುತ್ತದೆ ಎಂದರು.

ಮತದಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಚುನಾವಣಾ ಆಯೋಗದ ಜೊತೆಗಿನ ಒಡನಾಟಕ್ಕಾಗಿ ನಟ ಮತ್ತು ಚುನಾವಣಾ ಆಯೋಗದ ರಾಜ್ಯ ಐಕಾನ್ ಶ್ರೀ ಪಂಕಜ್ ತ್ರಿಪಾಠಿಯವರನ್ನು ಅಭಿನಂದಿಸಿದ ಶ್ರೀ ರಾಜೀವ್ ಕುಮಾರ್ ಅವರು, ಈ ಉದ್ದೇಶಕ್ಕಾಗಿ ಅವರಿಗಿರುವ ಬದ್ಧತೆ ಮತ್ತು ದೇಶಾದ್ಯಂತ ಅವರಿಗಿರುವ ವ್ಯಾಪಕ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀ ಪಂಕಜ್ ತ್ರಿಪಾಠಿ ಅವರನ್ನು ಭಾರತದ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಆಗಿ ಘೋಷಿಸುತ್ತಿರುವುದಾಗಿ ಹೇಳಿದರು.
 

ಚುನಾವಣಾ ಆಯುಕ್ತ ಶ್ರೀ ಅನುಪ್ ಚಂದ್ರ ಪಾಂಡೆ ಅವರು, ಅನಾದಿ ಕಾಲದಿಂದಲೂ, ಆಕಾಶವಾಣಿಯು ಪ್ರಜಾಪ್ರಭುತ್ವದ ಮನೋಭಾವವನ್ನು ಬಲಪಡಿಸಲು ತನ್ನ ಪ್ರಬಲ ಧ್ವನಿಯ ಮೂಲಕ ಜನಸಾಮಾನ್ಯರನ್ನು ಉತ್ತೇಜಿಸುತ್ತಿದೆ ಎಂದರು. ಮೊದಲ ಸಾರ್ವತ್ರಿಕ ಚುನಾವಣೆಗಳ ಸಮಯದಿಂದಲೂ, ಆಕಾಶವಾಣಿಯು ತನ್ನ ಅಗಾಧವಾದ ವ್ಯಾಪ್ತಿ ಮತ್ತು ವೈವಿಧ್ಯಮಯ ಪ್ರೇಕ್ಷಕರಿಗೆ ತಲುಪುತ್ತಿದೆ, ಇದು ದೇಶದಾದ್ಯಂತದ ನಾಗರಿಕರೊಂದಿಗೆ ಸಂವಹನದ ಪ್ರಾಥಮಿಕ ಮಾಧ್ಯಮವಾಗಿದೆ ಎಂದು ಅವರು ಹೇಳಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಪಂಕಜ್ ತ್ರಿಪಾಠಿ ಅವರು ಮೊದಲ ಬಾರಿಗೆ ಮತ ಚಲಾಯಿಸಿದ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು ಮತ್ತು ಆ ಪ್ರಕ್ರಿಯೆಯು ತನಗೆ ಮತದಾನದ ಹಕ್ಕು ಮಾತ್ರವಲ್ಲದೆ, ಪ್ರಜಾಪ್ರಭುತ್ವದಲ್ಲಿ ಗೌರವದ ಹಕ್ಕನ್ನು ಕೊಡುಗೆಯಾಗಿ ನೀಡಿತು ಎಂದರು. ಮತದಾರರನ್ನು ತಲುಪಲು ಭಾರತ ಚುನಾವಣಾ ಆಯೋಗವು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಎಲ್ಲಾ ಯುವ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಆಯ್ಕೆಗಳನ್ನು ಪ್ರತಿಬಿಂಬಿಸಲು ಮತ್ತು ತಮ್ಮ ಧ್ವನಿಯನ್ನು ತಿಳಿಸಲು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಒತ್ತಾಯಿಸಿದರು.

 

ಮಹಾನಿರ್ದೇಶಕ (ಮಾಧ್ಯಮ) ಶ್ರೀಮತಿ ಶೆಫಾಲಿ ಶರಣ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ‘ಮತದಾತ ಜಂಕ್ಷನ್: ಹರ್ ವೋಟರ್ ಕಾ ಅಪ್ನಾ ಸ್ಟೇಷನ್’ಕಾರ್ಯಕ್ರಮದ ಕುರಿತು ವಿವರವಾದ ಮಾಹಿತಿ ನೀಡಿದರು. ಭಾರತ ಚುನಾವಣಾ ಆಯೋಗ ಮತ್ತು ಆಕಾಶವಾಣಿ  ವಿಶ್ವಾಸಾರ್ಹತೆ ಮತ್ತು ತಳಮಟ್ಟದ ಸಂಪರ್ಕಕ್ಕೆ ಹೆಸರುವಾಸಿಯಾದ ಎರಡು ಅಪ್ರತಿಮ ಸಂಸ್ಥೆಗಳಾಗಿವೆ. ಇವುಗಳಿಗಿರುವ ವ್ಯಾಪಕವಾದ ಪ್ರಭಾವವನ್ನು ಖಚಿತಪಡಿಸಿಕೊಳ್ಳಲು ಸೂಕ್ತವಾದ ಸಹಯೋಗವನ್ನು ಮಾಡಿಕೊಂಡಿವೆ ಎಂದು ಅವರು ಹೇಳಿದರು.

15 ನಿಮಿಷಗಳ ಕಾರ್ಯಕ್ರಮವು 25 ಎಫ್‌ಎಂ ಕೇಂದ್ರಗಳು, 4 ಎಫ್‌ಎಂ ಗೋಲ್ಡ್ ಕೇಂದ್ರಗಳು, 42 ವಿವಿಧ ಭಾರತಿ ಕೇಂದ್ರಗಳು ಮತ್ತು 159 ಪ್ರಾಥಮಿಕ ಚಾನೆಲ್‌ಗಳು/ಸ್ಥಳೀಯ ರೇಡಿಯೋ ಕೇಂದ್ರಗಳನ್ನು ಒಳಗೊಂಡಿರುವ ಆಕಾಶವಾಣಿಯ ನೆಟ್‌ವರ್ಕ್‌ನಲ್ಲಿ ಪ್ರತಿ ಶುಕ್ರವಾರ ರಾತ್ರಿ 7- 9 ಗಂಟೆಯ ಅವಧಿಯಲ್ಲಿ 23 ಭಾಷೆಗಳಲ್ಲಿ ಪ್ರಸಾರವಾಗಲಿದೆ, ಅಂದರೆ, ಅಸ್ಸಾಮಿ , ಬೆಂಗಾಲಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ ಭಾಷೆಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

52 ಕಂತುಗಳ ಸರಣಿಯು ಮತದಾರರ ದೃಷ್ಟಿಕೋನದಿಂದ ಚುನಾವಣೆಯ ವಿವಿಧ ಅಂಶಗಳು ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಇದು ಮತದಾರರ ನೋಂದಣಿ, ತಿಳಿವಳಿಕೆ ಮತ್ತು ನೈತಿಕ ಮತದಾನ, ಮತದ ಮೌಲ್ಯ, ಎಲ್ಲರನ್ನೊಳಗೊಂಡ ಮತ್ತು ಪ್ರವೇಶಿಸಬಹುದಾದ ಚುನಾವಣೆಗಳು, ಮಾದರಿ ನೀತಿ ಸಂಹಿತೆ, ಐಟಿ ಅಪ್ಲಿಕೇಶನ್‌ಗಳು, ಇವಿಎಂಗಳು, ಚುನಾವಣಾ ಅಧಿಕಾರಿಗಳು, ಬಿಎಲ್‌ಒಗಳ ಅನುಭವಗಳು ಇತ್ಯಾದಿ ವಿಷಯಾಧಾರಿತ ಸಂಚಿಕೆಗಳನ್ನು ಹೊಂದಿರುತ್ತದೆ. ಎಲ್ಲಾ ಸಂಚಿಕೆಗಳು ಅರ್ಹ ನಾಗರಿಕರನ್ನು ಮತ್ತು ವಿಶೇಷವಾಗಿ ಯುವ ಮತ್ತು ಮೊದಲ ಬಾರಿಗೆ ಮತದಾನ ಮಾಡುವ ಮತದಾರರು ಚುನಾವಣೆಯ ಸಮಯದಲ್ಲಿ ತಿಳುವಳಿಕೆಯ ನಿರ್ಧಾರವನ್ನು ಮಾಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಸಂವಾದಾತ್ಮಕ ಸಂದೇಶವನ್ನು ಒಳಗೊಂಡಿರುತ್ತವೆ. ಪ್ರತಿ ಸಂಚಿಕೆಯು ಭಾರತ ಚುನಾವಣಾ ಆಯೋಗದ SVEEP (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಭಾಗವಹಿಸುವಿಕೆ) ವಿಭಾಗದಿಂದ ನಿರ್ಮಿಸಲಾದ ನಾಟಕ, ಕಥೆ ಹೇಳುವಿಕೆ, ರಸಪ್ರಶ್ನೆ, ತಜ್ಞರ ಸಂದರ್ಶನ ಮತ್ತು ಹಾಡುಗಳ ಸಮ್ಮಿಲನದ ಮಾಹಿತಿ ಮನರಂಜನೆ ಪ್ರಕಾರದಲ್ಲಿರುತ್ತದೆ.  ಕಾರ್ಯಕ್ರಮವು ಸಿಟಿಜನ್ ಕಾರ್ನರ್ ಅನ್ನು ಒಳಗೊಂಡಿರುತ್ತದೆ, ಅಲ್ಲಿ ಯಾವುದೇ ನಾಗರಿಕರು ಪ್ರಶ್ನೆಯನ್ನು ಕೇಳಬಹುದು ಅಥವಾ ಚುನಾವಣೆಗಳನ್ನು ಅಂತರ್ಗತಗೊಳಿಸುವ ಮತ್ತು ಭಾಗವಹಿಸುವಂತೆ ಮಾಡುವ  ಬಗ್ಗೆ ಸಲಹೆಗಳನ್ನು ಸಹ ನೀಡಬಹುದು.

ಕಾರ್ಯಕ್ರಮದ ಮೊದಲ ಸಂಚಿಕೆ - ‘ಮತದಾರರ ನೋಂದಣಿ’ 7ನೇ ಅಕ್ಟೋಬರ್, 2022 ಶುಕ್ರವಾರ ಸಂಜೆ 7:25 ಗಂಟೆಗೆ ಪ್ರಸಾರವಾಗಲಿದೆ. ನಾಗರಿಕರು 'ಟ್ವಿಟರ್‌ನಲ್ಲಿ @airnewsalerts ಮತ್ತು @ECISVEEP, News On AIR ಅಪ್ಲಿಕೇಶನ್ ಮತ್ತು ECI ಮತ್ತು ಆಲ್ ಇಂಡಿಯಾ ರೇಡಿಯೊದ YouTube ಚಾನಲ್‌ಗಳಲ್ಲಿ ಸಹ ಕಾರ್ಯಕ್ರಮವನ್ನು ಕೇಳಬಹುದು. ಕಾರ್ಯುಕ್ರಮವನ್ನು ಕೇಳಿ ಮತ್ತು ಭಾರತದ ರೋಮಾಂಚಕ ಪ್ರಜಾಪ್ರಭುತ್ವದ ಭಾಗವಾಗಿ..

********


(Release ID: 1864925) Visitor Counter : 861