ವಾರ್ತಾ ಮತ್ತು ಪ್ರಸಾರ ಸಚಿವಾಲಯ

68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು 


ಚಲನಚಿತ್ರಗಳು ಮೃದು-ಶಕ್ತಿಯನ್ನು ಪಸರಿಸುವ ಉತ್ತಮ ಮಾಧ್ಯಮ, ಚಲನಚಿತ್ರಗಳ ಗುಣಮಟ್ಟದ ಹೆಚ್ಚಳ ಮೃದು ಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ: ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

ಪ್ರಶಸ್ತಿಗಳು ನಮ್ಮ ದೇಶದ ಪ್ರಾದೇಶಿಕ ಶಕ್ತಿಯನ್ನು ಹೊರತರುತ್ತವೆ; ಒಳನಾಡಿನಿಂದ ಬಂದ ಕಲಾವಿದರು ಈಗ ಮನೆಮಾತಾಗಿದ್ದಾರೆ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್

Posted On: 30 SEP 2022 7:28PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿಂದು ನಡೆದ ಸಮಾರಂಭದ 68 ನೇ ಆವೃತ್ತಿಯಲ್ಲಿ ವಿವಿಧ ವಿಭಾಗಗಳ ಅಡಿಯಲ್ಲಿ 2020ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸಹ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

 


 
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ, ಚಲನಚಿತ್ರ ಜಗತ್ತಿಗೆ ನೀಡಿದ ವಿಶೇಷ ಕೊಡುಗೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಶ್ರೀಮತಿ ಆಶಾ ಪರೇಖ್ ಅವರನ್ನು ಅಭಿನಂದಿಸಿದರು ಮತ್ತು ಅವರಿಗೆ ಸಂದ ಈ ಪ್ರಶಸ್ತಿಯು ಮಹಿಳಾ ಸಬಲೀಕರಣಕ್ಕೆ ದೊರೆತ ಮನ್ನಣೆಯಾಗಿದೆ ಎಂದು ಹೇಳಿದರು.

ಎಲ್ಲ ಕಲಾ ಪ್ರಕಾರಗಳಲ್ಲಿ ಚಲನಚಿತ್ರಗಳು ವ್ಯಾಪಕ ಪ್ರಭಾವವನ್ನು ಬೀರುತ್ತವೆ ಎಂದು ರಾಷ್ಟ್ರಪತಿಗಳು ಹೇಳಿದರು, ಮತ್ತು ಚಲನಚಿತ್ರಗಳು ಕೇವಲ ಒಂದು ಉದ್ಯಮವಲ್ಲ, ಆದರೆ ನಮ್ಮ ಮೌಲ್ಯ ವ್ಯವಸ್ಥೆಯ ಕಲಾತ್ಮಕ ಅಭಿವ್ಯಕ್ತಿಗೆ ಒಂದು ಮಾಧ್ಯಮವೂ ಹೌದು ಎಂದು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲೂ ಸಿನಿಮಾ ಒಂದು ಪರಿಣಾಮಕಾರಿ ಸಾಧನವಾಗಿದೆ ಎಂದರು.

ರಾಷ್ಟ್ರವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಸ್ವಾತಂತ್ರ್ಯ ಹೋರಾಟಗಾರರ ಪರಿಚಿತ ಮತ್ತು ಪರಿಚಿತವಲ್ಲದ ಜೀವನ ಗಾಥೆಗಳಿಗೆ ಸಂಬಂಧಿಸಿದ (ಫೀಚರ್ ಮತ್ತು ನಾನ್ ಫೀಚರ್) ಚಲನಚಿತ್ರಗಳನ್ನು ಭಾರತೀಯ ಪ್ರೇಕ್ಷಕರು ಸ್ವಾಗತಿಸುತ್ತಾರೆ ಎಂದು ಶ್ರೀಮತಿ ಮುರ್ಮು ಹೇಳಿದರು. ಸಮಾಜದಲ್ಲಿ ಏಕತೆಯನ್ನು ಹೆಚ್ಚಿಸುವ, ರಾಷ್ಟ್ರದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಮತ್ತು ಪರಿಸರ ಸಂರಕ್ಷಣೆಯ ಪ್ರಯತ್ನಗಳನ್ನು ಬಲಪಡಿಸುವ ಅಂತಹ ಚಲನಚಿತ್ರಗಳ ನಿರ್ಮಾಣವನ್ನು ಪ್ರೇಕ್ಷಕರು ಬಯಸುತ್ತಾರೆ ಎಂದರು.

ವಿದೇಶಗಳಲ್ಲಿ ಭಾರತೀಯ ಸಂಗೀತವು ಹೊಂದಿರುವ ಮಾನ್ಯತೆಯನ್ನು ಎತ್ತಿ ತೋರಿಸಿದ ರಾಷ್ಟ್ರಪತಿಗಳು, ಇದು ಭಾರತದ ಮೃದುಶಕ್ತಿಯನ್ನು ಜಾಗತಿಕವಾಗಿ ಪಸರಿಸಲು ಉತ್ತಮ ಮಾಧ್ಯಮವಾಗಿದೆ ಎಂದು ಹೇಳಿದರು. ಈ ವರ್ಷದ ಜುಲೈನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ, ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ 1960 ರ ದಶಕದ ಹಿಂದಿ ಚಲನಚಿತ್ರದ ಜನಪ್ರಿಯ ಗೀತೆಯನ್ನು ಸಮಾರೋಪ ಸಮಾರಂಭದಲ್ಲಿ ವಿದೇಶಿ ಬ್ಯಾಂಡ್ ಪ್ರಸ್ತುತಪಡಿಸಿತು ಎಂದು ಅವರು ಹೇಳಿದರು.

ಇದಲ್ಲದೆ, ಈ ಮೃದು-ಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು, ನಾವು ನಮ್ಮ ಚಲನಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು. "ಈಗ ನಮ್ಮ ದೇಶದಲ್ಲಿ ಒಂದು ಪ್ರದೇಶದಲ್ಲಿ ತಯಾರಾದ ಚಲನಚಿತ್ರಗಳು ಇತರ ಎಲ್ಲಾ ಪ್ರದೇಶಗಳಲ್ಲೂ ಬಹಳ ಜನಪ್ರಿಯವಾಗುತ್ತಿವೆ. ಈ ರೀತಿಯಾಗಿ ಭಾರತೀಯ ಚಿತ್ರರಂಗವು ಎಲ್ಲ ದೇಶವಾಸಿಗಳನ್ನು ಸಾಂಸ್ಕೃತಿಕ ಎಳೆಯಲ್ಲಿ ಜೋಡಿಸುತ್ತಿದೆ. ಈ ಚಲನಚಿತ್ರ ಸಮುದಾಯವು ಭಾರತೀಯ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ" ಎಂದು ಅವರು ಹೇಳಿದರು.

 


 ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, ಸಿನೆಮಾ ಚಿತ್ರಗಳಲ್ಲಿನ ಕಾವ್ಯವಾಗಿದೆ ಎಂಬ ಬಲವಾದ ನಂಬಿಕೆ ತಮಗಿದ್ದು, ಇದು ನಮ್ಮನ್ನು ಜೀವಂತ ಮತ್ತು ಮಾನವೀಯ ಭಾವನೆಗೆ ಕಾರಣವಾಗುವಂತಹ ಮಾಂತ್ರಿಕತೆ, ಅದ್ಭುತ ಮತ್ತು ಹುಚ್ಚುತನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಸಿನೆಮಾ ನಮ್ಮ ದೇಶದ ಆತ್ಮಸಾಕ್ಷಿ, ಸಮುದಾಯ ಮತ್ತು ಸಂಸ್ಕೃತಿಯನ್ನು ಸೆರೆಹಿಡಿದು ರೂಪಿಸುತ್ತದೆ. ಭಾರತೀಯ ಚಲನಚಿತ್ರೋದ್ಯಮದ ಅಗ್ರೇಸರರು, ವೃತ್ತಿಪರರು ಮತ್ತು ದಂತಕಥೆಗಳು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ನಮ್ಮ ಹೃದಯ ಮತ್ತು ಮನಸ್ಸನ್ನು ತಟ್ಟಿದ್ದಾರೆ ಮತ್ತು ಕಚಗುಳಿ ನೀಡಿದ್ದಾರೆ ಎಂದು ಅವರು ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಒಟಿಟಿ ವೇದಿಕೆಗಳು ನಿರ್ವಹಿಸಿದ ಪಾತ್ರದ ಬಗ್ಗೆ ಮಾತನಾಡಿದ ಸಚಿವರು, ಇಂದು ಸಿನೆಮಾ ರಂಗಭೂಮಿಯ ಗಡಿಗಳನ್ನು ದಾಟಿದೆ ಮತ್ತು ಒಟಿಟಿಯ ಆಗಮನದೊಂದಿಗೆ ನಮ್ಮ ಮನೆಗಳು ಮತ್ತು ಮೊಬೈಲ್ ಫೋನ್ ಗಳ ಸೌಕರ್ಯಗಳನ್ನು ತಲುಪಿದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಭಾರತದ ಚಲನಚಿತ್ರ ತಾರೆಯರು ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಸಚಿವರು, ಕೋವಿಡ್ ನ ಕಠೋರ ವಾಸ್ತವತೆ ಮತ್ತು ದುರ್ಬಲ ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ನಡುವೆ, ನೀವು ಒದಗಿಸಿದ ಮನೋರಂಜನೆ ಮತ್ತು ಸಂದೇಶವು ನಮ್ಮ ಏಕೈಕ ಭರವಸೆಯ ದಾರಿದೀಪವಾಗಿತ್ತು ಎಂದು ಹೇಳಿದರು.
 

ಐದು ವರ್ಷಗಳಲ್ಲಿ ಎರಡನೇ ಬಾರಿಗೆ ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ ಎಂಬ ಪ್ರಶಸ್ತಿಯನ್ನು ಗೆದ್ದ ಮಧ್ಯಪ್ರದೇಶ ರಾಜ್ಯ ಸರ್ಕಾರವನ್ನು ಸಚಿವರು ಶ್ಲಾಘಿಸಿದರು. 75 ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (ನಾಳೆಯ ಕ್ರಿಯಾತ್ಮಕ ಮನಸ್ಸುಗಳು) ಮೂಲಕ ಆಯ್ಕೆಯಾಗಿರುವ ಭವಿಷ್ಯದ ಚಲನಚಿತ್ರ  ತಯಾರಕರಿಗೆ ಮಾರ್ಗದರ್ಶನ ಮಾಡುವಂತ ಪ್ರಶಸ್ತಿ ವಿಜೇತರನ್ನು ಆಹ್ವಾನಿಸಿದ ಸಚಿವರು, ಯುವಕರನ್ನು ಪ್ರೇರೇಪಿಸುವ ಮತ್ತು ಮಾರ್ಗದರ್ಶನ ನೀಡುವ ಈ ವಿಶಿಷ್ಟ ಉಪಕ್ರಮಕ್ಕೆ ಅವರ ಬೆಂಬಲವು ಮುಂದಿನ ಪೀಳಿಗೆಯ ಪ್ರಶಸ್ತಿ ವಿಜೇತರನ್ನು ರೂಪಿಸುತ್ತದೆ ಎಂದು ಹೇಳಿದರು.

ಭಾರತವು ಭಾಷಾ ವೈವಿಧ್ಯದ ದೇಶವಾಗಿದೆ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗಿಂತ ಉತ್ತಮವಾದ ಈ ವೈವಿಧ್ಯದ ಪ್ರದರ್ಶನ ಇನ್ನೊಂದಿಲ್ಲ ಎಂದರು. ದೇಶಾದ್ಯಂತದ ಪ್ರತಿಭಾನ್ವಿತ ವಿಜೇತರ ಬಗ್ಗೆ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, ಈ ಪ್ರಶಸ್ತಿಗಳು ಮತ್ತೊಮ್ಮೆ ದೇಶದ ಪ್ರಾದೇಶಿಕ ಶಕ್ತಿಯನ್ನು ಹೊರತಂದಿವೆ ಮತ್ತು ಭಾರತೀಯ ಚಿತ್ರರಂಗವು ಹೇಗೆ ಉಜ್ವಲವಾಗಿದೆ ಹಾಗೂ ಚುರುಕುತನ ಮತ್ತು ಪ್ರತಿಭೆಯಿಂದ ಹೇಗೆ ಅರಳುತ್ತಿದೆ ಎಂಬುದನ್ನು ಸ್ಮರಿಸುವಂತೆ ಮಾಡುತ್ತದೆ ಎಂದು ಹೇಳಿದರು. ಕರ್ಬಿ ಭಾಷೆಯ ಕಿಚಿನಿತು, ಡಾಂಗಿಯಲ್ಲಿನ ಟೆಸ್ಟಿಮೋನಿ ಆಫ್ ಅನಾ ಮತ್ತು ದಿಮಾಸಾದಲ್ಲಿನ ಸೆಮ್ಖೋರ್ ನಂತಹ ಚಲನಚಿತ್ರಗಳು ನಮ್ಮ ಭಾಷಾ ಸಂಪತ್ತಿನ ಅಸಾಧಾರಣ ಪ್ರದರ್ಶನಗಳಾಗಿವೆ ಎಂದೂ ಅವರು ಹೇಳಿದರು.

4 ಬಾಲನಟರು ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಶ್ರೀ ಠಾಕುರ್ ತಮ್ಮ ಅಪಾರ ಸಂತಸ ವ್ಯಕ್ತಪಡಿಸಿದರು ಮತ್ತು ದಿವ್ಯಾಂಗ ಬಾಲಕ ಮತ್ತು ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ದಿವ್ಯೇಶ್ ಇಂದುಲ್ಕರ್ ಅವರ ಬಗ್ಗೆಯೂ ವಿಶೇಷ ಉಲ್ಲೇಖ ಮಾಡಿದರು. ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ ಪುರಸ್ಕೃತರಾದ ನಂಜಿಯಮ್ಮ ಅವರು ಜಾನಪದ ಗಾಯಕಿಯಾಗಿದ್ದು, ಅವರು ಯಾವುದೇ ವೃತ್ತಿಪರ ಚಲನಚಿತ್ರ ಹಿನ್ನೆಲೆಯಿಲ್ಲದ ಕೇರಳದ ಸಣ್ಣ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಮತ್ತು ಇದು ನಮ್ಮ ಗಾಥೆ ಮತ್ತು ಪ್ರತಿಭೆಯ ಶಕ್ತಿಯನ್ನು ತೋರಿಸುತ್ತದೆ ಎಂದು ಸಚಿವರು ಹೇಳಿದರು.

ಸಮಾರಂಭದಲ್ಲಿ ಟೆಸ್ಟಿಮೋನಿ ಆಫ್ ಅನಾ ಅತ್ಯುತ್ತಮ ನಾನ್-ಫೀಚರ್ ಫಿಲಂ ಪ್ರಶಸ್ತಿಯನ್ನು ಪಡೆದರೆ, ಸೂರರೈ ಪೊಟ್ರು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಸೂರ್ಯ ಮತ್ತು ಅಜಯ್ ದೇವಗನ್ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರೆ, ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಸಚ್ಚಿದಾನಂದನ್ ಕೆ.ಆರ್ ಅವರಿಗೆ ಮಲಯಾಳಂನ ಎ.ಕೆ.ಅಯ್ಯಪ್ಪನುಮ್ ಕೋಶಿಯುಮ್ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ತನ್ಹಾಜಿ: ದಿ ಅನ್ಸಂಗ್ ವಾರಿಯರ್, ಆರೋಗ್ಯಕರ ಮನರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿ  ನೋಡಬಹುದು.

 

 

 

*****



(Release ID: 1863970) Visitor Counter : 247