ಪ್ರಧಾನ ಮಂತ್ರಿಯವರ ಕಛೇರಿ

ಭಾರತದಲ್ಲಿ ನಿರ್ನಾಮವಾಗಿದ್ದ ಕಾಡು ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ ಪ್ರಧಾನಿ


ಚೀತಾ ಪುನರ್ವಸತಿ ನಿರ್ವಹಣಾ ತಂಡವಾದ ʻಚೀತಾ ಮಿತ್ರರುʼ  ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಪ್ರಧಾನಿ
 
ನಮೀಬಿಯಾದಿಂದ ತರಿಸಲಾದ ಚೀತಾಗಳಿಗೆ ಭಾರತದಲ್ಲಿ ʻಪ್ರಾಜೆಕ್ಟ್ ಚೀತಾʼ ಅಡಿಯಲ್ಲಿ ನೆಲೆ ಕಲ್ಪಿಸಲಾಗುತ್ತಿದೆ. ʻಪ್ರಾಜೆಕ್ಟ್ ಚೀತಾʼ ಎಂಬುದು  ವಿಶ್ವದ ಮೊದಲ ದೈತ್ಯ ಮಾಂಸಾಹಾರಿ ಪ್ರಾಣಿಗಳ ಖಂಡಾಂತರ ಸ್ಥಳಾಂತರ ಯೋಜನೆಯಾಗಿದೆ 
 
ಚೀತಾಗಳನ್ನು ಭಾರತಕ್ಕೆ ಮರಳಿ ತರುವುದರಿಂದ ಮುಕ್ತ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಗಳ ಪುನಃಸ್ಥಾಪನೆಗೆ ಸಹಾಯ ವಾಗಲಿದೆ ಮತ್ತು ಸ್ಥಳೀಯ ಸಮುದಾಯಕ್ಕೆ ಹೆಚ್ಚಿನ ಜೀವನೋಪಾಯದ ಅವಕಾಶಗಳಿಗೆ ದಾರಿ ಮಾಡಲಿದೆ

  

Posted On: 17 SEP 2022 12:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಿಂದ ಅಳಿದುಹೋಗಿದ್ದ ಕಾಡು ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇಂದು ಬಿಡುಗಡೆ ಮಾಡಿದರು. ನಮೀಬಿಯಾದಿಂದ ತರಿಸಲಾದ ಈ ಚೀತಾಗಳಿಗೆ ಭಾರತದಲ್ಲಿ ʻಪ್ರಾಜೆಕ್ಟ್ ಚೀತಾʼ ಅಡಿಯಲ್ಲಿ ಪ್ರವೇಶ ಕಲ್ಪಿಸಲಾಗಿದೆ. ʻಪ್ರಾಜೆಕ್ಟ್ ಚೀತಾʼ- ಇದು ಇದು ವಿಶ್ವದ ಮೊದಲ ದೈತ್ಯ ಮಾಂಸಾಹಾರಿ ಕಾಡು ಪ್ರಾಣಿಗಳ ಖಂಡಾಂತರ ಸ್ಥಳಾಂತರ ಯೋಜನೆಯಾಗಿದೆ. ಈ ಯೋಜನೆಯಡಿ ತರಿಸಲಾದ ಎಂಟು ಚೀತಾಗಳ ಪೈಕಿ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳಿವೆ. 

ಪ್ರಧಾನಮಂತ್ರಿಯವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದ ಎರಡು ಬಿಡುಗಡೆ ಕೇಂದ್ರಗಳಲ್ಲಿ ಚೀತಾಗಳನ್ನು ಅರಣ್ಯಕ್ಕೆ ಬಿಡುಗಡೆ ಮಾಡಿದರು. ಚೀತಾ ಬಿಡುಗಡೆಗಳ ಸ್ಥಳದಲ್ಲಿ ಚೀತಾ ಪುನರ್ವಸತಿ ನಿರ್ವಹಣಾ ತಂಡವಾದ ʻಚೀತಾ ಮಿತ್ರರುʼ ಮತ್ತು ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಪ್ರಧಾನಮಂತ್ರಿಯವರು ಈ ಐತಿಹಾಸಿಕ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. 

ಪ್ರಧಾನ ಮಂತ್ರಿಯವರು ಭಾರತದ ವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಹಾಗೂ ವೈವಿಧ್ಯಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದು, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡು ಚೀತಾಗಳ ಬಿಡುಗಡೆಯು ಇಂತಹ ಪ್ರಯತ್ನದ ಭಾಗವಾಗಿವೆ. 1952ರಲ್ಲಿ ಚೀತಾವನ್ನು ಭಾರತದಿಂದ ಅಳಿದ ಸಂತತಿ ಎಂದು ಘೋಷಿಸಲಾಯಿತು. ಪ್ರಸ್ತುತ ಭಾರತದಲ್ಲಿ ಮರು ಆವಾಸ ಕಲ್ಪಿಸಲಾದ ಚೀತಾಗಳನ್ನು ನಮೀಬಿಯಾದಿಂದ ತರಲಾಗಿದ್ದು, ಇದಕ್ಕಾಗಿ ಈ ವರ್ಷದ ಆರಂಭದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿತ್ತು. ವಿಶ್ವದ ಮೊದಲ ದೈತ್ಯ ಮಾಂಸಾಹಾರಿ ಕಾಡು ಪ್ರಾಣಿಗಳ ಖಂಡಾಂತರ ಸ್ಥಳಾಂತರ ಯೋಜನೆಯಾದ ʻಪ್ರಾಜೆಕ್ಟ್ ಚೀತಾʼ ಅಡಿಯಲ್ಲಿ ಭಾರತದಲ್ಲಿ ಚೀತಾಗಳಿಗೆ ಮರು ಪ್ರವೇಶ ಕಲ್ಪಿಸಲಾಗಿದೆ. 

ಚೀತಾಗಳು ಭಾರತದಲ್ಲಿ ತೆರೆದ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತವೆ. ಇದು ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಹಾಗೂ ನೀರಿನ ಸಂರಕ್ಷಣೆ, ಇಂಗಾಲದ ಪ್ರಮಾಣ ತಗ್ಗಿಸುವಿಕೆ (ಕಾರ್ಬನ್ ಸೀಕ್ವೆಸ್ಟ್ರೇಷನ್) ಮತ್ತು ಮಣ್ಣಿನ ತೇವಾಂಶ ಸಂರಕ್ಷಣೆಯಂತಹ ಪರಿಸರ ವ್ಯವಸ್ಥೆಯ ಸೇವೆಗಳನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಇದರಿಂದ ಸಮಾಜಕ್ಕೆ ಹೆಚ್ಚಿನ ಪ್ರಯೋಜನವನ್ನು ದೊರೆಯುತ್ತದೆ. ಈ ಪ್ರಯತ್ನವು ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಪ್ರಧಾನ ಮಂತ್ರಿಯವರ ಬದ್ಧತೆಗೆ ಅನುಗುಣವಾಗಿದೆ. ಪರಿಸರ ಅಭಿವೃದ್ಧಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಸ್ಥಳೀಯ ಸಮುದಾಯಕ್ಕೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ಸಹ ಇದು ದಾರಿ ಮಾಡಲಿದೆ. 

ಭಾರತದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ದೀರ್ಘ ಸರಣಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಿಂದ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳು ಸಾಧ್ಯವಾಗಿವೆ. ಚೀತಾಗಳ ಚಾರಿತ್ರಿಕ ಮರುಪ್ರವೇಶವು ಇಂತಹ ಕ್ರಮಗಳ ಭಾಗವಾಗಿದೆ. 2014ರಲ್ಲಿ ದೇಶದ ಭೌಗೋಳಿಕ ಪ್ರದೇಶದ 4.90% ರಷ್ಟಿದ್ದ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯು ಈಗ 5.03%ಕ್ಕೆ ಏರಿದೆ. 2014ರಲ್ಲಿ ಒಟ್ಟು 1,61,081.62 ಚ.ಕಿ.ಮೀ ವಿಸ್ತೀರ್ಣದೊಂದಿಗೆ ದೇಶದ ಸಂರಕ್ಷಿತ ಪ್ರದೇಶಗಳ ಸಂಖ್ಯೆಯು 740ರಷ್ಟಿತ್ತು. ಪ್ರಸ್ತುತ ಇಂತಹ ಸಂರಕ್ಷಿತ ಪ್ರದೇಶಗಳ ಸಂಖ್ಯೆಯು 1,71,921 ಚ.ಕಿ.ಮೀ ವಿಸ್ತೀರ್ಣದೊಂದಿಗೆ 981ಕ್ಕೆ ಏರಿಕೆಯಾಗಿದೆ. 

ಕಳೆದ ನಾಲ್ಕು ವರ್ಷಗಳಲ್ಲಿ ಅರಣ್ಯ ಮತ್ತು ಹಸಿರು ಪ್ರದೇಶದ ವಿಸ್ತೀರ್ಣವು 16,000 ಚದರ ಕಿ.ಮೀ.ಗಳಷ್ಟು ಹೆಚ್ಚಾಗಿದೆ. ಅರಣ್ಯ ಪ್ರದೇಶವು ನಿರಂತರವಾಗಿ ಹೆಚ್ಚುತ್ತಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. 

ಸಮುದಾಯ ಮೀಸಲು ಅರಣ್ಯಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2014ರಲ್ಲಿ ಕೇವಲ 43 ಇದ್ದ ಇವುಗಳ ಸಂಖ್ಯೆ 2019ರಲ್ಲಿ 100ಕ್ಕಿಂತ ಹೆಚ್ಚಾಗಿದೆ. 

ಭಾರತವು 18 ರಾಜ್ಯಗಳಲ್ಲಿ ವ್ಯಾಪಿಸಿರುವ ಸುಮಾರು 75,000 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡ 52 ಹುಲಿ ಮೀಸಲು ಪ್ರದೇಶಗಳನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಸುಮಾರು 75%ರಷ್ಟು ಪಾಲನ್ನು ಭಾರತ ಹೊಂದಿದೆ. 2022ರ ಗುರಿಗಿಂತ ನಾಲ್ಕು ವರ್ಷ ಮುಂಚಿತವಾಗಿ 2018ರಲ್ಲಿಯೇ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಭಾರತ ಸಾಧಿಸಿದೆ.  2014ರಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 2,226 ಇದ್ದದ್ದು, 2018ರ ವೇಳೆಗೆ 2,967ಕ್ಕೆ ಏರಿದೆ. 

2014ರಲ್ಲಿ 185 ಕೋಟಿ ರೂ.ಗಳಷ್ಟಿದ್ದ ಹುಲಿ ಸಂರಕ್ಷಣೆಗೆ ಮೀಸಲಾದ ಅನುದಾನವನ್ನು 2022ರಲ್ಲಿ 300 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. 

ಭಾರತದಲ್ಲಿ ಏಷ್ಯನ್ ಸಿಂಹಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ದಾಖಲಾಗಿದೆ.  2015ರಲ್ಲಿ 523ರಷ್ಟಿದ್ದ ಇಂತಹ ಸಿಂಹಗಳ ಸಂಖ್ಯೆಯು ಶೇ. 28.87ರಷ್ಟು (ಇಲ್ಲಿಯವರೆಗೆ ಅತ್ಯಧಿಕ ಬೆಳವಣಿಗೆಯ ದರಗಳಲ್ಲಿ ಒಂದಾಗಿದೆ) ಹೆಚ್ಚಾಗಿದ್ದು, 674ಕ್ಕೆ ಹೆಚ್ಚಳಗೊಂಡಿದೆ. 

ಭಾರತದಲ್ಲಿ 2014ರಲ್ಲಿ ನಡೆಸಲಾದ ಗಣತಿ ವೇಳೆ 7910ರಷ್ಟಿದ್ದ ಚಿರತೆಗಳ ಸಂಖ್ಯೆಯು, 
ಪ್ರಸ್ತುತ (2020) 12,852ಕ್ಕೆ ಹೆಚ್ಚಿದ್ದು, ಚಿರತೆಗಳ ಸಂಖ್ಯೆಯಲ್ಲಿ 60%ಕ್ಕೂ ಹೆಚ್ಚು ಹೆಚ್ಚಳ ಕಂಡುಬಂದಿದೆ. 

ಈ ಸಂದರ್ಭದಲ್ಲಿ ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್; ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್; ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಭೂಪೇಂದರ್ ಯಾದವ್, ಶ್ರೀ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಮತ್ತು ಶ್ರೀ ಅಶ್ವಿನಿ ಚೊಬೆ ಅವರು ಉಪಸ್ಥಿತರಿದ್ದರು. 

*****



(Release ID: 1860445) Visitor Counter : 148