ಇಂಧನ ಸಚಿವಾಲಯ
"ಕಟ್ಟಡಗಳಲ್ಲಿ ಶೂನ್ಯ-ಇಂಗಾಲ ಪರಿವರ್ತನೆಯನ್ನು ಸಾಧಿಸುವುದು" ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ 'ಅಂಗನ್ 2022'
15 ಕ್ಕೂ ಹೆಚ್ಚು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ತಜ್ಞರಿಂದ ಇಂಧನ ದಕ್ಷ ಕಟ್ಟಡ ತಂತ್ರಜ್ಞಾನಗಳ ಬಗ್ಗೆ ಚರ್ಚೆ
ಸಮ್ಮೇಳನದಲ್ಲಿ ಕಟ್ಟಡ ಕ್ಷೇತ್ರಕ್ಕೆ ಸಂಬಂಧಿಸಿ ವಿವಿಧ ಕಡಿಮೆ ಇಂಗಾಲದ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳ ಪ್ರದರ್ಶನ ಆಯೋಜನೆ
Posted On:
15 SEP 2022 4:30PM by PIB Bengaluru
"ಕಟ್ಟಡಗಳಲ್ಲಿ ಶೂನ್ಯ-ಇಂಗಾಲದ ಪರಿವರ್ತನೆಯನ್ನು ಸಾಧಿಸುವುದು" ಎಂಬ ಶೀರ್ಷಿಕೆಯಡಿ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಅಂಗನ್ 2022 (ಹಸಿರು ಸುಲಭ ಲಭ್ಯ ಹೊಸ-ಆವಾಸಸ್ಥಾನದಿಂದ ಪ್ರಕೃತಿಯ ವೃದ್ಧಿ)ರ ಎರಡನೇ ಆವೃತ್ತಿ 2022ರ ಸೆಪ್ಟೆಂಬರ್ 14, ರಂದು ಪ್ರಾರಂಭವಾಯಿತು. ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಇಂಧನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಜಯ್ ತಿವಾರಿ ಅವರೂ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂಡೋ-ಸ್ವಿಸ್ ಕಟ್ಟಡ ಇಂಧನ ದಕ್ಷತೆ ಯೋಜನೆ (ಬಿಇಇಪಿ) ಅಡಿಯಲ್ಲಿ ಸ್ವಿಸ್ ಏಜೆನ್ಸಿ ಫಾರ್ ಡೆವಲಪ್ಮೆಂಟ್ ಅಂಡ್ ಕೋಆಪರೇಶನ್ (ಎಸ್ಡಿಸಿ) ಸಹಯೋಗದೊಂದಿಗೆ ಇಂಧನ ಸಚಿವಾಲಯದ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (ಬಿಇಇ)ಯು 'ಅಂಗನ್ 2.0' ನ್ನು ಆಯೋಜಿಸಿದೆ.
ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಮಹಾನಿರ್ದೇಶಕ ಡಾ.ಅಜಯ್ ಮಾಥುರ್, ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ ಇಂಧನ ದಕ್ಷತೆಯ ಮುಖ್ಯಸ್ಥ ಡಾ.ಬ್ರಿಯಾನ್ ಮದರ್ ವೇ, ಸಿಡ್ನಿ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಡಿಸೈನ್ ಅಂಡ್ ಪ್ಲಾನಿಂಗ್ ನ ಪ್ರೊಫೆಸರ್ ಡಾ.ರಿಚರ್ಡ್ ಡೇ ಡಿಯರ್ ಸಹಿತ 15 ಕ್ಕೂ ಹೆಚ್ಚು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ಸುಮಾರು 75 ಪ್ರಮುಖ ಭಾಷಣಕಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇಂಧನ ದಕ್ಷತೆ ಮತ್ತು ಕಟ್ಟಡಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಅವರು ಒಟ್ಟು ಸೇರಿದ್ದಾರೆ. 8 ಸಮಗ್ರ ಮತ್ತು 8 ವಿಷಯಾಧಾರಿತ ಅಧಿವೇಶನಗಳು ನಡೆಯುತ್ತಿವೆ.
ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳ ಗಣ್ಯರು ಭಾಗವಹಿಸಿದ್ದರು. ಸ್ವಿಸ್ ಅಭಿವೃದ್ಧಿ ಮತ್ತು ಸಹಕಾರ ಸಂಸ್ಥೆಯ ಸಹಕಾರ ವಿಭಾಗದ ಮುಖ್ಯಸ್ಥ ಜೊನಾಥನ್ ಡೆಮೆಂಗೆ, ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಇಂಧನ ದಕ್ಷತೆಯ ಮುಖ್ಯಸ್ಥ ಡಾ.ಬ್ರಿಯಾನ್ ಮದರ್ ವೇ ಮತ್ತು ಭಾರತ ಮತ್ತು ಭೂತಾನಗಳ ಸ್ವಿಟ್ಜರ್ಲ್ಯಾಂಡ್ ರಾಯಭಾರಿ ಡಾ.ರಾಲ್ಫ್ ಹೆಕ್ನರ್ ಅವರೂ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಬಿಇಇಯ ಕೈಗೆಟಕುವ ಮತ್ತು ನೈಸರ್ಗಿಕ ಆವಾಸಸ್ಥಾನದತ್ತ ಆಂದೋಲನದ ಮೊದಲ ರಾಷ್ಟ್ರೀಯ ಇಂಧನ ದಕ್ಷತೆಯ ಮಾರ್ಗಸೂಚಿ (ಎನ್. ಇ.ಇ. ಆರ್.ಎಂ.ಎ.ಎನ್. ಅಂದರೆ ನಿರ್ಮಾಣ್) ಪ್ರಶಸ್ತಿ ವಿಜೇತರನ್ನು ಇಂದು ಸನ್ಮಾನಿಸಲಾಯಿತು. ಬಿಇಇಯ ಪರಿಸರ-ನಿವಾಸ ಸಂಹಿತೆ (ಇಎನ್ಎಸ್) ಮತ್ತು ಇಂಧನ ಸಂರಕ್ಷಿತ ಕಟ್ಟಡ ಸಂಹಿತೆ-ಎನರ್ಜಿ ಕನ್ಸರ್ವೇಶನ್ ಬಿಲ್ಡಿಂಗ್ ಕೋಡ್ (ಇಸಿಬಿಸಿ) ಗೆ ಅನುಸಾರವಾಗಿ ಅನುಕರಣೀಯ ಕಟ್ಟಡ ವಿನ್ಯಾಸಗಳನ್ನು ಪರಿಗಣಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳವರೆಗೆ ದೇಶಾದ್ಯಂತದಿಂದ ನಿರ್ಮಾಣ್ ಪ್ರಶಸ್ತಿಗೆ ಕಟ್ಟಡ ಯೋಜನೆಗಳು ಸಲ್ಲಿಕೆಯಾಗಿದ್ದವು. ವಾಸ್ತುಶಿಲ್ಪಿಗಳು, ಎಂಜಿನಿಯರ್ ಗಳು, ಬಿಲ್ಡರ್ ಗಳು, ಕಟ್ಟಡ ಸಾಮಗ್ರಿಗಳ ಕೈಗಾರಿಕೆಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಂಶೋಧಕರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಸೇರಿದಂತೆ 500 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
2070ರ ವೇಳೆಗೆ ಭಾರತವನ್ನು ಹೊರಸೂಸುವಿಕೆಯಲ್ಲಿ ನಿವ್ವಳ ಶೂನ್ಯವನ್ನಾಗಿ ಮಾಡುವ ಗುರಿಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ಲಾಸ್ಗೋದಲ್ಲಿ ಸಿಒಪಿ 26ರಲ್ಲಿ ಪ್ರಸ್ತಾಪಿಸಿದ ಲೈಫ್ (ಜೀವನಶೈಲಿ ಮತ್ತು ಪರಿಸರ) ಹಾಗು ಪಂಚಾಮೃತದ ಹಿನ್ನೆಲೆಯಲ್ಲಿ ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಈ ಸಮ್ಮೇಳನವು ಕಟ್ಟಡ ಕ್ಷೇತ್ರದಲ್ಲಿ ಬಳಕೆಯಾಗುವ ಕಡಿಮೆ ಇಂಗಾಲದ ವಿವಿಧ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳ ಪ್ರದರ್ಶನವನ್ನು ಸಹ ಏರ್ಪಡಿಸಿದೆ.
ಇಂಧನ-ದಕ್ಷ ಮತ್ತು ಕಡಿಮೆ-ಇಂಗಾಲದ ಕಟ್ಟಡಗಳಿಗೆ ನವೀನ ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಒದಗಿಸುವ ಕಂಪನಿಗಳ ಹಲವಾರು ಸಿಇಒಗಳು ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು ಮತ್ತು ಸುಮಾರು 20 ಕಂಪನಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶನಾಂಗಣದಲ್ಲಿ ಪ್ರದರ್ಶಿಸಿದ್ದವು. ಇದರಲ್ಲಿ ಕಡಿಮೆ-ಇಂಗಾಲದ ಕಟ್ಟಡ ಸಾಮಗ್ರಿಗಳು, ಬಾಹ್ಯ ಚಲನಶೀಲ ನೆರಳು ವ್ಯವಸ್ಥೆಗಳು, ಇಂಧನ-ದಕ್ಷತೆಯ ವಾತಾವರಣ ತಂಪಾಗಿಸುವ ತಂತ್ರಜ್ಞಾನಗಳು ಸೇರಿವೆ. ಈ ಸಮ್ಮೇಳನ ಮತ್ತು ಪ್ರದರ್ಶನವು ಕಡಿಮೆ ಇಂಗಾಲ, ಮತ್ತು ಇಂಧನ ದಕ್ಷತೆಯ ಆವಾಸಸ್ಥಾನವನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯೂಹಾತ್ಮಕ ಸಹಯೋಗ, ಪಾಲುದಾರಿಕೆ, ಜಾಲ ಮತ್ತು ಮಾಹಿತಿ ವಿನಿಮಯವನ್ನು ಉತ್ತೇಜಿಸುವ ನಿರೀಕ್ಷೆಯಿದೆ.
"ಕಡಿಮೆ ಇಂಗಾಲದ ಕಟ್ಟಡಗಳಿಗೆ ಹಣಕಾಸು ಒದಗಣೆ, ವಸತಿ ಕಟ್ಟಡಗಳಲ್ಲಿ ಆರಾಮದಾಯಕ ಉಷ್ಣತೆ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ" ದಂತಹ ನಿರ್ಣಾಯಕ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಿತು. ಈ ಸಮ್ಮೇಳನದಲ್ಲಿ "ಸಂಪನ್ಮೂಲ ದಕ್ಷತೆಯ ಸಂವಾದದಲ್ಲಿ ಮಹಿಳೆಯರು" ಎಂಬ ವಿಷಯದ ಮೇಲೆ ವಿಶೇಷ ಗೋಷ್ಠಿಗಳು ನಡೆದವು.
ಹಿನ್ನೆಲೆ:
ಇಂಡೋ-ಸ್ವಿಸ್ ಬಿಲ್ಡಿಂಗ್ ಎನರ್ಜಿ ಎಫಿಷಿಯೆನ್ಸಿ ಪ್ರಾಜೆಕ್ಟ್ (ಬಿಇಇಪಿ) ಎಂಬ ಯೋಜನೆಯು ಭಾರತ ಸರ್ಕಾರ ಮತ್ತು ಸ್ವಿಟ್ಜರ್ಲೆಂಡ್ ಸರ್ಕಾರದ ನಡುವಿನ ಸಹಯೋಗದ ಯೋಜನೆಯಾಗಿದೆ. ಈ ಅವಧಿಯಲ್ಲಿ, ಬಿಇಇಪಿಯು ಪರಿಸರ-ನಿವಾಸ ಸಂಹಿತೆಯನ್ನು (ವಸತಿ ಕಟ್ಟಡಗಳಿಗೆ ಇಂಧನ ಸಂರಕ್ಷಣಾ ಕಟ್ಟಡ ಕೋಡ್) ರೂಪಿಸುವಲ್ಲಿ, ಸುಮಾರು 50 ಕಟ್ಟಡಗಳ ವಿನ್ಯಾಸ ರೂಪಿಸುವಲ್ಲಿ ಮತ್ತು 5000 ಕ್ಕೂ ಹೆಚ್ಚು ಕಟ್ಟಡ ವಲಯದ ವೃತ್ತಿಪರರಿಗೆ ತರಬೇತಿ ನೀಡುವಲ್ಲಿ ಬಿಇಇಗೆ ತಾಂತ್ರಿಕ ಬೆಂಬಲವನ್ನು ಒದಗಿಸಿದೆ.
*****
(Release ID: 1859697)
Visitor Counter : 167