ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (ಎನ್‌ಎಲ್‌ಇಎಂ) 2022 ನ್ನು ಬಿಡುಗಡೆ ಮಾಡಿದ ಡಾ. ಮನ್ಸುಖ್ ಮಾಂಡವೀಯ


ಎನ್‌ಎಲ್‌ಇಎಂ 2022 ರಲ್ಲಿ 34 ಹೊಸ ಔಷಧಗಳೊಂದಿಗೆ 384 ಔಷಧಗಳನ್ನು ಸೇರಿಸಲಾಗಿದೆ.

“ಪ್ರಧಾನಮಂತ್ರಿಯವರ 160;ಸಬ್ಕೋ ದವಾಯಿ, ಸಸ್ತಿ ದವಾಯಿ ದೃಷ್ಟಿಕೋನದ ಅಡಿಯಲ್ಲಿ ಎನ್‌ಎಲ್‌ಇಎಂ ಕಡಿಮೆ ವೆಚ್ಚದ ಕೈಗೆಟುಕುವ ಆರೋಗ್ಯ ರಕ್ಷಣೆಯ ಕಡೆಗೆ ಮತ್ತೊಂದು ಹೆಜ್ಜೆಯಾಗಿದೆ”

ಇದು ಔಷಧಿಗಳ ಪರಿಣಾಮಕಾರಿತ್ವ, ಸುರಕ್ಷತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಲಭ್ಯತೆಯನ್ನು ಮತ್ತಷ್ಟು ಖಚಿತಪಡಿಸುತ್ತದೆ: ಡಾ ಮನ್ಸುಖ್ ಮಾಂಡವೀಯ

ಆಂಟಿಮೈಕ್ರೊಬಿಯಲ್ ನಿರೋಧಕ ಶಕ್ತಿ ಕುರಿತು ಜಾಗೃತಿ ಮೂಡಿಸಲು ಡಾ. ಭಾರತಿ ಪ್ರವೀಣ್ ಪವಾರ್ ಕರೆ

Posted On: 13 SEP 2022 3:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಬ್ಕೋ ದವಾಯಿ, ಸಸ್ತಿ ದವಾಯಿ ದೃಷ್ಟಿಕೋನದ ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ದಿಕ್ಕಿನಲ್ಲಿ, ಆರೋಗ್ಯ ರಕ್ಷಣೆಯ ಎಲ್ಲಾ ಹಂತಗಳಲ್ಲಿ ಕೈಗೆಟುಕುವ ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸುವಲ್ಲಿ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (ಎನ್‌ಎಲ್‌ಇಎಂ) ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. ಅವರು ಇಂದು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (ಎನ್‌ಎಲ್‌ಇಎಂ) 2022 ಅನ್ನು ಬಿಡುಗಡೆ ಮಾಡಿ ಮಾತನಾಡಿ, ಇದು ವೆಚ್ಚ-ಪರಿಣಾಮಕಾರಿ, ಗುಣಮಟ್ಟದ ಔಷಧಗಳಿಗೆ ಉತ್ತೇಜನ ನೀಡುತ್ತದೆ ಮತ್ತು ನಾಗರಿಕರಿಗೆ ಆರೋಗ್ಯ ರಕ್ಷಣೆಯ ಮೇಲಿನ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದರು.

ಈ ಪಟ್ಟಿಯಲ್ಲಿ 34 ಹೊಸ ಔಷಧಗಳ ಸೇರ್ಪಡೆಯೊಂದಿಗೆ 384 ಔಷಧಗಳಿವೆ. ಆದರೆ ಹಿಂದಿನ ಪಟ್ಟಿಯಿಂದ 26 ಔಷಧಗಳನ್ನು ಕೈಬಿಡಲಾಗಿದೆ. ಔಷಧಿಗಳನ್ನು 27 ಚಿಕಿತ್ಸಕ ವರ್ಗಗಳಾಗಿ ವರ್ಗೀಕರಿಸಲಾಗಿದೆ.

ಪರಿಣಾಮಕಾರಿತ್ವ, ಸುರಕ್ಷತೆ, ಗುಣಮಟ್ಟ ಮತ್ತು ಚಿಕಿತ್ಸೆಯ ಒಟ್ಟು ವೆಚ್ಚದ ಆಧಾರದ ಮೇಲೆ ಆದ್ಯತೆಯ ಆರೋಗ್ಯ ಅಗತ್ಯಗಳನ್ನು ಪೂರೈಸುವ ಔಷಧಿಗಳನ್ನು "ಅಗತ್ಯ ಔಷಧಿಗಳು" ಎಂದು ಕರೆಯಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಮೂರು ಪ್ರಮುಖ ಅಂಶಗಳನ್ನು ಅಂದರೆ ವೆಚ್ಚ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರಿಗಣಿಸಿ ಔಷಧಿಗಳ ತರ್ಕಬದ್ಧ ಬಳಕೆಯನ್ನು ಉತ್ತೇಜಿಸುವುದು ಎನ್‌ಎಲ್‌ಇಎಂನ ಪ್ರಾಥಮಿಕ ಉದ್ದೇಶವಾಗಿದೆ. ಇದು ಆರೋಗ್ಯ ಸಂಪನ್ಮೂಲಗಳು ಮತ್ತು ಬಜೆಟ್‌ನ ಅತ್ಯುತ್ತಮ ಬಳಕೆ; ಔಷಧ ಖರೀದಿ ನೀತಿಗಳು, ಆರೋಗ್ಯ ವಿಮೆ; ಔಷಧಿಗಳನ್ನು ಶಿಫಾರಸು ಮಾಡುವ ಅಭ್ಯಾಸಗಳನ್ನು ಸುಧಾರಿಸುವುದು; ಸ್ನಾತಕ/ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಮತ್ತು ಔಷಧೀಯ ನೀತಿಗಳ ರಚನೆಯಲ್ಲಿ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಎನ್‌ಎಲ್‌ಇಎಂನಲ್ಲಿ, ಔಷಧಗಳನ್ನು ಆರೋಗ್ಯ ವ್ಯವಸ್ಥೆಯ ಮಟ್ಟವನ್ನು ಆಧರಿಸಿ ಪಿ- ಪ್ರಾಥಮಿಕ, ಎಸ್-ಸೆಕೆಂಡರಿ ಮತ್ತು ಟಿ-ತೃತೀಯ ಎಂದು ವರ್ಗೀಕರಿಸಲಾಗಿದೆ.

ಎಚ್ಚರಿಕೆಯಿಂದ ಆಯ್ಕೆಮಾಡಲಾಗಿರುವ ಔಷಧಿಗಳ ಸೀಮಿತ ಪಟ್ಟಿಯು ಆರೋಗ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ, ವೆಚ್ಚ-ಪರಿಣಾಮಕಾರಿ ಆರೋಗ್ಯ ರಕ್ಷಣೆ ಮತ್ತು ಔಷಧಿಗಳ ಉತ್ತಮ ನಿರ್ವಹಣೆಯನ್ನು ಒದಗಿಸುವ ಪರಿಕಲ್ಪನೆಯನ್ನು ಆಧರಿಸಿದೆ ಎಂದು ಅವರು ವಿವರಿಸಿದರು. ಎನ್‌ಎಲ್‌ಇಎಂ ಒಂದು ಕ್ರಿಯಾಶೀಲ ದಾಖಲೆಯಾಗಿದೆ ಮತ್ತು ಬದಲಾಗುತ್ತಿರುವ ಸಾರ್ವಜನಿಕ ಆರೋಗ್ಯದ ಆದ್ಯತೆಗಳು ಮತ್ತು ಔಷಧೀಯ ಜ್ಞಾನದಲ್ಲಿನ ಪ್ರಗತಿಯನ್ನು ಪರಿಗಣಿಸಿ ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ ಎಂದು ಅವರು ಹೇಳಿದರು. ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು ಮೊದಲು 1996 ರಲ್ಲಿ ರೂಪಿಸಲಾಯಿತು ಮತ್ತು ಇದನ್ನು 2003, 2011 ಮತ್ತು 2015 ರಲ್ಲಿ ಮೂರು ಬಾರಿ ಪರಿಷ್ಕರಿಸಲಾಗಿತ್ತು.

ಔಷಧಿಗಳ ರಾಷ್ಟ್ರೀಯ ಸ್ವತಂತ್ರ ಸ್ಥಾಯಿ ಸಮಿತಿ (ಎಸ್‌ಎನ್‌ಸಿಎಂ) ಯನ್ನು 2018 ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ರಚಿಸಿದೆ. ತಜ್ಞರು ಮತ್ತು ಭಾಗೀದಾರರ ಜೊತೆ ವಿವರವಾದ ಸಮಾಲೋಚನೆಯ ನಂತರ ಸಮಿತಿಯು ಎನ್‌ಎಲ್‌ಇಎಂ, 2015 ಅನ್ನು ಪರಿಷ್ಕರಿಸಿತು ಮತ್ತು ಎನ್‌ಎಲ್‌ಇಎಂ, 2022 ಕುರಿತ ತನ್ನ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸಲ್ಲಿಸಿತು. ಭಾರತ ಸರ್ಕಾರವು ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದೆ ಮತ್ತು ಪಟ್ಟಿಯನ್ನು ಅಂಗೀಕರಿಸಿದೆ ಎಂದು ಸಚಿವರು ಹೇಳಿದರು. ಎನ್‌ಎಲ್‌ಇಎಂ ರಚನೆಯ ಪ್ರಕ್ರಿಯೆಯಲ್ಲಿ ಭಾಗೀದಾರರ ವೈಜ್ಞಾನಿಕ ಪ್ರತಿಕ್ರಿಯೆಗಳು ಮತ್ತು ಸೇರ್ಪಡೆ/ಹೊರಗಿಡುವ ತತ್ವವನ್ನು ಅನುಸರಿಸಲಾಗಿದೆ ಎಂದು ಅವರು ಹೇಳಿದರು.

ನಾಗರಿಕರಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವ ದಿಕ್ಕಿನಲ್ಲಿ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಪರಿಷ್ಕೃತ ಎನ್‌ಎಲ್‌ಇಎಂಗಾಗಿ ಭಾಗೀದಾರರನ್ನು ಅಭಿನಂದಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವರಾದ ಡಾ ಭಾರತಿ ಪ್ರವೀಣ್ ಪವಾರ್, ನಮ್ಮ ವಿಜ್ಞಾನಿಗಳು ಮತ್ತು ಸಮುದಾಯಕ್ಕೆ ದೊಡ್ಡ ಸವಾಲಾಗಿರುವ ಆಂಟಿಮೈಕ್ರೊಬಿಯಲ್ ನಿರೋಧಕ ಶಕ್ತಿ (ಎಎಂಆರ್) ಕುರಿತು ಸಮಾಜದಲ್ಲಿ ಜಾಗೃತಿಯನ್ನು ಹೆಚ್ಚಿಸಬೇಕಿದೆ ಎಂದು ಒತ್ತಿ ಹೇಳಿದರು.

ಶೈಕ್ಷಣಿಕ, ಕೈಗಾರಿಕೋದ್ಯಮಿಗಳು ಮತ್ತು ಸಾರ್ವಜನಿಕ ನೀತಿ ತಜ್ಞರಂತಹ ಭಾಗೀದಾರರೊಂದಿಗೆ ಮತ್ತು ಡಬ್ಲ್ಯುಹೆಚ್‌ಒ ಇಎಂಎಲ್‌2021 ರಂತಹ ನಿರ್ಣಾಯಕ ದಾಖಲೆಗಳೊಂದಿಗೆ ನಿರಂತರ ಸಮಾಲೋಚನೆಯ ನಂತರ ಎನ್‌ಎಲ್‌ಇಎಂ 2022 ರ ಪರಿಷ್ಕರಣೆ ಮಾಡಲಾಗಿದೆ.

ಎನ್ಎಲ್ಇಎಂನಲ್ಲಿ ಸೇರ್ಪಡೆಗಾಗಿ ಕೆಳಗಿನ ಮಾನದಂಡಗಳನ್ನು ಅನುಸರಿಸಲಾಗಿದೆ:

1.    ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿರುವ ರೋಗಗಳಿಗೆ ಉಪಯುಕ್ತವಾದವು.

2.    ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (ಡಿಜಿಸಿಐ) ಪರವಾನಗಿ/ಅನುಮೋದಿತವಾದುವು.

3.    ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಸಾಬೀತುಪಡಿಸಿದವು.

            4.    ತುಲನಾತ್ಮಕವಾಗಿ ವೆಚ್ಚ ಪರಿಣಾಮಕಾರಿಯಾದುವು

            5.   ಪ್ರಸ್ತುತ ಚಿಕಿತ್ಸಾ ಮಾರ್ಗಸೂಚಿಗಳೊಂದಿಗೆ ಹೊಂದಿಕೆಯಾಗುವುವು.

6.    ಭಾರತದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅಡಿಯಲ್ಲಿ ಶಿಫಾರಸು ಮಾಡಿರುವುವು. (ಉದಾ. ಲಿಂಫಾಟಿಕ್ ಫೈಲೇರಿಯಾಸಿಸ್ 2018 ರ ನಿರ್ಮೂಲನೆಗಾಗಿ ವೇಗವರ್ಧಿತ ಯೋಜನೆಯ ಐವರ್‌ಮೆಕ್ಟಿನ್). ‌

7.    ಒಂದೇ ಚಿಕಿತ್ಸಕ ವರ್ಗದಿಂದ ಒಂದಕ್ಕಿಂತ ಹೆಚ್ಚು ಔಷಧಗಳು ಲಭ್ಯವಿದ್ದಾಗ, ಆ ವರ್ಗದ ಒಂದು ಮೂಲಮಾದರಿಯ/ ವೈದ್ಯಕೀಯವಾಗಿ ಹೆಚ್ಚು ಸೂಕ್ತವಾದ ಔಷಧವನ್ನು ಸೇರಿಸಬೇಕು.

8.    ಒಟ್ಟು ಚಿಕಿತ್ಸೆಯ ಬೆಲೆಯನ್ನು ಪರಿಗಣಿಸಲಾಗುತ್ತದೆಯೇ ಹೊರತು ಔಷಧಿಯ ಯೂನಿಟ್ ಬೆಲೆಯನ್ನಲ್ಲ

             9.    ಸ್ಥಿರ ಡೋಸ್ ಸಂಯೋಜನೆಗಳನ್ನು ಸಾಮಾನ್ಯವಾಗಿ ಸೇರಿಸಲಾಗಿಲ್ಲ

10.   ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸುವ ಆಗಾಗ್ಗೆ ಲಸಿಕೆಗಳು (ಉದಾ. ರೋಟವೈರಸ್ ಲಸಿಕೆ).

 

ಎನ್‌ಎಲ್‌ಇಎಂ-2022  ಮಾಹಿತಿಗೆ  ಈ ತಾಣಕ್ಕೆ ಭೇಟಿ ನೀಡಿ:  https://cdsco.gov.in/opencms/opencms/system/modules/CDSCO.WEB/elements/download_file_division.jsp?num_id=OTAxMQ

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಡಿಸಿಜಿಐ ಡಾ. ವಿ.ಜಿ. ಸೋಮಾನಿ, ಜಂಟಿ ಕಾರ್ಯದರ್ಶಿ ಡಾ.ಮನ್‌ದೀಪ್ ಕುಮಾರ್ ಭಂಡಾರಿ, ಎಎಎಸ್‌ಸಿಎಂ ಉಪಾಧ್ಯಕ್ಷ ಡಾ.ವೈ.ಕೆ.ಗುಪ್ತಾ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 


(Release ID: 1859064) Visitor Counter : 220