ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಭಾರತ ಮತ್ತು ಅನಿವಾಸಿ ಭಾರತೀಯರ ನಡುವೆ ಜಗತ್ತಿನಾದ್ಯಂತ ಇರುವ ಸಹಭಾಗಿತ್ವ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪಯಣಕ್ಕೆ ವೇಗ ನೀಡಲು ನಿಜಕ್ಕೂ ಸಹಕಾರಿ; ಶ್ರೀ ಪಿಯೂಷ್ ಗೋಯಲ್


2 ಮತ್ತು 3ನೇ ದರ್ಜೆ ನಗರಗಳು ಹಾಗೂ ದೂರದ ಪ್ರದೇಶಗಳಲ್ಲಿ ನವೋದ್ಯಮ ಬೆಂಬಲಿಸಲು ಮತ್ತು ಮಾರ್ಗದರ್ಶನ ನೀಡಲು ಪಾಲೋ  ಆಲ್ಟೋದಲ್ಲಿ ಸೇತು ಆರಂಭ; ಶ್ರೀ ಪಿಯೂಷ್ ಗೋಯಲ್

ಹೂಡಿಕೆ ಮತ್ತು ವ್ಯಾಪಾರ ಉತ್ತೇಜನ ಸಂಸ್ಥೆಗಳ ನಡುವಿನ ಸಮನ್ವಯತೆ ಭಾರತದಲ್ಲಿ ಗಮನಾರ್ಹ ಬದಲಾವಣೆ ತರಲಿದೆ; ಶ್ರೀ ಪಿಯೂಷ್ ಗೋಯಲ್

Posted On: 11 SEP 2022 11:45AM by PIB Bengaluru

ಭಾರತ ಮತ್ತು ಅನಿವಾಸಿ ಭಾರತೀಯರ ನಡುವೆ ಜಗತ್ತಿನಾದ್ಯಂತ ಇರುವ ಪಾಲುದಾರಿಕೆ ಭಾರತ ಅಭಿವೃದ್ಧಿ ರಾಷ್ಟ್ರವಾಗುವ ನಿಟ್ಟಿನಲ್ಲಿ ಕೈಗೊಂಡಿರುವ ಪಯಣಕ್ಕೆ ವೇಗ ನೀಡುವಲ್ಲಿ ನಿಜಕ್ಕೂ ಸಹಕಾರಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣೆ ಮತ್ತು ಜವಳಿ ಖಾತೆ ಸಚಿವ ಶ್ರೀ ಪಿಯೂಷ್ ಗೋಯಲ್ ಇಂದು ಹೇಳಿದ್ದಾರೆ. ಅವರು ತಮ್ಮ ಅಮೆರಿಕ ಪ್ರವಾಸದ ಕೊನೆಯ ದಿನವಾದ ಇಂದು ಲಾಸ್ ಏಂಜಲೀಸ್ ನಲ್ಲಿ ಮಾಧ್ಯಮಗಳ ಜತೆ ಸಂವಾದ ನಡೆಸಿದರು.

ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಮೆರಿಕದಲ್ಲಿನ ಭಾರತೀಯ ಸಮುದಾಯದ ವಾಣಿಜ್ಯೋದ್ಯಮಿಗಳು ಮತ್ತು ಹೂಡಿಕೆದಾರರ ಜತೆ ಸಂವಾದ ನಡೆಸಲಾಗಿದೆ. ಅವರು ಸಾಕಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ ಮತ್ತು ಹಲವು ಸಲಹೆಗಳನ್ನು ನೀಡಿದ್ದು, ಅವು ಚಿಂತನೆಗೆ ಕಾರಣವಾಗಿವೆ ಎಂದರು. ಅವರು ಭಾರತದ ಪ್ರಗತಿಗಾಥೆಯಲ್ಲಿ ಬಾಧ್ಯಸ್ಥರಾಗಲಿದ್ದಾರೆ ಮತ್ತು ಮಾತೃಭೂಮಿಗೆ ಪುನಃ ಕೊಡುಗೆ ನೀಡುವ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆಯಲಿದ್ದಾರೆ ಎಂದು ಶ್ರೀ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದರು. ಅನಿವಾಸಿ ಭಾರತೀಯ ಸಮುದಾಯದವರು ಸಾಮಾನ್ಯವಾಗಿ ತಾವು ಆಯ್ಕೆಮಾಡಿಕೊಂಡಿರುವ ವೃತ್ತಿಗಳಲ್ಲಿ ಅತ್ಯಂತ ಯಶಸ್ವಿಯಾಗಿರುತ್ತಾರೆ. ಅವರಲ್ಲಿ ಪ್ರತಿಯೊಬ್ಬರೂ ಸಮಾಜದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿರುತ್ತಾರೆ ಮತ್ತು ಅಮೆರಿಕದ ಆರ್ಥಿಕತೆಗೆ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ಭಾರತದಲ್ಲಿನ ಬಾಧ್ಯಸ್ಥರ ಜತೆ ಅಮೆರಿಕದ ಉದ್ಯಮಿಗಳು ಮತ್ತು ಅವರ ಚಿಂತನೆಗಳನ್ನು ಸಂಯೋಜಿಸುವ ಪಾತ್ರವನ್ನು ಸರ್ಕಾರ ಮಾಡಬೇಕೆಂಬ ಬಗ್ಗೆ ಹಲವು ಸಲಹೆಗಳು ಬಂದಿವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಭಾರತ ಈಗಾಗಲೇ ಎರಡು ಉಪಕ್ರಮಗಳನ್ನು ಕೈಗೊಂಡಿವೆ ಎಂದು ಸಚಿವರು ವಿವರಿಸಿದರು. ಇನ್ವೆಸ್ಟ್ ಇಂಡಿಯಾ ಅಡಿಯಲ್ಲಿ ಜಗತ್ತಿನಾದ್ಯಂತ ಇರುವ ಹೂಡಿಕೆದಾರರನ್ನು ಬೆಂಬಲಿಸಲಾಗುತ್ತಿದೆ ಮತ್ತು ಅತ್ಯಂತ ಕ್ರಿಯಾಶೀಲ ನವೋದ್ಯಮ ಭಾರತ ತಂಡ ಭಾರತೀಯ ನವೋದ್ಯಮಗಳನ್ನು ಬೆಂಬಲಿಸುವುದೇ ಅಲ್ಲದೆ, ಅವುಗಳಿಗೆ (ಇನ್ ಕ್ಯುಬೇಶನ್ (ಪೋಷಣಾ ಕೇಂದ್ರಗಳು), ಆಕ್ಸಲರೇಟರ್ ಗಳು(ವೇಗವರ್ಧಕಗಳು), ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಸ್ಥಾಪಿಸಲು ಭಾರತದ ಮತ್ತು ವಿದೇಶದ ಹೂಡಿಕೆದಾರರಿಗೆ ಸಂಪರ್ಕ ಕಲ್ಪಿಸಿ ನೆರವು ನೀಡಲಾಗುತ್ತಿದೆ ಎಂದರು.

ವಾಣಿಜ್ಯ ಇಲಾಖೆಯನ್ನು ಮರು ವಿನ್ಯಾಸಗೊಳಿಸುವ ಪ್ರಸ್ತಾವದ ಕುರಿತು ಉಲ್ಲೇಖಿಸಿದ ಶ್ರೀ ಗೋಯಲ್ ಅವರು, ಇನ್ವೆಸ್ಟ್ ಇಂಡಿಯಾದ ಜತೆಗೆ ವ್ಯಾಪಾರ ಉತ್ತೇಜನಾ ಸಂಸ್ಥೆಯನ್ನು ಸ್ಥಾಪಿಸಿ, ಅದಕ್ಕೆ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ನೀಡುವ ಕುರಿತು ಚಿಂತನೆ ಇದೆ ಎಂದರು. ಅದು ಭಾರತದಲ್ಲಿನ ವ್ಯಾಪಾರ ಉತ್ತೇಜನಕ್ಕೆ ಪೂರಕ ಘಟಕವಾಗಿ ಕಾರ್ಯನಿರ್ವಹಿಸಲಿದೆ ಎಂದ ಅವರು, ಈ ಹೂಡಿಕೆ ಉತ್ತೇಜನ ಮತ್ತು ವ್ಯಾಪಾರ ಉತ್ತೇಜನ ಮಂಡಳಿಗಳು ಭಾರತ, ತಾನು ತಲುಪಬೇಕಾಗಿರುವ ಗುರಿಯನ್ನು ತಲುಪುವಲ್ಲಿ ಗಣನೀಯ ಬದಲಾವಣೆಗೆ ಕಾರಣವಾಗಲಿವೆ ಎಂದರು.

ನವೋದ್ಯಮ ಬೆಂಬಲಿಸುವ ಉಪಕ್ರಮವಾಗಿ ಪಾಲೊ ಆಲ್ಟೋ ನಲ್ಲಿ ಸೇತು ಆರಂಭದ ಕುರಿತು  ಮಾತನಾಡಿದ ಅವರು, ಒಮ್ಮೆ ಚಿಂತನೆ ಎಲ್ಲಾ ವಲಯಗಳನ್ನು ತಲುಪಿದರೆ ಅದು ಖಂಡಿತ ನಮಗೆ ಎರಡು ಮತ್ತು ಮೂರನೇ ದರ್ಜೆ ನಗರಗಳಲ್ಲಿ ಹಾಗೂ ದೂರದ ಪ್ರದೇಶಗಳಲ್ಲಿ ನವೋದ್ಯಮಗಳಿಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದರು. ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹಲವು ಯುವಜನರಲ್ಲಿ ಉತ್ತಮ ಚಿಂತನೆಗಳಿರುತ್ತವೆ. ಸೇತು ಅವರಿಗೆ ಉದ್ಯಮಿಗಳ ಜತೆ ಬೆಸೆಯಲು ಮತ್ತು ತಮ್ಮ ಚಿಂತನೆಗಳನ್ನು ಹೂಡಿಕೆದಾರರೊಂದಿಗೆ ಹಂಚಿಕೊಳ್ಳಲು ನೆರವಾಗಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.  

ಇದಕ್ಕೂ ಮುನ್ನ ಅವರು ಲಾಸ್ ಏಂಜಲೀಸ್ ನಲ್ಲಿನ ಶ್ರೀ ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ವಾಣಿಜ್ಯ ಸಮುದಾಯದೊಂದಿಗೆ ಸಮಾಲೋಚನೆ ನಡೆಸಿದರು.

ಸಚಿವರು ಸ್ಯಾನ್ ಫ್ರಾಸಿಸ್ಕೋದಲ್ಲಿ ವೆಂಚರ್ ಕ್ಯಾಪಿಟಲಿಸ್ಟ್(ಬಂಡವಾಳ ಹೂಡಿಕೆದಾರರೊಂದಿಗೆ) ಮತ್ತು ಸಿಂಗ್ಯುಲಾರಿಟಿ ವಿಶ್ವವಿದ್ಯಾಲಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

“ಡಿಜಿಟಲೀಕರಣ ಆಧರಿಸಿ ಭಾರತದ ಪ್ರಗತಿಯನ್ನು ಪ್ರಮುಖವಾಗಿ ಉಲ್ಲೇಖಿಸಲಾಯಿತು. ಭಾರತದ ಪ್ರಗತಿ ಗಾಥೆಯನ್ನು ವಿವರಿಸಲಾಯಿತು ಮತ್ತು ಪರಿವರ್ತನಾ ಪಯಣದಲ್ಲಿ ಪಾಲುದಾರರಾಗುವಂತೆ ಆಹ್ವಾನ ನೀಡಲಾಯಿತು’’ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

 

 

https://static.pib.gov.in/WriteReadData/userfiles/image/image001X2IE.jpg

 

https://static.pib.gov.in/WriteReadData/userfiles/image/image0022N8O.jpg

*****

 

 

 


(Release ID: 1858548) Visitor Counter : 139