ಗ್ರಾಮೀಣಾಭಿವೃದ್ಧಿ ಸಚಿವಾಲಯ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಾದ ʻದೀನ್ ದಯಾಳ್ ಅಂತ್ಯೋದಯ ಯೋಜನೆʼಯಿಂದ ಹೊರಗುಳಿದ ಕುಟುಂಬಗಳನ್ನು ಯೋಜನಾ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸಾಮಾಜಿಕ ಸಂಘಟನಾ ಅಭಿಯಾನ 


ಸೆಪ್ಟೆಂಬರ್ 7, 2022 ರಿಂದ 15 ದಿನಗಳ ದೇಶವ್ಯಾಪಿ ಅಭಿಯಾನ ಆರಂಭವಾಗಿದೆ

Posted On: 09 SEP 2022 12:23PM by PIB Bengaluru

ಗ್ರಾಮೀಣಾಭಿವೃದ್ಧಿ ಸಚಿವಾಲಯವು  2022ರ ಸೆಪ್ಟೆಂಬರ್ 7 ರಿಂದ 20ರವರೆಗೆ 15 ದಿನಗಳ ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುತ್ತಿದೆ. ಇದು 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊರಗುಳಿದಿರುವ ಗ್ರಾಮೀಣ ಬಡ ಮಹಿಳೆಯರನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಾದ ʻದೀನ್ ದಯಾಳ್ ಅಂತ್ಯೋದಯ ಯೋಜನೆʼ(ಡಿ.ಎ.ವೈ-ಎನ್‌.ಆರ್‌.ಎಲ್‌.ಎಂ) ಅಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಸೇರಿಸುವ ಪ್ರಕ್ರಿಯೆಗೆ ವೇಗ ನೀಡುತ್ತದೆ. 

ಅಭಿಯಾನದ ಸಮಯದಲ್ಲಿ, ಪ್ರತಿ ಹಳ್ಳಿಯಿಂದ ಮಹಿಳಾ ಸಂಸ್ಥೆಗಳು ಸಾಮಾಜಿಕ ಸಂಘಟನೆ ಕಾರ್ಯಕ್ರಮವನ್ನು ನಡೆಸುತ್ತವೆ. ಅಲ್ಲಿ ಪ್ರತಿಯೊಬ್ಬ ಸದಸ್ಯರು ಒಬ್ಬ ಸ್ನೇಹಿತರನ್ನು ಅಥವಾ ಸ್ವಸಹಾಯ ಗುಂಪುಗಳಿಲ್ಲದ ಸದಸ್ಯರನ್ನು ತಮ್ಮೊಂದಿಗೆ ಕರೆತರುತ್ತಾರೆ. ಈ ವೇಳೆ, ʻಡಿ.ಎ.ವೈ-ಎನ್‌.ಆರ್‌.ಎಲ್‌.ಎಂʼ ಸ್ವಸಹಾಯ ಗುಂಪುಗಳ ಭಾಗವಾಗಿರುವುದರ ಪ್ರಯೋಜನಗಳನ್ನು ಒತ್ತಿ ಹೇಳಲಾಗುವುದು. ಜೊತೆಗೆ ಹೀಗೆ ಸ್ವಸಹಾಯ ಗುಂಪನ್ನು ಸೇರಲು ಪ್ರೇರೇಪಿಸಲಾದ ವ್ಯಕ್ತಿಗಳನ್ನು ಈ ಸಮುದಾಯ ಸಂಸ್ಥೆಗಳೊಂದಿಗೆ ಸಂಪರ್ಕಿಸಲಾಗುವುದು. ದೂರದ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರನ್ನು ತಲುಪಲು ರಾಜ್ಯಗಳಾದ್ಯಂತ ಬ್ಲಾಕ್ ಮಟ್ಟದ ಸಿಬ್ಬಂದಿಯಿಂದ ವಿಶೇಷ ಕಾರ್ಯತಂತ್ರಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ.

ಉನ್ನತ ಮಟ್ಟದ ಒಕ್ಕೂಟಗಳು, ಎರಡನೇ ಹಂತದ ಗ್ರಾಮ ಸಂಸ್ಥೆಗಳು (ವಿಒ) ಮತ್ತು ಮೂರನೇ ಹಂತದ ಕ್ಲಸ್ಟರ್ ಮಟ್ಟದ ಒಕ್ಕೂಟಗಳಿಗೆ (ಸಿಎಲ್ಎಫ್‌) ಸ್ವಸಹಾಯ ಗುಂಪುಗಳ ಸೇರ್ಪಡೆಯನ್ನು ಖಾತರಿಪಡಿಸುವ ಗುರಿಯನ್ನು ಈ ಅಭಿಯಾನವು ಹೊಂದಿದೆ. 
ಇಂತಹ ಸಂಘಟನಾ ರಚನೆಗಳು ಜೀವನೋಪಾಯ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸರಕಾರ ರೂಪಿಸಿದ ಕಾರ್ಯಕ್ರಮಗಳನ್ನು ಮುನ್ನಡೆಸುವ ಬಡವರ ಸಮುದಾಯ-ನಿರ್ವಹಣೆಯ ಸಂಸ್ಥೆಗಳಾಗಿ ವಿಕಸನಗೊಳ್ಳುತ್ತವೆ ಎಂಬುದು ಸಚಿವಾಲಯದ ದೃಷ್ಟಿಕೋನವಾಗಿದೆ. ಎಲ್ಲಾ ಸ್ವಸಹಾಯ ಗುಂಪುಗಳು, ಗ್ರಾಮ ಸಂಸ್ಥೆಗಳು ಮತ್ತು ಕ್ಲಸ್ಟರ್‌ ಹಂತದ ಒಕ್ಕೂಟಗಳಿಗೆ ಅವುಗಳು ರಚನೆಯಾಗಿ ಏಳು ದಿನಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗುವುದು.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ನಾಗೇಂದ್ರನಾಥ್ ಸಿನ್ಹಾ ಅವರು ಸೆಪ್ಟೆಂಬರ್ 5ರಂದು ಈ ಅಭಿಯಾನವನ್ನು ಘೋಷಿಸಿದರು. ಆಗಸ್ಟ್ 31ರವರೆಗಿನ ಅಂಕಿ-ಅಂಶಗಳ ಪ್ರಕಾರ, 8.5 ಕೋಟಿಗೂ ಹೆಚ್ಚು ಕುಟುಂಬಗಳು ʻಡಿ.ಎ.ವೈ-ಎನ್‌.ಆರ್‌.ಎಲ್‌.ಎಂʼ ಅಡಿಯಲ್ಲಿ 78.33 ಲಕ್ಷ ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿವೆ.

*****



(Release ID: 1858197) Visitor Counter : 413