ಪ್ರಧಾನ ಮಂತ್ರಿಯವರ ಕಛೇರಿ

ಮಂಗಳೂರಿನಲ್ಲಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಅನುವಾದ

Posted On: 02 SEP 2022 5:10PM by PIB Bengaluru

ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಜಿ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಜಿ, ಕೇಂದ್ರ ಸಚಿವ ಸಂಪುಟದಲ್ಲಿನ ನನ್ನ ಸಹೋದ್ಯೋಗಿಗಳೇ, ಕರ್ನಾಟಕ ಸರ್ಕಾರದ ಸಚಿವರೇ, ಸಂಸದರೇ ಮತ್ತು ಶಾಸಕರೇ ಹಾಗೂ ಬಹು ದೊಡ್ಡ ಸಂಖ್ಯೆಯಲ್ಲಿ ನೆರೆದಿರುವ ನನ್ನೆಲ್ಲಾ ಆತ್ಮೀಯ ಸಹೋದರ ಸಹೋದರಿಯರೇ, 

ಭಾರತದ ಸಾಗರಶಕ್ತಿಯ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಅದು ರಾಷ್ಟ್ರದ ಮಿಲಿಟರಿ ಭದ್ರತೆಯಾಗಿರಬಹುದು ಅಥವಾ ರಾಷ್ಟ್ರದ ಆರ್ಥಿಕ ಭದ್ರತೆಯಾಗಿರಬಹುದು, ಭಾರತ ಇಂದು ವಿಫುಲ ಅವಕಾಶಗಳಿಗೆ ಸಾಕ್ಷಿಯಾಗುತ್ತಿದೆ. ಕೆಲವು ಗಂಟೆಗಳ ಹಿಂದೆ ಕೊಚ್ಚಿಯಲ್ಲಿ ಭಾರತದ ಮೊದಲ ದೇಶೀಯ ವಿಮಾನವಾಹಕ ಲೋಕಾರ್ಪಣೆ ಮಾಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತಂದಿದೆ.

ಇದೀಗ ಮಂಗಳೂರಿನಲ್ಲಿ 3 ಸಾವಿರದ 700 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಐತಿಹಾಸಿಕ ಮಂಗಳೂರು ಬಂದರಿನ ಸಾಮರ್ಥ್ಯವೃದ್ಧಿಯ ಜತೆಗೆ ಹಲವು ಯೋಜನೆಗಳನ್ನು ಉದ್ಘಾಟಿಸಲಾಗುತ್ತಿದೆ ಮತ್ತು ನಮ್ಮ ಮೀನುಗಾರರ ಹಾಗೂ ತೈಲ ಸಂಸ್ಕರಣಾ ಘಟಕಗಳ ಆದಾಯವೃದ್ಧಿ ನಿಟ್ಟಿನಲ್ಲಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳಿಗಾಗಿ ನಾನು ಕರ್ನಾಟಕದ ಜನತೆಯನ್ನು ಅಭಿನಂದಿಸುತ್ತೇನೆ.

ಈ ಯೋಜನೆಗಳು ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಹೆಚ್ಚನ ಬಲ ತಂದುಕೊಡಲಿವೆ ಮತ್ತು ಕರ್ನಾಟಕದಲ್ಲಿ ವ್ಯಾಪಾರ ವಹಿವಾಟು ಮತ್ತಷ್ಟು ಸುಲಭವಾಗಲಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ಕರ್ನಾಟಕದ ರೈತರು ಮತ್ತು ಮೀನುಗಾರರು ಸುಲಭವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಲಿದೆ.

ಮಿತ್ರರೇ,

ಈ ವರ್ಷದ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ನಾನು ಮಾತನಾಡಿದಾಗ 5 ಪ್ರಾಣ (ಸಂಕಲ್ಪಗಳನ್ನು) ಪ್ರಸ್ತಾಪಿಸಿದ್ದೆ, ಆ ಪೈಕಿ ಮೊದಲನೆಯದು ಅಭಿವೃದ್ಧಿಯಾಗಿರುವ ಭಾರತವನ್ನು ಸೃಷ್ಟಿಸುವುದು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ದೇಶದ  ಉತ್ಪಾದನಾ ವಲಯದಲ್ಲಿ ಮೇಕ್ ಇನ್ ಇಂಡಿಯಾ ವಿಸ್ತರಣೆ ಅತ್ಯಂತ ಅಗತ್ಯವಾಗಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು, ನಮ್ಮ ರಫ್ತು ಹೆಚ್ಚಳವಾಗಬೇಕು ಮತ್ತು ನಮ್ಮ ಉತ್ಪನ್ನಗಳು ಕಡಿಮೆ ವೆಚ್ಚದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುವಂತಾಗುವುದು ಅತ್ಯಗತ್ಯ. ಇದು ಕಡಿಮೆ ದರದ ಮತ್ತು ಸುಲಭ ಸಾಗಾಣೆ ಸೌಕರ್ಯವಿಲ್ಲದೆ ಸಾಧ್ಯವಾಗುವುದಿಲ್ಲ. 

ಇದನ್ನು ಗಮನದಲ್ಲಿರಿಸಿಕೊಂಡು ಕಳೆದ 8 ವರ್ಷಗಳಿಂದೀಚೆಗೆ ದೇಶದಲ್ಲಿ ಮೂಲಸೌಕರ್ಯ ವಲಯದಲ್ಲಿ ಹಿಂದೆಂದೂ ಕೈಗೊಳ್ಳಲಾಗದಂತಹ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇಂದು ದೇಶದಲ್ಲಿ ಬಹುತೇಕ ಎಲ್ಲ ಭಾಗದಲ್ಲೂ ಪ್ರಮುಖ ಮೂಲಸೌಕರ್ಯ ಯೋಜನೆಗಳು ಪ್ರಗತಿಯಲ್ಲಿವೆ. ಅಂತಹ ಯೋಜನೆಗಳು ನಡೆಯದಿರುವಂತಹ ಜಾಗಗಳೇ ವಿರಳವಾಗಿವೆ. ನೆರೆಯ ರಾಜ್ಯಗಳ ಜತೆಗಿನ ರಸ್ತೆ ಮೂಲಸೌಕರ್ಯವನ್ನು ಭಾರತಮಾಲಾ ಯೋಜನೆಯಡಿ ಬಲವರ್ಧನೆಗೊಳಿಸಿದರೆ, ಸಾಗರಮಾಲಾ ಯೋಜನೆಯಡಿ ಕರಾವಳಿ ಮೂಲಸೌಕರ್ಯಕ್ಕೆ ಶಕ್ತಿ ತುಂಬಲಾಗುತ್ತಿದೆ.

ಸಹೋದರ ಸಹೋದರಿಯರೇ,

ದೇಶ ಇಂದು ಬಂದರು ಆಧರಿತ ಅಭಿವೃದ್ಧಿಯನ್ನು ಅಭಿವೃದ್ಧಿಯ ಪ್ರಮುಖ ಮಂತ್ರವನ್ನಾಗಿಸಿಕೊಂಡಿದೆ. ಈ ಪ್ರಯತ್ನಗಳ ಪರಿಣಾಮವಾಗಿ ಭಾರತದ ಬಂದರುಗಳ ಸಾಮರ್ಥ್ಯ ಕೇವಲ 8 ವರ್ಷಗಳಲ್ಲಿ ಬಹುತೇಕ ದುಪ್ಪಟ್ಟಾಗಿದೆ. ಆ ಸಾಮರ್ಥ್ಯ ಎಷ್ಟಿದೆ ಎಂದರೆ 2014ರವರೆಗೆ ದೇಶದಲ್ಲಿ ನಿರ್ಮಾಣ ಮಾಡಲಾಗಿದ್ದ ಒಟ್ಟು ಬಂದರಿನ ಸಾಮರ್ಥ್ಯವನ್ನು ಕಳೆದ 8 ವರ್ಷಗಳಲ್ಲಿ ಅಷ್ಟೇ ಪ್ರಮಾಣದ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಲಾಗಿದೆ.

ಮಂಗಳೂರು ಬಂದಿರಿಗೆ ಹೊಸ ತಂತ್ರಜ್ಞಾನ ಸಂಬಂಧಿ ಸೌಕರ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ಅದರ ಸಾಮರ್ಥ್ಯ ಮತ್ತು ದಕ್ಷತೆ ಎರಡೂ ಹೆಚ್ಚಾಗಲಿದೆ. ಅನಿಲ ಮತ್ತು ದ್ರವ ರೂಪದ ಸರಕು ದಾಸ್ತಾನಿಗೆ ಸಂಬಂಧಿಸಿದ ನಾಲ್ಕು ಯೋಜನೆಗಳಿಗೆ ಇಂದು ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ. ಇದರಿಂದ ಕರ್ನಾಟಕ ಮತ್ತು ದೇಶಕ್ಕೆ ಅತಿ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಇದರಿಂದ ಖಾದ್ಯ ತೈಲ, ಎಲ್ ಪಿಜಿ ಅನಿಲ ಮತ್ತು ಬಿಟುಮನ್ ಆಮದು ವೆಚ್ಚ ಗಣನೀಯವಾಗಿ ತಗ್ಗಲಿದೆ.

ಮಿತ್ರರೇ,

ಭಾರತ ‘ಅಮೃತ ಕಾಲ’ದಲ್ಲಿ  ಹಸಿರು ಪ್ರಗತಿ ಸಂಕಲ್ಪ ಕೈಗೊಂಡು ಮುನ್ನಡೆಯುತ್ತಿದೆ. ಹಸಿರು ಪ್ರಗತಿ ಮತ್ತು ಹಸಿರು ಉದ್ಯೋಗಗಳು ಹೊಸ ಅವಕಾಶಗಳನ್ನು ತೆರೆದಿಡುತ್ತಿವೆ. ಸಂಸ್ಕರಣಾಗಾರಗಳಿಗೆ ಹೊಸ ಸೌಕರ್ಯಗಳನ್ನು ಸೇರ್ಪಡೆ ಮಾಡುತ್ತಿರುವುದು ಇಂದು ನಮ್ಮ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಈವರೆಗೆ ಈ ಸಂಸ್ಕರಣಾಗಾರ ನದಿ ನೀರನ್ನು ಅವಲಂಬಿಸಿತ್ತು. ಇದೀಗ ನಿರ್ಲವಣೀಕರಣ ಘಟಕದಿಂದ ಸಂಸ್ಕರಣಾಗಾರ, ನದಿ ನೀರಿನ ಅವಲಂಬನೆ ತಗ್ಗಲಿದೆ.

ಸಹೋದರ ಮತ್ತು ಸಹೋದರಿಯರೇ,

ದೇಶದಲ್ಲಿ ಕಳೆದ 8 ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿರುವುದರಿಂದ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಿದೆ. ಸಾಗರಮಾಲಾ ಯೋಜನೆಯಡಿ ಕರ್ನಾಟಕ ಅತಿ ದೊಡ್ಡ ಫಲಾನುಭವಿಯಾಗಿದೆ. ಕಳೆದ 8 ವರ್ಷದಲ್ಲಿ ಕರ್ನಾಟಕದಲ್ಲಿ ಸುಮಾರು 70 ಸಾವಿರ ಕೋಟಿ ರೂಪಾಯಿ ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅಲ್ಲದೆ ಸುಮಾರು ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಯೋಜನೆಗಳು ಪ್ರಗತಿಯಲ್ಲಿದೆ. ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ, ಬೆಂಗಳೂರು-ಮೈಸೂರು ರಸ್ತೆ ಹೆದ್ದಾರಿ ಆರು ಪಥವಾಗಿ ಅಭಿವೃದ್ಧಿ, ಬೆಂಗಳೂರು ಮತ್ತು ಪುಣೆ ನಡುವೆ ಸಂಪರ್ಕ ಕಲ್ಪಿಸುವ ಗ್ರೀನ್ ಫೀಲ್ಡ್ ಕಾರಿಡಾರ್ ಅಭಿವೃದ್ಧಿ ಮತ್ತು ಬೆಂಗಳೂರು ಹೊರ ವರ್ತುಲ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. 

2014ಕ್ಕಿಂತ ಹಿಂದಿನ ಅವಧಿಗೆ ಹೋಲಿಸಿದರೆ, ರೈಲ್ವೆ ಬಜೆಟ್ ನಲ್ಲಿ ಕರ್ನಾಟಕದ ಪಾಲು ನಾಲ್ಕು ಪಟ್ಟಿಗೂ ಅಧಿಕವಾಗಿದೆ. ಕಳೆದ 8 ವರ್ಷಗಳಲ್ಲಿ ನಾಲ್ಕು ಪಟ್ಟಿಗೂ ಅಧಿಕ ವೇಗದಲ್ಲಿ ರೈಲ್ವೆ ಮಾರ್ಗಗಳನ್ನು ವಿಸ್ತರಿಸಲಾಗಿದೆ. ಕಳೆದ 8 ವರ್ಷಗಳಲ್ಲಿ ಕರ್ನಾಟಕದಲ್ಲಿ ರೈಲ್ವೆ ಮಾರ್ಗಗಳ ವಿದ್ಯುದೀಕರಣದ ಬಹುತೇಕ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.

ಮಿತ್ರರೇ,

ಆಧುನಿಕ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ಇಂದು ಅತಿ ಹೆಚ್ಚಿನ ಒತ್ತು ನೀಡುತ್ತಿದೆ. ಏಕೆಂದರೆ ಅದರಿಂದ ಮಾತ್ರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಾಧ್ಯ. ಆಧುನಿಕ ಮೂಲಸೌಕರ್ಯ ನಿರ್ಮಾಣದ ಜತೆಗೆ ಸೌಕರ್ಯಗಳನ್ನು ಹೆಚ್ಚಿಸುತ್ತಿರುವುದರಿಂಧ ದೊಡ್ಡ ಮಟ್ಟದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇದು ಕೂಡ ನಮ್ಮ ಅಮೃತಕಾಲದ ಅತಿ ದೊಡ್ಡ ಸಂಕಲ್ಪಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಟ್ಟ ಹೆಜ್ಜೆಯಾಗಿದೆ.

ಸಹೋದರ ಮತ್ತು ಸಹೋದರಿಯರೇ,

ದೇಶದ ಕ್ಷಿಪ್ರ ಅಭಿವೃದ್ಧಿಗೆ ದೇಶದ ಜನರ ಶಕ್ತಿಯನ್ನು ಸರಿಯಾದ ನಿಟ್ಟಿನಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದು ಕೂಡ ತುಂಬಾ ಅತ್ಯಗತ್ಯವಾಗಿದೆ. ದೇಶದ ಜನರ ಶಕ್ತಿಯನ್ನು ಮೂಲಸೌಕರ್ಯಗಳ ಕ್ರೂಢೀಕರಣಕ್ಕೆ ವ್ಯಯಿಸಿದರೆ ಅದು ದೇಶದ ಪ್ರಗತಿಯ ಮೇಲೂ ಪರಿಣಾಮ ಬೀರಲಿದೆ. ಪಕ್ಕಾ ಮನೆಗಳು, ಶೌಚಾಲಯಗಳು, ಶುದ್ಧ ನೀರು, ವಿದ್ಯುತ್ ಮತ್ತು ಹೊಗೆರಹಿತ ಅಡುಗೆ ಕೋಣೆಗಳು ಇಂದಿನ ಘನತೆಯ ಜೀವನಕ್ಕೆ ಮೂಲ ಅಗತ್ಯತೆಗಳಾಗಿವೆ.

ನಮ್ಮ ಡಬಲ್ ಇಂಜಿನ್ ಸರ್ಕಾರ ಈ ಮೂಲಸೌಕರ್ಯಗಳಿಗೆ ಗರಿಷ್ಠ ಒತ್ತು ನೀಡುತ್ತಿದೆ. ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ 3 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ಕರ್ನಾಟಕದಲ್ಲೂ ಕೂಡ ಬಡವರಿಗಾಗಿ 8 ಲಕ್ಷಕ್ಕೂ ಅಧಿಕ ಪಕ್ಕಾ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಮಧ್ಯಮ ವರ್ಗದ ಸಾವಿರಾರು ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನೆರವನ್ನು ನೀಡಲಾಗಿದೆ.

ಜಲಜೀವನ್ ಮಿಷನ್ ಅಡಿ ಕಳೆದ ಮೂರು ವರ್ಷಗಳಲ್ಲಿ ಆರು ಕೋಟಿಗೂ ಅಧಿಕ ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿನ 30 ಲಕ್ಷಕ್ಕೂ ಅಧಿಕ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ತಲುಪಿದೆ. ಈ ಸೌಕರ್ಯಗಳಿಂದಾಗಿ ನಮ್ಮ ಸಹೋದರಿಯರು ಮತ್ತು ಪುತ್ರಿಯರಿಗೆ ಹೆಚ್ಚಿನ ಅನುಕೂಲ ಆಗಿರುವುದು ನನಗೆ ಸಂತಸ ತಂದಿದೆ.

ಮಿತ್ರರೇ,

ಬಡ ಜನರ ಪ್ರಮುಖ ಅಗತ್ಯತೆಗಳೆಂದರೆ ಕೈಗೆಟಕುವ ದರದಲ್ಲಿ ಚಿಕಿತ್ಸಾ ಸೌಕರ್ಯ ಮತ್ತು ಸಾಮಾಜಿಕ ಭದ್ರತೆ. ಯಾವುದೇ ರೀತಿಯ ಅವಘಡ ಸಂಭವಿಸಿದರೆ, ಇಡೀ ಕುಟುಂಬ ಮತ್ತು ಕೆಲವೊಮ್ಮೆ ಆ ಬಡ ಕುಟುಂಬದ ಭವಿಷ್ಯದ ಪೀಳಿಗೆಯೂ ಸಹ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಬಡ ಜನರಿಗೆ ಈ ಸಂಕಷ್ಟದಿಂದ ಆಯಷ್ಮಾನ್ ಭಾರತ್ ಯೋಜನೆ ಮುಕ್ತಗೊಳಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದ ಸುಮಾರು 4 ಕೋಟಿ ಬಡಜನರು ತಾವು ಆಸ್ಪತ್ರೆಗೆ ಸೇರಿದ್ದಾಗ ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ. ಅದರ ಪರಿಣಾಮ ಬಡಜನರು ಸುಮಾರು 50 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದ್ದಾರೆ. ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಬಡ ರೋಗಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ ಮತ್ತು ಅವರು ಸುಮಾರು 4 ಸಾವಿರ ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿದ್ದಾರೆ.

ಸಹೋದರ ಮತ್ತು ಸಹೋದರಿಯರೇ,

ಸ್ವಾತಂತ್ರ್ಯಾ ನಂತರ ದಶಕಗಳ ವರೆಗೆ ಕೇವಲ ಶ್ರೀಮಂತ ಜನರು ಮಾತ್ರ ಅಭಿವೃದ್ಧಿಯ ಪ್ರಯೋಜನ ಮತ್ತು ಲಾಭ ಪಡೆಯುವಂತಹ ಸ್ಥಿತಿ ಇತ್ತು. ಇದೇ ಮೊದಲ ಬಾರಿಗೆ ಆರ್ಥಿಕವಾಗಿ ಹಿಂದುಳಿದವರನ್ನೂ ಸಹ ಅಭಿವೃದ್ಧಿಯ ಪ್ರಯೋಜನಗಳಿಗೆ ಸಂಯೋಜಿಸಲಾಗುತ್ತಿದೆ. ನಮ್ಮ ಸರ್ಕಾರ ಕೂಡ ಬಡ ಆರ್ಥಿಕ ಸ್ಥಿತಿಯ ಕಾರಣಕ್ಕಾಗಿ ಹಿಂದುಳಿದವರ ಪರವಾಗಿ ನಿಂತಿದೆ. ಸಣ್ಣ ರೈತರು, ವರ್ತಕರು, ಮೀನುಗಾರರು ಮತ್ತು ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಕೋಟ್ಯಾಂತರ ಜನರಿಗೆ ಇದೇ ಮೊದಲ ಬಾರಿಗೆ ದೇಶದ ಅಭಿವೃದ್ಧಿಯ ಪ್ರಯೋಜನಗಳು ದೊರಕಲಾರಂಭಿಸಿವೆ. ಅವರು ಅಭಿವೃದ್ಧಿಯ ಮುಖ್ಯವಾಹಿನಿಯನ್ನು ಸೇರುತ್ತಿದ್ದಾರೆ. 

ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ದೇಶದ 11 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ 2 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಲಾಗಿದೆ. ಕರ್ನಾಟಕದ ಸುಮಾರು 55 ಲಕ್ಷಕ್ಕೂ ಅಧಿಕ ಸಣ್ಣ ರೈತರು, 10,000 ಕೋಟಿ ರೂಪಾಯಿಗಳ ನೆರವನ್ನು ಸ್ವೀಕರಿಸಿದ್ದಾರೆ. ಪಿಎಂ-ಸ್ವನಿಧಿ ಯೋಜನೆಯಡಿ ದೇಶದ 35 ಲಕ್ಷ ಬೀದಿ ಬದಿ ವ್ಯಾಪಾರಿಗಳು ಆರ್ಥಿಕ ನೆರವನ್ನು ಸ್ವೀಕರಿಸಿದ್ದಾರೆ. ಈ ಯೋಜನೆಯಡಿ ಕರ್ನಾಟಕದ ಸುಮಾರು 2 ಲಕ್ಷ ಬೀದಿ ಬದಿ ವ್ಯಾಪಾರಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಮುದ್ರಾ ಯೋಜನೆಯಡಿ ದೇಶಾದ್ಯಂತ ಸಣ್ಣ ಉದ್ಯಮಿಗಳಿಗೆ ಸುಮಾರು 20 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಸಾಲವನ್ನು ನೀಡಲಾಗಿದೆ. ಕರ್ನಾಟಕದ ಲಕ್ಷಾಂತರ ಸಣ್ಣ ಉದ್ಯಮಿಗಳಿಗೆ ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ಬ್ಯಾಂಕ್ ಸಾಲವನ್ನು ನೀಡಲಾಗಿದೆ.

ಮಿತ್ರರೇ,

ನಮ್ಮ ಮೀನುಗಾರರು ಮತ್ತು ಬಂದರು ಸುತ್ತಮುತ್ತಲಿನ ಗ್ರಾಮಗಳ ಜನರು, ಕರಾವಳಿ ತೀರದ ನಮ್ಮ ಸಹೋದರ, ಸಹೋದರಿಯರ ಜೀವನ ಸುಧಾರಿಸಲು ಡಬಲ್ ಇಂಜಿನ್ ಸರ್ಕಾರ ವಿಶೇಷ ಪ್ರಯತ್ನಗಳನ್ನು ಕೈಗೊಂಡಿದೆ. ಇತ್ತೀಚೆಗಷ್ಟೇ ನಮ್ಮ ಮೀನುಗಾರ ಸ್ನೇಹಿತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗಿದೆ. ಅಲ್ಲದೆ ಅವರಿಗೆ ಆಳದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ದೋಣಿಗಳು ಮತ್ತು ಆಧುನಿಕ ಸಲಕರಣೆಗಳನ್ನು ಒದಗಿಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ಮೀನುಗಾರರ ಜೀವನೋಪಾಯ ಮತ್ತು ಕಲ್ಯಾಣ ಕಾರ್ಯಗಳ ವೃದ್ಧಿಗೆ ಪಿಎಂ-ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಸಬ್ಸಿಡಿ ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಕುಳಾಯಯಲ್ಲಿ ಮೀನುಗಾರಿಕೆ ಬಂದರಿಗೆ ಇಂದು ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ. ಮೀನುಗಾರಿಕಾ ವಲಯದ ಜತೆ ಗುರುತಿಸಿಕೊಂಡಿರುವ ನಮ್ಮ ಸಹೋದರ ಸಹೋದರಿಯರ ಹಲವು ವರ್ಷಗಳ ಬೇಡಿಕೆ ಇದಾಗಿತ್ತು. ಇದು ಸಿದ್ಧಗೊಂಡಾಗ ಮೀನುಗಾರರ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಈ ಯೋಜನೆ ಸಾವಿರಾರು ಮೀನುಗಾರಿಕೆ ಕುಟುಂಬಗಳಿಗೆ ನೆರವಾಗಲಿದೆ ಮತ್ತು ಹಲವರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. 

ಗೆಳೆಯರೇ,

ದೇಶದ ಜನರ ಆಶೋತ್ತರಗಳನ್ನು ಪೂರ್ಣಗೊಳಿಸಲು ನಮ್ಮ ಡಬಲ್ ಇಂಜಿನ್ ಸರ್ಕಾರ ಹಗಲು ರಾತ್ರಿ ಕಾರ್ಯೋನ್ಮುಖವಾಗಿದೆ. ದೇಶದ ಜನರ ಆಶೋತ್ತರಗಳು ನಮ್ಮ ಸರ್ಕಾರದ ಜನರ ಆದ್ಯತೆಗಳಂತಾಗಿವೆ. ಭಾರತ ವಿಶ್ವ ದರ್ಜೆಯ ಮೂಲಸೌಕರ್ಯ ಹೊಂದಬೇಕು ಎಂಬುದು ದೇಶದ ಜನರ ಆಶೋತ್ತರವಾಗಿದೆ. ಇಂದು ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಆಧುನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಹೆಚ್ಚು ಹೆಚ್ಚು ನಗರಗಳಿಗೆ ಮೆಟ್ರೋ ಸಂಪರ್ಕ ಸೌಲಭ್ಯ ಕಲ್ಪಿಸಬೇಕು ಎಂಬುದು ದೇಶದ ಜನರ ಆಶೋತ್ತರವಾಗಿದೆ. ನಮ್ಮ ಸರ್ಕಾರದ ಪ್ರಯತ್ನಗಳ ಪರಿಣಾಮ ಕಳೆದ 8 ವರ್ಷಗಳಲ್ಲಿ ಮೆಟ್ರೋ ನಗರಗಳ ಸಂಖ್ಯೆ ನಾಲ್ಕು ಪಟ್ಟು ಅಧಿಕವಾಗಿದೆ.

ದೇಶದ ಜನರು ಕೈಗೆಟಕುವ ದರದಲ್ಲಿ ವಿಮಾನಯಾನ ಸೇವೆ ಲಭ್ಯವಾಗಬೇಕೆಂದು ಬಯಸುತ್ತಿದ್ದಾರೆ. ಈವರೆಗೆ ಉಡಾನ್ ಯೋಜನೆಯಡಿ ಒಂದು ಕೋಟಿಗೂ ಅಧಿಕ ಪ್ರಯಾಣಿಕರು ವಿಮಾನಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ. ಭಾರತದಲ್ಲಿ ಶುದ್ಧ ಆರ್ಥಿಕತೆ ಇರಬೇಕು ಎಂಬುದು ದೇಶದ ಜನರ ಆಶೋತ್ತರವಾಗಿದೆ. ಇಂದು ಡಿಜಿಟಲ್ ಪಾವತಿಗಳು ಐತಿಹಾಸಿಕ ಮಟ್ಟದಲ್ಲಿ ಹೆಚ್ಚಾಗಿವೆ ಮತ್ತು ಭೀಮ್–ಯುಪಿಐನಂತಹ ನಮ್ಮ ಆವಿಷ್ಕಾರಗಳು ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆಯುತ್ತಿವೆ.

ದೇಶದ ಜನರು ಇಂದು ವೇಗ ಮತ್ತು ಕಡಿಮೆ ದರದಲ್ಲಿ ದೇಶದ ಪ್ರತಿಯೊಂದು ಮೂಲೆಮೂಲೆಯಲ್ಲೂ ಅಂತರ್ಜಾಲ ಲಭ್ಯವಾಗುವಂತೆ ಜನರು ಬಯಸುತ್ತಿದ್ದಾರೆ. ಇಂದು ಸುಮಾರು ಆರು ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಇಂಟರ್ ನೆಟ್ ಸೌಲಭ್ಯ ಒದಗಿಸಲಾಗಿದೆ. 

ಈ ವಲಯದಲ್ಲಿ 5ಜಿ ಸೌಕರ್ಯ ಹೊಸ ಕ್ರಾಂತಿಯನ್ನು ತರುತ್ತಿದೆ. ಕರ್ನಾಟಕದಲ್ಲಿನ ಡಬಲ್ ಇಂಜಿನ್ ಸರ್ಕಾರ ರಾಜ್ಯದ ಜನರ ಆಶೋತ್ತರ ಮತ್ತು ಅಗತ್ಯತೆಗಳನ್ನು ಪೂರೈಸಲು ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತಿಳಿಸಲು ಹರ್ಷವಾಗುತ್ತಿದೆ.

ಮಿತ್ರರೇ,

ಭಾರತದ ಸಾಗರ ಮಾರ್ಗ ಸುಮಾರು 7 ಸಾವಿರದ 500 ಕಿಲೋಮೀಟರ್ ಗೂ ಅಧಿಕ ಜಾಗದಲ್ಲಿ ಹರಡಿದೆ. ದೇಶ ಈ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಕರಾವಳಿ ತೀರ ಮತ್ತು ಪಶ್ಚಿಮ ಘಟ್ಟ, ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿವೆ. ಹೊಸ ಮಂಗಳೂರು ಪೋರ್ಟ್ ಪ್ರತಿ ಋತುಮಾನದಲ್ಲೂ ಪ್ರತಿ ಕ್ರೂಸ್ ನಲ್ಲಿ ಸರಾಸರಿ 25 ಸಾವಿರ ಪ್ರವಾಸಿಗರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ನಾನು ತಿಳಿದಿದ್ದೇನೆ ಮತ್ತು ಇವರಲ್ಲಿ ಹೆಚ್ಚಿನವರು ವಿದೇಶಿ ಪ್ರಯಾಣಿಕರಾಗಿದ್ದಾರೆ. ಇನ್ನೂ ನೇರವಾಗಿ ಹೇಳುವುದಾದರೆ ಇನ್ನೂ ಹಲವು ಸಾಧ್ಯತೆಗಳಿವೆ. ಭಾರತದಲ್ಲಿ ಮಧ್ಯಮವರ್ಗದ ಜನರ ಶಕ್ತಿ ಹೆಚ್ಚಾಗುತ್ತಿರುವಂತೆಯೇ ಭಾರತದಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ.

ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಅದು ನಮ್ಮ ಗುಡಿ ಕೈಗಾರಿಕೆಗಳು, ಕುಶಲಕರ್ಮಿಗಳು, ಖಾದಿ ಕೈಗಾರಿಕೆಗಳು, ಬೀದಿ ವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಸಮಾಜದ ಸಣ್ಣ ವರ್ಗಕ್ಕೆ ಹೆಚ್ಚಿನ ಲಾಭವಾಗಲಿದೆ. ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ನವ ಮಂಗಳೂರು ಬಂದರು ನಿರಂತರವಾಗಿ ಹೊಸ ಸೌಕರ್ಯಗಳನ್ನು ಸೇರ್ಪಡೆ ಮಾಡಲು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದನ್ನು ತಿಳಿದು ನನಗೆ ಹರ್ಷವಾಗುತ್ತಿದೆ.

ಮಿತ್ರರೇ,

ಕೊರೊನಾ ಬಿಕ್ಕಟ್ಟು ಆರಂಭವಾದಾಗ ನಾನು ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಬಗ್ಗೆ ಮಾತನಾಡಿದ್ದೆನು. ಇಂದು ನಮ್ಮ ರಾಷ್ಟ್ರ ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಅದನ್ನು ಸಾಬೀತುಪಡಿಸಿದೆ. ಕೆಲವು ದಿನಗಳ ಹಿಂದೆ ಹೊರಬಿದ್ದ ಜಿಡಿಪಿ ಅಂಕಿ-ಅಂಶಗಳಿಂದ ಕೊರೊನಾ ಅವಧಿಯಲ್ಲಿ ಭಾರತ ಕೈಗೊಂಡ ಕೆಲವು ನೀತಿ ನಿರ್ಧಾರಗಳು ಎಷ್ಟು ಪ್ರಮುಖವಾದವು ಎಂಬುದನ್ನು ಸಾಬೀತುಪಡಿಸಿವೆ. ಕಳೆದ ವರ್ಷ ಸಾಕಷ್ಟು ಜಾಗತಿಕ ಅಡಚಣೆಗಳ ನಡುವೆಯೂ ಭಾರತ 670 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ ಅಂದರೆ 50 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದೆ. ಪ್ರತಿಯೊಂದು ಸವಾಲನ್ನು ಹಿಮ್ಮೆಟ್ಟಿಸಿ ಭಾರತ ಮರ್ಕಂಡೈಸ್ ರಫ್ತಿನಲ್ಲಿ 418 ಬಿಲಿಯನ್ ಡಾಲರ್ ಅಂದರೆ 31 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿ ಹೊಸ ದಾಖಲೆ ಸೃಷ್ಟಿಸಿದೆ.

ಇಂದು ದೇಶದ ಬೆಳವಣಿಗೆಯ ಎಂಜಿನ್‌ಗೆ ಸಂಬಂಧಿಸಿದ ಪ್ರತಿಯೊಂದು ವಲಯವೂ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೇವಾ ಕ್ಷೇತ್ರವೂ ಕ್ಷಿಪ್ರ ಬೆಳವಣಿಗೆಯತ್ತ ಸಾಗುತ್ತಿದೆ. ಪಿಎಲ್ ಐ ಯೋಜನೆಗಳ ಪರಿಣಾಮವು ಉತ್ಪಾದನಾ ವಲಯದ ಮೇಲೆ ಗೋಚರಿಸಲಾರಂಭಿಸಿದ್ದು, ಮೊಬೈಲ್ ಫೋನ್ ಸೇರಿದಂತೆ ಇಡೀ ಇಲೆಕ್ಟ್ರಾನಿಕ್ ತಯಾರಿಕಾ ಕ್ಷೇತ್ರ ಹಲವುಪಟ್ಟು ಬೆಳವಣಿಗೆ ಸಾಧಿಸಿದೆ. 

ಮೂರು ವರ್ಷಗಳಲ್ಲಿ ಆಟಿಕೆಗಳ ಆಮದು ಎಷ್ಟು ಕಡಿಮೆಯಾಗಿದೆಯೋ, ಅದರ ರಫ್ತು ಕೂಡ ಅಷ್ಟೇ ಹೆಚ್ಚಳವಾಗಿದೆ. ಈ ಎಲ್ಲಾ ಪ್ರಯೋಜನಗಳು ಮಂಗಳೂರಿನಂತಹ ಪ್ರಮುಖ ಬಂದರುಗಳನ್ನು ಹೊಂದಿರುವ ಮತ್ತು ಭಾರತೀಯ ಸರಕುಗಳನ್ನು ರಫ್ತು ಮಾಡಲು ತಮ್ಮ ಸಂಪನ್ಮೂಲಗಳನ್ನು ಒದಗಿಸುವ ದೇಶದ ಕರಾವಳಿ ಪ್ರದೇಶಗಳಿಗೆ ಸೇರುತ್ತಿವೆ.

ಮಿತ್ರರೇ,

ಸರ್ಕಾರದ ಪ್ರಯತ್ನಗಳಿಂದಾಗಿ, ದೇಶವು ಕಳೆದ ಕೆಲ ವರ್ಷಗಳಲ್ಲಿ ಕ್ರಮೇಣ ಕರಾವಳಿ ದಟ್ಟಣೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ದೇಶದ ನಾನಾ ಬಂದರುಗಳಲ್ಲಿ  ಸೌಲಭ್ಯಗಳ ಹೆಚ್ಚಳ ಮತ್ತು ಸಂಪನ್ಮೂಲಗಳಿಂದಾಗಿ ಕರಾವಳಿ ಸಂಚಾರ ಈಗ ಸುಲಭವಾಗಿದೆ. ಬಂದರು ಸಂಪರ್ಕ ಉತ್ತಮವಾಗಬೇಕು ಮತ್ತು ಅದನ್ನು ವೇಗಗೊಳಿಸಬೇಕು ಎಂಬುದು ಸರ್ಕಾರದ ಪ್ರಯತ್ನವಾಗಿದೆ. ಆದ್ದರಿಂದ, ಪಿಎಂ ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆಯಡಿಯಲ್ಲಿ 250 ಕ್ಕೂ ಹೆಚ್ಚು ರೈಲ್ವೆ ಮತ್ತು ರಸ್ತೆಗಳ ಯೋಜನೆಗಳನ್ನು ಗುರುತಿಸಲಾಗಿದ್ದು, ಇದು ತಡೆರಹಿತ ಬಂದರು ಸಂಪರ್ಕಕ್ಕೆ ಸಹಾಯ ಮಾಡುತ್ತದೆ.

ಸಹೋದರ ಮತ್ತು ಸಹೋದರಿಯರೇ,

ಶೌರ್ಯ ಮತ್ತು ವ್ಯಾಪಾರಕ್ಕೆ ಹೆಸರುವಾಸಿಯಾದ ಈ ಕರಾವಳಿ ಪ್ರದೇಶವು ಅಗಾಧ ಪ್ರತಿಭೆಗಳಿಂದ ತುಂಬಿದೆ. ಭಾರತದ ಅನೇಕ ಉದ್ಯಮಶೀಲರು ಇಲ್ಲಿಂದ ಬಂದಿದ್ದಾರೆ. ಭಾರತದ ಅನೇಕ ಸುಂದರ ದ್ವೀಪಗಳು ಮತ್ತು ಬೆಟ್ಟ ಗುಡ್ಡಗಳು ಕರ್ನಾಟಕದಲ್ಲಿಯೇ ಇವೆ. ಭಾರತದ ಅನೇಕ ಪ್ರಸಿದ್ಧ ದೇವಾಲಯಗಳು ಮತ್ತು ಧಾರ್ಮಿಕ ಯಾತ್ರಾ ಕೇಂದ್ರಗಳಿಲ್ಲಿವೆ. ಇಂದು ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ನಾನು ರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನ ಭೈರಾದೇವಿಯನ್ನು ಸಹ ಸ್ಮರಿಸಲು ಬಯಸುತ್ತೇನೆ. ಭಾರತದ ನೆಲ ಮತ್ತು ವ್ಯಾಪಾರವನ್ನು ಗುಲಾಮಗಿರಿಯಿಂದ ಉಳಿಸಲು ಅವರ ಹೋರಾಟ ಅಭೂತಪೂರ್ವವಾಗಿತ್ತು. ಇಂದು ಭಾರತ ರಫ್ತು ಕ್ಷೇತ್ರದಲ್ಲಿ ಮುನ್ನಡೆಯಲು ಈ ವೀರ ಮಹಿಳೆಯರು ಉತ್ತಮ ಸ್ಫೂರ್ತಿಯಾಗಿದ್ದಾರೆ.

ಕರ್ನಾಟಕದ ಜನರು ಮತ್ತು ನಮ್ಮ ಯುವ ಒಡನಾಡಿಗಳು ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಯಶಸ್ವಿಗೊಳಿಸಿದ ರೀತಿ ಕೂಡ ಈ ಶ್ರೀಮಂತ ಪರಂಪರೆಯ ವಿಸ್ತರಣೆಯಾಗಿದೆ. ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಬರುವ ಮೂಲಕ ನಾನು ಸದಾ ದೇಶಭಕ್ತಿಯ ಈ ಶಕ್ತಿ ಮತ್ತು ರಾಷ್ಟ್ರೀಯ ಸಂಕಲ್ಪದಿಂದ ಸ್ಫೂರ್ತಿ ಪಡೆದಿದ್ದೇನೆ. ಮಂಗಳೂರಿನಲ್ಲಿ ಕಂಡುಬರುವ ಈ ಶಕ್ತಿಯು ಅಭಿವೃದ್ಧಿಯ ಪಥವನ್ನು ಉಜ್ವಲಗೊಳಿಸಲಿ..! ಈ ಭರವಸೆಯೊಂದಿಗೆ, ಈ ಅಭಿವೃದ್ಧಿ ಯೋಜನೆಗಳಿಗೆ ನಾನು ನಿಮಗೆ ಶುಭ ಕೋರುತ್ತೇನೆ ಮತ್ತು ತುಂಬಾ ಅಭಿನಂದನೆಗಳು.

ಜೋರಾಗಿ ಗಟ್ಟಿಧ್ವನಿಯಲ್ಲಿ ಹೇಳಿ

ಭಾರತ್ ಮಾತಾ ಕಿ ಜೈ..!!

ಭಾರತ್ ಮಾತಾ ಕಿ ಜೈ..!!

ಭಾರತ್ ಮಾತಾ ಕಿ ಜೈ..!!

ತುಂಬಾ ತುಂಬಾ ಧನ್ಯವಾದಗಳು .

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಮಾತನಾಡಿದರು. 

*****



(Release ID: 1857829) Visitor Counter : 174