ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಸೆಪ್ಟೆಂಬರ್ 8 ರಂದು ಬೆಂಗಳೂರಿನಲ್ಲಿ "ಮಂಥನ್" ಉದ್ಘಾಟಿಸಲಿರುವ ಶ್ರೀ ನಿತಿನ್ ಗಡ್ಕರಿ

Posted On: 06 SEP 2022 4:54PM by PIB Bengaluru

ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರು 2022ರ ಸೆಪ್ಟೆಂಬರ್ 08, ರಂದು ಬೆಂಗಳೂರಿನಲ್ಲಿ "ಮಂಥನ್" ಅನ್ನು ಉದ್ಘಾಟಿಸಲಿದ್ದಾರೆ. ಅವರೊಂದಿಗೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಹಾಗೂ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್ (ನಿವೃತ್ತ) (ಡಾ.) ವಿ.ಕೆ. ಸಿಂಗ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತರಿರಲಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆಯೋಜಿಸಿರುವ ಮೂರು ದಿನಗಳ ಆಹ್ವಾನಿತರ ಸಮಾವೇಶ ಮತ್ತು ಸಾರ್ವಜನಿಕ ಎಕ್ಸ್ ಪೋ – ಮಂಥನ್, ರಸ್ತೆಗಳು, ಸಾರಿಗೆ ಮತ್ತು ಸಾಗಣೆ ವಲಯದಲ್ಲಿನ ಅನೇಕ ಸಮಸ್ಯೆಗಳು ಮತ್ತು ಅವಕಾಶಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿದ್ದು, ಉತ್ತಮ ರೂಢಿಗಳು, ನೀತಿ ಬೆಂಬಲ ಮತ್ತು ಸಾಮರ್ಥ್ಯ ವರ್ಧನೆಯನ್ನು ಹಂಚಿಕೊಳ್ಳಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಉದ್ಯಮದ ಇತರ ಪ್ರಮುಖ ಬಾಧ್ಯಸ್ಥರೊಂದಿಗೆ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಮಂಥನದ ವಿಷಯ ಕಲ್ಪನೆಯಿಂದ ಕೃತಿಯವರೆಗೆ: ಸುಸ್ಥಿರ ರಸ್ತೆ, ಮೂಲಸೌಕರ್ಯ, ಸಂಚಾರ ಮತ್ತು ಸಾಗಣೆಯ ಪರಿಸರ ವ್ಯವಸ್ಥೆಯೆಡೆಗೆ  ಎಂಬುದಾಗಿದೆ.

 

 

ಪಿಡಬ್ಲ್ಯೂಡಿ, ಸಾರಿಗೆ ಮತ್ತು ಕೈಗಾರಿಕಾ ಖಾತೆಗಳನ್ನು ಹೊಂದಿರುವ ಹಲವಾರು ರಾಜ್ಯ ಸಚಿವರು ಮತ್ತು ಈ ಸಚಿವಾಲಯಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಉದ್ಯಮದ ದಿಗ್ಗಜರು ಮತ್ತು ತಜ್ಞರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ  ಎನ್.ಎಚ್.ಎ.ಐ.ನ ಹಿರಿಯ ಅಧಿಕಾರಿಗಳು, ನೀತಿ ಯೋಜಕರು, ಪರಿಣತರು, ಸಾಂಸ್ಥಿಕ ನಾಯಕರು ಮತ್ತು ತಂತ್ರಜ್ಞರು ಸಹ ಈ ಸಮಾಲೋಚನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಚರ್ಚೆಗಳು ಮೂರು ವಿಶಾಲ ಕ್ಷೇತ್ರಗಳಲ್ಲಿ ನಡೆಯಲಿವೆ: ಮೊದಲನೆಯದಾಗಿ, ರಸ್ತೆಗಳು, ರಸ್ತೆ ಅಭಿವೃದ್ಧಿ, ಹೊಸ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಮತ್ತು ರಸ್ತೆ ಸುರಕ್ಷತೆ. ಎರಡನೆಯದಾಗಿ, ಸಾರಿಗೆ ವಲಯದಲ್ಲಿ, ಇವಿಗಳು ಮತ್ತು ವಾಹನ ಸುರಕ್ಷತೆಯನ್ನು ಒಳಗೊಂಡಿದೆ; ಮತ್ತು ಮೂರನೆಯದಾಗಿ, ರೋಪ್ ವೇಗಳು, ಬಹುಮಾದರಿ ಸಾಗಣೆ ಪಾರ್ಕ್ ಗಳು, ಪರ್ವತಮಾಲಾ ಮತ್ತು ಡಿಜಿಟಲ್ ಮಧ್ಯಸ್ಥಿಕೆಗಳನ್ನು ಒಳಗೊಂಡ ಪರ್ಯಾಯ ಮತ್ತು ಭವಿಷ್ಯದ ಚಲನಶೀಲತೆ ಒಳಗೊಂಡಿದೆ. ಇದಲ್ಲದೆ, ಸಾರಿಗೆ ಅಭಿವೃದ್ಧಿ ಮಂಡಳಿಯ 41ನೇ ಸಭೆಯನ್ನು ಕಾರ್ಯಕ್ರಮದ ಸಮಯದಲ್ಲಿ ಆಯೋಜಿಸಲಾಗುವುದು. ನೆಕ್ಸ್ಟ್-ಜೆನ್ (ಮುಂದಿನ ಪೀಳಿಗೆಯ) ಎಂ ಪರಿವಾಹನ್ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.

ಸೆಪ್ಟೆಂಬರ್ 8 ರಂದು ಸಂಜೆ ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಸಾರ್ವಜನಿಕರಿಗೆ ಮುಕ್ತವಾದ ಡ್ರೋನ್ ಪ್ರದರ್ಶನವನ್ನು ಸಹ ಯೋಜಿಸಲಾಗಿದೆ.

ಸಮಾವೇಶದ ಜೊತೆಗೆ ಆಯೋಜಿಸಲಾದ ಮೂರು ದಿನಗಳ ಸಾರ್ವಜನಿಕ ಎಕ್ಸ್ ಪೋ ಹೆದ್ದಾರಿ ಅಭಿವೃದ್ಧಿಯಲ್ಲಿ ತಂತ್ರಜ್ಞಾನಗಳು ಮತ್ತು ಸಾಮಗ್ರಿಗಳನ್ನು ಮತ್ತು ಭಾರತ ಮಾಲಾ, ಪರ್ವತಮಾಲಾ ಮತ್ತು ಇವಿಗಳಂತಹ ಹೊಸ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಹ್ಯುಂಡೈ ಕನ್ಸ್ಟ್ರಕ್ಷನ್, ಜೆಸಿಬಿ, ಎಸಿಇ, ವೋಲ್ವೊ, ಟಾಟಾ ಹಿಟಾಚಿ, ಕಟಾಲಿನ್, 3ಎಂ, ಟಿಕಿ ಟಾರ್ ಮತ್ತು ಶೆಲ್, ಟಿವಿಎಸ್ ಮೋಟಾರ್ಸ್, ಟಾಟಾ ಮೋಟಾರ್ಸ್, ಟೊಯೊಟಾ ಕಿರ್ಲೋಸ್ಕರ್, ಕಟಾಲೈನ್, ರಿಟ್ಜೆನ್ ಇಂಡಿಯಾ, ಐಸಿಇಎಂಎ, ಅಮ್ಮನ್ ಇಂಡಿಯಾ, ಇಂಡಿಯನ್ ರೋಡ್ ಸರ್ವೆ ಸೇರಿದಂತೆ 65 ಕ್ಕೂ ಹೆಚ್ಚು ಪ್ರದರ್ಶಕರು ಸಾರ್ವಜನಿಕ ಎಕ್ಸ್ ಪೋದಲ್ಲಿ ಭಾಗವಹಿಸುತ್ತಿದ್ದಾರೆ.

*****



(Release ID: 1857320) Visitor Counter : 159