ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ನವೋದ್ಯಮಗಳು, ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಳಗೊಂಡಂತೆ ಸಮಗ್ರ ಸಹಯೋಗದೊಂದಿಗೆ 75 ಬಯೋಟೆಕ್ ಉಪಕ್ರಮಗಳಿಗೆ "ಅಮೃತ್" ಅನುದಾನಗಳನ್ನು ಘೋಷಿಸಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
ಡಿಬಿಟಿ-ಬಿ.ಐ.ಆರ್.ಎ.ಸಿ 75 ಅಮೃತ್ ತಂಡ ಅನುದಾನ ಉಪಕ್ರಮವು ಪ್ರಧಾನ ಮಂತ್ರಿಯವರು "ಜೈ ಅನುಸಂಧಾನ್" ಗಾಗಿ ನೀಡಿರುವ ಕರೆಗೆ ದೊಡ್ಡ ಉತ್ತೇಜನವನ್ನು ನೀಡಲಿದೆ.
ಬಯೋಟೆಕ್ ವಲಯದ ಎಲ್ಲಾ ಡೊಮೇನ್ ನಿರ್ದಿಷ್ಟ ಕ್ಷೇತ್ರಗಳಲ್ಲಿ ಗರಿಷ್ಠ ಅಪಾಯ ಸಂಭಾವ್ಯತೆಯ, ಮಹತ್ವಾಕಾಂಕ್ಷೆಯ ಸಂಶೋಧನಾ ಚಿಂತನೆಗಳಿಗೆ, ಸಾಧನೆಯ ಮೈಲಿಗಲ್ಲು ಸ್ಥಾಪಿಸುವಂತಹ ಸಹಯೋಗದ ಸಂಶೋಧನೆಗಳಿಗಾಗಿ ಪಿಪಿಪಿ ಮಾದರಿಯಲ್ಲಿ 75 ಅಂತರ-ಶಿಸ್ತೀಯ, ಬಹು-ಸಾಂಸ್ಥಿಕ ಅನುದಾನಗಳನ್ನು ಒದಗಿಸಿ ಬೆಂಬಲ ನೀಡಲಾಗುವುದು ಎಂದು ಸಚಿವರು ಹೇಳುತ್ತಾರೆ.
ತಂಡ ವಿಜ್ಞಾನ ಅನುದಾನಕ್ಕಾಗಿ ಆಯ್ಕೆ ಮಾಡಲಾದ ವಿಷಯಾಧಾರಿತ ಕ್ಷೇತ್ರಗಳು ಸ್ಥೂಲವಾಗಿ ಆರೋಗ್ಯ, ಕೃಷಿಜೈವಿಕ ತಂತ್ರಜ್ಞಾನ, ಹವಾಮಾನ ಬದಲಾವಣೆ, ಸಂಶ್ಲೇಷಿತ ಜೀವಶಾಸ್ತ್ರ ಮತ್ತು ಸುಸ್ಥಿರ ಜೈವಿಕ ಸಂಪನ್ಮೂಲ ನಿರ್ವಹಣೆಯನ್ನು ಒಳಗೊಂಡಿವೆ: ಡಾ. ಜಿತೇಂದ್ರ ಸಿಂಗ್
Posted On:
22 AUG 2022 5:35PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ) ಮತ್ತು ಭೂವಿಜ್ಞಾನ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ) ಹಾಗು ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರೂ ಆಗಿರುವ ಡಾ. ಜಿತೇಂದ್ರ ಸಿಂಗ್ ಅವರು ಇಂದು ನವೋದ್ಯಮಗಳು, ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಳಗೊಂಡಂತೆ ಸಮಗ್ರ ಸಹಯೋಗದ 75 ಬಯೋಟೆಕ್ ಉಪಕ್ರಮಗಳಿಗೆ "ಅಮೃತ್" ಅನುದಾನಗಳನ್ನು ಘೋಷಿಸಿದರು. ಡಿಬಿಟಿ-ಬಿ.ಐ.ಆರ್.ಎ.ಸಿ. 75 ಅಮೃತ್ ತಂಡ ಅನುದಾನ ಉಪಕ್ರಮಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಜೈ ಅನುಸಂಧಾನ್" ಕರೆಗೆ ಬಹಳ ದೊಡ್ಡ ಉತ್ತೇಜನ ನೀಡಲಿವೆ ಎಂದು ಸಚಿವರು ಹೇಳಿದರು.
ಬಯೋಟೆಕ್ ವಲಯದ ಎಲ್ಲಾ ಡೊಮೇನ್ ನಿರ್ದಿಷ್ಟ ಕ್ಷೇತ್ರಗಳಲ್ಲಿ ಹೆಚ್ಚಿನ ಅಪಾಯ ಸಂಭಾವ್ಯತೆಯ (ಹೈ ರಿಸ್ಕ್), ಮಹತ್ವಾಕಾಂಕ್ಷೆಯ ಸಂಶೋಧನಾ ಚಿಂತನೆಗಳು, ಹಾಗು ಸಾಧನೆಯ ಮೈಲಿಗಲ್ಲು ಸ್ಥಾಪಿಸಲು ಕಾರಣವಾಗುವಂತಹ ಸಹಯೋಗದ ಸಂಶೋಧನೆಗಾಗಿ 75 ಅಂತರ-ಶಿಸ್ತೀಯ, ಬಹು-ಸಾಂಸ್ಥಿಕ ಅನುದಾನಗಳನ್ನು ಒದಗಿಸಿ ಬೆಂಬಲಿಸಲಾಗುತ್ತಿದೆ ಎಂದು ಡಾ.ಜಿತೇಂದ್ರ ಸಿಂಗ್ ಅವರು, ಹೇಳಿದರು.
ನವೋದ್ಯಮಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ತಂಡ ವಿಜ್ಞಾನ ಅನುದಾನಗಳನ್ನು ಪಡೆಯಬಹುದು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ರೂಪಿಸಲು ರಾಷ್ಟ್ರೀಯ ಆದ್ಯತೆಗಳನ್ನು ಪರಿಗಣಿಸುವ ಸಲುವಾಗಿ, ಆರೋಗ್ಯ, ಕೃಷಿ ಜೈವಿಕ ತಂತ್ರಜ್ಞಾನ, ಹವಾಮಾನ ಬದಲಾವಣೆ, ಸಂಶ್ಲೇಷಿತ ಜೀವಶಾಸ್ತ್ರ ಮತ್ತು ಸುಸ್ಥಿರ ಜೈವಿಕ ಸಂಪನ್ಮೂಲ ನಿರ್ವಹಣೆ ಕ್ಷೇತ್ರಗಳಲ್ಲಿ ಅನುದಾನವನ್ನು ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ಈ ಉಪಕ್ರಮದ ಮೂಲಕ ಒಟ್ಟು ಗುರಿಯನ್ನು ಸಾಧಿಸಲಾಗುವುದು ಎಂದು ಸಚಿವರು ಹೇಳಿದರು: ಸಮಾನ ಜಾಗತಿಕ ಪಾಲುದಾರನಾಗಿ ಭಾರತದ ಹೊರಹೊಮ್ಮುವಿಕೆಗೆ ಸಾಮಾಜಿಕ ಅಗತ್ಯಗಳಿಗಾಗಿ ಜ್ಞಾನ ಆಧಾರಿತ ಅನ್ವೇಷಣಾ ಪರಿಹಾರಗಳು; ವೈಜ್ಞಾನಿಕ ಮೌಲ್ಯ ಮತ್ತು ಪರಿಣಾಮದ ಪರಿವರ್ತನಾತ್ಮಕ ಶೋಧನೆಗಳು ಕೊಡುಗೆ ನೀಡುತ್ತವೆ. ಸ್ಪಿನ್ ಔಟ್ ಗಳು ಮತ್ತು ಸಾಹಸೋದ್ಯಮ ಸೃಷ್ಟಿ ಈ ಉಪಕ್ರಮದ ಪ್ರಮುಖ ಘಟಕಾಂಶವಾಗಲಿದೆ ಎಂದು ಅವರು ಹೇಳಿದರು.
ಈ ಉಪಕ್ರಮವು ಪಾಲುದಾರಿಕೆಯ ಬಲವಾದ ಅಡಿಪಾಯವನ್ನು ನಿರ್ಮಿಸುತ್ತದೆ, ಹೊಸ ಮತ್ತು ನವೀನ ಸಂಶೋಧನಾ ಕಾರ್ಯಕ್ರಮಗಳನ್ನು ಬೆಂಬಲಿಸುತ್ತದೆ, ಇದು ಭಾರತವನ್ನು ಜಾಗತಿಕ ನಾಯಕತ್ವದ ಸ್ಥಾನಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಈ ಉಪಕ್ರಮದ ಅಡಿಯಲ್ಲಿ, ಮಹತ್ವಾಕಾಂಕ್ಷೆಯ ಸಂಶೋಧನಾ ಚಿಂತನೆಗಳು, ಹೆಚ್ಚಿನ ಅಪಾಯದ, ಮೈಲಿಗಲ್ಲು ಸ್ಥಾಪಿಸಬಲ್ಲಂತಹ ಜ್ಞಾನ-ಆಧಾರಿತ ಆವಿಷ್ಕಾರಗಳಿಗಾಗಿ ಶೈಕ್ಷಣಿಕ ಮತ್ತು ಉದ್ಯಮಗಳೆರಡರಿಂದಲೂ ವ್ಯಾಪಕ ಆನ್ವಯಿಕತೆಯ ಆಧಾರದಲ್ಲಿ ಸಹಯೋಗದ ಸಂಶೋಧನೆಯನ್ನು ನೆರವಿಗಾಗಿ ಪರಿಗಣಿಸಲಾಗುವುದು ಎಂದೂ ಅವರು ಹೇಳಿದರು.
ಈ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲಿನಿಂದ ಮಾಡಿದ ಭಾಷಣದಲ್ಲಿ ಅನುಸಂಧಾನದ ಮಹತ್ವವನ್ನು ಒತ್ತಿ ಹೇಳಿದ್ದರತ್ತ ಡಾ. ಜಿತೇಂದ್ರ ಸಿಂಗ್ ಗಮನ ಸೆಳೆದರು. "ಜೈ ಜವಾನ್ ಜೈ ಕಿಸಾನ್ ಎಂದರೆ "ಸೈನಿಕರಿಗೆ ಜೈ, ರೈತರಿಗೆ ಜೈ “ ಎಂಬ ಸ್ಫೂರ್ತಿದಾಯಕ ಘೋಷಣೆಗಾಗಿ ನಾವು ನಮ್ಮ ಪೂಜ್ಯ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ವಿಜ್ಞಾನದ ಹೊಸ ಕೊಂಡಿಯನ್ನು ಸೇರಿಸಿದರು, ಅದರರ್ಥ "ಜೈ ವಿಜ್ಞಾನ" ಮತ್ತು ನಾವು ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೇವೆ. ಆದರೆ ಅಮೃತ್ ಕಾಲ್ ನ ಈ ಹೊಸ ಹಂತದಲ್ಲಿ ಈಗ ಜೈ ಅನುಸಂಧಾನ್ ಅನ್ನು ಸೇರಿಸುವುದು ಅನಿವಾರ್ಯವಾಗಿದೆ, ಅದು "ಜೈ ನಾವೀನ್ಯ".
ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್ ಜೈ ಅನುಸಂಧಾನ್".
2025 ರ ವೇಳೆಗೆ ಭಾರತದ ಜೈವಿಕ ಆರ್ಥಿಕತೆಯು 70 ಬಿಲಿಯನ್ ಡಾಲರ್ ನಿಂದ 150 ಬಿಲಿಯನ್ ಡಾಲರ್ ಗೆ ಬೆಳೆಯುತ್ತದೆ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಎಲ್ಲಾ ಭಾಗೀದಾರರ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಇದನ್ನು ಸಾಧಿಸಬಹುದು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಜೈವಿಕ ತಂತ್ರಜ್ಞಾನ ವಲಯವು ಬಹಳ ತ್ವರಿತವಾಗಿ ಬೆಳೆಯುತ್ತಿರುವ ಪ್ರಮುಖ ಚಾಲಕ ಶಕ್ತಿಯಲ್ಲಿ ಒಂದಾಗಿದೆ ಮತ್ತು ಇದು ಮುಂದಿನ 25 ವರ್ಷಗಳ ಅಮೃತ್ ಕಾಲ್ ಅವಧಿಯಲ್ಲಿ ಭಾರತದ ಅಭಿವೃದ್ಧಿ ಹೊಂದಿದ ಆರ್ಥಿಕ ಸ್ಥಾನಮಾನದ ದಾರಿದೀಪವಾಗಲಿದೆ ಎಂದೂ ಅವರು ಹೇಳಿದರು.
ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ)ಯು ತನ್ನ ಸಾರ್ವಜನಿಕ ರಂಗದ ಉದ್ಯಮಗಳು, ಬಿ.ಐ.ಆರ್.ಎ.ಸಿ.ಗಳೊಂದಿಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗುರುತನ್ನು ಮೂಡಿಸಿದೆ, ದೇಶಾದ್ಯಂತದ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನಾ ಪ್ರಯತ್ನಗಳಿಗೆ ವ್ಯಾಪಕವಾಗಿ ಬೆಂಬಲವನ್ನು ಒದಗಿಸಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಆದಾಗ್ಯೂ, ಅಮೃತ್ ಕಾಲ್ ನಲ್ಲಿ ನಮ್ಮ ದೇಶದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಅಗತ್ಯಗಳನ್ನು ಪೂರೈಸಲು ಮತ್ತು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಾರ್ಗವನ್ನು ಸುಗಮಗೊಳಿಸಲು ತಾಂತ್ರಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು.
ಬಾಣಂತಿಯರ ಆರೋಗ್ಯ ಮತ್ತು ಅವಧಿಪೂರ್ವ ಜನನ, ಜೈವಿಕ ಇಂಧನ ಮತ್ತು ಐಎನ್ಎಸ್ಎಸಿಒಜಿ ಕುರಿತಂತೆ ಕೆಲವು ಸೃಜನಶೀಲ ಕಾರ್ಯಕ್ರಮಗಳಿವೆ ಮತ್ತು ಅನೇಕ ಅಂತರ್ಶಿಸ್ತೀಯ, ಬಹು-ಸಾಂಸ್ಥಿಕ ಉಪಕ್ರಮಗಳಿಗೆ ಡಿಬಿಟಿ ನೆರವು ಒದಗಿಸಿದೆ ಎಂದು ಸಚಿವರು ಹೇಳಿದರು. ಕೋವಿಡ್ ಜಾಗತಿಕ ಸಾಂಕ್ರಾಮಿಕವು ಮೇಡ್-ಇನ್-ಇಂಡಿಯಾ (ಭಾರತೀಯ ನಿರ್ಮಿತ) ವಿನೂತನ ಲಸಿಕೆಗಳು, ರೋಗ ಪತ್ತೆ, ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಸವಲತ್ತುಗಳ ಒದಗಣೆ ಹಾಗು ನಿರ್ವಹಣಾ ಪರಿಹಾರಗಳ ನಿರ್ಣಾಯಕ ಪರಿಣಾಮಕ್ಕೆ ಸಾಕ್ಷಿಯಾಗಿದೆ, ಇದು ಆತ್ಮ ನಿರ್ಭರ ಭಾರತದತ್ತ ಸಾಗುವ ನಿಟ್ಟಿನಲ್ಲಿ ದೇಶದ ಶಕ್ತಿ ವರ್ಧಿಸುತ್ತಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಡಾ. ಜಿತೇಂದ್ರ ಸಿಂಗ್ ಅವರು ಆಜಾದಿ ಕಾ ಅಮೃತ ಮಹೋತ್ಸವದ ನೆನಪಿಗಾಗಿ 75 ಡಿಬಿಟಿ-ಬಿ.ಐ.ಆರ್.ಎ.ಸಿ ಅಮೃತ್ ತಂಡ ಧನಸಹಾಯದ ಈ ವಿಶಿಷ್ಟ ಉಪಕ್ರಮವನ್ನು ರೂಪಿಸಿದ್ದಕ್ಕಾಗಿ ಡಿಬಿಟಿ ಮತ್ತು ಬಿ.ಐ.ಆರ್.ಎ.ಸಿ ಯ ತಂಡವನ್ನು ಅಭಿನಂದಿಸಿದರು.
(Release ID: 1853772)
Visitor Counter : 223