ಪ್ರಧಾನ ಮಂತ್ರಿಯವರ ಕಛೇರಿ
ಜಲ ಜೀವನ್ ಮಿಷನ್ ಅಡಿಯಲ್ಲಿ ಹರ್ ಘರ್ ಜಲ ಉತ್ಸವವನ್ನು ಉದ್ದೇಶಿಸಿ ವಿಡಿಯೊ ಸಮಾವೇಶ ಮೂಲಕ ಪ್ರಧಾನಮಂತ್ರಿ ಅವರು ಭಾಷಣ ಮಾಡಿದರು
"ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಪೈಪ್ ಮೂಲಕ ಶುದ್ಧ ನೀರಿನ ಸೌಲಭ್ಯ ಕಲ್ಪಿಸಲಾಗಿದೆ"
"ಹರ್ ಘರ್ ಜಲ್ ಅಡಿ ಪ್ರಮಾಣೀಕೃತ ಮೊದಲ ರಾಜ್ಯ- ಗೋವಾ "
"ದಾದ್ರಾ ನಗರ ಹವೇಲಿ ಹಾಗು ದಮನ್ ಮತ್ತು ದಿಯು ಈ ಸಾಧನೆ ಮಾಡಿದ ಮೊದಲ ಕೇಂದ್ರಾಡಳಿತ ಪ್ರದೇಶಗಳಾಗಿವೆ"
"ದೇಶದ ವಿವಿಧ ರಾಜ್ಯಗಳಲ್ಲಿ ಒಂದು ಲಕ್ಷ ಹಳ್ಳಿಗಳು ಬಯಲು ಶೌಚ ಮುಕ್ತ (ಓ.ಡಿ.ಎಫ್.) ಪ್ಲಸ್ ಆಗಿವೆ"
"ಅಮೃತ್ ಕಾಲ್ ಗೆ ಇದಕ್ಕಿಂತಲೂ ಇನ್ನೂ ಉತ್ತಮ ಆರಂಭ ಇರಲು ಸಾಧ್ಯವಿಲ್ಲ"
“ದೇಶದ ಬಗ್ಗೆ ಕಾಳಜಿಯಿಲ್ಲದವರು, ದೇಶದ ವರ್ತಮಾನ ಅಥವಾ ಭವಿಷ್ಯವನ್ನು ಹಾಳು ಗೆಡಹುವ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ಜನರು ಖಂಡಿತವಾಗಿಯೂ ದೊಡ್ಡದಾಗಿ ಮಾತನಾಡಬಹುದು, ಆದರೆ ನೀರಿನ ಬಗ್ಗೆ ದೂರ ದೃಷ್ಟಿಯೊಂದಿಗೆ ಕೆಲಸ ಮಾಡಲು ಅವರಿಗೆ ಸಾಧ್ಯವಿಲ್ಲ.
" ಕಳೆದ ಕೇವಲ 3 ವರ್ಷಗಳಲ್ಲಿ 7 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ನೀರು ಸಂಪರ್ಕ ಪೂರೈಸಲಾಗಿದೆ, ಆದರೆ ಕಳೆದ 7 ದಶಕಗಳಲ್ಲಿ ಕೇವಲ 3 ಕೋಟಿ ಕುಟುಂಬಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿತ್ತು "
"ಇದು ನಾನು ಈ ಬಾರಿ ಕೆಂಪು ಕೋಟೆಯಿಂದ ಮಾತನಾಡಿದ ಅದೇ ಮಾನವ-ಕೇಂದ್ರಿತ ಬೆಳವಣಿಗೆಯ ಉದಾಹರಣೆಯಾಗಿದೆ"
"ಜಲ ಜೀವನ್ ಅಭಿಯಾನವು ಕೇವಲ ಸರ್ಕಾರದ ಯೋಜನೆ ಅಲ್ಲ, ಆದರೆ ಇದು ಸಮುದಾಯಕ್ಕಾಗಿ ನಡೆಸುತ್ತಿರುವ ಯೋಜನೆಯಾಗಿದೆ"
"ಜನರ ಶಕ್ತಿ, ಮಹಿಳಾ ಶಕ್ತಿ ಮತ್ತು ತಂತ್ರಜ್ಞಾನದ ಶಕ್ತಿಯು ಜಲ ಜೀವನ್ ಮಿಷನ್ ಗೆ ಶಕ್ತಿ ತುಂಬುತ್ತಿವೆ"
Posted On:
19 AUG 2022 1:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಲ ಜೀವನ್ ಮಿಷನ್ ಅಡಿಯಲ್ಲಿ ಹರ್ ಘರ್ ಜಲ ಉತ್ಸವವನ್ನು ಉದ್ದೇಶಿಸಿ ವಿಡಿಯೊ ಸಮಾವೇಶ ಮೂಲಕ ಮಾತನಾಡಿದರು. ಪಣಜಿ ಗೋವಾದಲ್ಲಿ ಹರ್ ಘರ್ ಜಲ ಉತ್ಸವ ನಡೆದಿದೆ. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಕೇಂದ್ರ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಧಾನಮಂತ್ರಿಯವರು ಶ್ರೀ ಕೃಷ್ಣ ಭಕ್ತರಿಗೆ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಶುಭಾಶಯ ಕೋರಿದರು.
ಪ್ರಾರಂಭದಲ್ಲಿ, ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತಹ ಅಮೃತ್ ಕಾಲ್ ಸಂದರ್ಭದಲ್ಲಿ ಭಾರತವು ಕೆಲಸ ಮಾಡುತ್ತಿರುವ ಬೃಹತ್ ಗುರಿಗಳಿಗೆ ಸಂಬಂಧಿಸಿ ಸಾಧಿಸಿದ ಮೂರು ಪ್ರಮುಖ ಮೈಲಿಗಲ್ಲುಗಳನ್ನು ಪ್ರಧಾನ ಮಂತ್ರಿ ಅವರು ಹಂಚಿಕೊಂಡರು. "ಮೊದಲನೆಯದಾಗಿ, ಇಂದು ದೇಶದ 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇದು ಪ್ರತಿ ಮನೆಗೂ ನೀರು ತಲುಪಿಸುವ ಸರ್ಕಾರದ ಅಭಿಯಾನ ಕಂಡ ಬಹು ದೊಡ್ಡ ಯಶಸ್ಸು. ಇದು ‘ಸಬ್ ಕಾ ಪ್ರಯಾಸ್’ಗೆ ಉತ್ತಮ ಉದಾಹರಣೆಯಾಗಿದೆ. ಎರಡನೆಯದಾಗಿ, ಪ್ರತಿ ಮನೆಯೂ ನಲ್ಲಿ ನೀರಿನ ಸಂಪರ್ಕವನ್ನು ಹೊಂದಿರುವ ಮೊದಲ ಹರ್ ಘರ್ ಜಲ್ ಪ್ರಮಾಣೀಕೃತ ರಾಜ್ಯವಾಗಿ ಹೊರಹೊಮ್ಮಿದ ಗೋವಾವನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ದಾದ್ರಾ ನಾಗರ ಹವೇಲಿ ಹಾಗು ದಮನ್ ಮತ್ತು ದಿಯು ಈ ಸಾಧನೆ ಮಾಡಿದ ಮೊದಲ ಕೇಂದ್ರಾಡಳಿತ ಪ್ರದೇಶಗಳೆಂದು ಪ್ರಧಾನಮಂತ್ರಿಯವರು ಘೋಷಿಸಿದರು. ಈ ಕಾರ್ಯೋದ್ದೇಶದ ಯಶಸ್ಸಿಗಾಗಿ ಶ್ರಮಿಸಿದ ಜನರು, ಸರ್ಕಾರ ಮತ್ತು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಶೀಘ್ರದಲ್ಲೇ ಹಲವು ರಾಜ್ಯಗಳು ಈ ಪಟ್ಟಿಗೆ ಸೇರಲಿವೆ ಎಂಬ ಮಾಹಿತಿಯನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ನೀಡಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಒಂದು ಲಕ್ಷ ಹಳ್ಳಿಗಳು ಬಯಲು ಶೌಚ ಮುಕ್ತ- ಓ.ಡಿ.ಎಫ್ ಪ್ಲಸ್ ಆಗಿರುವುದು ಮೂರನೇ ಸಾಧನೆ ಎಂಬ ಮಾಹಿತಿಯನ್ನು ಪ್ರಧಾನಮಂತ್ರಿ ಅವರು ನೀಡಿದರು. ಕೆಲವು ವರ್ಷಗಳ ಹಿಂದೆ ದೇಶವನ್ನು ಬಯಲು ಶೌಚ ಮುಕ್ತ (ಒ.ಡಿ.ಎಫ್) ಎಂದು ಘೋಷಿಸಿದ ನಂತರ, ಮುಂದಿನ ಬಲುದೊಡ್ಡ ನಿರ್ಣಯವೆಂದರೆ ಹಳ್ಳಿಗಳಿಗೆ ಬಯಲು ಶೌಚ ಮುಕ್ತ (ಒ.ಡಿ.ಎಫ್) ಸ್ಥಾನಮಾನ ಒದಗಿಸುವ ಪ್ರಯತ್ನ ಸಾಧಿಸುವುದು, ಅಂದರೆ ಸಮುದಾಯಗಳು ಶೌಚಾಲಯಗಳು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಕಲ್ಮಷ ನೀರು (ಗ್ರೇ ವಾಟರ್) ನಿರ್ವಹಣೆ ಮತ್ತು ಗೋಬರ್ ಧನ್ ಯೋಜನೆಗಳನ್ನು ಹಳ್ಳಿಗಳು ಹೊಂದಿರಬೇಕು.
ಜಗತ್ತು ಎದುರಿಸುತ್ತಿರುವ ಜಲ ಭದ್ರತೆಯ ಸವಾಲನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, “ಅಭಿವೃದ್ಧಿ ಹೊಂದಿದ ಭಾರತದ (ವಿಕಸಿತ ಭಾರತ) ನಿರ್ಣಯವನ್ನು ಸಾಧಿಸುವಲ್ಲಿ ನೀರಿನ ಕೊರತೆಯು ಒಂದು ದೊಡ್ಡ ಅಡಚಣೆಯಾಗಬಹುದು” ಎಂದು ಹೇಳಿದರು. “ನಮ್ಮ ಸರ್ಕಾರ ಕಳೆದ 8 ವರ್ಷಗಳಿಂದ ಜಲ ಭದ್ರತೆಯ ಯೋಜನೆಗಳಿಗೆ ನಿರಂತರ ಶ್ರಮಿಸುತ್ತಿದೆ” ಪ್ರಧಾನಮಂತ್ರಿಯವರು ಎಂದರು. ಸ್ವಾರ್ಥದ ಅಲ್ಪಾವಧಿಯ ವಿಧಾನಗಳಿಗಿಂತ ದೀರ್ಘಾವಧಿಯ ವಿಧಾನದ ಅಗತ್ಯವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, “ಒಬ್ಬರಿಗೆ ಕೇವಲ ಸರ್ಕಾರವನ್ನು ರಚಿಸಲು, ಈ ದೇಶವನ್ನು ಕಟ್ಟಲು ಕಷ್ಟಪಡುವಂತಹ (ರಾಷ್ಟ್ರ ನಿರ್ಮಾಣದ) ಅಗತ್ಯ ಬೇಕಾಗಿಲ್ಲ ಎಂಬುದು ನಿಜ. ನಾವೆಲ್ಲರೂ ರಾಷ್ಟ್ರ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುವುದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳ ಮೇಲೆ ಕೆಲಸ ಮಾಡುತ್ತಿದ್ದೇವೆ. ದೇಶದ ಬಗ್ಗೆ ಕಾಳಜಿ ಇಲ್ಲದವರು, ದೇಶದ ವರ್ತಮಾನ ಅಥವಾ ಭವಿಷ್ಯವನ್ನು ಹಾಳುಗೆಡಹುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಹ ಜನರು ಖಂಡಿತವಾಗಿಯೂ ದೊಡ್ಡದಾಗಿ ಮಾತನಾಡಬಹುದು, ಆದರೆ ನೀರಿನ ಬಗ್ಗೆ ಬಹುದೊಡ್ಡ ದೂರದೃಷ್ಟಿಯೊಂದಿಗೆ ಕೆಲಸ ಮಾಡಲು ಅವರಿಂದ ಸಾಧ್ಯವಿಲ್ಲ.
ನೀರಿನ ಭದ್ರತೆಯನ್ನು ಖಾತ್ರಿಪಡಿಸಲು ಕೇಂದ್ರ ಸರ್ಕಾರದ ಬಹುಮುಖಿ ಉಪಕ್ರಮಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು ಇದಕ್ಕೆ ಪೂರಕವಾಗಿ, “ಮಳೆನೀರು ಸಂಗ್ರಹಿಸಿ”(ಕ್ಯಾಚ್ ದಿ ರೈನ್), ಅಟಲ್ ಭೂ-ಜಲ್ ಯೋಜನೆ, ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳು, ನದಿ ಜೋಡಣೆ ಮತ್ತು ಜಲ ಜೀವನ್ ಮಿಷನ್ ನಂತಹ ಉಪಕ್ರಮಗಳನ್ನು ಪಟ್ಟಿ ಮಾಡಿದರು. “ಭಾರತದಲ್ಲಿ ರಾಮ್ಸರ್ ವೆಟ್ಲ್ಯಾಂಡ್ ಸೈಟ್ ಗಳ ಸಂಖ್ಯೆ 75 ಕ್ಕೆ ಏರಿದೆ, ಅದರಲ್ಲಿ 50 ಅನ್ನು ಕಳೆದ 8 ವರ್ಷಗಳಲ್ಲಿ ಸೇರಿಸಲಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
"ಅಮೃತ್ ಕಾಲ್ ಗಾಗಿ ಇದಕ್ಕಿಂತಲೂ ಇನ್ನೂ ಉತ್ತಮ ಆರಂಭ ಇರಲು ಸಾಧ್ಯವಿಲ್ಲ" ಎಂದು ಹೇಳಿದ ಪ್ರಧಾನಮಂತ್ರಿ ಅವರು, ಕೇವಲ 3 ವರ್ಷಗಳಲ್ಲಿ 7 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ನೀರಿನೊಂದಿಗೆ ಕುಡಿಯುವ ಶುದ್ಧ ನೀರಿನ ಸಂಪರ್ಕ ಕಲ್ಪಿಸಿದ ಸಾಧನೆಯನ್ನು ಶ್ಲಾಘಿಸಿದರು, ಆದರೆ “ಸ್ವಾತಂತ್ರ್ಯದ ನಂತರ 7 ದಶಕಗಳಲ್ಲಿ ಕೇವಲ 3 ಕೋಟಿ ಕುಟುಂಬಗಳು ಈ ನಳ್ಳ ನೀರಿನ ಸೌಲಭ್ಯವನ್ನು ಹೊಂದಿದ್ದವು. ದೇಶದಲ್ಲಿ ಸುಮಾರು 16 ಕೋಟಿ ಗ್ರಾಮೀಣ ಕುಟುಂಬಗಳಿದ್ದು, ನೀರಿಗಾಗಿ ಬಾಹ್ಯ -ಸಂಪನ್ಮೂಲಗಳನ್ನು ಅವಲಂಬಿಸಬೇಕಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಈ ಮೂಲಭೂತ ಅಗತ್ಯಕ್ಕಾಗಿ ಹೋರಾಡುವ ಹಳ್ಳಿಯ ಇಷ್ಟು ದೊಡ್ಡ ಜನಸಂಖ್ಯೆಯನ್ನು ನಾವು ಬಿಟ್ಟು ಬಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ 3 ವರ್ಷಗಳ ಹಿಂದೆಯೇ ಕೆಂಪುಕೋಟೆಯಿಂದ ಪ್ರತಿ ಮನೆಗೆ ಕೊಳಾಯಿ ನೀರು ಸಿಗುತ್ತದೆ ಎಂದು ಘೋಷಣೆ ಮಾಡಿದ್ದೆ. ಈ ಅಭಿಯಾನಕ್ಕೆ 3 ಲಕ್ಷದ 60 ಸಾವಿರ ಕೋಟಿ ರುಪಾಯಿ ಖರ್ಚು ಮಾಡಲಾಗುತ್ತಿದೆ. 100 ವರ್ಷಗಳ ಇತಿಹಾಸದಲ್ಲೇ ಅತಿದೊಡ್ಡ ಸಾಂಕ್ರಾಮಿಕ ರೋಗದಿಂದ ಉಂಟಾದ ಅಡಚಣೆಗಳ ಹೊರತಾಗಿಯೂ, ಈ ಅಭಿಯಾನದ ವೇಗವು ನಿಧಾನವಾಗಲಿಲ್ಲ, ಕುಂಠಿತವಾಗಲಿಲ್ಲ. ಈ ನಿರಂತರ ಪ್ರಯತ್ನದ ಫಲವೆಂದರೆ 7 ದಶಕಗಳಲ್ಲಿ ಈ ಹಿಂದೆ ಮಾಡಿದ ಕೆಲಸದ ದುಪ್ಪಟ್ಟು ಕೇವಲ 3 ವರ್ಷಗಳಲ್ಲಿ ದೇಶವು ಮಾಡಿದೆ. ನಾನು ಈ ಬಾರಿ ಕೆಂಪು ಕೋಟೆಯಿಂದ ಮಾತನಾಡಿದ ಅದೇ ಮಾನವ-ಕೇಂದ್ರಿತ ಬೆಳವಣಿಗೆಗೆ ಇದು ಒಂದು ಸ್ಪಷ್ಟ ಉದಾಹರಣೆಯಾಗಿದೆ.
ಭವಿಷ್ಯದ ಪೀಳಿಗೆ ಮತ್ತು ಮಹಿಳೆಯರಿಗೆ ಹರ್ ಘರ್ ಜಲ್ ಯೋಜನೆಯಿಂದಾಗುವ ಪ್ರಯೋಜನಗಳನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸುತ್ತಾ, “ನೀರಿನ ಸಮಸ್ಯೆಗಳಿಂದಾಗಿ ಪ್ರಮುಖವಾಗಿ ಸಮಸ್ಯೆ ಅನುಭವಿಸುತ್ತಿರುವವರು ತೊದರೆಗೆ ಒಳಗಾಗಿರುವವರು ಮಹಿಳೆಯರು, ಅವರು ಸರ್ಕಾರದ ಈ ಎಲ್ಲ ಪ್ರಯತ್ನಗಳ ಕೇಂದ್ರಬಿಂದುವಾಗಿದ್ದಾರೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ನಲ್ಲಿ ನೀರು ಲಭ್ಯತೆಯು ಮಹಿಳೆಯರಿಗೆ ವಾಸಿಸುವ ಸೌಕರ್ಯಗಳ ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸುತ್ತಿದೆ ಮತ್ತು ನೀರಿನ ಆಡಳಿತ-ನಿರ್ವಹಣೆಯಲ್ಲಿ ಅವರಿಗೆ ಪ್ರಮುಖ ಪಾತ್ರವನ್ನು ನೀಡುತ್ತಿದೆ. "ಜಲ ಜೀವನ್ ಅಭಿಯಾನವು ಕೇವಲ ಸರ್ಕಾರದ ಯೋಜನೆ ಅಲ್ಲ, ಆದರೆ ಇದು ಸಮುದಾಯಕ್ಕಾಗಿ, ಸಮುದಾಯವೇ ನಡೆಸುತ್ತಿರುವ ಯೋಜನೆಯಾಗಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.
ಜಲ ಜೀವನ್ ಮಿಷನ್ ನ ಯಶಸ್ಸಿಗೆ ಜನರ ಸಹಭಾಗಿತ್ವ, ಅಭಿಯಾನದಲ್ಲಿ ಭಾಗಿಯಾದವರ ಪಾಲ್ಗೊಳ್ಳುವಿಕೆ, ರಾಜಕೀಯ ಇಚ್ಛಾಶಕ್ತಿ ಮತ್ತು ಸಂಪನ್ಮೂಲಗಳ ಗರಿಷ್ಠ ಬಳಕೆ ಎಂಬ ನಾಲ್ಕು ಆಧಾರ ಸ್ತಂಭಗಳಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಯೋಜನೆಯ ಪ್ರಚಾರದಲ್ಲಿ ಸ್ಥಳೀಯ ಜನರು, ಗ್ರಾಮ ಸಭೆಗಳು ಮತ್ತು ಸ್ಥಳೀಯ ಆಡಳಿತದ ಇತರ ಸಂಸ್ಥೆಗಳಿಗೆ ಜವಾಬ್ದಾರಿ ಹಾಗೂ ಅಭೂತಪೂರ್ವ ಅವಕಾಶಗಳನ್ನು ನೀಡಲಾಗಿದೆ. ಸ್ಥಳೀಯ ಮಹಿಳೆಯರಿಗೆ ನೀರಿನ ಪರೀಕ್ಷೆಗಾಗಿ ತರಬೇತಿ ನೀಡಲಾಗುತ್ತದೆ ಮತ್ತು ಅವರು ಸ್ಥಳೀಯ 'ಜಲ ಸಮಿತಿಗಳ' ಸದಸ್ಯರಾಗಿರುತ್ತಾರೆ. ಪಂಚಾಯತ್ ಗಳು, ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಒ.)ಗಳು, ಶಿಕ್ಷಣ ಸಂಸ್ಥೆಗಳು ಮತ್ತು ಎಲ್ಲಾ ಸಚಿವಾಲಯಗಳು ಸಹಭಾಗಿಗಳಾಗಿ ಭಾಗವಹಿಸುವಿಕೆಯಲ್ಲಿ ತೋರಿದ ಉತ್ಸಾಹವು, ಈ ಯೋಜನೆಯ ಯಶಸ್ಸಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅದೇ ರೀತಿ, ಕಳೆದ 7 ದಶಕಗಳಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚಿನದನ್ನು ಕೇವಲ 7 ವರ್ಷಗಳಲ್ಲಿ ಸಾಧಿಸುವುದು ರಾಜಕೀಯ ಇಚ್ಛಾಶಕ್ತಿಯನ್ನು ಸೂಚಿಸುತ್ತದೆ. ಸಂಪನ್ಮೂಲಗಳ ಅತ್ಯುತ್ತಮ ಬಳಕೆಯು ಎಂ.ಜಿ.ಎನ್.ಆರ್.ಇ.ಜಿ.ಎ ಯಂತಹ ಯೋಜನೆಗಳೊಂದಿಗೆ ಈ ಯೋಜನೆಯನ್ನು ಸಂಯೋಜನೆಗೊಳಿಸಿರುವುದರಲ್ಲಿ ಪ್ರತಿಫಲಿಸುತ್ತದೆ. ಮುಂಬರುವ ದಿನಗಳಲ್ಲಿ ಕೊಳವೆ ನಲ್ಲಿ ನೀರಿನ ಲಭ್ಯತೆಯು ಹೆಚ್ಚಾದಂತೆ ಯಾವುದೇ ರೀತಿಯ ಸಾಮಾಜಿಕ ತಾರತಮ್ಯದ ಸಾಧ್ಯತೆಗಳನ್ನು ಇದು ನಿವಾರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ನೀರು ಸರಬರಾಜು ಮತ್ತು ಗುಣಮಟ್ಟ ನಿಯಂತ್ರಣಕ್ಕಾಗಿ ಜಿಯೋ-ಟ್ಯಾಗ್ ಮಾಡುವಿಕೆ ಹಾಗು ನೀರಿನ ಪೂರೈಕೆ ಮತ್ತು ಗುಣಮಟ್ಟದ ನಿಯಂತ್ರಣಕ್ಕಾಗಿ ವಸ್ತುಗಳ ಪರಿಹಾರಗಳಂತಹ ತಂತ್ರಜ್ಞಾನದ ಬಳಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, “ಜನ ಶಕ್ತಿ, ಮಹಿಳಾ ಶಕ್ತಿ ಮತ್ತು ತಂತ್ರಜ್ಞಾನದ ಶಕ್ತಿಯು ಜಲ ಜೀವನ್ ಮಿಷನ್ ಗೆ ಶಕ್ತಿ ತುಂಬುತ್ತಿದೆ” ಎಂದು ತಿಳಿಸಿದರು.
*********
(Release ID: 1853161)
Visitor Counter : 219
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam