ಸಂಪುಟ
azadi ka amrit mahotsav

ಪೇಟೆಂಟ್ ಕಛೇರಿಗಳ ಜೊತೆಗೆ ಬಳಕೆದಾರರಿಗೆ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಲೈಬ್ರರಿ (ಟಿಕೆಡಿಎಲ್) ಡೇಟಾಬೇಸ್‌ನ ವ್ಯಾಪಕ ಪ್ರವೇಶಕ್ಕೆ ಸಂಪುಟದ ಅನುಮೋದನೆ

Posted On: 17 AUG 2022 3:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು, "ಪೇಟೆಂಟ್ ಕಛೇರಿಗಳ ಜೊತೆಗೆ ಬಳಕೆದಾರರಿಗೆ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಲೈಬ್ರರಿ (ಟಿಕೆಡಿಎಲ್‌) ಡೇಟಾಬೇಸ್‌ನ ವ್ಯಾಪಕ ಪ್ರವೇಶವನ್ನು" ಅನುಮೋದಿಸಿದೆ. ಟಿಕೆಡಿಎಲ್‌ ಡೇಟಾಬೇಸ್ ಅನ್ನು ಬಳಕೆದಾರರಿಗೆ ಮುಕ್ತಗೊಳಿಸುವುದು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಮತ್ತು ದೂರದೃಷ್ಟಿಯ ಕ್ರಮವಾಗಿದೆ. ಇದು ಭಾರತೀಯ ಸಾಂಪ್ರದಾಯಿಕ ಜ್ಞಾನಕ್ಕೆ ಹೊಸ ದಿಕ್ಕು ತೋರಲಿದೆ. ಏಕೆಂದರೆ ಟಿಕೆಡಿಎಲ್‌ ವಿವಿಧ ಕ್ಷೇತ್ರಗಳಲ್ಲಿ ಭಾರತದ ಮೌಲ್ಯಯುತ ಪರಂಪರೆಯ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆಗೆ ಚಾಲನೆ ನೀಡುತ್ತದೆ. 2020 ರ ಹೊಸ ಶಿಕ್ಷಣ ನೀತಿ ಅಡಿಯಲ್ಲಿ ಭಾರತೀಯ ಜ್ಞಾನ ಪರಂಪರೆಯ ಮೂಲಕ ಚಿಂತನೆ ಮತ್ತು ಜ್ಞಾನದ ನಾಯಕತ್ವವನ್ನು ಬೆಳೆಸಲು ಟಿಕೆಡಿಎಲ್‌ ಅನ್ನು ಮುಕ್ತಗೊಳಿಸಲು ಸಹ ಯೋಜಿಸಲಾಗಿದೆ.

ಭಾರತೀಯ ಸಾಂಪ್ರದಾಯಿಕ ಜ್ಞಾನ (ಟಿಕೆ) ರಾಷ್ಟ್ರೀಯ ಮತ್ತು ಜಾಗತಿಕ ಅಗತ್ಯಗಳನ್ನು ಪೂರೈಸಲು ಅಪಾರ ಸಾಮರ್ಥ್ಯವನ್ನು ನೀಡುತ್ತದೆ, ಜೊತೆಗೆ ಸಾಮಾಜಿಕ ಪ್ರಯೋಜನಗಳನ್ನು ಮತ್ತು ಆರ್ಥಿಕ ಬೆಳವಣಿಗೆಯನ್ನು ಒದಗಿಸುತ್ತದೆ. ಉದಾಹರಣೆಗೆ, ನಮ್ಮ ದೇಶದ ಸಾಂಪ್ರದಾಯಿಕ ಔಷಧ ಮತ್ತು ಸ್ವಾಸ್ಥ್ಯ ವ್ಯವಸ್ಥೆಗಳಾದ ಆಯುರ್ವೇದ. ಸಿದ್ಧ, ಯುನಾನಿ, ಸೋವಾ ರಿಗ್ಪಾ ಮತ್ತು ಯೋಗವು ಭಾರತ ಮತ್ತು ವಿದೇಶದ ಜನರ ಅಗತ್ಯಗಳನ್ನು ಇಂದಿಗೂ ಪೂರೈಸುತ್ತಿದೆ. ಇತ್ತೀಚಿನ ಕೋವಿಡ್-19 ಸಾಂಕ್ರಾಮಿಕವು ಭಾರತೀಯ ಸಾಂಪ್ರದಾಯಿಕ ಔಷಧಿಗಳ ವ್ಯಾಪಕ ಬಳಕೆಗೆ ಸಾಕ್ಷಿಯಾಗಿದೆ, ಇದರ ಪ್ರಯೋಜನಗಳು ರೋಗನಿರೋಧಕತೆಯ ಉತ್ತೇಜನೆಯಿಂದ ರೋಗಲಕ್ಷಣಗಳ-ನಿವಾರಣೆ, ವೈರಾಣು ನಿಗ್ರಹ ಚಟುವಟಿಕೆಯವರೆಗೆ ಇರುತ್ತದೆ. ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಹೆಚ್‌ ಒ) ಭಾರತದಲ್ಲಿ ತನ್ನ ಮೊದಲ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರ (ಜಿಸಿಟಿಎಂ) ವನ್ನು ಸ್ಥಾಪಿಸಿತು. ಪ್ರಪಂಚದ ಪ್ರಸ್ತುತ ಮತ್ತು ಉದಯೋನ್ಮುಖ ಅಗತ್ಯಗಳನ್ನು ಪರಿಹರಿಸುವಲ್ಲಿ ಸಾಂಪ್ರದಾಯಿಕ ಜ್ಞಾನದ ನಿರಂತರ ಪ್ರಸ್ತುತತೆಯನ್ನು ಇದು ತೋರಿಸುತ್ತದೆ.

ಪೇಟೆಂಟ್ ಕಛೇರಿಗಳಿಂದಾಚೆಗೆ ಡೇಟಾಬೇಸ್‌ನ ಪ್ರವೇಶವನ್ನು ವಿಸ್ತರಿಸಲು ಸಂಪುಟ ನೀಡಿರುವ ಅನುಮೋದನೆಯು ನಾವೀನ್ಯತೆ ಮತ್ತು ವ್ಯಾಪಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸ್ತುತ ಅಭ್ಯಾಸಗಳೊಂದಿಗೆ ಸಾಂಪ್ರದಾಯಿಕ ಜ್ಞಾನವನ್ನು ಸಂಯೋಜಿಸಲು ಮತ್ತು ಅಳವಡಿಸಿಕೊಳ್ಳಲು ಒತ್ತು ನೀಡುತ್ತದೆ. ಟಿಕೆಡಿಎಲ್ ಜ್ಞಾನ ಮತ್ತು ತಂತ್ರಜ್ಞಾನವನ್ನು ಮುನ್ನಡೆಸಲು ಸಾಂಪ್ರದಾಯಿಕ ಜ್ಞಾನದ ಮಾಹಿತಿಯ ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಟಿಕೆಡಿಎಲ್ನ ಪ್ರಸ್ತುತ ವಿಷಯಗಳು ಭಾರತೀಯ ಸಾಂಪ್ರದಾಯಿಕ ಔಷಧಿಗಳ ವ್ಯಾಪಕ ಅಳವಡಿಕೆಗೆ ಅನುಕೂಲವಾಗುವಂತೆ ಮಾಡುತ್ತವೆ, ಹಾಗೆಯೇ ನಮ್ಮ ಅಮೂಲ್ಯವಾದ ಜ್ಞಾನ ಪರಂಪರೆಯ ಆಧಾರದ ಮೇಲೆ ಉದ್ಯಮಗಳನ್ನು ನಿರ್ಮಿಸಲು ಹೊಸ ಉತ್ಪಾದಕರು ಮತ್ತು ನಾವೀನ್ಯಕಾರರನ್ನು ಪ್ರೇರೇಪಿಸುತ್ತದೆ.

ಟಿಕೆಡಿಎಲ್ ವ್ಯಾಪಾರಗಳು/ಕಂಪನಿಗಳು ಹರ್ಬಲ್ ಹೆಲ್ತ್‌ಕೇರ್ (ಆಯುಷ್, ಫಾರ್ಮಾಸ್ಯುಟಿಕಲ್ಸ್, ಫೈಟೊಫಾರ್ಮಾಸ್ಯುಟಿಕಲ್ಸ್ ಮತ್ತು ನ್ಯೂಟ್ರಾಸ್ಯುಟಿಕಲ್ಸ್), ವೈಯಕ್ತಿಕ ಆರೈಕೆ ಮತ್ತು ಇತರ ಎಫ್‌ಎಂಸಿಜಿ ಸಂಶೋಧನಾ ಸಂಸ್ಥೆಗಳು; ಸಾರ್ವಜನಿಕ ಮತ್ತು ಖಾಸಗಿ; ಶೈಕ್ಷಣಿಕ ಸಂಸ್ಥೆಗಳು: ಶಿಕ್ಷಣತಜ್ಞರು ಮತ್ತು ವಿದ್ಯಾರ್ಥಿಗಳು; ಮತ್ತು ಇತರರು: ಐ ಎಸ್‌ ಎಂ ಅಭ್ಯಾಸಿಗಳು, ಜ್ಞಾನ ಹೊಂದಿರುವವರು, ಪೇಟೆಂಟ್‌ದಾರರು ಮತ್ತು ಅವರ ಕಾನೂನು ಪ್ರತಿನಿಧಿಗಳು ಮತ್ತು ಸರ್ಕಾರ, ಇತರ ಹಲವಾರು ವಿಶಾಲ ಬಳಕೆದಾರರ ನೆಲೆಯ ಬೇಡಿಕೆಯನ್ನು ಪೂರೈಸುತ್ತದೆ. ಟಿಕೆಡಿಎಲ್ ಡೇಟಾಬೇಸ್‌ಗೆ ಪ್ರವೇಶವು ಪಾವತಿಸಿದ ಚಂದಾದಾರಿಕೆ ಮಾದರಿಯ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬಳಕೆದಾರರಿಗೆ ಹಂತ ಹಂತವಾಗಿ ಮುಕ್ತವಾಗುತ್ತದೆ.

ಭವಿಷ್ಯದಲ್ಲಿ, ಇತರ ಕ್ಷೇತ್ರಗಳಿಂದ ಭಾರತೀಯ ಸಾಂಪ್ರದಾಯಿಕ ಜ್ಞಾನದ ಕುರಿತು ಹೆಚ್ಚಿನ ಮಾಹಿತಿಯನ್ನು “3P ಗಳಾದ ಸಂರಕ್ಷಣೆ. ರಕ್ಷಣೆ ಮತ್ತು ಪ್ರಚಾರ” ಆಯಾಮಗಳಿಂದ ಟಿಕೆಡಿಎಲ್ ಡೇಟಾಬೇಸ್‌ಗೆ ಸೇರಿಸಲಾಗುತ್ತದೆ. ಟಿಕೆಡಿಎಲ್‌ ಡೇಟಾಬೇಸ್ ಭಾರತೀಯ ಸಾಂಪ್ರದಾಯಿಕ ಜ್ಞಾನದ ಮೇಲೆ ತಪ್ಪು ಪೇಟೆಂಟ್‌ಗಳನ್ನು ನೀಡುವುದನ್ನು ತಡೆಯುವ ತನ್ನ ಪ್ರಾಥಮಿಕ ಉದ್ದೇಶವನ್ನು ಪೂರೈಸುವುದರೊಂದಿಗೆ, ಜನರ ಆರೋಗ್ಯಕರ ಉತ್ತಮ, ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಪರಿಹಾರಗಳಿಗಾಗಿ ಸೃಜನಶೀಲ ಮನಸ್ಸನ್ನು ಆವಿಷ್ಕರಿಸುವಂತೆ ಮಾಡುತ್ತದೆ. ಭಾರತದ ಶ್ರೀಮಂತ ಪರಂಪರೆಯು ಹೊಸ ಸಾಮಾಜಿಕ-ಆರ್ಥಿಕ ಬೆಳವಣಿಗೆಗಳಿಗೆ ಬಲವಾದ ಅಡಿಪಾಯವನ್ನು ಹಾಕುತ್ತದೆ.

ಟಿಕೆಡಿಎಲ್‌ ಕುರಿತು: ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಲೈಬ್ರರಿ (ಟಿಕೆಡಿಎಲ್‌) 2001 ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ ಎಸ್‌ ಐ ಆರ್‌) ಮತ್ತು ಭಾರತೀಯ ಔಷಧ ಮತ್ತು ಹೋಮಿಯೋಪತಿ ಇಲಾಖೆ (ಐ ಎಸ್‌ ಎಂ & ಹೆಚ್‌, ಈಗ ಆಯುಷ್ ಸಚಿವಾಲಯ) ಜಂಟಿಯಾಗಿ ಸ್ಥಾಪಿಸಿರುವ ಭಾರತೀಯ ಸಾಂಪ್ರದಾಯಿಕ ಜ್ಞಾನದ ಡೇಟಾಬೇಸ್ ಆಗಿದೆ. ಟಿಕೆಡಿಎಲ್‌ ಜಾಗತಿಕವಾಗಿ ಈ ರೀತಿಯ ಮೊದಲನೆಯದು ಮತ್ತು ಇತರ ರಾಷ್ಟ್ರಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಟಿಕೆಡಿಎಲ್‌ ಪ್ರಸ್ತುತ ಐ ಎಸ್‌ ಎಂ ಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಆಯುರ್ವೇದ, ಯುನಾನಿ, ಸಿದ್ಧ, ಸೋವಾ ರಿಗ್ಪಾ ಮತ್ತು ಯೋಗದ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಮಾಹಿತಿಯನ್ನು ಇಂಗ್ಲಿಷ್, ಜರ್ಮನ್, ಫ್ರೆಂಚ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಎಂಬ ಐದು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಡಿಜಿಟೈಸ್ಡ್ ಸ್ವರೂಪದಲ್ಲಿ ದಾಖಲಿಸಲಾಗಿದೆ. ಟಿಕೆಡಿಎಲ್‌ ವಿಶ್ವಾದ್ಯಂತ ಪೇಟೆಂಟ್ ಕಛೇರಿಗಳಲ್ಲಿ ಪೇಟೆಂಟ್ ಪರೀಕ್ಷಕರಿಗೆ ಅರ್ಥವಾಗುವಂತಹ ಭಾಷೆಗಳಲ್ಲಿ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಪೇಟೆಂಟ್‌ಗಳ ತಪ್ಪಾದ ಅನುಮೋದನೆಯನ್ನು ತಡೆಯುತ್ತದೆ. ಇಲ್ಲಿಯವರೆಗೆ, ಸಂಪೂರ್ಣ ಟಿಕೆಡಿಎಲ್‌ ಡೇಟಾಬೇಸ್‌ಗೆ ಪ್ರವೇಶವನ್ನು ವಿಶ್ವದಾದ್ಯಂತದ 14 ಪೇಟೆಂಟ್ ಕಚೇರಿಗಳಿಗೆ ಮಾತ್ರ ಹುಡುಕಾಟ ಮತ್ತು ಪರೀಕ್ಷೆಯ ಉದ್ದೇಶಗಳಿಗಾಗಿ ಸೀಮಿತಗೊಳಿಸಲಾಗಿದೆ. ಟಿಕೆಡಿಎಲ್‌ ನ ಈ ರಕ್ಷಣಾತ್ಮಕ ಕ್ರಮವು ಭಾರತೀಯ ಸಾಂಪ್ರದಾಯಿಕ ಜ್ಞಾನವನ್ನು ದುರ್ಬಳಕೆಯಿಂದ ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿದೆ ಮತ್ತು ಇದನ್ನು ಜಾಗತಿಕ ಮಾನದಂಡವೆಂದು ಪರಿಗಣಿಸಲಾಗಿದೆ.

*******


(Release ID: 1852738) Visitor Counter : 297