ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ದೇಶವನ್ನು ಉದ್ದೇಶಿಸಿ ಭಾಷಣ

Posted On: 14 AUG 2022 7:32PM by PIB Bengaluru

ನನ್ನ ಪ್ರೀತಿಯ ಸಹ ನಾಗರಿಕರೇ,

ನಮಸ್ಕಾರ!

76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಎಲ್ಲಾ ಭಾರತೀಯರಿಗೆ ಮುಂಗಡವಾಗಿ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ಮಹತ್ವದ ಸಂದರ್ಭದಲ್ಲಿ ನಿಮ್ಮನ್ನುದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗುತ್ತಿದೆ. ಭಾರತವು ಸ್ವತಂತ್ರ ರಾಷ್ಟ್ರವಾಗಿ 75 ವರ್ಷಗಳನ್ನು ಪೂರೈಸುತ್ತಿದೆ. ಸಾಮಾಜಿಕ ಸಾಮರಸ್ಯ, ಏಕತೆ ಮತ್ತು ಜನರ ಸಬಲೀಕರಣವನ್ನು ಉತ್ತೇಜಿಸಲು ಆಗಸ್ಟ್ ಹದಿನಾಲ್ಕನೇ ತಾರೀಖನ್ನು 'ವಿಭಜನೆಯ ಭಯಾನಕತೆಗಳ ಸ್ಮರಣೆಯ ದಿನ'ವಾಗಿ ಆಚರಿಸಲಾಗುತ್ತದೆ. ವಸಾಹತುಶಾಹಿ ಆಡಳಿತಗಾರರ ಸಂಕೋಲೆಗಳಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಂಡ ಹಾಗೂ ನಮ್ಮ ಹಣೆಬರಹವನ್ನು ಮರುರೂಪಿಸಲು ನಿರ್ಧರಿಸಿದ ದಿನವನ್ನು ನಾಳೆಯು ಸೂಚಿಸುತ್ತದೆ. ನಾವೆಲ್ಲರೂ ಆ ದಿನದ ವಾರ್ಷಿಕೋತ್ಸವವನ್ನು ಆಚರಿಸುತ್ತಲೇ, ಸ್ವತಂತ್ರ ಭಾರತದಲ್ಲಿ ನಾವು ಬದುಕಲು ಸಾಧ್ಯವಾಗುವಂತೆ ಮಾಡಲು ಅಪಾರ ತ್ಯಾಗಗಳನ್ನು ಮಾಡಿದ ಎಲ್ಲಾ ಮಹನೀಯರು ಮತ್ತು ಮಹಿಳೆಯರಿಗೆ ನಾವು ತಲೆಬಾಗುತ್ತೇವೆ.

ಇದು ನಮ್ಮೆಲ್ಲರಿಗೂ ಮಾತ್ರವಲ್ಲ, ವಿಶ್ವದಾದ್ಯಂತ ಎಲ್ಲಾ ಪ್ರಜಾಪ್ರಭುತ್ವದ ಪ್ರತಿಪಾದಕರಿಗೂ ಸಂಭ್ರಮಾಚರಣೆಯ ದಿನವಾಗಿದೆ. ಭಾರತವು ಸ್ವಾತಂತ್ರ್ಯವನ್ನು ಗಳಿಸಿದಾಗ, ಭಾರತದಲ್ಲಿ ಪ್ರಜಾಸತ್ತಾತ್ಮಕ ಮಾದರಿಯ ಸರಕಾರದ ಯಶಸ್ಸಿನ ಬಗ್ಗೆ ಅನೇಕ ಅಂತರರಾಷ್ಟ್ರೀಯ ನಾಯಕರು ಮತ್ತು ತಜ್ಞರು ಸಂದೇಹ ಹೊಂದಿದ್ದರು. ಅವರ ಸಂದೇಹಗಳಿಗೆ ಅವರದ್ದೇ ಹಲವು ಕಾರಣಗಳನ್ನು ಅವರು ಹೊಂದಿದ್ದರು. ಆ ದಿನಗಳಲ್ಲಿ, ಪ್ರಜಾಪ್ರಭುತ್ವವು ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳಿಗಷ್ಟೇ ಸೀಮಿತವಾಗಿತ್ತು. ಅನೇಕ ವರ್ಷಗಳ ಕಾಲ ವಿದೇಶಿ ಆಡಳಿತಗಾರರಿಂದ ಶೋಷಣೆಗೆ ಒಳಗಾದ ಬಳಿಕ, ಬಡತನ ಮತ್ತು ಅನಕ್ಷರತೆಗಳೇ ಭಾರತದ ಹೆಗ್ಗುರುತುಗಳಾಗಿದ್ದವು. ಆದರೆ ಭಾರತೀಯರಾದ ನಾವು ನಮ್ಮನ್ನು ಅನುಮಾನದಿಂದ ಕಾಣುತ್ತಿದ್ದವರ ಅಭಿಪ್ರಾಯವನ್ನು ತಪ್ಪು ಎಂದು ಸಾಬೀತುಪಡಿಸಿದ್ದೇವೆ. ಪ್ರಜಾಪ್ರಭುತ್ವವು ಈ ಮಣ್ಣಿನಲ್ಲಿ ಬೇರು ಬಿಟ್ಟಿದ್ದು ಮಾತ್ರವಲ್ಲ, ಸಮೃದ್ಧವಾಗಿ ಮತ್ತು ಸಂಪದ್ಭರಿತವಾಗಿ ಬೆಳೆದು ನಿಂತಿದೆ.

ಇತರ ಸುದೃಢ ಸ್ಥಾಪಿತ ಪ್ರಜಾಪ್ರಭುತ್ವಗಳಲ್ಲೂ, ಮತದಾನದ ಹಕ್ಕನ್ನು ಪಡೆಯಲು ಮಹಿಳೆಯರು ದೀರ್ಘಕಾಲದ ಹೋರಾಟಗಳನ್ನು ನಡೆಸಬೇಕಾಯಿತು. ಆದರೆ ಭಾರತವು ಸಾರ್ವತ್ರಿಕ ಗಣರಾಜ್ಯದ ಆರಂಭದ ದಿನದಿಂದಲೂ ವಯಸ್ಕ ಮತದಾನದ ಹಕ್ಕನ್ನು ಅಳವಡಿಸಿಕೊಂಡಿತು. ಹೀಗಾಗಿ, ಆಧುನಿಕ ಭಾರತದ ನಿರ್ಮಾತೃಗಳು ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ ರಾಷ್ಟ್ರ ನಿರ್ಮಾಣದ ಸಾಮೂಹಿಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರು. ಹೀಗಾಗಿ, ಪ್ರಜಾಪ್ರಭುತ್ವದ ನೈಜ ಸಾಮರ್ಥ್ಯವನ್ನು ಗುರುತಿಸಲು ಜಗತ್ತಿಗೆ ಸಹಾಯ ಮಾಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ.

ಈ ವಿಷಯವನ್ನು ಕಾಕತಾಳೀಯವಲ್ಲ ಎಂದು ನಾನು ನಂಬುತ್ತೇನೆ. ಈ ನೆಲದ ಸಾಧು-ಸಂತರು ನಾಗರಿಕತೆಯ ಆರಂಭದಲ್ಲೇ ಮಾನವೀಯತೆಯ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಿದ್ದರು; ಸರ್ವರ ಸಮಾನತೆ, ಏಕತೆಯಾಗಿ ಅದನ್ನು ವ್ಯಾಖ್ಯಾನಿಸಿದರು. ಭಾರತದ ಮಹಾನ್ ಸ್ವಾತಂತ್ರ್ಯ ಸಂಗ್ರಾಮ ಮತ್ತು ಮಹಾತ್ಮಾ ಗಾಂಧಿಯವರಂತಹ ನಾಯಕರಿಂದ ಆಧುನಿಕ ಕಾಲಕ್ಕಾಗಿ ನಮ್ಮ ಪ್ರಾಚೀನ ಮೌಲ್ಯಗಳ ಮರು ಆವಿಷ್ಕಾರವಾಯಿತು. ಹಾಗಾಗಿ, ನಮ್ಮ ಪ್ರಜಾಪ್ರಭುತ್ವವು ಅಪ್ಪಟ ಭಾರತೀಯ ಗುಣಲಕ್ಷಣಗಳನ್ನು ಹೊಂದಿರುವುದರಲ್ಲಿ ಅಚ್ಚರಿಯೇನಿಲ್ಲ. ಗಾಂಧೀಜಿ ಅವರು ವಿಕೇಂದ್ರೀಕರಣ ಮತ್ತು ಜನರಿಗೆ ಅಧಿಕಾರ ನೀಡುವುದನ್ನು ಪ್ರತಿಪಾದಿಸಿದರು.

ಕಳೆದ 75 ವಾರಗಳಿಂದ, ಇಡೀ ರಾಷ್ಟ್ರವು ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಈ ಉದಾತ್ತ ಆದರ್ಶಗಳನ್ನು ಸ್ಮರಿಸುತ್ತಿದೆ. 2021ರ ಮಾರ್ಚ್‌ನಲ್ಲಿ, ʻದಾಂಡಿ ಯಾತ್ರೆʼಗೆ ಮತ್ತೊಮ್ಮೆ ಪಾದಯಾತ್ರೆಯ ಮೂಲಕ ನಾವು 'ಆಜಾದಿ ಕಾ ಅಮೃತ್ ಮಹೋತ್ಸವ'ಕ್ಕೆ ಚಾಲನೆ ನೀಡಿದೆವು. ಆ ಮೂಲಕ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ವಿಶ್ವ ಭೂಪಟದಲ್ಲಿ ಗುರುತನ್ನು ತಂದುಕೊಟ್ಟ ಆ ಮಹತ್ವದ ಚಳವಳಿಗೆ ಗೌರವ ಸಲ್ಲಿಸುವುದರೊಂದಿಗೆ ನಮ್ಮ ಸಂಭ್ರಮಾಚರಣೆ ಪ್ರಾರಂಭವಾಯಿತು. ಈ ಸ್ವಾತಂತ್ರ್ಯದ ಹಬ್ಬವನ್ನು ಭಾರತದ ಜನತೆಗೆ ಸಮರ್ಪಿಸಲಾಗಿದೆ. ಜನರು ಸಾಧಿಸಿದ ಯಶಸ್ಸನ್ನು ಆಧರಿಸಿ, 'ಆತ್ಮನಿರ್ಭರ ಭಾರತ'ವನ್ನು ನಿರ್ಮಿಸುವ ಸಂಕಲ್ಪವೂ ಈ ಮಹೋತ್ಸವದ ಒಂದು ಭಾಗವಾಗಿದೆ. ಎಲ್ಲಾ ವಯೋಮಾನದ ನಾಗರಿಕರು ದೇಶಾದ್ಯಂತ ನಡೆದ ಸರಣಿ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಈ ಭವ್ಯ ಉತ್ಸವವು 'ಹರ್ ಘರ್ ತಿರಂಗಾ ಅಭಿಯಾನ'ದೊಂದಿಗೆ ಮುಂದುವರಿಯುತ್ತಿದೆ. ಭಾರತದ ತ್ರಿವರ್ಣ ಧ್ವಜಗಳು ದೇಶದ ಮೂಲೆ ಮೂಲೆಗಳಲ್ಲಿ ಹಾರಾಡುತ್ತಿವೆ. ನಮ್ಮ ಮಹಾನ್ ಹುತಾತ್ಮರು ಇದ್ದಿದ್ದರೆ, ಸ್ವಾತಂತ್ರ್ಯ ಚಳವಳಿಯ ಸ್ಫೂರ್ತಿ ಇಷ್ಟು ದೊಡ್ಡ ಮಟ್ಟದಲ್ಲಿ ಮತ್ತೆ ಜೀವಂತವಾಗುವುದನ್ನು ಕಂಡು ರೋಮಾಂಚನಗೊಳ್ಳುತ್ತಿದ್ದರು.

ನಮ್ಮ ದೇಶದ ವಿಶಾಲ ಭೂಪ್ರದೇಶದ ಉದ್ದಗಲಕ್ಕೂ ಕೆಚ್ಚೆದೆಯಿಂದ ನಮ್ಮ ಭವ್ಯ ಸ್ವಾತಂತ್ರ್ಯ ಸಂಗ್ರಾಮವನ್ನು ನಡೆಸಲಾಯಿತು. ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಕರ್ತವ್ಯವನ್ನು ನೆರವೇರಿಸಿ, ಜಾಗೃತಿಯ ಜ್ಯೋತಿಯನ್ನು ಮುಂದಕ್ಕೆ ರವಾನಿಸಿದರಾದರೂ ಅವರ ವೀರ ಕೃತ್ಯಗಳ ಕುರುಹುಗಳನ್ನು ಹೆಚ್ಚಿಗೆ ಉಳಿಸಿಲ್ಲ. ಅನೇಕ ಸ್ವಾತಂತ್ರ್ಯ ಕಲಿಗಳು ಮತ್ತು ಅವರ ಹೋರಾಟಗಳು, ವಿಶೇಷವಾಗಿ ರೈತ ಮತ್ತು ಬುಡಕಟ್ಟು ಜನರಲ್ಲಿ ಕಾಲಕ್ರಮೇಣ ಮರೆತುಹೋದವು. ನವೆಂಬರ್ 15 ಅನ್ನು 'ಜನಜಾತಿಯ ಗೌರವ್ ದಿವಸ್' ಎಂದು ಆಚರಿಸುವ ಕುರಿತು ಕಳೆದ ವರ್ಷ ಸರಕಾರವು ತಳೆದ ನಿರ್ಧಾರವು ಸ್ವಾಗತಾರ್ಹವಾಗಿದೆ. ಏಕೆಂದರೆ ನಮ್ಮ ಬುಡಕಟ್ಟು ನಾಯಕರು ಕೇವಲ ಸ್ಥಳೀಯ ಅಥವಾ ಪ್ರಾದೇಶಿಕವಾಗಿ ಮಾತ್ರ ಮಹನೀಯರಾಗಿಲ್ಲ, ಆದರೆ ಅವರು ಇಡೀ ರಾಷ್ಟ್ರವನ್ನು ಪ್ರೇರೇಪಿಸುತ್ತಾರೆ.

ಪ್ರೀತಿಯ ಪ್ರಜೆಗಳೇ,

ಒಂದು ರಾಷ್ಟ್ರಕ್ಕೆ, ವಿಶೇಷವಾಗಿ ಭಾರತದಂತಹ ಪ್ರಾಚೀನ ರಾಷ್ಟ್ರಕ್ಕೆ, 75 ವರ್ಷಗಳ ಅವಧಿಯ ಪ್ರಯಾಣವೆಂದರೆ ಅದು ಕೇವಲ ಕಣ್ಣು ಮಿಟುಕಿಸುವಷ್ಟು ಸಮಯ ಮಾತ್ರ. ಆದರೆ ವ್ಯಕ್ತಿಗಳಾಗಿ ನಮಗೆ, ಅದು ಒಂದು ಜೀವಿತಾವಧಿಯಾಗಿದೆ. ನಮ್ಮಲ್ಲಿನ ಹಿರಿಯ ನಾಗರಿಕರು ತಮ್ಮ ಜೀವಿತಾವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿದ್ದಾರೆ. ಸ್ವಾತಂತ್ರ್ಯಾನಂತರ, ಎಲ್ಲಾ ತಲೆಮಾರುಗಳು ಹೇಗೆ ಕಷ್ಟಪಟ್ಟು ದುಡಿಯುತ್ತಿವೆ ಎಂಬುದನ್ನು ಅವರು ನೋಡಿದ್ದಾರೆ; ನಾವು ದೊಡ್ಡ ಸವಾಲುಗಳನ್ನು ಹೇಗೆ ಎದುರಿಸಿದ್ದೇವೆ ಮತ್ತು ನಮ್ಮ ಹಣೆಬರಹ ರೂಪಿಸುವ ಜವಾಬ್ದಾರಿಯನ್ನು ನಾವು ಹೇಗೆ ವಹಿಸಿಕೊಂಡಿದ್ದೇವೆ ಎಂಬುದನ್ನು ಕಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಾವು ಕಲಿತ ಪಾಠಗಳು ರಾಷ್ಟ್ರದ ಪ್ರಯಾಣದಲ್ಲಿ ಮುಂದಿನ ಮೈಲಿಗಲ್ಲನ್ನು - ನಮ್ಮ ಸ್ವಾತಂತ್ರ್ಯ ಶತಮಾನೋತ್ಸವದ ಆಚರಣೆಗೆ ಇರುವ ಮುಂದಿನ 25 ವರ್ಷಗಳು - ತಲುಪಲು ಖಂಡಿತ ಉಪಯುಕ್ತವಾಗಲಿವೆ.

2047ರ ವೇಳೆಗೆ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸುತ್ತೇವೆ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಿದವರ ಆಶಯಕ್ಕೆ ನಾವು ದೃಢವಾದ ರೂಪವನ್ನು ನೀಡಲಿದ್ದೇವೆ. ನಾವು ಈಗಾಗಲೇ - ತನ್ನ ನೈಜ ಸಾಮರ್ಥ್ಯವನ್ನು ಸಾಕ್ಷಾತ್ಕರಿಸಿಕೊಂಡ ʻಆತ್ಮನಿರ್ಭರ ಭಾರತʼವನ್ನು ನಿರ್ಮಿಸುವ ಹಾದಿಯಲ್ಲಿದ್ದೇವೆ.

ಇತ್ತೀಚಿನ ವರ್ಷಗಳಲ್ಲಿ, ಕೋವಿಡ್-19 ಸಾಂಕ್ರಾಮಿಕದ ನಂತರ ನವ ಭಾರತ ಉದಯಿಸುತ್ತಿರುವುದನ್ನು ಜಗತ್ತು ನೋಡಿದೆ. ಸಾಂಕ್ರಾಮಿಕಕ್ಕೆ ನಮ್ಮ ಪ್ರತಿಕ್ರಿಯೆಯನ್ನು ಜಗತ್ತಿನೆಲ್ಲೆಡೆ ಶ್ಲಾಘಿಸಲಾಗಿದೆ. ನಾವು ಸ್ವದೇಶಿ ತಯಾರಿತ ಲಸಿಕೆಗಳೊಂದಿಗೆ ಮನುಕುಲದ ಇತಿಹಾಸದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಕಳೆದ ತಿಂಗಳು ನಾವು 200 ಕೋಟಿ ಡೋಸ್‌ಗಳ ಒಟ್ಟು ಲಸಿಕೆ ವ್ಯಾಪ್ತಿಯನ್ನು ದಾಟಿದ್ದೇವೆ. ಸಾಂಕ್ರಾಮಿಕದ ವಿರುದ್ಧ ಹೋರಾಡುವಲ್ಲಿ, ನಮ್ಮ ಸಾಧನೆಗಳು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಉತ್ತಮವಾಗಿವೆ. ಈ ಸಾಧನೆಗಾಗಿ ನಮ್ಮ ವಿಜ್ಞಾನಿಗಳು, ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಲಸಿಕೆಗೆ ಸಂಬಂಧಿಸಿದ ಸಿಬ್ಬಂದಿಗೆ ನಾವು ಕೃತಜ್ಞರಾಗಿದ್ದೇವೆ.

ಕೋವಿಡ್‌ ಸಾಂಕ್ರಾಮಿಕ ರೋಗವು ಇಡೀ ಜಗತ್ತಿನ ಜೀವನ ಮತ್ತು ಆರ್ಥಿಕತೆಯನ್ನು ಬುಡಮೇಲು ಮಾಡಿತು. ಮಹಾ ಬಿಕ್ಕಟ್ಟಿನ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಜಗತ್ತು ಹೋರಾಡುತ್ತಿರುವಾಗ, ಭಾರತವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿತು ಮತ್ತು ಮುಂದುವರಿಯಿತು. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ನವೋದ್ಯಮಗಳ ಯಶಸ್ಸು, ವಿಶೇಷವಾಗಿ ಹೆಚ್ಚುತ್ತಿರುವ ʻಯುನಿಕಾರ್ನ್ʼಗಳ ಸಂಖ್ಯೆಯು ನಮ್ಮ ಕೈಗಾರಿಕಾ ಪ್ರಗತಿಗೆ ಒಂದು ಜ್ವಲಂತ ಉದಾಹರಣೆಯಾಗಿದೆ. ಸರಕಾರ ಮತ್ತು ನೀತಿ ನಿರೂಪಕರು ಜಾಗತಿಕ ಪ್ರವೃತ್ತಿಯನ್ನು ಮೆಟ್ಟಿ ನಿಂತು ನಮ್ಮ ಆರ್ಥಿಕತೆಯ ಏಳಿಗೆಗೆ ಸಹಾಯ ಮಾಡಿದ ಕೀರ್ತಿಗೆ ಅರ್ಹರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಲಾಗಿದೆ. ದೇಶಾದ್ಯಂತ ತಡೆರಹಿತ ಸಾರಿಗೆಯನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ʻಪ್ರಧಾನ ಮಂತ್ರಿ ಗತಿ-ಶಕ್ತಿ ಯೋಜನೆʼಯ ಮೂಲಕ ಇಡೀ ದೇಶದಲ್ಲಿ ನೀರು, ಭೂಮಿ, ಗಾಳಿ ಇತ್ಯಾದಿಗಳನ್ನು ಆಧರಿಸಿದ ಎಲ್ಲಾ ಸಂಪರ್ಕ ಮಾರ್ಗಗಳನ್ನು ಸಂಯೋಜಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಬೆಳವಣಿಗೆಯ ಜೀವಂತಿಕೆ ಗೋಚರಿಸುವಂತಾಗಲು, ಕಾರ್ಮಿಕರು ಮತ್ತು ರೈತರಿಗೆ ಸಾಲವನ್ನು ನೀಡಬೇಕು. ಏಕೆಂದರೆ ಅವರ ಕಠಿಣ ಪರಿಶ್ರಮದಿಂದಲೇ ಇಂದಿನ ಪ್ರಗತಿ ಸಾಧ್ಯವಾಗಿದೆ. ಜೊತೆಗೆ ಸಂಪತ್ತನ್ನು ಸೃಷ್ಟಿಸಿರುವ ಉದ್ಯಮಿಗಳಿಗೆ ಸಹ ಸಾಲವನ್ನು ವಿಸ್ತರಿಸಬೇಕು. ಭಾರತದ ಪ್ರಗತಿಯಲ್ಲಿ ಹೆಚ್ಚು ಹೃದಯಸ್ಪರ್ಶಿಯಾದ ಸಂಗತಿಯೆಂದರೆ ಬೆಳವಣಿಗೆಯು ಹೆಚ್ಚು ಒಳಗೊಳ್ಳುವಿಕೆಯನ್ನು ಹೊಂದಿದೆ ಮತ್ತು ಪ್ರಾದೇಶಿಕ ಅಸಮಾನತೆಗಳು ಸಹ ಕಡಿಮೆಯಾಗುತ್ತಿವೆ.

ಆದರೆ ಇದು ಆರಂಭ ಮಾತ್ರ. ಆರ್ಥಿಕ ಸುಧಾರಣೆಗಳು ಮತ್ತು ನೀತಿ ಉಪಕ್ರಮಗಳ ಸರಣಿಯು ದೀರ್ಘಾವಧಿಗೆ ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಉದಾಹರಣೆಗೆ, ʻಡಿಜಿಟಲ್ ಇಂಡಿಯಾʼ ಅಭಿಯಾನವು ಜ್ಞಾನ ಆರ್ಥಿಕತೆಯ ಅಡಿಪಾಯವನ್ನು ಸೃಷ್ಟಿಸುತ್ತಿದೆ. 'ರಾಷ್ಟ್ರೀಯ ಶಿಕ್ಷಣ ನೀತಿ'ಯು ಕೈಗಾರಿಕಾ ಕ್ರಾಂತಿಯ ಮುಂದಿನ ಹಂತಕ್ಕೆ ಭವಿಷ್ಯದ ಪೀಳಿಗೆಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ ಮತ್ತು ಅದನ್ನು ನಮ್ಮ ಪರಂಪರೆಯೊಂದಿಗೆ ಮರುಸಂಪರ್ಕಿಸುವ ಗುರಿಯನ್ನು ಹೊಂದಿದೆ.

ಆರ್ಥಿಕ ಯಶಸ್ಸು ಸುಗಮ ಜೀವನಕ್ಕೂ ಕಾರಣವಾಗುತ್ತಿದೆ. ಆರ್ಥಿಕ ಸುಧಾರಣೆಗಳು ನವೀನ ಕಲ್ಯಾಣ ಉಪಕ್ರಮಗಳೊಂದಿಗೆ ಜೊತೆಗೂಡಿವೆ. 'ಪ್ರಧಾನ ಮಂತ್ರಿ ಆವಾಸ್ ಯೋಜನೆ'ಯ ಕಾರಣದಿಂದಾಗಿ, ಬಡವರಿಗೆ ಸ್ವಂತ ಸೂರೆಂಬುದು ಈಗ ಕನಸಾಗಿ ಉಳಿದಿಲ್ಲ. ಹೆಚ್ಚಿನ ಜನರಿಗೆ ಆ ಕನಸು ನನಸಾಗಿದೆ. ಅಂತೆಯೇ, 'ಜಲ ಜೀವನ್ ಮಿಷನ್' ಅಡಿಯಲ್ಲಿ, 'ಹರ್ ಘರ್ ಜಲ್' ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ತಲುಪಿದೆ.

ಎಲ್ಲರಿಗೂ, ವಿಶೇಷವಾಗಿ ಬಡವರಿಗೆ ಮೂಲಸೌಕರ್ಯಗಳನ್ನು ಒದಗಿಸುವುದು ಈ ಪ್ರಯತ್ನದ ಮತ್ತು ಇಂತಹ ಅನೇಕ ಪ್ರಯತ್ನಗಳ ಉದ್ದೇಶವಾಗಿದೆ. ಇಂದು ಭಾರತದ ಪಾಲಿಗೆ ಅತಿ ಮುಖ್ಯ ಪದವೆಂದರೆ ಅದು ಸಹಾನುಭೂತಿ; ದೀನದಲಿತರಿಗೆ, ನಿರ್ಗತಿಕರಿಗೆ ಮತ್ತು ಸಮಾಜದ ಅಂಚಿನಲ್ಲಿರುವವರಿಗೆ ಕಾಳಜಿ ತೋರಲಾಗುತ್ತಿದೆ. ನಮ್ಮ ಕೆಲವು ರಾಷ್ಟ್ರೀಯ ಮೌಲ್ಯಗಳನ್ನು ನಾಗರಿಕರ ಮೂಲಭೂತ ಕರ್ತವ್ಯಗಳಾಗಿ ನಮ್ಮ ಸಂವಿಧಾನದಲ್ಲಿ ಸೇರಿಸಲಾಗಿದೆ. ಪ್ರತಿಯೊಬ್ಬ ನಾಗರಿಕನೂ ತಮ್ಮ ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ನಮ್ಮ ರಾಷ್ಟ್ರವು ಹೊಸ ಎತ್ತರವನ್ನು ತಲುಪಲು ಅವುಗಳನ್ನು ಅಕ್ಷರಶಃ ಮತ್ತು ಉತ್ಸಾಹದಿಂದ ನಿರ್ವಹಿಸಬೇಕು ಎಂದು ನಾನು ಮನವಿ ಮಾಡುತ್ತೇನೆ.

ಪ್ರೀತಿಯ ಪ್ರಜೆಗಳೇ,

ಪರಿವರ್ತನೆಯ ಮೂಲಬಿಂದುವಿನಲ್ಲಿ ನಾವು ಆರೋಗ್ಯ, ಶಿಕ್ಷಣ, ಆರ್ಥಿಕತೆ ಮತ್ತು ಹಲವಾರು ಸಂಬಂಧಿತ ಕ್ಷೇತ್ರಗಳಲ್ಲಿ ಉತ್ತಮ ಆಡಳಿತದ ಮೇಲಿನ ಒತ್ತಡಗಳನ್ನು ನೋಡುತ್ತಿದ್ದೇವೆ. 'ರಾಷ್ಟ್ರ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಿದಾಗ, ಅದು ಪ್ರತಿಯೊಂದು ನಿರ್ಧಾರದಲ್ಲಿ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಬಿಂಬಿಸುತ್ತದೆ. ವಿಶ್ವದಲ್ಲಿ ಭಾರತದ ನಿಲುವಿನಲ್ಲಿಯೂ ಇದು ಪ್ರತಿಬಿಂಬಿತವಾಗಿದೆ.

ಭಾರತದ ಹೊಸತಾಗಿ ಕಂಡುಕೊಂಡ ಆತ್ಮವಿಶ್ವಾಸವು ದೇಶದ ಯುವಕರು, ರೈತರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಮಹಿಳೆಯರ ಉತ್ಸಾಹದ ಮೂಲದಿಂದ ಪುಟಿದೆದ್ದಿದೆ. ಲಿಂಗ ಅಸಮಾನತೆಗಳು ಕಡಿಮೆಯಾಗುತ್ತಿವೆ ಮತ್ತು ಮಹಿಳೆಯರು ಅನೇಕ ಕಟ್ಟುಪಾಡುಗಳನ್ನು ಛಿದ್ರಗೊಳಿಸಿ ಮುಂದೆ ಸಾಗುತ್ತಿದ್ದಾರೆ. ಸಾಮಾಜಿಕ ಮತ್ತು ರಾಜಕೀಯ ಪ್ರಕ್ರಿಯೆಗಳಲ್ಲಿ ಹೆಚ್ಚುತ್ತಿರುವ ಅವರ ಭಾಗವಹಿಸುವಿಕೆಯು ನಿರ್ಣಾಯಕವಾಗಲಿದೆ. ತಳಮಟ್ಟದಲ್ಲಿ, ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ನಾವು ಹೊಂದಿದ್ದೇವೆ.

ನಮ್ಮ ಹೆಣ್ಣುಮಕ್ಕಳು ರಾಷ್ಟ್ರದ ಅತಿದೊಡ್ಡ ಭರವಸೆಯಾಗಿದ್ದಾರೆ. ಅವರಲ್ಲಿ ಕೆಲವರು ಇತ್ತೀಚೆಗೆ ನಡೆದ ʻಕಾಮನ್ ವೆಲ್ತ್ʼ ಕ್ರೀಡಾಕೂಟದಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಸಹಜವಾಗಿ, ಭಾರತದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ತಮ್ಮ ಪ್ರದರ್ಶನದಿಂದ ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ನಮ್ಮ ವಿಜೇತರಲ್ಲಿ ಹೆಚ್ಚಿನ ಸಂಖ್ಯೆಯವರು ಸಮಾಜದ ದೀನದಲಿತ ವರ್ಗಗಳಿಂದ ಬಂದವರು. ಫೈಟರ್ ಪೈಲಟ್‌ಗಳಾಗುವುದರಿಂದ ಹಿಡಿದು ಬಾಹ್ಯಾಕಾಶ ವಿಜ್ಞಾನಿಗಳವರೆಗೆ, ನಮ್ಮ ಹೆಣ್ಣುಮಕ್ಕಳು ದೊಡ್ಡ ಎತ್ತರಕ್ಕೆ ಏರುತ್ತಿದ್ದಾರೆ.

ಪ್ರೀತಿಯ ಪ್ರಜೆಗಳೇ,

ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ, ನಾವು ನಮ್ಮ 'ಭಾರತೀಯತೆʼಯನ್ನು ಆಚರಿಸುತ್ತಿದ್ದೇವೆ. ನಮ್ಮ ದೇಶವು ವೈವಿಧ್ಯತೆಯಿಂದ ಕೂಡಿದೆ. ಆದರೆ, ಇದೇ ವೇಳೆ, ನಾವೆಲ್ಲರೂ ಒಂದು ಸಾಮಾನ್ಯತೆಯನ್ನು ಹೊಂದಿದ್ದೇವೆ. ಈ ಸಾಮಾನ್ಯ ಎಳೆ ನಮ್ಮೆಲ್ಲರನ್ನು ಒಟ್ಟಿಗೆ ಹಿಡಿದಿಟ್ಟಿದೆ ಮತ್ತು ʻಏಕ್ ಭಾರತ್, ಶ್ರೇಷ್ಠ ಭಾರತ್ʼ ಎಂಬ ಆಶಯದೊಂದಿಗೆ ಒಟ್ಟಿಗೆ ನಡೆಯಲು ನಮ್ಮನ್ನು ಪ್ರೇರೇಪಿಸುತ್ತಿದೆ.

ಪರ್ವತಗಳು, ನದಿಗಳು, ಸರೋವರಗಳು ಮತ್ತು ಕಾಡುಗಳು ಮತ್ತು ಅಂತಹ ಭೂದೃಶ್ಯಗಳಲ್ಲಿ ವಾಸಿಸುವ ಪ್ರಾಣಿ-ಪಕ್ಷಿಗಳ ಕಾರಣದಿಂದಾಗಿ ಭಾರತವು ಬಹಳ ಸುಂದರವಾದ ದೇಶವಾಗಿದೆ. ಪರಿಸರವು ಹೊಸ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವನ್ನು ಸುಂದರಗೊಳಿಸುವ ಎಲ್ಲವನ್ನೂ ಸಂರಕ್ಷಿಸಲು ನಾವು ದೃಢನಿಶ್ಚಯ ಮಾಡಬೇಕು. ನೀರು, ಮಣ್ಣು ಮತ್ತು ಜೀವವೈವಿಧ್ಯವನ್ನು ಸಂರಕ್ಷಿಸುವುದು ನಮ್ಮ ಮಕ್ಕಳ ಕರ್ತವ್ಯವಾಗಿದೆ. ಪ್ರಕೃತಿ ಮಾತೆಯ ಆರೈಕೆಯು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಭಾರತೀಯರಾದ ನಾವು ನಮ್ಮ ಸಾಂಪ್ರದಾಯಿಕ ಜೀವನಶೈಲಿಯೊಂದಿಗೆ ಪ್ರಪಂಚದ ಉಳಿದ ಭಾಗಕ್ಕೆ ಮಾರ್ಗದರ್ಶನ ಮಾಡಬಹುದು. ಯೋಗ ಮತ್ತು ಆಯುರ್ವೇದವು ವಿಶ್ವಕ್ಕೆ ಭಾರತದ ಅಮೂಲ್ಯ ಕೊಡುಗೆಗಳಾಗಿವೆ. ಅವುಗಳ ಜನಪ್ರಿಯತೆ ಪ್ರಪಂಚದಾದ್ಯಂತ ಹೆಚ್ಚುತ್ತಿದೆ.

ಪ್ರೀತಿಯ ಸಹ ನಾಗರಿಕರೇ,

ನಮ್ಮ ಪ್ರೀತಿಯ ದೇಶವು ನಮ್ಮ ಜೀವನದಲ್ಲಿ ಪ್ರಸ್ತುತ ನಮಗೆ ದೊರೆತಿರುವಂಥ ಎಲ್ಲವನ್ನೂ ನಮಗೆ ನೀಡಿದೆ. ನಮ್ಮ ದೇಶದ ಸುರಕ್ಷತೆ, ಭದ್ರತೆ, ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡಲು ನಾವು ಸಂಕಲ್ಪ ಮಾಡಬೇಕು. ಭವ್ಯ ಭಾರತವನ್ನು ನಿರ್ಮಿಸಿದಾಗ ಮಾತ್ರ ನಮ್ಮ ಅಸ್ತಿತ್ವವು ಅರ್ಥಪೂರ್ಣವಾಗುತ್ತದೆ. ಕನ್ನಡ ಭಾಷೆಯ ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ರಾಷ್ಟ್ರ ಕವಿ ಕುವೆಂಪು ಅವರು ಹೀಗೆ ಬರೆದಿದ್ದಾರೆ:

ನಾನು ಅಳಿವೆ, ನೀನು ಅಳಿವೆ

ನಮ್ಮ ಎಲುಬುಗಳ ಮೇಲೆ

ಮೂಡುವುದು - ಮೂಡುವುದು

ನವಭಾರತ ಲೀಲೆ

ಮಾತೃಭೂಮಿಗಾಗಿ ಮತ್ತು ಸಹ ನಾಗರಿಕರ ಉದ್ಧಾರಕ್ಕಾಗಿ ಸಂಪೂರ್ಣ ತ್ಯಾಗಕ್ಕೆ ರಾಷ್ಟ್ರ ಕವಿಯ ಕರೆ ಇದು. 2047ರ ನವ ಭಾರತವನ್ನು ನಿರ್ಮಿಸಲು ಹೊರಟಿರುವ ದೇಶದ ಯುವಕರು ಈ ಆದರ್ಶಗಳನ್ನು ಪಾಲಿಸಬೇಕೆಂಬುದು ನನ್ನ ವಿಶೇಷ ಮನವಿ.

ನಾನು ಮಾತು ಮುಗಿಸುವ ಮೊದಲು, ಸಶಸ್ತ್ರ ಪಡೆಗಳಿಗೆ, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಸದಸ್ಯರಿಗೆ ಮತ್ತು ತಮ್ಮ ತಾಯ್ನಾಡನ್ನು ಹೆಮ್ಮೆಪಡುವಂತೆ ಮಾಡುತ್ತಲೇ ಇರುವ ಭಾರತೀಯ ವಲಸಿಗರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.

ಧನ್ಯವಾದಗಳು

ಜೈ ಹಿಂದ್!

 

*******

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 


(Release ID: 1851856) Visitor Counter : 1633