ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಶ್ರೀ ಪುರುಷೋತ್ತಮ್ ರೂಪಾಲಾ ಅವರಿಂದ ಪಾಕಶಾಲೆಯ ಕಾಫಿ ಟೇಬಲ್ ಪುಸ್ತಕ 'ಮೀನು ಮತ್ತು ಸಮುದ್ರಾಹಾರ - 75 ರುಚಿಕರ ಪಾಕವಿಧಾನಗಳ ಸಂಗ್ರಹ' ಲೋಕಾರ್ಪಣೆ

Posted On: 10 AUG 2022 4:47PM by PIB Bengaluru

ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವರಾದ ಶ್ರೀ ಪುರುಷೋತ್ತಮ್ ರುಪಾಲಾ ಅವರು ಇಂದು 'ಮೀನು ಮತ್ತು ಸಮುದ್ರಾಹಾರ - 75 ರುಚಿಕರ ಪಾಕವಿಧಾನಗಳ ಸಂಗ್ರಹ' ಎಂಬ ವಿಶಿಷ್ಟ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಮೀನು ಮತ್ತು ಸಮುದ್ರಾಹಾರಗಳ ದೇಶೀಯ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ಸ್ಥಳೀಯ ಮೀನು ಪ್ರಭೇದಗಳನ್ನು ಜನಪ್ರಿಯಗೊಳಿಸುವ ಪ್ರಯತ್ನದ ಭಾಗವಾಗಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುವ ಮೀನುಗಾರಿಕೆ ಇಲಾಖೆಯು ಈ ಉಪಕ್ರಮ ಕೈಗೊಂಡಿದೆ. ಈ ಪುಸ್ತಕವನ್ನು ಸಹಾಯಕ ಸಚಿವರಾದ (ಎಂಒಎಸ್) ಡಾ.ಎಲ್.ಮುರುಗನ್ ಮತ್ತು ಡಾ.ಸಂಜೀವ್ ಕುಮಾರ್ ಬಲ್ಯಾನ್, ಕಾರ್ಯದರ್ಶಿ ಶ್ರೀ ಜತೀಂದ್ರ ನಾಥ್ ಸ್ವೈನ್, ಜಂಟಿ ಕಾರ್ಯದರ್ಶಿ (ಒಳನಾಡು ಮೀನುಗಾರಿಕೆ) ಶ್ರೀ ಸಾಗರ್ ಮೆಹ್ರಾ; ಜಂಟಿ ಕಾರ್ಯದರ್ಶಿ (ಸಾಗರ ಮೀನುಗಾರಿಕೆ) ಶ್ರೀ ಜೆ ಬಾಲಾಜಿ ಹಾಗೂ ಇಲಾಖೆಯ ಇತರ ಅಧಿಕಾರಿಗಳ ಘನ ಉಪಸ್ಥಿತಿಯಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ʻಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆʼಯ (ಪಿ.ಎಂ.ಎಂ.ಎಸ್‌.ವೈ) ಪಿ.ಎಂ.ಸಿ ಹಾಗೂ ವಿಶೇಷ ಅತಿಥಿ-ಸೆಲೆಬ್ರಿಟಿ ಬಾಣಸಿಗ ಶ್ರೀ ಕುನಾಲ್ ಕಪೂರ್ ಅವರು ಸಹ ಈ ಸಂದರ್ಭ ಉಪಸ್ಥಿತರಿದ್ದರು. ಕಾಫಿ ಟೇಬಲ್ ಪುಸ್ತಕ ಮತ್ತು ಅದರ ಲೋಕಾರ್ಪಣೆ ಕಾರ್ಯಕ್ರಮವು ಭಾರತದ ಸ್ವಾತಂತ್ರ್ಯದ 75 ವೈಭವಯುತ ವರ್ಷಗಳ ಆಚರಣೆಯ ಅಂಗವಾಗಿ ಪ್ರಸ್ತುತ ನಡೆಯುತ್ತಿರುವ ʻಆಜಾದಿ ಕಾ ಅಮೃತ್ ಮಹೋತ್ಸವ್ʼ  ಅಭಿಯಾನದ ಒಂದು ಭಾಗವಾಗಿದೆ. ಪಾಕವಿಧಾನ ಪುಸ್ತಕವು ದೇಶೀಯ ಜಲಮೂಲಗಳಲ್ಲಿ ಲಭ್ಯವಿರುವ ಮೀನುಗಳ ವೈವಿಧ್ಯತೆಯನ್ನು ಅನಾವರಣಗೊಳಿಸುವುದರ ಜೊತೆಗೆ ದೇಶಾದ್ಯಂತದ ವೈವಿಧ್ಯಮಯ ಅಡುಗೆ ಮತ್ತು ಆಹಾರ ಶೈಲಿಗಳನ್ನು ಸೂಚಿಸುವ ದೇಶದ ಮತ್ಸ್ಯ ಪಾಕಶಾಲಾ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ.


  
 

ಕಾಫಿ ಟೇಬಲ್ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಶ್ರೀ ರೂಪಾಲಾ ಅವರು ಈ ಪುಸ್ತಕವನ್ನು ರೂಪಿಸಿದ್ದಕ್ಕಾಗಿ ಹಾಗೂ ಭಾರತೀಯ 'ರಸೋಯಿ' (ಪಾಕಶಾಲೆ), ವಿವಿಧ ಸಾಂಪ್ರದಾಯಿಕ ಮತ್ಸ್ಯ ಉತ್ಸವಗಳು ಮತ್ತು ಸಂಸ್ಕೃತಿಗಳ ಸಾರವನ್ನು ಇದರಲ್ಲಿ ಆಸಕ್ತಿದಾಯಕ ರೀತಿಯಲ್ಲಿ ಸೆರೆ ಹಿಡಿದಿದ್ದಕ್ಕಾಗಿ ಇಲಾಖೆಯನ್ನು ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಸಚಿವ ಡಾ. ಎಲ್. ಮುರುಗನ್ ಅವರು ಪುಸ್ತಕದಲ್ಲಿರುವ  ತಮಿಳುನಾಡಿನ ಪಾಕವಿಧಾನಗಳ ಬಗ್ಗೆ ಪ್ರಸ್ತಾಪಿಸಿದರು. ಬಾಯಲ್ಲಿ ನೀರೂರಿಸುವ ಕರಾವಳಿ ಮತ್ಸ್ಯ ಭಕ್ಷ್ಯಗಳು ಹೇಗೆ ತಮ್ಮನ್ನು ಕಾಲಚಕ್ರದಲ್ಲಿ ಹಿಂದಕ್ಕೆ ಕರೆದೊಯ್ದು ಹಳೆಯ ಸವಿನೆನಪುಗಳನ್ನು  ಮೆಲುಕು ಹಾಕುವಂತೆ ಮಾಡಿದವು ಎಂಬುದನ್ನು ವಿವರಿಸಿದರು. ಶ್ರೀ ಜತೀಂದ್ರ ನಾಥ್ ಸ್ವೈನ್ ಅವರು ಮಾತನಾಡಿ, ಮೀನು ನಿತ್ಯಾಹಾರವಾಗಿರುವ ತಮ್ಮ ತವರು ರಾಜ್ಯ ಒಡಿಶಾದಲ್ಲಿ ಜನರು ಮತ್ಸ್ಯಭಕ್ಷ್ಯಗಳನ್ನು ಹೇಗೆ ಸವಿದು ಆನಂದಿಸುತ್ತಾರೆ ಎಂಬುದರ ಬಗ್ಗೆ ವಿವರಿಸಿದರು. ಸಣ್ಣ ಮತ್ತು ಕುಶಲಕರ್ಮಿ ಮೀನು ಕೃಷಿಕರ ಜೀವನೋಪಾಯವನ್ನು ಬೆಂಬಲಿಸಲು ಇಲಾಖೆ ಹೇಗೆ ವಿವಿಧ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ ಎಂಬುದನ್ನು ಅವರು ಉಲ್ಲೇಖಿಸಿದರು. ತಮ್ಮ ವಿಶೇಷ ಭಾರತೀಯ ಪಾಕಪದ್ಧತಿಗಾಗಿ ಜನಪ್ರಿಯರಾಗಿರುವ ಪ್ರಸಿದ್ಧ ಬಾಣಸಿಗ ಕುನಾಲ್ ಕಪೂರ್ ಅವರು, ಮೀನಿನ ಹೆಸರುಗಳೊಂದಿಗೆ ಭಾರತದ ವಿವಿಧ ಭಾಗಗಳ ಸ್ಥಳೀಯ ಪಾಕವಿಧಾನಗಳನ್ನು ಒಳಗೊಂಡಿರುವ ಪುಸ್ತಕದ ಪರಿಕಲ್ಪನೆಯನ್ನು ಶ್ಲಾಘಿಸಿದರು. ಈ ಕಾರ್ಯಕ್ರಮವು ತಮ್ಮ ತಂದೆಯವರು ಕುಟುಂಬಕ್ಕಾಗಿ ಫಿಶ್ ಫ್ರೈ ತಯಾರಿಸಿದ ಬಾಲ್ಯದ ದಿನಗಳನ್ನು ನೆನಪಿಸಿತು.  ಜೊತೆಗೆ, ನಂತರ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಮೀನು ಪ್ರಭೇದಗಳು ಮತ್ತು ಅದರ ವೈವಿಧ್ಯಮಯ ಅಡುಗೆ ಶೈಲಿಯೊಂದಿಗೆ ತಮ್ಮ ಪರಿಚಯದ ದಿನಗಳನ್ನು ಮೆಲುಕು ಹಾಕಿಸಿತು ಎಂದು ಅವರು ಉಲ್ಲೇಖಿಸಿದರು. 

ಪ್ರಾಚೀನ ಕಾಲದಿಂದಲೂ ಮೀನು ಮತ್ತು ಸಮುದ್ರಾಹಾರವು ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ. ಸಿಂಧೂ ಕಣಿವೆ ನಾಗರಿಕತೆಯ ಸಮಯದಲ್ಲಿ ಮೀನಿನ ಸೇವನೆಯು ಒಂದು ಗಮನಾರ್ಹ ಆಹಾರ ಪದ್ಧತಿಯಾಗಿದ್ದಿತು ಎಂಬುದನ್ನು ಸೂಚಿಸಲು ಅನೇಕ ಅವಶೇಷಗಳು ಸಿಕ್ಕಿವೆ. ಮೀನು ಅದರ ಪೌಷ್ಟಿಕಾಂಶದ ಮೌಲ್ಯಗಳ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಅಂದಾಜಿನ ಪ್ರಕಾರ, 2030ರ ವೇಳೆಗೆ ಭಾರತದ ಮೀನು ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಭಾಗವು ಜಲಕೃಷಿಯಿಂದ ದೊರೆಯಲಿದೆ. ಮೀನುಗಾರಿಕೆ ಮತ್ತು ಜಲಕೃಷಿಗಳು ಉದ್ಯೋಗಕ್ಕೆ ಸಮಾನ ಪ್ರಾಮುಖ್ಯತೆಯನ್ನು ಹೊಂದಿರುವುದರ ಜೊತೆಗೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯ ಪ್ರಮುಖ ಮೂಲವಾಗಿವೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನಸಂಖ್ಯೆಗೆ ಇವು ಹೆಚ್ಚು ಮುಖ್ಯವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ. 

ಸಮಗ್ರ, ಕಾರ್ಯತಂತ್ರಾತ್ಮಕ ಮತ್ತು ಕೇಂದ್ರೀಕೃತ ಮಧ್ಯಸ್ಥಿಕೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ, ಮೀನುಗಾರಿಕೆ ಕ್ಷೇತ್ರದ ಮಹತ್ವವನ್ನು ಮನಗಂಡ ಭಾರತ ಸರಕಾರವು ಆತ್ಮನಿರ್ಭರ ಭಾರತ ಪ್ಯಾಕೇಜ್‌ ಭಾಗವಾಗಿ 2020ರ ಮೇ ತಿಂಗಳಲ್ಲಿ ಮಹತ್ವಾಕಾಂಕ್ಷಿ ʻಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆʼಯನ್ನು (ಪಿ.ಎಂ.ಎಂ.ಎಸ್‌.ವೈ) 20,050 ಕೋಟಿ ರೂ.ಗಳ ಅತ್ಯಧಿಕ ಹೂಡಿಕೆಯೊಂದಿಗೆ ಪ್ರಾರಂಭಿಸಿತು.  ಈ ಯೋಜನೆಗಳನ್ನು 2020-21ನೇ ಹಣಕಾಸು ವರ್ಷದಿಂದ 2024-25ರ ಹಣಕಾಸು ವರ್ಷದವರೆಗಿನ ಐದು ವರ್ಷಗಳ ಅವಧಿಯಲ್ಲಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ  ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯು ಈ ವಲಯದ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಗೆ ಚಾಲನೆ ನೀಡುವುದರ ಜೊತೆಗೆ ಮೀನುಗಾರರು, ಮೀನು ಕೃಷಿಕರು ಮತ್ತು ಮೌಲ್ಯ-ಸರಪಳಿಯಲ್ಲಿರುವ ಇತರ ಎಲ್ಲಾ ಮಧ್ಯಸ್ಥಗಾರರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಮೀನು ಉತ್ಪಾದನೆ ಮತ್ತು ಉತ್ಪಾದಕತೆ, ಗುಣಮಟ್ಟ, ತಂತ್ರಜ್ಞಾನದ ಒಳಹರಿವು, ಪತ್ತೆಹಚ್ಚುವಿಕೆ, ಕೊಯ್ಲೋತ್ತರ ಮೂಲಸೌಕರ್ಯ ಮತ್ತು ನಿರ್ವಹಣೆಯಲ್ಲಿನ ನಿರ್ಣಾಯಕ ಕೊರತೆಗಳನ್ನು ನಿವಾರಿಸುವುದು ʻಪಿ.ಎಂ.ಎಂ.ಎಸ್.ವೈʼ ಉದ್ದೇಶವಾಗಿದೆ. ಖಾಸಗಿ ವಲಯದ ಪಾಲ್ಗೊಳ್ಳುವಿಕೆ, ನಾವಿನ್ಯತೆ ಮತ್ತು ಉದ್ಯಮಶೀಲತೆ, ಸುಗಮ ವ್ಯಾಪಾರ ಮತ್ತು ಇತರ ಅಗತ್ಯ ಬೆಂಬಲವನ್ನು ಉತ್ತೇಜಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಇಲಾಖೆಯು ಹೊಂದಿದೆ. 

ಕಾಫಿ ಟೇಬಲ್ ಪುಸ್ತಕದ ಮೂಲಕ, ಇಲಾಖೆಯು ದೇಶೀಯ ಮೀನು ಸೇವನೆಯನ್ನು ಹೆಚ್ಚಿಸುವುದರ ಜೊತೆಗೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗಾಗಿ ಮೀನಿನ ಪ್ರೋಟೀನ್ ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ, ಸ್ಥಳೀಯ ಪಾಕವಿಧಾನಗಳು ಮತ್ತು ಭಾರತೀಯ ಮತ್ಸ್ಯ ಭೋಜನಕಲೆ (ಗ್ಯಾಸ್ಟ್ರಾನಮಿ) ಪರಂಪರೆಯ ವೈವಿಧ್ಯವನ್ನು ಉತ್ತೇಜಿಸುವುದು ಈ ಪುಸ್ತಕದ ಉದ್ದೇಶವಾಗಿದೆ.  

  
  
  
ಒಳನಾಡು ಮೀನುಗಾರಿಕೆ ಜಂಟಿ ಕಾರ್ಯದರ್ಶಿ ಶ್ರೀ ಮೆಹ್ರಾ ಅವರು ಮಾತನಾಡಿ, ʻಪಿ.ಎಂ.ಎಂ.ಎಸ್.ವೈʼ ಯೋಜನೆಯ ಮೂಲಕ ದೇಶೀಯ ಮೀನುಗಳ ತಲಾ ಬಳಕೆಯನ್ನು 5 ಕೆ.ಜಿ.ಯಿಂದ 12 ಕೆ.ಜಿ.ಗೆ ಹೆಚ್ಚಿಸಲು, ರಫ್ತನ್ನು 1 ಲಕ್ಷ ಕೋಟಿ ರೂ.ಗಳಿಗೆ ದ್ವಿಗುಣಗೊಳಿಸಲು ಹಾಗೂ ಉತ್ಪಾದಕತೆಯನ್ನು ಪ್ರತಿ ಹೆಕ್ಟೇರಿಗೆ 3 ಟನ್‌ಗಳಿಂದ 5 ಟನ್‌ಗಳಿಗೆ ಹೆಚ್ಚಿಸಲು ಇಲಾಖೆಯು ವಿವಿಧ ಕಾರ್ತಂತ್ರಾತ್ಮಕ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು. ಇದು ಕೈಗೆಟುಕುವ ಪ್ರೋಟೀನ್ ಮೂಲವಾಗಿರುವುದರಿಂದ ಪ್ರತಿಯೊಬ್ಬರನ್ನೂ ತಮ್ಮ ಆಹಾರದಲ್ಲಿ ಮತ್ಸ್ಯವನ್ನು ಸೇರ್ಪಡೆಗೊಳಿಸಲು ಅವರು ಕರೆ ನೀಡಿದರು. ಪುಸ್ತಕದಲ್ಲಿ ತೋರಿಸಲಾದ ಪಾಕವಿಧಾನಗಳ ಪ್ರಯೋಗಕ್ಕೂ ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸಿದರು. 

 

**********




(Release ID: 1850818) Visitor Counter : 140