ಸಂಪುಟ
azadi ka amrit mahotsav

ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶಕ್ಕೆ ಸಲ್ಲಿಸಲಿರುವ ಭಾರತದ ಪರಿಷ್ಕೃತ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗೆ ಸಂಪುಟದ ಅನುಮೋದನೆ


ಈ ಅನುಮೋದನೆಯು ಸಿಒಪಿ 26 ರಲ್ಲಿ ಘೋಷಿಸಲಾದ ಪ್ರಧಾನ ಮಂತ್ರಿಯವರ ‘ಪಂಚಾಮೃತʼವನ್ನು ವರ್ಧಿತ ಹವಾಮಾನ ಗುರಿಗಳಾಗಿಸುತ್ತದೆ

2070 ರ ವೇಳೆಗೆ ನಿವ್ವಳ ಶೂನ್ಯಹೊರಸೂಸುವಿಕೆಯನ್ನು ತಲುಪುವ ಭಾರತದ ದೀರ್ಘಾವಧಿಯ ಗುರಿಯನ್ನು ಸಾಧಿಸುವತ್ತ ಒಂದು ಹೆಜ್ಜೆ

ಭಾರತವು ಈಗ 2030 ರ ವೇಳೆಗೆ ತನ್ನ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು 45 ಪ್ರತಿಶತದಷ್ಟು ಕಡಿಮೆ ಮಾಡಲು ಬದ್ಧವಾಗಿದೆ

ಪ್ರಧಾನ ಮಂತ್ರಿಯವರ 'ಲೈಫ್'- 'ಪರಿಸರಕ್ಕಾಗಿ ಜೀವನಶೈಲಿ' ಸಾಮೂಹಿಕ ಆಂದೋಲನದ ಪರಿಕಲ್ಪನೆಯು ಹವಾಮಾನ ಬದಲಾವಣೆಯನ್ನು ಎದುರಿಸಲು ಪ್ರಮುಖವಾಗಿದೆ

Posted On: 03 AUG 2022 2:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶಕ್ಕೆ (ಯು ಎನ್‌ ಎಫ್‌ ಸಿ ಸಿ ಸಿ) ಸಲ್ಲಿಸಲಿರುವ ಭಾರತದ ಪರಿಷ್ಕೃತ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗೆ (ಎನ್‌ ಡಿ ಸಿ) ಅನುಮೋದನೆ ನೀಡಿದೆ.


ಪರಿಷ್ಕೃತ ಎನ್‌ ಡಿ ಸಿಯು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಒಪ್ಪಿಕೊಂಡಂತೆ ಹವಾಮಾನ ಬದಲಾವಣೆಯ ಆತಂಕಕ್ಕೆ ಜಾಗತಿಕ ಪ್ರತಿಕ್ರಿಯೆಯನ್ನು ಬಲಪಡಿಸಲು ಭಾರತದ ಕೊಡುಗೆಗಳನ್ನು ಹೆಚ್ಚಿಸುತ್ತದೆ. ಈ ಕ್ರಮವು ಕಡಿಮೆ ಹೊರಸೂಸುವಿಕೆಯ ಮಾರ್ಗಗಳಲ್ಲಿ ಭಾರತಕ್ಕೆ ಸಹಾಯ ಮಾಡುತ್ತದೆ. ಇದು ದೇಶದ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಮತ್ತು ಯು ಎನ್‌ ಎಫ್‌ ಸಿ ಸಿ ಸಿ ಯ ತತ್ವಗಳು ಮತ್ತು ನಿಬಂಧನೆಗಳ ಆಧಾರದ ಮೇಲೆ ದೇಶದ ಭವಿಷ್ಯದ ಅಭಿವೃದ್ಧಿ ಅಗತ್ಯಗಳನ್ನು ರಕ್ಷಿಸುತ್ತದೆ. 
ಯುನೈಟೆಡ್ ಕಿಂಗ್‌ಡಮ್‌ನ ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ (ಯು ಎನ್‌ ಎಫ್‌ ಸಿ ಸಿ ಸಿ) ದ ಪಕ್ಷಗಳ ಸಮ್ಮೇಳನದ (ಸಿಒಪಿ26) 26 ನೇ ಅಧಿವೇಶನದಲ್ಲಿ ಭಾರತವು ಐದು ಅಮೃತ ಅಂಶಗಳನ್ನು (ಪಂಚಾಮೃತ) ಜಗತ್ತಿಗೆ ಪ್ರಸ್ತುತಪಡಿಸುವ ಮೂಲಕ ಭಾರತದ ಹವಾಮಾನ ಕ್ರಮವನ್ನು ತೀವ್ರಗೊಳಿಸುವ ತನ್ನ ಆಶಯವನ್ನು ವ್ಯಕ್ತಪಡಿಸಿತು. ಭಾರತದ ಅಸ್ತಿತ್ವದಲ್ಲಿರುವ ಎನ್‌ ಡಿ ಸಿ ಗೆ ಈ ಪರಿಷ್ಕೃತ ಕ್ರಮವು ಸಿಒಪಿ 26 ರಲ್ಲಿ ಘೋಷಿಸಲಾದ 'ಪಂಚಾಮೃತ' ವನ್ನು ವರ್ಧಿತ ಹವಾಮಾನ ಗುರಿಗಳಾಗಿಸುತ್ತದೆ. ಈ ಪರಿಷ್ಕೃತ ಕ್ರಮವು 2070 ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯನ್ನು ತಲುಪುವ ಭಾರತದ ದೀರ್ಘಾವಧಿಯ ಗುರಿಯನ್ನು ಸಾಧಿಸುವತ್ತ ಒಂದು ಹೆಜ್ಜೆಯಾಗಿದೆ.
ಮೊದಲು, ಭಾರತವು ತನ್ನ ಉದ್ದೇಶಿತ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಯನ್ನು (ಎನ್‌ ಡಿ ಸಿ) ಯು ಎನ್‌ ಎಫ್‌ ಸಿ ಸಿ ಸಿಗೆ ಅಕ್ಟೋಬರ್ 2, 2015 ರಂದು ಸಲ್ಲಿಸಿತು. 2015 ರ ಎನ್‌ ಡಿ ಸಿ ಯು ಎಂಟು ಗುರಿಗಳನ್ನು ಒಳಗೊಂಡಿದೆ; ಇವುಗಳಲ್ಲಿ ಮೂರು 2030 ರವರೆಗಿನ ಪರಿಮಾಣಾತ್ಮಕ ಗುರಿಗಳನ್ನು ಹೊಂದಿವೆ, ಅವುಗಳೆಂದರೆ, ಪಳೆಯುಳಿಕೆಯೇತರ ಮೂಲಗಳಿಂದ ಶೇ.40  ರಷ್ಟು ಒಟ್ಟು ವಿದ್ಯುತ್ ಶಕ್ತಿಯ ಸ್ಥಾಪಿತ ಸಾಮರ್ಥ್ಯವನ್ನು ತಲುಪುವುದು; 2005 ರ ಮಟ್ಟಗಳಿಗೆ ಹೋಲಿಸಿದರೆ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು 33 ರಿಂದ 35 ಪ್ರತಿಶತದಷ್ಟು ಕಡಿಮೆ ಮಾಡುವುದು ಮತ್ತು ಹೆಚ್ಚುವರಿ ಅರಣ್ಯ ಮತ್ತು ಮರಗಳ ಹೊದಿಕೆಯ ಮೂಲಕ 2.5 ರಿಂದ 3 ಶತಕೋಟಿ ಟನ್‌ ಗಳಷ್ಟು ಸಿಒ2 ಗೆ ಸಮಾನವಾದ ಹೆಚ್ಚುವರಿ ಕಾರ್ಬನ್ ಹೀರಿಕೆ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.


ಪರಿಷ್ಕೃತ ಎನ್‌ ಡಿ ಸಿ ಪ್ರಕಾರ, ಭಾರತವು ತನ್ನ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು 2005 ರ ಮಟ್ಟದಿಂದ 2030 ರ ವೇಳೆಗೆ 45 ಪ್ರತಿಶತದಷ್ಟು ಕಡಿಮೆ ಮಾಡಲು ಬದ್ಧವಾಗಿದೆ ಮತ್ತು 2030 ರ ವೇಳೆಗೆ ಪಳೆಯುಳಿಕೆಯೇತರ ಇಂಧನ-ಆಧಾರಿತ ಇಂಧನ ಸಂಪನ್ಮೂಲಗಳಿಂದ ಸುಮಾರು 50 ಪ್ರತಿಶತ ಸಂಚಿತ ವಿದ್ಯುತ್ ಶಕ್ತಿ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸಲು ಬದ್ಧವಾಗಿದೆ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಬಡವರು ಮತ್ತು ದುರ್ಬಲರನ್ನು ರಕ್ಷಿಸಲು ಸುಸ್ಥಿರ ಜೀವನಶೈಲಿ ಮತ್ತು ಹವಾಮಾನ ನ್ಯಾಯ ಕುರಿತ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಸಹ ಇದು ಮುಂದಕ್ಕೆ ಕೊಂಡೊಯ್ಯುತ್ತದೆ. ಪರಿಷ್ಕೃತ ಎನ್‌ಡಿಸಿಯು "ಹವಾಮಾನ ಬದಲಾವಣೆಯನ್ನು ಎದುರಿಸಲು ಪ್ರಮುಖವಾಗಿ 'ಲೈಫ್'- 'ಪರಿಸರಕ್ಕಾಗಿ ಜೀವನಶೈಲಿ' ಗೆ ಸಾಮೂಹಿಕ ಆಂದೋಲನ ಸೇರಿದಂತೆ, ಸಂರಕ್ಷಣೆ ಮತ್ತು ಸಂಪ್ರದಾಯಗಳು ಮತ್ತು ಮೌಲ್ಯಗಳ ಆಧಾರದ ಮೇಲೆ ಆರೋಗ್ಯಕರ ಮತ್ತು ಸುಸ್ಥಿರ ಜೀವನ ವಿಧಾನವನ್ನು ನಡೆಸಲು ಮತ್ತಷ್ಟು ಪ್ರೋತ್ಸಾಹಿಸುತ್ತದೆ. ವರ್ಧಿತ ಎನ್‌ ಡಿ ಸಿ ಗಳ ನಿರ್ಧಾರವು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಆರ್ಥಿಕ ಬೆಳವಣಿಗೆಯನ್ನು ಬೇರ್ಪಡಿಸುವ ಭಾರತದ ಉನ್ನತ ಮಟ್ಟದ ಬದ್ಧತೆಗೆ ಸಾಕ್ಷಿಯಾಗಿದೆ. 
ನಮ್ಮ ರಾಷ್ಟ್ರೀಯ ಸನ್ನಿವೇಶಗಳು ಮತ್ತು ಸಾಮಾನ್ಯವಾದ ಆದರೆ ವಿಭಿನ್ನವಾದ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ (CBDR-RC) ತತ್ವವನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಭಾರತದ ಪರಿಷ್ಕೃತ ಎನ್‌ ಡಿ ಸಿ ಯನ್ನು ಸಿದ್ಧಪಡಿಸಲಾಗಿದೆ. ಭಾರತದ ಪರಿಷ್ಕೃತ ಎನ್ ಡಿ ಸಿಯು  ಕಡಿಮೆ ಇಂಗಾಲದ ಹೊರಸೂಸುವಿಕೆ ಕಡೆಗೆ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ, ಅದೇ ಸಮಯದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತದೆ.


ಹವಾಮಾನ ಬದಲಾವಣೆಯಲ್ಲಿ ಜೀವನಶೈಲಿಯು ದೊಡ್ಡ ಪಾತ್ರವನ್ನು ಹೊಂದಿದೆ ಎಂದು ಗುರುತಿಸಿ, ಸಿಒಪಿ 26 ರಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು ಜಾಗತಿಕ ಸಮುದಾಯಕ್ಕೆ 'ಒಂದು ಪದದ ಆಂದೋಲನʼವನ್ನು ಪ್ರಸ್ತಾಪಿಸಿದರು. ಈ ಒಂದು ಪದವು ಲೈಫ್...L, I, F, E, ಅಂದರೆ ಪರಿಸರಕ್ಕಾಗಿ ಜೀವನಶೈಲಿ. ನಮ್ಮ ಗ್ರಹಕ್ಕೆ ಹೊಂದಿಕೆಯಾಗುವ ಮತ್ತು ಹಾನಿಯಾಗದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಲೈಫ್‌ ನ ದೃಷ್ಟಿಕೋನವಾಗಿದೆ. ಭಾರತದ ಪರಿಷ್ಕೃತ ಎನ್‌ ಡಿ ಸಿ ಯು ಹವಾಮಾನ ಬದಲಾವಣೆಯನ್ನು ಎದುರಿಸಲು ಈ ಜನಕೇಂದ್ರಿತ ವಿಧಾನವನ್ನು ಸಹ ಪ್ರತಿಬಿಂಬಿಸುತ್ತದೆ.


ಪರಿಷ್ಕೃತ ಎನ್‌ ಡಿ ಸಿ ಯು 2021-2030 ರ ಅವಧಿಗೆ ಶುದ್ಧ ಇಂಧನದ ಭಾರತದ ಪರಿವರ್ತನೆಯ ಚೌಕಟ್ಟನ್ನು ಪ್ರತಿನಿಧಿಸುತ್ತದೆ. ಪರಿಷ್ಕೃತ ಚೌಕಟ್ಟು, ತೆರಿಗೆ ರಿಯಾಯಿತಿಗಳು ಮತ್ತು ಉತ್ಪಾದನೆಯ ಉತ್ತೇಜನ ಮತ್ತು ನವೀಕರಿಸಬಹುದಾದ ಇಂಧನ ಅಳವಡಿಕೆಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಂತಹ ಉತ್ತೇಜನಗಳು ಸೇರಿದಂತೆ ಸರ್ಕಾರದ ಇತರ ಅನೇಕ ಉಪಕ್ರಮಗಳು, ಭಾರತದ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ರಫ್ತುಗಳನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತವೆ. ಇದು ನವೀಕರಿಸಬಹುದಾದ ಇಂಧನ, ಶುದ್ಧ ಇಂಧನ ಉದ್ಯಮಗಳಲ್ಲಿ- ಆಟೋಮೋಟಿವ್‌ಗಳಲ್ಲಿ, ಕಡಿಮೆ ಹೊರಸೂಸುವಿಕೆಯ ಉತ್ಪನ್ನಗಳಾದ ಎಲೆಕ್ಟ್ರಿಕ್ ವಾಹನಗಳು ಮತ್ತು ಹೆಚ್ಚು ದಕ್ಷತೆಯ ಉಪಕರಣಗಳ ಉತ್ಪಾದನೆ ಮತ್ತು ಹಸಿರು ಹೈಡ್ರೋಜನ್‌ನಂತಹ ನವೀನ ತಂತ್ರಜ್ಞಾನಗಳಂತಹ ಹಸಿರು ಉದ್ಯೋಗಗಳಲ್ಲಿ ಒಟ್ಟಾರೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತದ ಪರಿಷ್ಕೃತ ಎನ್‌ ಡಿ ಸಿ ಯನ್ನು ಸಂಬಂಧಿತ ಸಚಿವಾಲಯಗಳು/ಇಲಾಖೆಗಳ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೆಂಬಲದೊಂದಿಗೆ 2021-2030ರ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗುವುದು. ಹೊಂದಾಣಿಕೆ ಮತ್ತು ತಗ್ಗಿಸುವಿಕೆ ಎರಡರಲ್ಲೂ ಭಾರತದ ಕ್ರಮಗಳನ್ನು ಹೆಚ್ಚಿಸಲು ಸರ್ಕಾರವು ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ನೀರು, ಕೃಷಿ, ಅರಣ್ಯ, ಇಂಧನ ಮತ್ತು ಉದ್ಯಮ, ಸುಸ್ಥಿರ ಚಲನಶೀಲತೆ ಮತ್ತು ವಸತಿ, ತ್ಯಾಜ್ಯ ನಿರ್ವಹಣೆ, ಮರುಬಳಕೆಯ ಆರ್ಥಿಕತೆ ಮತ್ತು ಸಂಪನ್ಮೂಲ ದಕ್ಷತೆ, ಇತ್ಯಾದಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅಡಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮೇಲಿನ ಈ ಕ್ರಮಗಳ ಪರಿಣಾಮವಾಗಿ, ಭಾರತ ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಆರ್ಥಿಕ ಬೆಳವಣಿಗೆಯನ್ನು ಬೇರ್ಪಡಿಸುವಿಕೆಯನ್ನು ಹಂತಹಂತವಾಗಿ ಮುಂದುವರೆಸಿದೆ. 2030 ರ ವೇಳೆಗೆ ಭಾರತೀಯ ರೈಲ್ವೇಯ ನಿವ್ವಳ ಶೂನ್ಯ ಗುರಿಯು ವಾರ್ಷಿಕವಾಗಿ 60 ಮಿಲಿಯನ್ ಟನ್‌ ಗಳಷ್ಟು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ. ಅದೇ ರೀತಿ, ಭಾರತದ ಎಲ್ಇಡಿ ಬಲ್ಬ್ ಬೃಹತ್ ಅಭಿಯಾನವು ವಾರ್ಷಿಕವಾಗಿ 40 ಮಿಲಿಯನ್ ಟನ್‌ ಗಳಷ್ಟು ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿದೆ.


ಭಾರತದ ಹವಾಮಾನ ಕ್ರಮಗಳು ಇಲ್ಲಿಯವರೆಗೆ ಹೆಚ್ಚಾಗಿ ದೇಶೀಯ ಸಂಪನ್ಮೂಲಗಳಿಂದಲೇ ಹಣಕಾಸು ನೆರವು ಪಡೆದಿವೆ. ಆದಾಗ್ಯೂ, ಜಾಗತಿಕ ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ಹೊಸ ಮತ್ತು ಹೆಚ್ಚುವರಿ ಹಣಕಾಸು ಸಂಪನ್ಮೂಲಗಳನ್ನು ಒದಗಿಸುವುದರ ಜೊತೆಗೆ ತಂತ್ರಜ್ಞಾನದ ವರ್ಗಾವಣೆಯು ಯು ಎನ್‌ ಎಫ್‌ ಸಿ ಸಿ ಸಿ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಬದ್ಧತೆಗಳು ಮತ್ತು ಜವಾಬ್ದಾರಿಗಳಲ್ಲಿ ಸೇರಿವೆ. ಅಂತಹ ಅಂತರಾಷ್ಟ್ರೀಯ ಹಣಕಾಸು ಸಂಪನ್ಮೂಲಗಳು ಮತ್ತು ತಾಂತ್ರಿಕ ಬೆಂಬಲದಿಂದ ಭಾರತವು ತನ್ನ ಪಾಲನ್ನು ಬಯಸುತ್ತದೆ.


ಭಾರತದ ಎನ್‌ ಡಿ ಸಿ ಯು ಯಾವುದೇ ವಲಯದ ನಿರ್ದಿಷ್ಟ ತಗ್ಗಿಸುವಿಕೆಯ ಬಾಧ್ಯತೆ ಅಥವಾ ಕ್ರಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಒಟ್ಟಾರೆ ಹೊರಸೂಸುವಿಕೆಯ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ಕಾಲಾನಂತರದಲ್ಲಿ ಅದರ ಆರ್ಥಿಕತೆಯ ಇಂಧನ ದಕ್ಷತೆಯನ್ನು ಸುಧಾರಿಸುವುದು ಮತ್ತು ಅದೇ ಸಮಯದಲ್ಲಿ ನಮ್ಮ ಸಮಾಜದ ಆರ್ಥಿಕತೆಯ ದುರ್ಬಲ ವಲಯಗಳು ಮತ್ತು ವಿಭಾಗಗಳನ್ನು ರಕ್ಷಿಸುವುದು ಭಾರತದ ಗುರಿಯಾಗಿದೆ.

 

**********(Release ID: 1847926) Visitor Counter : 232