ಪರಿಸರ ಮತ್ತು ಅರಣ್ಯ ಸಚಿವಾಲಯ
ರಾಷ್ಟ್ರೀಯ ಜಾಗತಿಕ ಹುಲಿ ದಿನಾಚರಣೆ 2022 ಕ್ಕೆ ಆತಿಥ್ಯ ವಹಿಸಿದ ಮಹಾರಾಷ್ಟ್ರದ ತಡೋಬಾ ಹುಲಿ ಸಂರಕ್ಷಣಾ ಪ್ರದೇಶ
ಹುಲಿ ಸಂರಕ್ಷಿತ ಪ್ರದೇಶಗಳ ಸಂಖ್ಯೆಯನ್ನು 52 ಕ್ಕೆ ಹೆಚ್ಚಿಸುವ ಮೂಲಕ ಸರ್ಕಾರ ಹುಲಿ ಸಂರಕ್ಷಣೆಯಲ್ಲಿ ತನ್ನ ಬದ್ಧತೆ ಪ್ರದರ್ಶಿಸಿದೆ: ಶ್ರೀ ಭೂಪೇಂದ್ರ ಯಾದವ್
ಹುಲಿ ಆವಾಸಸ್ಥಾನಗಳ ಸುತ್ತ ಮುತ್ತ ವಾಸಿಸುವ ಜನರ ಯೋಗ ಕ್ಷೇಮಕ್ಕೆ ಸರ್ಕಾರ ಬದ್ಧ : ಶ್ರೀ ಯಾದವ್
ಮನುಷ್ಯ, ಪ್ರಾಣಿ ಮತ್ತು ಪ್ರಕೃತಿಯಲ್ಲಿ ಶಾಂತಿಯುತ ಸಹಬಾಳ್ವೆಯ ಭವಿಷ್ಯವನ್ನು ನಾವು ಕಲ್ಪಿಸಿಕೊಳ್ಳಬೇಕು: ಶ್ರೀ ಅಶ್ವಿನಿ ಕುಮಾರ್ ಚೌಬೆ
Posted On:
29 JUL 2022 11:35AM by PIB Bengaluru
ಮಹಾರಾಷ್ಟ್ರದ ಚಂದ್ರಾಪುರ ಅರಣ್ಯ ಅಕಾಡೆಮಿಯಲ್ಲಿ ನಡೆದ ಜಾಗತಿಕ ಹುಲಿ ದಿನ 2022 ಕಾರ್ಯಕ್ರಮದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಭೂಪೆಂದರ್ ಯಾದವ್ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಶ್ರೀ ಅಶ್ವನಿ ಕುಮಾರ್ ಚೌಬೆ ಅವರು ಪಾಲ್ಗೊಂಡಿದ್ದರು.
ಸಚಿವರು ಇತರೆ ಗಣ‍್ಯರೊಂದಿಗೆ ತಡೋಬಾ ಅಂಧಾರಿ ಹುಲಿ ಮೀಸಲು [ಟಿ.ಎ.ಟಿ.ಆರ್] ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಅಲ್ಲಿನ ಭೂ ಪ್ರದೇಶದ ವೈವಿಧ್ಯ, ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರ ಮಟ್ಟದಲ್ಲಿ ಹುಲಿ ಮೀಸಲು ನಿರ್ವಹಣೆ ಸಮಸ್ಯೆಗಳ ಕುರಿತು ಅರಿತುಕೊಳ್ಳುವ ಸಲುವಾಗಿ ಅರಣ್ಯ ಸಿಬ್ಬಂದಿ ಜೊತೆಗೆ ಔಪಚಾರಿಕವಾಗಿ ಸಂವಾದ ನಡೆಸಿದರು.
ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ ಸ್ಥಳೀಯ ಜನ ಮತ್ತು ಹೆಚ್ಚು ಹುಲಿ ಸಾಂದ್ರತೆಯ ಭೂ ಪ್ರದೇಶವನ್ನು ಒಳಗೊಂಡಿದೆ. ಹುಲಿ ಸಂರಕ್ಷಣೆಯ ಚಟುವಟಿಕೆಗಳನ್ನು ಜಾರಿಗೊಳಿಸಿರುವ, ಎಂ.ಎಸ್.ಟ್ರೀಪ್ಸ್ ಎಂಬ ಮೊಬೈಲ್ ಅಪ್ಲಿಕೇಷನ್ ಆಧಾರಿತ ವಿಶೇಷ ಗಸ್ತು ನಡೆಸುವ ಪ್ರಕ್ರಿಯೆಯಲ್ಲಿ ಸಿಬ್ಬಂದಿ ಸಮರ್ಪಣೆಯಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಶ್ಲಾಘಿಸಿದರು. ವಿಶೇಷವಾದ ಸಮುದಾಯ ಆಧಾರಿತ ಪರಿಸರ ಸ್ನೇಹಿ ಪ್ರವಾಸೋದ್ಯಮ ಮಾದರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಸ್ಥಳೀಯರಿಗೆ ಜೀವನೋಪಾಯ ಅವಕಾಶಗಳನ್ನು ಒದಗಿಸಿದೆ ಮತ್ತು ಮೀಸಲು ವಲಯದ ರಕ್ಷಣೆಗೆ ಬೆಂಬಲ ಪಡೆಯಲು ಸಾಧ್ಯವಾಗಿದೆ ಎಂದರು.
ಚಾಂದ್ರಾಪುರ್ ನ ಅರಣ್ಯ ಅಕಾಡೆಮಿಯಲ್ಲಿ ಜಾಗತಿಕ ಹುಲಿ ದಿನ ಕಾರ್ಯಕ್ರಮ ನಡೆಯಿತು. ಸಚಿವರು ವಿಶೇಷ ಹುಲಿ ರಕ್ಷಣಾ ಪಡೆಯಿಂದ ಗೌರವ ರಕ್ಷೆ ಸ್ವೀಕರಿಸಿದರು. ಮಹಾರಾಷ್ಟ್ರ ಮತ್ತು ಕೇರಳ ಅರಣ್ಯ ಇಲಾಖೆಯ ಹುಲಿ ಸಂರಕ್ಷಿತ ಪ್ರದೇಶದ ವಿಶೇಷ ರಿಜಿಮೆಂಟ್ ದಾಳಿ ಪಡೆ ಗೌರವ ರಕ್ಷೆ ನೀಡಿತು.
ಶ್ರೀ ಭೂಪೇಂದರ್ ಯಾದವ್ ಅವರು ಹುಲಿಗಳ ಪ್ರಮಾಣ ಅದಿಕವಿರುವ ರಾಷ್ಟ್ರಗಳನ್ನು ಅಭಿನಂದಿಸಿದರು. ಜಾಗತಿಕವಾಗಿ ಶೇ 70 ಕ್ಕಿಂತ ಹೆಚ್ಚು ಹುಲಿಗಳ ಸಂತತಿಯನ್ನು ಭಾರತ ಹೊಂದಿದ್ದು, ಇವುಗಳನ್ನು ರಕ್ಷಿಸುತ್ತಿದೆ. ಭಾರತ ವಿಶೇಷವಾಗಿ ಸಂರಕ್ಷಣೆಯ ಮಾನದಂಡವನ್ನು ಅಳವಡಿಸಿಕೊಂಡಿದೆ ಎಂದರು. ಭಾರತ ಹುಲಿ ಸಂರಕ್ಷಣೆಯಲ್ಲಿ ಬದ್ಧತೆ ಪ್ರದರ್ಶಿಸಿದ್ದು, 1973 ರಲ್ಲಿ ದೇಶ ಮೂರು ಹುಲಿ ಸಂರಕ್ಷಣಾ ಪ್ರದೇಶಗಳನ್ನು ಹೊಂದಿತ್ತು, ಇತ್ತೀಚೆಗೆ ರಾಜಸ್ಥಾನದ ರಾಮಘರ್ ನ ವಿಷಧಾರಿ ಸೇರಿ ಹುಲಿ ಸಂರಕ್ಷಣಾ ಪ್ರದೇಶಗಳ ಸಂಖ್ಯೆ ಈಗ 52 ಕ್ಕೆ ಏರಿಕೆಯಾಗಿದೆ. ಹುಲಿ ಹೊಂದಿರುವ ಭೂ ಪ್ರದೇಶಗಳಲ್ಲಿ ವಿವಿಧ ಜೀವನೋಪಾಯದ ಅವಕಾಶಗಳು ಮತ್ತು ಮಧ್ಯಸ್ಥಿಕೆ ಹಾಗೂ ಜನರ ಯೋಗಕ್ಷೇಮ ಒದಗಿಸಲು ಸರ್ಕಾರ ಬದ್ಧವಾಗಿದೆ. ಹುಲಿ ಮೀಸಲು ಪ್ರದೇಶದ ಆಸುಪಾಸಿನಲ್ಲಿ ವಾಸಿಸುತ್ತಿರುವವರಿಗೆ ಶ್ಯಾಮ ಪ್ರಸಾದ್ ಮುಖರ್ಜಿ ಜನ್ ವನ್ ವಿಕಾಸ್ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಮಹಾರಾಷ್ಟ್ರ ಸರ್ಕಾರವನ್ನು ಶ್ಲಾಘಿಸಿದರು ಮತ್ತು ಇದು ಇತರೆ ರಾಜ್ಯಗಳು ಅನುಕರಿಸಲು ಯೋಗ್ಯವಾದ ಕ್ರಮ ಎಂದು ಹೇಳಿದರು.
ವನ್ಯಜೀವಿ ಸಂರಕ್ಷಣೆಯಲ್ಲಿ ಹೊರಗಿನ ತಜ್ಞರನ್ನೊಳಗೊಂಡಂತೆ ನಿಷ್ಪಕ್ಷಪಾತ, ಸ್ವತಂತ್ರ, ಪರಿಣಾಮಕಾರಿ ನಿರ್ವಹಣೆಯ ಮೌಲ್ಯಮಾಪನವನ್ನು ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಮತ್ತು ಅಖಿಲ ಭಾರತ ಮಟ್ಟದ ಹುಲಿ ಗಣತಿಯನ್ನು ಐದನೇ ಬಾರಿಗೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ಹಂಚಿಕೊಂಡರು. 2018 ರಲ್ಲಿ ಮಾಡಿದ ಈ ವಿಶಿಷ್ಟ ಕಸರತ್ತು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಸೇರಿದೆ ಎಂದು ಹೆಮ್ಮೆಯಿಂದ ತಿಳಿಸಿದರು. ಪ್ರವಾಸಿಗರಿಗೆ ತೃಪ್ತಿ ಮತ್ತು ಸ್ಥಳೀಯರಿಗೆ ನೇರ ಲಾಭದ ಹಂಚಿಕೆಯನ್ನು ಹೆಚ್ಚಿಸುವುದರೊಂದಿಗೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕಡಿಮೆ ಪರಿಣಾಮ ಬೀರುವ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಬಗ್ಗೆ ಒತ್ತು ನೀಡಿದರು. 1952 ರಿಂದ ಅಳಿವಿನಂಚಿನಲ್ಲಿರುವ ಚಿರತೆಯನ್ನು ರಕ್ಷಿಸಲು ಸಂರಕ್ಷಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮುಂದಿನ ಹಂತದಲ್ಲಿ ಚಿರತೆಯ ಸಂತತಿ ಹೆಚ್ಚಿಸುವ ಅತ್ಯಾಧುನಿಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ ನಮೀಬಿಯಾ ಸರ್ಕಾರದೊಂದಿಗೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ ಮತ್ತು ದಕ್ಷಿಣಾ ಆಫ್ರಿಕಾದ ಜೊತೆ ಇಷ್ಟರಲ್ಲೇ ಎಂ.ಒ.ಯುಗೆ ಸಹಿ ಹಾಕಲಾಗುವುದು. ಕ್ಷೇತ್ರಮಟ್ಟದಲ್ಲಿ ಸಿಬ್ಬಂದಿ ಹುಲಿ ರಕ್ಷಣೆಗೆ ಬದ್ಧತೆ ತೋರಿದ್ದು, ಇದು ಜಾಗತಿಕವಾಗಿ ದೇಶವನ್ನು ಮೊದಲ ಸ್ಥಾನಕ್ಕೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀ ಅಶ್ವಿನಿ ಕುಮಾರ್ ಚೌಬೆ ಮಾತನಾಡಿ, ಹುಲಿಯು ಶಕ್ತಿಯನ್ನು ಸಂಕೇತಿಸುತ್ತದೆ, ಜೀವ ವೈವಿಧ್ಯತೆ, ಅರಣ್ಯ, ನೀರು ಮತ್ತು ಹವಾಮಾನ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳಿದರು. ಭಾರತ ಹುಲಿ ಸಂರಕ್ಷಣೆಯಲ್ಲಿ ಜಾಗತಿಕ ನಾಯಕನಾಗಿದ್ದು, ಇದು ಹೆಮ್ಮೆಯ ವಿಷಯ ಮತ್ತು ಕಾಂಬೋಡಿಯಾ, ಚೈನಾ, ಬಾಂಗ್ಲಾದೇಶ, ಭೂತಾನ್, ನೇಪಾಳ್, ಮ್ಯಾನ್ಮಾರ್ ಮತ್ತು ರಷ್ಯಾದೊಂದಿಗೆ ಹುಲಿ ಸಂರಕ್ಷಣೆಯಲ್ಲಿ ಸಹಭಾಗಿತ್ವ ಹೊಂದಿದೆ. ಮನುಷ್ಯ, ಪ್ರಾಣಿ ಮತ್ತು ನಿಸರ್ಗದೊಂದಿಗೆ ಶಾಂತಿಯುತ ಸಹಭಾಳ್ವೆಯ ಭವಿಷ್ಯವನ್ನು ನಾವು ಕಲ್ಪಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ಮಾಡಿದರು.
ಕಾರ್ಯಕ್ರಮದ ಭಾಗವಾಗಿ ಹುಲಿ ಸಂರಕ್ಷಣೆಯಲ್ಲಿ ಅಸಾಧಾರಣ ಸಾಧನೆ ತೋರಿದ, ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಲಾ ಇಬ್ಬರು ಅರಣ್ಯ ಸಿಬ್ಬಂದಿ, ಅರಣ್ಯ ರಕ್ಷಕರು ಮತ್ತು ರಕ್ಷಕರು/ರಕ್ಷಣಾ ಸಹಾಯಕರು/ಹುಲಿ ಜಾಡು ಪತ್ತೆಮಾಡುವವರಿಗೆ ತಲಾ ಒಂದು ಲಕ್ಷ ರೂಪಾಯಿ ಮೊತ್ತದ ಎನ್.ಟಿ.ಸಿ.ಎ ವಾರ್ಷಿಕ ಪ್ರಶಸ್ತಿಯನ್ನು ಗೌರವಾನ್ವಿತ ಸಚಿವರು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ದೇಶದ ಹುಲಿ ಮೀಸಲು ವಲಯದ ಕ್ಷೇತ್ರೀಯ ನಿರ್ದೇಶಕರು ಮತ್ತು ಮಹಾರಾಷ್ಟ್ರ ರಾಜ್ಯದ ಹಿರಿಯ ಅರಣ್ಯ ಅಧಿಕಾರಿಗಳು, ಮಹಾರಾಷ್ಟ್ರ ಮತ್ತು ಕೇರಳದ ವಿಶೇಷ ಹುಲಿ ಸಂರಕ್ಷಣಾ ಪಡೆಯ ತುಕಡಿಗಳು ಪಾಲ್ಗೊಂಡಿದ್ದವು.
2010 ರ ಜುಲೈ 29 ರಂದು ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ಜಾಗತಿಕ ಹುಲಿ ದಿನ ಆಚರಿಸುವ ಕುರಿತು ಘೋಷಣೆ ಮಾಡಲಾಯಿತು. ಜಾಗತಿಕವಾಗಿ ಹುಲಿ ಸಂರಕ್ಷಣೆ ಮತ್ತು ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲು ಎಲ್ಲಾ ಹುಲಿ ಶ್ರೇಣಿಯ ದೇಶಗಳನ್ನು ಒಟ್ಟುಗೂಡಿಸುವ ಸಲುವಾಗಿ ಅಂದಿನಿಂದ ಈ ದಿನವನ್ನು ಸಾಂಕೇತಿವಾಗಿ ಜಾಗತಿಕ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ.
********
(Release ID: 1846274)
Visitor Counter : 236