ವಾರ್ತಾ ಮತ್ತು ಪ್ರಸಾರ ಸಚಿವಾಲಯ
ತನ್ನ ಮುಂಬರುವ ಮೆಗಾ ಶೋ 'ಸ್ವರಾಜ್' ನ ಪ್ರೋಮೋವನ್ನು ಬಿಡುಗಡೆ ಮಾಡಿದ ದೂರದರ್ಶನ
Posted On:
15 JUL 2022 6:37PM by PIB Bengaluru
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ ರಾಷ್ಟ್ರವು ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು 'ಆಜಾದಿ ಕಾ ಅಮೃತ ಮಹೋತ್ಸವ'ವಾಗಿ ಆಚರಿಸುತ್ತಿದೆ, ದೂರದರ್ಶನವು "ನಯೀ ಭಾರತ್ ಕಾ ನಯಾ ದೂರದರ್ಶನ್" ಎಂಬ ಧ್ಯೇಯವಾಕ್ಯದ ಆಧಾರದ ಮೇಲೆ ಒಂದು ಪ್ರಮುಖ ಪುನಶ್ಚೇತನಕ್ಕೆ ಒಳಗಾಗುತ್ತಿದೆ, ಭಾರತದ ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆಯಾಗಿ ತನ್ನ ಜವಾಬ್ದಾರಿ ಪೂರೈಸುವ ಸಲುವಾಗಿ ಹಲವಾರು ಹೊಸ ಉನ್ನತ ಗುಣಮಟ್ಟದ ಧಾರಾವಾಹಿಗಳನ್ನು ಪ್ರಾರಂಭಿಸುವ ಮೂಲಕ ದೂರದರ್ಶನವು ಸಹ ಒಂದು ಪ್ರಮುಖ ನವೀಕರಣಕ್ಕೆ ಒಳಗಾಗುತ್ತಿದೆ.
ದೂರದರ್ಶನವು "ಸ್ವರಾಜ್- ಭಾರತ್ ಕೆ ಸ್ವತಂತ್ರ ಸಂಗ್ರಾಮ್ ಕಿ ಸಮಗ್ರ ಗಾಥಾ" ಎಂಬ ಬೃಹತ್ ಐತಿಹಾಸಿಕ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ, ಇದರ ಪ್ರೋಮೋವನ್ನು ಇಂದು ನವದೆಹಲಿಯ ಆಕಾಶವಾಣಿ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಬಿಡುಗಡೆ ಮಾಡಿದರು.
'ಸ್ವರಾಜ್- ಭಾರತ್ ಕೆ ಸ್ವತಂತ್ರ ಸಂಗ್ರಾಮ್ ಕಿ ಸಮಗ್ರ ಗಾಥಾ' ಎಂಬ ಐತಿಹಾಸಿಕ ಸಾಕ್ಷ್ಯಚಿತ್ರ-ನಾಟಕ ಸರಣಿಯು 15ನೇ ಶತಮಾನದಿಂದ ಭಾರತದ ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸವನ್ನು ವಿವರಿಸುವ 75 ಕಂತುಗಳ ಬೃಹತ್ ಪ್ರದರ್ಶನವಾಗಿದೆ. ಈ ಧಾರಾವಾಹಿಯು ಭಾರತೀಯ ಇತಿಹಾಸದ ಹಲವಾರು ಅಂಶಗಳಿಗೆ ಜೀವ ತುಂಬಲಿದ್ದು, ಅಷ್ಟಾಗಿ ಪರಿಚಿತರಲ್ಲದ ವೀರರ ಜೀವನ ಮತ್ತು ತ್ಯಾಗವನ್ನು ಒಳಗೊಂಡಿದೆ. ಜನಪ್ರಿಯ ಚಲನಚಿತ್ರ ನಟ ಶ್ರೀ ಮನೋಜ್ ಜೋಶಿ, ಧಾರಾವಾಹಿಯ ನಿರೂಪಕ (ಸೂತ್ರಧಾರ) ರಾಗಿ ತಾರಾ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಧಾರಾವಾಹಿಯು ಭವ್ಯವಾದ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ ಮತ್ತು ದೃಶ್ಯ ವೈಭವದ ಭರವಸೆ ನೀಡುತ್ತದೆ.
2022ರ ಆಗಸ್ಟ್ 14 ರಂದು ಡಿಡಿ ನ್ಯಾಷನಲ್ ನಲ್ಲಿ ಹಿಂದಿ ಭಾಷೆಯಲ್ಲಿ ಆರಂಭವಾಗುವ ಸ್ವರಾಜ್ ತದನಂತರ ಪ್ರಾದೇಶಿಕ ಜಾಲದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಪ್ರಸಾರವಾಗಲಿದೆ. ಇದರ ಶ್ರವ್ಯ ಆವೃತ್ತಿಯನ್ನು ಆಕಾಶವಾಣಿ ಜಾಲದಲ್ಲಿಯೂ ಪ್ರಸಾರ ಮಾಡಲಾಗುತ್ತದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಪ್ರೋಮೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, "ಈ ಪ್ರೋಮೋ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿನ ಅನುಭೂತಿಯ ಇಣುಕುನೋಟ ಮಾತ್ರವೇ ಅಲ್ಲ, ಇದು ನವಭಾರತದ ನವ ದೂರದರ್ಶನ ಹೇಗಿರಲಿದೆ ಎಂಬುದರ ಒಂದು ಇಣುಕುನೋಟವೂ ಆಗಿದೆ" ಎಂದು ಹೇಳಿದರು. ಚಿತ್ರಹಾರ್ ನಿಂದ ಸಮಾಚಾರ್ ವರೆಗೆ ಡಿಡಿಯ ಕಾರ್ಯಕ್ರಮಗಳು ಗುಣಮಟ್ಟದಿಂದ ಕೂಡಿವೆ ಎಂದು ಅವರು ಹೇಳಿದರು. ಮುಂಬರುವ ವರ್ಷಗಳಲ್ಲಿ ಇದನ್ನು ಮತ್ತಷ್ಟು ಬಲಪಡಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ತಮ್ಮ ಕಾರ್ಯ ಮುಂದುವರಿಸಿದ್ದಕ್ಕಾಗಿ ಸ್ವರಾಜ್ ನ ಸಂಶೋಧನೆ ಮತ್ತು ಸಲಹಾ ತಂಡದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಸ್ವರಾಜ್ಯವನ್ನು 10 ಭಾಷೆಗಳಲ್ಲಿ ಪ್ರಸಾರ ಮಾಡುವುದರಿಂದ ಎಲ್ಲರಿಗೂ ಅದರ ವೀಕ್ಷಣಾವಕಾಶವನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ದೂರದರ್ಶನ ಮತ್ತು ಆಕಾಶವಾಣಿಯ ಸಂಪೂರ್ಣ ತಂಡವನ್ನು ಈ ಯಶಸ್ಸಿಗಾಗಿ ಸಚಿವರು ಅಭಿನಂದಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, "ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ ಮಾಡಿದ ಜನರ ಕೊಡುಗೆಯ ಬಗ್ಗೆ ಧಾರಾವಾಹಿಯ ಮೂಲಕ ಯುವಜನರು ತಿಳಿದುಕೊಳ್ಳುವುದು ಬಹಳ ಸಂತಸದ ವಿಷಯವಾಗಿದೆ" ಎಂದು ಹೇಳಿದರು. ಪ್ರಸಾರ ಭಾರತಿ ತನ್ನ ವೀಕ್ಷಕರಿಗಾಗಿ ಅಂತಹ ಉತ್ತಮ ಗುಣಮಟ್ಟದ ಧಾರಾವಾಹಿಗಳ ಮೂಲಕ ಆರೋಗ್ಯಕರ ಮನರಂಜನೆಯ ಉದ್ದೇಶ ಪೂರೈಸುತ್ತಿದೆ ಎಂದು ಅವರು ಹೇಳಿದರು.
ಸ್ವರಾಜ್ ಸಲಹಾ ಸಮಿತಿಯ ಸದಸ್ಯರಾದ ಶ್ರೀ ಜವಾಹರ್ ಲಾಲ್ ಕೌಲ್ ಮಾತನಾಡಿ, ಸ್ವರಾಜ್ಯಕ್ಕಾಗಿ ಅವರ ಸರ್ವೋಚ್ಚ ತ್ಯಾಗಕ್ಕಾಗಿ ಎಲ್ಲಾ ಪ್ರದೇಶಗಳಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಎಲೆ ಮರೆಯ ಕಾಯಿಂತಹ ಮತ್ತು ಅಷ್ಟೇನೂ ಪರಿಚಿತರಲ್ಲದ ವೀರರನ್ನು ಸ್ಮರಿಸುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದರು. ಸ್ವರಾಜ್ ಸಲಹಾ ಸಮಿತಿಯ ಆಳವಾದ ಸಂಶೋಧನೆ ಮತ್ತು ಅಧ್ಯಯನವು ಧಾರಾವಾಹಿಯ ನಿರ್ಮಾಣದ ವಿಷಯವನ್ನು ಶ್ರೀಮಂತಗೊಳಿಸಿದೆ ಎಂದು ಅವರು ಹೇಳಿದರು.
ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ದೂರದರ್ಶನದ ಮಹಾ ನಿರ್ದೇಶಕ ಶ್ರೀ ಮಯಾಂಕ್ ಕುಮಾರ್ ಅಗರವಾಲ್, ಪ್ರಸಾರ ಭಾರತಿಯ ಸದಸ್ಯ (ಹಣಕಾಸು) ಶ್ರೀ ಡಿ.ಪಿ.ಎಸ್.ನೇಗಿ, ಆಕಾಶವಾಣಿಯ ಮಹಾ ನಿರ್ದೇಶಕ, ಶ್ರೀ ಎನ್.ವಿ. ರೆಡ್ಡಿ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಪ್ರೋಮೋವನ್ನು ಬಿಡುಗಡೆ ಮಾಡಲಾಯಿತು. ತನ್ನ ಉನ್ನತ ತಂತ್ರಜ್ಞಾನ ನಿರ್ಮಾಣ ಗುಣಮಟ್ಟ ಮತ್ತು ಸ್ಪೂರ್ತಿದಾಯಕ ನಿರೂಪಣೆಯೊಂದಿಗೆ, ಸ್ವರಾಜ್ ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಹೆಮ್ಮೆಯಿಂದ ಮುಟ್ಟುವುದಂತೂ ಖಚಿತ!
ಸ್ವರಾಜ್ ನ ಪ್ರೋಮೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
https://www.youtube.com/watch?v=7iv1EWZzFqU
***********
(Release ID: 1841933)
Visitor Counter : 216