ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಮಹಾರಾಷ್ಟ್ರದ ಪುಣೆಯಲ್ಲಿ 'ಎಬಿಡಿಎಂ ಹ್ಯಾಕಥಾನ್ ಸರಣಿ' ಅಡಿಯಲ್ಲಿ ಮೊದಲ ಹ್ಯಾಕಥಾನ್ ಪ್ರಾರಂಭಿಸಿದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ


ಎಬಿಡಿಎಂ ಹ್ಯಾಕಥಾನ್ ಸುತ್ತು 1 – ಏಕೀಕೃತ ಆರೋಗ್ಯ ಮೂಲಸೌಕರ್ಯ (ಯುಎಚ್ಐ) ವಾಗಿ ಆರಂಭವಾಗಿದ್ದು, 2022 ರ ಜುಲೈ 14 ರಿಂದ 17 ರವರೆಗೆ ಹೈಬ್ರಿಡ್ ಸ್ಪರ್ಧೆಯಾಗಿ ನಡೆಯಲಿದೆ

Posted On: 15 JUL 2022 1:40PM by PIB Bengaluru

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ) ಆಯುಷ್ಮಾನ್ ಭಾರತ್ ಡಿಜಿಟಲ್ ಅಭಿಯಾನ ಹ್ಯಾಕಥಾನ್ ಸರಣಿಯ ಅಡಿಯಲ್ಲಿ ತನ್ನ ಮೊದಲ ಹ್ಯಾಕಥಾನ್ ಅನ್ನು 2022 ರ ಜುಲೈ 14 ರಿಂದ 17 ರವರೆಗೆ ಮಹಾರಾಷ್ಟ್ರದ ಪುಣೆಯ ಸ್ಮಾರ್ಟ್ ಸಿಟಿ ಕಾರ್ಯಾಚರಣೆ ಕೇಂದ್ರದಲ್ಲಿ ಹೈಬ್ರಿಡ್ ವಿಧಾನದಲ್ಲಿ ಆಯೋಜಿಸುತ್ತಿದೆ. ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಮತ್ತು ಪುಣೆ ಸ್ಮಾರ್ಟ್ ಸಿಟಿ ಅಭಿವೃದ್ಧಿ ನಿಗಮ ನಿಯಮಿತ (ಪಿಎಸ್.ಸಿ.ಡಿಸಿಎಲ್) ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಅಭಿಯಾನ (ಎಬಿಡಿಎಂ) ಅಡಿಯಲ್ಲಿ ಹ್ಯಾಕಥಾನ್ ಅನ್ನು ಆಯೋಜಿಸಲಾಗುತ್ತಿದೆ. ನಾವೀನ್ಯದಾರರು, ಡೆವಲಪರ್ ಗಳು ಮತ್ತು ದತ್ತಾಂಶ ತಜ್ಞರನ್ನು ಒಳಗೊಂಡ ವಿವಿಧ ತಂಡಗಳು ಸಹಯೋಗ ಮತ್ತು ನವೀನ ಪರಿಹಾರಗಳನ್ನು ನಿರ್ಮಿಸಲು ಭೌತಿಕವಾಗಿ ಮತ್ತು ವರ್ಚುವಲ್ ಆಗಿ ಜೊತೆಗೂಡಿದ್ದಾರೆ.

ಹ್ಯಾಕಥಾನ್ ಅನ್ನು ಎನ್ಎಚ್ಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್.ಶರ್ಮಾ ಉದ್ಘಾಟಿಸಿದರು. ಮಹಾರಾಷ್ಟ್ರ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆಯ ಕಾರ್ಯದರ್ಶಿ ಶ್ರೀ ಸೌರಭ್ ವಿಜಯ್, ಎನ್.ಎಚ್.ಎ.ಯ ಹೆಚ್ಚುವರಿ ಸಿಇಒ ಡಾ. ಪ್ರವೀಣ್ ಗೆದಮ್, ಪಿ.ಎಂ.ಸಿ.ಯ ಆಯುಕ್ತ ಶ್ರೀ ವಿಕ್ರಮ್ ಕುಮಾರ್, ಆಯುಕ್ತರು (ಆರೋಗ್ಯ ಸೇವೆಗಳು) ಮತ್ತು ಅಭಿಯಾನದ ನಿರ್ದೇಶಕ ಡಾ. ಎನ್. ರಾಮಸ್ವಾಮಿ, ಎನ್.ಎಚ್.ಎ. ನಿರ್ದೇಶಕ ಶ್ರೀ ಕಿರಣ್ ಗೋಪಾಲ್ ವಸ್ಕಾ, ಪಿ.ಎಸ್.ಸಿ.ಡಿ.ಸಿ.ಎಲ್. ಸಿಇಒ ಡಾ. ಸಂಜಯ್ ಕೋಲ್ಟೆ, ಪುಣೆಯ ಸಿ-ಡ್ಯಾಕ್ ಸಹ ನಿರ್ದೇಶಕ ಡಾ. ಗೌರ್ ಸುಂದರ್, ಪಿಎಂಸಿಯ ಹೆಚ್ಚುವರಿ ಆಯುಕ್ತ ಶ್ರೀ ರವೀಂದ್ರ ಬಿನ್ವಾಡೆ ಮತ್ತು ಪಿಎಂಸಿ ಹೆಚ್ಚುವರಿ ಆಯುಕ್ತ ಡಾ. ಕುನಾಲ್ ಖೇಮ್ನರ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಎನ್ಎಚ್ಎ ಸಿಇಒ ಡಾ.ಆರ್.ಎಸ್.ಶರ್ಮಾ, "ಯುಪಿಐ ನಿರ್ವಹಿಸುವ ಪಾತ್ರದಂತೆಯೇ, ಏಕೀಕೃತ ಆರೋಗ್ಯ ಮುಖಾಮುಖಿ ಮಾರುಕಟ್ಟೆ ಸಕ್ರಿಯಗೊಳಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅನೇಕ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಇದು ಆರೋಗ್ಯ ಸೇವೆ ಒದಗಿಸುವವರ ನಡುವೆ ಪರಸ್ಪರ ಕಾರ್ಯನಿರ್ವಹಣೆಯನ್ನು ನಿರ್ಮಿಸುವ ಮತ್ತು ಆರೋಗ್ಯ ರಕ್ಷಣಾ ದತ್ತಾಂಶದ ವಿನಿಮಯವನ್ನು ಸುಗಮಗೊಳಿಸುವ ಒಂದು ವಿಶಿಷ್ಟ ಪ್ರಯತ್ನವಾಗಿದೆ - ಇದು ಅಂತಿಮವಾಗಿ ಗುಣಮಟ್ಟದ ಆರೋಗ್ಯ ರಕ್ಷಣೆಯ ಪ್ರವೇಶಕ್ಕೆ ಮತ್ತು ಎಲ್ಲರಿಗೂ ಕೈಗೆಟುಕುವಂತೆ ಮಾಡುತ್ತದೆ."

ಹ್ಯಾಕಥಾನ್ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ ಡಾ. ಶರ್ಮಾ, "ಈ ಹ್ಯಾಕಥಾನ್ ನಾವು ನಡೆಸಲು ಯೋಜಿಸುತ್ತಿರುವ ಹ್ಯಾಕಥಾನ್ ಗಳ ಸರಣಿಯಲ್ಲಿ ಮೊದಲನೆಯದಾಗಿದೆ. ಇದು ನಮ್ಮ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ವಿನ್ಯಾಸಗಳ ವರ್ಧನೆಗೆ ಕೊಡುಗೆ ನೀಡಲು ಮತ್ತು ದೇಶ ಮತ್ತು ಜಗತ್ತಿಗೆ ನವೀನ ಪರಿಹಾರಗಳನ್ನು ಸೃಜಿಸಲು ಈ ದೇಶದ ಯುವ ಪ್ರತಿಭೆಗಳನ್ನು ಉತ್ತೇಜಿಸುತ್ತದೆ.

ಏಕೀಕೃತ ಆರೋಗ್ಯ ಮುಖಾಮುಖಿ (ಯುಎಚ್ಐ) ಜೊತೆಗೆ, ಹ್ಯಾಕಥಾನ್ ಭಾರತದಲ್ಲಿ ಆರೋಗ್ಯ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಸಜ್ಜುಗೊಳಿಸುವತ್ತ ಗಮನ ಹರಿಸಿದೆ, ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ. 'ಸುತ್ತು 1 – ಕಿಕ್ ಸ್ಟಾರ್ಟಿಂಗ್ ಯುಎಚ್.ಐ' ಗಾಗಿ ತಾತ್ಕಾಲಿಕ ಬಹುಮಾನದ ಮೊತ್ತ 60,00,000 ರೂ. ಇರುತ್ತದೆ. ಪರಿಹಾರಗಳನ್ನು ಸ್ವತಂತ್ರ ತೀರ್ಪುಗಾರರಿಂದ ನಿರ್ಧರಣೆ ಮಾಡಲಾಗುತ್ತದೆ. ಪ್ರಶಸ್ತಿಯನ್ನು ಎರಡು ಪ್ರಮುಖ ವಿಷಯಗಳ ಮಾರ್ಗದಲ್ಲಿ ಪ್ರತಿ ಸವಾಲಿನಲ್ಲಿ ಉನ್ನತ ಸಾಧನೆ ಮಾಡಿದವರಿಗೆ ನೀಡಲಾಗುವುದು:

• ನಾವೀನ್ಯತೆಯ ಮಾರ್ಗ: ಟೆಲಿ ಸಮಾಲೋಚನೆ, ಆಂಬ್ಯುಲೆನ್ಸ್ ಬುಕಿಂಗ್, ಪ್ರಯೋಗಾಲಯ ಪರೀಕ್ಷೆಗಳು, ಭೌತಿಕ ಸಮಾಲೋಚನೆ ಕಾಯ್ದಿರಿಸುವಿಕೆ, ಪ್ರಯೋಗಾಲಯ ಪರೀಕ್ಷೆ ಕಾಯ್ದಿರಿಸುವಿಕೆಯಂತಹ ವಿವಿಧ ಬಳಕೆ ಪ್ರಕರಣಗಳ ಸುತ್ತ ಮುಕ್ತ ಜಾಲದಲ್ಲಿ ಡಿಜಿಟಲ್ ಆರೋಗ್ಯಕ್ಕೆ ನವೀನ ಪರಿಹಾರಗಳಿಗೆ ಸವಾಲು ಒಡ್ಡುತ್ತದೆ.

• ಏಕೀಕರಣ ಮಾರ್ಗ: ಯುಎಚ್ಐಗೆ ಹೊಂದಿಕೆಯಾಗುವ ಆನ್ವಯಿಕಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ಯುಎಚ್ಐ ಜಾಲದಲ್ಲಿ ಡಿಜಿಟಲ್ ಆರೋಗ್ಯ ವಹಿವಾಟುಗಳನ್ನು ಸಕ್ರಿಯಗೊಳಿಸಲು ಈ ಆನ್ವಯಿಕಗಳನ್ನು ಅಂತಹ ಇತರ ಸ್ಪರ್ಧಿಗಳ ಆನ್ವಯಿಕಗಳೊಂದಿಗೆ ಸಂಯೋಜಿಸುವ ಸವಾಲು.

ಎ.ಬಿ.ಡಿ.ಎಂ. ಹ್ಯಾಕಥಾನ್ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿ ಲಭ್ಯ: https://abdm.gov.in/register

ಏಕೀಕೃತ ಆರೋಗ್ಯ ಮುಖಾಮುಖಿ (ಯು.ಎಚ್.ಐ.) ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯ: https://uhi.abdm.gov.in/

 

***********



(Release ID: 1841926) Visitor Counter : 133