ಆಯುಷ್

ಐ.ಡಿ.ವೈ. 2022, ನಾವು ಆರೋಗ್ಯ ಮತ್ತು ಯೋಗಕ್ಷೇಮವನ್ನು ಗ್ರಹಿಸುವ ಮತ್ತು ಅನುಸರಣೆ ಮಾಡುವ ರೀತಿಯಲ್ಲಿ ಕ್ರಾಂತಿಯ ಗುರುತನ್ನು ಮೂಡಿಸಲಿದೆ: ಶ್ರೀ ಸರ್ಬಾನಂದ ಸೋನೋವಾಲ್

Posted On: 17 JUN 2022 6:44PM by PIB Bengaluru

ಬರಲಿರುವ ಅಂತರಾಷ್ಟ್ರೀಯ ಯೋಗ ದಿನವು (IDY) ಸಾಂಸ್ಕೃತಿಕ ಕಾರ್ಯಕ್ರಮಗಳ ಕ್ಯಾಲೆಂಡರ್‌ನಲ್ಲಿ ಕೇವಲ ಒಂದು ದಿನವಾಗಿ ಮಾತ್ರ ಗುರುತಿಸಲ್ಪಡದೆ ಅದು ಆರೋಗ್ಯ ಮತ್ತು ಕ್ಷೇಮವನ್ನು ನಾವು ಹೇಗೆ ಗ್ರಹಿಸುತ್ತೇವೆ ಮತ್ತು ಅನುಸರಿಸುತ್ತೇವೆ ಎಂಬ ರೀತಿಗೆ ಕ್ರಾಂತಿಯ ಗುರುತನ್ನು ನೀಡಲಿದೆ ಎಂದು ಆಯುಷ್ ಸಚಿವರಾದ ಶ್ರೀ ಸರ್ಬಾನಂದ್ ಸೋನೊವಾಲ್ ಹೇಳಿದ್ದಾರೆ. ಹೊಸ ದಿಲ್ಲಿಯಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಐಡಿವೈ ಅಂಗವಾಗಿ ಸಿದ್ಧತೆಗಳು ಭರದಿಂದ ಸಾಗಿವೆ ಎಂದರು. ಈ ದಿನದ ಮೂಲಕ ನಾವು ಸಾಂಪ್ರದಾಯಿಕ ಪದ್ಧತಿಗಳ ಅಳವಡಿಕೆಗೆ ಇನ್ನಷ್ಟು ವೇಗ ದೊರಕಿಸಿಕೊಡಲು ಮತ್ತು ಜಗತ್ತಿಗೆ ಮನಸ್ಸು, ದೇಹ ಮತ್ತು ಆತ್ಮಕ್ಕೆ ಸಂಬಂಧಿಸಿ ಅದರ ಪ್ರಯೋಜನಗಳನ್ನು ನೆನಪಿಸಿಕೊಡುವ ಗುರಿಯನ್ನು ಹೊಂದಿದ್ದೇವೆ ಎಂದೂ ಅವರು ಹೇಳಿದರು.

ಜಗತ್ತು ಎದುರಿಸುತ್ತಿರುವ ಭೂರಾಜಕೀಯ ದ್ವಂದ್ವ, ಸಂದಿಗ್ಧತೆಗಳನ್ನು ಈ ವರ್ಷದ ಶೀರ್ಷಿಕೆಯು ಪರಿಗಣಿಸುತ್ತದೆ ಮತ್ತು ಪ್ರತಿಯೊಬ್ಬರೂ ಪರಹಿತಚಿಂತನೆಯನ್ನು ಮಾಡಲು ಹಾಗು ಸಹಾನುಭೂತಿಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಆಯುಷ್ ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

 

ಆಜಾದಿ ಕಾ ಅಮೃತ್ ಮಹೋತ್ಸವದ ವರ್ಷದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ದೇಶದ ಸುಮಾರು 75 ಪ್ರಮುಖ ಸ್ಥಳಗಳಲ್ಲಿ ಆಚರಿಸಲಾಗುವುದು ಎಂದು ಆಯುಷ್ ಸಚಿವರು ತಿಳಿಸಿದರು. ಈ ದಿನ ನವೀನ 'ಗಾರ್ಡಿಯನ್ ರಿಂಗ್' ಕಾರ್ಯಕ್ರಮಕ್ಕೂ ಸಾಕ್ಷಿಯಾಗಲಿದೆ ಎಂದು ಅವರು ಹೇಳಿದರು, ಇದು ವಿದೇಶದಲ್ಲಿ ಭಾರತೀಯ ಮಿಷನ್‌ಗಳು ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳ ಸ್ಟ್ರೀಮಿಂಗ್ ಅನ್ನು ಒಳಗೊಂಡಿರಲಿದೆ ಹಾಗು ಜಗತ್ತಿನ ಪೂರ್ವ ಭಾಗದಿಂದ ಆರಂಭಗೊಂಡು ಸೂರ್ಯನ ಚಲನೆಯೊಂದಿಗೆ 16 ಸಮಯ ವಲಯಗಳಲ್ಲಿ ಪಶ್ಚಿಮಾಭಿಮುಖವಾಗಿ ಸಾಗುತ್ತದೆ. ಈ ವಿಶಿಷ್ಟವಾದ ‘ರಿಲೇ’ ಕಾರ್ಯಕ್ರಮದಲ್ಲಿ ಸುಮಾರು 80 ದೇಶಗಳು ಭಾಗವಹಿಸಲಿವೆ ಎಂದೂ ಅವರು ವಿವರಿಸಿದರು.

 

ಮೈಸೂರಿನಲ್ಲಿ ಆಯೋಜಿಸಲಾಗಿರುವ 2022 ರ ಅಂತಾರಾಷ್ಟ್ರೀಯ ಯೋಗ ದಿನದ (ಐ.ಡಿ.ವೈ.) 8 ನೇ ಆವೃತ್ತಿಯ ಆಚರಣೆಗೆ ಸಂಬಂಧಿಸಿ ಮಾಡಲಾಗಿರುವ ಯೋಜನೆ ಮತ್ತು ವ್ಯವಸ್ಥೆಗಳ ವಿವರಗಳನ್ನು ಹಂಚಿಕೊಳ್ಳಲು ಈ ಮಾಧ್ಯಮಗೋಷ್ಟಿಯನ್ನು ಆಯುಷ್ ಸಚಿವಾಲಯವು ಸಂಘಟಿಸಿತ್ತು.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಘೋಷಿಸಿದಂತೆ “ಮಾನವತೆಗಾಗಿ ಯೋಗ” ಎಂಬುದು ಈ ವರ್ಷ ಜಾಗತಿಕವಾಗಿ ಅಂತಾರಾಷ್ಟ್ರೀಯ ಯೋಗ ದಿನದ ಶೀರ್ಷಿಕೆಯಾಗಿದೆ.

 

ಪತ್ರಿಕಾಗೋಷ್ಠಿಯಲ್ಲಿ ಸಚಿವರು ಸಾಮಾನ್ಯ ಯೋಗ ಶಿಷ್ಟಾಚಾರ ಕುರಿತ ಕಿರು ಪುಸ್ತಕ ಮತ್ತು ಐಡಿವೈ ಕುರಿತ ಚಲನಚಿತ್ರವನ್ನು ಬಿಡುಗಡೆ ಮಾಡಿದರು.

 

2022ರ ಜೂನ್ 21, ರಂದು ಐಡಿವೈ 2022 ಆಚರಣೆಗೆ ಮೈಸೂರು ಅರಮನೆ ಮೈದಾನದಿಂದ ಪ್ರಧಾನ ಮಂತ್ರಿಗಳು ನಾಯಕತ್ವ ವಹಿಸಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರೂ ಪಾಲ್ಗೊಳ್ಳುವರು. ಸುಮಾರು ಹದಿನೈದು ಸಾವಿರ ಯೋಗಾಸಕ್ತರು ಯೋಗ ಸಾಧನೆಯ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಸಂಸತ್ ಸದಸ್ಯರು, ಕರ್ನಾಟಕ ಸರ್ಕಾರದ ಇಲಾಖೆಗಳು, ಸಚಿವರು, ಗಣ್ಯರು, ಪೂಜ್ಯ ಯೋಗ ಗುರುಗಳು ಮತ್ತು ಸಂಸ್ಥೆಗಳ ಬೆಂಬಲದೊಂದಿಗೆ ನಡೆಸಲಾಗುತ್ತಿದೆ. ದಸರಾ ಮೈದಾನದಲ್ಲಿ ಸ್ಥಿರ ಮತ್ತು ಡಿಜಿಟಲ್ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ, ಇದು ಯೋಗ ಜಗತ್ತಿನ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಸಮಗ್ರ ನೋಟವನ್ನು ಆರಂಭಿಕರು ಮತ್ತು ತಜ್ಞರಿಗೆ ಸಮಾನ ರೀತಿಯಲ್ಲಿ ಒದಗಿಸಲಿದೆ.  

 

ಭಾರತ ಸರ್ಕಾರದ ಆಯುಷ್ ಸಚಿವಾಲಯದ ಈ ಪ್ರಮುಖ ಕಾರ್ಯಕ್ರಮವನ್ನು ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆಯ ಸಹಯೋಗದೊಂದಿಗೆ ಸಂಘಟಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಪ್ರಾವೀಣ್ಯತೆಯ ಅತ್ಯುನ್ನತ ಗುಣಮಟ್ಟದಲ್ಲಿ ಆಯೋಜಿಸುವುದನ್ನು ಖಚಿತಪಡಿಸಿಕೊಳ್ಳಲು 14 ಸಮಿತಿಗಳನ್ನು ರಚಿಸಿದೆ.

 

ಈ ವರ್ಷದ ಮಾರ್ಚ್‌ನಲ್ಲಿ ಆಯುಷ್ ಸಚಿವಾಲಯವು ಪ್ರಾರಂಭಿಸಿದ 100 ದಿನಗಳ ಕ್ಷಣಗಣನೆ ಅಭಿಯಾನವು 100 ನಗರಗಳಲ್ಲಿ ಮತ್ತು 100 ಸಂಸ್ಥೆಗಳಲ್ಲಿ ಭಾರೀ ಉತ್ಸಾಹದೊಂದಿಗೆ ನಡೆದಿದ್ದು, ಇದಕ್ಕೆ ಭಾರೀ ಚಲನೆಯನ್ನು ತಂದುಕೊಡಲು ಸಹಾಯ ಮಾಡಿದೆ. ಕಾರ್ಯಕ್ರಮವನ್ನು ಡಿಡಿ ಇಂಡಿಯಾದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ನೇರ ಪ್ರಸಾರವು ಮಧ್ಯಾಹ್ನ ಭಾರತೀಯ ಕಾಲಮಾನ 3 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 10 ಗಂಟೆಯವರೆಗೆ ಮುಂದುವರಿಯುತ್ತದೆ.

 

ಮಾಧ್ಯಮಗೋಷ್ಟಿಯಲ್ಲಿ ಶ್ರೀ ಸೋನೋವಾಲ್ ಅವರಲ್ಲದೆ, ಆಯುಷ್‌ನ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ, ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಕವಿತಾ ಗಾರ್ಗ್ ಮತ್ತು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ( ಎಂ.ಡಿ.ಎನ್.ಐ.ವೈ.)ಯ ನಿರ್ದೇಶಕ ಡಾ. ಈಶ್ವರ್ ವಿ. ಬಸವರಡ್ಡಿ ಅವರು ಉಪಸ್ಥಿತರಿದ್ದರು.

 

*****



(Release ID: 1835150) Visitor Counter : 134